ದೇಶದ ಹಲವಾರು ಪ್ರಾದೇಶಿಕ ಶಕ್ತಿಗಳು ಕಳೆದ ಐದು ವರ್ಷಗಳಲ್ಲಿ ರಾಜಕೀಯವಾಗಿ ಬದಲಾಗಿರುವುದು ನಿಜ. ಅದೇ ರೀತಿ ರಾಷ್ಟ್ರೀಯ ಪಕ್ಷಗಳಲ್ಲೂ ಬದಲಾವಣೆ ಕಂಡು ಬಂದಿದೆ. ಈಗಾಗಲೇ ಪ್ರಕಟವಾಗಿರುವ ಬದಲಾವಣೆಗಳ ಜಾಡು ಹಿಡಿದು ಹೊರಟರೆ, ರಾಷ್ಟ್ರೀಯ ರಾಜಕಾರಣದಲ್ಲಿ ಕರ್ನಾಟಕದ ಪಾತ್ರ, ಲೋಕಸಭೆ ಚುನಾವಣೆಯಲ್ಲಿ ಇತರ ಕೆಲವು ವಿಷಯಗಳ ಜತೆ ನಿರ್ಣಾಯಕ ಪಾತ್ರವೇ ಆಗಬಹುದು. ರಾಜ್ಯದಲ್ಲಿ ವಿಧಾನ ಸಭೆ ಚುನಾವಣೆಯ ಫಲಿತಾಂಶದ ಲೆಕ್ಕಾಚಾರವನ್ನೇ ಹಿಡಿದು ಹೊರಟರೆ, ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಹತ್ತೊಂಬತ್ತು ಸ್ಥಾನಗಳಲ್ಲಿ ಗೆದ್ದಿದ್ದ ಬಿಜೆಪಿ, ಈ ಬಾರಿ ಒಂದೆರಡು ಸ್ಥಾನಗಳಿಗೇ ಸೀಮಿತವಾಗ ಬೇಕಾಗ ಬಹುದು. ಇದುವರೆಗೂ ಕಾಂಗ್ರೆಸ್ ಹಾಗೇ ನಂಬಿಕೊಂಡಿತ್ತು. ರಾಹುಲ ಗಾಂಧಿ ಅವರ ಲೆಕ್ಕದಲ್ಲಿ ಈಗಾಗಲೇ ಕರ್ನಾಟಕದ ಇಪ್ಪತ್ತೈದು ಸ್ಥಾನಗಳು ಅವರ ಬುಟ್ಟಿಗೆ ಬಿದ್ದಿವೆ. ಅಥವಾ ಅವರ ಪರವಾಗಿರುವ ಜನ ಹಾಗೆಂದೇ ಭಾವಿಸಿದ್ದಾರೆ.
ಆ ವಿಶ್ವಾಸಕ್ಕೆ ಇದ್ದ ಬುನಾದಿ ಯಡಿಯೂರಪ್ಪ ಅವರು ಬಿಜೆಪಿ ನಾಯಕರ ಮೇಲಿದ್ದ (ಈಗಲೂ ಇರಬಹುದಾದ) ದ್ವೇಷವನ್ನು ಅದರ ತರ್ಕಬದ್ಧ ಅಂತ್ಯಕ್ಕೆ ಮುಟ್ಟಿಸುತ್ತಾರೆ ಎನ್ನುವ ನಂಬಿಕೆ. ಆ ವಲಯದಲ್ಲೇ ಇದ್ದ ಇನ್ನೊಂದು ನಂಬಿಕೆ ಎಂದರೆ, ಒಂದು ವೇಳೆ ಯಡಿಯೂರಪ್ಪ ಬಿಜೆಪಿ ಸೇರಿದರೂ, ಅವರು ವಿಧಿಸುವ ಷರತ್ತುಗಳು ಬಿಜೆಪಿಯನ್ನು ಸೋಲಿಸುತ್ತವೆ ಎನ್ನುವುದು. ಈಗ ಯಡಿಯೂರಪ್ಪ ಅವರ ಬಿಜೆಪಿ ಪ್ರವೇಶ ನಂಬಲಿಕ್ಕೇ ಸಾಧ್ಯವಿಲ್ಲದ ರೀತಿಯಲ್ಲಿ ಸುಗಮವಾಗಿ, ಯಾವ 'ಕಿರಿಕ್ಕೂ' ಇಲ್ಲದೇ ನಡೆದಿದ್ದು, (ನಿರ್ಧಾರ ಆಗದೆ ಉಳಿದಿದ್ದು ಸದ್ಯದಲ್ಲೇ ಆಗುತ್ತದೆ) ಸಾಲದ್ದಕ್ಕೆ ಯಡಿಯೂರಪ್ಪ ಹಾಗೂ ಅವರ ಕಟ್ಟಾ ಬೆಂಬಲಿಗರು ಯಾವ ಷರತ್ತುಗಳನ್ನೂ ಪ್ರಕಟಿಸಿಲ್ಲ. ಅಂತರಂಗದಲ್ಲಿ ಕೆಲವು ಸ್ಥಾನಮಾನಕ್ಕೆ ಸಂಬಂಧಿಸಿದಂತೆ, ಅಘೋಷಿತ ಒಡಂಬಡಿಕೆ ಆಗಿರ ಬಹುದು. ಆದರೆ ತಿಸ್ರಗಳು ವರದಿಯಾಗಿಲ್ಲ. ಅಂತಹ ಲಕ್ಷಣವೂ ಕಂಡು ಬಂದಿಲ್ಲ. ಯಡಿಯೂರಪ್ಪ ಮತ್ತೆ ಎಂದಿನಂತೆ, ಸಿದ್ದಗಂಗಾ ಮಠಕ್ಕೆ ಹೋಗಿ ಸಂತರ ಆಶೀರ್ವಾದ ಪಡೆದು ಬಂದಿದ್ದಾರೆ. ಅವರ ಪಾಳಯದಲ್ಲಿ ಯಾವ ಬಿರುಕೂ ಕಂಡು ಬಂದಿಲ್ಲ. (ಇಬ್ಬರು ಶಾಸಕರು ವಿಲೀನಕ್ಕೆ ಒಪ್ಪಿಲ್ಲ, ಅವರು ಹಿಂದೆಯೂ ಆ ಪಾಳಯದಲ್ಲಿ ಇರಲಿಲ್ಲ). ಈಗ ಯಡಿಯೂರಪ್ಪ ಅವರ ತಂತ್ರವೇನು ? ಅವರ ಮೇಲಿನ ಆರೋಪಗಳು, ಕೆಲವು ಕೇಸುಗಳು ಇನ್ನೂ ಜೀವಂತವಾಗಿವೆ. ಆದ್ದರಿಂದ ಅವರು ಈಗ ಅನಗತ್ಯವಾಗಿ ತಮ್ಮ ಪರಾಕ್ರಮದ ಪ್ರದರ್ಶನಕ್ಕೆ ಹೋಗುವಂತಿಲ್ಲ. ಹಳೆಯ ಗಾಯಗಳನ್ನು ಕೆದಕುವಂತಿಲ್ಲ. ಅವರೂ ವಿಧಾನ ಸಭೆ ಚುನಾವಣೆ ಫಲಿತಾಂಶದಿಂದ ಹಣ್ಣಾಗಿಲ್ಲವೇ? ಆದರೂ ಅಲ್ಲಿ-ಇಲ್ಲಿ ಕೊಂಕು ಮಾತು ಕೇಳಿ ಬಂದಿದೆ. ಲೋಕಸಭೆ ಚುನಾವಣೆಯನ್ನು ಏಪ್ರಿಲ್-ಮೇ ನಲ್ಲಿ ನಡೆಸುವ ವಿಚಾರ ಸ್ಪಷ್ಟವಾದ ಅನಂತರ ಬಿಜೆಪಿ ಬಳಗದಲ್ಲಿ ಎಲ್ಲವೂ ಚುರುಕಾಗಿದೆ. ಯಡಿಯೂರಪ್ಪ ಅವರಿಗೂ ದೆಹಲಿಯಲ್ಲಿ ರಾಜಕೀಯವಾಗಿ ಅರುಣ್ ಜೈಟ್ಲಿಯಂತಹ ಪ್ರಬಲ ವಕ್ತಾರರು ಸಿಕ್ಕಿದ್ದಾರೆ.
