ಅಂಕಣಗಳು

ವರಮಾನ ತೆರಿಗೆ ರದ್ದತಿ ವ್ಯಾವಹಾರಿಕವಾಗಿ ಸಾಧ್ಯವೇ?

ವರಮಾನ ತೆರಿಗೆ ರದ್ದತಿ ವ್ಯಾವಹಾರಿಕವಾಗಿ ಸಾಧ್ಯವೇ?
Published On :

ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು ನಾನಾ ರೀತಿಯ ಕಸರತ್ತುಗಳನ್ನು ಮಾಡುತ್ತಿರುವುದು ಹೊಸದೇನಲ್ಲ. ಆಡಳಿತ ಪಕ್ಷವಂತೂ ಸ್ವರ್ಗವನ್ನೇ ಧರೆಗಿಳಿಸಲು ಅನುವಾಗುವಂತೆ ಇನ್ನು ಉಳಿದಿರುವ ಸ್ವಲ್ಪ ಸಮಯದಲ್ಲೇ ಎಲ್ಲಾ ರೀತಿಯ ವಿಧೇಯಕಗಳನ್ನೂ ಜಾರಿಗೆ ತಂದು ಬಿಡುವುದಾಗಿ ಹೇಳುತ್ತಿದೆ.(ಕಳೆದ ನಾಲ್ಕುವರೆ ವರ್ಷದಲ್ಲಿ ಏನು ಮಾಡುತ್ತಿದ್ದರು ಎಂಬುದು ಉತ್ತರಿಸಲಾಗದ ಪ್ರಶ್ನೆ).
ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಏನೇನು ಸೇರಿಸಬೇಕೆಂಬುದನ್ನು ನಿರ್ಧರಿಸಲು ಸಾರ್ವಜನಿಕರಿಂದ ಸಲಹೆ ಸೂಚನೆಗಳನ್ನು ಸಾಮಾಜಿಕ ತಾಣಗಳ ಮೂಲಕ ಆಹ್ವಾನಿಸಿವೆ. ಮುಖ್ಯ ವಿರೋಧ ಪಕ್ಷ ಬಿಜೆಪಿಯೂ ಈ ಕೆಲಸದಲ್ಲಿ ತೊಡಗಿದ್ದು, ಅದರ ಬೆಂಬಲಿಗರಲ್ಲಿ ಅದರಲ್ಲೂ ಮುಖ್ಯವಾಗಿ ಮಧ್ಯಮ ವರ್ಗದ ವೇತನದಾರರಲ್ಲಿ ಸಂಚಲನ ಉಂಟುಮಾಡಿರುವ ಅಂಶ- ಆ ಪಕ್ಷ, ತಾನು ಅಧಿಕಾರಕ್ಕೆ ಬಂದರೆ ವರಮಾನ ತೆರಿಗೆಯಿಂದ ಹಿಡಿದು ಎಲ್ಲಾ ಪ್ರಮುಖ ನೇರ ತೆರಿಗೆಗಳನ್ನು ರದ್ದುಗೊಳಿಸುವ ನಿಟ್ಟಿನಲ್ಲಿ ಗಂಭೀರ ಆಲೋಚನೆ ನಡೆಸುತ್ತಿದೆ ಎಂಬುದು.
ಕಪ್ಪು ಹಣ ನಿರ್ಮೂಲನೆಗಾಗಿ ಅವಿರತ ಹೋರಾಟ ನಡೆಸಿರುವ ಬಾಬಾ ರಾಮ್‌ದೇವ್‌ರವರ ಸಮಾವೇಶದಲ್ಲಿ ಮಾತನಾಡುತ್ತಾ ಮೋದಿಯವರು ತೆರಿಗೆ ವ್ಯವಸ್ಥೆಯ ಅಮೂಲಾಗ್ರ ಪರಿಷ್ಕರಣೆಯ ಅಗತ್ಯವನ್ನು ಒತ್ತಿ ಹೇಳುವ ಮೂಲಕ ವರಮಾನ ತೆರಿಗೆ ರದ್ದತಿಯ ಸಾಧ್ಯತೆ ಬಗ್ಗೆ ಮತ್ತಷ್ಟು ಭರವಸೆ ಮೂಡಿಸಿದರು. ಬೆಲೆ ಏರಿಕೆ, ಹಣದುಬ್ಬರದ ಹೊಡೆತಗಳ ನಡುವೆಯೂ ಸಂಬಳದ ಹಣದಲ್ಲಿ ತೆರಿಗೆಯನ್ನು ಚಾಚೂ ತಪ್ಪದೆ ಪಾವತಿಸುತ್ತಿರುವ ವೇತನದಾರರ ಕಿವಿಗಳಿಗೆ ಈ ಸುದ್ದಿ ಸಂಗೀತದಂತೆ ಕೇಳಿಸುತ್ತಿದ್ದರೆ ಆಶ್ಚರ್ಯವಿಲ್ಲ.
ನಮ್ಮ ತೆರಿಗೆ ವ್ಯವಸ್ಥೆಯ ಕಬಂಧ ಬಾಹುಗಳು ತಿಮಿಂಗಿಲಗಳನ್ನು ಮುಟ್ಟದೆ ಆದಾಯದ ಪ್ರತಿ ರುಪಾಯಿಯ ಲೆಕ್ಕ ಒಪ್ಪಿಸುವ ಮಧ್ಯಮವರ್ಗವನ್ನೆ ತಮ್ಮ ವಿವಿಧ ಕ್ಲಿಷ್ಟ ನಿಯಮಗಳಡಿಯಲ್ಲಿ ಹೈರಾಣವಾಗಿರಿಸಿರುವುದು ವಾಸ್ತವ ಸಂಗತಿ. ಪ್ರತಿ ಬಾರಿ ಮಾರ್ಚ್ ಬಂತೆಂದರೆ ತೆರಿಗೆ ಉಳಿಸಲು ಏನಾದರೂ ಮಾರ್ಗವಿದೆಯೇ ಎಂದು ತೊಳಲಾಡುವ, ಅದಕ್ಕೆಂದೇ ನೂರಾರು ಯೋಜನೆಗಳ ಆಮಿಷವೊಡ್ಡುವ ಹಣಕಾಸು ಸಂಸ್ಥೆಗಳಿಗೆ ಸಾಲ ಮಾಡಿಯಾದರೂ ಹಣ ಸುರಿದು ಒಟ್ಟಿನಲ್ಲಿ ಆದಷ್ಟು ತೆರಿಗೆಯಿಂದ ತಪ್ಪಿಕೊಳ್ಳಬೇಕೆಂಬ ವರ್ಗ ನಮ್ಮಲ್ಲಿ ಸಾಕಷ್ಟಿದೆ. ಇಷ್ಟೆಲ್ಲಾ ಸರ್ಕಸ್ ಮಾಡಿಯೂ ಕೊನೆಗೆ ನಿಗದಿತ ತೆರಿಗೆಗಿಂತ ಹೆಚ್ಚಿಗೆ ಪಾವತಿಸುವುದು, ನಂತರ ಅದರ ಮರುಪಾವತಿಗೆ ವರ್ಷಗಟ್ಟಲೆ ಕಾಯುವುದು ಅಭ್ಯಾಸವಾಗಿಬಿಟ್ಟಿದೆ. ವರಮಾನ ತೆರಿಗೆ ರದ್ದತಿಯಾದರೆ ಇವೆಲ್ಲದರಿಂದ ಮುಕ್ತಿ ಪಡೆಯಬಹುದೆಂಬುದು ಎಲ್ಲರ ಹಂಬಲವಾದರೂ ಇದು ಪ್ರಾಯೋಜಿಕವಾಗಿ ಸಾಧ್ಯವೇ ಎಂಬುದು ಕೋಟಿ ರುಪಾಯಿ ಪ್ರಶ್ನೆ. ನಮ್ಮ ಕೇಂದ್ರ ಸರ್ಕಾರದ ಆದಾಯದಲ್ಲಿ ನೇರ ತೆರಿಗೆಯ ಪ್ರಮಾಣ ಸುಮಾರು 2.47 ಲಕ್ಷ ಕೋಟಿ ರು.ಗಳು. ತೆರಿಗೆದಾರರ ಸಂಖ್ಯೆ ಸುಮಾರು 4 ಕೋಟಿ. ಅದರಲ್ಲಿ ಸುಮಾರು 42000 ಮಂದಿ ಮಾತ್ರವೇ ವಾರ್ಷಿಕ ಒಂದು ಕೋಟಿಗಿಂತ ಹೆಚ್ಚಿನ ಆದಾಯ ಹೊಂದಿದವರು. ನಾಲ್ಕು ಲಕ್ಷ ಮಂದಿ ಮಾತ್ರವೇ ವಾರ್ಷಿಕ 20 ಲಕ್ಷ ರು. ಆದಾಯ ಮೀರಿದವರು. ಅಂದರೆ ನಮ್ಮ ನೇರ ತೆರಿಗೆಯ ಶೇ. 99 ರಷ್ಟು ಹಣ ಶೇ.