ಕಷ್ಟಕ್ಕೆ ಹೆದರಿ ಓಡಲಿಲ್ಲ, ಕಷ್ಟಗಳನ್ನೇ ಓಡಿಸಿದಳು!

ನಮ್ಮ ಕಥಾ ನಾಯಕಿಯ ಹೆಸರು ಸಯೂರಿ ದಳವಿ. ಮ್ಯಾರಥಾನ್ ಓಟದಲ್ಲಿ ಈಕೆಯದ್ದು...
ಕಷ್ಟಕ್ಕೆ ಹೆದರಿ ಓಡಲಿಲ್ಲ, ಕಷ್ಟಗಳನ್ನೇ ಓಡಿಸಿದಳು!
Updated on: 

ನಮ್ಮ ಕಥಾ ನಾಯಕಿಯ ಹೆಸರು ಸಯೂರಿ ದಳವಿ. ಮ್ಯಾರಥಾನ್ ಓಟದಲ್ಲಿ ಈಕೆಯದ್ದು ಚಿರಪರಿಚಿತ ಹೆಸರು. ಆಟದ ಅಂಗಳದಲ್ಲಿ, ಸದಾ ಗೆಲುವಿನ ಬೆನ್ನತ್ತಿ ಓಡುವ ಈಕೆಯನ್ನು ಹೆಜ್ಜೆ ಹೆಜ್ಜೆಗೂ ಕಷ್ಟಗಳು ಹಿಂಬಾಲಿಸಿದವು. ಕಾಡಿದವು.ಕಂಗೆಡಿಸಿದವು. ಹೆದರಿಸಿದವು. ಬಗೆಬಗೆಯಲ್ಲಿ ಆಟ ಆಡಿಸಿದವು. ಗೋಳಾಡಿಸಿದವು. ಈ ಸಂದರ್ಭದಲ್ಲಿಯೇ ಈಕೆಯ ದಾಂಪತ್ಯ ಮುರಿದು ಬಿತ್ತು. ಒಬ್ಬನೇ ಮಗ, ಆಟಿಸಂ ಕಾಯಿಲೆಗೆ ತುತ್ತಾದ. ಇಷ್ಟೆಲ್ಲ ಆದರೂ ಈಕೆ ಕಷ್ಟಗಳಿಗೆ ಹೆದರಿ ಓಡಲಿಲ್ಲ. ಬದಲಿಗೆ, ಅವಡುಗಚ್ಚಿ ನಿಂತು ಎಲ್ಲವನ್ನೂ ಎದುರಿಸಿದಳು. ಕಡೆಗೆ, ಎಲ್ಲ ಕಷ್ಟಗಳನ್ನೂ ಹೆದರಿಸಿ ಓಡಿಸಿದಳು! ಕಷ್ಟ ಬಂದಾಕ್ಷಣ ಕಂಗಾಲಾಗಿ ಹೋಗುವ ಎಲ್ಲರಿಗೂ ಒಂದು ಪಾಠದಂತಿರುವ ಸಯೂರಿ ದಳವಿಯ ಹೋರಾಟದ ಬದುಕಿನ ವಿವರಣೆ ಇಲ್ಲಿದೆ. ಅಂದ ಹಾಗೆ, ಇದು so-saree ಬ್ಲಾಗ್‌ಗೆ ಸಯೂರಿ ದಳವಿ ನೀಡಿದ ಸಂದರ್ಶನದ ಭಾವಾನುವಾದ. ಓದಿಕೊಳ್ಳಿ:
***
'ನಾನು ಹುಟ್ಟಿ ಬೆಳೆದದ್ದೆಲ್ಲಾ ಮುಂಬಯಿಯಲ್ಲೇ. ಸಿಂಪಲ್, ಸ್ವೀಟ್, ಟಾಲ್ ಅಂಡ್ ಕ್ಯೂಟ್ ಎಂಬುದು, ಚಿಕ್ಕಂದಿನಿಂದಲೂ ನನಗೆ ಅಂಟಿಕೊಂಡಿದ್ದ ಹೊಗಳಿಕೆ. ಶಾಲಾ ದಿನಗಳಿಂದಲೂ ಅಥ್ಲೆಟಿಕ್ಸ್ ಅಂದರೆ, ಅದರಲ್ಲೂ ರನ್ನಿಂಗ್ ರೇಸ್ ಅಂದರೆ ನನಗೆ ವಿಪರೀತ ಮೋಹವಿತ್ತು. ಎಲ್ಲ ಸ್ಪರ್ಧೆಗಳಲ್ಲೂ ಮೊದಲ ಸ್ಥಾನ ನನ್ನದೇ ಆಗಿರುತ್ತಿತ್ತು. ಮನೆಯ ಕಪಾಟುಗಳು, ಸರ್ಟಿಫಿಕೇಟ್ ಮತ್ತು ಶೀಲ್ಡ್‌ಗಳಿಂದ ತುಂಬಿಹೋಗಿದ್ದವು. ಓಡಬೇಕು, ಗೆಲ್ಲುತ್ತಲೇ ಇರಬೇಕು ಎಂಬ ನಿರ್ಧಾರ ಕಾಲೇಜಿಗೆ ಬಂದ ನಂತರವೂ ಬದಲಾಗಲಿಲ್ಲ. ಸಾಲು ಸಾಲಾಗಿ ಬಂದ ಯಶಸ್ಸಿನಿಂದ ಪುಳಕಿತಳಾಗಿ -'ಲೈಫ್ ಈಸ್ ಬ್ಯೂಟಿಫುಲ್‌' ಎಂದು ನಾನು ಉದ್ಗರಿಸಿದ ಸಂದರ್ಭದಲ್ಲಿಯೇ ಅನಾಹುತವಾಗಿ ಹೋಯಿತು. ತೀರಾ ಆಕಸ್ಮಿಕವಾಗಿ ದೊಡ್ಡದೊಂದು ಗಾಯವಾಗಿ, ಅಪರೇಷನ್ ಕೂಡ ನಡೆಯಿತು. ಪರಿಣಾಮ, ಓಡಬೇಕು ಎಂಬ ಆಸೆಗೆ ಫುಲ್‌ಸ್ಟಾಪ್ ಹಾಕಬೇಕಾಯಿತು. ಮುಂದೆ, 20 ವರ್ಷ ತುಂಬಿದ ಸಂದರ್ಭದಲ್ಲಿಯೇ ಒಳ್ಳೆಯ ಸಂಬಂಧ ಬಂತೆಂಬ ಕಾರಣಕ್ಕೆ ನನ್ನ ಮದುವೆಯೂ ಆಗಿಹೋಯಿತು.
ಪರಿಣಾಮ, ಅದುವರೆಗೂ ಕಾಲೇಜು ಕನ್ಯೆಯಾಗಿದ್ದವಳು ದಿಢೀರನೆ ಗೃಹಿಣಿ ಪಟ್ಟಕ್ಕೆ ಶಿಫ್ಟ್ ಆದೆ. ಮೊದಮೊದಲು ದಾಂಪತ್ಯದ ಸವಿ ಮಧುರವಾಗಿಯೇ ಇತ್ತು. ಆದರೆ ನಂತರದಲ್ಲಿ ನನ್ನ ಗಂಡ ಒರಟಾಗಿ ವರ್ತಿಸತೊಡಗಿದ. ಜಗಳವೆಂಬುದು ಮಾಮೂಲಾಯಿತು. ಆತ ಹೆಜ್ಜೆಹೆಜ್ಜೆಗೂ ತಪ್ಪು ಹುಡುಕುತ್ತಿದ್ದ. ಅಣಕಿಸುತ್ತಿದ್ದ. ಹಂಗಿಸುತ್ತಿದ್ದ. ಒಂದೆರಡು ಸಂದರ್ಭದಲ್ಲಿ ನಾಲ್ಕೇಟು ಹಾಕಿಯೂ ಬಿಟ್ಟ. ಹೀಗೆ ಗುದ್ದಾಡಿಕೊಂಡು, ಮನಸ್ಸು ಕೆಡಿಸಿಕೊಂಡು ಬದುಕುವುದು ಕಷ್ಟ ಎಂದುಕೊಳ್ಳುತ್ತಿರುವಾಗಲೇ ನಾನು ಗರ್ಭಿಣಿಯಾದೆ. ಕೆಲವೇ ತಿಂಗಳುಗಳಲ್ಲಿ ಗಂಡು ಮಗುವಿನ ತಾಯಿಯಾದೆ. ಆ ಮಗುವಿಗೆ ವಿಹಾನ್ ಎಂದು ಹೆಸರಿಡಲಾಯಿತು.
