ಡಬ್ಬಿಂಗ್ನಿಂದ ನಿಜಕ್ಕೂ ಲಾಭವಾಗುವುದು ಯಾರಿಗೆ?

1960ರಲ್ಲಿ ಡಬ್ಬಿಂಗ್ ಸಂಸ್ಕೃತಿಯಿಂದ ಕನ್ನಡ ಭಾಷೆ, ಸಾಹಿತ್ಯ ಹಾಳಾಗುತ್ತಿದೆ. ಆದುದರಿಂದ ಅದನ್ನು ನಿರ್ಬಂಧಿಸಬೇಕು ಎಂದು ಕರೆ ಕೊಟ್ಟಿದ್ದರು ಅ.ನ.ಕೃಷ್ಣರಾಯರು. ಆಗ ಮಣಿಪಾಲದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿತ್ತು. ಅ.ನ.ಕೃ ಸಮ್ಮೇಳನದ ಅಧ್ಯಕ್ಷರಾಗಿದ್ದರು. 1960 ರಿಂದ 1964 ರವರೆಗೆ ಈ ಬಗ್ಗೆ ಅನೇಕ ಚರ್ಚೆಗಳು ನಡೆದವು. ಆಗ 8 ಚಿತ್ರಗಳು ಕನ್ನಡದಲ್ಲಿ ಬಿಡುಗಡೆಯಾದರೆ ಅನ್ಯಭಾಷೆಗಳಿಂದ 180 ಡಬ್ಬಿಂಗ್ ಚಿತ್ರಗಳು ಬಿಡುಗಡೆಯಾಗುತ್ತಿದ್ದವು. ಇಂತಹ ಸಂದರ್ಭದಲ್ಲಿ ಅ.ನ.ಕೃಷ್ಣರಾಯರು ಕೊಟ್ಟ ಕರೆ ಕನ್ನಡಾಭಿಮಾನಿಗಳನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿತು. ಸತತ 4 ವರ್ಷಗಳ ಹೋರಾಟದ ಅಂತಿಮ ಘಟ್ಟ ತಲುಪಿ ಡಾ. ರಾಜ್ ಕುಮಾರ್ ಹೋರಾಟದ ಮುಂದಾಳತ್ವ ವಹಿಸಿಕೊಂಡರು. ಡಾ. ರಾಜ್ ಮುಂದಾಳತ್ವದಲ್ಲಿ ಕನ್ನಡಿಗರೆಲ್ಲಾ ಸೇರಿ ಹೋರಾಟ ನಡೆಸಿದ ಫಲವಾಗಿ 1964 ರಲ್ಲಿ ಬಿಡುಗಡೆಯಾದ "ಮಾಯಾಬಜಾರ್" ಎಂಬ ಚಿತ್ರ ಕೊನೆಯ ಡಬ್ಬಿಂಗ್ ಚಿತ್ರವಾಯಿತು.
ಅಂದರೆ ಡಬ್ಬಿಂಗ್ ಸಂಸ್ಕೃತಿ ಕನ್ನಡತನಕ್ಕೆ ಕೊಡಲಿ ಪೆಟ್ಟು ಎಂದು ನಿರ್ಬಂಧಕ್ಕೆ ಕರೆ ಕೊಟ್ಟವರು ಕನ್ನಡ ಸಾರಸ್ವತ ಲೋಕದ ದಿಗ್ಗಜರೇ ಹೊರತು ಕೇವಲ ಸಿನಿಮಾದವರಲ್ಲ. ಆದುದರಿಂದ ಇಂದು ಡಬ್ಬಿಂಗ್ ಕೇವಲ ಸಿನಿಮಾ ಹಾಗೂ ಕಿರುತೆರೆಯವರ ಬದುಕಿನ ಪ್ರಶ್ನೆಯಾಗುವುದಿಲ್ಲ. ಇದು ಕನ್ನಡದ ಸಮಸ್ಯೆ. ಇದನ್ನು ಮನಗಂಡೇ 2011 ರಲ್ಲಿ ಬೆಂಗಳೂರಿನಲ್ಲಿ ನಡೆದ 77 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರಾಗಿದ್ದ ಕನ್ನಡ ನಿಘಂಟು ತಜ್ಞ ಡಾ. ಜಿ.