

ಲೋಕಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ವಿಚಾರಗಳು ಪ್ರಾಧಾನ್ಯ ಪಡೆಯುತ್ತವೆ. ಒಂದೆಡೆ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ದುರಾಡಳಿತ, ಇನ್ನೊಂದೆಡೆ ನರೇಂದ್ರ ಮೋದಿ ಅಲೆ. ಇದೀಗ ಬಿಜೆಪಿಗೆ ಯಡಿಯೂರಪ್ಪ ಮರಳಿರುವುದು ರಾಜ್ಯದಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿ ಪರಿಣಮಿಸುವ ಸಾಧ್ಯತೆಯೇ ಹೆಚ್ಚು.
ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ಎರಡೂ ಪಾಳೆಯದಲ್ಲಿ ಪ್ರಮುಖ ಬೆಳವಣಿಗೆಗಳಾಗಿವೆ. ಕಳಂಕದ ಆರೋಪದ ಮೇಲೆ ಹೊರಗೆ ಇರಿಸಲ್ಪಟ್ಟಿದ್ದ ಡಿ.ಕೆ. ಶಿವಕುಮಾರ್ ಹಾಗೂ ಆರ್. ರೋಶನ್ ಬೇಗ್ ಅವರು ಸಿದ್ದರಾಮಯ್ಯ ಸಂಪುಟ ಸೇರಿದ್ದಾರೆ. ಇನ್ನೊಂದೆಡೆ ಇದೇ ರೀತಿ ಬಿಜೆಪಿಯಿಂದ ವಿಘಟಿತರಾಗಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತವರಿಗೆ ಮರಳಿದ್ದಾರೆ. ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಆಗಿರುವ ಈ ಬೆಳವಣಿಗೆಗಳು ಹೊಸ ರಾಜಕೀಯ ವ್ಯಾಖ್ಯಾನಕ್ಕೆ ಕಾರಣವಾಗಿವೆ.
ಡಿ.ಕೆ. ಶಿವಕುಮಾರ್ ಹಾಗೂ ರೋಶನ್‌ಬೇಗ್ ಸಂಪುಟ ಸೇರಿದ್ದು ಕಾಂಗ್ರೆಸ್ ಪಾಳೆಯದಲ್ಲೇ ಕೌತುಕ ಮೂಡಿಸಿದೆ. ಕಳಂಕಿತರು ಎಂಬ ಕಾರಣಕ್ಕೆ ಬುದ್ಧಿಪೂರ್ವಕವಾಗಿಯೇ ಇವರನ್ನು ಸಂಪುಟದಿಂದ ಹೊರಗೆ ಇರಿಸಿದ್ದು ಕಾಂಗ್ರೆಸ್ ಆಂತರ್ಯದಲ್ಲಿ ಸಂಘರ್ಷಕ್ಕೆ ಕಾರಣವಾಗಿತ್ತು. ಏನೇ ಆದರೂ ಇವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬಾರದು ಎಂದು ಸಿದ್ದರಾಮಯ್ಯ ತಂಡ ಹಾಗೂ ಶತಾಯ-ಗತಾಯ ಮಂತ್ರಿಗಳಾಗಲೇ ಬೇಕು ಎಂದು ಇವರಿಬ್ಬರೂ ಹಠಕ್ಕೆ ಬಿದ್ದಿದ್ದರು. ಈ ಹಠ ಪ್ರತಿಷ್ಠೆಯನ್ನೇ ಪಣಕ್ಕೆ ಇಟ್ಟಿತ್ತು. ಸತತ ಪ್ರಯತ್ನಗಳ ನಡುವೆಯೂ ಇವರಿಬ್ಬರನ್ನು ಸಂಪುಟ ಸೇರದಂತೆ ತಡೆಹಿಡಿಯಲಾಗಿತ್ತು. ಲೋಕಸಭೆ ಚುನಾವಣೆ ಮುಗಿಯುವವರೆಗೂ ಸಂಪುಟ ವಿಸ್ತರಣೆ ಆಗಲಾರದು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಹಠಾತ್ತನೆ ಪ್ರಮಾಣ ಸ್ವೀಕರಿಸುವ ಮೂಲಕ ಒಂದೆಡೆ ರಾಜಕೀಯ ವಲಯ ಹುಬ್ಬೇರಿಸುವಂತೆ ಮಾಡಿದ್ದರೆ, ಇನ್ನೊಂದೆಡೆ ಇತರ ಆಕಾಂಕ್ಷಿಗಳ ಸಂಕಟ ಇಮ್ಮಡಿಗೊಳ್ಳಲು ಪುಷ್ಠಿ ನೀಡಿದೆ.