ನಮ್ಮ ಬದುಕಲ್ಲಿ ಹೊಸದೊಂದು ಜೀವ ಪ್ರವೇಶ ಪಡೆಯಿತಲ್ಲ; ಆ ಕಾರಣಕ್ಕಾದರೂ ಗಂಡ ಬದಲಾಗಬಹುದು ಅಂದುಕೊಂಡೆ. ಉಹುಂ, ಹಾಗಾಗಲಿಲ್ಲ. ಮನೆ ಎಂಬುದು ನರಕವಾಯಿತು. ದಿನವೂ ಜಗಳವಾಡುತ್ತಾ ಸಂಕಟದಲ್ಲಿ ಬೇಯುವುದಕ್ಕಿಂತ ಬೇರೆಯಾಗಿ ಬಿಡುವುದೇ ಮೇಲು ಅನ್ನಿಸಿತು. ಬೇರೆ ದಾರಿ ಕಾಣದೆ ವಿಚ್ಛೇದನಕ್ಕೆ ಅರ್ಜಿ ಹಾಕಿದೆ. ನನ್ನ ಗಂಡ, ಮಗುವನ್ನು ನನ್ನೊಂದಿಗೇ ಬಿಟ್ಟು ಬೇರೆ ಹೋಗಿಬಿಟ್ಟ. ಮೊದಲ ಆರು ತಿಂಗಳು ಮಗುವಿನಲ್ಲಿ ಯಾವುದೇ ಸಮಸ್ಯೆಯೂ ನನಗೆ ಗೋಚರಿಸಲಿಲ್ಲ. ಆನಂತರದಲ್ಲಿ ಶಾಕ್ ಅನ್ನಿಸುವಂಥ ಕೆಲವು ವಿಷಯಗಳು ಅರ್ಥವಾಗುತ್ತಾ ಹೋದವು. ಏನೆಂದರೆ - ನನ್ನ ಮಗ, ಉಳಿದವರಂತೆ ನಾರ್ಮಲ್ ಆಗಿರಲಿಲ್ಲ. ಏಳೆಂಟು ತಿಂಗಳ ಮಕ್ಕಳು ಆಡುವ ತೊದಲು ಮಾತು, ಅಂಬೆಗಾಲಿನ ನಡಿಗೆ, ಗೋಡೆ ಹಿಡಿದು ಎದ್ದು ನಿಲ್ಲುವಂಥ ಪ್ರಯತ್ನ, ಅಮ್ಮನನ್ನು ಕಂಡಾಕ್ಷಣ ಖುಷಿಯಿಂದ ಖಿಲ್ಲನೆ ನಗುವ ಹಾವಭಾವ... ಇಂಥ ಯಾವ ವರ್ತನೆಯನ್ನೂ ನನ್ನ ಮಗ ತೋರ್ಪಡಿಸಲೇ ಇಲ್ಲ. ಆತ ಸದಾ ಶೂನ್ಯದ ಕಡೆಗೆ ಮುಖ ಮಾಡಿಕೊಂಡು ಮಲಗಿರುತ್ತಿದ್ದ. ಯಾವಾಗಲೋ ಒಮ್ಮೆ ನಗುತ್ತಿದ್ದ. ನನ್ನನ್ನು ಹೊರತುಪಡಿಸಿ, ಬೇರೆ ಯಾರನ್ನೂ ಆತ ಗುರುತಿಸುತ್ತಿರಲಿಲ್ಲ. ಯಾರಾದರೂ ಮುಟ್ಟಿದರೆ ಸಾಕು, ಕಿರುಚಿಕೊಳ್ಳುತ್ತಿದ್ದ. ರಂಪ ಮಾಡುತ್ತಿದ್ದ. ಮಗುವಿನ ಈ ವರ್ತನೆಯಿಂದ ಗಾಬರಿಯಾಯಿತು. ತಕ್ಷಣವೇ ವೈದ್ಯರ ಬಳಿಗೆ ಹೋದೆ. ವಿಹಾನ್‌ನನ್ನು ಹಲವು ಬಗೆಯಲ್ಲಿ ಪರೀಕ್ಷಿಸಿದ ನಂತರ ವೈದ್ಯರು ವಿಷಾದದಿಂದ ಹೇಳಿದರು.
'ನಿಮ್ಮ ಮಗ ಆಟಿಸಂ ತೊಂದರೆಯಿಂದ ಬಳಲುತ್ತಿದ್ದಾನೆ. ನರತಂತುಗಳು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸದೇ ಹೋದಾಗ, ಹೊರಗಿನ ಸಂಕೇತವನ್ನು ಮೆದುಳಿಗೆ ಮುಟ್ಟಿಸಲು ನರತಂತುಗಳು ವಿಫಲವಾದಾಗ ಮಕ್ಕಳಲ್ಲಿ ಆಟಿಸಂ ತೊಂದರೆ ಕಾಣಿಸಿಕೊಳ್ಳಬಹುದು. ಅನುವಂಶಿಕ ಕಾರಣಗಳಿಂದ, ರಕ್ತ ಸಂಬಂಧದಲ್ಲಿಯೇ ಮದುವೆಯಾಗುವುದರಿಂದ, ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಅತಿಯಾದ ಮಾತ್ರೆ ಸೇವನೆಯ ಕಾರಣಗಳಿಂದಲೂ ಮಕ್ಕಳಲ್ಲಿ ಆಟಿಸಂ ತೊಂದರೆ ಕಾಣಿಸಿಕೊಳ್ಳಬಹುದು. ಈ ತೊಂದರೆಗೆ ಈಡಾಗುವ ಮಕ್ಕಳು ಉಳಿದವರಂತೆ ನಾರ್ಮಲ್ ಆಗಿರುವುದಿಲ್ಲ. ಅವರ ವರ್ತನೆ ವಿಚಿತ್ರವಾಗಿರುತ್ತೆ. ಮನೆಯಲ್ಲಿ ಚಿಕ್ಕದೊಂದು ಬದಲಾವಣೆಯಾದರೂ, ಉದಾಹರಣೆಗೆ ಸೋಫಾ ಇಟ್ಟಿದ್ದ ಜಾಗ ಬದಲಿಸಿದರೂ ಅವರಿಗೆ ಸಿಟ್ಟು ಬರುತ್ತೆ. ಸಣ್ಣ ಪುಟ್ಟ ಕಾರಣಕ್ಕೂ ಹಠ ಮಾಡುತ್ತಾರೆ. ಅಳುತ್ತಾರೆ. ಒಂದೇ ಮಾತಲ್ಲಿ ಹೇಳುವುದಾದರೆ, ಅವರು ಯಾವ ಸಂದರ್ಭದಲ್ಲಿ ಹೇಗಿರುತ್ತಾರೆ ಎಂದು ಹೇಳಲು ಸಾಧ್ಯವೇ ಇಲ್ಲ. ಆಟಿಸಂ ಮಕ್ಕಳಿಗೆಂದೇ ವಿಶೇಷ ತರಬೇತಿ ಕೇಂದ್ರಗಳಿವೆ. ಅಲ್ಲಿಗೆ ಸೇರಿಸಿ. ಏನಾದರೂ ಪ್ರಯೋಜನವಾಗಬಹುದು...'
