ಡಿಸೆಂಬರ್ 31ರ ರಾತ್ರಿ ಹುಚ್ಚೆದ್ದು ಕುಣಿಯುವುದಕ್ಕೆ ಜನರನ್ನು ಪ್ರೋತ್ಸಾಹಿಸುವ ಸಂಗತಿಯೇನು? ಬಹುಶಃ ಅವರಿಗೂ ಉತ್ತರ ತಿಳಿದಿರಲಿಕ್ಕಿಲ್ಲ. ವ್ಯಾಪಾರ!
ದೀಪಾವಳಿ ಎನ್ನುವುದೀಗ ಪಟಾಕಿ ಮತ್ತು ಡ್ರೈ ಫ್ರೂಟ್ಸ್ನ ಮಾರಾಟಕ್ಕೆ ಪ್ರಶಸ್ತವಾದ ದಿನವಾಗಿದೆ. ಕ್ರಿಸ್ಮಸ್ ಹಬ್ಬವನ್ನು ಕೇಕುಗಳು, ಅಕ್ಷಯ ತೃತೀಯವನ್ನು ಚಿನ್ನಾಭರಣಗಳ ಅಂಗಡಿಗಳು ಅಪಹರಿಸಿವೆ. ಇಷ್ಟೆಲ್ಲ ಲಾಭವಿದ್ದ ಮೇಲೆ ಈ ವ್ಯಾಪಾರಿಗಳು ಹೊಸ ವರ್ಷದಂಥ ಲಾಭದಾಯಕ ದಿನವನ್ನು ಸುಮ್ಮನೆ ಬಿಟ್ಟುಬಿಡುತ್ತಾರಾ? ಹಾಗಾಗೇ ಆ ದಿನದ ಗುತ್ತಿಗೆಯನ್ನು ಮದ್ಯದ ಕಂಪನಿಗಳು, ಗಿಫ್ಟ್ ಶಾಪ್ಗಳು, ಹೊಟೆಲ್ಗಳು ಪಡೆದುಕೊಂಡುಬಿಟ್ಟಿವೆ! ಡಿಸೆಂಬರ್ 31ರಂದು 'ಕುಡಿದು ತೂರಾಡುವುದನ್ನೇ' ಈ ವ್ಯಾಪಾರಿಗಳು ಫ್ಯಾಷನ್ ಎಂದು ಬಿಂಬಿಸುತ್ತಿದ್ದಾರೆ. ಎಲ್ಲಾ ಫ್ಯಾಷನ್ಗಳಂತೆ ಇದೂ ಕೂಡ ವ್ಯಾಪಾರಿಗಳನ್ನು ಎತ್ತರೆತ್ತರಕ್ಕೆ ಏರಿಸುತ್ತಾ ಸಾಗಿದೆ.
ಆದರೆ ಪರಿಸ್ಥಿತಿ ಯಾವಾಗಲೂ ಇದೇ ರೀತಿ ಇರಲಿಲ್ಲ.
