ದುಡಿಮೆ ಹಾಗೂ ಓದುವ ನೆಪದಲ್ಲಿ ಹಾಸ್ಟೆಲ್ / ಪಿ.ಜಿ ಸೇರುವ ಎಲ್ಲ ಹುಡುಗಿಯರಿಗೂ ಅಮ್ಮನ ಪ್ರೀತಿ, ಕಾಳಜಿ ಹಾಗೂ ಅಕ್ಕರೆ ಬಿಡದೇ ಕಾಡುತ್ತದೆ. ಅಂಥ ಸಂದರ್ಭದಲ್ಲಿ ಹಾಸ್ಟೆಲ್ / ಪಿ.ಜಿಯಲ್ಲಿ ಕುಳಿತ ಹೆಣ್ಣು ಮಕ್ಕಳ ಮನದ ಪಿಸುಮಾತಿನ ಒಂದು ಝಲಕ್ ಇಲ್ಲಿದೆ.....
***
ಪ್ರೀತಿಯ ಅಮ್ಮ, ಯಾವುದೇ ವಸ್ತುವಿನ ಮಹತ್ವ ಅರಿವಾಗುವುದು, ಅದನ್ನು ಪಡೆಯುವ ಮೊದಲು ಮತ್ತು ಕಳೆದುಕೊಂಡ ನಂತರ ಎಂಬ ಮಾತಿದೆ. ನಿನ್ನ ಪ್ರೀತಿಯ ಬೆಲೆ ನನಗೆ ಈಗ ಗೊತ್ತಾಗ್ತಾ ಇದೆಯಮ್ಮ. ಇಷ್ಟು ವರ್ಷ ನೀನು ನನ್ನನ್ನು ಜೋಪಾನ ಮಾಡಿದ ರೀತಿ ಹಾಗೂ ಪ್ರೀತಿಸಿದ ಬಗೆ ಅರಿಯದೇ ಕುರುಡಳಂತೆ ವರ್ತಿಸಿದೆ.
ಅಮ್ಮಾ, ಈ ಹಾಸ್ಟೆಲಿನ ವಾಸ ದೇವರಿಗೇ ಪ್ರೀತಿ. ಇಲ್ಲಿಗೆ ದಾಖಲಾದ ನಂತರದಲ್ಲಿ ಪ್ರತಿ ನಿಮಿಷವೂ ನಿನ್ನ ನೆನಪಾಗುತ್ತಿದೆ. ಎಷ್ಟೊಂದು ಒಳ್ಳೆಯವಳಮ್ಮಾ ನೀನು.... ಮನೆಯಲ್ಲಿದ್ದಾಗ, ಬೆಳಗಿನ ಜಾವಕ್ಕೇ ನನ್ನನ್ನು ಎಬ್ಬಿಸುತ್ತಿದ್ದೆ. ನಾನು ನಿದ್ರೆಗಣ್ಣಲ್ಲೇ ಏನೇನೋ ವಟಗುಟ್ಟುತ್ತ ಇದ್ದಕ್ಕಿದ್ದಂತೆಯೇ ಎದ್ದುಬಿಟ್ಟರೆ 'ಅಯ್ಯಯ್ಯೋ, ಎಡಮಗ್ಗುಲಿಗೆ ತಿರುಗಿಕೊಂಡು ಎದ್ದುಬಿಟ್ಟೆಯಲ್ಲ ಮಗಳೇ, ಅದು ಒಳ್ಳೆಯದಲ್ಲ, ಐದು ನಿಮಿಷ ಮತ್ತೆ ಮಲಗಿ ಬಲಮಗ್ಗುಲಲ್ಲಿ ಏಳು ಅನ್ನುತ್ತಿದ್ದೆ. ಹಾಗೆಯೇ ಮಾಡಿದರೆ ಕಣ್ಬಿಟ್ಟ ತಕ್ಷಣವೇ ದೇವರ ಫೋಟೋ ತೋರಿಸ್ತಿದ್ದೆ. ಗುಡ್ ಮಾರ್ನಿಂಗ್ ಅನ್ನುತ್ತಿದ್ದೆ. ಏಳೂವರೆಗೆ ಮೊದಲೆ ಬಕೆಟ್ನ ತುಂಬಾ ಬಿಸಿ ನೀರು ತುಂಬಿಸಿ, ಐರನ್ ಮಾಡಿದ ಬಟ್ಟೆಗಳನ್ನು ಕೊಟ್ಟು ಸ್ನಾನದ ಮನೆಗೆ ಕಳಿಸುತ್ತಿದ್ದೆ. ಅವತ್ತಿಗೆ ಇದೆಲ್ಲವೂ ನನಗೆ ಕಿರಿಕಿರಿ ಅನ್ನಿಸುತ್ತಿತ್ತು. ಈ ಕಾರಣದಿಂದಲೇ ಅಮ್ಮಾ ಬ್ರಷ್ ಸಿಕ್ತಾ ಇಲ್ಲ, ಸೋಪ್ ಕಾಣಿಸ್ತಾ ಇಲ್ಲ, ಟವೆಲ್ ಕೊಟ್ಟಿಲ್ಲ ಎಂದೆಲ್ಲ ಕಿರುಚುತ್ತ ಐದೈದು ನಿಮಿಷಕ್ಕೂ ನಿನ್ನನ್ನು ಕರೆಯುತ್ತಿದ್ದೆ.
ನನ್ನ ರೇಗಾಟವೆಲ್ಲ ಕೇಳಿಸಲೇ ಇಲ್ಲ ಎಂಬಂತೆ ವರ್ತಿಸುತ್ತಿದ್ದ ನೀನು, ನನ್ನ ಸಿಡಿಮಿಡಿ ಮಾತುಗಳ ಮಧ್ಯೆಯೇ ಜಡೆ ಹೆಣೆದಿರುತ್ತಿದ್ದೆ. ಸಿಕ್ಕೂ ಬಿಡಿಸುತ್ತಿದ್ದೆ. ನಂತರ, ಅವಸರದಲ್ಲಿಯೇ ಶೂಗೆ ಪಾಲಿಷ್ ಹಾಕಿಕೊಡುತ್ತಿದ್ದೆ. ಆನಂತರದಲ್ಲಿ ತಿಂಡಿ ಕೊಡುತ್ತಿದ್ದೆ. ಊಹುಂ, ನೀನು ತುಂಬ ಅಕ್ಕರೆಯಿಂದ ಮಾಡಿದ ತಿಂಡಿ ನನಗೆ ಇಷ್ಟವಾಗುತ್ತಲೇ ಇರಲಿಲ್ಲ. ಸ್ನಾನಕ್ಕೆ ಹೋಗುವ ಮೊದಲೇ ಚಿತ್ರಾನ್ನ ಮಾಡಬೇಡ. ಉಪ್ಪಿಟ್ಟು ಬೇಡವೇ ಬೇಡ, ವಾಂಗಿಬಾತ್ಗೆ ಬದನೇಕಾಯಿ ಹಾಕಬೇಡ, ಮೆಣಸಿನಕಾಯಿ ಹಾಕಿದ್ರೆ ಪುಳಿಯೋಗರೇನೂ ಬೇಡ...ಹೀಗೆ ಹೇಳುತ್ತಲೇ ಇದ್ದವಳು ನಾನು. ಆದರೂ ನನ್ನನ್ನು ಸಮಾಧಾನಿಸಿ, ತಿಂಡಿ ತಿನ್ನಿಸಿ, ಲಂಚ್ ಬಾಕ್ಸ್ ಹಾಕಿ, ನನಗೆ ಇಷ್ಟವಾಗುವಂಥ ತಿಂಡಿಯನ್ನೇ ಸ್ನ್ಯಾಕ್ಸ್ ಬಾಕ್ಸ್ಗೆ ನೀನು ತುಂಬುತ್ತಿದ್ದೆ. ಆದರೂ ನಿನ್ನ ಮೇಲೆ ನನಗೆ ಯಾಕೋ ಅಸಹನೆ, ವಿನಾಕಾರಣ ಸಿಟ್ಟು!