ಒಂದರಷ್ಟು ಜನರಿಂದ ಸಂಗ್ರಹಿತವಾಗುತ್ತಿದೆ. ಉಳಿದ ಶೇ99 ರಷ್ಟು ಜನ ತಮ್ಮ ಪಾಲಿನ ತೆರಿಗೆಯನ್ನು ಕಟ್ಟುತ್ತಾ, ವ್ಯವಸ್ಥೆಯ ಬಗ್ಗೆ ಗೊಣಗುತ್ತ, ತಾವು ತಪ್ಪಿಸಿ ಉಳಿಸಿರಬಹುದಾದ ಅಲ್ಪ ಸ್ವಲ್ಪ ಹಣವನ್ನು ಖರ್ಚು ಮಾಡುತ್ತಾ, ಇನ್ನೂ ಸ್ವಲ್ಪ ತೆರಿಗೆಯನ್ನು ಉಳಿಸಲಾಗಲಿಲ್ಲ ಎಂಬ ಪಾಪಪ್ರಜ್ಞೆಯಲ್ಲಿ ತೊಳಲಾಡುತ್ತಿರುತ್ತಾರೆ. ಇನ್ನು ಕೃಷಿಕ್ಷೇತ್ರ ಹೇಗೂ ತೆರಿಗೆ ಮುಕ್ತವಾದ್ದರಿಂದ ತೆರಿಗೆಯನ್ನು ವಂಚಿಸುವವರಿಗೆ ಅದೊಂದು ಅಡಗುತಾಣವಾಗಿ ಕಂಡಿರುವುದರಲ್ಲಿ ಆಶ್ಚರ್ಯವೇನಿಲ್ಲ. ಹಾಗಾಗಿ ವರಮಾನ ತೆರಿಗೆ ಮುಕ್ತ ಅರ್ಥ ವ್ಯವಸ್ಥೆ ಈ ಎಲ್ಲಾ ವೈರುಧ್ಯಗಳಿಗೆ ಪರಿಹಾರ ನೀಡಬಹುದು. ಆದರೆ ಇದರಿಂದಾಗುವ ಸಂಪನ್ಮೂಲದ ಕೊರತೆಯನ್ನು ಭರಿಸುವುದು ಹೇಗೆ ಎಂಬುದು ಈಗಿನ ಮುಖ್ಯಪ್ರಶ್ನೆ.
ಅಧಿಕಾರಕ್ಕೆ ಬಂದೊಡನೆ ಪೂಜೆಯ ಮಹಾನೇವೇದ್ಯದ ನಂತರ ಪ್ರಸಾದ ಹಂಚಿದಂತೆ ಬೊಕ್ಕಸದ ದುಡ್ಡನ್ನು ವಿಲೇವಾರಿ ಮಾಡುವುದು ಜವಾಬ್ದಾರಿಯುತ ಪಕ್ಷಗಳಿಗೆ ಸಾಧ್ಯವಾಗಲಾರದು. ಅದಕ್ಕಾಗಿ ಸಂಪನ್ಮೂಲ ಕ್ರೋಢೀಕರಣಕ್ಕೆ ಪರ್ಯಾಯ ಮಾರ್ಗಸೂಚಿಯನ್ನೂ ನಿರ್ಧರಿಸಬೇಕು. ಅಂತಹ ಮಾರ್ಗಗಳನ್ನು ತಜ್ಞರೊಂದಿಗೆ ಸಮಾಲೋಚಿಸಿ ನಿರ್ಣಯಿಸಿದರೆ ಅಸಾಧ್ಯವೇನಲ್ಲ. ಹೊಸಪಥವನ್ನು ಹುಟ್ಟುಹಾಕಿ ಸಾಧಿಸಿ ತೋರಿಸುವ ಸಂಕಲ್ಪಶಕ್ತಿ ಇರಬೇಕು ಅಷ್ಟೇ. ಮೇಲೆ ಹೇಳಿದಂತೆ ಈ ವರಮಾನ ತೆರಿಗೆಯನ್ನು ರದ್ದು ಪಡಿಸಿದಲ್ಲಿ ತೆರಿಗೆ ಉಳಿಸಲು ಇರುವ ನೂರಾರು ಕಡಿತಗಳ ರಗಳೆಯೂ ಇರುವುದಿಲ್ಲ. ತೆರಿಗೆ ಇಲಾಖೆಯಲ್ಲಿರುವ ಬಹಳಷ್ಟು ಸಂಪನ್ಮೂಲ ಈ ಹಣದ ಬಗೆಗಿನ ತೆರಿಗೆದಾರರ ತಗಾದೆಗಳನ್ನು ಪರಿಹರಿಸುವುದರಲ್ಲಿಯೇ ಕಳೆಯುತ್ತದೆ. ತೆರಿಗೆ ಇಲಾಖೆ ಒಟ್ಟು ತೆರಿಗೆಯ ಸಾಕಷ್ಟು ಹಣವನ್ನು ಮರುಪಾವತಿಯ ರೂಪದಲ್ಲಿ ವಿತರಿಸುತ್ತದೆ. ಕಳೆದ ಸಾಲಿನಲ್ಲಿ ಈ ಬಾಬತ್ತಿನಲ್ಲಿ ಖರ್ಚಾದ ಹಣ ಸುಮಾರು 68000 ಕೋಟಿ ರು.