ಹಿಂದಿನ 'ಆಮಾಯಕತೆಯ' ಕಾಲದಲ್ಲಿ, ಹಬ್ಬ/ಆಚರಣೆಗಳು ಸಣ್ಣ ಪುಟ್ಟ ಸಂಭ್ರಮಗಳಿಗಷ್ಟೇ ಸೀಮಿತವಾಗಿದ್ದವು. ಪಾಶ್ಚಿಮಾತ್ಯ ಶಿಕ್ಷಣವನ್ನು ಮೈಗೂಡಿಸಿಕೊಂಡವರಷ್ಟೇ ಹೊಸ ವರ್ಷಾಚರಣೆಯತ್ತ ಆಕರ್ಷಿತರಾಗುತ್ತಿದ್ದರು. ನಂತರ, ಏಪ್ರಿಲ್ ಫೂಲ್ ದಿನಾಚರಣೆಯನ್ನು 'ತಮ್ಮದೇ ಹಬ್ಬ"ವೆನ್ನುವಂತೆ ಆಚರಿಸುತ್ತಾ ಬಂದಿದ್ದ ಆಂಗ್ಲ ಪತ್ರಿಕೆಗಳೂ ಕೂಡ ಹೊಸ ವರ್ಷವನ್ನು ಹರ್ಷದಿಂದ ಬರಮಾಡಿಕೊಳ್ಳತೊಡಗಿದವು. ಬ್ಲಿಟ್ಜ್ ಪತ್ರಿಕೆಯ ದಿ. ಆರ್.ಕೆ. ಕರಂಜಿಯಾ ಅವರಂತೂ ಏಪ್ರಿಲ್ ಫೂಲ್ ದಿನದಂದು ಕೀಟಲೆ ಎಸೆಗುವುದರಲ್ಲಿ ಎತ್ತಿದ ಕೈಯಾಗಿದ್ದರು. 1981ರಲ್ಲಿ ಪ್ರಕಟವಾದ ಸುದ್ದಿಯೊಂದು ಇಡೀ ಮುಂಬೈಯನ್ನು ಅಚ್ಚರಿಗೆ ದೂಡಿಬಿಟ್ಟಿತ್ತು. 'ಇಂಡಿಯನ್ ಎಕ್ಸಪ್ರೆಸ್' ಪತ್ರಿಕೆ ತನ್ನೆಲ್ಲ ಸ್ವತ್ತುಗಳನ್ನು ಮಹಾರಾಷ್ಟ್ರದ ಅಂದಿನ ಮುಖ್ಯಮಂತ್ರಿ ಎ.ಆರ್. ಅಂತುಲೆ ಅವರಿಗೆ ಮಾರಿಬಿಟ್ಟಿದೆ ಎಂಬ (ಸುಳ್ಳು) ಸುದ್ದಿ ಅದಾಗಿತ್ತು. ಆ ಸಮಯದಲ್ಲಿ ಇಂಡಿಯನ್ ಎಕ್ಸಪ್ರೆಸ್ ಪತ್ರಿಕೆ ಅಂತುಲೆ ಅವರ ಹಳವಂಡಗಳನ್ನೆಲ್ಲ ಹೊರಹಾಕುವ ಕೆಲಸದಲ್ಲಿ ನಿರತವಾಗಿತ್ತು!
ಮೂರ್ಖರ ದಿನಾಚರಣೆಗೆ ಹೋಲಿಸಿದರೆ ಹೊಸ ವರ್ಷ ನಿರುಪದ್ರವಿಯಾಗಿತ್ತು. ಭಾರತದಲ್ಲಿನ ಆಂಗ್ಲ ಪತ್ರಿಕೆಗಳು ಹಿಂದಿನ ವರ್ಷ ನಡೆದ ಘಟನೆಗಳನ್ನು ಮತ್ತೊಮ್ಮೆ ಮೆಲುಕು ಹಾಕುತ್ತಿದ್ದವು. ಆದರೆ ಬ್ರಿಟಿಷ್ ಪತ್ರಿಕೆಗಳು ತುಸು ಹಾಸ್ಯ ಮಿಶ್ರಿತ ವರದಿಗಳನ್ನು ಸೇರಿಸಿ ಓದುಗರನ್ನು ರಂಜಿಸುವ ಪ್ರಯತ್ನ ಮಾಡುತ್ತಿದ್ದವು. ಇಂಗ್ಲಿಷರು ತಾವು ಹೋದಲೆಲ್ಲಾ ಈ ಸಂಪ್ರದಾಯವನ್ನು ಹುಟ್ಟುಹಾಕಿದರು. ಆದರೆ ಹಾಂಗ್ಕಾಂಗ್ನ ಜನರಿಗೆ ಡಿಸೆಂಬರ್ 31 ಮಹತ್ವವಾದ ದಿನವಾಗಿರಲಿಲ್ಲ. ಚೀನಾದ ಹೊಸ ವರ್ಷ(ಫೆಬ್ರವರಿ ತಿಂಗಳಲ್ಲಿ)ದಂದು ಹಾಂಕಾಂಗಿಗರು 3 ದಿನಗಳ ಸಂಭ್ರಮಾಚರಣೆಯಲ್ಲಿ ತೊಡಗುತ್ತಿದ್ದರು. ಇದೆಲ್ಲದರ ಅರಿವಿದ್ದರೂ ಕೂಡ ಬ್ರಿಟೀಷರ ಸಂಪಾದಕತ್ವದಲ್ಲಿ ಹಾಂಕಾಂಗ್ನಿಂದ ಹೊರಬರುತ್ತಿದ್ದ 'ಫಾರ್ ಈಸ್ಟರ್ನ್ ಎಕನಾಮಿಕ್ ರಿವೀವ್' ಜನವರಿ 1ರ ತನ್ನ ಸಂಚಿಕೆಯಲ್ಲಿ ಅಲ್ಲಿನ ನಾಯಕರನ್ನು ಅಣುಕಿಸುವ ಲೇಖನಗಳನ್ನು ಬರೆಯುತ್ತಿತ್ತು.