ವೆಂಕಟಸುಬ್ಬಯ್ಯ ಡಬ್ಬಿಂಗ್ ಅನ್ನು ಪ್ರತಿಯೊಬ್ಬ ಕನ್ನಡಿಗನೂ ವಿರೋಧಿಸಲೇಬೇಕೆಂಬ ನಿರ್ಣಯವನ್ನು ಸಾಹಿತ್ಯ ಪರಿಷತ್ತಿನ 6ನೇ ಅತಿ ಪ್ರಮುಖ ನಿರ್ಣಯವನ್ನಾಗಿ ಸ್ವೀಕರಿಸಿದರು. ನಂತರ 2013 ರಲ್ಲಿ ನಡೆದ 79ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಕೊ. ಚೆನ್ನಬಸಪ್ಪ 4ನೇ ನಿರ್ಣಯವಾಗಿ ಡಬ್ಬಿಂಗ್ ವಿರೋಧಿಸಲು ತೀರ್ಮಾನ ತೆಗೆದುಕೊಂಡರು. ಅಂದರೆ ಕನ್ನಡ ಅಭಿಮಾನಿಗಳು, ಸಾಹಿತ್ಯಾಸಕ್ತರು, ಚಿಂತಕರು, ಲೇಖಕರು, ಕವಿಗಳು ಡಬ್ಬಿಂಗ್ನಿಂದ ಆಗುವ ಅನಾಹುತದ ಪರಿಣಾಮವನ್ನು ಅವಲೋಕಿಸಿ ಕನ್ನಡ ಭಾಷೆ-ಸಂಸ್ಕೃತಿ ಉಳಿಸುವ ಈ ಮಹತ್ವದ ನಿರ್ಧಾರವನ್ನು ಕೈಗೊಂಡರು.
ವಿಪರ್ಯಾಸದ ಪರಮಾವಧಿ ಏನೆಂದರೆ ಇಂದು ಡಬ್ಬಿಂಗ್ ಬೇಕು-ಬೇಡ ಎನ್ನುವ ಚರ್ಚೆಗಳನ್ನು ಮಾಡುತ್ತಿರುವವರು ಚಿತ್ರರಂಗ ಹಾಗೂ ಕಿರುತೆರೆಗೆ ಸೇರಿದವರು. ಹೀಗೆ ಇವರೆಲ್ಲಾ ಸೇರಿ ಡಬ್ಬಿಂಗ್ ಸಮಸ್ಯೆಯನ್ನು ತಮ್ಮ ಮನೆ ಸಮಸ್ಯೆಯನ್ನಾಗಿ ಸಾರ್ವಜನಿಕವಾಗಿ ಬಿಂಬಿಸುತ್ತಿದ್ದಾರೆ. ಇದು ಇವರ ಖಾಸಗಿ ಬದುಕಿನ ಸಮಸ್ಯೆಯಲ್ಲ. ಕನ್ನಡ ನಾಡು-ನುಡಿ-ಸಂಸ್ಕೃತಿಯ ಪ್ರಶ್ನೆ.
ಏಕೆಂದರೆ ಸುಮಾರು 50 ವರ್ಷಗಳು ನಮ್ಮ ಗಡಿಯಲ್ಲಿ ನುಸುಳಲೂ ಸಾಧ್ಯವಾಗದ ಡಬ್ಬಿಂಗ್ ಬಗ್ಗೆ ಇಡೀ ದೇಶವೇ ಮಾತನಾಡುತ್ತಿದೆ. ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಕೇರಳ ಹೀಗೆ ಎಲ್ಲಾ ರಾಜ್ಯಗಳಲ್ಲೂ ಇಂದು ಡಬ್ಬಿಂಗ್ ಮಾರಕವಾಗಿ ಕೂತಿದೆ. ಅವರೆಲ್ಲಾ ಇದು ಕರ್ನಾಟಕ ತೆಗೆದುಕೊಂಡ ನಿರ್ಧಾರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಇದು ಸಾಧ್ಯವಾದದ್ದು ನಮ್ಮ ಹಿರಿಯ ಚೇತನಗಳ ಅದಮ್ಯ ಹೋರಾಟದಿಂದ ಮಾತ್ರ.
