ಕಾಂಗ್ರೆಸ್ ಉಪಾಧ್ಯಕ್ಷ, ರಾಜೀವ - ಸೋನಿಯಾ ಪುತ್ರ ರಾಹುಲ ಗಾಂಧಿ, ಪಕ್ಷ ವಹಿಸುವ ಯಾವುದೇ ಜವಾಬ್ದಾರಿಯನ್ನಾದರೂ ನಿರ್ವಹಿಸಲು ಸಿದ್ಧ (ಪ್ರಧಾನಿ ಪೀಠದ ಪ್ರಸ್ತಾಪ ಅವರು ಮಾಡಿದ್ದಲ್ಲ. ಬೇರೆಯವರು ಹೇಳಿದ್ದು) ಎಂದು ಪ್ರಕಟಿಸಿದ ಕೂಡಲೇ ರಾಜಕೀಯ ವಲಯಗಳಲ್ಲಿ ಮಿಂಚಿನ ಸಂಚಾರವಾಗಿದೆ.
ರಾಹುಲ ಗಾಂಧಿ ಈ ಘೋಷಣೆಯನ್ನು ಮಾಡಿದ್ದು ಯಾವ ಕಾಂಗ್ರೆಸ್ ಕೂಟದಲ್ಲೂ ಅಲ್ಲ. ಅಥವಾ ದೇಶದ ಅತಿಪ್ರತಿಷ್ಠಿತ ಇಂಗ್ಲಿಷ್ ವಾಹಿನಿಗಳ ಮೂಲಕವೂ ಅಲ್ಲ. ಅದಕ್ಕೆ ಅವರು ಆರಿಸಿಕೊಂಡ ಮಾಧ್ಯಮ; ದೇಶದಲ್ಲೇ ಅತ್ಯಧಿಕ ಪ್ರಸಾರವಿರುವ ಹಿಂದಿ ಪತ್ರಿಕೆ, ದೈನಿಕ ಭಾಸ್ಕರ್ - ಶುಕ್ರವಾರ ಎಐಸಿಸಿ ಅಧಿವೇಶನಕ್ಕೆ ಮೂರೇ ದಿನಗಳ ಮುಂಚೆ. ಆರಿಸಿಕೊಂಡ ಮಾಧ್ಯಮ ಹಾಗೂ ಸಮಯ ಎರಡೂ ಪ್ರಶಸ್ತವಾಗಿದೆ.
ಅದೇ ಸಮಯದಲ್ಲೇ ಎಲ್ಲ ರಾಜಕೀಯ ಪಕ್ಷಗಳೂ ಚುರುಕಾಗಿವೆ. ಹೊಂದಾಣಿಕೆಯ ಮಾತು, ಮೂರನೆಯ ರಂಗದ ರಚನೆಯ ಪ್ರಸ್ತಾಪ ಎಲ್ಲವೂ ನೆನೆಗುದಿಗೆ ಬಿದ್ದಂತೆ ಇದುವರೆಗೂ ಕಂಡು ಬಂದಿದ್ದರೂ, ಈಗ ಎಲ್ಲ ಕಡೆ ಚಟುವಟಿಕೆ ಆರಂಭವಾಗಿದೆ. ನಿಜ. ರಾಹುಲ ಗಾಂಧಿ ಈಗಾಗಲೇ ಸಂಘಟನೆಯ ವಿಚಾರದಲ್ಲಿ ತಮ್ಮ ನಿರ್ಧಾರಗಳನ್ನು ಜಾರಿಗೊಳಿಸುತ್ತಿದ್ದಾರೆ. ಪಕ್ಷದಲ್ಲಿ ಆಯಕಟ್ಟಿನ ಜಾಗಗಳಲ್ಲಿ ಯುವಕರು, ಪ್ರತಿಭಾವಂತರನ್ನು ನೇಮಿಸಲಾಗುತ್ತಿದೆ. ಇತರೆ ಹಿಂದುಳಿದ ಜಾತಿಗಳಿಗೆ ಸೇರಿದ ವ್ಯಕ್ತಿಗಳ ಕಡೆಗೂ ಗಮನ ಹರಿದಿರುವುದೂ ಸಹಜ. ಅಲ್ಲೇ ಇರುವುದು ಓಟ್ ಬ್ಯಾಂಕ್‌ಗಳು. ಕಾಂಗ್ರೆಸ್ಸಿನಲ್ಲಿ ಕೇಂದ್ರ ಅಥವಾ ರಾಜ್ಯಗಳಲ್ಲಿ ಮಂತ್ರಿಗಳಾಗಿರುವವರು, ಸಂಘಟನೆಯಲ್ಲಿನ ಪದಾಧಿಕಾರಿಗಳ ಸ್ಥಾನವನ್ನು ತೆರವು ಮಾಡಬೇಕೆಂದೂ, ಚುನಾವಣೆಯಲ್ಲಿ ಸ್ಪರ್ಧಿಸಬೇಕಾದರೆ, ಅಂತಹವರು