ಅಂಕಣಗಳು

ಗುಲ್ಬರ್ಗ ಜಿಲ್ಲೆಯ ಅದ್ಭುತ ಪ್ರೇಕ್ಷಣೀಯ ಸ್ಥಳಗಳು

ಗುಲ್ಬರ್ಗ ಜಿಲ್ಲೆಯ ಅದ್ಭುತ ಪ್ರೇಕ್ಷಣೀಯ ಸ್ಥಳಗಳು
Published On :

ಕಳೆದ ವಾರ ಬಿದರ್ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ನಿಮಗೆ ಹೇಳುತ್ತಿದ್ದೆ. ಈ ವಾರ ಗುಲ್ಬರ್ಗ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಿಗೆ ಕರೆದುಕೊಂಡುಹೋಗುತ್ತೇನೆ. ಗುಲ್ಬರ್ಗ, ಕರ್ನಾಟಕದ ದೊಡ್ಡ ಜಿಲ್ಲೆಗಳಲ್ಲೊಂದು. ಇಲ್ಲಿ ಆರನೆಯ ಶತಮಾನದ ಚಾಲುಕ್ಯರು, ರಾಷ್ಟ್ರಕೂಟರು, ನಂತರ ಬಹಮನಿ ಸುಲ್ತಾನರು ಹಾಗೂ ಸುರಪುರದ ನಾಯಕರು ಆಳ್ವಿಕೆ ನಡೆಸಿದ್ದಾರೆ. ಪೌರಾಣಿಕ ಹಾಗೂ ಐತಿಹಾಸಿಕ ಮಹತ್ವಗಳೆರಡನ್ನು  ಗುಲ್ಬರ್ಗ ಪಡೆದಿದೆ.
'ಗುಲ್‌' ಅಂದರೆ ಹೂ ಮತ್ತು 'ಬರ್ಗ' ಅಂದರೆ ತೋಟ. ಗುಲ್ಬರ್ಗ ಎಂದರೆ ಹೂವಿನ ತೋಟ. ಅಲ್ಲದೆ ಗುಲ್ಬರ್ಗವನ್ನು ಕಲಬುರ್ಗಿ ಅಂತಲೂ ಕರೆಯುತ್ತಾರೆ. ಸುಣ್ಣದ ಕಲ್ಲಿನ ಖನಿಜ ಸಂಪತ್ತನ್ನು ಹೊಂದಿರುವ ಹೈದ್ರಾಬಾದ್ ಕರ್ನಾಟಕದ ವಿಭಾಗೀಯ ಕೇಂದ್ರ ಸ್ಥಾನವಿದು. ಸಾವಳಗಿ ಶಾಸನದಲ್ಲಿ ಇದನ್ನು ಕಲ್ಲಂಬರ್ಗಿ ಎಂದು ಉಲ್ಲೇಖಿಸಲಾಗಿದ್ದು, ಕಾಲಕ್ರಮೇಣ ಜನಭಾಷೆಯಲ್ಲಿ ಕಲಬುರ್ಗಿಯಾಗಿ ಮಾರ್ಪಾಡು ಹೊಂದಿತ್ತು.  ಕಲ್ಬುರ್ಗಿ ಕನ್ನಡ ಸಾಹಿತ್ಯದ ತವರು ಜಿಲ್ಲೆ. ಕನ್ನಡದ ಪ್ರಥಮ ಉಪಲಬ್ಧ ಕೃತಿ ನೃಪತುಂಗ. ಅಮೋಘವರ್ಷನಿಂದ ರಚಿಸಿದ "ಕವಿರಾಜ ಮಾರ್ಗ" ರಚನೆ ಆಗಿದ್ದು ಗುಲ್ಬರ್ಗ ಜಿಲ್ಲೆಯ ಮಳಖೇಡದಲ್ಲಿ. ಮಳಖೇಡ ಪ್ರಸಿದ್ಧ ಅರಸು ಮನೆತನವಾದ ರಾಷ್ಟ್ರಕೂಟರ ರಾಜ್ಯಧಾನಿಯಾಗಿದ್ದ, ಬೃಹತ್ ಸಾಮ್ರಾಜ್ಯದ ಐತಿಹಾಸಿಕ ಕೇಂದ್ರವಾಗಿದ್ದ ಗುಲಬರ್ಗಾ ನಮ್ಮ ಗತವೈಭವವನ್ನು ನೆನಪಿಸಿಕೊಡುತ್ತದೆ. ಕಾಗಿಣಾ ನದಿಯ ದಂಡೆಯ ಮೇಲೆ ಶ್ರೀ ಜಯತೀರ್ಥರ ವೃಂದಾವನವಿದೆ. ಸಾವಿರಾರು ಭಕ್ತರು ಶ್ರೀ ಟೀಕಾಚಾರ್ಯರ ದರ್ಶನಕ್ಕೆ ಆಗಮಿಸಿ ಅವರ ಅನುಗ್ರಹಕ್ಕೆ ಪಾತ್ರರಾಗುತ್ತಾರೆ.
