

ರ್ಯಾಂಕ್ ವಿಜೇತರು ಅನ್ನಿಸಿಕೊಳ್ಳುವವರು ಒಂದು ಕೈಯಲ್ಲಿ ಮಣಭಾರದ ಪುಸ್ತಕಗಳನ್ನೂ, ಇನ್ನೊಂದು ಕೈಯಲ್ಲಿ ಲ್ಯಾಪ್ಟಾಪನ್ನೂ ಹಿಡಿದುಕೊಂಡಿರುತ್ತಾರೆ. ಹೆಚ್ಚಿನ ಸಂದರ್ಭದಲ್ಲಿ ಈ ಮಕ್ಕಳು ಸುಶಿಕ್ಷಿತ ಕುಟುಂಬದಿಂದಲೇ ಬಂದಿರುತ್ತಾರೆ. ಬಾಲ್ಯದಿಂದಲೂ 'ಕ್ಲಾಸ್ಗೇ ಫಸ್ಟ್' ಅನ್ನಿಸಿಕೊಂಡಿದ್ದ ಇವರು ಡಿಗ್ರಿಯಲ್ಲಿ ಮತ್ತಷ್ಟು ಶ್ರಮದಿಂದ ಓದಿ ರ್ಯಾಂಕ್ ಬರುತ್ತಾರೆ ಎಂಬಂಥ ನಂಬಿಕೆಗಳು ಸಾರ್ವತ್ರಿಕವಾಗಿರುವ ಕಾಲ ಇದು. ಸಂದರ್ಭ ಹೀಗಿರುವಾಗಲೇ, ಚುರುಮುರಿ ಮಾರುವವನ ಮಗಳೊಬ್ಬಳು ಎಂ.ಎ. ಕನ್ನಡದಲ್ಲಿ ಮೊದಲ ರ್ಯಾಂಕ್ ಪಡೆದಿದ್ದಾಳೆ! ಒಂದಲ್ಲ ಎರಡಲ್ಲ, ಎಂಟು ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದಾಳೆ. ಆ ಮೂಲಕ, ಪರಿಶ್ರಮವೊಂದಿದ್ದರೆ, ಕಡು ಬಡವರ ಮನೆಯ ಮಕ್ಕಳೂ ರ್ಯಾಂಕ್ ಪಡೆಯಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾಳೆ. ಅಂದ ಹಾಗೆ, ಈ ಸಾಧಕಿಯ ಹೆಸರು ಎಂ. ಅಕ್ಷತಾ. ವಿಶೇಷವೇನು ಗೊತ್ತೆ? ಎಂ.ಎ.ನಲ್ಲಿ ಮೊದಲ ರ್ಯಾಂಕ್ ಪಡೆದಿರುವ ಈಕೆ, ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಜಸ್ಟ್ ಸೆಕೆಂಡ್ ಕ್ಲಾಸ್ನಲ್ಲಿ ತೇರ್ಗಡೆಯಾದವಳು. ಡಿಗ್ರಿಯವರೆಗೂ ಸರ್ಕಾರಿ ಶಾಲೆ-ಕಾಲೇಜಿನಲ್ಲಿಯೇ ಓದಿದವಳು. ಅಂಥವಳು, ಎಂ.ಎ.ನಲ್ಲಿ ಮೊದಲ ರ್ಯಾಂಕನ್ನೂ, ಎಂಟು ಚಿನ್ನದ ಪದಕಗಳನ್ನು ಪಡೆಯಲು ಕಾರಣವಾದ ಸಂದರ್ಭವಾದರೂ ಯಾವುದು ಎಂಬ ಕುತೂಹಲದ ಪ್ರಶ್ನೆಗೆ ಇಲ್ಲಿ ಉತ್ತರವಿದೆ. ಇಲ್ಲಿ ಅಕ್ಷತಾಳ ಯಶೋಗಾಥೆಯ ಜೊತೆ ಜೊತೆಗೇ ಆಕೆಯ ಪೋಷಕರು ಬದುಕನ್ನು ಎದುರಿಸಿದ ರೀತಿಯೂ ಅನಾವರಣಗೊಳ್ಳುತ್ತಾ ಹೋಗುತ್ತದೆ. ಅದನ್ನು ಅಕ್ಷತಾಳ ಮಾತುಗಳಲ್ಲಿಯೇ ಹೇಳುವುದಾದರೆ-
'ಮೈಸೂರು ಜಿಲ್ಲೆಯ ನಂಜನಗೂಡು ನನ್ನ ಹುಟ್ಟೂರು. ತಂದೆಯ ಹೆಸರು ಮಹದೇವಪ್ಪ. ತಾಯಿಯ ಹೆಸರು ಭಾರತಿ. ನನಗೊಬ್ಬ ತಮ್ಮ ಇದ್ದಾನೆ. ಅವನ ಹೆಸರು ಸತೀಶ. ನನ್ನ ತಂದೆ ಅನಕ್ಷರಸ್ಥರು. ತಾಯಿ, 8ನೇ ತರಗತಿಯವರೆಗೆ ಓದಿದ್ದಾರೆ. ಅಪ್ಪನದು ಅಣ್ಣ-ತಮ್ಮಂದಿರಿಂದ ಕೂಡಿದ ತುಂಬು ಕುಟುಂಬ. ನನ್ನ ತಂದೆ ತಳ್ಳುಗಾಡಿಯಲ್ಲಿ ಟೀ-ವಡೆ ಮಾರುತ್ತಿದ್ದರು. ಈ ಮಧ್ಯೆ ಮನೆಯಲ್ಲಿ ಸೋದರರ ಮಧ್ಯೆ ಹೊಂದಾಣಿಕೆ ಆಗದ್ದರಿಂದ ಅದೊಮ್ಮೆ ಜಗಳವಾಯಿತು. ಆಗ, ನಮ್ಮ ತಂದೆ -ತಾಯಿಯನ್ನು ಮನೆಯಿಂದ ಹೊರಗೆ ಹಾಕಿಬಿಟ್ಟರು. ನನ್ನ ತಂದೆಗೆ ಆಗಿಂದಾಗ್ಗೆ ಫಿಟ್ಸ್ ಬರುತ್ತಿತ್ತಂತೆ. ಮನೆಯಿಂದ ಹೊರಗೆ ಹಾಕಲು ಇದೂ ಒಂದು ಕಾರಣ ಆಗಿದ್ದರೂ ಆಗಿರಬಹುದು.
ಇಂಥ ಸಂದರ್ಭದಲ್ಲಿ ನಮ್ಮ ತಂದೆ-ತಾಯಿ, 100 ರುಪಾಯಿ ಬಾಡಿಗೆಯ ಒಂದು ಪುಟ್ಟ ಮನೆಗೆ ಬಂದರು. ಪಿತ್ರಾರ್ಜಿತ ಆಸ್ತಿ ಅಂತೇನೂ ಇರಲಿಲ್ಲವಾದ್ದರಿಂದ ಟೀ-ವಡೆ ಮಾರುತ್ತಲೇ ಬದುಕಿನ ಬಂಡಿ ಸಾಗಿಸಬೇಕಾದ ಅನಿವಾರ್ಯತೆಯಿತ್ತು. ಡಿಗ್ರಿ ಮುಗಿವವರೆಗೂ ನಾನು ಓದಿದ್ದೆಲ್ಲಾ ಸರ್ಕಾರಿ ಶಾಲೆ-ಕಾಲೇಜುಗಳಲ್ಲಿಯೇ. (ಪ್ರೈವೇಟ್ ಶಾಲೆ-ಕಾಲೇಜುಗಳಲ್ಲಿ ದುಬಾರಿ ಡೊನೇಷನ್ ಕೊಟ್ಟು ಓದುವ ಆರ್ಥಿಕ ಚೈತನ್ಯ ನಮಗಿರಲಿಲ್ಲ ಎಂದು ಬಿಡಿಸಿ ಹೇಳಬೇಕಿಲ್ಲ ತಾನೇ?) ಬೆಳಗಿನಿಂದ ಸಂಜೆಯವರೆಗೂ ರಸ್ತೆ ಬದಿಯಲ್ಲಿ ನಿಂತು ಟೀ ಮಾರಬೇಕಿತ್ತಲ್ಲ? ಅದರಿಂದ ತಂದೆಯವರಿಗೆ ಆಯಾಸವಾಗುತ್ತಿತ್ತು. ಒಂದು ದಿನ ಅಮ್ಮನಿಗೆ ಹಾಗಂತ ಹೇಳಿಯೂ ಬಿಟ್ಟರು. ಅಪ್ಪನ ಸಂಪಾದನೆಯಿಂದಲೇ ಸಂಸಾರ ನಡೆಯುತ್ತಿತ್ತು. ಹಾಗಾಗಿ ಸುಸ್ತಾಯ್ತು ಎಂಬ ಕಾರಣ ಹೇಳಿ ಅವರು ದುಡಿಮೆಯನ್ನು ನಿಲ್ಲಿಸುವಂತಿರಲಿಲ್ಲ. ಈ ಸಂದರ್ಭದಲ್ಲಿ ಬುದ್ಧಿ ಓಡಿಸಿದ ಅಮ್ಮ, ಸಂಜೆ 4ರಿಂದ ರಾತ್ರಿ 9 ಗಂಟೆಯವರೆಗೆ ಚುರುಮುರಿ ಮಾರುವ ಕೆಲಸ ಮಾಡಿ ಎಂದಳು. ಅವತ್ತಿನ ಸಂದರ್ಭದಲ್ಲಿ, ಚುರುಮುರಿ ತಯಾರಿಸುವುದು ಹೇಗೆಂದೇ ಅಪ್ಪನಿಗೆ ಗೊತ್ತಿರಲಿಲ್ಲ. ಆದರೆ, ಬದುಕಿನ ಅನಿವಾರ್ಯತೆ ಎಲ್ಲವನ್ನೂ ಕಲಿಸುತ್ತದೆ ತಾನೆ? ಅಂತೆಯೇ ಮುಂದಿನ ನಾಲ್ಕೇ ದಿನದಲ್ಲಿ ಅಪ್ಪ ಚುರುಮುರಿ ಮಾಡುವುದನ್ನು ಕಲಿತರು.
