ಅಂಕಣಗಳು

ದೌರ್ಬಲ್ಯ ಮುಚ್ಚಿಕೊಳ್ಳಲು ಡಬ್ಬಿಂಗ್ ವಿರೋಧಿಸಬೇಡಿ!

ದೌರ್ಬಲ್ಯ ಮುಚ್ಚಿಕೊಳ್ಳಲು ಡಬ್ಬಿಂಗ್ ವಿರೋಧಿಸಬೇಡಿ!
Published On :

ಡಬ್ಬಿಂಗ್‌ನ ಪರ-ವಿರೋಧದ ಚರ್ಚೆಯ ಈ ಸಮಯದಲ್ಲಿ ಕನ್ನಡ ಚಿತ್ರರಂಗದ ಕೆಲವು ಹಿರಿಯರು ಡಬ್ಬಿಂಗ್‌ಗೆ ತಮ್ಮ ವಿರೋಧವೇಕೆ ಎಂಬುದಕ್ಕೆ ನೀಡುವ ಕಾರಣಗಳನ್ನು ಇಲ್ಲಿ ನಿಮ್ಮ ಗಮನಕ್ಕೆ ತರುತ್ತಿದ್ದೇನೆ.
ಕಳೆದ ವರ್ಷ ಇದೇ ಡಬ್ಬಿಂಗ್ ಕುರಿತು ವಿವಾದ ಎದ್ದಾಗ ಟಿವಿ ವಾಹಿನಿಯೊಂದರ ಪ್ಯಾನಲ್ ಡಿಸ್ಕಷನ್‌ನಲ್ಲಿ ಹಿರಿಯ, ಕ್ರಿಯಾಶೀಲ ನಿರ್ದೇಶಕರೊಬ್ಬರು ಡಬ್ಬಿಂಗ್‌ಗೆ ತಮ್ಮ ವಿರೋಧವೇಕೆ ಎಂಬುದಕ್ಕೆ ಬಹಳ ಉತ್ತಮವಾದ ಕಾರಣ ನೀಡಿದರು. ಸಂವಿಧಾನದಲ್ಲಿ ಭಾಷೆಯ ಕುರಿತಾಗಿ ಉಲ್ಲೇಖಿಸಿರುವ ಅಂಶವೊಂದರತ್ತ ವೀಕ್ಷಕರ ಗಮನ ಸೆಳೆದ ಅವರು, ಪ್ರತಿ ರಾಜ್ಯದಲ್ಲೂ ಆಯಾ ರಾಜ್ಯಭಾಷೆಯೇ ಅತ್ಯಂತ ಉನ್ನತ ಸ್ಥಾನ ಗಳಿಸಬೇಕೆಂದು ಸಂವಿಧಾನ ಹೇಳುತ್ತದೆ ಎಂದರು. ಅದು ಸತ್ಯವೂ ಕೂಡ. ಡಬ್ಬಿಂಗ್‌ನಿಂದ ಬೇರೆ ಚಿತ್ರಗಳು ಕನ್ನಡೀಕರಣಗೊಳ್ಳುವುದರಿಂದ ಕನ್ನಡ ಕರ್ನಾಟಕದಲ್ಲಿ ಕೆಳಮಟ್ಟಕ್ಕಿಳಿಯಲು ಹೇಗೆ ಸಾಧ್ಯ? ಸಂವಿಧಾನದ ವಿಷಯಕ್ಕೆ ಬರುವುದಾದರೆ ಜನರ ಮಾಹಿತಿ ಹಕ್ಕನ್ನು ಯಾವುದೋ ಒಂದು ಉದ್ಯಮ ಹತ್ತಿಕ್ಕಬಹುದು ಎಂದು ಸಂವಿಧಾನದ ಯಾವ ಪುಟದಲ್ಲಾದರೂ ಉಲ್ಲೇಖಿಸಿದೆಯೇ? ಕನ್ನಡ ಚಿತ್ರರಂಗದ ಕೆಲವೇ ಕೆಲವರಿಂದಾಗಿ ಕನ್ನಡಿಗರು ಪ್ರಪಂಚದ ಇತರೆ ವಿಷಯಗಳನ್ನು ತಿಳಿದುಕೊಳ್ಳಬೇಕಾದ ಹಕ್ಕಿಗೆ ದಕ್ಕೆಯಾಗುತ್ತಿಲ್ಲವೇ  
ವಿಜ್ಞಾನ, ತಂತ್ರಜ್ಞಾನ, ಇತಿಹಾಸ, ಖಗೋಳಶಾಸ್ತ್ರ, ಭೂವಿಜ್ಞಾನ, ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರಗಳ ಬಗ್ಗೆ ಮಾಹಿತಿ ನೀಡುವ ಆಂಗ್ಲ ಚಾನೆಲ್‌ಗಳ ಕಾರ್ಯಕ್ರಮಗಳನ್ನಾದರೂ ಕನ್ನಡೀಕರಣಗೊಳಿಸಲು, ಆ ಮೂಲಕ ಜನರಿಗೆ ಮಾಹಿತಿ ತಲುಪಿಸಲು ಇವರೇಕೆ ಸಹಕರಿಸುತ್ತಿಲ್ಲ? ಇಂಥ ವಾಹಿನಿಗಳಿಂದ ನಮ್ಮ ಹಿರಿತೆರೆ, ಕಿರುತೆರೆಯ ಕಲಾವಿದರು, ತಂತ್ರಜ್ಞರ ಹೊಟ್ಟೆಯ ಮೇಲೆ ಹೇಗೆ ಕಲ್ಲೆಸೆದಂತಾಗುತ್ತದೆ? ಹಾಗೊಮ್ಮೆ ಇವರ ಜೀವನದ ಮೇಲೆ ಅಂಥ ಕಾರ್ಯಕ್ರಮಗಳು ನಕಾರಾತ್ಮಕ ಪರಿಣಾಮ ಬೀರುತ್ತವೆಯೆಂದಾದರೂ ಕೇವಲ ಸಾವಿರದಷ್ಟಿರುವ ಇಂಥವರ ಹಿತಾಸಕ್ತಿಗಾಗಿ ರಾಜ್ಯದ ಆರೇಳು ಕೋಟಿ ಜನರ ಮಾಹಿತಿ ಹಕ್ಕಿಗೆ ಇವರು ಬ್ರೇಕ್ ಹಾಕುವುದು ಎಷ್ಟು ಸರಿ? ಇವರು ಹೇಳುವ ಹಾಗೆಯೇ ಡಬ್ಬಿಂಗನ್ನು ಶಾಶ್ವತವಾಗಿಯೇ ಸ್ಯಾಂಡಲ್‌ವುಡ್‌ನಿಂದ ದೂರವಿಡೋಣ. ಆದರೆ ಇದೇ ಕನ್ನಡ ಸಿನಿಮಾದ ನಿರ್ಮಾಪಕ, ನಿರ್ದೇಶಕರು ಅಥವಾ ಉದ್ಯಮಿಗಳು ಕೋಟಿಗಟ್ಟಲೇ ಹಣ ಹೂಡಿ ಇಂಗ್ಲಿಷ್ ಚಾನೆಲ್‌ಗಳು ನೀಡುವ ಮಾಹಿತಿಯನ್ನು ಖುದ್ದಾಗಿ g‌r‌o‌und​ ze‌r‌o ಅಧ್ಯಯನದ ಮೂಲಕ ಕನ್ನಡದಲ್ಲಿಯೇ ನೀಡಲು ಪ್ರಯತ್ನಿಸುತ್ತಾರೆಯೇ?