ಗುಲ್ಬರ್ಗದಲ್ಲಿ ವಿಶಾಲವಾದ ಕೊಟೆ ಇದೆ. ಕೋಟೆಯ ಒಳಭಾಗದಲ್ಲಿರುವ ಜುಮ್ಮಾ ಮಸೀದಿ ಈ ಜಿಲ್ಲೆಯ ಮತ್ತೊಂದು ಅದ್ಭುತ. ಈ ಮಸೀದಿಯಲ್ಲಿ ಐದು ಸಾವಿರ ಜನರು ಏಕಕಾಲದಲ್ಲಿ ಪ್ರಾರ್ಥನೆ ಮಾಡಲು ಸ್ಥಳಾವಕಾಶವಿದೆ. 38,016 ಚದರ ಅಡಿಯಲಿ ಇನ್ನೂರ ಐವತ್ತು ಕಮಾನುಗಳಿರುವ ಈ ಜುಮ್ಮಾ ಮಸೀದಿ ಸ್ಪೇನ್ ದೇಶದ ಸುಪ್ರಸಿದ್ಧ  ಕಾರ್ಡೊವಾ ಮಸೀದಿಯನ್ನು ಹೋಲುವಂತಿದೆ. ಈ ಸ್ಮಾರಕ ಪರ್ಷಿಯಾ ದೇಶದ ವಾಸ್ತು ಶಿಲ್ಪಕಾರರಿಂದ 1367ರಲ್ಲಿ ನಿರ್ಮಿಸಲ್ಪಟ್ಟಿತು. ಇದು ದಕ್ಷಿಣ ಭಾರತದ ಅತ್ಯಂತ ಪುರಾತನವಾದ ಹಾಗೂ ಒಂದೇ ಮೇಲ್ಛಾವಣಿಯ ಮಾದರಿಯ ಏಕೈಕ ಮಸೀದಿಯಾಗಿದೆ.  ಗುಲ್ಬರ್ಗ ನಗರದ ಹೃದಯ ಭಾಗದಲ್ಲಿರುವ ಶ್ರೀ ಶರಣಬಸವೇಶ್ವರ ದೇವಸ್ಥಾನ ಅತ್ಯಂತ ಸುಪ್ರಸಿದ್ಧ ಯಾತ್ರಾ ಸ್ಥಳವಾಗಿದೆ. ಹದಿನೆಂಟನೆಯ ಶತಮಾನದಲ್ಲಿದ್ದ ಮಹಾದಾಸೋಹಿ, ಶ್ರೀ ಶರಣ ಬಸವೇಶ್ವರರು ಅರಳಗುಂಡಿಗೆಯಿಂದ ಬಂದು ಇಲ್ಲಿ ನೆಲೆಸಿದ್ದಾರೆ. ಶರಣ ಮತ್ತು ಬಸವ ಎಂಬ ಗುರು ಶಿಷ್ಯರ ಮೂರ್ತಿ ಸಮಾನವಾಗಿ ಗರ್ಭಗುಡಿಯಲ್ಲಿ ಇರುವುದು ವೈಶಿಷ್ಟ್ಯವಾಗಿದೆ. ಏಕೆಂದರೆ ಇಂಥ ಗುರು ಶಿಷ್ಯರ ಸಮತಾ ಭಾವದ ಸಂಕೇತವನ್ನು, ನಾವು ವಿರಳವಾಗಿ ನೋಡುತ್ತೇವೆ. ಖಂಡಿತವಾಗಿ ಇವರು ಈ ಭಾಗ ಕಂಡ ಅತ್ಯಂತ ಶ್ರೇಷ್ಠ ವ್ಯಕ್ತಿ. ತಮ್ಮ ದಾಸೋಹ ತತ್ವದ ಮೂಲಕ ಸರ್ವರಿಗೂ ಸಮಾನತೆ  ನೀಡಿದ ಪುಣ್ಯ ಪುರುಷ. ಆರಾಧ್ಯ ದೈವವಾದ ಶರಣಬಸವೇಶ್ವರರ ದಾಸೋಹದ ಮನೆ ಮತ್ತು ಶಾಶ್ವತ ನಂದಾ ದೀಪವನ್ನು ವೀಕ್ಷಿಸಲು ಲಕ್ಷಗಟ್ಟಲೆ ಭಕ್ತರು ಇಂದಿಗೂ ಬರುತ್ತಾರೆ. ಇಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಪೂಜ್ಯ ಡಾ. ಶರಣಬಸವಪ್ಪ ಅಪ್ಪಾರವರು ಸ್ಥಾಪಿಸಿ ಮುನ್ನಡೆಸುತ್ತಿದ್ದಾರೆ. ಪ್ರತಿ ವರ್ಷ ಫಾಲ್ಗುಣ ಬಹುಳಪಂಚಮಿಯಂದು ಇಲ್ಲಿ ಬಹು ವೈಭವದ ಜಾತ್ರೆ ನಡೆಯುತ್ತದೆ.
ಗುಲ್ಬರ್ಗದ ಮತ್ತೊಂದು ಸುಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಧಳ ಖ್ವಾಜಾ ಬಂದೇ ನವಾಜ್ ದರ್ಗಾ. ಪರ್ಷಿಯಾ ದೇಶದ ಸೂಫಿ ಸಂತರಾದ ಬಂದೇ ನವಾಜರು ಭಾವೈಕ್ಯತೆಯ ಪ್ರತೀಕವಾಗಿದ್ದಾರೆ. ಅತ್ಯಂತ ವಿಶಾಲವಾದ ಈ ದರ್ಗಾ ಇಂಡೋ ಇಸ್ಲಾಮಿಕ್ ಶೈಲಿಯಲ್ಲಿ ನಿರ್ಮಿತವಾಗಿದೆ. ಈ ದರ್ಗಾಕ್ಕೆ ವರ್ಷವಿಡೀ ಭಕ್ತರು ದರ್ಶನಕ್ಕಾಗಿ ಬರುತ್ತಾರೆ. ಇದು ದಕ್ಷಿಣ ಭಾರತದ ಅತ್ಯಂತ ಸುಪ್ರಸಿದ್ಧ ಸೂಫಿ ಯಾತ್ರಾ ಸ್ಧಳವಾಗಿದೆ. ಈ ಸೂಫಿಸಂತರ ಹೆಸರಿನಲ್ಲಿ ಒಂದು ಆಸ್ಪತ್ರೆ ಮತ್ತು ಹಲವಾರು ವೃತ್ತಿಪರ ಶಿಕ್ಷಣ ಸಂಸ್ಥೆಗಳು ನಡೆಯುತ್ತಿವೆ. ಇಲ್ಲಿನ ಗ್ರಂಥಾಲಯದಲ್ಲಿ ಉರ್ದು, ಅರೆಬಿಕ್ ಮತ್ತು ಪರ್ಷಿಯುನ್ ಭಾಷೆಯ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಪುಸ್ತಕಗಳಿವೆ ಎನ್ನುವುದು ಮೆಚ್ಚುವ ವಿಷಯವಾಗಿದೆ.