ಮನೆಯಲ್ಲಿ ಬಡತನವಿದ್ದುದು ನಿಜ. ಆದರೆ ಅದೇನೂ ನಮಗೆ ಗೊತ್ತಾಗದಂತೆ ಅಪ್ಪ-ಅಮ್ಮ ಬೆಳೆಸಿದರು. ಹಾಗಾಗಿ, ಜವಾಬ್ದಾರಿ ತಗೊಳ್ಳೋದು ಅಂತಾರಲ್ಲ; ಅಂಥ ಗುಣ ನನ್ನದಾಗಲೇ ಇಲ್ಲ. ಪ್ರತಿ ವರ್ಷವೂ ಪಾಸ್ ಆದರೆ ಸಾಕು ಎಂದಷ್ಟೇ ಬಯಸುತ್ತಿದ್ದೆ. ಹೈಫಸ್ಟ್ ಕ್ಲಾಸ್ ಬರಬೇಕು. ತರಗತಿಗೇ ಮೊದಲಿಗಳಾಗಬೇಕು ಎಂಬಂಥ ಆಸೆಗಳೇ ಪಿಯುಸಿ ದಾಟುವವರೆಗೂ ನನಗಿರಲಿಲ್ಲ. ಹಾಗಾಗಿ, ಎಸ್ಸೆಸ್ಸೆಲ್ಸಿ-ಪಿಯುಸಿಯಲ್ಲಿ ಜಸ್ಟ್ ಸೆಕೆಂಡ್ ಕ್ಲಾಸ್ನಲ್ಲಿ ಪಾಸಾದೆ.
ಪಿಯುಸಿ ಮುಗಿಯುತ್ತಿದ್ದಂತೆಯೇ, ಮಗಳಿಗೆ ಮದುವೆ ಮಾಡಿಬಿಡಿ ಎಂಬ ಒತ್ತಾಯ ಕುಟುಂಬದ ಹಲವರಿಂದ ಬಂತು. ಆದರೆ ಅಪ್ಪ-ಅಮ್ಮನಿಗೆ ನನ್ನನ್ನು ಓದಿಸಬೇಕೆಂದು, ಟೀಚರ್ ವೇಷದಲ್ಲಿ ನೋಡಬೇಕೆಂಬ ಆಸೆಯಿತ್ತು. ಬಂಧುಗಳಿಗೆ ಅದನ್ನೇ ಹೇಳಿದರು. ಆಗ ನಮ್ಮ ರಕ್ತಸಂಬಂಧಿಯೊಬ್ಬರು-'ಹೆಣ್ಣು ಮಕ್ಕಳನ್ನು ಎಷ್ಟು ಓದಿಸಿದ್ರೆ ಏನು ಬರುತ್ತೆ ಸೌಭಾಗ್ಯ? ಅವರು ಹೋದ ಮನೇಲಿ ಪಾತ್ರೆ ತೊಳೆಯೋದು ತಪ್ಪುತ್ತಾ?' ಎಂದು ಗೇಲಿ ಮಾಡಿದರು. ಈ ಮಾತಿಂದ ಅಮ್ಮ ತುಂಬಾ ನೊಂದುಕೊಂಡಳು. ನನ್ನ ಮಗಳನ್ನು ಚೆನ್ನಾಗಿ ಓದಿಸಿ, ಮುಂದೊಂದು ದಿನ ಈ ಮಾತಿಗೆ ಉತ್ತರ ಕೊಡ್ತೇನೆ ಎಂದೂ ಹೇಳಿದಳು.
ಅವತ್ತಿನ ಸಂದರ್ಭದಲ್ಲಿ ಅಮ್ಮನಿಗೆ ಇದ್ದ ಆಸೆಯೆಂದರೆ, ನನ್ನನ್ನು ಟಿ.ಸಿ.ಎಚ್. ಓದಿಸಬೇಕು ಎಂಬುದು. ಕೋರ್ಸ್ ಮುಗಿದ ತಕ್ಷಣವೇ ಟೀಚರ್ ಕೆಲಸ ಸಿಗುವುದರಿಂದ, ಮನೆಯ ಆರ್ಥಿಕ ಪರಿಸ್ಥಿತಿ ಸ್ವಲ್ಪ ಸುಧಾರಿಸುತ್ತದೆ ಎಂಬುದು ಅಮ್ಮನ ಲೆಕ್ಕಾಚಾರವಾಗಿತ್ತು. ಆದರೆ ಪಿಯುಸಿಯಲ್ಲಿ ಹೆಚ್ಚು ಪರ್ಸೆಂಟ್ ಇಲ್ಲದ್ದರಿಂದ ಟಿ.ಸಿ.ಎಚ್. ಸೀಟು ಸಿಗಲಿಲ್ಲ. ಇಂಥದೊಂದು ಸಂದರ್ಭ ಎದುರಾಗಬಹುದೆಂಬ ಅಂದಾಜೇ ನನಗಿರಲಿಲ್ಲ. ಅಯ್ಯೋ, ಮುಂದೇನು ಮಾಡುವುದು ಎಂದು ನಾವು ಯೋಚಿಸುತ್ತ ಕುಳಿತಿದ್ದಾಗಲೇ ಡಿಗ್ರಿಗೆ ದಾಖಲಾಗಲು ಲಾಸ್ಟ್ ಡೇಟ್ ಕೂಡ ಮುಗಿದಿದೆ. ಈಗೇನಿದ್ದರೂ ಹೆಚ್ಚು ದಂಡ ಕಟ್ಟಿ ಅರ್ಜಿ ಪಡೆಯಬೇಕು. ಇಲ್ಲಿ ಅರ್ಜಿಗಳು ಸ್ಟಾಕ್ ಇಲ್ಲ. ಮೈಸೂರು ವಿ.ವಿ.ಗೇ ಹೋಗಿ ಅರ್ಜಿ ತರಬೇಕು ಎಂಬ ವಿಷಯ ನಂಜನಗೂಡಿನ ಪದವಿ ಕಾಲೇಜಿಂದ ತಿಳಿದು ಬಂತು. ಅಮ್ಮ ತಡ ಮಾಡಲಿಲ್ಲ. ಅವತ್ತೇ ಮೈಸೂರಿಗೆ ಹೋಗಿ, ಪರಿಚಿತರ ನೆರವು ಪಡೆದು ಅರ್ಜಿ ತಂದೇ ಬಿಟ್ಟಳು. ಕಡೆಗೂ ದಂಡ ಪಾವತಿಯೊಂದಿಗೆ 2007ರಲ್ಲಿ ನಂಜನಗೂಡಿನ ಸರ್ಕಾರಿ ಕಾಲೇಜಿನಲ್ಲಿ ಬಿ.ಎ.ಗೆ ಸೇರಿಕೊಂಡೆ.