ರಮಾನಂದ ಸಾಗರ್ "ರಾಮಾಯಣ" ದೂರದರ್ಶನದಲ್ಲಿ ಪ್ರಸಾರವಾಗಿ ಬಹು ಜನಪ್ರಿಯತೆ ಪಡೆದ ಸಮಯ. ಈ ಸಂದರ್ಭದಲ್ಲಿ ರಮಾನಂದ ಸಾಗರ್ ತಮ್ಮ ಧಾರಾವಾಹಿಯನ್ನು ಕನ್ನಡ ಬಿಟ್ಟು ಉಳಿದೆಲ್ಲಾ ಭಾಷೆಗಳಿಗೆ ಡಬ್ ಮಾಡಿದರು. ಈ ಬಗ್ಗೆ ಅವರು ರಾಜ್ಕುಮಾರ್ ಜೊತೆ ಚರ್ಚಿಸಿದಾಗ ಡಾ. ರಾಜ್ ಡಬ್ಬಿಗ್ಗೆ ಅವಕಾಶ ನೀಡಲಿಲ್ಲ. ಆದುದರಿಂದಲೇ ರಾಮಾಯಣ ಕನ್ನಡಕ್ಕೆ ಡಬ್ ಆಗಲಿಲ್ಲ. ಇನ್ನು ಸಂಜಯ್ ಖಾನ್ "ಸ್ವಾರ್ಡ್ ಆಫ್ ಟಿಪ್ಪು ಸುಲ್ತಾನ್" ಎಂಬ ಧಾರಾವಾಹಿಯನ್ನು ನಿರ್ಮಿಸಿ ದೂರದರ್ಶನದಲ್ಲಿ ಪ್ರಸಾರ ಮಾಡಿದಾಗ, ಅದು ಜನಪ್ರಿಯತೆ ಪಡೆಯಿತು. ಅವರೂ ಕೂಡ ಕನ್ನಡಕ್ಕೆ ಡಬ್ ಮಾಡಲು ರಾಜ್ ಹತ್ತಿರ ಮಾತುಕತೆ ನಡೆಸಿದರು. ರಾಜ್ ನಯವಾಗಿಯೇ ಖಾನ್ ಕೋರಿಕೆಯನ್ನು ತಿರಸ್ಕರಿಸಿದರು. ತಕ್ಷಣ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ಏರ್ಪಡಿಸಿದ ಸಂಜಯ್ ಖಾನ್ "ನನಗೆ 500 ಲೋಕಸಭಾ ಸದಸ್ಯರ ಬೆಂಬಲವಿದೆ. ಧಾರಾವಾಹಿಯನ್ನು ಕನ್ನಡಕ್ಕೆ ಡಬ್ ಮಾಡಿಯೇ ತೀರುತ್ತೇನೆ. ಇದಕ್ಕೆ ಬೇಕಾದರೆ ಕಾನೂನು ಹೋರಾಟ ಮಾಡುತ್ತೇನೆ. ನನ್ನನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ" ಎಂದರು.
ಆಗ ರಾಜ್, "ಮಾನ್ಯ ಸಂಜಯ್ ಖಾನ್ರಿಗೆ 500 ಜನ ಲೋಕಸಭಾ ಸದಸ್ಯರ ಬೆಂಬಲವಿರಬಹುದು. ಆದರೆ ಕನ್ನಡದ ಬೆನ್ನ ಹಿಂದೆ ಹೋರಾಟ ನಡೆಸಲು 5 ಕೋಟಿ ಕನ್ನಡಿಗರಿದ್ದಾರೆ ಎಂಬುದು ಮರೆಯಬಾರದು" ಎಂದರು. ಈ ಪ್ರತಿಕ್ರಿಯೆಗೆ ತತ್ತರಿಸಿದ ಖಾನ್ ಬೆಂಗಳೂರಿಗೆ ಬಂದು ರಾಜ್ಗೆ ಕ್ಷಮೆ ಕೇಳಿ ಡಬ್ಬಿಂಗ್ ವಿಷಯ ಕೈಬಿಟ್ಟರು.