ನಗರದಲ್ಲಿರುವ ಇನ್ನೊಂದು ಅದ್ಭುತ ಪ್ರೇಕ್ಷಣಿಯ ಸ್ಥಳ ಎಂದರೆ 'ಬುದ್ಧವಿಹಾರ'. ಇದು ಸುಮಾರು ಎಪ್ಪತ್ತು ಎಕರೆ ಪ್ರದೇಶದಲ್ಲಿದ್ದು ಆಕರ್ಷಕವಾಗಿ ಹಾಗೂ ಕಲಾತ್ಮಕವಾಗಿ, 2008ರಲ್ಲಿ ಸುಮಾರು ಎಂಟು ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಈ ಕಟ್ಟಡ ಭವ್ಯ ಶಿಲ್ಪಕಲೆಯ ದ್ಯೋತಕವಾಗಿದೆ. ಈ ವಿಹಾರದಲ್ಲಿ ಸ್ಥಾಪಿಸಲ್ಪಟ್ಟ ಥೈಲ್ಯಾಂಡಿನಿಂದ ತರಿಸಿದ ಚಿನ್ನ ಲೇಪಿತ ಬುದ್ಧನ ವಿಗ್ರಹವು ಮನಮೋಹಕವಾಗಿದೆ. ಇಂತಹ ಭವ್ಯ ಸ್ಮಾರಕ ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿರುವುದು ನಮಗೆ ಹೆಮ್ಮೆಯ ವಿಷಯವೆಂದು ಹೇಳಬಹುದು. ದಲೈಲಾಮಾರು ಹಲವಾರು ಬಾರಿ ಇಲ್ಲಿಗೆ ಬುದ್ಧನ ದರ್ಶನಕ್ಕಾಗಿ ಬಂದಿದ್ದಾರೆ.
ಈ ಜಿಲ್ಲೆಯ ಪ್ರಮುಖ ಸ್ಥಳಗಳೆಂದರೆ ಚಿತ್ತಾಪೂರ ತಾಲೂಕಿನಲ್ಲಿರುವ "ಸನ್ನತಿ". ಇದು ಪುರಾಣ ಪ್ರಸಿದ್ಧ ಹಾಗೂ ಐತಿಹಾಸಿಕ ಮಹತ್ವವುಳ್ಳ ಪ್ರವಾಸಿ ಕೇಂದ್ರ. ಇಲ್ಲಿ  ಚಂದ್ರಲಾಪರಮೇಶ್ವರಿಯ ಪ್ರಾಚೀನ ಹಾಗೂ ಅತ್ಯಂತ ಭವ್ಯವಾದ ದೇವಾಲಯವಿದೆ. ವರ್ಷವಿಡೀ ಸಹಸ್ರಾರು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಈ ದೇವಸ್ಥಾನ ಭೀಮಾನದಿಯ ದಂಡೆಯ ಮೇಲೆ ಇದೆ. ಕಳೆದ ಒಂದು ದಶಕದಿಂದ ಇಲ್ಲಿ ಭಾರತೀಯ ಪ್ರಾಚ್ಯವಸ್ತು ಇಲಾಖೆಯವರು ಉತ್ಖನನ ನಡೆಸಿ ಬೌದ್ಧ ಧರ್ಮದ ಅನೇಕ ಅವಶೇಷಗಳನ್ನು ಹಾಗೂ  ಅಶೋಕನ ಶಿಲಾಶಾಸನಗಳನ್ನೂ ಪತ್ತೆಹಚ್ಚಿದ್ದಾರೆ. ಇದೊಂದು ಪುರಾತನವಾದ ಬೌದ್ಧನೆಲೆಯೆಂದು ಗುರುತಿಸಲಾಗಿದ್ದು ಸನ್ನತಿಯಿಂದ ಸುಮಾರು ಮೂರು ಕಿ.ಮೀ. ದೂರದಲ್ಲಿ ಕನಗನಳ್ಳಿಯಲ್ಲಿ ಒಂದು ಬೌದ್ಧಸ್ಥೂಪದ ಅವಶೇಷಗಳು ದೊರೆತಿವೆ. ಇದು ಕ್ರಿ.ಪೂ. ಮೂರನೇ ಶತಮಾನದ ಸ್ಥೂಪದ ಅವಶೇಷವಾಗಿದೆಯೆಂದು ಅಂದಾಜು ಮಾಡಲಾಗಿದೆ.  
