ಅಂಕಣಗಳು

ಸತ್ಯವನ್ನು ಗೌರವಿಸದ ಆಡಳಿತ ಅಧಿಕಾರದ ಒಳಚಲನೆಯ ಪ್ರತೀಕ

ಸತ್ಯವನ್ನು ಗೌರವಿಸದ ಆಡಳಿತ ಅಧಿಕಾರದ ಒಳಚಲನೆಯ ಪ್ರತೀಕ
Published On :

"ಕನ್ನಡದ ನೆಲದಲ್ಲಿ ಕನ್ನಂಬಾಡಿಯನ್ನು ಕಟ್ಟಿ ನಿಲ್ಲಿಸಿದಂತೆ, ಈ ಮನುಷ್ಯ ಮೈಸೂರಿನ ನೆಲದಲ್ಲಿ ವಿಶ್ವವಿದ್ಯಾನಿಲಯವನ್ನೂ ಕಟ್ಟಿ ನಿಲ್ಲಿಸಿಯೇ ಬಿಟ್ಟರು."
ಮೈಸೂರು ವಿಶ್ವವಿದ್ಯಾನಿಲಯದ ರೂವಾರಿ ಸರ್.ಎಂ.ವಿಶ್ವೇಶ್ವರಯ್ಯ ಎಂಬ ಹೊಸ ಪುಸ್ತಕದ ಲೇಖಕ  ಡಾ. ಗಜಾನನ ಶರ್ಮರ ಮಾತುಗಳಿವು. ಇತ್ತೀಚೆಗೆ ಈ ಪುಸ್ತಕವನ್ನು ಖ್ಯಾತ ಲೇಖಕ ಡಾ. ಎಸ್.ಎಲ್.ಭೈರಪ್ಪನವರು ಮೈಸೂರಿನಲ್ಲಿ ಬಿಡುಗಡೆ ಮಾಡಿದರು.  ಐದು ಅಧ್ಯಾಯಗಳನ್ನೊಳಗೊಂಡ ಈ ಪುಸ್ತಕದಲ್ಲಿ ಡಾ. ಗಜಾನನ ಶರ್ಮರು ಅಧ್ಯಾಯ-4ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಸ್ಥಾಪನೆ ಬಗ್ಗೆ ಬಹಳ ವಿಸ್ತಾರವಾಗಿ ಬರೆದಿದ್ದಾರೆ.
"ಚಿಕಾಗೋ ವಿಶ್ವವಿದ್ಯಾನಿಲಯದಂತೆ ಮೂಲಭೂತ ಸಂಶೋಧನೆಯ ಗುರಿಯನ್ನೂ, ವಿಸ್ಕಾನ್ಸಿನ್ ವಿ.ವಿ.ಯಂತೆ ಜನಸಮುದಾಯದ ಜ್ಞಾನವನ್ನು ವಿಸ್ತರಿಸುವ ಮಹೋದ್ದೇಶವನ್ನೂ, ಆಕ್ಸ್‌ಫರ್ಡ್ ಹಾಗೂ ಕೇಂಬ್ರಿಜ್ ವಿ.ವಿ.ಗಳಂತೆ, ತನ್ನ ಸ್ನಾತಕರನ್ನು ರಾಜಕೀಯ ಹಾಗೂ ಸಾಮಾಜಿಕ ಬದುಕಿಗೆ ಅಣಿಗೊಳಿಸಬಲ್ಲ, ಬೌದ್ಧಿಕ ವಿಕಾಸಕ್ಕೆ ಒಳಪಡಿಸಿ ಅವರಿಗೆ ಸಾರ್ಥಕ ಬಾಳನ್ನು ದಕ್ಕಿಸಿಕೊಡುವ ಚಿಂತನಾ ಕ್ರಮಗಳನ್ನು ಬೆಳೆಸುವ ಆಶಯಗಳನ್ನು ಮೈಸೂರು ವಿಶ್ವವಿದ್ಯಾನಿಲಯವೂ ಅಳವಡಿಸಿಕೊಳ್ಳಬೇಕೆಂಬುದು ವಿಶ್ವೇಶ್ವರಯ್ಯ, ನಂಜುಂಡಯ್ಯ, ಸಿ.ಆರ್.ರೆಡ್ಡಿ ಮುಂತಾದ ಪ್ರಮುಖರ ಆಶಯವಾಗಿತ್ತು" ಎಂಬ ಮಾಹಿತಿ ಗಮನಾರ್ಹ.  