ಇಂದು ಡಬ್ಬಿಂಗ್ ಮಾಡಲೇಬೇಕೆಂದು ಹಲವು ನಿರ್ಮಾಪಕರು ತುದಿಗಾಲ ಮೇಲೆ ನಿಂತಿದ್ದಾರೆ. ಇದಕ್ಕೆ ಇವರು ನೀಡುವ ಕಾರಣ ಕನ್ನಡ ನಾಯಕ ನಟರು ತಮಗೆ ಸಿನಿಮಾ ಮಾಡಲು ಕಾಲ್ಶೀಟ್ ನೀಡುತ್ತಿಲ್ಲ ಎನ್ನುವುದು. ಇದೆಷ್ಟು ಬಾಲಿಶ ವಾದ! ಈಗಾಗಲೇ ಪರಭಾಷೆಯಿಂದ ಬಿಡುಗಡೆಯಾಗುತ್ತಿರುವ ತಮ್ಮ ಚಿತ್ರಗಳನ್ನು ವಿತರಿಸುವ ಸಲುವಾಗಿ ಆಂಧ್ರ-ಕರ್ನಾಟಕ ಹಾಗೂ ತಮಿಳುನಾಡಿನ ಪ್ರಮುಖ ನಿರ್ಮಾಣ ಸಂಸ್ಥೆಗಳು ಗಾಂಧೀನಗರದಲ್ಲಿ ತಮ್ಮದೇ ಆದ ಆಫೀಸುಗಳನ್ನು ಪ್ರತಿನಿಧಿಗಳನ್ನು ಹೊಂದಿದ್ದಾರೆ. ಇನ್ನು ಬಹುಕೋಟಿಯಲ್ಲಿ ನಿರ್ಮಾಣವಾಗುತ್ತಿರುವ ಹಿಂದಿ-ಇಂಗ್ಲಿಷ್ ಚಿತ್ರಗಳೂ ಕೂಡಾ ನೇರವಾಗಿ ಕಂಪೆನಿಗಳಿಂದಲೇ ಬಿಡುಗಡೆಯಾಗುತ್ತಿವೆ. ಒಂದು ವೇಳೆ ಅವರು ಡಬ್ಬಿಂಗ್ ಮಾಡಿದರೆ ಅವರ ಚಿತ್ರಗಳನ್ನು ಅವರೇ ನೇರವಾಗಿ ರಿಲೀಸ್ ಮಾಡುತ್ತಾರೆಯೇ ಹೊರತು ನಮ್ಮವರನ್ನು ಕರೆದು ಯಾಕೆ ವಿತರಣೆ ಹಕ್ಕು ನೀಡುತ್ತಾರೆ?
ಇದೆಲ್ಲ ರಿಲಯನ್ಸ್ ಎಂಬ ಬಹುರಾಷ್ಟ್ರೀಯ ಕಂಪೆನಿ ತನ್ನ ಮಧ್ಯವರ್ತಿಗಳು-ದಲ್ಲಾಳಿಗಳನ್ನು ಬಿಟ್ಟು " ಕನ್ನಡ ಭಾಷೆಯ ಬೆಳವಣಿಗೆ ಗ್ರಾಹಕರ ಹಕ್ಕು" ಎಂದು ಹೇಳಿಕೊಂಡು ಮಾಡುತ್ತಿರುವ ಥಳುಕು ಹಾಗೂ ಕುತಂತ್ರ. ವ್ಯಾಪಾರಕ್ಕೆಂದು ನಮ್ಮಲ್ಲಿಗೆ ಬಂದು ನಮ್ಮನ್ನಾಳಿದ ಬ್ರಿಟಿಷರಂತೆ ಈಗ ರಿಲಯನ್ಸ್ ಕಂಪನಿ ಕೂಡಾ ಕನ್ನಡಿಗರ ಸಹನೆ ಪರೀಕ್ಷೆ ಮಾಡಲು ಮುಂದಾಗಿದೆ.