ಆಗಲೂ ಹಲವರು ಕೊಂಕು ನುಡಿದರು. ಅಯ್ಯೋ, ಬಿ.ಎ. ನಾ? ಆರ್ಟ್ಸ್ಗೆ ಈಗ ಏನೂ ಬೆಲೆಯಿಲ್ಲ. ಬಿ.ಎ. ಮಾಡಿದವರು ಬೀದಿ ಬೀದಿಯಲ್ಲೂ ಸಿಕ್ತಾರೆ ಅಂದರು. ಆಗ ಅಮ್ಮ ಹೇಳಿದ್ದು ಒಂದೇ ಮಾತು: 'ಯಾರೋ ಏನೋ ಹೇಳಿದ್ರು ಅಂತ ತಲೆ ಕೆಡಿಸ್ಕೋಬೇಡ. ಶ್ರದ್ಧೆಯಿಂದ ಓದು. ಒಳ್ಳೆಯದಾಗುತ್ತೆ'. ಪಿಯುಸಿಯಲ್ಲಿ ಕಡಿಮೆ ಅಂಕ ಬಂದು ಟಿ.ಸಿ.ಎಚ್ನ ಸೀಟು ಕೈ ತಪ್ಪಿದ ಘಟನೆ ಆಗಿಂದಾಗ್ಗೆ ನೆನಪಾಗುತ್ತಲೇ ಇತ್ತು. ಹಾಗಾಗಿ ಡಿಗ್ರಿಯಲ್ಲಿ ಕಷ್ಟಪಟ್ಟು ಓದಿದೆ. ಮೂರು ವರ್ಷವೂ ಮೊದಲ ದರ್ಜೆಯಲ್ಲೇ ಪಾಸಾದೆ. 70 ಪರ್ಸೆಂಟ್ ಬಂದಿದ್ದರಿಂದ ಮಾನಸ ಗಂಗೋತ್ರಿಯಲ್ಲಿ ಕನ್ನಡ ಎಂ.ಎ.ಗೆ ಸೀಟ್ ಸಿಗುತ್ತದೆ ಎಂಬ ನಂಬಿಕೆಯಿತ್ತು. ಹಾಗಾಗಿ ಅರ್ಜಿ ಹಾಕಿದೆ. ಇದು 2010ರ ಮಾತು. ನನ್ನ ದುರಾದೃಷ್ಟಕ್ಕೆ, ಆ ವರ್ಷ ಶೇ. 72 ಅಂಕಗಳಿಗೆ ಎಂ.ಎ. ಕನ್ನಡಕ್ಕೆ ಸೀಟ್ ಕೊಡುವ ಪ್ರಕ್ರಿಯೆ ನಿಂತು ಹೋಯಿತು. ಕೇವಲ 2 ಪರ್ಸೆಂಟ್ನಿಂದ ಎಂ.ಎ. ನಲ್ಲಿ ಸೀಟ್ ಪಡೆಯಲು ನಾನು ವಿಫಲಳಾಗಿದ್ದೆ.
ಈ ವೇಳೆಗೆ, ನಿರಂತರ ದುಡಿಮೆಯಿಂದ ತಂದೆ ಆಯಾಸಗೊಂಡಿದ್ದರು. ಆದರೂ ವ್ಯಾಪಾರ ನಿಲ್ಲಿಸುವಂತಿರಲಿಲ್ಲ. ಅವರಿಗೆ ಸಹಾಯಕನಾಗಿ ತಮ್ಮನೂ ಹೋಗುತ್ತಿದ್ದ. ಎಂ.ಎ.ನಲ್ಲಿ ಸೀಟ್ ಸಿಗಲಿಲ್ಲವಲ್ಲ; ಅದರಿಂದ ಅಮ್ಮನಿಗೆ ಸಂಕಟವಾಗಿತ್ತು. ಅವರು ನೇರವಾಗಿಯೇ ಹೇಳಿದರು: 'ನಿನ್ನ ಜೊತೇಲಿ ಓದಿದವರೆಲ್ಲ ಒಂದೊಂದು ಫೀಲ್ಡ್ನಲ್ಲಿ ಗುರ್ತಿಸಿಕೊಂಡ್ರು. ನೀನು ಮಾತ್ರ ಎಲ್ಲಿಯೂ ಸಲ್ಲದವಳಂತೆ ಉಳಿದು ಬಿಟ್ಟೆ. ಕಡೆಗೂ ನಿನಗೆ ಜವಾಬ್ದಾರಿ ಬರಲೇ ಇಲ್ಲ...' ಅಮ್ಮನ ಮಾತುಗಳಲ್ಲಿ ಸತ್ಯವಿತ್ತು. ಈ ವೇಳೆಗೆ, ನನಗೂ ತಪ್ಪಿನ ಅರಿವಾಗಿತ್ತು. ಆದರೆ, ಅಳುವುದನ್ನು ಬಿಟ್ಟು, ಬೇರೆ ದಾರಿಯೇ ಇರಲಿಲ್ಲ. ಛೇ, ಇದೇನಾಗಿ ಹೋಯ್ತು ನನ್ನ ಬದುಕು ಎಂಬ ಸಂಕಟದಲ್ಲಿ ನಾನಿದ್ದಾಗಲೇ ಗೆಳತಿಯೊಬ್ಬಳು ಸಮಾಧಾನ ಹೇಳಿದಳು. ಚಾಮರಾಜನಗರದ ಜೆಎಸ್ಎಸ್ ಮಹಿಳಾ ಕಾಲೇಜಿನಲ್ಲಿ ಎಂ.ಎ. ಕನ್ನಡಕ್ಕೆ ಪ್ರವೇಶ ಪಡೆಯಬಹುದಲ್ಲ? ಎಂದಳು.
ನಾನಿದ್ದುದು ನಂಜನಗೂಡಿನಲ್ಲಿ. ಅಲ್ಲಿಂದ ಚಾಮರಾಜನಗರಕ್ಕೆ 36 ಕಿ.ಮಿ. ದೂರ. ಅಂದರೆ ದಿನಕ್ಕೆ 72 ಕಿ.ಮೀ. ಪ್ರಯಾಣ ಮಾಡಬೇಕಿತ್ತು. ಜೊತೆಗೆ, ಜೆಎಸ್ಎಸ್ ಕಾಲೇಜಿನಲ್ಲಿ, ಸರ್ಕಾರಿ ಕಾಲೇಜಿಗಿಂತ ಹೆಚ್ಚಿನ ಶುಲ್ಕ ಪಾವತಿಸಬೇಕಿತ್ತು. ಎಲ್ಲವನ್ನೂ ಅಮ್ಮನಿಗೆ ವಿವರಿಸಿದೆ. 'ನೀನು ಲೆಕ್ಚರರ್ ಆಗಿ ಪಾಠ ಮಾಡುವುದನ್ನು ನಾವು ನೋಡಬೇಕು ಮಗಳೇ' ಎಂದ ಅಪ್ಪ-ಅಮ್ಮ, ತಮ್ಮಲ್ಲಿದ್ದ ಚೂರುಪಾರು ಚಿನ್ನವನ್ನು ಅಡವಿಟ್ಟರು. ಪರಿಚಿತರಿಂದ ಸಾಲ ಪಡೆದರು. ಕಡೆಗೊಂದು ದಿನ ಎಂ.ಎ.ಗೆ ಸೇರಿಕೊಂಡು ಕಾಲೇಜಿಗೆ ಹೊರಟು ನಿಂತಾಗ ಅವರು ಹೇಳಿದ್ದು ಒಂದೇ ಮಾತು: 'ಕಷ್ಟಪಟ್ಟು ಹಣ ಹೊಂದಿಸಿದ್ದೇವೆ. ಮುಂದೆ, ಮಾರ್ಕ್ಸ್ ತೆಗೆಯೋ ಜವಾಬ್ದಾರಿ ನಿನ್ನದು...'