ಗುಲ್ಬರ್ಗದಿಂದ ಸುಮಾರು ನಲವತ್ತೈದು ಕಿ.ಮೀ. ದೂರದ ಅಫಜಲಪುರ ತಾಲೂಕಿನಲ್ಲಿರುವ "ದೇವಲ ಗಾಣಗಾಪುರ" ಒಂದು ಪವಿತ್ರ ಕ್ಷೇತ್ರವಾಗಿದೆ. ಗಂಗಾ ಯಮುನಾ ಸಂಗಮದ ಹಾಗೆ ಇಲ್ಲಿ ಅಮರ್ಜಾ ಮತ್ತು ಭೀಮಾ ನದಿಗಳ ಸಂಗಮವಿದೆ. ಇಲ್ಲಿ ದತ್ತಾತ್ತ್ರೇಯನ ದೇವಸ್ಥಾನವಿದೆ. ಔದುಂಬರ ವೃಕ್ಷ, ಭಸ್ಮದ ಗುಡ್ಡ, ಹಾಗೂ ಮಧುಕರಿ ಬೇಡವುದು ಇಲ್ಲಿನ ವಿಶೇಷವಾಗಿದೆ. ವಿವಿಧ ರಾಜ್ಯಗಳಿಂದ ಸಹಸ್ರಾರು ಭಕ್ತರು ಈ ದೇವಸ್ಥಾನಕ್ಕೆ ಬಂದು ಪುನೀತರಾಗುತ್ತಾರೆ.
ಪ್ರಾಚೀನ ಕಾಲದ ಪ್ರಸಿದ್ಧ ವಿದ್ಯಾಸಂಸ್ಥೆಗಳಲ್ಲೊಂದಾದ ಉತ್ತರ ಭಾರತದ ನಲಂದಾ ವಿಶ್ವವಿದ್ಯಾಲಯವನ್ನು ಹೋಲುವಂಥ ಶಿಕ್ಷಣ ಸಂಸ್ಥೆ ಕಲ್ಬುರ್ಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ನಾಗಾವಿಯಲ್ಲಿತ್ತು. ಇದನ್ನು ಘಟಿಕಾ ಸ್ಥಾನವೆಂದು ಕರೆಯಲಾಗುತ್ತಿತ್ತು. ಅಲ್ಲಿ ದೊರೆತಿರುವ ಶಾಸನಗಳ ಆಧಾರದ ಮೇಲೆ ಈ ಘಟಿಕಾ ಸ್ಥಾನದ ಮಾಹಿತಿಯನ್ನು ನಾವು ಪಡೆದುಕೊಳ್ಳಬಹುದು. ಈ ಪ್ರದೇಶದಲ್ಲಿ ಹಲವಾರು ಪಾಳುಬಿದ್ದ ಐತಿಹಾಸಿಕ ಸ್ಮಾರಕಗಳನ್ನು ಕೂಡಾ ಇವೆ. ಇಲ್ಲಿನ ಅಧಿದೇವತೆ "ನಾಗಾಯಿ ಎಲ್ಲಮ್ಮ" ದೇವಸ್ಥಾನ ಈ ಭಾಗದ ಪ್ರಮುಖ ದೇವಸ್ಥಾನಗಳಲ್ಲಿ ಒಂದು.