ಹೌದು, ಪರ್ಯಾಯ ಶಕ್ತಿ ಕೇಂದ್ರ ನಿರ್ಮಾಣ ಆಗಬಾರದು ಎಂಬ ಕಾರಣಕ್ಕೆ ಶಿವಕುಮಾರ್, ಬೇಗ್ ಸೇರಿದಂತೆ ಹಲವು ಹಿರಿಯರನ್ನು ಸಂಪುಟದಿಂದ ಆಚೆ ಇಡಲಾಗಿತ್ತು. ಪರ್ಯಾಯ ಶಕ್ತಿ ಕೇಂದ್ರ ನಿರ್ಮಾಣ ಆಗುತ್ತದೋ ಬಿಡುತ್ತದೋ ಅದು ಬೇರೆ ಪ್ರಶ್ನೆ. ಆದರೆ ಹಾಗೊಂದು ಭಾವನೆ ಇದ್ದದ್ದು, ಅದಕ್ಕೆ ಕಳಂಕದ ನೆಪ ಒಡ್ಡಿದ್ದು ಸುಳ್ಳಲ್ಲ. ಈ ನೆಪವ ನಿಜ ಮಾಡಲೆಂದೇ ಗಣಿ ಅಕ್ರಮ ಆರೋಪಿ ಸಂತೋಷ್ ಲಾಡ್ ಅವರನ್ನು ಸಂಪುಟದಿಂದ ಕಿತ್ತೊಗೆಯಲಾಯಿತು. ಅರ್ಥಾತ್ ಅವರ ರಾಜೀನಾಮೆ ಪಡೆಯಲಾಯಿತು. ಇತರ ಕಳಂಕಿತರನ್ನು ದೂರ ಇಡಲೆಂದೇ ಲಾಡ್ ಅವರನ್ನು ಬಲಿಪಶು ಮಾಡಿದ್ದು ಕೂಡ ಈಗ ನಿಷ್ಪ್ರಯೋಜಕವಾಗಿದೆ.
ಆ ವಿಷಯ ಪಕ್ಕಕ್ಕಿರಲಿ. ಕಳಂಕಿತರನ್ನು ಹೊರಗೆ ಇಟ್ಟಿದ್ದು ಒಂದು ರೀತಿ ಸಂಘರ್ಷಕ್ಕೆ ಹೇಗೆ ಕಾರಣವಾಗಿತ್ತೋ, ಈಗ ಅದೇ ರೀತಿ ಅವರನ್ನು ಸಂಪುಟದ ಒಳಮನೆಗೆ ಬಿಟ್ಟುಕೊಂಡಿರುವುದು ಕೂಡ ಮತ್ತೊಂದು ರೀತಿಯ ಅನಪೇಕ್ಷಿತ ಬೆಳವಣಿಗೆಗೆ ಕಾರಣವಾಗಿದೆ. ಕಳಂಕ ಇದ್ದವರು, ಇಲ್ಲದವರು ಎಲ್ಲ ಸೇರಿ ಡಜನ್‌ಗೂ ಅಧಿಕ ಸಚಿವ ಸ್ಥಾನಾಕಾಂಕ್ಷಿಗಳು ಈಗ ಎದ್ದು ನಿಂತಿದ್ದಾರೆ. ಕೆ.ಬಿ. ಕೋಳಿವಾಡ, ಮಾಲೀಕಯ್ಯ ಗುತ್ತೇದಾರ್, ಮಾಲಕರೆಡ್ಡಿ, ರಾಜಣ್ಣ, ವಿನಯ್ ಕುಲಕರ್ಣಿ, ಎಚ್.ವೈ. ಮೇಟಿ, ಅಪ್ಪಾಜಿ ನಾಡಗೌಡ ಆಕಾಂಕ್ಷಿಗಳಲ್ಲಿ ಪ್ರಮುಖರು. ಕೆಲವು ವಂಚಿತರಂತೂ ಬಹಿರಂಗವಾಗಿಯೇ ಟೀಕೆ ಮಾಡಲು ಶುರು ಮಾಡಿದ್ದಾರೆ. ಕಣ್ಣು ಕಾಣಿಸದವರು, ಕಿವಿ ಕೇಳಿಸದವರು, ಏಳಲು - ಕೂರಲು ಆಗದವರಿಗೆ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ ಎಂಬಂಥ ತೀಕ್ಷ್ಣ ಟೀಕೆಗಳೂ ಇದರಲ್ಲಿ ಸೇರಿವೆ. ಲೋಕಸಭೆ ಚುನಾವಣೆ ಸಮೀಪಿಸಿರುವ ಸಂದರ್ಭದಲ್ಲಿ ಕಾಂಗ್ರೆಸ್ ಪಾಳೆಯದಲ್ಲೇ ಸಿಡಿಯಲಾರಂಭಿಸಿರುವ ಈ ಮದ್ದುಗುಂಡುಗಳು ಒಂದಷ್ಟು ಹಾನಿಗೆ ಕಾರಣವಾಗಬಹುದು.