ಪ್ರದೇಶ ಕಾಂಗ್ರೆಸ್ ಅವಾಂತರ: ಲೋಕಸಭೆ ಚುನಾವಣೆಗೆ ಮುನ್ನ ಪ್ರದೇಶ ಕಾಂಗ್ರೆಸ್‌ನಲ್ಲಿ ನಡೆದಿರುವುದಾದರೂ ಏನು ? ಪ್ರಧಾನ ಕಾರ್ಯದರ್ಶಿ ದಿಗ್ವಿಜಯ ಸಿಂಗ್ ಅವರ ಸಮ್ಮುಖದಲ್ಲೇ ಪಕ್ಷ ಹಾಗೂ ಸರ್ಕಾರದ ನಡುವಣ ಸಮನ್ವಯ ಸಮಿತಿ ನಡೆಯಿತು. ಡಿ.ಕೆ.ಶಿವಕುಮಾರ್ - ರೋಷನ್ ಬೇಗ್ ಅವರು ಮಂತ್ರಿಮಂಡಲವನ್ನು ಸೇರಿದ್ದೂ ಆಯಿತು. ಅವರಿಬ್ಬರೂ ವಾರಗಟ್ಟಲೆ ದೆಹಲಿಯಲ್ಲಿ ಲಾಬಿ ಮಾಡಿ, ಬೆದರಿಕೆ ಹಾಕಿ ಮಂತ್ರಿ ಪದವಿಯನ್ನು ಪಡೆದಿದ್ದಾರೆ. ಅಂದರೆ ಅವರು ತಮ್ಮ ತತ್‌ಕ್ಷಣದ ಗುರಿಯನ್ನು ಸಾಧಿಸಿಕೊಂಡಿದ್ದಾರೆ. ಮುಂದಿನ ಕೆಲಸಕ್ಕೆ ಇನ್ನೂ ಸಮಯವಿದೆ. ಅದರ ಸ್ವರೂಪ ಗೊತ್ತಾಗುವುದು ತಿಂಗಳ ಕೊನೆಯಲ್ಲಿ ವಿಧಾನ ಮಂಡಲದ ಅಧಿವೇಶನ ಸಮಾವೇಶಗೊಂಡಾಗಲೇ. ರಾಜಕೀಯವಾಗಿ ಶಿವಕುಮಾರ್ - ಬೇಗ್ ಮಂತ್ರಿಗಳಾಗಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಷ್ಠೆ ಮುಕ್ಕಾದಂತೆಯೇ ಆಗಿದೆ. ಹಾಗೇನಿಲ್ಲ, ವರಿಷ್ಠರ ಸಲಹೆಯಂತೆ, ಅವರನ್ನು ನೇಮಿಸಿದ್ದು ನಾನೇ ಎಂದು ಸಿದ್ದರಾಮಯ್ಯ ಹೇಳಿಕೊಂಡರೆ ಅದಕ್ಕೆ ಆರು ತಿಂಗಳು ಕಾದಿದ್ದೇಕೆ? ಈಅವಧಿಯಲ್ಲಿ ಆಗಿರುವ ಬದಲಾವಣೆಯಾದರೂ ಏನು ?
ಆ ಪ್ರಶ್ನೆಗೆ ಬೇಕಾದಷ್ಟು ಉತ್ತರಗಳಿರಬಹುದು. ಆದರೆ ನಿಜವಾದ ಉತ್ತರ ಒಂದೇ ಒಂದು ; ವರಿಷ್ಠರಿಗೆ ಅವರಿಬ್ಬರೂ ಮಂತ್ರಿಗಳಾಗಬೇಕಾಗಿತ್ತು. ಅಷ್ಟೇ.