ಗುಲಬರ್ಗಾ ಜಿಲ್ಲೆಯ ಸೇಡಂ ತಾಲೂಕಿನಲ್ಲಿರುವ "ಯಾನಾಗುಂದಿ" ಒಂದು ತಪೋಭೂಮಿ.  ಮಾತಾಮಾಣಿಕೇಶ್ವರಿ ಎಂಬ ಎಪ್ಪತ್ತೈದು ವರ್ಷದ ತಾಯಿ ಅನ್ನ ಆಹಾರಗಳಿಲ್ಲದೆ ಕೇವಲ ಗಾಳಿಯನ್ನು ಸೇವಿಸುತ್ತಾ ಒಂದು ಗುಹೆಯಲ್ಲಿ ಬದುಕಿದ್ದಾರೆಂದು ತಿಳಿದುಬಂದಿದೆ. ಇದೊಂದು ವಿಚಿತ್ರವಲ್ಲವೆ? ಈ ತಾಯಿ ವರ್ಷದಲ್ಲಿ ಒಂದೆರಡು ಬಾರಿ ಮಾತ್ರ ಹೊರಗಡೆ ಬಂದು ದರ್ಶನ ಕೊಡುತ್ತಾರೆ, ಇದು ಈ ಭಾಗದ ಜನತೆಯ ಅತ್ಯಂತ ಪವಿತ್ರ ಸ್ಥಳವಾಗಿ ಬದಲಾಗಿದೆ.
ಇತ್ತೀಚೆಗಷ್ಟೆ ಗುಲಬರ್ಗಾ ಜಿಲ್ಲೆಯಿಂದ ವಿಭಜನೆಗೊಂಡು ಯಾದಗಿರಿ ಜಿಲ್ಲೆ ರೂಪಗೊಂಡಿದೆ. ಇದು ಯಾದಗಿರಿ, ಸುರಪುರ ಮತ್ತು ಶಹಾಪುರ ತಾಲೂಕಗಳನ್ನೊಳಗೊಂಡ ವಿನೂತನ ಜಿಲ್ಲೆ. ಸುರಪುರದ ನಾಯಕರು ಈ ಜಿಲ್ಲೆಯನ್ನು ಆಳಿದ್ದಾರೆ. ಪ್ರಾಕೃತಿಕ ಹಾಗೂ ಸಾಂಸ್ಕ್ರೃತಿಕ ಸಂಪತ್ತಿನಿಂದ ಸಮೃದ್ಧವಾದ  ಈ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳನ್ನು ನಾವು ಈಗ ನೋಡೋಣ:
ಬೀದರ-ಶ್ರೀರಂಗ ಪಟ್ಟಣ ಹೆದ್ದಾರಿಯಲ್ಲಿ ಶಹಾಪುರದ ಬೆಟ್ಟದ ಮೇಲೆ ಮಲಗಿರುವ ಬುದ್ಧನ ಆಕಾರವನ್ನು  ನಾವು ನೋಡಬಹುದು. ಇದರ ವೈಶಿಷ್ಟತೆಯೆಂದರೆ ಈ ಬೆಟ್ಟ ಪ್ರಕೃತಿ ದತ್ತವಾಗಿಯೇ ಬುದ್ಧನ ಆಕಾರ ತಾಳಿದ್ದು, ಬುದ್ಧನೇ ಮಲಗಿರುವಂತೆ ಭಾಸವಾಗುತ್ತದೆ. ದೂರದಿಂದ ನೋಡಿದರೆ ಬುದ್ಧನ ಹಣೆ, ಮೂಗು ಮತ್ತು ಆತ ಎದೆಯ ಮೇಲೆ ಕೈಇಟ್ಟು ನಿದ್ರೆಮಾಡುತ್ತಿರುವ ದೃಶ್ಯ ನಮಗೆ ಕಾಣುತ್ತದೆ!