ಸಂಘಟನೆಯ ಅಧಿಕಾರವನ್ನು ಬಿಡಬೇಕೆಂದೂ ಕಟ್ಟಾಜ್ಞೆಯಾಗಿದೆ. ಅದು ಕೆಲವು ಕಡೆಗಳಲ್ಲಿ ಜಾರಿಗೆ ಬಂದಿರುವುದೂ ಉಂಟು. ಆದರೆ ಕರ್ನಾಟಕದಲ್ಲಿ ಆ ಪ್ರಕ್ರಿಯೆ ಆರಂಭವಾಗಿಲ್ಲ. ಇದೆಲ್ಲ ಆಗುವ ಕೆಲಸವಲ್ಲ ಎಂದು ಹಿಂದಿನಂತೆಯೇ ನಿರ್ಲಕ್ಷಿಸಿದವರು, ಅದಕ್ಕೆ ಮುಂದೆ ಬೆಲೆ ತೆರಬೇಕಾದೀತು. ಶುಕ್ರವಾರದ ದೆಹಲಿ ಸಭೆಯಲ್ಲಿ ರಾಹುಲ ಗಾಂಧಿ ಅವರ ಅನಧಿಕೃತ ಪಟ್ಟಾಭಿಷೇಕವೂ ಆಗಬಹುದು. ಆದರೆ ಅವರನ್ನೇ ಪ್ರಧಾನಿ ಪೀಠದ ಅಭ್ಯರ್ಥಿ ಎಂದು ಘೋಷಿಸುವುದು ಅನುಮಾನ. ಅದರ ಅಗತ್ಯವೂ ಇಲ್ಲ. ಈಗಿನ ಕಾಂಗ್ರೆಸ್ ಪರಿಸ್ಥಿತಿಯ್ಲಲಿ, ಪಕ್ಷಕ್ಕೆ ದೆಹಲಿಯಲ್ಲಿ ಸಿಂಹಾಸನದ ಮೇಲೆ ಅಧಿಕಾರವನ್ನು ಸ್ಥಾಪಿಸುವುದು ಸಾಧ್ಯವಾದರೆ, ರಾಹುಲ್ ಅವರನ್ನು ಬಿಟ್ಟರೆ ಬೇರೆ ಯಾರಾದರೂ ಕೊಡುವುದು ಸಾಧ್ಯವೇ?
ಆದರೆ ಅಸಲು ಕಾಂಗ್ರೆಸ್ಸಿಗೆ ಪ್ರಧಾನಿಯನ್ನು ಆರಿಸಿಕೊಳ್ಳುವ ಅವಕಾಶ ಸಿಗಬೇಕಲ್ಲ. ದೆಹಲಿ, ರಾಜಸ್ಥಾನ, ಮಧ್ಯಪ್ರದೇಶ, ಚತ್ತೀಸಘಡ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿನ ಸೋಲು ಪಕ್ಷದಲ್ಲಿ ಸಾಕಷ್ಟು ಹತಾಶೆ ಮನೆ ಮಾಡಲು ಅವಕಾಶವಾಗಿದೆ. ಅನೇಕರು, ಲೋಕಸಭೆ ಚುನಾವಣೆಗೆ "ಟಿಕೆಟ್ ಬೇಡ" ಎನ್ನುತ್ತಿದ್ದಾರೆಂದು ಹಲವು ವರದಿಗಳು ತಿಳಿಸಿವೆ. ರಾಹುಲ ಗಾಂಧಿಗೆ ಕೆಲವೇ ದಿನಗಳಲ್ಲಿ ಲಭ್ಯವಾಗಲಿರುವ ಸ್ಥಾನಮಾನ ಸುಮಾರು ಹದಿನೆಂಟು ತಿಂಗಳ ಹಿಂದೆಯೇ ಸಿಗಬೇಕಾಗಿತ್ತು ಎನ್ನುವ ವಾದ ಟಿ.ವಿ. ವಾಹಿನಿಗಳ ಚರ್ಚೆಯ ಕಾಲದಲ್ಲಿ ವ್ಯಕ್ತವಾಗಿದೆ. ಈಗ ತಡವಾಯಿತು ಎನ್ನುವ ಮಾತೂ ಕೇಳಿ ಬಂದಿದೆ. ಹಲವು ಕಿಡಿಗೇಡಿಗಳು ಅಯ್ಯೋ ಪಾಪ, ರಾಹುಲ ಗಾಂಧಿಗೆ ಈ ಸ್ಥಿತಿ ಬರಬಾರದಾಗಿತ್ತೆಂದು ಮರುಗಿದ್ದೂ ಆಗಿದೆ.