ಮೊದಲ ಎರಡು ತಿಂಗಳು ವಿಶೇಷವೇನೂ ನಡೆಯಲಿಲ್ಲ. ಆದರೆ ಮೂರನೇ ತಿಂಗಳು ಒಂದು ಸೆಮಿನಾರ್ ನಡೆಯಿತು. ಅದರಲ್ಲಿ ನಾನೂ ಮಾತಾಡಿದೆ. ಆಗ, ನಮ್ಮ ಅಧ್ಯಾಪಕರಾದ ಡಾ॥ ಎಂ. ರವಿಯವರು-'ನಿನ್ನ ಬರವಣಿಗೆ ಮತ್ತು ವಿಷಯ ಮಂಡಿಸುವ ರೀತಿ ಬಹಳ ಚೆನ್ನಾಗಿದೆ. ಮುಂದೆ ನಿನಗೆ ಒಳ್ಳೆಯ ಭವಿಷ್ಯವಿದೆ' ಅಂದರು. ಅವರ ಮಾತು ಕೇಳಿ, ಖುಷಿ ಮತ್ತು ರೋಮಾಂಚನ ಒಟ್ಟಿಗೇ ಆಯಿತು. ಆದರೂ ಪರ್ಸೆಂಟೇಜ್ ಕಡಿಮೆ ಎಂಬ ಕಾರಣದಿಂದ ಎರಡು ಬಾರಿ ಸೋಲಿನಿಂದ ಕಂಗಾಲಾಗಿದ್ದುದನ್ನು ನಾನು ಮರೆತಿರಲಿಲ್ಲ. ರವಿ ಸರ್ ಬಳಿ ಅದನ್ನೇ ಹೇಳಿಕೊಂಡೆ. 'ಹಳೆಯ ವಿಷಯವನ್ನು ನೆನಪಿಸಿಕೊಂಡು ಕೊರಗುವುದರಲ್ಲಿ ಅರ್ಥವಿಲ್ಲ. ಎಂ.ಎ.ನಲ್ಲಿ ಹೆಚ್ಚು ಮಾಕ್ಸ್ ರ್ ತಗೊಂಡ್ರೆ ಬದುಕು ಬಂಗಾರವಾಗುತ್ತೆ. ಆ ಬಗ್ಗೆ ಗಮನ ಕೊಡಿ' ಎಂದು ಅವರು ಬುದ್ಧಿ ಹೇಳಿದರು.
ಆನಂತರದಲ್ಲಿ ಪಾಠ ಮಾಡುವಾಗ- 'ನೀವು ಹೆಚ್ಚು ಅಂಕ ಪಡೆದರೆ, ಪ್ರಿನ್ಸಿಪಾಲ್ ಛೇಂಬರ್ನಲ್ಲಿರುವ ಫಲಕದಲ್ಲಿ ನಿಮ್ಮ ಹೆಸರು ದಾಖಲಾಗುತ್ತೆ. ವಿ.ವಿ.ಯಲ್ಲಿ ಉಳಿದೆಲ್ಲರಿಗಿಂತ ಹೆಚ್ಚು ಅಂಕ ತಗೊಂಡ್ರೆ ಚಿನ್ನದ ಪದಕವೂ ಸಿಗುತ್ತೆ. ಎಲ್ರೂ ಟ್ರೈ ಮಾಡಿ' ಎಂದಿದ್ದರು. ಎಂ.ಎ.ನಲ್ಲಿ ಚಿನ್ನದ ಪದಕ ತಗೋಬೇಕು ಎಂಬ ಆಸೆ ನನ್ನಲ್ಲಿ ಚಿಗುರೊಡೆದದ್ದೇ ಆಗ. ನನ್ನ ಬದುಕಿನ ಟರ್ನಿಂಗ್ ಪಾಯಿಂಟ್ ಎಂದರೆ ಇದೇ. ಅಂದಿನಿಂದ, ತುಂಬ ಶ್ರದ್ಧೆಯಿಂದ ಓದಿದೆ. ಅನುಮಾನ ಬಂದರೆ ರವಿ ಸರ್ ಬಳಿ ವಿವರಣೆ ಪಡೆಯುತ್ತಿದ್ದೆ. ಪುಸ್ತಕ ಹಾಗೂ ನೋಟ್ಸ್ ವಿನಿಮಯದ ಸಂದರ್ಭದಲ್ಲಿ ಸಹಪಾಠಿಗಳೂ ನೆರವಿಗೆ ಬಂದರು. ಅಧ್ಯಾಪಕಿ ಡಾ॥ ಮಹೇಶ್ವರಿ ಅವರೂ ಮಾರ್ಗದರ್ಶನ ಮಾಡಿದರು. ಗ್ರಂಥಾಲಯದ ಪುಸ್ತಕಗಳೂ ನೆರವಿಗೆ ಬಂದವು. ಪರಿಣಾಮ ಏನಾಯಿತೆಂದರೆ, ಎಂ.ಎ. ಮೊದಲ ವರ್ಷದಲ್ಲಿ ಕಾಲೇಜಿಗೇ ಅತಿ ಹೆಚ್ಚು ಅಂಕ ಪಡೆದವಳಾದೆ.