ಇನ್ನು ಈ ಈಕಂಕಊಿಖಿಐಖಿಐಕಃ ಈಕಂಂಐಖಖಐಕಃ ಕಋ ಐಃಉಐಆ ನೀಡಿರುವ ವರದಿಯಿಂದಾಗಿ ಇಂದು ಮತ್ತೊಮ್ಮೆ ಡಬ್ಬಿಂಗ್ ಕಳೇಬರಕ್ಕೆ ಜೀವ ಬಂದಿದೆ ಎಂದು ತಿಳಿದರೆ ಅದು ತಪ್ಪು. ನಮ್ಮ ಪ್ರಜಾಪ್ರಭುತ್ವದ ನೆಲೆಗಟ್ಟಿನಲ್ಲಿ ಜನರಿಗೆ ಅನುಕೂಲವಾಗುವಂತೆ ಸರ್ಕಾರಗಳ ಮೇಲೆ ಒತ್ತಡ ತರುವ ಹಕ್ಕು ನಮಗಿದೆ. ಕೇಂದ್ರ ರಾಜ್ಯ ಸರ್ಕಾರಗಳು ಒಂದಾಗಿ ಯೋಜನೆಗಳನ್ನು ಮಾಡಲು ಹೊರಟಾಗ ಜನ ವಿರೋಧಿ ಯೋಜನೆಗಳ ವಿರುದ್ಧ ಸುಪ್ರೀಂ ಕೋರ್ಟ್ ಹಲವಾರು ಬಾರಿ ತೀರ್ಪು ನೀಡಿ ಜನ ಸಮುದಾಯಗಳನ್ನು ರಕ್ಷಿಸಿದ ಉದಾಹರಣೆಗಳಿವೆ. ಜನಾಭಿಪ್ರಾಯಕ್ಕೆ ತಲೆ ತಗ್ಗಿಸಬೇಕಾಗುವುದು ಸರ್ಕಾರಗಳಿಗೆ ಅನಿವಾರ್ಯವಾಗುತ್ತದೆ.
ಅದಾಗ್ಯೂ ಈ ಡಬ್ಬಿಂಗ್ ಚರ್ಚೆ ಪ್ರಾರಂಭವಾದದ್ದು ಹೇಗೆ? ಕರ್ನಾಟಕ ಚಲನಚಿತ್ರ ಅಕಾಡೆಮಿಯನ್ನು ಸರಕಾರ ಸ್ಥಾಪಿಸಿತು. ಈ ಅಕಾಡೆಮಿಯ ಉದ್ದೇಶ ಕನ್ನಡ ಚಲನಚಿತ್ರ-ಕನ್ನಡ ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸುವುದು. ಅಕಾಡೆಮಿಯ ಪ್ರಥಮ ಅಧ್ಯಕ್ಷರಾಗಿ ನಾಗಾಭರಣರವನ್ನು ಸರಕಾರ ನಾಮಕರಣ ಮಾಡಿತು. ರಂಗಭೂಮಿಯ, ಹೋರಾಟದ ಹಿನ್ನೆಲೆಯಿಂದ ಬಂದ ನಾಗಾಭರಣರ ಬಗ್ಗೆ ಚಿತ್ರರಂಗಕ್ಕೆ ತುಂಬಾ ನಿರೀಕ್ಷೆಗಳಿದ್ದುದು ಸಹಜ. ನಾಗಾಭರಣ ತಮ್ಮ ಅಧಿಕಾರದ ಕೊನೆಯ ಅವಧಿಯಲ್ಲಿ ಕನ್ನಡ ಚಿತ್ರರಂಗಕ್ಕೆ ಡಬ್ಬಿಂಗ್ ಬೇಕೆ ಬೇಡವೇ ಎಂಬ ವಿಷಯವಾಗಿ ಸಮೀಕ್ಷೆ ಮಾಡಲು ನಿಂತರು. ಇಲ್ಲೇ ಮೊಟ್ಟ ಮೊದಲ ಪ್ರಮಾದ ನಡೆದದ್ದು. 1964 ರಿಂದ ಈ ಪ್ರಶ್ನೆ ಉದ್ಭವವಾಗೇ ಇರಲಿಲ್ಲ. ಈ ಸರ್ವೇ ಕಾರ್ಯದ ಅವಶ್ಯಕತೆ ಏನಿತ್ತೋ ನಾಗಾಭರಣರೇ ಹೇಳಬೇಕು. ಒಂದು ತೀರ್ಮಾನ ಅಧ್ಯಕ್ಷರು ತೆಗೆದುಕೊಂಡಾಗ ಅಕಾಡೆಮಿಯ ಸದಸ್ಯರ ಒಪ್ಪಿಗೆ ಬೇಕು.
