ಅಂಕಣಗಳು

ಬಿದ್ದಾಗ ಆಳಿಗೊಂದು ಕಲ್ಲು, ಈಗೇಕಿಲ್ಲ ಗುಲ್ಲು?

ಬಿದ್ದಾಗ ಆಳಿಗೊಂದು ಕಲ್ಲು, ಈಗೇಕಿಲ್ಲ ಗುಲ್ಲು?
Published On :

ಯಾವ ಎಂಎಲ್‌ಎ, ಎಂ.ಪಿ., ಮಿನಿಸ್ಟರ್ ಆಗಲಿ ತಮ್ಮ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಸಲುವಾಗಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವುದು, ದೊಡ್ಡ ದೊಡ್ಡ ಆಸ್ಪತ್ರೆಗಳನ್ನು ಕಟ್ಟಿಸುವುದು, ಅದಕ್ಕಾಗಿ ಟ್ರಸ್ಟ್‌ಗಳನ್ನು ಮಾಡುವುದು, ಅಧಿಕಾರದಲ್ಲಿದ್ದಾಗ ದೇಣಿಗೆ ಹರಿದು ಬರುವಂತೆ ಮಾಡುವುದು ಸಂಪ್ರದಾಯವೇ.
2013 ಡಿಸೆಂಬರ್ 28-29ರ ಕನ್ನಡಪ್ರಭದಲ್ಲಿ ಪ್ರಕಟವಾದ 'ಯಡಿಯೂರಪ್ಪ ರಾಜೀನಾಮೆಗೆ ಲೋಕಾ ತಪ್ಪು ಕಾರಣವಾಯ್ತೆ?' 'ಗಣಿ ಅಕ್ರಮ ತಡೆಗೆ ಯತ್ನ, ಬಿಎಸ್‌ವೈಗೆ ಬಿತ್ತು ಧೂಳು' ಎಂಬ ಶೀರ್ಷಿಕೆಗಳಡಿ ಪ್ರಕಟವಾದ ಸುದ್ದಿಗಳನ್ನು ಓದಿದಾಗ ಯಡ್ಯೂರಪ್ಪನವರ ಬಗ್ಗೆ ಅಯ್ಯೋ ಪಾಪ ಅನ್ನಿಸದೇ ಇರದು. ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಶಿಕ್ಷೆ ಅನುಭವಿಸಬೇಕಾಗಿ ಬರುವುದು ಅನ್ಯಾಯದ ಪರಮಾವಧಿಯಲ್ಲದೆ ಮತ್ತೇನು? ಆ ಸುದ್ದಿಯ ಪ್ರಕಾರ 2011 ಜುಲೈ 27ರಂದು ಅಂದಿನ ಲೋಕಾಯುಕ್ತರಾಗಿದ್ದ ನ್ಯಾ. ಸಂತೋಷ ಹೆಗ್ಡೆಯವರು ಸರ್ಕಾರಕ್ಕೆ ನೀಡಿದ ಗಣಿಗಾರಿಕೆಯ ತನಿಖಾ ವರದಿಯು ಲೋಪದೋಷಗಳಿಂದ ಕೂಡಿದೆ. ಗಣಿ ಅಕ್ರಮಕ್ಕೂ ಯಡಿಯೂರಪ್ಪನವರಿಗೂ ಯಾವುದೇ ಸಂಬಂಧವಿಲ್ಲ. ಅದು ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ನಡೆದ ವ್ಯವಹಾರವಲ್ಲ. ಬದಲಾಗಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ನಡೆದ ವ್ಯವಹಾರ, ಗಣಿ ಅಕ್ರಮ ತಡೆಯಲು ಹೋಗಿ ಯಡಿಯೂರಪ್ಪನವರೇ ಕಳಂಕಿತರೆನಿಸಿಕೊಂಡದ್ದು ವಿಪರ್ಯಾಸ. ಇದು ಲೋಕಾಯುಕ್ತ ಅಧಿಕಾರಿಗಳ ತಪ್ಪು ಗ್ರಹಿಕೆಯಿಂದಾದ ಪ್ರಮಾದ ಎಂಬುದು ಆ ಸುದ್ದಿಯ ಒಟ್ಟಾರೆ ಸಾರಾಂಶ. ಇಂಥಾ ಒಂದು ಸುದ್ದಿ ಪ್ರಕಟಗೊಂಡಿದ್ದರೂ, ಯಡಿಯೂರಪ್ಪನವರನ್ನು ಕಳಂಕಿತ ಎನಿಸುವುದರಲ್ಲಿ ವಿಶೇಷ ಕಾಳಜಿ ವಹಿಸಿ, ಅಂದು ಗಂಟೆ ಗಂಟೆಗೂ ಮಾಧ್ಯಮಗಳ ಮುಂದೆ ಪ್ರತ್ಯಕ್ಷವಾಗಿ "ಸರ್ಕಾರದ ಕೈ ಸೇರುವುದಕ್ಕೆ ಮುಂಚೆ ತಾವು ಕೊಡಬೇಕೆಂದಿದ್ದ ವರದಿ ಅದು ಹೇಗೆ ಮಾಧ್ಯಮಗಳಿಗೆ ಸೋರಿಕೆಯಾಯಿತೋ ಗೊತ್ತಿಲ್ಲ" ಎನ್ನುವುದಕ್ಕೆ ಒಂದು ಸುದ್ದಿಗೋಷ್ಠಿ. "ವರದಿಯಲ್ಲಿ ಎಸ್.ಎಂ. ಕೃಷ್ಣ ಅವರ ಹೆಸರಿಲ್ಲ" ಎಂದು ಹೇಳುವುದಕ್ಕೆ ಸುದ್ದಿಗೋಷ್ಠಿ ಹೀಗೆಲ್ಲ ಬ್ರೇಕಿಂಗ್ ನ್ಯೂಸ್ ಕೊಡುತ್ತಿದ್ದ ಸಂತೋಷ್ ಹೆಗ್ಡೆಯವರು ಮೌನವಾಗಿದ್ದಾರೆ.
ಅವರ ವಿಷಯ ಹಾಗಿರಲಿ, ಎಲೆಕ್ಟ್ರಾನಿಕ್ ಮಾಧ್ಯಮಗಳಂತೂ ಇದರ ಬಗ್ಗೆ ಚಕಾರವೆತ್ತುತ್ತಿಲ್ಲ. ಅಂದು 40 ವರ್ಷಗಳ ಸುದೀರ್ಘ ಹೋರಾಟದಿಂದ ಒಂದು ಸ್ಥಾನಮಾನಕ್ಕೆ ಬಂದ ಒಬ್ಬ ವ್ಯಕ್ತಿಗೆ ಕಳಂಕ ಹಚ್ಚುವಲ್ಲಿ ಇದ್ದ ಉತ್ಸಾಹ, ಇಂದು ಆ ವರದಿಯಲ್ಲೇ ಲೋಪವಿದೆ ಎಂಬ ಸುದ್ದಿ ಪ್ರಕಟವಾದಾಗ ಅದನ್ನು ದೃಢೀಕರಿಸುವುದೋ ಇಲ್ಲಾ, ನಿರಾಕರಿಸುವುದೋ ಮಾಡುವುದು ಒಂದು ಶಿಷ್ಟಾಚಾರವಲ್ಲವೇ? ದೇಶ ಇಂದು ನಿರ್ಣಾಯಕ ಹಂತದಲ್ಲಿರುವಾಗ ಇದು ಅತ್ಯಗತ್ಯ. ಏಕೆಂದರೆ ದೇಶದಲ್ಲಿರುವ ರಾಜಕಾರಣಿಗಳೆಲ್ಲಾ ಭ್ರಷ್ಟರೇ ಎಂದು ಹೇಳಿಕೊಂಡು ಅದರಿಂದಲೇ ರಾಜಕೀಯ ಅಸ್ತಿತ್ವ ಕಂಡುಕೊಂಡು ಭ್ರಷ್ಟರ ಬೆಂಬಲದಿಂದಲೇ ಅಧಿಕಾರ ಅನುಭವಿಸುತ್ತಿರುವವರ ಕೈಗೆ ವಿನಾಕಾರಣ ಒಂದು ಟೀಕಾಸ್ತ್ರ ಒದಗಿಸುವುದು ಎಷ್ಟು ಸರಿ?