ಈಗ ಸಿದ್ದರಾಮಯ್ಯ ಸಂಪುಟದಲ್ಲಿ ಕೇವಲ ಮೂರು ಸ್ಥಾನಗಳು ಮಾತ್ರ ಬಾಕಿ ಇವೆ. ಅಕಾಂಕ್ಷಿಗಳ ಸಂಖ್ಯೆ ಇಪ್ಪತ್ತು ದಾಟಿದೆ. ಎಲ್ಲರಿಗೂ ಅವಕಾಶ ಆಗುವುದಿಲ್ಲ. ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಮುಂಚೂಣಿಯಲ್ಲಿದ್ದು ವಂಚಿತರಾಗಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಲೋಕಸಭೆ ಚುನಾವಣೆ ಮುಗಿಯುವವರೆಗೂ ಮತ್ತೊಮ್ಮೆ ಮಂತ್ರಿ ಮಂಡಲ ವಿಸ್ತರಣೆ ಕಷ್ಟಸಾಧ್ಯ. ಅಲ್ಲಿಯವರೆಗೂ ಆಕಾಂಕ್ಷಿಗಳ ತುಡಿತ ಹಾಗೂ ಒಳಸಂಘರ್ಷ ನಿಭಾಯಿಸುವುದೇ ಸಿದ್ದರಾಮಯ್ಯ ಅವರಿಗೆ ದೊಡ್ಡ ಸವಾಲು.
ಇಲ್ಲಿ ಇನ್ನೊಂದು ವಿಚಾರ. ಡಿ.ಕೆ. ಶಿವಕುಮಾರ್, ಬೇಗ್ ಸಂಪುಟ ಸೇರಿರುವ ಸಂದರ್ಭದಲ್ಲೇ ಯಡಿಯೂರಪ್ಪನವರು ಬಿಜೆಪಿಗೆ ಮರಳಿ ಬಂದಿದ್ದಾರೆ. ಅವರು ಬಿಜೆಪಿಗೆ ಮರಳಿದ್ದರಿಂದ ಜೆಡಿಎಸ್‌ನ ಕುಮಾರಸ್ವಾಮಿ ಪ್ರತಿಪಕ್ಷ ನಾಯಕನ ಸ್ಥಾನ ಕಳೆದುಕೊಳ್ಳಲಿದ್ದಾರೆ. ಈ ಎಲ್ಲ ಬೆಳವಣಿಗೆಗಳು ಲೋಕಸಭೆ ಚುನಾವಣೆ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು ಎಂಬ ಪ್ರಶ್ನೆಯನ್ನು ಇಲ್ಲಿ ಮೂಡಿಸುತ್ತದೆ. ಸಿದ್ದರಾಮಯ್ಯ ನಾಯಕತ್ವ ಮುಂದುವರಿಕೆಗೂ ಲೋಕಸಭೆ ಚುನಾವಣೆ ಮಾನದಂಡವಾಗಿ ಪರಿಣಮಿಸುವ ಸಂಭವ ಇರುವುದರಿಂದ ಈ ಪ್ರಶ್ನೆಗೆ ಮಹತ್ವ ಬಂದಿದೆ.