Bla‌c‌k​ ma​m​b​as​ ‌have​ been​ w‌itn​e​s​sed​ ‌c‌onf‌r‌ont‌in‌g,​​ b‌it‌in‌g,​​ and​ s‌ub​s​e​q‌u​en​t​ly​ ‌k‌ill‌in‌g​ l‌i‌ons​ and​ ‌ot‌he‌r​ la‌r‌ge​ p‌red​at‌o‌rs​ ಎಂದು ಇಂಗ್ಲಿಷ್ ಚಾನೆಲ್‌ನಲ್ಲೊಂದು ದೃಶ್ಯ ಸಮೇತವಾಗಿ ಮಾಹಿತಿ ನೀಡುತ್ತಿದೆ ಎಂದಾದರೆ ಆ ಮಾಹಿತಿ ಕಲೆ ಹಾಕಲು ಆ ಚಾನೆಲ್‌ನ ಸಿಬ್ಬಂದಿ ಅಥವಾ ಚಾನೆಲ್‌ನೊಂದಿಗೆ ಒಡಂಬಡಿಕೆ ಮಾಡಿಕೊಂಡ ಸಂಶೋಧಕ ಆಫ್ರಿಕಾದ ಅಭಯಾರಣ್ಯಗಳಲ್ಲಿ ವರ್ಷಗಟ್ಟಲೇ ಇದ್ದು ಅತ್ಯಂತ ವಿಷಪೂರಿತ ಬ್ಲಾಕ್ ಮಾಂಬಾದ ಮಾಹಿತಿಯನ್ನು ಪ್ರಾಣವನ್ನೇ ಪಣಕ್ಕಿಟ್ಟು ಕಲೆಹಾಕಿರುತ್ತಾನೆ. ಇನ್ನೊಂದು ಇಂಗ್ಲಿಷ್ ಚಾನೆಲ್ ಜಪಾನ್‌ನಲ್ಲಾದ ಭೂಕಂಪದ ಕುರಿತು ಜಪಾನ್‌ಗೆ ತೆರಳಿ ಮಾಹಿತಿ ಸಂಗ್ರಹಿಸುತ್ತದೆ. ಅದರ ವಿಸ್ತೃತ ವರದಿ ನೀಡುತ್ತದೆ. ಹಾಗೆ ನಮ್ಮವರು ಮಾಡಲು ಸಾಧ್ಯವೇ? ಅಷ್ಟು ಹಣ ಹೂಡಿ ಅಂಥ ಚಾನೆಲ್‌ಗಳನ್ನು ಹುಟ್ಟು ಹಾಕಲು ಸದ್ಯದ ಪರಿಸ್ಥಿತಿಯಲ್ಲಿ ಸಾಧ್ಯವೇ?
ತಮಿಳು, ತೆಲುಗು, ಹಿಂದಿ ಚಿತ್ರಗಳು ಕನ್ನಡೀಕರಣಗೊಳ್ಳಲು ಅವಕಾಶ ಮಾಡಿಕೊಟ್ಟರೆ ಕನ್ನಡ ಚಿತ್ರರಂಗದ ಕಲಾವಿದರು, ತಂತ್ರಜ್ಞರು ಇನ್ನಿತರ ಅವಲಂಬಿಗಳು ಬೀದಿಗೆ ಬೀಳುತ್ತಾರೆ ಎನ್ನುವ ಕನ್ನಡ ಸಿನಿಮಾದ ಕೆಲವರು, ತಮಿಳು, ತೆಲುಗು ಹಾಗೂ ಹಿಂದಿ ಚಿತ್ರರಂಗಗಳಲ್ಲಿ ಡಬ್ಬಿಂಗ್‌ಗೆ ಅವಕಾಶವಿದ್ದರೂ ಆ ಉದ್ಯಮಗಳು ಬೆಳವಣಿಗೆಯ ಹಾದಿಯಲ್ಲಿ ಸಾಗುತ್ತಿರುವುದನ್ನು ಏಕೆ ಗಮನಿಸುತ್ತಿಲ್ಲ? ಒಂದು ಉದ್ಯಮದಲ್ಲಿ ಕ್ರಿಯಾಶೀಲತೆಗೆ ಅವಕಾಶವಿದೆಯೆಂದಾದರೆ ಆ ಉದ್ಯಮ ಅಳಿವಿನ ಅಂಚಿಗೆ ಹೋಗಲು ಹೇಗೆ ಸಾಧ್ಯ? ಡಬ್ಬಿಂಗ್‌ಗೆ ಅವಕಾಶ ನೀಡಿರುವ ಇತರೆ ಚಿತ್ರರಂಗಗಳಲ್ಲಿ ನೂರಾರು ಕೋಟಿಯ ಚಿತ್ರಗಳು ನಿರ್ಮಾಣವಾಗುತ್ತಿಲ್ಲವೇ?
ಡಬ್ಬಿಂಗ್‌ಗೆ ಅವಕಾಶ ನೀಡುವುದರಿಂದ ಕನ್ನಡಕ್ಕೇ ಹೆಚ್ಚು ಉಪಯೋಗ. ತಮಿಳು ಚಿತ್ರವೊಂದು ಕನ್ನಡಕ್ಕೆ ಡಬ್ ಆದರೆ ಅದೇ ಚಿತ್ರವನ್ನು ತಮಿಳಿನಲ್ಲಿ ನೋಡ ಬಯಸುವ ಕನ್ನಡಿಗ ಅದನ್ನು ತನ್ನ ಮಾತೃಭಾಷೆಯಲ್ಲಿಯೇ ನೋಡುತ್ತಾನೆ. ಅದೇ ಚಿತ್ರವನ್ನು ಕರ್ನಾಟಕದಲ್ಲಿರುವ ಒಬ್ಬ ತಮಿಳಿಗನ ಕನ್ನಡದಲ್ಲಿ ಆ ಚಿತ್ರ ಹೇಗೆ ಮೂಡಿಬಂದಿದೆ ಎಂಬ ಕುತೂಹಕ್ಕಾದರೂ ಆ ಚಿತ್ರವನ್ನು ನೋಡಲು ಥಿಯೇಟರ್‌ಗೆ ಹೋಗಬಹುದು. ಇದರಿಂದ ಕನ್ನಡಕ್ಕೆ ಹೇಗೆ ನಷ್ಟವಾಗುತ್ತದೆ? ತನ್ನ ಚಿತ್ರ ಕನ್ನಡಕ್ಕೆ ಡಬ್ ಆಗುತ್ತದೆ ಎಂದಾದಾಗ ತಮಿಳಿನ ನಟನೊಬ್ಬ ತನ್ನ ಧ್ವನಿಯನ್ನು ತಾನೇ ಕನ್ನಡದಲ್ಲಿ ಡಬ್ ಮಾಡಬೇಕೆಂದು ಕನ್ನಡ ಕಲಿಯುವ ಪ್ರಯತ್ನ ಮಾಡಬಹುದು. ಮಲಯಾಳಿಯ ಖ್ಯಾತನಟ ಮಮ್ಮುಟ್ಟಿ ಕನ್ನಡ ಚಿತ್ರ 'ಶಿಕಾರಿ'ಯಲ್ಲಿ ನಟಿಸಿ ತಮ್ಮದೇ ಧ್ವನಿಯಲ್ಲಿ ಕನ್ನಡಿಗರ ಮನಗೆಲ್ಲುವ ಪ್ರಯತ್ನ ಮಾಡಲಿಲ್ಲವೇ? ಕಮಲ್ ಹಾಸನ್ 'ರಾಮಾ ಶಾಮಾ ಭಾಮ' ಚಿತ್ರದಲ್ಲಿ ಉತ್ತರ ಕರ್ನಾಟಕದ ಕನ್ನಡವನ್ನು ಅರಳು ಹುರಿದಂತೆ ಮಾತನಾಡಿ ಹೊಟ್ಟೆ ಹುಣ್ಣಾಗಿಸುವಂತೆ ಕನ್ನಡಿಗರನ್ನು ನಗಿಸಲಿಲ್ಲವೇ? ಮರಾಠಿ ನಟ ಅತುಲ್ ಕುಲಕರ್ಣಿ ಈಗಾಗಲೇ ಕನ್ನಡ ಚಿತ್ರಗಳಲ್ಲಿ ನಟಿಸಿ ಹೆಸರುಗಳಿಸಿಲ್ಲವೇ? ಇವರ ಚಿತ್ರಗಳೇ ಕನ್ನಡಕ್ಕೆ ಮುಂದೆ ಡಬ್ ಆದರೆ ಇವರು ಕನ್ನಡದಲ್ಲಿಯೇ ಧ್ವನಿ ನೀಡುವ ಪ್ರಯತ್ನ ಮಾಡಲಾರರೇ? ಹಾಲಿವುಡ್‌ನ ಖ್ಯಾತ ನಟಿ, ನಿರ್ದೇಶಕಿ, ನಿರ್ಮಾಪಕಿ ಜೊಡಿ ಫಾಸ್ಟರ್ ಡಬ್ಬಿಂಗ್ ಬಗ್ಗೆ ನೀಡಿರುವ ಒಂದು ಹೇಳಿಕೆಯನ್ನು ಗಮನಿಸಲೇಬೇಕು. "I​ w‌is‌h​ t‌hat​ I​ sp‌o‌ke​ m‌o‌re​ lan‌g‌u​a‌g​es.​ I​ sp​ea‌k​ a​ ‌c‌o‌uple​ of lan‌g‌u​a‌g​es,​​ b‌ut​ n‌ot​ we​ll​ en‌o‌u‌g‌h​ t‌o​ ‌rea​l​ly​ d‌ub​ my​s​e​lf.​ F‌ren‌c‌h​ ‌is​ ‌rea​l​ly​ t‌he​ ‌only​ ‌one​​ and​ ‌it​s​ a​ d‌iff‌i‌c‌u​lt​ t‌h‌in‌g.'