ಅಂಕಣಗಳು

'ಕನ್ನಡದಲ್ಲಿ ಕರೆದರೆ ಓ ಎನ್ನನೇ ಏಸು' ಎಂದವರು

'ಕನ್ನಡದಲ್ಲಿ ಕರೆದರೆ ಓ ಎನ್ನನೇ ಏಸು' ಎಂದವರು
Published On :

ಜೀವನದಿ ಕಾವೇರಿ ಉಗಮದ ಕೊಡಗಿನ ಬೆಡಗಿನ ಅತ್ಯಂತ ಸುಂದರ ಪರಿಸರ ಪ್ರದೇಶ ಹೊಂದಿರುವ ಮಡಿಕೇರಿಯಲ್ಲಿ ಜರುಗುತ್ತಿರುವ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಈ ಅಕ್ಷರ ಜಾತ್ರೆಯ ಅಗ್ರಾಸನವನ್ನು ಅಪ್ಪಟ ಪರಿಸರವಾದಿ ಸಾಹಿತಿ ನಾ. ಡಿಸೋಜ ಅವರು ಅಲಂಕರಿಸುತ್ತಿರುವುದು ಅತ್ಯಂತ ಅರ್ಥಪೂರ್ಣವಾಗಿದ್ದು, ಸಮ್ಮೇಳನಕ್ಕೊಂದು ಕೋಡು ಮೂಡಿಸಿದೆ. ಈ ಹಿಂದೆ ಇಲ್ಲಿ ನಡೆದಿರುವ ಎರಡೂ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರುಗಳಾಗಿದ್ದ ಡಿವಿಜಿ ಹಾಗೂ ಶಂ.ಭಾ. ಜೋಶಿ ಅವರುಗಳು ದೂರದ ಆದರೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿಯವರು ನಾ. ಡಿಸೋಜ ಅವರು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾದ ಬಗೆಯನ್ನು ಘೋಷಿಸುತ್ತಾ ಉತ್ತಂಗಿ ಚನ್ನಪ್ಪ ಅವರ ನಂತರ ಕ್ರೈಸ್ತ ಸಮುದಾಯದ ಸಾಹಿತಿಯೊಬ್ಬರು ಸಮ್ಮೇಳನಾಧ್ಯಕ್ಷರಾಗುತ್ತಿರುವುದು ಇದೇ ಮೊದಲೆಂದು ಹೇಳಿದ್ದು ಮಾತ್ರ ಸಮಸ್ತ ಕನ್ನಡ ಸಾಹಿತ್ಯ ಪ್ರೇಮಿಗಳಿಗೂ ಬೇಸರ ತರುವಂತಾದ್ದು. ಏಕೆಂದರೆ ಡಿಸೋಜ ಅವರು ಎಂದೂ ಕೂಡ ಜಾತಿ-ಮತ-ಧರ್ಮ-ಪಂಥವೆಂದು ನಿಂತವರಲ್ಲ. ಕನ್ನಡವೇ ಜಾತಿ, ಕನ್ನಡವೇ ಮತ, ಕನ್ನಡವೇ ಧರ್ಮ. ಕನ್ನಡವೇ ಪಂಥವೆಂದು ಬದುಕುತ್ತಿರುವವರು. "ಕನ್ನಡದಲ್ಲಿ ಕರೆದರೆ ಓ ಎನ್ನನೇ ಏಸು" ಎಂದು ಬರೆದವರು. ಮಾತೃ ಭಾಷೆ ಕೊಂಕಣಿಯಾದರೂ ಕನ್ನಡವನ್ನೇ ಉಸಿರಾಗಿಸಿಕೊಂಡು ಸಾಹಿತ್ಯ ಕೃಷಿ ಮಾಡುತ್ತಾ ಕನ್ನಡವನ್ನು ಕಟ್ಟುತ್ತಿದ್ದಾರೆ.