ಭವಿಷ್ಯದ ದಿನಗಳಲ್ಲಿ, ಆಸರೆಯಾಗುವನೆಂದು ಭಾವಿಸಿದ್ದ ಮಗನ ಬದುಕು ಹೀಗಾಗಬಹುದೆಂಬ ಕಲ್ಪನೆಯೇ ನನಗಿರಲಿಲ್ಲ. ಅದುವರೆಗೂ ತಾಯ್ತನವೆಂಬುದು ನೀಡುವ ಸಂಭ್ರಮದ ಕ್ಷಣಗಳ ಬಗ್ಗೆ ಅವರಿವರಿಂದ ಕೇಳಿದ್ದೆ. ಮಾನಸಿಕವಾಗಿ ಯಶೋದೆಯಾಗಿ ಬದಲಾಗಿದ್ದ ನಾನು ಬಾಲಕೃಷ್ಣನ ರೂಪದಲ್ಲಿ ನನ್ನ ಮಗನನ್ನು ನೋಡಲು ಬಯಸಿದ್ದೆ. ಆದರೆ, ಅವನು ಗಳಿಗೆಗೊಮ್ಮೆ 'ಅಮ್ಮಾ' ಅನ್ನಲಿಲ್ಲ. ಹಸಿವಾಗುತ್ತಿದೆ ಎಂದು ಸುಮ್ಮನೆ ಕಾಡಲಿಲ್ಲ. ಬಾಗಿಲ ಮರೆಯಲ್ಲಿ ಅಡಗಿ ನಿಂತು ಹೆದರಿಸಲಿಲ್ಲ. ನಾನು ಹೇಳಿದ್ದನ್ನೇ ತಪ್ಪು ತಪ್ಪಾಗಿ ಹೇಳಿ ನಗು ಬರಿಸಲಿಲ್ಲ. ಅಷ್ಟೇ ಅಲ್ಲ. ಕೆಲವು ಸಂದರ್ಭದಲ್ಲಿ ನಾನು ಹೇಳಿದ್ದು ಆ ಮಗುವಿಗೆ ಅರ್ಥವಾಗುತ್ತಲೇ ಇರಲಿಲ್ಲ. ಆತ ಕೆಲವೊಮ್ಮೆ ನನ್ನನ್ನೇ ದುರುದುರು ನೋಡುತ್ತಾ ಕೂತು ಬಿಡುತ್ತಿದ್ದ. ಎರಡು ವರ್ಷ ತುಂಬಿದಾಗ ಕೂಡ ಊಟವನ್ನು ಅಗಿದು ತಿನ್ನಬೇಕು ಎಂಬ ಸಾಮಾನ್ಯ ತಿಳಿವಳಿಕೆಯೂ ಅವನಿಗಿರಲಿಲ್ಲ. ಅದನ್ನೆಲ್ಲ ಕಂಡಾಗ ಪರಮಾಪ್ತರು ಅನ್ನಿಸಿದವರೊಂದಿಗೆ ಎಲ್ಲವನ್ನೂ ಹೇಳಿಕೊಂಡು ಅತ್ತು ಹಗುರಾಗಬೇಕು ಅನ್ನಿಸುತ್ತಿತ್ತು. ಆದರೆ ನನಗೆ ಆಸರೆಯೇ ಇರಲಿಲ್ಲ. ಹೆತ್ತವರು, ತಮ್ಮದೇ ಕಷ್ಟಗಳ ಮಧ್ಯೆ ಕಳೆದು ಹೋಗಿದ್ದರು. ಕೈ ಹಿಡಿದವನು, ಬದುಕಿಂದಲೇ ಎದ್ದು ಹೋಗಿದ್ದ. ಈ ಸಂದರ್ಭದಲ್ಲಿ ದೇವರ ಮುಂದೆ ಕೂತು ಸಂಕಟದಿಂದ ಕೇಳುತ್ತಿದ್ದೆ: 'ಶಾಲಾ ದಿನಗಳಲ್ಲಿ ಗಾಯದ ಸಮಸ್ಯೆ ಜೊತೆಯಾಗದಿದ್ದರೆ ಈ ಹೊತ್ತಿಗೆ ಹೆಸರಾಂತ ಅಥ್ಲೀಟ್ ಆಗಿರುತ್ತಿದ್ದೆನೇನೋ. ಮದುವೆ ಮುರಿದು ಹೋಗದಿದ್ದರೆ ಯಶಸ್ವಿ ಗೃಹಿಣಿಯಾಗಿರುತ್ತಿದ್ದೆನೇನೋ. ಮಗನಿಗೆ ಯಾವುದೇ ತೊಂದರೆ ಇಲ್ಲದಿದ್ದರೆ ಒಂಟಿಯಾಗಿದ್ದೂ ನೆಮ್ಮದಿ ಕಾಣುತ್ತಿದ್ದೆನೇನೋ. ಆದರೆ ಅಂಥ ಯಾವ ಖುಷಿಯೂ ನನ್ನ ಪಾಲಿಗೆ ದಕ್ಕದಂತೆ ಮಾಡಿಬಿಟ್ಟೆಯಲ್ಲಾ ಭಗವಂತಾ? ದಿನವೂ ಪೂಜಿಸಿದ್ದಕ್ಕೆ, ಉಪವಾಸವಿದ್ದು ಆರಾಧಿಸಿದ್ದುದಕ್ಕೆ ಇದೇನಾ ನಿನ್ನ ಉಡುಗೊರೆ?'
ಹೀಗೆ ಮಾತಾಡುವ ಸಂದರ್ಭದಲ್ಲೇ ಅಳು ಒತ್ತರಿಸಿಕೊಂಡು ಬರುತ್ತಿತ್ತು. ದೇವರು ಮಾತನಾಡುತ್ತಿರಲಿಲ್ಲ. ಮನೆಯೊಳಗೆ ನಾಲ್ಕು ವರ್ಷದ ಮಗನಿದ್ದ ನಿಜ. ಆದರೆ ಅವನಿಗೆ ನನ್ನ ಸಂಕಟ ಅರ್ಥವಾಗುತ್ತಿರಲಿಲ್ಲ. ಅಮ್ಮನ ಕಣ್ಣೀರು ಒರೆಸಬೇಕು ಎಂಬ ತಿಳಿವಳಿಕೆಯೂ ಅವನಿಗಿರಲಿಲ್ಲ. ಹೀಗೆ, ಡಿಪ್ರೆಷನ್‌ಗೆ ಒಳಗಾಗಿ ಅಳುವುದರಿಂದ ಆ ಕ್ಷಣಕ್ಕೆ ಸಮಾಧಾನ ಆಗಬಹುದೇ ವಿನಃ ಶಾಶ್ವತ ಪರಿಹಾರ ಸಿಗುವುದಿಲ್ಲ ಅನ್ನಿಸಿತು. ಮರುದಿನದಿಂದಲೇ ಮನಸ್ಸನ್ನು ಗಟ್ಟಿ ಮಾಡಿಕೊಂಡೆ. ಮೊದಲ ಮದುವೆಯ ಕಹಿ ಎದೆಯೊಳಗೆ ಗಟ್ಟಿಯಾಗಿ ಉಳಿದಿತ್ತು. ಬೈ ಛಾನ್ಸ್ ಎರಡನೇ ಬಾರಿ ಮದುವೆಯಾದರೆ, ಗಂಡನಾಗಿ ಬರುವ ವ್ಯಕ್ತಿ ನನ್ನ ಮಗನನ್ನು ಚೆನ್ನಾಗಿ ನೋಡಿಕೊಳ್ಳುವನೆಂಬ ಗ್ಯಾರಂಟಿ ನನಗಿರಲಿಲ್ಲ. ಹಾಗಾಗಿ ಮರುಮದುವೆಯ ಯೋಚನೆಯನ್ನು ಮನಸ್ಸಿಂದ ಆಚೆಗಿಟ್ಟೆ. ಈ ಹೊತ್ತಿಗೆ ಮಗನನ್ನು ಕಂಟ್ರೋಲ್ ಮಾಡುವುದೇ ದೊಡ್ಡ ಸಮಸ್ಯೆಯಾಗಿತ್ತು. ಉಗುರು ಕತ್ತರಿಸಲು ಹೋದರೆ ಸಾಕು, ಆತ ಹತ್ತು ಮನೆಗೆ ಕೇಳಿಸುವಂತೆ ಚೀರಾಡಿ ರಂಪ ಮಾಡುತ್ತಿದ್ದ. ಬಾರ್ಬರ್ ಶಾಪ್‌ಗೆ ಬರಲು ಬಿಲ್‌ಕುಲ್ ಒಪ್ಪುತ್ತಿರಲಿಲ್ಲ. ಅಂಥ ಸಂದರ್ಭದಲ್ಲಿ ನಾಲ್ಕು ಮಂದಿಯ ಸಹಾಯದೊಂದಿಗೆ ಬಾರ್ಬರ್ ಶಾಪ್‌ಗೆ ಹೋಗುತ್ತಿದ್ದೆ. ಕೈ ಕಾಲುಗಳನ್ನು ನಾಲ್ವರೂ ಗಟ್ಟಿಯಾಗಿ ಹಿಡಿದುಕೊಂಡು ಅವನಿಗೆ ಹೇರ್ ಕಟಿಂಗ್ ಮಾಡಿಸುತ್ತಿದ್ದೆವು. ಉಳಿದದ್ದು ಏನೇ ಇರಲಿ, ನಾನೂ ಮನುಷ್ಯಳಲ್ಲವೆ? ಮಗನ ಹುಚ್ಚಾಟವನ್ನು ಕಂಡಾಗ ಕೆಲವೊಮ್ಮೆ ಸಿಟ್ಟು ಬರುತ್ತಿತ್ತು. ರೇಗಬೇಕು ಎಂದುಕೊಂಡಾಗಲೇ ವೈದ್ಯರ ಮಾತು ನೆನಪಾಗುತ್ತಿತ್ತು: ಇದು ಅಮಾಯಕ ಮಗು. ತಾನು ಏನು ಮಾಡ್ತಾ ಇದೀನಿ ಎಂಬ ಅರಿವೇ ಅದಕ್ಕೆ ಇರುವುದಿಲ್ಲ. ಅವನ ಮೇಲೆ ರೇಗಿದರೆ, ಹೊಡೆದೇ ಬಿಟ್ಟರೆ ಆ ಮಗುವಿನ ಮನಸ್ಸಿಗೆ ಶಾಕ್ ಆಗಬಹುದು. ಹಾಗಾಗಿ, ಯಾವ ಸಂದರ್ಭದಲ್ಲೂ ಮಗುವಿನ ಮೇಲೆ ರೇಗಬೇಡಿ...'
ಹೀಗೇ ದಿನಗಳು ಕಳೆದವು. ವರ್ಷಗಳು ಉರುಳಿದವು. ನನ್ನ ಮಗ ಐದು ವರ್ಷದವನಾದ. ಆಗಲೂ ಅವನು ಬದಲಾಗಲಿಲ್ಲ. ನನ್ನನ್ನು ಬಿಟ್ಟು ಬೇರೆ ಯಾರೊಂದಿಗೂ ಮಾತಾಡುತ್ತಿರಲಿಲ್ಲ. ನಡುರಾತ್ರಿಯಲ್ಲಿ ಕೆಲವೊಮ್ಮೆ ಧಿಗ್ಗನೆ ಎದ್ದು ಕೂರುತ್ತಿದ್ದ. ಅವನು ಏನಾದರೂ ಅನಾಹುತ ಮಾಡಿಕೊಳ್ಳಬಹುದು ಎಂಬ ಕಾರಣದಿಂದ ಸರಿಯಾಗಿ ನಿದ್ರೆಯೇ ಬರುತ್ತಿರಲಿಲ್ಲ. ಹೊರಗೆಲ್ಲಾದರೂ ಹೋದರೆ ಅವನ ವಿಚಿತ್ರ ವರ್ತನೆಯೇ ಹೊಸ ಸಮಸ್ಯೆಗೆ, ಹಲವರ ಗೇಲಿಗೆ ಕಾರಣವಾಗಬಹುದು ಅನಿಸಿದ್ದರಿಂದ ನಾನು ಯಾವುದೇ ಕಾರ್ಯಕ್ರಮಕ್ಕೂ ಹೋಗಲಿಲ್ಲ. ನನ್ನದೊಂದು ಫಿಟ್‌ನೆಸ್ ಜಿಮ್ ಇದ್ದುದರಿಂದ ಹೊಟ್ಟೆಪಾಡಿಗೆ, ಹಣಕ್ಕೆ ಕೊರತೆಯಾಗಲಿಲ್ಲ.