​ ಈ ಹೇಳಿಕೆಯಲ್ಲಿ ಇತರೆ ಭಾಷೆಗಳನ್ನು ಕಲಿಯುವ ಕುರಿತು ಅವರಿಗಿರುವ ಆಸಕ್ತಿ, ತಮಗಿರುವ ಇತರ ಭಾಷಾ ಜ್ಞಾನ ಡಬ್ ಮಾಡುವ ಮಟ್ಟಿಗಿಲ್ಲವೆಂದು ಒಪ್ಪಿಕೊಳ್ಳುವ ಗುಣವನ್ನು ಗಮನಿಸಬಹುದು. ಅವರು ತನಗೆ ಬರುವ ಇಂಗ್ಲಿಷೇತರ ಭಾಷೆಯೆಂದರೆ ಫ್ರೆಂಚ್ ಎಂದು ಹೇಳಿಕೊಳ್ಳುತ್ತಾರೆ. ಅವರ ಬಹಳಷ್ಟು ಸಿನಿಮಾಗಳು ಫ್ರೆಂಚ್‌ಗೆ ಡಬ್ ಆದಾಗ ಅವರೇ ಖುದ್ದಾಗಿ ಧ್ವನಿ ನೀಡುತ್ತಾರೆ. ಜರ್ಮನ್, ಸ್ಪ್ಯಾನಿಷ್‌ನ ಜ್ಞಾನವೂ ಇವರಿಗಿದೆ. ತಮ್ಮ ನಟನಾ ಕೌಶಲ್ಯದ ಜೊತೆ ಜೊತೆಗೆ ಬಹುಭಾಷೆಗಳಲ್ಲಿ ನೈಪುಣ್ಯತೆ ಹೊಂದಿ ತಾವು ನಟಿಸಿರುವ ಒಂದೇ ಭಾಷೆಯ ಚಿತ್ರವೊಂದಕ್ಕೆ ವಿವಿಧ ಭಾಷೆಗಳಲ್ಲಿ ತಮ್ಮದೇ ಧ್ವನಿ ನೀಡುವ ಕನ್ನಡಿಗರೇ ಆದ ರಜನಿಕಾಂತ್ ಭಾರತೀಯ ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿಲ್ಲವೇ?
ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಬೇರೆ ಭಾಷೆಯ ಉತ್ತಮ ಚಿತ್ರ ಕನ್ನಡೀಕರಣಗೊಂಡಾಗ ಸ್ವಾಭಾವಿಕವಾಗಿ ವಾರಕ್ಕೆ ಮೂರ್ನಾಲ್ಕರಂತೆ ಬಿಡುಗಡೆಯಾಗುವ, ಹುರುಳಿಲ್ಲದ ಕೆಲವೊಂದು ಕನ್ನಡ ಚಿತ್ರಗಳನ್ನು ಪ್ರೇಕ್ಷಕರು ನೋಡದಿರಬಹುದು. ಅವರ ನಿರ್ಣಯ ಖಂಡಿತಾ ಸರಿ. ಇದರಿಂದ ಕನ್ನಡ ಚಿತ್ರರಂಗಕ್ಕೆ ಸಕಾರಾತ್ಮಕ ಪ್ರಭಾವ ಉಂಟಾಗುತ್ತದೆ. ಬೇರೆ ಭಾಷೆಗಳಿಂದ ಸ್ಪರ್ಧೆ ಉಂಟಾದಾಗ ಸ್ವಾಭಾವಿಕವಾಗಿಯೇ ಉತ್ತಮ ಚಿತ್ರಗಳು ಕನ್ನಡದಲ್ಲಿ ಮೂಡಿಬರುತ್ತವೆ. ಕೇವಲ ಶೋಕಿಗೋಸ್ಕರ ಸಿನಿಮಾ ಮಾಡುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿ, ಪ್ರೇಕ್ಷಕರ ಪ್ರೀತಿ ಸಂಪಾದಿಸಲು ಸಿನಿಮಾ ಮಾಡುವವರ ಸಂಖ್ಯೆ ಹೆಚ್ಚಾಗುತ್ತದೆ. ಕೆಲವರು ವಾದಿಸಬಹುದು. ಆಯಾ ಭಾಷೆಯ ಚಿತ್ರಗಳನ್ನು ಆಯಾ ಭಾಷೆಯಲ್ಲಿಯೇ ನೋಡಿದರೆ ಚೆನ್ನ ಎಂದು. ಸ್ವಾಮಿ, ಈ ಆಯ್ಕೆಯನ್ನು ಜನಕ್ಕೆ ಬಿಟ್ಟು ಬಿಡಿ. ಜನರ ಆಯ್ಕೆಯ ಬಗ್ಗೆ ನಿರ್ಧರಿಸಲು ನೀವ್ಯಾರು?
ಶಿವರಾಜ್‌ಕುಮಾರ್ ಎರಡು ವರ್ಷಗಳ ಹಿಂದೆ ಅಣ್ಣಾವ್ರ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಪರೋಕ್ಷವಾಗಿ ಡಬ್ಬಿಂಗ್ ವಿರುದ್ಧ ಎಚ್ಚರಿಕೆ ಕೊಟ್ಟರು. ತಮ್ಮ ಮಾತಿನಲ್ಲಿ ನಾವು ಯಾವ ಭಾಷೆಯ ವಿರೋಧಿಗಳೂ ಅಲ್ಲ ಎಂದೂ ಸ್ಪಷ್ಟಪಡಿಸಿದರು. ಹಾಗಿದ್ದರೆ ಉತ್ತಮ ಸಂದೇಶ ನೀಡುವ ಬೇರೆ ಭಾಷೆಯ ಸಿನಿಮಾಗಳನ್ನು ಕನ್ನಡಿಗರು ಮಾತೃಭಾಷೆಯ ಮೂಲಕವೇ ನೋಡಿ ಅರ್ಥ ಮಾಡಿಕೊಳ್ಳಲು ಬಿಡಿ. ನಿಮ್ಮನ್ನು ಬೆಳೆಸಿರುವ ಕನ್ನಡದ ಪ್ರೇಕ್ಷಕರಿಗೆ ಬೇರೆ ಭಾಷೆಯ ಚಿತ್ರಗಳನ್ನು ತಮ್ಮದೇ ಮಾತೃ ಭಾಷೆಯಲ್ಲಿ ನೋಡುವ ಹಕ್ಕಿಲ್ಲವೇ? ಕನ್ನಡದ ನೆಲದಲ್ಲಿ ಕನ್ನಡಿಗರ ಮಾಹಿತಿ ಮತ್ತು ಆಯ್ಕೆಯ ಹಕ್ಕಿನ ಮೇಲೆ ಪರೋಕ್ಷ ಹಗಲು ಅತ್ಯಾಚಾರವಾಗುತ್ತಿದ್ದರೂ ಜನರ ಹಕ್ಕನ್ನು ಕಾಪಾಡಬೇಕಾದ ಸರ್ಕಾರ ಮಾತ್ರ ಇನ್ನೂ ಎಚ್ಚರಗೊಂಡಿಲ್ಲ. ಸಬ್ಸಿಡಿಯೆಂಬಿತ್ಯಾದಿ ಕನ್ನಡ ಚಿತ್ರರಂಗದ ಬೇಡಿಕೆಗಳಿಗೆ ಸ್ಪಂದಿಸುತ್ತಿರುವ ರಾಜ್ಯ ಸರ್ಕಾರ, ಕಟ್ಟುನಿಟ್ಟಾಗಿ ಚಲನಚಿತ್ರ ವಾಣಿಜ್ಯ ಮಂಡಳಿಯ ವ್ಯವಹಾರದತ್ತ ಗಮನಹರಿಸದೇ, ಮಂಡಳಿಯ ಸರ್ವಾಧಿಕಾರಿ ಧೋರಣೆಯಿಂದ ಕನ್ನಡಿಗರ ಹಕ್ಕುಗಳ ಮೇಲೆ ದೌರ್ಜನ್ಯವಾಗುತ್ತಿದ್ದರೂ ಇನ್ನೂ ಮೌನವಾಗಿಯೇ ಇದೆ. ಇನ್ನಾದರೂ ಕನ್ನಡಿಗರ ಹಕ್ಕುಗಳ ರಕ್ಷಣೆಯಾಗಲಿದೆಯೇ?



 -ಮಾರ್ಕ್ಸ್ ತೇಜಸ್ವಿ
ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.