"ಲಾಬಿ ಮಾಡದೇ, ಪ್ರಚಾರಕ್ಕೆ ಹಾತೊರೆಯದೇ ತಮ್ಮ ಅನುಭವಕ್ಕೆ ಬಂದ ವಿಷಯಗಳನ್ನು ಬರೆದು ಮೌಲಿಕ ಕೃತಿ ರಚಿಸಿದವರು. ನೇರ ಅನುಭವವೇ ಅವರ ಸಾಹಿತ್ಯದ ಜೀವಾಳ. ಹಿಂಬಾಲಕರ ತಂಡ ಇಟ್ಟುಕೊಳ್ಳದೇ ಮಲೆನಾಡಿನ ಸಾಗರದಲ್ಲಿಯೇ ಬದುಕು ಕಟ್ಟಿಕೊಂಡು ಈಗಲೂ ಸಾಗರದಲ್ಲೇ ವಾಸಿಸುತ್ತಿದ್ದಾರೆ." ಇದು ಪ್ರಸಿದ್ಧ ಸಾಹಿತಿ ಡಾ. ನಾ. ಡಿಸೋಜ ಅವರು 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆಯೇ ರಾಷ್ಟ್ರಪ್ರಶಸ್ತಿ ಪುರಸ್ಕೃತ ಖ್ಯಾತ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು ಡಿಸೋಜ ಅವರ ಆಯ್ಕೆಗೆ ಹರ್ಷ ವ್ಯಕ್ತಪಡಿಸುತ್ತಾ ಅಭಿನಂದಿಸಿ ನುಡಿದ ಮಾತುಗಳು. ನಿಜಕ್ಕೂ ಇದು ಡಿಸೋಜ ಅವರ ವಿಷಯದಲ್ಲಿ ಉತ್ಪ್ರೇಕ್ಷೆಯ ಮಾತುಗಳಲ್ಲ.
    "ನಾ. ಡಿಸೋಜ" ಎಂದರೆ ನಾಡು ಮೆಚ್ಚಿದ ಪ್ರಖ್ಯಾತ ಸಾಹಿತಿಯಷ್ಟೇ ಅಲ್ಲ. ಅಕ್ಷರಗಳಲ್ಲಿ ಸಾಹಿತ್ಯವನ್ನು ಮಾತ್ರ ನಿರ್ಮಿಸಿದವರಲ್ಲ. ಲೇಖನಿಯಿಂದ ಬರೀ ಪುಸ್ತಕಗಳ ಶಿಖರವನ್ನು ಕಟ್ಟಿದವರಲ್ಲ. ಅವರು ಪ್ರಖರವಾದ ವೈಚಾರಿಕ ಪ್ರಜ್ಞೆಯ ಚಿಂತಕ. ಸರ್ವ ಧರ್ಮ ಸಮಭಾವದ ಪ್ರತಿಪಾದಕ. ವಿಶ್ವ ಮಾನವತ್ವ ಮೇಳೈಸಿಕೊಂಡ ದಾರ್ಶನಿಕ. ಕ್ರೈಸ್ತ ದರ್ಶನವನ್ನು ತಿಳಿದಿರುವಷ್ಟೇ ಹಿಂದೂ ಮತ್ತು ಜೈನ ಹಾಗೂ ಇನ್ನಿತರೇ ಧರ್ಮದರ್ಶನಗಳನ್ನೂ ಅರಿತ ಅರಿವಿನ ಹರಿವಾಣ. ಎಡಪಂಥ- ಬಲ ಪಂಥಗಳೆನ್ನದೆ ಎಲ್ಲದರೊಳಗಿನ ಒಳಿತನ್ನು ತನ್ನೊಳಗಿರಿಸಿಕೊಂಡ ಒಳಿತಿನ ಹೂರಣ. ಎಡ-ಬಲಗಳೆಲ್ಲವನ್ನೂ ಮೀರಿದ ಸದ್ಭಾವನೆಯ ತೋರಣ. ಕಳೆದು ಹೋದ ಒಂದು ಕಾಲಮಾನದ ಸಾಕ್ಷಿ ಪ್ರಜ್ಞೆಯಾಗಿ ಹಲವು ಹತ್ತು ವಿಷಯಗಳಿಗೆ ಕನ್ನಡಿಯಾದ ಬಹುಮುಖಿ. ಪರಿಸರ ಪ್ರಜ್ಞೆಯ ಬೆಳಕು ಚೆಲ್ಲುವ ಸಾಮಾಜಿಕ ಕಳಕಳಿಯ ಸಮಾಜಮುಖಿ. ಅಪ್ರತಿಮ ಕನ್ನಡಪ್ರಜ್ಞೆಯ 'ಸಾಗರ'ದ ಸರ್ವಸುಖಿ. ಪರಿಸರ ಸಂರಕ್ಷಿಸುವ ಪರಿಸರ ಪರ ಹೋರಾಟಗಾರ. ಕನ್ನಡಕ್ಕಾಗಿ ಕೈಯೆತ್ತುವ, ಕೊರಳೆತ್ತುವ ಕನ್ನಡ ಚಳವಳಿಗಾರ. 