ಹೆಚ್ಚು ಕಡಿಮೆ ಇದೇ ಸಮಯದಲ್ಲೇ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ॥ ಪರಮೇಶ್ವರ ಅವರು ಪಕ್ಷದ ಒಂದು ಸಭೆಯಲ್ಲಿ ಈಗಲೂ ಸಮಾಜದಲ್ಲಿ, ಕಾಂಗ್ರೆಸ್ಸಿನಲ್ಲಿ, ಪರಿಶಿಷ್ಟ ಜಾತಿ ಪಂಗಡಗಳಿಗೆ ಸೇರಿದವರು. ಓಟು ಬ್ಯಾಂಕ್‌ಗಳ ಸ್ಥಿತಿಯಿಂದ ವೈಯುಕ್ತಿಕ ಪ್ರತಿಭೆ, ಶಕ್ತಿ ಹಾಗೂ ಪ್ರಾತಿನಿಧಿಕ ಸ್ಪರೂಪವನ್ನು ಪಡೆದಿಲ್ಲ. ಕಾಂಗ್ರೆಸ್ಸೂ ಇದಕ್ಕೆ ಹೊರತಲ್ಲ. ಸ್ಥಾನಮಾನದ ಪ್ರಶ್ನೆ ಬಂದಾಗ, ಎಡ-ಬಲದ ಮಾತು ಕೇಳಿ ಬರದೇ ಇರುವುದಿಲ್ಲ ಎಂದೆಲ್ಲ ಹೇಳಿದಾಗ ಅವರ ಮಾತಿನ ಹಿಂದಿರುವ ನೋವು ಹಾಗೂ ಅಪಮಾನದ ಪ್ರಜ್ಞೆಯ ಅರಿವು ಯಾರಿಗಾದರೂ ಆಗಲೇ ಬೇಕು. ಅದಕ್ಕೂ ಸಿದ್ದರಾಮಯ್ಯ ಅವರದ್ದು ಒಂದೇ ಮಾತಿನ ಪ್ರತಿಕ್ರಿಯೆ : ವರಿಷ್ಠರು ಹೇಳಿದರೆ ಪರಮೇಶ್ವರ ಅವರನ್ನು ಉಪಮುಖ್ಯಮಂತ್ರಿ ಅಥವಾ ಮಂತ್ರಿ ಮಾಡಲಿಕ್ಕೆ ನನ್ನದೇನೂ ಅಭ್ಯಂತರವಿಲ್ಲ. ಆರು ತಿಂಗಳಲ್ಲಿ ಆಗಿರುವ ಬದಲಾವಣೆ ಇದು. ಕಾಂಗ್ರೆಸ್ಸಿನಲ್ಲಿರುವ ಹಿರಿಯರು, ವರಿಷ್ಠರು, ಪರಮೇಶ್ವರ ಅವರ ಆಕ್ರೋಶ, ಅದರ ಹಿಂದಿರುವ ನೋವನ್ನು ಇನ್ನೂ ಬಹುಕಾಲ ಕಡೆಗಾಣಿಸುವುದು ಸಾಧ್ಯವಿಲ್ಲ. ಕಳೆದ ವಾರದ ಈ ಎರಡು ಬೆಳವಣಿಗೆಗಳು, ಸಿದ್ದರಾಮಯ್ಯ ಅವರ ಪ್ರಶ್ನಾತೀತ ನಾಯಕತ್ವದ ಕಲ್ಪನೆಯನ್ನು ಮಸಕುಮಾಡಿರುವುದು ನಿಜ. ದಿಗ್ವಿಜಯ ಸಿಂಗ್ ಅವರೇ ಸಿದ್ದರಾಮಯ್ಯ ಅವರಿಗೆ ಏಕಪಕ್ಷೀಯ, ವೈಯುಕ್ತಿಕ ನಿರ್ಧಾರಗಳು ಬೇಡ ಎಂದಿದ್ದಾರಂತೆ. ಸಿದ್ದರಾಮಯ್ಯ ಅವರು ಈಗ ರಾಜಕೀಯವಾಗಿ ಪ್ರಬಲವಾದ, ಸಾಮಾಜಿಕವಾಗಿ ಮುಂದುವರಿದಿರುವ ದೊಡ್ಡ ಜನವರ್ಗಗಳ ಸಮುದಾಯಗಳ ಶ್ರೀಮಂತಿಕೆಯನ್ನು ಗುರ್ತಿಸಿ, ಒಂದು ರೀತಿಯ ಜಾತಿಗಳ ಸಮನ್ವಯ ಹಾಗೂ ಸಾಮಾಜಿಕ ಒಕ್ಕೂಟದ ರಚನೆಗೆ ಮುಂದಾಗಲೇಬೇಕು. ಇಲ್ಲದಿದ್ದರೆ ಅವರು ಏಕಾಂಗಿಯಾಗಿ, ದುರ್ಬಲರಾಗುತ್ತಾರೆ. ಈಗಿನ ದಿಗ್ವಿಜಯಸಿಂಗ್ ಭೇಟಿಯಿಂದ ರಾಜ್ಯದ ಕಾಂಗ್ರೆಸ್ಸಿಗೆ ಒಳ್ಳೆಯದಾಗಿಲ್ಲ. ಹಿರಿಯ ಮಂತ್ರಿಗಳಿಗೆ ಎಚ್ಚರಿಕೆ ನೀಡುವುದು, ಮುಖ್ಯಮಂತ್ರಿಗೂ ಬಹಿರಂಗವಾಗಿ ಪಾಠ ಹೇಳುವುದು ಕಾಂಗ್ರೆಸ್ಸಿನ ಸಂಸ್ಕೃತಿಯಲ್ಲ.
ಜಾತ್ಯತೀತ ಜನತಾದಳ: ಜಾತ್ಯತೀತ ಜನತಾದಳದಲ್ಲಿನ ರಾಜಕೀಯ ಚಟುವಟಿಕೆ ಸದ್ಯಕ್ಕೆ ಪಕ್ಷದ ಅಗ್ರೇಸರ ಮಾಜಿ ಪ್ರಧಾನಿ ದೇವೇಗೌಡರ ಚಟುವಟಿಕೆಗೇ ಸೀಮಿತವಾಗಿರುವಂತೆ ಕಂಡು ಬರುತ್ತಿದೆ. ಯಾಕೋ ಪಕ್ಷದಲ್ಲೂ ಉತ್ಸಾಹ ಕಡಿಮೆಯಾದಂತಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಆತ್ಮೀಯ ಸಂಗಾತಿಗಳ ಜತೆ ಬೇಷರತ್ ಬಿಜೆಪಿಗೆ ಪ್ರವೇಶ ಪಡೆದ ಅನಂತರ, ಜಾತ್ಯತೀತ ಜನತಾ ದಳ ವಿಧಾನ ಸಭೆಯಲ್ಲಿ ಅಲ್ಪ ಕಾಲಾವಧಿಗೆ ಗಳಿಸಿದ್ದ ಪ್ರಧಾನ ಪ್ರತಿಪಕ್ಷದ ಸ್ಥಾನವನ್ನು ಬಿಜೆಪಿಗೆ ಬಿಟ್ಟು ಕೊಡಬೇಕು.