ಅದೆಲ್ಲ ಇದ್ದದ್ದೇ. ಆದರೆ ರಾಹುಲ ಗಾಂಧಿಗೆ ಈಗ ಕಾಂಗ್ರೆಸ್ಸಿನಲ್ಲಿ ಒಳ್ಳೆಯ ಸಲಹೆಗಾರರೇ ಇದ್ದಂತಿಲ್ಲ. ಅನುಭವಸ್ಥ ಹಿರಿಯರ ಗೊಣಗಾಟ ಈಗಾಗಲೇ ಆರಂಭವಾಗಿದೆ. ಅದು ಎಲ್ಲಿಗೆ ಹೋಗಿ ಮುಟ್ಟತ್ತೋ ಗೊತ್ತಿಲ್ಲ.
ಯಡಿಯೂರಪ್ಪ ಪುನರಾಗಮನ: ಹೆಚ್ಚು ಕಡಿಮೆ ರಾಹುಲ ಗಾಂಧಿ ಕಾಂಗ್ರೆಸ್ಸಿನಲ್ಲಿ ನಿರ್ಣಾಯಕವಾದ ಸ್ಥಾನದಲ್ಲಿ ಪ್ರತಿಷ್ಠಾಪನೆಯಾಗುತ್ತಿರುವಾಗಲೇ, ಕರ್ನಾಟಕದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಕರ್ನಾಟಕ ಜನತಾ ಪಾರ್ಟಿಯನ್ನು ವಿಸರ್ಜಿಸಿ "ಯಾವ ಷರತ್ತುಗಳೂ ಇಲ್ಲದೇ" ಭಾರತೀಯ ಜನತಾ ಪಾರ್ಟಿಯನ್ನು ಮೇಲ್ಮಟ್ಟದಲ್ಲೇ ಪ್ರವೇಶಿಸಿರುವುದು ಗಮನಾರ್ಹ. ಶುಕ್ರವಾರ ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿಯ ಒಂದು ಪ್ರಮುಖ ಸಭೆಯೂ ಸಮಾವೇಶಗೊಳ್ಳಲಿದೆ. ಅಲ್ಲಿ ಕರ್ನಾಟಕದ ವಿಚಾರವೇ ಹೆಚ್ಚು ಪ್ರಸ್ತಾಪವಾದರೂ ಆಶ್ಚರ್ಯವಿಲ್ಲ. ರಾಜ್ಯ ಬಿಜೆಪಿಯಲ್ಲಿ ಕೆಲವು ನಾಯಕರು ಯಡಿಯೂರಪ್ಪ ಅವರು ಬರಲಿ ಸಂತೋಷ, ಆದರೆ ಅವರ ಜತೆಯಲ್ಲೇ ಶೋಭಾ ಕರಂದ್ಲಾಜೆ ಮತ್ತು ಇತರರು ಬಂದರೆ, ಅವರಿಗೆಲ್ಲ ಸ್ಥಾನಮಾನ ಕೊಡುವುದಾದರೂ ಹೇಗೆ ಎಂದು ಹಿಂದೆ ಪ್ರಶ್ನಿಸಿದ್ದರು. ಈಗ ಆ ವಾತಾವರಣ ಇಲ್ಲ. ಶೋಭಾ ಕರಂದ್ಲಾಜೆ ಅವರಿಗೆ ಕನಿಷ್ಠ ಮೂರು ಕ್ಷೇತ್ರಗಳಿಂದ ಸ್ಪರ್ಧಿಸಲು ಆಹ್ವಾನ ಬಂದಿದೆ. ಈ ಬದಲಾವಣೆಯ ಹಿನ್ನೆಲೆಯಾದರೂ ಏನು? ಯಡಿಯೂರಪ್ಪ ಅವರು ಗೌರವದಿಂದ ಪಕ್ಷಕ್ಕೆ ಬಂದ ಮೇಲೆ ರಾಜ್ಯದ ಪ್ರಬಲ ರಾಜಕೀಯ ಜನವರ್ಗ, ವೀರಶೈವರ ಬೆಂಬಲವೂ ಸಿಗುವ ವಿಶ್ವಾಸ ಪಕ್ಷದಲ್ಲಿ ಕಂಡು ಬಂದಿದೆ, ಅಷ್ಟೇ ಸಾಕು. ಹತಾಶೆಯನ್ನು ಮನಸ್ಸಿನಿಂದ ಕಿತ್ತು ಹಾಕುವುದಕ್ಕೆ. ಆದರೆ ಯಡಿಯೂರಪ್ಪ ಅವರೇ ಅದ್ಯಾಕೋ ಹಿಂದೇಟು ಹಾಕುತ್ತಿದ್ದಾರೆ. ಒಂದು ಪತ್ರಿಕೆಯಲ್ಲಿ ಬಿಜೆಪಿಯ ಟಿಕೆಟ್ ಹಂಚಿಕೆಯ ವ್ಯವಹಾರದಲ್ಲಿ ಯಡಿಯೂರಪ್ಪ ಅವರಿಗೇ ನಿರ್ಣಾಯಕವಾದ ಅಧಿಕಾರ ಇರಬಹುದೆನ್ನುವ ವರದಿ ಪ್ರಕಟವಾಗಿದೆ. ಯಡಿಯೂರಪ್ಪ ಅವರ ಮಾತಿಗೆ, ಟಿಕೆಟ್ ಹಂಚಿಕೆಯಲ್ಲಿ ಸಾಕಷ್ಟು ಬೆಲೆ ಸಿಗಬಹುದು. ಎಷ್ಟಾದರೂ ಅವರು ಪಕ್ಷದ ಪರವಾಗಿ ಸರ್ಕಾರವನ್ನು ನಡೆಸಿರಲಿಲ್ಲವೇ? ಅವರಿಗೆ ಯಾರ ಶಕ್ತಿ ಎಷ್ಟು ಎನ್ನುವುದರ ಅರಿವಿದೆ. ಹಿಂದೆ ರಾಹುಲ ಗಾಂಧಿ ಕರ್ನಾಟಕದಲ್ಲಿನ 28 ಸ್ಥಾನಗಳಲ್ಲಿ 25 ಸ್ಥಾನಗಳನ್ನು ಕಾಂಗ್ರೆಸ್ ಪಡೆಯಲೇಬೇಕು ಎಂದು ಹೇಳಿರಬಹುದು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ಸಿನವರೇ ಅದನ್ನು ಬದಲಾಯಿಸಿಕೊಂಡಿದ್ದು, ಇಪ್ಪತ್ತು ಸ್ಥಾನಗಳನ್ನು ಪಡೆದರೆ ಸಾಕು ಎನ್ನುತ್ತಿದ್ದಾರಂತೆ. ಅಂತಹವರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಒಬ್ಬರು. ಸಿದ್ದರಾಮಯ್ಯ ಅವರು ಇತ್ತೀಚೆಗೆ ಪಕ್ಷದ ಮೇಳದಲ್ಲಿ ತಮ್ಮ ಅಹಿಂದ (ಅಲ್ಪ ಸಂಖ್ಯಾತ, ಹಿಂದುಳಿದ ದಲಿತ) ಪರವಾದ ನಿಲವನ್ನು ಪ್ರತಿಪಾದಿಸಿದ್ದು ಹಲವು ನಾಯಕರಿಗೆ ಹಿಡಿಸಿಲ್ಲ. ಆದರೆ ಸಿದ್ದರಾಮಯ್ಯ ಅವರಿಗೆ ಇದು ಹೊಸದೇನೂ ಅಲ್ಲ. ಅಹಿಂದ ಚಳವಳಿಯನ್ನು ಸಿದ್ದರಾಮಯ್ಯ ಅವರೇನೂ ಹುಟ್ಟುಹಾಕಲಿಲ್ಲ. ಅದರ ಬೀಜ ಬಿತ್ತಿದ್ದು ಮಾಜಿ ಸಚಿವ ವಯೋವೃದ್ಧ ಜಾಲಪ್ಪ ಅವರು. ಈಗಲೂ ಜಾಲಪ್ಪ ಅವರೇ ಸಿದ್ದರಾಮಯ್ಯ ಅವರಿಗೆ ಸಲಹೆಗಾರರ ಪಾತ್ರ ವಹಿಸಿದ್ದಾರೆ.