ಈ ಸರ್ವೇ ನಡೆಯುತ್ತಿದ್ದಾಗಲೇ ಸದಸ್ಯರಿಗೆ ವಿಷಯ ತಿಳಿದು ಕನ್ನಡ ಚಲನಚಿತ್ರ ನಿರ್ದೇಶಕರ ಸಂಘ ಹಾಗೂ ಒಕ್ಕೂಟದ ಪದಾಧಿಕಾರಿಗಳು ಅಕಾಡೆಮಿಯ ಮುಂದೆ ಪ್ರತಿಭಟನೆ ಮಾಡಿ ಸಮೀಕ್ಷೆಯ ಪ್ರತಿಗಳನ್ನು ಸುಟ್ಟರು. ನಾಗಾಭರಣ ಯಾರಿಗೋಸ್ಕರ, ಯಾರ ಉದ್ಧಾರಕ್ಕೆ ಈ ನಿರ್ಣಯ ಕೈಗೊಂಡರೋ? ಹೀಗೆ ಕಾಲಕ್ರಮೇಣ ಅವರ ಬಾಯಿಂದ ಇವರ ಬಾಯಿಗೆ ಇಲ್ಲಿಂದ ಅಲ್ಲಿಗೆ ಈ ವಿಷಯ ಹೋಗಲು ಶುರು ಮಾಡಿದಾಗಲೇ ರಿಲಯನ್ಸ್ ಕಂಪೆನಿ ಎಚ್ಚೆತ್ತುಕೊಂಡು ತನ್ನ ಮಧ್ಯವರ್ತಿಗಳನ್ನು ಡಬ್ಬಿಂಗ್ ಪರ ಕೂಗು ಎಬ್ಬಿಸಲು ಬಿಟ್ಟಿದ್ದು. ಯಾಕೆಂದರೆ ಗ್ರಾಹಕರ ವೇದಿಕೆ ಹೆಸರಿನಲ್ಲಿ ಇಷ್ಟು ದಿನ ದಾಖಲಾಗದ ದೂರೊಂದು ಸಿಸಿಐ ನಲ್ಲಿ ದಾಖಲಾಯಿತು. ಸಿಸಿಐಗೆ ದೂರು ನೀಡಿದ ನಂತರ ವಿಚಾರಣೆ ಪ್ರಾರಂಭವಾಗಿ 7 ಜನರ ತಂಡ ಅಶೋಕ್ ಚಾವ್ಲಾ ನೇತೃತ್ವದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೊಂದಿಗೆ ಚರ್ಚಿಸಿ ಈಗ ತನ್ನ ಅಂತಿಮ ವರದಿ ನೀಡಿದೆ. ಈ ಹಿಂದೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕರ್ನಾಟಕ ಉಚ್ಚನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ 25-04-2013 ರಂದು ತಡೆಯಾಜ್ಞೆ ಪಡೆದಿದೆ. ನಂತರ 19-7-2013 ರಂದು ಪರ್ಮನೆಂಟ್ ಸ್ಟೇಗೆ ತನ್ನ ಅಪೀಲನ್ನು ದಾಖಲು ಮಾಡಿದೆ.