'ಮುಳುಗಡೆ' ಸಂತ್ರಸ್ತರ ಪರ ಲೇಖನಿ ಹಿಡಿದು ಆಳುವ ಸರ್ಕಾರಕ್ಕೆ ಅರಿವಿನ ಹಣತೆ ಹಚ್ಚಿದ ಜನಪರ ಹೋರಾಟಗಾರ. ಇದೆಲ್ಲದರ ಒಟ್ಟು ಮೊತ್ತವೇ ನಾ. ಡಿಸೋಜ. ಇದೆಲ್ಲವನ್ನೂ ಅವರ ಬದುಕು-ಬರಹದಲ್ಲಿ ಅಕ್ಷರಶಃ ಕಾಣಬಹುದಾಗಿದೆ.
ಡಿಸೋಜ ಅವರದು ಬದುಕು ಬೇರೆಯಲ್ಲ ಬರಹ ಬೇರೆಯಲ್ಲ. ಎರಡೂ ಒಂದೇ. ಬರೆದಂತೆ ಬದುಕಿದವರು. ಬದುಕಿದಂತೆ ಬರೆದವರು. ನಡೆಯೊಂದು ನುಡಿಯೊಂದು ಇಲ್ಲವೇ ಇಲ್ಲ.  ಬಾಲ್ಯದಿಂದಲೂ ಅಷ್ಟೇ. ಇಂಥ ಬದ್ಧತೆ ರಕ್ತಗತ. ಇವರು ಬಾಲ್ಯದಲ್ಲಿ ಶಾಲೆಗೆ ಹೋಗುತ್ತಿದ್ದಾಗ ಆ ಶಾಲೆಯಲ್ಲಿ ಬುಧವಾರ ಬಸವಣ್ಣನ ಬಗ್ಗೆ, ಗುರುವಾರ ಭಗವದ್ಗೀತೆ, ಶುಕ್ರವಾರ ಕುರಾನ್, ಶನಿವಾರ ಬೈಬಲ್ ಪಠಿಸಬೇಕಾಗಿತ್ತು. ಆಗೊಮ್ಮೆ ಚರ್ಚ್‌ನ ಪಾದ್ರಿಯೊಬ್ಬ ಬಾಲಕ ಡಿಸೋಜರನ್ನು ಕರೆದು, "ನೀನು ಕ್ರಿಶ್ಚಿಯನ್ ಹುಡುಗ ಕಣಪ್ಪಾ. ನಿನ್ನ ಸ್ಕೂಲಿನಲ್ಲಿ ಬೇರೆ ಧರ್ಮಗಳ ಪ್ರಾರ್ಥನೆ ಮಾಡುವಾಗ ನೀನು ದೂರ ಹೋಗಿ ನಿಂತು ಬೈಬಲ್ ಮಾತ್ರ ಓದಬೇಕು" ಎಂದು ಬುದ್ಧಿ ಹೇಳಿದರಂತೆ. ಆಗ ಬಾಲಕ ಡಿಸೋಜ ಪಾದ್ರಿಗೆ ತಿರುಗಿ ಬಿದ್ದಿದ್ದರಂತೆ. ಅಷ್ಟೇ ಅಲ್ಲದೆ "ಕ್ರಿಸ್ತನ ಬಗ್ಗೆ ನನಗೆ ಗೌರವವಿದೆ. ಕ್ರೈಸ್ತ ಧರ್ಮದ ಬಗ್ಗೆಯೂ ಅಪಾರ ಭಕ್ತಿ ಇದೆ. ಆದರೆ ಇದೊಂದೇ ಧರ್ಮವಲ್ಲ" ಅಂದಿದ್ದರಂತೆ. ವಿದ್ಯಾರ್ಥಿ ದಿಶೆಯಲ್ಲೇ ಈ ರೀತಿಯ ವಿವೇಕ ಹೊಂದಿದ್ದ ಇಂಥ ಸರ್ವಧರ್ಮ ಸಮನ್ವಯಕಾರ ಡಿಸೋಜ ನಮ್ಮ ಕನ್ನಡದ ಸಾಹಿತಿ ಎಂಬುದೇ ಒಂದು ಹೆಮ್ಮೆ!