ಸಂಜೆ ಏದುಸಿರು ಬಿಡುತ್ತಲೇ ಮನೆ ತಲುಪಿ, ಹೋಂವರ್ಕ್, ಪ್ರಾಜೆಕ್ಟ್ ಕೊಟ್ಟಿದ್ದಾರೆ ಅಂದರೆ, ತಕ್ಷಣವೇ ವಿಪರೀತ ತಲೆಕೆಡಿಸಿಕೊಳ್ಳುತ್ತಿದ್ವಳು ನೀನು. ನಾನು ಆಟದಲ್ಲಿ ಮೈಮರೆತಿದ್ದಾಗಲೇ ಪ್ರಾಜೆಕ್ಟ್ಗೆ ಅಗತ್ಯವಿದ್ದ ವಸ್ತುಗಳನ್ನು ನೀನು ಅಂಗಡಿಯಿಂದ ತಂದಿರುತ್ತಿದ್ದೆ. ಎಷ್ಟೋ ಸಂದರ್ಭದಲ್ಲಿ ಎಲ್ಲಾ ಕೆಲಸವನ್ನೂ ನೀನೇ ಮಾಡಿರುತ್ತಿದ್ದೆ. ಆದರೆ ಮರುದಿನ ಬೆಳಿಗ್ಗೆ ಇವೆಲ್ಲ ನಾನೇ ಮಾಡಿದ್ದು ಗೊತ್ತಾ ಎಂದು ಫ್ರೆಂಡ್ಸ್ ಮುಂದೆ ಜಂಭ ಕೊಚ್ಚಿಕೊಳ್ಳುತ್ತಿದ್ದಾಕೆ ನಾನು. ರಾತ್ರಿಯಲ್ಲಿ ನೀನು ಜೋಪಾನ ಮಾಡುತ್ತಿದ್ದ ರೀತಿಯನ್ನಂತೂ ನಾನು ಎಂದೆಂದೂ ಮರೆಯಲಾರೆ. ಮಲಗುವ ಮೊದಲು ಚುಕ್ಕು ತಟ್ಟುತ್ತಿದ್ದೆ. ಅನಂತರ ಬೆಡ್ಶೀಟ್ ಹೊದಿಸುತ್ತಿದ್ದೆ. ಪ್ರತಿ ಎರಡು ಗಂಟೆಗೊಮ್ಮೆ ಎದ್ದು, ಮೈಮೇಲೆ ಬೆಡ್ಶೀಟ್ ಇದೆಯೋ ಇಲ್ಲವೋ ಎಂದು ಚೆಕ್ ಮಾಡುತ್ತಿದ್ದೆ. ಅಕಸ್ಮಾತ್, ನಾನು ನಿದ್ರೆಯಲ್ಲಿ ಬೆಚ್ಚಿ ಬಿದ್ದರೆ, ಅಮ್ಮಾ ಎಂದು ಕನವರಿಸಿದರೆ ತಕ್ಷಣವೇ ನನ್ನ ಮಗ್ಗುಲಲ್ಲೇ ಮಲಗಿ ಗಟ್ಟಿಯಾಗಿ ತಬ್ಬಿಕೊಳ್ಳುತ್ತಿದ್ದೆ. ಮೈ ಬಿಸಿಯಾಗಿದೆಯೊ ಹೇಗೆ ಎಂದು ಪ್ರತಿ ಅರ್ಧ ಗಂಟೆಗೊಮ್ಮೆ ಚೆಕ್ ಮಾಡುತ್ತಿದ್ದೆ. ಹೌದು ಅನ್ನಿಸಿದರೆ, ಆ ಅಪರಾತ್ರಿಯಲ್ಲೇ ಎದ್ದು ಬಿಸಿನೀರು ಕಾಯಿಸಿ, ಮಾತ್ರೆ ನುಂಗಿಸಿ ಮಲಗಿಸುತ್ತಿದ್ದೆ. ಇಂಥ ಅಕ್ಕರೆ ಮತ್ತು ಕಾಳಜಿಯ ಕಾರಣದಿಂದಲೇ ಎಸ್ಸೆಸ್ಸೆಲ್ಸಿಯಲ್ಲಿ ಫಸ್ಟ್ಕ್ಲಾಸ್ ಬಂದಾಕೆ ನಾನು. ಮುಂದೆ ಮಗಳು ಇನ್ನಷ್ಟು ಚೆನ್ನಾಗಿ ಓದಲಿ ಎಂಬ ಹಿರಿಯಾಸೆಯಿಂದ ನೀವು ಹಾಸ್ಟೆಲ್ಗೆ ಸೇರಿಸಿದಿರಲ್ಲ; ಅವತ್ತು ಒಳಗೊಳಗೇ ಖುಷಿಪಟ್ಟಿದ್ದೆ, ಇನ್ನು ಮುಂದೆ ಅಪ್ಪ-ಅಮ್ಮನ ಕಿರಿಕಿರಿಯಿಲ್ಲ. ಹೆಜ್ಜೆಗೊಂದು ಕಂಡೀಷನ್ ಇಲ್ಲ. ಇಡೀ ವರ್ಷ ಕಾಲೇಜಿನಲ್ಲಿ ಹಕ್ಕಿಯಂತೆ ಹಾರಾಡಿಕೊಂಡು ಸ್ವತಂತ್ರವಾಗಿ ಇರಬಹುದು. ಹಾಸ್ಟೆಲ್ನಲ್ಲಿ ಮಹಾರಾಣಿಯಂತೆಯೇ ಮೆರೆಯಬಹುದು. ಹೇಗಿದ್ರೂ ಚೆನ್ನಾಗಿ ಓದ್ತೇನೆ. ಹಾಗಾಗಿ ಫಲಿತಾಂಶದ ಚಿಂತೆಯಿಲ್ಲ ಅಂದುಕೊಂಡಿದ್ದೆ. ನನ್ನ ನಿರೀಕ್ಷೆಗಳೆಲ್ಲಾ ಎರಡೇ ವಾರಕ್ಕೆ ಸುಳ್ಳಾಗಿ ಹೋದವು.
ಹಾಸ್ಟೆಲ್ನಲ್ಲಿ ನನ್ನ ಬದುಕು ಹೇಗಿದೆ ಗೊತ್ತೇನಮ್ಮಾ? ದಿನಾಲೂ ಬೆಳಗ್ಗೆ ಅಲಾರಾಂನ ಕರ್ಕಶ ಸದ್ದು ಕೇಳಿಯೇ ಎದ್ದೇಳಬೇಕು. ನೀರಿನ ಸಮಸ್ಯೆ ಇಲ್ಲದಿದ್ದರೆ ಅದನ್ನು ಹಾಸ್ಟೆಲ್ ಅನ್ನೋದಿಲ್ಲ ಅಂತಾರೆ. ನಮ್ಮ ಹಾಸ್ಟೆಲ್ದೂ ಅದೇ ಕಥೆ. 'ನಿಮ್ಮ ರೂಮಲ್ಲಿ ನೀರು ಬರ್ತಾ ಇದೆಯಾ ಎಂಬುದೇ ನಮ್ಮ ಪಾಲಿನ ಗುಡ್ಮಾರ್ನಿಂಗ್ ಮೆಸೇಜು. ಹೇಗೋ ಒಂದು ಬಕೇಟ್ ನೀರು ಹೊಂದಿಸಿಕೊಂಡು ಕಾಯಿಸಲು ಸ್ವಿಚ್ ಹಾಕಿದರೆ, ಐದೇ ನಿಮಿಷಕ್ಕೆ ಕರೆಂಟ್ ಹೋಗುತ್ತದೆ. ನಂತರ ತಣ್ಣೀರು ಸ್ನಾನವೇ ಗತಿ. ಕ್ಷಣಕ್ಷಣಕ್ಕೂ ಮನೆಯನ್ನು ನೆನಪಿಸಿಕೊಳ್ಳುತ್ತಾ - ಛೆ ಛೆ, ಇಲ್ಲಿಗೆ ಬಂದು ತಪ್ಪು ಮಾಡಿಬಿಟ್ಟೆ ಅಂದುಕೊಳ್ಳುತ್ತಾ ಅಡುಗೆ ಮನೆಗೆ ಹೋದರೆ, ಅಲ್ಲಿ ಚಿತ್ರಾನ್ನ, ಉಪ್ಪಿಟ್ಟು, ಅದಿಲ್ಲದಿದ್ದರೆ ವಾಂಗಿಬಾತ್! ವಾರವಲ್ಲ, ತಿಂಗಳಿಡೀ ಅಲ್ಲ, ವರ್ಷ ಪೂರ್ತಿ ಇದೇ ತಿಂಡಿ! ಅದು ರುಚಿಯಾಗಿಯೂ ಇರುವುದಿಲ್ಲ, ಶುಚಿಯಾಗಿಯೂ ಇರುವುದಿಲ್ಲ, ಮಧ್ಯಾನ್ಹಕ್ಕೆ ಅರೆಬರೆಯಾಗಿ ಬೇಯಿಸಿದ ತರಕಾರಿಯ ಸಾರು, ಸಂಜೆಗೆ, ಬೆಲ್ಲದ ನೀರಂತಿರುವ ಕಾಫಿ! ದಿನವೂ ಇದೇ ರಾಮಾಯಣ. ಊಟ ಚೆನ್ನಾಗಿಲ್ಲ ಎಂದು ಹಾಸ್ಟೆಲ್ನಲ್ಲಿ ಅಡುಗೆ ಭಟ್ಟರೊಂದಿಗೆ ಜಗಳ ಮಾಡಿದ್ದೂ ಆಯ್ತು. ಆದರೆ ಏನೂ ಬದಲಾಗಲಿಲ್ಲ. ಜಗಳ ಆಡಿದಾಕ್ಷಣ ನಾನು ಹೇಳಿದಂತೆಲ್ಲಾ ಬದಲಾಗಲು ಅವರೇನು ನನ್ನ ಅಮ್ಮನೇ ? ಅಲ್ವೇನಮ್ಮಾ ?
ಪ್ರತಿ ಭಾನುವಾರವೂ ರಜೆ ಇದೆ ನಿಜ. ಅವತ್ತು ಬಟ್ಟೆ ಒಗೆದು ಎಲ್ಲವನ್ನೂ ಇಸ್ತ್ರಿ ಮಾಡಿಸುವುದರೊಳಗೆ ಸಂಜೆಯಾಗತ್ತೆ. ಪ್ರತಿ ತಿಂಗಳೂ ಬರುವ ಹೊಟ್ಟೆ ನೋವು ಕೊಡುವ ಸಂಕಟವನ್ನಂತೂ ವಿವರಿಸಿ ಹೇಳಲು ಸಾಧ್ಯವೇ ಇಲ್ಲ. ಮನೆಯಲ್ಲಿ ನಿನ್ನೊಂದಿಗಿದ್ದಾಗ ಈ ಯಾವ ಕಷ್ಟವೂ ನನ್ನನ್ನು ಕಾಡದಂತೆ ನೋಡಿಕೊಂಡವಳು ನೀನು. ಅದೆಲ್ಲಾ ನೆನಪಾದರೆ ಒಂಟಿಯಾಗಿ ಕೂತು ಬಿಕ್ಕಳಿಸುತ್ತೇನೆ ಕಣಮ್ಮಾ. ಇಲ್ಲಿಂದ ವಾಪಸ್ ಬಂದ ಮೇಲೆ ಯಾವುದೇ ಕಾರಣಕ್ಕೂ ನಿನ್ನ ಮೇಲೆ ರೇಗಲಾರೆ. ಪ್ರಾಮಿಸ್ ಅಮ್ಮಾ ಪ್ಲೀಸ್, ನನಗೆ ಒಳಿತಾಗಲೆಂದು ಹಾರೈಸು. ನನ್ನ ತಪ್ಪುಗಳನ್ನೆಲ್ಲಾ ಕ್ಷಮಿಸು.... ಪ್ಲೀಸ್...
-ನಾನು ಪ್ರಣತಿ