ಅಂದು ಲೋಕಾಯುಕ್ತ ಕೊಟ್ಟ ಇದೇ ವರದಿಯನ್ನಿಟ್ಟುಕೊಂಡು ಅಹೋರಾತ್ರಿ ಯಡಿಯೂರಪ್ಪನವರನ್ನು, ಬಿಜೆಪಿಯನ್ನೂ ಟೀಕಿಸಿ ಅಪಹಾಸ್ಯ ಮಾಡುತ್ತಾ ತಮ್ಮ ಟಿ.ಆರ್.ಪಿ. ಏರಿಸಿಕೊಂಡ ಎಲೆಕ್ಟ್ರಾನಿಕ್ ಮಾಧ್ಯಮ ಇಂದು ಮೌನ ವಹಿಸಿರುವುದು ಸರಿಯೇ?
'ದೇಶಕ್ಕೆ ಒಂದು ಸದೃಢ ನಾಯಕತ್ವ ಬೇಕು. ಅದಕ್ಕೆ ನರೇಂದ್ರ ಮೋದಿಯವರನ್ನು ಪ್ರಧಾನಮಂತ್ರಿಯನ್ನಾಗಿ ಮಾಡಬೇಕು. ಅದಕ್ಕಾಗಿ ಕರ್ನಾಟಕದಿಂದ ಇಪ್ಪತ್ತಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲಿಸಿಕೊಡಬೇಕೆಂದು ನಾನು ಬಿಜೆಪಿಗೆ ಮತ್ತೆ ಮರಳಿ ಬರುತ್ತಿದ್ದೇನೆ' ಎಂದು ಹೇಳಿಕೊಂಡು ಯಡಿಯೂರಪ್ಪನವರು ಕೆಜೆಪಿಯನ್ನು ಬಿಜೆಪಿಯಲ್ಲಿ ವಿಲೀನಗೊಳಿಸಿದ್ದಾರೆ. ಇದರಿಂದ ಮಾಧ್ಯಮಗಳು ಬಿಜೆಪಿಯ ನೈತಿಕತೆಯನ್ನು ಪ್ರಶ್ನಿಸುತ್ತಿವೆ. ನರೇಂದ್ರ ಮೋದಿಯವರನ್ನು, ಬಿಜೆಪಿಯನ್ನು ಟೀಕಿಸುವುದೇ ಕಾಯಕ ಮಾಡಿಕೊಂಡಿರುವ ಕೆಲವು  ಮಾಧ್ಯಮದವರಂತೂ ಯಡಿಯೂರಪ್ಪನವರ ಆಗಮನವನ್ನು ಬಿಜೆಪಿಗೆ ಕಳಂಕ ಹಚ್ಚಲು ಒಂದು ಅಸ್ತ್ರವನ್ನಾಗಿ ಬಳಸುತ್ತಿದ್ದಾರೆ. ಇಂಥಾ ಸಂದರ್ಭದಲ್ಲಿ ಪತ್ರಿಕೆಯಲ್ಲಿ ಬಂದ ಒಂದು ಮಹತ್ತರ ಸುದ್ದಿಯನ್ನು ಯಾರೂ ಗಮನಿಸದೆ ಉಪೇಕ್ಷೆ ಮಾಡಿರುವುದು ಅಪರಾಧವೇ ಸೈ.
ರಾಜ್ಯ ಬಿಜೆಪಿ ನಾಯಕರು ಸೋಲಿನಿಂದ ಕಂಗೆಟ್ಟು ಪ್ರಜ್ಞಾಶೂನ್ಯ ಸ್ಥಿತಿಯಲ್ಲಿದ್ದಾರೋ ಅಥವಾ ಯಡಿಯೂರಪ್ಪನವರು ತಮ್ಮ ಪಕ್ಷಕ್ಕೆ ಬರುವ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲವಾದ್ದರಿಂದ ಈಗಲೇ ಅವರನ್ನು ಸಮರ್ಥಿಸಿಕೊಳ್ಳುವುದು ಬೇಡ ಎಂದು ಸುಮ್ಮನಿದ್ದಾರೋ ತಿಳಿಯುತ್ತಿಲ್ಲ. ಇನ್ನು ಕೆಜೆಪಿಯವರು ಯಡಿಯೂರಪ್ಪನವರ ಜೊತೆ ಬಂದು ಅಲ್ಲೂ ಇಲ್ಲ-ಇಲ್ಲೂ ಇಲ್ಲ ಎನ್ನುವಂತಾದೆವು. ಬಿಜೆಪಿಯಲ್ಲಿ ನಮಗೆ ಮೊದಲಿನಂತೆ ಗೌರವ ಸಿಗುತ್ತದೋ ಇಲ್ಲವೋ ಎಂಬ ಆತಂಕದಲ್ಲಿದ್ದು ಯಡಿಯೂರಪ್ಪನವರನ್ನು ಸಮರ್ಥನೆ ಮಾಡಿಕೊಳ್ಳುತ್ತಿಲ್ಲವೋ ಗೊತ್ತಿಲ್ಲ. ಒಟ್ಟಿನಲ್ಲಿ ಯಾವ ವರದಿ ಯಾವ ವ್ಯಕ್ತಿಯನ್ನೂ, ಯಾವ ಪಕ್ಷವನ್ನೂ ಕಳಂಕಿತರನ್ನಾಗಿಸಿ ಅಧಿಕಾರದಿಂದ ಇಳಿಸಿ ಅವರ ನೈತಿಕತೆಯ ಮೇಲೆ ಶಾಶ್ವತ ಕಪ್ಪು ಚುಕ್ಕೆ ಮೂಡುವಂತೆ ಮಾಡಿತೋ ಆ ವರದಿಯೇ ಸರಿಯಿಲ್ಲವೆಂದು ಸುದ್ದಿಯೊಂದು ಬಂದಾಗ ನಾಯಕರೆಲ್ಲರೂ ಅದರ ಬಗ್ಗೆ ಒಂದೂ ಮಾತಾಡದೆ ಸುಮ್ಮನಿರುವುದು ಕಾರ್ಯಕರ್ತರಿಗೆ ಅರ್ಥವಾಗದ ವಿಷಯ.
ಕಾಂಗ್ರೆಸ್ ಪಕ್ಷದಲ್ಲಿ ಹೀಗೇನಾದರೂ ಆಗಿದ್ದರೆ ಅದನ್ನು ಒಂದು ದೊಡ್ಡ ಆಂದೋಲನವನ್ನಾಗಿ ಮಾಡಿ ಸಂತೋಷ್ ಹೆಗ್ಡೆ ಅಂಥವರು ಮಾಧ್ಯಮದ ಕಟಕಟೆಗೆ ತಾವಾಗಿಯೇ ಬಂದು ಸಮಜಾಯಿಷಿ ನೀಡುವಂತೆ ಮಾಡುತ್ತಿದ್ದರು. ತಮ್ಮ ಮೇಲಿನ ಕಳಂಕವನ್ನು ನಿವಾರಿಸಿಕೊಳ್ಳುತ್ತಿದ್ದರು. ಅಂಥದ್ದರಲ್ಲಿ ಈಗ ಎಲ್ಲವೂ ಯಡಿಯೂರಪ್ಪನವರ ಪರವಾಗೇ ವಾಲುತ್ತಿರುವಾಗ, ನವೆಂಬರ್ 16, 2013ರ ಕನ್ನಡಪ್ರಭ ಪತ್ರಿಕೆಯಲ್ಲಿ "ಬಿಎಸ್‌ವೈ ಸರ್ಕಾರವೇ ವಾಸಿ" ಎಂದು ಯಡಿಯೂರಪ್ಪನವರ ಅಂದಿನ ಕಟುಟೀಕಾಕಾರರಾಗಿದ್ದ ರಾಜ್ಯಪಾಲ ಹಂಸರಾಜ ಭಾರದ್ವಾಜ್‌ರವರೇ ಹೇಳಿದರೆಂದು ವರದಿಯಾಗಿದ್ದರೂ ಕೂಗೆಬ್ಬಿಸಿ ತಮಗೆ ಅನುಕೂಲವಾಗುವಂತೆ ಹವಾ ರೂಪಿಸಿಕೊಳ್ಳದೇ ದಿವ್ಯಮೌನ ವಹಿಸಿರುವುದನ್ನು ನೋಡಿದರೆ ಬಿಜೆಪಿ ಸೋತಿದೆಯೋ ಅಥವಾ ಸತ್ತು ಹೋಗಿದೆಯೋ ಎಂಬ ಅನುಮಾನ ಮೂಡುತ್ತದೆ.