ನಮ್ಮ ಸರಕಾರ- ಜನ ಪ್ರತಿನಿಧಿಗಳು ಈ ಸಮಸ್ಯೆಗೂ ತಮಗೂ ಸಂಬಂಧವಿಲ್ಲ ಎನ್ನುವಂತೆ ಕೂತಿದ್ದಾರೆ. 1980 ರಲ್ಲಿ ನಡೆದ ಗೋಕಾಕ್ ಚಳವಳಿಯ ಸಂದರ್ಭದಲ್ಲಿ ನಟ ಡಾ.ರಾಜ್, ಪ್ರಕೃತಿ ವಿಕೋಪಗಳಾದಾಗ, ವಿಷ್ಣುವರ್ಧನ್ ತಮ್ಮ ಅನಾರೋಗ್ಯ ಕೂಡಾ ಲೆಕ್ಕಿಸದೇ ಕಲಾವಿದರನ್ನು ಬೀದಿ ಬೀದಿಗೆ-ಮನೆ ಮನೆಗೆ ಕರೆದೊಯ್ದು ಹಣ ವಸೂಲಿ ಮಾಡಿ ಸರಕಾರಗಳಿಗೆ ನೀಡಿದರು. ಇಂದು ಕನ್ನಡಕ್ಕೆ ಸಂಚಕಾರವಾಗುವಂತ ವಾತಾವರಣ ಕರ್ನಾಟಕದಲ್ಲಿ ಪ್ರಾರಂಭವಾಗುತ್ತಿದ್ದರೂ ನಾಡಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟ ಸಚಿವರು ದಿವ್ಯ ಮೌನ ವಹಿಸಿದ್ದಾರೆ. ಇನ್ನೊಂದು ಕಡೆ ವಿರೋಧ ಪಕ್ಷಗಳಾದ ಬಿಜೆಪಿ-ಜೆಡಿಎಸ್ ಕೂಡಾ ಇದರ ಬಗ್ಗೆ ಪ್ರತಿಕ್ರಿಯೆ ಕೂಡಾ ನೀಡಿಲ್ಲ.
ಕನ್ನಡ ಚಲನಚಿತ್ರ ಕಲಾವಿದರ ಸಂಘದ ಅಧ್ಯಕ್ಷರಾದ ಅಂಬರೀಶ್ ಹಾಗೂ ಸಂಸದೆ ರಮ್ಯಾ ಈ ಬಗ್ಗೆ ಈವರೆಗೂ ಹೇಳಿಕೆ ನೀಡಿಲ್ಲ. ಕನ್ನಡ ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಮಾತ್ರ ತಾನು ಡಬ್ಬಿಂಗ್ ವಿರೋಧಿ ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದಾರೆ. ಇನ್ನಾದರೂ ಸರಕಾರ ಈ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಿ ಕನ್ನಡತನ ಉಳಿಯುವಂತೆ ಹಾಗೂ ಮುಂದೆ ಎಂದೆಂದೂ ಕನ್ನಡ ಸಂಸ್ಕೃತಿಗೆ ಧಕ್ಕೆ ಬಾರದಂತೆ ಕಾನೂನನ್ನು ರೂಪಿಸಿ ತಮ್ಮ ಕನ್ನಡ ಸ್ವಾಭಿಮಾನವನ್ನು ಉಳಿಸಿಕೊಳ್ಳಲಿ.