ಜಾತ್ಯತೀತ ಜನತಾದಳ: ಯಡಿಯೂರಪ್ಪ ಅವರು ಬಿಜೆಪಿಗೆ ಹೋದ ಮೇಲೆ, ಜಾತ್ಯತೀತ ಜನತಾದಳದ ವಿಧಾನಮಂಡಲದಲ್ಲಿ ಅಧಿಕೃತವಾಗಿ ಮಾನ್ಯತೆ ಪಡೆದ ವಿರೋಧ ಪಕ್ಷದ ಸ್ಥಾನ ಉಳಿಯುವುದು ಕಷ್ಟ. ಶ್ರೀರಾಮುಲು ಕಾಂಗ್ರೆಸ್ಸಿನ ನಾಲ್ವರು ಜೆಡಿಎಸ್‌ಗೆ ಬಂದರೆ ಮಾತ್ರ ಅದು ಸಾಧ್ಯ. ಆದರೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ತಮಗೆ ಯಾವ ತಂತ್ರಗಾರಿಕೆಯೂ ಈಗ ಬೇಕಾಗಿಲ್ಲ ಎಂದಿದ್ದಾರೆ. ದೇವೇಗೌಡರ ಮನಸ್ಸಿನಲ್ಲಿ ಏನಿದೆಯೋ ಗೊತ್ತಿಲ್ಲ.
ಈಗಲೂ ಪಕ್ಷದ ಪರವಾಗಿ ಬಿರುಸಿನಿಂದ ಓಡಾಡುತ್ತಿರುವುದು ಅವರೇ. ರಾಜ್ಯಮಟ್ಟದಲ್ಲಿ ದೇವೇಗೌಡರ ಮಾತೇ ನಡೆಯುವುದು. ಹಾಸನದಲ್ಲಿ ಗೌಡರ ಸ್ಪರ್ಧೆ ಖಚಿತವಾಗಿದೆ. ರಾಮನಗರದಲ್ಲಿ ಕುಮಾರಸ್ವಾಮಿ ಅಥವಾ ಅವರ ಪತ್ನಿ ಅನಿತಾ ಅವರು ಸ್ಪರ್ಧಿಸಬಹುದು. ಮಂಡ್ಯದಲ್ಲಿ ಹೋದಬಾರಿ ಕಾಂಗ್ರೆಸ್ಸಿನ ರಮ್ಯಾ ವಿರುದ್ಧ ಸೋತ ಪುಟ್ಟರಾಜು ಅವರನ್ನೇ ಆರಿಸಿದರೂ ಆರಿಸಬಹುದು. ಇದೆಲ್ಲವೂ ಮೇಲ್ನೋಟದ ಅನಿಸಿಕೆಗಳು ಮಾತ್ರ. ಸಾಮಾನ್ಯ ನೋಟಕ್ಕೆ ಕಣ್ಣಿಗೆ ಕಾಣಿಸದೇ ಇರುವ ಅನೇಕ ಸುಳಿಗಳು, ಒಳಸುಳಿಗಳು ರಾಜಕೀಯದಲ್ಲಿ ಹರಿದಾಡುತ್ತಲೇ ಇರುತ್ತವೆ. ಇವೆಲ್ಲದರ ನಡುವೆ ರಾಜ್ಯದ ಕಾಂಗ್ರೆಸ್ ಸಚಿವ ಸಂಪುಟಕ್ಕೆ ಡಿ.ಕೆ. ಶಿವಕುಮಾರ ಮತ್ತು ರೋಷನ್ ಬೇಗ್ ಅವರ ಸೇರ್ಪಡೆ, ಸದ್ಯದಲ್ಲೇ ಯಾವುದೇ ರೀತಿಯ ಅಲೆಗಳನ್ನು ನಿರ್ಮಿಸದೇ ಹೋದರೂ, ಅವರಿಬ್ಬರೂ ಸಾಮಾನ್ಯರಲ್ಲ ಎನ್ನುವುದನ್ನು ಮರೆಯುವಂತಿಲ್ಲ. ಶಿವಕುಮಾರ್ ಅವರಿಗೆ ಒಕ್ಕಲಿಗರ ಸಮಾಜದ ಒಂದು ವರ್ಗದ ಬೆಂಬಲವಿದ್ದರೆ, ರೋಷನ್ ಬೇಗ್ ಅವರ ರಾಷ್ಟ್ರೀಯ ಸಂಪರ್ಕಗಳನ್ನು ಹುಡುಕುವುದೂ ಕಷ್ಟ.