ಒಂದೊಂದೇ ವರ್ಷ ಕಳೆದಂತೆ ಮಗನ ವಿಚಿತ್ರ ವರ್ತನೆ ಕಡಿಮೆಯಾದಂತೆ ಕಾಣಿಸಿತು. ತಕ್ಷಣವೇ ಇಂಟರ್‌ನೆಟ್‌ನ ಮೊರೆ ಹೋದೆ. ಆಟಿಸಂ ಸಮಸ್ಯೆಗೆ ಪರಿಹಾರಗಳನ್ನು ಹುಡುಕಿದೆ. ನಾನು ಓದಿದ್ದನ್ನೆಲ್ಲ ಮಗನ ಮೇಲೆ ಪ್ರಯೋಗಿಸಿದೆ. ಈ ಸಂದರ್ಭದಲ್ಲಿಯೇ ಆಟಿಸಂನಿಂದ ಬಳಲುವ ಮಕ್ಕಳಿಗೆಂದೇ ವಿಶೇಷ ಸ್ಕೂಲ್ ಇರುವುದು ಗೊತ್ತಾಯಿತು. ನನ್ನ ಮಗನನ್ನು ಅಲ್ಲಿಗೇ ಸೇರಿಸಿದೆ. ಮಗುವನ್ನು 'ಬದಲಿಸಲು' ಅಲ್ಲಿನ ಶಿಕ್ಷಕರೂ ಬಹಳಷ್ಟು ಶ್ರಮಿಸಿದರು. ಪ್ರಯೋಜನವಾಗಲಿಲ್ಲ. ಮುಖ್ಯವಾಗಿ ತರಗತಿಯಲ್ಲಿ ಹೆಚ್ಚು ಹೊತ್ತು ಕೂತಿರುವುದೇ ಅವನಿಗೆ ಆಗುತ್ತಿರಲಿಲ್ಲ. ತರಗತಿ ನಡೆಯುತ್ತಿದ್ದಾಗಲೇ ಎದ್ದು ಹೋಗಿಬಿಡುತ್ತಿದ್ದ. ನಂತರ ತನ್ನಷ್ಟಕ್ಕೆ ತಾನೇ ಮಾತಾಡಿಕೊಳ್ಳುತ್ತಿದ್ದ. ಇದೆಲ್ಲ ಸುತ್ತಮುತ್ತಲಿನ ಜನರಿಗೆ ಭಾರಿ ಮನರಂಜನೆ ಒದಗಿಸುತ್ತಿತ್ತು. ಮಾಸಿಕ ಸಭೆಯಲ್ಲಿ ಶಾಲೆಯ ಪ್ರಾಚಾರ್ಯರು ಇದನ್ನೆಲ್ಲ ವಿವರಿಸಿದರು.
ಉಹುಂ, ಏನೂ ಮಾಡುವಂತಿರಲಿಲ್ಲ. ಇದೆಲ್ಲಾ ಹಿಂದಿನ ಜನ್ಮದ ಕರ್ಮ. ಈಗ ಸಂಕಟವಾಗಿ ಕಾಡುತ್ತಿದೆ ಅಂದುಕೊಂಡೆ. ಇರಲಿ, ಮತ್ತೊಮ್ಮೆ ಪ್ರಯತ್ನಿಸೋಣ ಎಂದುಕೊಂಡು ಮಗನನ್ನು ಎದುರು ಕೂರಿಸಿಕೊಂಡೆ. ಊಟ ಮಾಡುವುದು ಹೇಗೆ? ನೀರು ಕುಡಿಯುವುದು ಹೇಗೆ? ಪ್ರಾರ್ಥಿಸುವುದು ಹೇಗೆ? ಬೇರೆಯವರೊಂದಿಗೆ ಮಾತಾಡುವುದು ಹೇಗೆ? ನಗುವುದು ಹೇಗೆ ಮತ್ತು ಏಕೆ? ಯಾರಿಗೂ ತೊಂದರೆ ಕೊಡದಂತೆ ಬದುಕುವುದು ಹೇಗೆ? ಎಂಬಂಥ ಬದುಕಿನ ಪಾಠಗಳನ್ನು ದಿನಕ್ಕೆ ಒಂದರಂತೆ ಹೇಳಿಕೊಟ್ಟೆ. ಕೆಲವೊಮ್ಮೆ ಒಂದೇ ಮಾತನ್ನು ಹತ್ತು ಬಾರಿ ಹೇಳಿದೆ. ಅವನಿಗೆ ಅರ್ಥವಾಗಲಿ ಎಂದು ಅಭಿನಯಿಸಿ ತೋರಿಸಿದೆ.