ಏನೋ ಒಂದಿಷ್ಟು ಬರೆದು ಬಿಟ್ಟು ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಾ, ಮಂತ್ರಕ್ಕಿಂತ ಉಗುಳೇ ಜಾಸ್ತಿ ಎಂಬಂತೆ ಅಗ್ಗದ ಪ್ರಚಾರದ ಗದ್ದಲದಲ್ಲಿ, ಪ್ರಶಸ್ತಿ-ಪುರಸ್ಕಾರ, ಸ್ಥಾನ-ಮಾನಗಳ ಲಾಬಿಯಲ್ಲಿ ಮುಳುಗಿರುವವರೇ ಹೆಚ್ಚು ಮಂದಿ ನಮ್ಮ ಸಾರಸ್ವತ ಲೋಕದಲ್ಲಿ ಹಿಂದಿನಿಂದಲೂ ಇದ್ದಾರೆ. ಅಂತಹವರಿಗೆ ಅಕಾಡೆಮಿಕ್ ಹಿನ್ನೆಲೆ ಇದ್ದರಂತೂ ಮುಗಿದೇ ಹೋಯಿತು. ಅವರ ತಲೆಗೆ ಕಾಲುಗಳು ಬಂದು ಬಿಟ್ಟಿರುತ್ತವೆ. ಇಂತಹ ವಾತಾವರಣದ ನಡುವೆ ನಾನ್ ಅಕಾಡೆಮಿಕ್ ಆಗಿದ್ದುಕೊಂಡು ದೂರದ ಒಳನಾಡಿನಲ್ಲಿ ಎಲ್ಲೋ ಒಂದು ಮೂಲೆಯಲ್ಲಿ "ದ್ವೀಪ"ದಂತೆ ಕುಳಿತು ಸಮೃದ್ಧವಾದ ಸಾಹಿತ್ಯ ಕೃಷಿ ಮಾಡಿ ಮೌಲಿಕ ಕೃತಿಗಳ ಮಹಾಪರ್ವವನ್ನೇ ಸೃಷ್ಟಿಸಿದ ನಾ. ಡಿಸೋಜ ನಾಡು ಕಂಡ 'ಸಾಗರ'ದ ಮಹಾಚೇತನ. ಇವರ ಸಾಹಿತ್ಯ ಸಾಧನೆ ಯಾವ ಅಕಾಡೆಮಿಕ್ ಸಾಹಿತಿಗಳಿಗಿಂತ ಕಮ್ಮಿಯೇನಲ್ಲ. ಅಂತಂಥಾ ಅದ್ಭುತ ಸಾಹಿತಿ ಕುಸುಮಗಳನ್ನು ತಮ್ಮ ಲೇಖನಿಯಿಂದ ಅರಳಿಸಿ ಕನ್ನಡಮ್ಮನ ಮುಡಿಯನ್ನು ಅಲಂಕರಿಸಿದ್ದಾರೆ.