ನೋಡನೋಡುತ್ತಲೇ ಎರಡನೇ ವರ್ಷದ ತರಗತಿ ಆರಂಭವಾಯಿತು. ಕಾಲೇಜಿಗೆ ಫೀ ಕಟ್ಟಬೇಕು ಅಂದಾಗ ಅಪ್ಪ ಮತ್ತೆ ಸಾಲಕ್ಕೆ ಕೈ ಒಡ್ಡಿದರು. ಈ ಬಾರಿಯೂ ಹೆಚ್ಚು ಅಂಕ ಪಡೆಯುವ ಮೂಲಕ ಅಪ್ಪನ ಕಷ್ಟವನ್ನು ಕಡಿಮೆ ಮಾಡಬೇಕು ಎಂದು ನನಗೆ ನಾನೇ ಹೇಳಿಕೊಂಡು ತರಗತಿಗೆ ಬಂದೆ. ಆಗ ಎದುರಾದ ರವಿ ಸರ್-'ಮೊದಲ ವರ್ಷ ಒಳ್ಳೇ ಮಾರ್ಕ್ಸ್ ತಗೊಂಡಿದೀರ. ಈ ಬಾರಿ ಇನ್ನೂ ಜಾಸ್ತಿ ತಗೊಂಡ್ರೆ ಒಂದು ಪದಕ ಸಿಗುವ ಸಾಧ್ಯತೆ ಇದೆ. ಟ್ರೈ ಮಾಡಿ' ಅಂದರು. ಈ ಮಧ್ಯೆ ಕ್ಲಾಸಿಗೇ ಫಸ್ಟ್ ಬರಬೇಕೆಂಬ ವಿಚಾರದಲ್ಲಿ ಜೊತೆಗಿದ್ದವರೆಲ್ಲ ಪೈಪೋಟಿ ನೀಡತೊಡಗಿದರು. ಮೈಸೂರು, ಮಂಡ್ಯ, ಹಾಸನ, ಕೊಡಗಿನ ಕಾಲೇಜುಗಳೂ ಮೈಸೂರು ವಿ.ವಿ.ಯ ವ್ಯಾಪ್ತಿಗೇ ಬರುವುದರಿಂದ ಆ ಎಲ್ಲ ಕಾಲೇಜಿನ ವಿದ್ಯಾರ್ಥಿಗಳಿಗಿಂತ ಹೆಚ್ಚು ಅಂಕ ಪಡೆಯಬೇಕಾದ ಅನಿವಾರ್ಯತೆಯೂ ನನಗಿತ್ತು. ಕಾಲೇಜು ಅಂದ ಮೇಲೆ ಕೇಳಬೇಕೆ? ಆ ಕಾಲೇಜಿನಲ್ಲಿ ಅಷ್ಟು ಪರ್ಸೆಂಟ್ ಅಂತೆ. ಈ ಕಾಲೇಜಿನಲ್ಲಿ ಇಷ್ಟು ಪರ್ಸೆಂಟ್ ಅಂತೆ ಎಂಬಂಥ ಸುದ್ದಿಗಳು ಕೇಳಿಬರುತ್ತಲೇ ಇದ್ದವು. ಇದರಿಂದ ಗಾಬರಿಯಾಗುತ್ತಿತ್ತು ನಿಜ. ಆದರೂ ಹೆಚ್ಚು ತಲೆಕೆಡಿಸಿಕೊಳ್ಳದೆ ಕಡೆಯ ವರ್ಷದ ಪರೀಕ್ಷೆ ಬರೆದೆ.
ಎಂ.ಎ.ಮುಗಿದಿತ್ತಲ್ಲ, ಹಾಗಾಗಿ 2012ರಲ್ಲಿ ಲೆಕ್ಚರರ್ ಹುದ್ದೆಗೆ ಅರ್ಜಿ ಹಾಕಿದೆ. ಸಂದರ್ಶನಕ್ಕೆ ಕರೆದವರು- 'ನಿಮ್ಮ ಫಲಿತಾಂಶ ಬಂದಿಲ್ಲ. ಹಾಗಾಗಿ ಕೆಲಸ ಕೊಡಲು ಆಗಲ್ಲ' ಅಂದುಬಿಟ್ಟರು. ಇರಲಿ, ರಿಸಲ್ಟ್ ಬಂದ ಮೇಲೆ ಮತ್ತೆ ಟ್ರೈ ಮಾಡೋಣ ಅಂದುಕೊಂಡು ಮನೆಗೆ ಬಂದೆ. ಮೂರು ತಿಂಗಳ ನಂತರ ಗೆಳತಿಯೊಬ್ಬಳು ಫೋನ್ ಮಾಡಿ ಹೇಳಿದಳು: 'ರಿಸಲ್ಟ್ ಬಂದಿದೆ ಕಣೇ. ಈ ಸೆಮಿಸ್ಟರ್ನಲ್ಲೂ ಕ್ಲಾಸ್ಗೆ ನೀನೇ ಫಸ್ಟ್! ಕಂಗ್ರಾಟ್ಸ್ ಕಣೇ.'