ರಾಷ್ಟ್ರಕವಿ ಕುವೆಂಪು ನಮ್ಮ ನಾಡಗೀತೆ ರಚಿಸಿದಾಗ ಜೈ ಭಾರತ ಜನನಿಯ ತನುಜಾತೆ ಎಂದರು. ಇದು ಕನ್ನಡಿಗರ ಹೃದಯ ವೈಶಾಲ್ಯತೆಗೆ-ಭಾವೈಕ್ಯತೆಗೆ ಹಿಡಿದ ಕನ್ನಡಿ. ಬೇರೆ ಯಾವುದೇ ರಾಜ್ಯದ ನಾಡಗೀತೆಯೂ ತಮ್ಮ ರಾಜ್ಯದಿಂದ ಪ್ರಾರಂಭವಾಗುತ್ತದೆಯೇ ಹೊರತು ಭಾರತಾಂಬೆಯ ಮಗಳಾಗಿ ಅಲ್ಲ. ಆಂಧ್ರ ನಾಡಗೀತೆ ಪ್ರಾರಂಭವಾಗುವುದು "ಮಾ ತೆಲುಗು ತಲ್ಲಿಕಿ ಮಲ್ಲೆಪೂ ದಂಡ" ದಂಡ. ಇಂದು ಡಬ್ಬಿಂಗ್ ಬೇಕೆನ್ನುತ್ತಿರುವ ಹಲವು ನಿರ್ಮಾಪಕರೂ ನಮ್ಮವರೇ. ನಮ್ಮ ಅಣ್ಣ ತಮ್ಮಂದಿರೇ. ಈ ಬಹುರಾಷ್ಟ್ರೀಯ ಕಂಪೆನಿಗಳ ದಲ್ಲಾಳಿಗಳ ಮಾತುಗಳಿಗೆ ಮಾರು ಹೋಗಿದ್ದಾರೆ. ಇದು ನಮ್ಮ ಮನೆಯ ಜಗಳ. ನಿರ್ಮಾಪಕ ಅನ್ನದಾತ. ಈ ಅನ್ನದಾತನಿಗೆ ಚಿತ್ರರಂಗದ ನಾಯಕ ನಟರು ಒಂದಾಗಿ ನೆರವಿಗೆ ನಿಲ್ಲಲಿ. ನಮ್ಮ ನಮ್ಮಲ್ಲಿನ ಭಿನ್ನಾಭಿಪ್ರಾಯಗಳು ದೂರವಾಗಲಿ. ಈಗಿನ ಒಂದು ಸರ್ವೇ ಪ್ರಕಾರ ಕನ್ನಡ ಸಿನಿಮಾ ನೋಡುವ ವೀಕ್ಷಕರ ಸಂಖ್ಯೆ ಕೇವಲ 15 ಲಕ್ಷ. ಅಂದರೆ ಟಿಕೆಟ್ ಒಂದಕ್ಕೆ 50 ರೂ ನಂತೆ ನೋಡಿದರೂ ಯಾವುದೇ ಕನ್ನಡ ಸಿನಿಮಾ 7 ಕೋಟಿ 50 ಲಕ್ಷ ಗ್ರಾಸ್ ಕಲೆಕ್ಟ್ ಮಾಡಿದರೆ ವಿತರಕರ ಕಮೀಷನ್, ಖರ್ಚು, ಬಡ್ಡಿ, ಥಿಯೇಟರ್ ಬಾಡಿಗೆ ಹೋಗಿ ನಿರ್ಮಾಪಕನಿಗೆ ಬರುವ ಪಾಲು ಕೇವಲ 4 ಕೋಟಿ 50 ಲಕ್ಷ. ಇಷ್ಟು ಕಲೆಹಾಕಿದರೆ ಆ ಸಿನಿಮಾ ಸೂಪರ್ ಡೂಪರ್ ಹಿಟ್. ನಾವೆಷ್ಟು ಅಲ್ಪ ಸಂತೃಪ್ತರುನೋಡಿ 7 ಕೋಟಿ ಕನ್ನಡಿಗರಿಗೆ 15 ಲಕ್ಷ ಜನ. ಇದನ್ನಾದರೂ ಉಳಿಸಿಕೊಂಡು - ಬೆಳೆಸಿಕೊಂಡು ಹೋಗದಿದ್ದರೇ ಹೇಗೆ? ಕನ್ನಡ ನಮ್ಮ ಬದುಕಿನ ಅವಿಭಾಜ್ಯ ಅಂಗ ಹಾಗೂ ಮುಂಬರುವ ನಮ್ಮ ಪೀಳಿಗೆಗೆ ನಾವೆಲ್ಲಾ ಸೇರಿ ಹಸ್ತಾಂತರಿಸುವ ಏಕೈಕ ಆಸ್ತಿ. ಈ ನಮ್ಮ ಕನ್ನಡ ಆಸ್ತಿಯನ್ನು ಮುಂದಿನ ಜನಾಂಗಕ್ಕೆ ಜೋಪಾನವಾಗಿ ಹಸ್ತಾಂತರಿಸಲು ನಾವೆಲ್ಲಾ ಕಂಕಣಬದ್ಧರಾಗೋಣ.
- ಜಿ.ಎನ್. ರಾಜಶೇಖರ ನಾಯ್ಡು
ಗುಡಿಬಂಡೆ, ಪತ್ರಕರ್ತರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