ರಾಜಕೀಯ ವಿಚಾರಗಳ ಪ್ರಸ್ತಾಪವಾದಾಗ, ಆಪ್‌ನ ಚಟುವಟಿಕೆಯನ್ನು ಕೈಬಿಡುವಂತಿಲ್ಲ. ಆ ಪಕ್ಷದಲ್ಲಿ ಬೆಂಗಳೂರು - ಮಂಗಳೂರಿನ ಪ್ರಭಾವ ದಟ್ಟವಾಗಿದೆ. ದೆಹಲಿಯ ವಿಧಾನಸಭೆ ಚುನಾವಣೆ ಸಮಯದಲ್ಲಿ ಆಮ್ ಆದ್ಮಿ ಪಕ್ಷದ ಪ್ರಚಾರದ ಸೇನೆಯಲ್ಲಿ ಬೆಂಗಳೂರು - ಮಂಗಳೂರು ಯುವಕರ ಪಾತ್ರ ದೊಡ್ಡದು. ಆಮ್ ಆದ್ಮಿ ಪಾರ್ಟಿಯ ಸಂಘಟನೆಗೆ ಮೇಧಾ ಪಾಟ್ಕರ್ ಅವರಂತಹ ಸಾಮಾಜಿಕ ಹೋರಾಟಗಾರ್ತಿಯ ಬೆಂಬಲವೂ ಸಿಕ್ಕಿರುವಂತಿದೆ. ಕಿರಣ ಬೇಡಿ, ಮೇದಾ ಪಾಟ್ಕರ್, ಆರ್.ಎಸ್. ಹಿರೇಮಠ, ಸಂತೋಷ ಹೆಗ್ಗಡೆ, ದೇವನೂರು ಮಹಾದೇವ ಅವರಂತಹವರ ಬೆಂಬಲದ ನೈತಿಕ ಶಕ್ತಿಯನ್ನು ಅಳಿಸಿ ಹಾಕುವುದು ಸುಲಭವಲ್ಲ. ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಜಾತಿ ಸಮ್ಮೇಳನದಲ್ಲೇ ಹೆಚ್ಚು ವಿಶ್ವಾಸವನ್ನು ಹೊಂದಿರುವಂತಿದೆ. ಈಗಾಗಲೇ ಅದಕ್ಕೆ ಸಿದ್ಧತೆ ನಡೆದಿದೆ.
ಕಿಡಿಗೇಡಿತನ: ಇತ್ತೀಚೆಗೆ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ- ಹಿಂದುಳಿದ ವರ್ಗದ ಜನರ ಮೇಳದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದೆ ಸಾರಾಯಿ ತಯಾರಿಕೆ ಹಾಗೂ ಸೇವನೆಯನ್ನು ನಿಷೇಧ ಮಾಡಿದ್ದು ಸರಿಯಲ್ಲ ಎಂದು ಹೇಳಿದ್ದನ್ನು, ಸದ್ಯದಲ್ಲೇ ಸಾರಾಯಿ ಮದ್ಯ ಪೇಟೆಗೆ ಹಿಂತಿರುಗುವ ಆಸೆಯನ್ನು ಚಿಗುರಿಸಿರುವುದು ನಿಜವೇ?
- ಸತ್ಯ
anisikeprabha@gmail.com