ಯಾವುದೂ ಅತಿಯಾಗಬಾರದು

ಅಧಿಕಾರದ ಆಸೆ ಮತ್ತು ನರೇಂದ್ರ ಮೋದಿಯವರನ್ನು ದೆಹಲಿಯ ಗದ್ದುಗೆಯಿಂದ ದೂರವಿಡಬೇಕೆಂಬ ಕಾಂಗ್ರೆಸ್ಸಿಗೆ ಪ್ರಿಯಾಂಕ ಏನು ಮಾಡಿಯಾರು? ಈ ಪ್ರಶ್ನೆ ಉದ್ಭವವಾಗಿದ್ದು, ಕಾಂಗ್ರೆಸ್ ಸಮಾಲೋಚನ ಸಭೆಯಲ್ಲಿ. ಪಕ್ಷದಲ್ಲಿ ಏನೂ ಅಲ್ಲದ, ಪ್ರಿಯಾಂಕ, ಸೋನಿಯಾರ ಮಗಳು, ರಾಹುಲರ ಅಕ್ಕ, ನೆಹರು-ರಾಜೀವ್ರ ಕುಟುಂಬದವರು. ಕೇವಲ ಈ ಹಿನ್ನೆಲೆ, ಮಹತ್ವಪೂರ್ಣ ಪ್ರತಿಷ್ಠಿತ ಪಕ್ಷದ ಸಮಾಲೋಚನ ಸಭೆಯಲ್ಲಿ ಭಾಗವಹಿಸಬಹುದೆಂಬ ಅರ್ಹತೆಯನ್ನು ಪಡೆದೀತೆ? ನಮ್ಮ ಕುಟುಂಬದ ಪ್ರೀತಿಯ ಹಾಗೂ ಗೌರವದ ಪುತ್ರರಾಗಿ/ಪುತ್ರಿಯರಾಗಿ ಇರುವ ನಾವೂ ಒಂದು ದಿನ ಈ ರೀತಿಯ ಅವಕಾಶ ಪಡೆಯಬಹುದೇ? ಹುಚ್ಚು ಕಲ್ಪನೆ ಅಂತೀರಾ? ಹಾಗಿದ್ದರೆ ಪ್ರಿಯಾಂಕ ಹಾಜರಾತಿ ಹುಚ್ಚುತನವಲ್ಲವೇ?
ಇದರರ್ಥ, ಪಕ್ಷದ ಉಳಿದ ಮುಖಂಡರುಗಳಿಗೆ ಯಾವುದೇ ಅಸ್ತಿತ್ವವೇ ಇಲ್ಲದಾಯಿತೆ? ಅಥವಾ ಕಾಂಗ್ರೆಸ್ ಒಂದು ಕುಟುಂಬದ ಆಸ್ತಿ ಎನ್ನಬಹುದೇ? ಉಳಿದ ಯಾರಾದರೂ ಆ ಪಕ್ಷದಲ್ಲಿ ಅಪ್ಪಿ-ತಪ್ಪಿ, ಏನಾದರೂ ಸ್ಥಾನ, ಅಧಿಕಾರ (?) ಪಡೆದಿದ್ದಲ್ಲಿ ಅದು ನೆಹರು ಕುಟುಂಬದ ಕೃಪೆಯೇ? ಹಾಗಂತ ಕಾಂಗ್ರೆಸ್ ಪಕ್ಷದ ಹಿರಿಯ, ಪ್ರತಿಷ್ಠಿತ, ಗೌರವಾನ್ವಿತ ಸದಸ್ಯರುಗಳೆಲ್ಲ ಕೇವಲ ಹೊಗಳುಭಟರಾಗಿಯೇ, ಭಟ್ಟಂಗಿಗಳಾಗಿಯೇ ಇರಬೇಕೆ? ಒಂದೊಮ್ಮೆ ಪ್ರಿಯಾಂಕರಲ್ಲೂ ಕ್ಷಮತೆ ಇದೆ ಅಂತಾದರೆ ಅವರಿಗೂ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸಿಕೊಡಬಹುದಿತ್ತಲ್ಲ. ನೆಹರು ಕುಟುಂಬದ ಯಾವೊಂದು ಜೀವಿಯಾದರೂ ಪಕ್ಷದಲ್ಲಿ ಉನ್ನತ ಸ್ಥಾನ ಬಯಸಿದರೆ ಅದನ್ನು ಅಲ್ಲಗಳೆಯುವ ಅಥವಾ ನಿರಾಕರಿಸುವ ಯಾವ ಹಕ್ಕೂ ಅಥವಾ ಅಧಿಕಾರವೂ ಕಾಂಗ್ರೆಸ್ಸಿನ ಇನ್ನಾರಿಗೂ ಇರಲಾರದೇ? ಪ್ರಿಯಾಂಕರ ಏಕಾಏಕಿ ಪ್ರವೇಶವೇನು ಹುಡುಗಾಟವೇ? ಏನು ಮಾಡಿದರೂ ನಡೆಯುತ್ತದೆಂಬ ಅಹಂಕಾರವೇ? ಪಕ್ಷ ತಮ್ಮ ಪಿತ್ರಾರ್ಜಿತ ಆಸ್ತಿ ಎಂಬ ಮನೋಭಾವವೇ? ಅಥವಾ ತಾವು ಹೇಳಿದಂತೆ ಉಳಿದವರು ಹೇಳಿಕೊಂಡು ಬಿದ್ದಿರಬೇಕೆಂಬ ಧೋರಣೆಯೇ? ಇಂಥ ಕೃತ್ಯಗಳನ್ನು ಕಾಂಗ್ರೆಸ್ಸಿನ ಅತಿರಥ-ಮಹಾರಥರೆಂದೆನಿಸಿಕೊಳ್ಳುತ್ತಿರುವವರು ಹೇಗೆ ಸಹಿಸಿಕೊಂಡಿಯಾರು? ಅವರಿಗಿರುವ ಅನಿವಾರ್ಯತೆಯಾದರೂ ಏನು? ನೆಹರು ಕುಟುಂಬದವರ ಈ ರೀತಿಯ ವರ್ತನೆ 'ಅತಿ' ಆಯಿತೆನಿಸುವುದಿಲ್ಲವೇ?
ಒಂದು ಮಾತಂತೂ ಸತ್ಯ. ಅತಿಯೇ ಅಧಃಪತನಕ್ಕೆ ಕಾರಣವಾದೀತು. ನಮ್ಮ ಪುರಾಣ ಕಥೆಗಳಲ್ಲೂ ಇದನ್ನೇ ಸ್ಪಷ್ಟಪಡಿಸುತ್ತಾರೆ. ಅತಿಯಾದ ದಾನದಿಂದ ಬಲಿಯೂ, ಅತಿಯಾದ ಛಲದಿಂದ ಕೌರವರೂ, ಅತಿಯಾದ ಸ್ತ್ರೀ ವ್ಯಾಮೋಹದಿಂದ ರಾವಣನೂ ನಾಶವಾಗಿದ್ದಾರೆ. ಹೀಗಾಗಿ ಅತಿ ಎಂಬುದನ್ನು ವರ್ಜಿಸಬೇಕು ಎಂಬ ಸುಭಾಷಿತವೇ ಇದೆ. ಅತಿಯಾದ ಕುಟುಂಬ ಪರಂಪರೆ ಒಂದು ದಿನ ಮುಳುವಾಗಿಯೂ ಪರಿಣಮಿಸಬಹುದೆಂದು ವ್ಯಾಖ್ಯಾನಿಸಬಹುದೇ? ಪ್ರಿಯಾಂಕಳ ಸಕ್ರಿಯ ರಾಜಕೀಯ ಪ್ರವೇಶವೂ ಎಣಿಸಿದ ಯಾವೊಂದು ಬದಲಾವಣೆಯನ್ನೂ ತರಲಾರದು ಅಥವಾ ಸ್ವರೂಪವನ್ನು ಬದಲಿಸದು. ಇದೂ ಒಂದು ಪ್ರಯತ್ನ ಅಂತ ಸದ್ಯದ ಪರಿಸ್ಥಿತಿಯಲ್ಲಿ ಊಹಿಸಬಹುದಷ್ಟೇ. ಪ್ರಯತ್ನ ಮಾಡುವುದರಲ್ಲಿ ತಪ್ಪೇನಿಲ್ಲ ಅಲ್ಲವೇ?
-ಶಂಕರನಾರಾಯಣ ಭಟ್
ಹೊನ್ನಾವರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


