Hmmm... ಪಾಂಚ್

Updated on: 

* ಡಬ್ಬಿಂಗ್ ಬೇಕು ಅಂತಿರೋ ನಿರ್ಮಾಪಕ ಏನ್ರೀ ಇಷ್ಟ್ ದಿನ ಬೇಡ ಅಂತಿದ್ದೋರು, ಈಗ ಡಬ್ಬಿಂಗ್ ಬೇಕು ಅಂತಿದೀರಂತೆ... ಶೂಟ್ ಮಾಡ್‌ಬೇಕಾ?
ಅಯ್ಯೋ, ಶೂಟ್ ಮಾಡೋದೆಲ್ಲ ಹಳೇ ಸ್ಟೈಲು. ಈಗ ಯಾರೋ ಶೂಟ್ ಮಾಡಿದ್ದಕ್ಕೆ ನಾವು ಮಾತು ಕೊಟ್ಟರೆ ಸಾಕು. ಸಿನಿಮಾ ರೆಡಿ.
* ಅಂತೂ ನಮ್ಮ ದೇಶದಲ್ಲಿ ಮಾತು ಬಂದೋರೇ ಬದುಕೋದು ಅಂತ ಪ್ರೂವ್ ಆಯ್ತು ಬಿಡಿ. ಅದ್ಸರಿ ನಿಮ್ ಪ್ರಕಾರ ಡಬ್ಬಿಂಗ್‌ನಿಂದ ಏನು ಲಾಭ?
ನಮ್ಮಲ್ಲಿ ಎಲ್ಲಾ ಲೋ ಬಜೆಟ್ ಸಿನಿಮಾ, ಸಣ್ ಇಂಡಸ್ಟ್ರಿ ಅಂತಾರಲ್ಲ. ಈಗ ಬೇರೆ ಭಾಷೆಯ ಹೈ ಬಜೆಟ್ ಫಿಲ್ಮ್‌ಗಳನ್ನ ಡಬ್ ಮಾಡಿ ನೋಡಿ ಕನ್ನಡ ಸಿನಿಮಾಗಳೂ ಹೈ ಬಜೆಟ್ ಆಗಿವೆ ಅಂತ ಹೇಳ್ಕೊಬಹುದಲ್ಲ..
* ಆಹಾ..ಏನ್ ತಲೆ...ಇದೊಂಥರಾ, ಇಮೇಲ್ ಕಳಿಸ್‌ಬಿಟ್ಟು, ಹ್ಯಾಂಡ್ ರೈಟಿಂಗ್ ಹೆಂಗಿದೆ ಅಂತ ಕೆಳಿದಂಗಾಯ್ತು..'ಅಲ್ಲರಿ'...ಸಾರಿ 'ಅಲ್ರೀ', ತೆಲುಗಲ್ಲಿ 'ನೇನು ಆಂಧ್ರಾವಾಡು' ಅಂತ ಹೇಳೋ ಅಲ್ಲು ಅರ್ಜುನ್, ಡಬ್ಬಿಂಗ್ ಆದ ಕನ್ನಡ ಫಿಲ್ಮ್‌ನಲ್ಲಿ 'ನಾನು ಕನ್ನಡದ ಕಂದ' ಅಂದ್ರೆ ನಮ್ ಜನ 'ಅಮಿಕ್ಕಂಡ್ ಇರಪ್ಪಾ' ಅನ್ನಲ್ವೇ?
ತೆಲುಗ ಸಿನಿಮಾದಲ್ಲ್ಲಿ ಆಂಧ್ರ ರಿಜಿಸ್ಟ್ರೇಶನ್ ಇರೋ ಗಾಡಿಗಳನ್ನ ಇಲ್ಲಿ ಕರ್ನಾಟಕ ರಿಜಿಸ್ಟ್ರೇಶನ್ ಮಾಡ್ಸೋಕಾಗುತ್ಯೇ? ಇದೂ ಹಂಗೇನೆ. ಅಡ್ಜಸ್ಟ್ ಮಾಡ್ಕೊಬೇಕಪ್ಪ.