ವಿಪರ್ಯಾಸವೆಂದರೆ ನಾಡಿನ ಉದ್ದಗಲಕ್ಕೂ ಓದುಗ ವಲಯವನ್ನು 'ಸಾಗರ'ದಂತೆ ಹೊಂದಿರುವ ಸತ್ವ ಮತ್ತು ಮಹತ್ವಗಳಲ್ಲಿ ಒಂದು ಕೈ ಮೇಲೇ ಇರುವ ಡಿಸೋಜ ಅವರ ಸಾಹಿತ್ಯಕ್ಕೆ ಅಕಾಡೆಮಿಕ್ ವಲಯದಲ್ಲಿ ಸಿಗಬೇಕಾದ ಪ್ರಾಮುಖ್ಯತೆ ಸಿಗಲೇ ಇಲ್ಲ. ಅಕಾಡೆಮಿಕ್ ಹಾಗೂ ನಾನ್ ಅಕಾಡೆಮಿಕ್ ತಾರತಮ್ಯತೆಯಿಂದಾಗಿ ಅಕಾಡೆಮಿಕ್ ವಲಯದ ಮಲತಾಯಿ ಧೋರಣೆಯ ದೃಷ್ಟಿ ದೋಷಕ್ಕೆ ಸಿಕ್ಕಿ ದಶದಿಕ್ಕುಗಳಲ್ಲೂ ಚರ್ಚೆಯಾಗಬೇಕಿದ್ದ ಡಿಸೋಜ ಅವರ ಸಾಹಿತ್ಯ ಆ ರೀತಿ ಆಗಲೇ ಇಲ್ಲ. ಆದರೆ ಇದಾವುದನ್ನೂ ಅಪೇಕ್ಷಿಸದೆ ಆನೆ ನಡೆದದ್ದೇ ಹಾದಿ ಎಂಬಂತೆ ಡಿಸೋಜ ಅವರು ತಮ್ಮ ಪಾಡಿಗೆ ತಾವು ನಿರ್ಲಿಪ್ತರಾಗಿ ಬರೆದೇ ಬರೆದರು. ಅಂಥ ಗಟ್ಟಿ ಸಾಹಿತ್ಯ ಅವರದ್ದಾಗಿತ್ತು. ಅಕಾಡೆಮಿಕ್ ಸಾಹಿತಿಗಳು ಮಾತ್ರ ವಿದ್ವಾಂಸರೆಂದು ಕೊಚ್ಚಿಕೊಳ್ಳುವ ಮಂದಿ ಬಾಯ್ಮೇಲೆ ಬೆರಳಿಟ್ಟುಕೊಳ್ಳುವಂತೆ  ವಿದ್ವತ್ ಪೂರ್ಣ ಸೃಜನಶೀಲ ಸಾಹಿತ್ಯ ಕೃತಿಗಳು ಡಿಸೋಜ ಅವರಿಂದ ವಿಸ್ಮಯೋಪಾದಿಯಲ್ಲಿ ಬಂದವು.
ಡಿಸೋಜ ಅವರು ಹೀಗೆ ಬರೆಯಲು, ಬೆಳೆಯಲು ಅವರೊಳಗಿನ ಮನುಷ್ಯ ಪ್ರೇಮ ಹಾಗೂ ಪರಿಸರ ಸಂದರ್ಭಗಳಿಗೆ ಮತ್ತು ಸಾಮಾಜಿಕ ಸಮಸ್ಯೆಗಳಿಗೆ ಸದಾ ಸ್ಪಂದಿಸುವ ಹೃದಯವಂತಿಕೆಯೇ ಮೂಲಧಾತುವಾಗಿತ್ತು. ಸುತ್ತಮುತ್ತಲ ಪರಿಸರ, ಜೀವ, ಜೀವನ ಇವುಗಳೆಡಗಿನ ಆಪ್ತತೆ ಹಾಗೂ ಕಾಳಜಿಯೇ ಅವರ ಬರವಣಿಗೆಯ ಜೀವಾಳ.