ಗಳು. ಎಲ್ಲಾ ಆಧುನಿಕ ತಂತ್ರಜ್ಞಾನವನ್ನು ಒಳಪಡಿಸಿದ್ದರೂ ಸರಿಯಾದ ಸಮಯದಲ್ಲಿ ಈ ಮರುಪಾವತಿ ಹಣ ಸಂದಾಯವಾಗದ ಬಗ್ಗೆ ತೆರಿಗೆದಾರರ ದೂರು ಇದ್ದೇ ಇರುತ್ತದೆ. ಜೊತೆಗೆ ಇಲಾಖೆ ಈ ತೆರಿಗೆ ಮಾಹಿತಿಗಳನ್ನು ಸ್ವೀಕಾರ, ಪರಿಶೀಲನೆ, ಮುಂದಿನಕ್ರಮಗಳ ಜಾರಿಗಾಗಿಯೇ ತನ್ನ ಹೆಚ್ಚಿನ ಸಮಯ, ಸಂಪತ್ತನ್ನು ವ್ಯಯಿಸುತ್ತದೆ. ತೆರಿಗೆ ರದ್ದತಿಯಿಂದ ಇವೆಲ್ಲವನ್ನೂ ತಪ್ಪಿಸುವುದೊಂದೇ ಅಲ್ಲ ಈ ಇಲಾಖೆಗಳ ವ್ಯಾಪಕ ಭ್ರಷ್ಟಾಚಾರವನ್ನು, ಬ್ಲಾಕ್‌ಮೈಲ್‌ತಂತ್ರ ಬಳಕೆಯನ್ನೂ ತಪ್ಪಿಸಬಹುದು. ಉದ್ಯೋಗದಾತರಿಗೆ, ಗ್ರಾಹಕರಿಗೆ ಬಡ್ಡಿ ನೀಡುವ ಸಂಸ್ಥೆಗಳಿಗೆ ಕಿರಿಕಿರಿಯಾಗಿರುವ ಮತ್ತೊಂದು ಅಂಶವೆಂದರೆ ಮೂಲದಲ್ಲಿಯೇ ತೆರಿಗೆ ಕಡಿತದ ಪದ್ದತಿ. ಉದ್ದಿಮೆಗಳು ತಮ್ಮ ಉದ್ಯೋಗಿಗಳ ವೇತನಕ್ಕೆ ನಿಗದಿಪಡಿಸಿದ ಭಾಗದಲ್ಲಿ ಶೇ. 20 ರಷ್ಟನ್ನು ಈ ಬಾಬತ್ತಿನಲ್ಲಿ ಪಾವತಿಸುತ್ತವೆ. ಒಂದು ವೇಳೆ ಈ ತೆರಿಗೆ ರದ್ದತಿಯಾದರೆ ಸಹಜವಾಗಿ ಕಂಪನಿಗಳು ಆ ಮೊತ್ತದಲ್ಲಿ ಇನ್ನಷ್ಟು ಉದ್ಯೋಗಿಗಳನ್ನು ನೇಮಕ ಮಾಡಿಕೊಂಡು, ಹೆಚ್ಚಿನ ಉದ್ಯೋಗ ಸೃಷ್ಟಿಯ ಜೊತೆಗೆ ಆರ್ಥಿಕ ಪ್ರಗತಿ ದರವೂ ಹೆಚ್ಚುವ ಸಂಭವವಿದೆ. ಇನ್ನು ತೆರಿಗೆದಾರರ ಕೈಯಲ್ಲಿ ಉಳಿಯುವ ಹಣವೂ ಗ್ರಾಹಕ ವಸ್ತುಗಳ ಹೆಚ್ಚಿನ ಬೇಡಿಕೆಗೆ ಇಂಬುನೀಡಿ ಔದ್ಯೋಗಿಕ ಅಭಿವೃದ್ಧಿಗೆ ದಾರಿಯಾಗಲಿದೆ.