* ಕನ್ನಡಿಗರು ಅಡ್ಜಸ್ಟ್ ಮಾಡ್ಕೊಳ್ಳೋದ್ರಲ್ಲಿ ಎಕ್ಸ್‌ಪರ್ಟ್ಸ್ ಬಿಡಿ. ಹೋಗ್ಲಿ ನೀವಲ್ ಡಬ್ ಮಾಡ್ತಾ ಇರೋ ಮೊದಲ  ಸಿನಿಮಾ ಯಾವುದು?
ಮಡ್ರಾಸ್ ಕೆಫೆ. ಕನ್ನಡದಲ್ಲಿ ಉಡುಪಿ ಉಪಹಾರ್ ಅಂತ ಹೆಸರಿಟ್ಟಿದೀವಿ..
* ಇಂಗ್ಲಿಷ್ ಮೀಡಿಯಂ ಸ್ಕೂಲಲ್ಲಿ ನಿಮ್ ಮಗನಿಗೆ ಮಿಸ್ ಇಂಗ್ಲಿಷ್‌ನಲ್ಲಿ ಹೇಳಿಕೊಟ್ಟಿದ್ದೆಲ್ಲ್ಲಾ ಅರ್ಥ ಆಗುತ್ತೆ, ಆದ್ರೆ ಟಿವಿಲಿ ಕಾರ್ಟೂನ್, ಡಿಸ್ಕವರಿ ಚಾನೆಲ್ ನೋಡೋವಾಗ ಮಾತ್ರ ಅರ್ಥ ಆಗಲ್ವಂತೆ. ಏನ್ ಸಮಸ್ಯೆ ಅವಂದು? ಎಲ್ಲದ್ರೂ ಒಳ್ಳೆ ಕಡೆ ತೋರ್ಸೋದಲ್ವಾ?
ಈಗ ಸಮಸ್ಯೆ ಅವಂದಲ್ಲ, ನಂದು. ಈ ಡಬ್ಬಿಂಗ್ ಬರೋದ್ರೊಳಗೆ ಅವನಿಗೆ ಮೊದಲು ಕನ್ನಡ ಕಲಿಸಿ ನನ್ನ ಮಾನ ಉಳಿಸ್ಕೊಬೇಕು.  
(ಕಾಲ್ಪನಿಕ ಸಂದರ್ಶನ)
ಒಮ್ಮೆ ಭೇಟಿ ಕೊಡಿ
ಅನವಶ್ಯಕ ಖರ್ಚು ಮಾಡೋದು, ಎಲ್ಲರಿಗೂ ಅಲ್ಲದಿದ್ದರೂ ಕೈಯಲ್ಲಿ ದುಡ್ಡಿರೋರ ಸಮಸ್ಯೆ. ಆ ಕ್ಷಣಕ್ಕೆ ಇಂಥ ಶಾಪಿಂಗ್ ಖುಷಿ ಕೊಟ್ಟರೂ ಮರುದಿನವೇ ಅಯ್ಯೋ ಸುಮ್ನೆ ವೇಸ್ಟ್ ಮಾಡಿದೆ ಎಂದು ಕೊರಗುವವರನ್ನು ನೀವು ಸಾಕಷ್ಟು ನೋಡಿರಬಹುದು. ಅಂಥ ಶಾಪಿಂಗ್ ಚಟ ನಿಮಗೂ ಇದ್ದರೆ ಅದನ್ನು ಕಂಟ್ರೋಲ್ ಮಾಡಿಕೊಳ್ಳಲು ಇಲ್ಲಿ ಒಂದಿಷ್ಟು  ಉಪಾಯಗಳಿವೆ.