ಒಂದೊಂದೇ ವಿಷಯ ಪರಾಮರ್ಶಿಸಿ ನೋಡೋಣ. ಶಿವಕುಮಾರ್ ಹಾಗೂ ಬೇಗ್ ಸಂಪುಟ ಸೇರ್ಪಡೆಯಿಂದ ಅವರ ಸಮುದಾಯದ ಒಂದಷ್ಟು ಮತಗಳ ಪಲ್ಲಟಕ್ಕೆ ಕಾರಣವಾಗಬಹುದು. ಆದರೆ ಯಡಿಯೂರಪ್ಪ ಅವರಂತೆ ಸಮುದಾಯದ ಮತಗಳನ್ನು ಇಡಿಯಾಗಿ ಸೆಳೆಯಲು ಸಾಧ್ಯವಿಲ್ಲ. ಶಿವಕುಮಾರ್ ಹಾಗೂ ಬೇಗ್‌ಗೆ ತಲಾ ಮೂರು ಲೋಕಸಭಾ ಕ್ಷೇತ್ರಗಳ ಚುನಾವಣೆ ಜವಾಬ್ದಾರಿ ವಹಿಸಲಾಗಿದೆ. ಸಿದ್ದರಾಮಯ್ಯ ಅವರಿಗೆ ಅಷ್ಟು ಮಾತ್ರವೇ ಲಾಭ. ಇದರ ಜತೆಗೆ ಸಚಿವ ಸ್ಥಾನದ ಅನ್ಯ ಆಕಾಂಕ್ಷಿಗಳು ಮಾಡುವ ಕಿರಿಕ್ ಹೆಚ್ಚಿನ ಬಳುವಳಿ. ಒಂದು ತೆಗೆದುಕೊಂಡರೆ ಮತ್ತೊಂದು ಉಚಿತ ಎಂಬಂತೆ.
ಇನ್ನು ಯಡಿಯೂರಪ್ಪ ಬಿಜೆಪಿ ಮರುಸೇರ್ಪಡೆ ವಿಚಾರ. ಈ ಬೆಳವಣಿಗೆ ನಿಜಕ್ಕೂ ಕಾಂಗ್ರೆಸ್‌ನ ನಿದ್ದೆಗೆಡಿಸಿದೆ. ಕಳೆದ ಚುನಾವಣೆಯಲ್ಲಿ ಕೆಜೆಪಿ ಶೇಕಡ 10ರಷ್ಟು ಮತಗಳನ್ನು ಗಳಿಸಿತ್ತು. ಇದು ಖಂಡಿತವಾಗಿಯೂ ಯಡಿಯೂರಪ್ಪನವರ ವ್ಯಕ್ತಿಗತ ಮತಗಳು. ಇದರಲ್ಲಿ ಬಹುತೇಕ ಲಿಂಗಾಯತ ಸಮುದಾಯಕ್ಕೆ ಸೇರಿದ್ದವು. ಈಗ ಯಡಿಯೂರಪ್ಪ ಬಿಜೆಪಿಗೆ ಮರಳಿರುವುದರಿಂದ ಕೆಜೆಪಿಯ ಬಹುತೇಕ ಮತಗಳು ಬಿಜೆಪಿಗೆ ವರ್ಗವಾಗುವುದು ಖಚಿತ. ಇದರಿಂದ ಕಾಂಗ್ರೆಸ್‌ಗೆ ಭಾರೀ ಹೊಡೆತ ಬೀಳುವ ಸಂಭವವಿದೆ.
ಇಲ್ಲಿ ಇನ್ನೂ ಒಂದು ವಿಷಯ. ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ನಡುವೆ ಅಜಗಜಾಂತರವಿದೆ. ಲೋಕಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ವಿಚಾರಗಳು ಪ್ರಾಧಾನ್ಯ ಪಡೆಯುತ್ತವೆ. ಒಂದೆಡೆ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ದುರಾಡಳಿತ, ಇನ್ನೊಂದೆಡೆ ನರೇಂದ್ರ ಮೋದಿ ಅಲೆ. ಇದೀಗ ಬಿಜೆಪಿಗೆ ಯಡಿಯೂರಪ್ಪ ಮರಳಿರುವುದು ರಾಜ್ಯದಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿ ಪರಿಣಮಿಸುವ ಸಾಧ್ಯತೆಯೇ ಹೆಚ್ಚು. ಕಳೆದ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಆರು ಸ್ಥಾನಗಳನ್ನು ಗೆದ್ದಿತ್ತು. ಆದರೆ ಬಹುತೇಕವೂ ಅಲ್ಪಮತಗಳ ಅಂತರದಿಂದ. ಆಗ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಇತ್ತು. ಆದರೂ ಪ್ರಯೋಜನ ಆಗಿರಲಿಲ್ಲ. ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದೆ. ಕೈಯಲ್ಲಿ ಅಧಿಕಾರವಿದೆ. ಅದರ ಜತೆಗೆ ಜನರ ನಿರೀಕ್ಷೆಯೂ ಸಿಕ್ಕಾಪಟ್ಟೆ ಹೆಚ್ಚಾಗಿದೆ.