ಯಾವುದೋ ಒಂದು ಕಳಂಕದಿಂದ ಹೊರಬಂದು ಬಿಟ್ಟರೆ ಅವರು ಪರಿಶುದ್ಧರಾಗಿ ಬಿಡುತ್ತಾರೆಯೇ? ಎಷ್ಟೊಂದು ಕೇಸ್‌ಗಳಿವೆ ಅವರ ಮೇಲೆ? ಎಂಬ ವಾದ ಕೇಳಿ ಬರುವುದು ಸಹಜ. ಆದರೆ ಒಂದು ಅಪವಾದದಿಂದ ಹೊರಬಂದಾಗ ಅದನ್ನು ಜನರಿಗೆ ತಿಳಿಯಪಡಿಸಬೇಕು ತಾನೇ? ಮುಂದೆ ಹೀಗೇ ಎಲ್ಲದರಿಂದಲೂ ಹೊರಬರುತ್ತಾರೆ ಎಂಬ ಭರವಸೆ ಮೂಡಿಸಬೇಕು ತಾನೇ?
ಯಾವ ಎಂಎಲ್‌ಎ ಆಗಲಿ, ಎಂ.ಪಿ. ಆಗಲಿ, ಮಿನಿಸ್ಟರ್ ಆಗಲಿ ತಮ್ಮ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಸಲುವಾಗಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವುದು, ದೊಡ್ಡ ದೊಡ್ಡ ಆಸ್ಪತ್ರೆಗಳನ್ನು ಕಟ್ಟಿಸುವುದು, ಅದಕ್ಕಾಗಿ ಟ್ರಸ್ಟ್‌ಗಳನ್ನು ಮಾಡುವುದು, ಅಧಿಕಾರದಲ್ಲಿದ್ದಾಗ ಅವುಗಳಿಗೆ ದೇಣಿಗೆ ಹರಿದು ಬರುವಂತೆ ಮಾಡುವುದು ಮೊದಲಿನಿಂದಲೂ ನಡೆದು ಬಂದ ಸಂಪ್ರದಾಯವೇ. ಆಗೆಲ್ಲಾ ಹಾಗೆ ಮಾಡಿದವರನ್ನು ತಮ್ಮ ಊರಿಗೆ ಕಾಲೇಜು, ಆಸ್ಪತ್ರೆ ತಂದ ಮಹಾನುಭಾವ ಎಂದು ಗೌರವಿಸುತ್ತಿದ್ದರು. ಅದೇ ಕೆಲಸ ಯಡಿಯೂರಪ್ಪ ಮಾಡಿದಾಗ ಮಾತ್ರ ಭ್ರಷ್ಟಾಚಾರವಾಗಿ ಕಾಣಿಸುವುದು ಯಡಿಯೂರಪ್ಪನವರ ದುರಾದೃಷ್ಟವೋ, ವಿಶ್ಲೇಷಿಸುವವರ ವಕ್ರದೃಷ್ಟಿಯೋ ತಿಳಿಯದಾಗಿದೆ. ಯಾರೂ ಮಾಡದ ಡಿ.ನೋಟಿಫಿಕೇಷನ್ ಯಡಿಯೂರಪ್ಪ ಮಾಡಿಲ್ಲ. ಯಾರೂ ಹಂಚದ ಜಿ ಕ್ಯಾಟಗರಿ ಸೈಟ್ ಯಡಿಯೂರಪ್ಪ ಹಂಚಿಲ್ಲ.