* b‌it.ly/​Kj0DB‌r * b‌it.ly/​L‌k‌g‌u2J
* b‌it.ly/​1dEs1Gq * b‌it.ly/​1‌i95lA5
* y‌h‌o‌o.‌it/​1e0Pe0‌o​

ಹರಿ-ಕಥೆ
ಖೇಮು ಒಂದ್ಸಲ ಕಾರಲ್ಲಿ ಹೋಗುವಾಗ ಕಾಡಲ್ಲಿ ಅವನ ಕಾರ್ ಕೆಟ್ಟೋಯ್ತು. ಅಲ್ಲಿ ಒಂದು ಆಶ್ರಮ ಕಾಣಿಸ್ತು.  ಅಲ್ಲಿದ್ದ ಸನ್ಯಾಸಿಯೊಬ್ಬನನ್ನು, ನಾನು ಇವತ್ತು ರಾತ್ರಿ ಇಲ್ಲೇ ಇರಬಹುದಾ ಅಂತ ಕೇಳ್ದ. ಸನ್ಯಾಸಿ ಬರೀ ಮಲಗಲು ಜಾಗ ಕೊಟ್ಟಿದ್ದಷ್ಟೇ ಅಲ್ಲ, ಊಟ ತಿಂಡಿ ನೀರು ಕೊಟ್ಟು, ಕಾರನ್ನು ರಿಪೇರಿ ಮಾಡಲು ಸಹಕರಿಸಿದ. ರಾತ್ರಿ ಮಲಗಿದ ಖೇಮುಗೆ ಒಂದು ಹೊತ್ತಿನಲ್ಲಿ ವಿಚಿತ್ರ ಶಬ್ದ ಕೇಳಿಸಿತು. ಬೆಳಗ್ಗೆ ಎದ್ದು ಸನ್ಯಾಸಿಯನ್ನು ಕೇಳಿದ 'ಅದೇನದು ರಾತ್ರಿ ಬರ್ತಾ ಇದ್ದ ಸದ್ದು?'. ಅದಕ್ಕೆ ಸನ್ಯಾಸಿಯ ಉತ್ತರ 'ಕ್ಷಮಿಸಿ, ಅದನ್ನು ನಿಮಗೆ ಹೇಳೋಕಾಗಲ್ಲ, ಯಾಕಂದ್ರೆ ನೀವು ಸನ್ಯಾಸಿ ಅಲ್ಲ'. ಮನಸ್ಸಲ್ಲಿ ಕುತೂಹಲ ಇಟ್ಕೊಂಡೇ ಖೇಮು ಅಲ್ಲಿಂದ ವಾಪಸ್ ಬಂದ. ಸ್ವಲ್ಪ ದಿನಗಳ  ನಂತರ ಖೇಮು ಮತ್ತೆ ಅದೇ ದಾರಿಯಲ್ಲಿ ಹೋದ ಕಾರ್ ಕೆಟ್ಟೋಯ್ತು. ಎಲ್ಲವೂ ರಿಪೀಟ್ ಆಯ್ತು. ಬೆಳಿಗ್ಗೆ ಎದ್ದು ಖೇಮು ಕೇಳಿದ ಏನದು ಸದ್ದು? ಸನ್ಯಾಸಿ ಉತ್ತರ 'ಕ್ಷಮಿಸಿ, ಅದನ್ನು ನಿಮಗೆ ಹೇಳೋಕಾಗಲ್ಲ, ಯಾಕಂದ್ರೆ ನೀವು  ಸನ್ಯಾಸಿ ಅಲ್ಲ'. ಖೇಮುಗೆ ಕುತೂಹಲ ತಡೆಯೋಕಾಗಲಿಲ್ಲ. ಅದನ್ನು ತಿಳ್ಕೊಳ್ಳೋಕೆ ಸನ್ಯಾಸಿನೇ ಆಗಬೇಕು ಅಂದ್ರೆ ಹೇಳಿ, ಸನ್ಯಾಸಿ ಆಗೋಕೆ ಏನು ಮಾಡಬೇಕು ಅಂದ. ಅದಕ್ಕೆ ಸನ್ಯಾಸಿ ಹೇಳಿದ್ದು, ಈ ಭೂಮಿಯನ್ನು ಒಂದು ಬಾರಿ ಸುತ್ತು ಹಾಕಿ, ನಿನ್ನ ದಾರಿಯಲ್ಲಿ ಎಷ್ಟು ಮರಗಳಿದ್ದವು, ಎಷ್ಟು ಕಲ್ಲುಗಳು ಸಿಕ್ಕವು ಅನ್ನೋದನ್ನು ಎಣಿಸಿ ಹೇಳಬೇಕು. ಸರಿ ಖೇಮು ಭೂಮಿ ಸುತ್ತಲು ಹೊರಟ, ಸುಮಾರು ವರ್ಷಗಳ ನಂತರ ಮತ್ತೆ ಆಶ್ರಮಕ್ಕೆ ಬಂದ. ನನ್ನ ದಾರಿಯಲ್ಲಿ 333333333333 ಮರಗಳು, 999999999999 ಕಲ್ಲುಗಳಿದ್ದವು ಎಂದ. ಸನ್ಯಾಸಿ ಅದನ್ನು ಕೇಳಿ ಈಗ ನೀನು ಸನ್ಯಾಸಿ ಆದಂತೆ, ಬಾ ಆ ಶಬ್ದದ ರಹಸ್ಯ ಹೇಳುತ್ತೇನೆ ಎಂದು ಕರೆದುಕೊಂಡು ಹೋದ. ಶಬ್ದ ಬರುತ್ತಿದ್ದ ಮರದ ಬಾಗಿಲಿನ ರೂಮಿನ ಕೀ ಕೊಟ್ಟ. ಖೇಮು ಅದನ್ನು ತೆರೆದರೆ ಅದರೊಳಗೆ ಇನ್ನೊಂದು ಕಬ್ಬಿಣದ ಬಾಗಿಲ ರೂಮ್, ಅದರೊಳಗೆ, ಬೆಳ್ಳಿ, ಬಂಗಾರ, ವಜ್ರದ ಬಾಗಿಲುಗಳನ್ನು ತೆರೆಯುತ್ತಾ ಹೋದಂತೆ ಕೊನೆಯ ಬಾಗಿಲು ಬಂತು. ಖೇಮು ಆ ಬಾಗಿಲು ತೆರೆದು ನೋಡಿದವನೇ 'ಅಯ್ಯೋ, ಆ ಶಬ್ದ ಬರ್ತಾ ಇದ್ದುದು ಇದರಿಂದಾನಾ?' ಎಂದು ಒಂದು ಕ್ಷಣ ಆಶ್ಚರ್ಯಗೊಂಡ. ಅಲ್ಲಿ ಅಂಥದ್ದೇನಿತ್ತು? ಏನೋ ಇತ್ತು, ಆದ್ರೆ, 'ಕ್ಷಮಿಸಿ, ಅದನ್ನು ನಿಮಗೆ ಹೇಳೋಕಾಗಲ್ಲ, ಯಾಕಂದ್ರೆ ನೀವು ಸನ್ಯಾಸಿ ಅಲ್ಲ'.
ಸ್ಕ್ಯಾಂಡಲ್‌ವುಡ್
ಶಿವರಾಜ್‌ಕುಮಾರ್ ಈಸ್ ಬ್ಯಾಕ್. ಇದು ಭಜರಂಗಿಗೆ ಸಂಬಂಧಪಟ್ಟ ಸುದ್ದಿ ಅಲ್ಲ. ಸಿಂಗಾಪುರದಿಂದ ಶಿವಣ್ಣ ಮತ್ತು ರಾಘವೇಂದ್ರ ರಾಜ್‌ಕುಮಾರ್ ಶುಕ್ರವಾರವೇ ವಾಪಸ್ಸು ಬಂದಿದ್ದಾರೆ. ಇನ್‌ಫ್ಯಾಕ್ಟ್ ಇದು ರಾಘವೇಂದ್ರ  ರಾಜ್‌ಕುಮಾರ್ ಈಸ್ ಬ್ಯಾಕ್ ಎಂಬ ಸುದ್ದಿ ಆಗಬೇಕಿತ್ತು. ಆದರೆ ಸದ್ಯಕ್ಕೆ ನಡೆಯುತ್ತಿರುವ ಡಬ್ಬಿಂಗ್ ಬಗೆಗಿನ ಬಿಸಿ ಚರ್ಚೆಗಳಿಂದಾಗಿ ಈ ಸುದ್ದಿ ಶಿವರಾಜ್‌ಕುಮಾರ್ ಈಸ್ ಬ್ಯಾಕ್ ಎನ್ನುವಂತಾಗಿದೆ. ಭಾನುವಾರ ಬೆಂಗಳೂರಿಗೆ ಬರಬೇಕಿದ್ದ ಶಿವಣ್ಣ ಅದೇ ದಿನ ಡಬ್ಬಿಂಗ್ ಬಗ್ಗೆ ಕಲಾವಿದರ ಮೀಟಿಂಗ್ ಇದ್ದ ಕಾರಣ ಶುಕ್ರವಾರವೇ ಬಂದಿದ್ದಾರೆ. ಅತ್ತ ರಾಘವೇಂದ್ರ ರಾಜ್‌ಕುಮಾರ್ ಆರೋಗ್ಯವಾಗಿದ್ದಾರೆ ಎಂಬ ಸಿಹಿಸುದ್ದಿಯ ಜೊತೆ ಇತ್ತ ಡಬ್ಬಿಂಗ್‌ನಿಂದಾಗಿ ಕನ್ನಡ ಚಿತ್ರರಂಗದ ಆರೋಗ್ಯ ಹದಗೆಟ್ಟಿದೆ ಎಂಬುದು ಎಲ್ಲರಿಗೂ ಗೊತ್ತು. ಇತ್ತೀಚೆಗೆ ಕೆಲವು ಊಸರವಳ್ಳಿ ಜಾತಿಯ ನಿರ್ಮಾಪಕ, ನಿರ್ದೇಶಕರು ಇದ್ದಕ್ಕಿದ್ದಂತೆ ರಾಗ ಬದಲಾಯಿಸಿ ಡಬ್ಬಿಂಗ್ ಬೇಕು ಎನ್ನುತ್ತಿರುವ ಹೊತ್ತಲ್ಲಿ ಭಾನುವಾರದ ಕಲಾವಿದರ ಸಂಘದ ಚರ್ಚೆಯಲ್ಲಿ ಶಿವರಾಜ್‌ಕುಮಾರ್ ಯಾವ ಯೋಚನೆ ಮತ್ತು ಯೋಜನೆಗಳನ್ನು ಮುಂದಿಡಲಿದ್ದಾರೆ ಎಂಬುದು ಆಸಕ್ತಿಕರ. ಆದರೆ, ನಮಗೆ ಡಬ್ಬಿಂಗ್ ಬೇಡ ಎನ್ನುವ ಸಣ್ಣಮಟ್ಟದ ಮೌಖಿಕ ಪ್ರತಿಭಟನೆಯಿಂದ ಈಗ ಏನೂ ಉಪಯೋಗವಿಲ್ಲ. ಅದನ್ನು ಬಿಟ್ಟು, ಕನ್ನಡದ ಎಲ್ಲ ಸ್ಟಾರ್‌ಗಳೂ ಒಂದಾಗಿ, ಎಲ್ಲರ ಅಭಿಮಾನಿಗಳೂ, ಕನ್ನಡತನ ಉಳಿಸುವ ಸಮಾನಮನಸ್ಕರ ಜೊತೆ ಸೇರಿ, ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ನಿರ್ಧರಿಸಿದರೆ, ಕನ್ನಡ ಚಿತ್ರಗಳ ಕೊಲೆ ನಡೆಯುವುದನ್ನು ತಪ್ಪಿಸಬಹುದೇನೋ.
ಡಬ್ಕುಡಬಲ್ ತುದಾಂಡಲ್...