1973ರಲ್ಲಿ ಆ ಪತ್ರಿಕೆ ಇಂದಿರಾ ಗಾಂಧಿ, ಲಿಯೋನಿಡ್ ಬ್ರೆಜ್ನೇವ್ ಮತ್ತು ಅಷ್ಟೇ ಅಲ್ಲದೆ, ಅಧ್ಯಕ್ಷ ಮಾವೋನನ್ನೂ ಛೇಡಿಸುವ ಲಿಮರಿಕ್ (ಅಸಂಬದ್ಧ ಪದ್ಯ) ಅನ್ನು ಪ್ರಕಟಿಸಿತ್ತು! ಉದಾಹರಣೆಗೆ ಮಾವೋನನ್ನ ಛೇಡಿಸುತ್ತಾ ಅದು ಹೀಗೆ ಬರೆದಿತ್ತು: Our past we are using/to get cadres and masses a-fusing./but make up your mind/ on the sage, for i find/ Controversial Confucius Confusing!!
ಕೆಲವು ಅಸಂಬದ್ಧ ಪದ್ಯಗಳಂತೂ ಓದುಗರ ಊಹೆಯನ್ನು ಅಲುಗಾಡಿಸಿಬಿಡುವಷ್ಟು ತುಂಟತನದಿಂದ ಕೂಡಿರುತ್ತಿದ್ದವು. 1910ರಲ್ಲಿ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಹೊಸ ವರ್ಷವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿತು. ಹಾಸ್ಯ ಪದ್ಯವೊಂದನ್ನು ಪ್ರಕಟಿಸಿದ ಅದು, ಆ ಪದ್ಯದ ಕೊನೆಯ ಸಾಲನ್ನು ಓದುಗರೇ ಪೂರ್ಣಗೊಳಿಸಬೇಕೆಂದು ಹೇಳಿತು(ಅಸಂಬದ್ಧವಾಗಿ). ಅದಕ್ಕೆ ಓದುಗರಿಂದ ಬಂದ ಪ್ರತಿಕ್ರಿಯೆಗಳೂ ಅತ್ಯದ್ಭುತವಾಗಿದ್ದವು.
ಲಿಮರಿಕ್ ಎನ್ನುವ ಪದದ ಸರಿಯಾದ ಅರ್ಥವೇನು ಎಂಬುದು ಇದುವರೆಗೆ ಯಾರಿಗೂ ತಿಳಿದಿಲ್ಲ. ಆದರೆ ಆ ಹೆಸರಿನ ಐರಿಷ್ ಊರೊಂದಿದೆ. ಆ ಊರಿಗೂ ಆ ಪದಕ್ಕೂ ನಡುವಿನ ಸಂಬಂಧ ಏನೆಂಬುದೂ ತಿಳಿಯದು. ಅಸಂಬದ್ಧ ಪದ್ಯಗಳನ್ನು ಖ್ಯಾತಗೊಳಿಸಿದವರು ಎಡ್ವರ್ಡ್ ಲಿಯರ್(19 ಶತಮಾನ) ಎನ್ನುವ ಕವಿ. ಅಸಂಬದ್ಧ ಪದ್ಯಗಳ ಅರಸ ಎಂದೇ ಈತನನ್ನು ಕರೆಯಲಾಗುತ್ತಿತ್ತು. ಆತನ 'ಗೂಬೆ ಮತ್ತು ಬೆಕ್ಕು' ಪದ್ಯವಂತೂ ಅತ್ಯುತ್ತಮ ರಚನೆಯೆಂದೇ ಕರೆಸಿಕೊಳ್ಳುತ್ತದೆ.