All things good and Bad has an end ಎಂಬ ಮಾತೊಂದಿದೆ. ಅದು ನಮ್ಮ ಬದುಕಿನ ವಿಷಯದಲ್ಲೂ ಕಡೆಗೊಮ್ಮೆ ನಿಜವಾಯಿತು. ನನ್ನ ಮಗ ಕಡೆಗೂ ಒಂದು ದಿನ ತುಂಬ ಅಕ್ಕರೆಯಿಂದ 'ಅಮ್ಮಾ' ಎಂದ. ನನ್ನ ಮಾತುಗಳನ್ನು ತುಂಬ ನಿಧಾನಕ್ಕೆ ಅರ್ಥಮಾಡಿಕೊಂಡ. ಎರಡನೇ ವರ್ಷದಲ್ಲಿ ಹೇಳಬೇಕಿದ್ದ ಮಾತುಗಳನ್ನು ಎಂಟನೇ ವಯಸ್ಸಿನಲ್ಲಿ ಹೇಳಿದ. ಅವನಲ್ಲಿ ದಿಢೀರನೆ ಉಂಟಾದ ಬದಲಾವಣೆ ಕಂಡು, ಖುಷಿಯಿಂದ ಸಂಕಟದಿಂದ ನಾನು ಬಿಕ್ಕಳಿಸಿದರೆ, ತನ್ನದೇ ಮುದ್ದು ಭಾಷೆಯಲ್ಲಿ -'ಅಳಬೇಡ ಅಮ್ಮಾ. ನಾನು ಮುಂದೆ ತೊಂದರೆ ಕೊಡಲ್ಲ' ಅಂದ. ಈ ಅಪರೂಪದ ಬದಲಾವಣೆ ಆದದ್ದು 2012ರಲ್ಲಿ. ಈ ಹೊತ್ತಿಗೆ, ಆಟಿಸಂ ತೊಂದರೆಯಿರುವ ಮಕ್ಕಳಿಗೆ ಪಾಠ ಹೇಳುವ ಮತ್ತೊಂದು ಶಾಲೆಯ ವಿಳಾಸ ಸಿಕ್ಕಿತು. ಮಗನೊಂದಿಗೆ ಅಲ್ಲಿಗೇ ಹೋದೆ. ನಾನಷ್ಟೇ ಅಲ್ಲ, ಶಾಲೆಯ ಶಿಕ್ಷಕರೂ ಬೆರಗಾಗುವಂತೆ ನನ್ನ ಮಗ ಬದಲಾವಣೆಯ ಹಾದಿಯಲ್ಲಿ ಒಂದೊಂದೇ ದಿಟ್ಟ ಹೆಜ್ಜೆ ಇರಿಸಿದ್ದ.
ಕಡೆಗೂ, ಮಗ ಉಳಿದವರಂತೆಯೇ ಆದ ಎಂದು ಗೊತ್ತಾಗುತ್ತಿದ್ದಂತೆಯೇ ನನ್ನೊಳಗೆ ಹೊಸ ಉತ್ಸಾಹ ಬಂತು. ರನ್ನಿಂಗ್ ರೇಸ್‌ಗೆ ಮತ್ತೆ ಹೋಗಬಾರದೇಕೆ ಅನಿಸಿದ್ದೇ ಆಗ. ಈ ಹೊತ್ತಿಗೆ 33 ವರ್ಷವಾಗಿತ್ತು. ಆದರೂ ಹೆದರದೆ ಟ್ರ್ಯಾಕ್‌ಗೆ ಇಳಿದೇ ಬಿಟ್ಟೆ. ಗೋವಾ, ಮುಂಬಯಿ, ಪೂನಾ, ದಿಲ್ಲಿಯಲ್ಲಿ ನಡೆದ ಮ್ಯಾರಥಾನ್ ಓಟದಲ್ಲಿ ಪಾಲ್ಗೊಂಡೆ. ಕೆಲವೊಮ್ಮೆ ಪದಕಗಳನ್ನೂ ಗೆದ್ದೆ. ಇಂಥದೊಂದು ಅಪರೂಪದ ಸಾಧನಗೆ ಕಾರಣನಾದವನು ನನ್ನ ಮುದ್ದು ಮಗ. ಒಂದೇ ಒಂದು ಮಾತನ್ನು ಆಡದೆ ಆತ ಕಲಿಸಿದ ಪಾಠಗಳಿಗೆ ನಾನು ಎಂದೆಂದೂ ಋಣಿ...'
***
ಈಗ ಯೋಚಿಸಿ: ತಾಯಿಯೊಬ್ಬಳು ತನ್ನ ಮಗನನ್ನು ಹೇಗೆ ಬೆಳೆಸುತ್ತಾಳೆ? ಮಕ್ಕಳ ಒಳಿತಿಗಾಗಿ ಎಂತೆಂಥ ಕಷ್ಟಕ್ಕೆ ಎದೆಯೊಡ್ಡುತ್ತಾಳೆ ಎಂಬುದಕ್ಕೆ ಸಯೂರಿ ದಳವಿಯ ಹೋರಾಟ ಮತ್ತು ತ್ಯಾಗವೇ ಉದಾಹರಣೆ. ಒಂದು ವೇಳೆ ಸಯೂರಿ ದಳವಿಯ ಜಾಗದಲ್ಲಿ ಮಕ್ಕಳೂ, ಮಗುವಿನ ಜಾಗದಲ್ಲಿ ಅಮ್ಮನೂ ಇದ್ದಿದ್ದರೆ-ಅಮ್ಮನನ್ನು ಕೇರ್ ಆಫ್ ಪುಟ್‌ಪಾತ್ ಮಾಡಲಾಗುತ್ತಿತ್ತು ಅಥವಾ ಅನಾಥಾಶ್ರಮಕ್ಕೆ ನೂಕಲಾಗುತ್ತಿತ್ತು. ಹೌದಲ್ಲವೇ?


- ಎ.ಆರ್. ಮಣಿಕಾಂತ್
armanikanth@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com