ಸುರಪುರ ತಾಲೂಕಿನಲ್ಲಿರುವ ಬೋನಾಳ ಕೆರೆ ಹಾಗೂ ಪಕ್ಷಿಧಾಮವನ್ನು ಬ್ರಿಟಿಷರು ಕ್ರಿ.ಶ 1844ರಲ್ಲಿ ಪುನಃಶ್ಚೇತನಗೊಳಿಸಿದ್ದಾರೆ. ಸುಮಾರು ಎರಡು ಚದರ ಮೈಲು ವಿಸ್ತಾರವಾದ ಈ ಪಕ್ಷಿಧಾಮಕ್ಕೆ ನವೆಂಬರ್, ಡಿಸಂಬರ್ ಮತ್ತು ಜನೆವರಿ ತಿಂಗಳಲ್ಲಿ ಆಸ್ಟ್ರೇಲಿಯಾ, ಅರ್ಜೆಂಟೀನಾ, ನೈಜೀರಿಯಾ, ಶ್ರೀಲಂಕಾ ಮುಂತಾದ ದೇಶಗಳಿಂದ ಪಕ್ಷಿಗಳು ವಲಸೆ ಬರುತ್ತವೆ.  ಇದು ಹೈದ್ರಾಬಾದ ಕರ್ನಾಟಕದ ಅದ್ಭುತ  ಸ್ಥಳಗಳಲ್ಲೊಂದು. ಸುರಪುರ ಪಟ್ಟಣದಲ್ಲಿರುವ ಇನ್ನೊಂದು ಪ್ರಮುಖ ಪ್ರವಾಸಿ ಸ್ಥಳವೆಂದರೆ "ಟೇಲರ್ ಮಂಜಿಲ್‌". ಕ್ರಿ.ಶ 1844ರಲ್ಲಿ ಸುರಪುರದಲ್ಲಿ ಬ್ರಿಟಿಷರ ರೆಸಿಡೆಂಟ್ ಆದ ಕರ್ನಲ್ ಮೆಡೋಸ್ ಟೇಲರ್ ತನ್ನ  ವಾಸಗೃಹವಾಗಿ ಈ ಕಟ್ಟಡ ನಿರ್ಮಿಸಿದ್ದಾನೆ. ಬೆಟ್ಟದ ಮೇಲಿರುವ ಈ ಕಟ್ಟಡದ ಮುಂಭಾಗದಲ್ಲಿ ನಿಂತು ಕಣ್ಣು ಹಾಯಿಸಿದರೆ ಸುರುಪುರದ ಕೋಟೆ, ಅರಮನೆ ಮತ್ತು ಸುರಪುರ ನಗರವನ್ನು ವೀಕ್ಷಿಸಬಹುದು. ಈ ಕಟ್ಟಡದ ತಾಂತ್ರಿಕ ಕೌಶಲ್ಯ ಕಲ್ಪನಾತೀತ. ಇಲ್ಲಿ ಅಳವಡಿಸಿರುವ ಬಾಗಿಲುಗಳನ್ನು ಗಮನಿಸಿದರೆ ಪ್ರತಿಯೊಂದು ಬಾಗಿಲೂ ಒಂದುಕ್ಕೊಂದು ಅಂತರ ಜೋಡಣೆಯಿಂದ ಕೂಡಿವೆ. ನಾವು ಒಂದು ಬಾಗಿಲನ್ನು ತೆಗೆದಾಗ ಕಟ್ಟಡದ ಎಲ್ಲಾ ಬಾಗಿಲುಗಳು ತಾವಾಗಿಯೇ ಶಬ್ದಮಾಡುತ್ತಾ ತೆರೆದುಕೊಳ್ಳುತ್ತವೆ. ಅದ್ಭುತ ಅಲ್ಲವೆ?
ಒಮ್ಮೆ ನೀವು ನಿಮ್ಮ ಕುಟುಂಬದೊಂದಿಗೆ ಈ ಸ್ಥಳಗಳನ್ನೆಲ್ಲಾ ನೋಡಿಕೊಂಡು ಬಂದರೆ ನನ್ನ ಶ್ರಮ ಸಾರ್ಥಕವಾದಂತೆ. ಮುಂದಿನ ವಾರ ಇನ್ನಷ್ಟು ಅದ್ಭುತ ಸ್ಥಳಗಳಿಗೆ ನಿಮ್ಮನ್ನು ಕರೆದುಕೊಂಡು ಹೋಗುತ್ತೇನೆ.

(ಮುಂದುವರೆಯುವುದು)

- ಶಾಲಿನಿ ರಜನೀಶ್, ಐಎಎಸ್
anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.