ಅವರು ಬಿಜೆಪಿಗೆ ಸೇರಿದವರೆಂತಲೋ, ಬಿಜೆಪಿಯವರು ಯಾವುದಾದರೂ ಒಂದು ರಾಜ್ಯದಲ್ಲಿ ಒಮ್ಮೆ ಅಧಿಕಾರ ಹಿಡಿದರೆಂದರೆ ಗುಜರಾತ್, ಮಧ್ಯಪ್ರದೇಶ, ಛತ್ತೀಸ್‌ಗಢದಂತೆ ಶಾಶ್ವತವಾಗಿ ಕಚ್ಚಿಕೊಂಡು ಬಿಡುತ್ತಾರೆ, ಅದಕ್ಕೆ ಅವರನ್ನು ನೆಲೆಯೂರಲೇ ಬಿಡಬಾರದು ಎಂದು ಯಾರಾದರೂ ಸೇರಿ ಷಡ್ಯಂತ್ರ ರೂಪಿಸಿದ್ದಾರೋ? ಒಟ್ಟಿನಲ್ಲಿ ಯಡಿಯೂರಪ್ಪವರನ್ನು ಈ ರಾಷ್ಟ್ರ ಕಂಡ ಅತ್ಯಂತ ಭ್ರಷ್ಟ ರಾಜಕಾರಿಣಿ ಎಂಬಂತೆ ಚಿತ್ರಿಸಲಾಗುತ್ತಿದೆ. ಅವರನ್ನು ಎದುರಿಗೆ ಕೂರಿಸಿಕೊಂಡು ಅವರ ಅರ್ಧದಷ್ಟೂ ವಯಸ್ಸಾಗಿರದ ಯಾವ ಅನುಭವವೂ ಇಲ್ಲ ಟಿ.ವಿ. ಆ್ಯಂಕರ್‌ಗಳು ಅವರ ವಯಸ್ಸಿಗೆ, ಅವರ ಅನುಭವಕ್ಕೆ, ಅವರ ನಲವತ್ತು ವರ್ಷಗಳ ಸುದೀರ್ಘ ಹೋರಾಟಕ್ಕೆ ಕಿಂಚಿತ್ತೂ ಗೌರವ ಕೊಡದೆ ಜೈಲಿಗೆ ಹೋಗಿ ಬಂದವ ಎಂದು ಹೀಯಾಳಿಸಿ ಮಜ ತೆಗೆದುಕೊಳ್ಳುವುದು, ಲೋಕಾಯುಕ್ತ ವರದಿಯಲ್ಲಿ ಅವರ ಹೆಸರು ತಪ್ಪಾಗಿ ಸೇರಿಸಲಾಗಿದೆ ಎಂಬ ಸುದ್ದಿ ಮುದ್ರಣ ಮಾಧ್ಯಮಗಳಲ್ಲಿ ಬಂದಿದ್ದರೂ ಅದನ್ನು ದೃಶ್ಯ ಮಾಧ್ಯಮಗಳಲ್ಲಿ ಸುದ್ದಿ ಮಾಡದೆ ಅವರನ್ನು ಅಪರಾಧಿ ಸ್ಥಾನದಲ್ಲೇ ಕೂರಿಸಿರುವುದು ಇವನ್ನೆಲ್ಲ ನೋಡಿದಾಗ ಮನಸ್ಸಿನಲ್ಲಿ ಮೂಡುವ ಉದ್ಗಾರ... 'ಯಡಿಯೂರಪ್ಪ ....ಪಾಪ!'.



-ಫಣಿ ರಾಮಚಂದ್ರ, ಚಿತ್ರ ನಿರ್ದೇಶಕರು
paniramachandra.hs@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.