ಮಾಜಿ ಪ್ರಧಾನಿ ದೇವೇಗೌಡರು, ಇತ್ತೀಚೆಗೆ ಮುಸ್ಲಿಮ್ ಬೌದ್ಧಿಕ ನಾಯಕರ ಸಮಾವೇಶವನ್ನು ನಡೆಸಿ, ಅಲ್ಪ ಸಂಖ್ಯಾತರ ಸ್ಥಾನ-ಮಾನ ಕುರಿತಂತೆ ಪಕ್ಷದ ನಿಲವನ್ನು ವಿವರಿಸಿದ್ದಾಗಿದೆ. ಇದರಿಂದ ನಾಯಕತ್ವದ ಬಯಕೆ ಇರುವ ಹಲವು ಬೌದ್ಧಿಕ ವ್ಯಕ್ತಿಗಳು ಪಕ್ಷದ ಸಮೀಪಕ್ಕೆ ಬಂದರೂ ಬರಬಹುದು. ಆದರೆ ಮುಸ್ಲಿಮ್ ಸಮುದಾಯಗಳನ್ನು ಆಕರ್ಷಿಸುವುದಕ್ಕೆ ಅಷ್ಟೇ ಸಾಲದು. ಅದಕ್ಕೆ ಬೇರೆ ತಂತ್ರಗಳೂ ಬೇಕು. ಈಗ ಪಕ್ಷದಲ್ಲಿ ವೈಯಕ್ತಿಕವಾಗಿ ಪ್ರಭಾವಿಯಾಗಿರುವ ಶಾಸಕರು ಪಕ್ಷದಿಂದ ದೂರ ಸರಿಯುತ್ತಿರುವಂತಿದೆ. ಅಲ್ಲಿಗೆ ಜಾತ್ಯತೀತ ಜನತಾದಳದ ಬೆಂಬಲದ ಬುನಾದಿ ಹಿಂದಿನಂತೆಯೇ ಹಳೆಯ ಮೈಸೂರಿನ ಒಂದು ಭಾಗದ ಪ್ರಬಲ ಜನಾಂಗಕ್ಕೇ ಸೀಮಿತ ಎಂದಾಗಬಹುದು. ಈಗಲೂ ಜಾತ್ಯತೀತ ಜನತಾದಳ ಜನರ ಮುಂದೆ ಪ್ರಧಾನವಾಗಿ ಪ್ರಸ್ತಾಪಿಸುತ್ತಿರುವ ವಿಷಯಗಳಾದರೂ ಯಾವುವು? ಅದೇ ನಂದಿ ರಸ್ತೆಯ (ಅಶೋಕ್ ಖೇಣಿ) ಭೂ ಸ್ವಾಧೀನದ ವಿಚಾರ, ಆರಿಸಿದ ಭೂ ಹಗರಣಗಳು ಹಾಗೂ ರೈತರ ಸಮಸ್ಯೆಗಳೇ.
ಇದೆಲ್ಲವೂ ಪ್ರಮುಖವಾದ ವಿಷಯಗಳೇ. ಆದರೆ ಅದಕ್ಕೆ ಸರ್ವಜನವರ್ಗಗಳನ್ನು ಒಳಗೊಳ್ಳುವ ರೀತಿಯಲ್ಲಿ ಆಸಕ್ತಿಯನ್ನು ಕೆರಳಿಸುವ ಶಕ್ತಿ ಇಲ್ಲ. ಲೋಕಸೇವಾ ಆಯೋಗದ ಅವ್ಯವಹಾರಗಳು, ವಿಶ್ವವಿದ್ಯಾಲಯಗಳಲ್ಲಿ ಕಂಡು ಬಂದಿರುವ ಅವಾಂತರಕಾರಿ ಪರಿಸ್ಥಿತಿ, ಅನ್ನಭಾಗ್ಯ ಯೋಜನೆ, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗಳ ಅವ್ಯವಹಾರಗಳನ್ನು ಕುರಿತು ಜೆಡಿಎಸ್‌ನ ಮೌನವನ್ನು ಜನ ಗಮನಿಸದೇ ಹೋದರೂ, ಅವರ ಅಭಿಪ್ರಾಯವನ್ನು ರೂಪಿಸುವ ವ್ಯಕ್ತಿಗಳು ಗಮನಿಸುತ್ತಾರೆ. ಜಾತ್ಯತೀತ ಜನತಾದಳ (ಸದ್ಯಕ್ಕೆ ಈಗಿನ ಲೋಕಸಭೆಯಲ್ಲಿ ಇರುವುದು ದೇವೇಗೌಡರು ಮಾತ್ರ) ರಾಜ್ಯದಲ್ಲಿ ಎಷ್ಟು ಕ್ಷೇತ್ರಗಳಲ್ಲಿ ನಿಜವಾದ ಸ್ಪರ್ಧೆಯನ್ನು ಒಡ್ಡಬಹುದು? ಹಾಸನ ಜಿಲ್ಲೆ, ಬೆಂಗಳೂರು- ಮೈಸೂರು ಹೆದ್ದಾರಿಯ ಅಕ್ಕಪಕ್ಕದ ಕ್ಷೇತ್ರಗಳು, ತುಮಕೂರು, ಚಿಕ್ಕಬಳ್ಳಾಪುರ ಬಿಟ್ಟು ಬೇರೆ ಕಡೆ ಹೆಚ್ಚಿನ ಅವಕಾಶ ಪಡೆಯುವಂತಹ ಯಾವ ಕೆಲಸವನ್ನೂ ಈಚೆಗೆ ಪಕ್ಷ ಮಾಡಿಲ್ಲ. ರಾಷ್ಟ್ರೀಯ ಮಟ್ಟದಲ್ಲಿ ಮೂರನೆಯ ರಂಗದ ರಾಜಕೀಯಕ್ಕೆ ಚಾಲನೆ ಕೊಡಲು ದೇವೇಗೌಡರಿಗೆ ವೈಯಕ್ತಿಕ ಪ್ರತಿಷ್ಠೆಯ ಜತೆ ಇನ್ನಷ್ಟು ಎಂ.ಪಿ.ಗಳ ಶಕ್ತಿ ಬೇಕು. ಎಲ್ಲಿಂದ ಬರ್ತಾರೆ ಆ ಎಂ.ಪಿ.ಗಳು? ಇಂತಹ ಪ್ರಶ್ನೆಗಳಿಗೆ ಉತ್ತರ ನೀಡಲು ಇನ್ನೂ ಸಮಯವಿದೆ.
ಕಿಡಿಗೇಡಿತನ: ಸಚಿವ ಆಂಜನೇಯ ಅವರು, ತಮ್ಮ ದರ್ಶನಕ್ಕೆ ವಿಪರೀತ ಜನ ಬರುವುದರಿಂದ, ವಿಧಾನ ಸೌಧದ ಒಂದು ಕೊಠಡಿಯ ಗೋಡೆಯನ್ನೇ ಒಡಿಸಿ, ತಮ್ಮ ಕೊಠಡಿಯನ್ನು ಸಭಾಗೃಹವಾಗಿ ಪರಿವರ್ತಿಸಲು ಹೊರಟಿರುವುದು ಯಾವ ದೃಷ್ಟಿಯಿಂದ ನೋಡಿದರೂ, ಆಳುವ ಪಕ್ಷಕ್ಕೆ, ಮಂತ್ರಿ ಮಂಡಲಕ್ಕೆ ಮರ್ಯಾದೆಯ ತಂದುಕೊಡುವ ವಿಚಾರ ಅಲ್ಲ. ದೇಶದಲ್ಲಿ ಆಮ್ ಆದ್ಮಿಯ ಸರಳ ಜೀವನದ ಗಾಳಿ ಬೀಸುತ್ತಿರುವ ಕಾಲದಲ್ಲಿ ಸಚಿವರ ಕಾರ್ಯಾಲಯವನ್ನೇ ಸಭಾಂಗಣವಾಗಿ ಪರಿವರ್ತಿಸುವ (ಆದೇಶಗಳು, ನಿಯಮಗಳು, ಸಂಪ್ರದಾಯದ ಪಾಲನೆ ಬೇರೆ ವಿಚಾರ) ಮನೋಸ್ಥಿತಿಯನ್ನು ಯಾವ ರೀತಿ ವರ್ಣಿಸಬೇಕೋ ಗೊತ್ತಾಗುತ್ತಿಲ್ಲ. ಇದು ಮುಖ್ಯಮಂತ್ರಿಯ ಅಧಿಕಾರವನ್ನೇ ಪ್ರಶ್ನಿಸುವಂತಹ ಕೆಲಸ. ಯಾವ ದೃಷ್ಟಿಯಿಂದಲೂ ಸಮರ್ಥನೀಯವಲ್ಲ. ಆದರೆ ತಿದ್ದಿಕೊಳ್ಳುವುದು ಹೇಗೆ? ತಿದ್ದುವವರು ಯಾರು?
- ಸತ್ಯ
anisikeprabha@gmail.com