ರಾಜ್ಯ ಸರಕಾರಕ್ಕೆ ಏಳೆಂಟು ತಿಂಗಳಾಗಿದ್ದರೂ ಜನರ ಎದೆಬಾಗಿಲನ್ನು ಅದು ತಟ್ಟಿಲ್ಲ. ಜನರ ನಿರೀಕ್ಷೆ ಇನ್ನೂ ನಿರೀಕ್ಷೆಯಾಗಿಯೇ ಉಳಿದಿದೆ. ಕಳೆದ ಚುನಾವಣೆಯಲ್ಲಿ ಜನರು ಬಿಜೆಪಿ ಸರಕಾರದ ದುರಾಡಳಿತದ ವಿರುದ್ಧ ಮತ ಚಲಾಯಿಸಿ ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತಂದರು. ಆದರೆ ಈಗಿನ ಸರಕಾರಕ್ಕೆ ಆಡಳಿತವೇ ನಿಲುಕುತ್ತಿಲ್ಲ. ನಾನಾ ಇಲಾಖೆಗಳ ಸಚಿವಾಲಯ ಮತ್ತು ನಿರ್ದೇಶನಾಲಯಗಳಲ್ಲಿ ಕಡತಗಳು ಧರಣಿ ಕುಳಿತಿವೆ. ಇದಕ್ಕೆ ಕಾರಣ ಹಣ. ಹಣವಿಲ್ಲದೆ ಯಾವುದೇ ಕಡತ ಮುಂದಕ್ಕೆ ಚಲಿಸದಿರವುದು ಸರಕಾರ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದರ ಸಂಕೇತ, ಮುನ್ಸೂಚನೆ.
ಕಳೆದ ಮರುಚುನಾವಣೆಯ ಗೆಲುವನ್ನು ಕಾಂಗ್ರೆಸ್ ಈಗಲೂ ಸಂಭ್ರಮಿಸುವಂತಿಲ್ಲ. ಏಕೆಂದರೆ ಆಗಿನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನೇ ಕಣಕ್ಕೆ ಇಳಿಸಿರಲಿಲ್ಲ. ಆಗ ಯಡಿಯೂರಪ್ಪನವರೂ ಕೂಡ ಬಿಜೆಪಿಯಲ್ಲಿರಲಿಲ್ಲ. ಲಿಂಗಾಯತ ಸಮುದಾಯದ ಮತಗಳು ಇಡಿ ಇಡಿಯಾಗಿ ಕಾಂಗ್ರೆಸ್‌ಗೆ ಸಂದಿದ್ದವು. ಜೆಡಿಎಸ್ ತನ್ನ ಮತಗಳನ್ನು ಕಾಯ್ದುಕೊಳ್ಳಲಷ್ಟೇ ಸಫಲವಾಗಿತ್ತು. ಹೀಗಾಗಿ ಕಾಂಗ್ರೆಸ್ ನಿರಾಳವಾಗಿ ಗೆದ್ದಿತ್ತು.