ತೆರಿಗೆ ರದ್ದತಿಯ ಕೊರತೆಯನ್ನು ತುಂಬಲು ಸರ್ಕಾರ ಬೇರೆ ಬೇರೆ ಕ್ರಮಗಳನ್ನು ಕೈಗೊಳ್ಳಬಹುದು. ಮೊದಲನೆಯದಾಗಿ ಈ ಕ್ರಮದ ಫಲಾನುಭವಿಗಳನ್ನು ಸಹಾಯಧನದ ವ್ಯಾಪ್ತಿಯಿಂದ ಹೊರಗಿಡಬಹುದು. ಮುಖ್ಯವಾಗಿ ಇಂಧನ ಸಹಾಯಧನ. ಸರ್ಕಾರ ಸಹಾಯಧನಕ್ಕಾಗಿ ವ್ಯಯಿಸುತ್ತಿರುವ ಸುಮಾರು ಒಂದುವರೆ ಲಕ್ಷಕೋಟಿ ರು.ಗಳಲ್ಲಿ ಮೂರನೆಯ ಒಂದು ಭಾಗ ಇವು ಕಬಳಿಸುತ್ತಿವೆ. ಪೆಟ್ರೋಲ್, ಡೀಸೆಲ್, ಗ್ಯಾಸ್ ಅನ್ನು ಇವರು ಮುಕ್ತ ಮಾರುಕಟ್ಟೆ ದರದಲ್ಲಿ ಕೊಳ್ಳುವಂತೆ ಮಾಡುವುದರಿಂದ ಬಹುಪಾಲನ್ನು ಉಳಿಸುವ ಮೂಲಕ ಕೊರತೆ ತುಂಬಬಹುದು. ಈಗ ಮಾಡುತ್ತಿರುವಂತೆ ಉಳಿತಾಯಕ್ಕೂ ತೆರಿಗೆ ಹಾಕುವ ಪದ್ದತಿಯನ್ನು ಬಿಟ್ಟು, ಮಾಡುವ ಖರ್ಚಿಗೆ ತೆರಿಗೆ ವಿಧಿಸಿದರೆ ( ಬ್ಯಾಂಕಿಂಗ್ ವ್ಯವಹಾರ ಶುಲ್ಕ: ಪ್ರತಿ ಹಿಂಪಡೆತಕ್ಕೂ ನಿಗದಿತ ತೆರಿಗೆ ವಿಧಿಸುವುದು. ಇದು ಶೇ. ಒಂದರಷ್ಟು. ಆದರೆ ಸುಮಾರು 2.25 ಲಕ್ಷ ಕೋಟಿ ಆದಾಯದ ನಿರೀಕ್ಷೆ ಇದೆ.)ಸರ್ಕಾರಕ್ಕೆ ಹೆಚ್ಚಿನ ಆದಾಯ ಬರುವುದರೊಂದಿಗೆ ಉಳಿತಾಯಕ್ಕೆ ಹೆಚ್ಚಿನ ಒತ್ತು ಕೊಡಬಹುದು. ಇದಕ್ಕಾಗಿ ಖರ್ಚು ಮಾಡುವುದೇ ಪ್ರಗತಿಯ ಸಂಕೇತ ಎಂಬ ಗುಂಗಿನಿಂದ ನಮ್ಮ ಆರ್ಥಿಕ ತಜ್ಞರು ಹೊರಬರಬೇಕಷ್ಟೆ. ಇನ್ನು ಅಪರೋಕ್ಷ ತೆರಿಗೆಗಳಲ್ಲಿ ಶೇ. ಒಂದೆರಡು ಹೆಚ್ಚಳದಿಂದ ಸಾಕಷ್ಟು ಸಂಪನ್ಮೂಲ ಕ್ರೋಢೀಕರಣದ ಸಂಭವವಿದೆ.
ಇವೆಲ್ಲವೂ ಒಂದೇ ಹಂತದಲ್ಲಿ ಜಾರಿಗೆ ಬರಬೇಕು ಎಂದು ನಿರೀಕ್ಷಿಸುವುದು ಅತಿರೇಕ ಅನ್ನಿಸುತ್ತದೆ. ಮೊದಲ ಹಂತವಾಗಿ ಈ ಲಾಭವನ್ನು ವೇತನದಾರರಿಗೆ, ಕೆಳ ಹಂತದ ವ್ಯಾಪಾರಿ ವರ್ಗ, ಸಣ್ಣ ಕೈಗಾರಿಕೆಗಳಿಗೆ ಸೀಮಿತಗೊಳಿಸಿದರೆ ಸರ್ಕಾರ ಯಶಸ್ಸನ್ನು ಕಾಣುವ ನಿರೀಕ್ಷೆಯಿದೆ. ತೆರಿಗೆ ತಪ್ಪಿಸಿ ಕಾಳ ಹಣ ಮಾಡುವ, ತನ್ಮೂಲಕ ಭ್ರಷ್ಟ ವರ್ಗದ ಪೋಷಣೆ ಸಾಧ್ಯವಾಗಿರುವುದೇ ಉದ್ದಿಮೆ ವರ್ಗದ ಕುಮ್ಮಕ್ಕಿನಿಂದ. ಕಾಳ ಧನ ಹೊರತೆಗೆಯಲು ಹೆಚ್ಚಿನ ಮೌಲ್ಯದ ನೋಟಿನ ರದ್ದತಿಯಂತಹ ಕ್ರಾಂತಿಕಾರಿ ಕ್ರಮ ಕೈಗೊಂಡರೆ ಗಳಿಕೆಯ ಎಲ್ಲಾ ಹಣವೂ ನ್ಯಾಯಯುತವಾದ ಮಾರ್ಗದಲ್ಲಿ ಹರಿದು ಬರುವ ಸಂಭವವಿದೆ. ಆಳುವವರ ಸಂಕಲ್ಪಶಕ್ತಿಯ ಮೇಲೆ ಈ ಎಲ್ಲಾ ಕ್ರಮಗಳ ಫಲಿತಾಂಶ ಅಡಗಿದೆ. ಮಧ್ಯಮ ವರ್ಗದ ಕಣ್ಣಿನಲ್ಲಿ ಅಪ್ಯಾಯಮಾನ ಎನ್ನಿಸಬಹುದಾದ ಈ ಕ್ರಮ ಬರುವ ದಿನಗಳಲ್ಲಿ ರಾಜಕೀಯ ಒಲವು ನಿಲುವುಗಳಿಗೆ ಹೊಸ ಭಾಷ್ಯವನ್ನೇ ಬರೆಯುವ ನಿರೀಕ್ಷೆಯಿದೆ. ರಾಜಕೀಯ ಪಕ್ಷಗಳು ತಮ್ಮ ತಮ್ಮ ಬದ್ಧ ಮತ ವರ್ಗಕ್ಕೆ ಹೊಂದುವ ಕಾರ್ಯಕ್ರಮಗಳಿಗೆ ಒತ್ತು ನೀಡಲು ಕಟಿಬದ್ಧರಾಗಿರುವ ಈ ಚುನಾವಣಾ ಸಮಯದಲ್ಲಿ ಇದೂ ಒಂದು ಪ್ರಯೋಗವಾಗಬಹುದು. ಆಡಳಿತಗಾರರಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದೇವೆ ಎಂಬ ಆನಾಥ ಪ್ರಜ್ಞೆಯಿಂದ ತೊಳಲುವ ಮಧ್ಯಮ ವರ್ಗಕ್ಕೆ ಇದೊಂದು ಸಂಜೀವಿನಿಯಂತೆ ತೋರಿದರೆ ಆಶ್ಚರ್ಯ ಪಡಬೇಕಾಗಿಲ್ಲ.



 -ಅ.ಸು.ರವೀಂದ್ರ
ಶಿವಮೊಗ್ಗ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.