ಇನ್ನು 'ಅಸಂಬದ್ಧದ ಅತಿರೇಕವನ್ನು' ಅರಿತುಕೊಳ್ಳಬೇಕೆಂದರೆ, ಲೀವಿಸ್ ಕಾರಲ್ನ 'ಜಾಬೆರಿವಾಕಿ' ಶೈಲಿಯ ಪದ್ಯಗಳನ್ನು ಓದಬೇಕು. ಆತ ಬರೆದ ಒಂದು ಪದ್ಯವಂತೂ ಎಷ್ಟು ಪ್ರಖ್ಯಾತವಾಯಿತೆಂದರೆ, ಅದನ್ನು ಶತಮಾನದ ಕವಿತೆ ಎಂದೇ ಕರೆಯಲಾಗುತ್ತದೆ. ಹಾಗೆ ನೋಡಿದರೆ ಆ ಪದ್ಯದಲ್ಲಿನ ಯಾವುದೇ ಪದಕ್ಕೆ/ ಸಾಲಿಗೆ ಅರ್ಥವೇ ಇಲ್ಲ:
""Twas brillig, and the slithy toves/ Did gyre and gimble in the wabe;/ All mimsy were the borogoves/ And the mome raths outgrabe''
ಸತ್ಯಜಿತ್ ರೇಯವರ ತಂದೆ ಸುಕುಮಾರ್ ರೇ, ಈ ರೀತಿಯ ಅಸಂಬದ್ಧ ಪದ್ಯಗಳನ್ನು ರಚಿಸಲು ಪ್ರಯತ್ನಪಟ್ಟ ಏಕೈಕ ಭಾರತೀಯ ಸಾಹಿತಿ. ಅವರ ಪದ್ಯಗಳ ಅನುವಾದ ಇಂಗ್ಲಿಷ್ನಲ್ಲಿ ದೊರೆಯುತ್ತದಾದರೂ, ಬೆಂಗಾಲಿ ಭಾಷೆಯಲ್ಲಿ ಆ ಪದ್ಯಗಳನ್ನು ಓದುವುದೇ ಮಜಾ!
ಜೀವನ ವ್ಯಾಪಾರದ ಬಲೆಗೆ ಸಿಲುಕಿಹಾಕಿಕೊಳ್ಳದ ಸಮಯದಲ್ಲೇ ಎಡ್ವರ್ಡ್ ಲಿಯರ್, ವೂಯಿಸ್ ಮತ್ತು ಸುಕುಮಾರ್ ರೇಯಂಥವರು ಬೆಳೆದರು. ಆಗ ಸೃಜನಾತ್ಮಕ ಹಾಸ್ಯಕ್ಕೆ ಮತ್ತು ಬೌದ್ಧಿಕ ಹರ್ಷಕ್ಕೆ ಅವಕಾಶವಿತ್ತು. ಆದರೆ ಇಂದು? ಈಗೇನಿದ್ದರೂ ರಿಯಾಯತಿ ದರದಲ್ಲಿ ಸಿಗುವ ಸಾಮಾಗ್ರಿಗಳ ಹಿಂದೆ ಓಡಾಟ. ಹಣ ಕೊಟ್ಟು ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸಿ ಎನ್ನುವ ಆಮಿಷಗಳು. ಛೇ!
ಟಿ.ಜೆ ಎಸ್ ಜಾರ್ಜ್