ಇಲ್ಲಿ ಇನ್ನೂ ಒಂದು ವಿಚಾರ. ಆಗ ಚುನಾವಣೆ ನಡೆದದ್ದು ಕೇವಲ ಎರಡು ಕ್ಷೇತ್ರಗಳಲ್ಲಿ ಮಾತ್ರ. ಕಾಂಗ್ರೆಸ್ ಪಕ್ಷ ಹಾಗೂ ಸರಕಾರ ಎರಡೂ ಇಲ್ಲಿ ಗಮನ ಕೇಂದ್ರೀಕರಿಸಿತ್ತು. ಆದರೆ ಈಗ ರಾಜ್ಯದ ತುಂಬಾ ಗಮನವನ್ನು ಹಂಚಬೇಕು. ಅದು ಸಂಪನ್ಮೂಲ ಇರಲಿ, ಪ್ರಚಾರ ಸಭೆಗಳಿರಲಿ, ಎಲ್ಲಾ ಕಡೆ ಶಕ್ತಿ, ಸಾಮರ್ಥ್ಯ ವಿನಿಯೋಗಿಸಬೇಕು. ಇದರ ಜತೆಗೆ ಕೇಂದ್ರ ಮಟ್ಟದಲ್ಲಿ ಚುನಾವಣೆ ಸಂಪನ್ಮೂಲ ಕ್ರೋಢೀಕರಿಸಿಕೊಡಬೇಕು. ಇದೆಲ್ಲವೂ ಕೂಡ ಚುನಾವಣೆ ಸವಾಲುಗಳ ಪ್ರಮುಖ ಅಂಶಗಳೇ ಆಗಿವೆ. ಈ ಎಲ್ಲಾ ಕಾರಣಗಳಿಂದ ಮರುಚುನಾವಣೆ ಫಲಿತಾಂಶವನ್ನೇ ಕಾಂಗ್ರೆಸ್ ಈಗಲೂ ನಿರೀಕ್ಷಿಸಲು ಸಾಧ್ಯವಿಲ್ಲ.
ಈಗ ಯಡಿಯೂರಪ್ಪ ಕಾರಣಕ್ಕೆ ಬಿಜೆಪಿ ಮತಗಳು ಮತ್ತೆ ಒಂದಾಗುತ್ತವೆ. ಜನ ಬಿಜೆಪಿ ಸರಕಾರದ ವಿರುದ್ಧ ಕಾಂಗ್ರೆಸ್‌ಗೆ ಹಾಗೂ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಗೆ ಮತ ಚಲಾಯಿಸುವಾಗ ಆಯಾ ಸಂದರ್ಭ, ಪ್ರಸ್ತುತತೆ, ಸರಕಾರಗಳ ಕಾರ್ಯವೈಖರಿ ಪ್ರಾಧಾನ್ಯತೆ ಪಡೆದಿರುತ್ತದೆ. ಕೇಂದ್ರ ಸರಕಾರದ ಭ್ರಷ್ಟಾಚಾರ, ರಾಜ್ಯ ಸರಕಾರದ ಆಡಳಿತ ವಿಳಂಬ ನೀತಿ ಈಗಿನ ಚುನಾವಣೆಗೆ ವಸ್ತುವಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ.
ಇದರ ಜತೆಗೆ ಕರ್ನಾಟಕ ರಾಜಕಾರಣದಲ್ಲಿ ಒಂದು ಪ್ರತೀತಿ ಇದೆ. 1983ರಿಂದ ಈಚೆಗೆ ಬಹುತೇಕ ಸಂದರ್ಭಗಳಲ್ಲಿ ಕೇಂದ್ರ ಹಾಗೂ ರಾಜ್ಯದಲ್ಲಿ ಬೇರೆ-ಬೇರೆ ಪಕ್ಷಗಳ ಸರಕಾರ ಆಳ್ವಿಕೆ ನಡೆಸಿವೆ. ಜನ ಕೂಡ ರಾಜ್ಯದ ಆಡಳಿತಾರೂಢ ಪಕ್ಷದ ವಿರುದ್ಧವೇ ಲೋಕಸಭೆ ಚುನಾವಣೆಗಳಲ್ಲಿ ಮತ ಚಲಾಯಿಸುತ್ತಾ ಬಂದಿದ್ದಾರೆ. ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದೆ. ಕೇಂದ್ರದಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ನೇತೃತ್ವದ ಸರಕಾರ ಅಧಿಕಾರಕ್ಕೆ ಬರುವ ಲಕ್ಷಣಗಳಿಲ್ಲ. ಕೇಂದ್ರ ಹಾಗೂ ರಾಜ್ಯದ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಮತದಾರರ ಆಯ್ಕೆ ಯಾವ ಪಕ್ಷ ಎಂಬುದನ್ನು ಯಾರು ಬೇಕಾದರೂ ಊಹಿಸಬಹುದು.
ಲಗೋರಿ: ಸೋತು ಸುಣ್ಣವಾದವರು ರಂಗೇರುವುದು, ಗೆದ್ದು ಕುಣಿದವರು ಅಡಿಗಾಗುವುದು ರಾಜಕೀಯದ ಸಹಜ ಸರ್ಕಸ್ಸು.
- ಪಿ. ತ್ಯಾಗರಾಜ್
thyagarjun@gmail.com