ಅಬ್ಬಾ, ಕಡೆಗೂ ಈ ಹೋರಾಟದಲ್ಲಿ ಗೆದ್ದೆ ಅನಿಸಿದ್ದೇ ಆಗ. ನನ್ನ ಯಶಸ್ಸಿನಿಂದ ಮನೆಯಲ್ಲಿ ಎಲ್ಲರಿಗೂ ಖುಷಿಯಾಗಿತ್ತು. ನಾವು ಈ ಖುಷಿಯಲ್ಲಿದ್ದಾಗಲೇ ನಮ್ಮ ಗುರುಗಳಾದ ರವಿ ಸರ್ ಫೋನ್ ಮಾಡಿ-'ಮೈಸೂರು ವಿ.ವಿ.ಯ ಎಂ.ಎ. ಕನ್ನಡ ವಿಭಾಗದಲ್ಲಿ ನೀವು ಶೇ. 89.7 ಅಂಕ ಪಡೆದು ಮೊದಲ ರ್ಯಾಂಕ್ ಪಡೆದಿದ್ದೀರಿ. ಜೊತೆಗೆ, 8 ಚಿನ್ನದ ಪದಕ ಹಾಗೂ 2 ನಗದು ಬಹುಮಾನಗಳೂ ಬಂದಿವೆ. ಅಭಿನಂದನೆ' ಎಂದರು. ಅವರ ಮಾತು ಕೇಳುತ್ತಿದ್ದಂತೆಯೇ ಸಂತೋಷದಿಂದ ಕಣ್ಣೀರು ಬಂತು. ಅಪ್ಪ ಮನೆಗೆ ಬಂದಾಗ, ಓಡಿ ಹೋಗಿ ಅವರ ಕೈ ಹಿಡಿದು ಕಣ್ಣಿಗೆ ಒತ್ತಿಕೊಂಡು ಅಪ್ಪ, ಅಪ್ಪ, ಅಪ್ಪಾ ಅಂದೆ. ಮುಂದಕ್ಕೆ ಏನು ಹೇಳಬೇಕೆಂದು ಗೊತ್ತಾಗದೆ ಅಳುತ್ತಾ ನಿಂತು ಬಿಟ್ಟೆ. ವಿಷಯ ತಿಳಿದ ಅಪ್ಪನ ಕಂಗಳಲ್ಲೂ ಆನಂದಭಾಷ್ಪವಿತ್ತು. ಖುಷಿಯಿಂದ ಅಮ್ಮನೂ ಅಳುತ್ತಿದ್ದಳು. ಮುಂದೆ 2013ರ ಜುಲೈ 5ರಂದು ಮೈಸೂರು ವಿ.ವಿ.ಯ ಘಟಿಕೋತ್ಸವದಲ್ಲಿ ರಾಜ್ಯಪಾಲ ಹಂಸರಾಜ ಭಾರದ್ವಾಜ್ ಅವರಿಂದ ರ್ಯಾಂಕ್ ಸರ್ಟಿಫಿಕೇಟ್, 8 ಚಿನ್ನದ ಪದಕ ಹಾಗೂ ನಗದು ಬಹುಮಾನ ಪಡೆದೆ. ಈಗ, ನಂಜನಗೂಡಿನ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಹಾಗೂ ಹುಲ್ಲಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿದ್ದೇನೆ. ಅಪ್ಪ-ಅಮ್ಮನ ಕನಸನ್ನು ನನಸು ಮಾಡಿದ ಹೆಮ್ಮೆ ನನಗಿದೆ. ನಂಜನಗೂಡಿನ ಬಜಾರ್ ರಸ್ತೆಯ ಸರ್ಕಲ್ನಲ್ಲಿ ನಮ್ಮ ತಂದೆ ಈಗಲೂ ಚುರುಮುರಿ ಮಾರ್ತಾ ಇರ್ತಾರೆ. ಅಂಥ ಅಪ್ಪನ ಮಗಳು ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ, ಖುಷಿ...' ಎನ್ನುತ್ತಾ ಮಾತು ಮುಗಿಸುತ್ತಾಳೆ ಅಕ್ಷತಾ.
'ಸರ್, ನನ್ನ ಯಶಸ್ಸಿಗೆ ರವಿ ಸರ್ ನೀಡಿದ ಮಾರ್ಗದರ್ಶನ ಕಾರಣ' ಎಂದು ಅಕ್ಷತಾ ಹೇಳ್ತಾರೆ. ಇದಕ್ಕೆ ಹೇಗೆ ಪ್ರತಿಕ್ರಿಯಿಸ್ತೀರಿ ಎಂದದ್ದಕ್ಕೆ ಡಾ॥ ರವಿ ಹೇಳಿದರು: 'ನಾವು ಪ್ರತಿ ವರ್ಷವೂ ವಿದ್ಯಾರ್ಥಿಗಳಿಗೆ ಗೈಡ್ ಮಾಡ್ತಾ ಇರ್ತೇವೆ. ಅದರಲ್ಲಿ ದೊಡ್ಡ ಯಶಸ್ಸು ಪಡೆದದ್ದು ಅಕ್ಷತಾಳ ಹೆಚ್ಚುಗಾರಿಕೆ. ಮುತ್ತು ಪೋಣಿಸಿದಂಥ ಅಕ್ಷರ ಹಾಗೂ ಒಮ್ಮೆ ಹೇಳಿಕೊಟ್ಟಿದ್ದನ್ನು ಮರೆಯದೇ ಇರುವುದು ಆಕೆಯ ಪ್ಲಸ್ ಪಾಯಿಂಟ್. ಆಕೆಯ ಯಶಸ್ಸು ಕಂಡು ಪ್ರಾಚಾರ್ಯರಾದ ಪುಷ್ಪಾವತಿಯವರೂ ಸೇರಿದಂತೆ ಕಾಲೇಜಿನ ಎಲ್ಲರೂ ಸಂಭ್ರಮಿಸಿದ್ದಾರೆ. ಮುಂದೆಯೂ ಆಕೆಗೆ ಒಳ್ಳೆಯದಾಗಲಿ ಎಂಬುದೇ ನಮ್ಮ ಹಾರೈಕೆ...'
ನೂರಾರು ಮಂದಿಗೆ ಸ್ಫೂರ್ತಿ ನೀಡುವಂಥ ಸಾಧನೆ ಮಾಡಿರುವ ಅಕ್ಷತಾಗೆ ಅಭಿನಂದನೆ ಹೇಳಬೇಕು ಅನಿಸಿದರೆ - akshatha2m@gmail.com
-ಎ.ಆರ್. ಮಣಿಕಾಂತ್
armanikanth@gmail.com