ಮಲೆನಾಡಿನ ಕಾಡು-ಕಣಿವೆ, ಬೆಟ್ಟ-ಗುಡ್ಡ, ತಿಟ್ಟು-ತೆಪ್ಪ, ಹಳ್ಳ-ಕೊಳ್ಳ, ಹೂವು-ಹಣ್ಣು, ಪ್ರಾಣಿ-ಪಕ್ಷಿ, ನದಿ-ನೆಲ, ಬುವಿ-ಬಾನು, ಬೇರು-ಬಳ್ಳೆ, ಒಕ್ಕಲು-ಮಕ್ಕಳು, ಜೀವಜಲ-ಜೀವಜಾಲ, ರುದ್ರತೆ-ಛಿದ್ರತೆ, ಮುಗ್ಧತೆ- ಮಾನವೀಯತೆ, ರೋಗರುಜಿನ, ಕ್ರೌರ್ಯ-ಶೌರ್ಯ, ನಂಬಿಕೆ-ಸಂಕಟ, ಊರು-ಕೇರಿ, ಧಾರ್ಮಿಕತೆ- ಡಾಂಭಿಕತೆ, ಶೋಷಣೆ-ಮೌಢ್ಯಾಚರಣೆ, ಸಂಸ್ಕೃತಿ- ಸಂಕಟ, ಕುದಿ-ಬೇಗುದಿ, ಯೋಜನೆ-ಯಾಚನೆ, ಬೆಂಕಿ-ಬೆಳಕು, ಮುಳುಗಡೆ-ಮುದುಡಿದೆದೆ, ಸಂತ್ರಸ್ತ-ನಿರಾಶ್ರಿತ, ವೇದನೆ-ಯಾತನೆ... ಇವುಗಳೆಲ್ಲಕ್ಕೂ ಡಿಸೋಜ ಅವರು ಕಣ್ಣು, ಕಿವಿ, ಬಾಯಿ ಆದವರು. ಎಲ್ಲಕ್ಕಿಂತ ಮಿಗಿಲಾಗಿ ಹೃದಯವಾಗಿ ಮಿಡಿದವರು. ಮಲೆನಾಡೆಂಬೋ ಬೃಹತ್ ಕ್ಯಾನ್ವಾಸಿನಲ್ಲಿ ತಾನು ಅಂದ ಹಾಗೆ ನಾಡಿನಾದ್ಯಂತ ಹಾಗೂ ನಾಡಿನಾಚೆಗೂ ಖ್ಯಾತಿ ತಂದಿತ್ತ ಇವರ ಪ್ರಸಿದ್ಧ ಕಾದಂಬರಿ 'ಮುಳುಗಡೆ' ಡಿಸೋಜ ಅವರ ಸಮಗ್ರ ಸಾಹಿತ್ಯದ ರೂಪಕದಂತಿದೆ. ಹಾಗೆಯೇ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರಕ್ಕೆ ಭಾಜನವಾಗಿರುವ "ಮುಳುಗಡೆಯ ಊರಿಗೆ ಬಂದವರು" ಕೃತಿಯಂತೂ ಮಕ್ಕಳಿಗಾಗಿ ಇವರು ಬರೆದ ವಿಭಿನ್ನ ಆಶಯದಾಗಿದ್ದು, ಇವತ್ತಿನ ಶಾಲಾ ಮಕ್ಕಳಿಗೆ ಅತ್ಯಗತ್ಯವಾಗಿ ಪಠ್ಯವಾಗಬೇಕಿದೆ. ಮುಳುಗಡೆಯ ಜನರ ದುರಂತ ಬದುಕನ್ನು, ಸಂಕಷ್ಟದ ಪರಾಕಾಷ್ಟೆಯನ್ನು ಆ ಜನರ ಎದೆಯೊಳಗಿನ ವೇದನೆಯನ್ನು ಡಿಸೋಜ ಅವರಷ್ಟು ಸಹಜವಾಗಿ ಕಟ್ಟಿ ಕೊಟ್ಟ ಸಾಹಿತಿ ನಮ್ಮಲ್ಲಿಲ್ಲ!



-ಬನ್ನೂರು ಕೆ. ರಾಜು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.