ಒಂದು ಆಸ್ಪತ್ರೆಯ ಸಿಬ್ಬಂದಿ ಇನ್ನೊಂದು ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದು, ಅವರಿಗೆ ಆತ್ಮೀಯ 'ಟ್ರೀಟ್‌ಮೆಂಟ್‌' ಸಿಕ್ಕರೆ
ಗುಡ್ 'ಹಾಸ್ಪಿಟಾಲಿಟಿ'
'ಎಣ್ಣೆ' ಎಷ್ಟು ಪವರ್‌ಫುಲ್ ಎನ್ನುವುದಕ್ಕೆ ಉದಾಹರಣೆ:
ದೇವಯಾನಿ ವಿಷಯದಲ್ಲಿ ನಿನ್ನೆಯವರೆಗೂ ಬಗ್ಗದ ಅಮೆರಿಕಾ, ಅಲ್ಲಿನ ರಾಜತಾಂತ್ರಿಕರ ಮೋಜಿಗಾಗಿ ಭಾರತದಲ್ಲಿ  ಒದಗಿಸಲಾಗಿದ್ದ ಬಾರ್, ಕ್ಲಬ್‌ಗಳನ್ನು ಮುಚ್ಚಿಸಿದ ತಕ್ಷಣ ದೇವಯಾನಿ ಅವರನ್ನು ಸ್ವದೇಶಕ್ಕೆ ಕಳಿಸಲು ಅಮೆರಿಕಾ ಒಪ್ಪಿದೆ.
ಡಬ್ಬಿಂಗ್ ಸ್ಪೆಷಲ್
ಡಬ್ಬಿಂಗ್ ಬೇಕು ಎನ್ನುವವರು ಮುಂದಿನ ದಿನಗಳಲ್ಲಿ ಯಾವ ರೀತಿಯ ಧೋರಣೆ ತೋರಿಸಬಹುದು?
ಅದ್ಯಾವುದೋ ಕನ್ನಡ ಸಿನಿಮಾ ಚೆನ್ನಾಗಿದೆಯಂತೆ. ಆದ್ರೂ ಅದು ತೆಲುಗಿಗೋ, ತಮಿಳಿಗೋ ರಿಮೇಕ್ ಆಗಿ ಆಮೇಲೆ ಮತ್ತೆ ಕನ್ನಡಕ್ಕೆ ಡಬ್ ಆಗಿ ಬರಲಿ. ಆಗ ನೋಡ್ತೀವಿ.
3 ಈಡಿಯೆಟ್ಸ್ ಸಿನಿಮಾ ಕನ್ನಡಕ್ಕೆ ಡಬ್ ಆದರೆ ಅದಕ್ಕೆ 'ಮೂವರು ಮೂರ್ಖರು' ಅಂತ ಹೆಸರಿಡ್ತಾರೆ.
ಅದರ ಡಬ್ಬಿಂಗ್ ರೈಟ್ಸ್ ಇನ್ನೊಬ್ಬ ನನ್ನತ್ರ ಇದೆ ಅಂತ ಜಗಳ ಆಡಿ 'ಮೂವರು ಮುಠ್ಠಾಳರು' ಅಂತ ಹೆಸರಿಡ್ತಾನೆ.
ಹಿಂದಿಯ 'ವೆಲ್‌ಕಮ್ ಟು ಸಜ್ಜನ್‌ಪುರ್‌' ಸಿನಿಮಾ ಕನ್ನಡಕ್ಕೆ ಡಬ್ ಆದ್ರೆ
ವೆಲ್‌ಕಮ್ ಟು ಸಕಲೇಶ್‌ಪುರ್
'ನನ್ನ ಗಂಡನ ಹೆಂಡತಿ' ಅನ್ನೋ ಡಬ್ಬಿಂಗ್ ಸಿನಿಮಾ ರೆಡಿ ಆಗಿದೆಯಂತೆ.
ಈ ಚಿತ್ರಕ್ಕೆ ಪ್ರೇಕ್ಷಕರು ಅಂತ ಯಾರಾದ್ರು ಇದ್ರೆ, ಅವರಿಗೆ, ಇದು ಕನ್ನಡ ಸಿನಿಮಾನಾ ಅಂತ ಈ ಚಿತ್ರದ ಶೀರ್ಷಿಕೆಯಲ್ಲಿರುವಷ್ಟೇ ಗೊಂದಲ ಆಗಬಹುದು.



   -ಹರಿ
harikannadaprabha@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com