ಇನ್ನು ಡಾ. ಎಸ್.ಎಲ್.ಭೈರಪ್ಪನವರು ಮುನ್ನುಡಿ ಬರೆಯುತ್ತಾ "ವಿಶ್ವೇಶ್ವರಯ್ಯ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರುಗಳ ಪ್ರತಿಮೆಯನ್ನು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸ್ಥಾಪಿಸಬೇಕೆಂಬ ಸಿಂಡಿಕೇಟ್ ಸಭೆಯ ನಿರ್ಣಯದ ವಿಚಾರದಲ್ಲಿ ಎದ್ದ ಗೊಂದಲವೇ ಡಾ. ಗಜಾನನ ಶರ್ಮ ಈ ಕೃತಿಯನ್ನು ಬರೆಯಬೇಕಾಗಿ ಬಂದ ಸಂದರ್ಭ" ಎಂದಿದ್ದಾರೆ.
ಮುಂದುವರೆದು, "ಕಳೆದ ನಾಲ್ಕೈದು ವರ್ಷಗಳಿಂದ ಮಹಾರಾಜರ ಜಾತಿಗೆ ಸೇರಿದ ವ್ಯಕ್ತಿಯೊಬ್ಬರು ತಮ್ಮ ಜಾತಿಯ ಸಭೆಗಳಲ್ಲಿ ಮತ್ತು ಇತರ ಪ್ರಗತಿಪರ ವೇದಿಕೆಗಳಲ್ಲಿ ಸಂಸ್ಥಾನದ ಸಮಸ್ತ ಅಭಿವೃದ್ಧಿಗೂ ಮಹಾರಾಜರು ಮಾತ್ರವೇ ಕಾರಣರು ಎಂಬ ಮತ್ತು ವಿಶ್ವೇಶ್ವರಯ್ಯನವರ ಜಾತಿಯವರು ಲೇಖನಗಳ, ಪುಸ್ತಕಗಳ ಹಾಗೂ ಪ್ರಚಾರಮಾಧ್ಯಮದ ಮೂಲಕ ವಿಶ್ವೇಶ್ವರಯ್ಯನವರೇ ಕಾರಣಪುರುಷರೆಂಬ ಮಿಥ್ಯಾಪ್ರಚಾರ ಮಾಡಿ ಮಹಾರಾಜರ ಪ್ರಖರತೆಯನ್ನು ಮಸಕುಗೊಳಿಸಿದ್ದಾರೆ ಎಂಬ ವಾದವನ್ನು ತೇಲಿಬಿಡುತ್ತಿದ್ದರು. ಈಗ ಅದೇ ವ್ಯಕ್ತಿಯು ಮಹಾರಾಜರು ಧಣಿ, ವಿಶ್ವೇಶ್ವರಯ್ಯನು ಸಂಬಳಕ್ಕೆ ಸೇರಿದ್ದ ನೌಕರ. ಧಣಿಯ ಅಪ್ಪಣೆಯಿಂದ ಕೆಲಸ ಮಾಡಿದ ನೌಕರನನ್ನೂ ಮತ್ತು ಧಣಿಯನ್ನೂ ಒಂದೇ ಎತ್ತರದಲ್ಲಿ ಜೊತೆಯಲ್ಲಿ ನಿಲ್ಲಿಸುವುದು ಅನ್ಯಾಯ. ಆದ್ದರಿಂದ ಅವರಿಬ್ಬರ ಪ್ರತಿಮೆಗಳನ್ನು ಒಟ್ಟಿಗೆ ನಿರ್ಮಿಸುವುದೂ ನಿಲ್ಲಿಸುವುದೂ ಖಂಡನೀಯ ಎಂಬ ವಾದವನ್ನು ಮುಂದೆಮಾಡಿದರು. ಭಾರತದ ಇಂದಿನ ಅಧೋಗತಿಗೆ ಚಾತುರ್ವರ್ಣ್ಯವನ್ನು ಸ್ಥಾಪಿಸಿದ ಬ್ರಾಹ್ಮಣಜಾತಿಯ ಕುಟಿಲತೆಯೇ ಕಾರಣವೆಂದು ಸದಾ ಭಾಷಣಗಳಲ್ಲಿಯೂ ಲೇಖನಗಳಲ್ಲಿಯೂ ಪುನಃ ಪುನಃ ಪುನರಾವರ್ತಿಸುವ  ಅಭ್ಯಾಸದ ಇನ್ನೊಬ್ಬ ವ್ಯಕ್ತಿಯೂ ಬ್ರಾಹ್ಮಣ ಲೇಖಕರು ಮತ್ತು ದಾಖಲೆದಾರರು ವಿಶ್ವೇಶ್ವರಯ್ಯನ ಚಿತ್ರವನ್ನು ಮಿಥ್ಯಾಪ್ರಮಾಣದಲ್ಲಿ ಬೆಳೆಸಿ ನಿಲ್ಲಿಸಿದ್ದಾರೆ, ಅದನ್ನು ಸರಿಪಡಿಸಬೇಕು ಎಂದು ವಿಶ್ವೇಶ್ವರಯ್ಯನವರನ್ನು ಅನ್ನದಾತರೆಂದು ಸದಾ ಗೌರವಿಸುತ್ತಿರುವ ಮಂಡ್ಯ ಪ್ರಾಂತದ ಸ್ವಬಾಂಧವರ ಮನಸ್ಸನ್ನು ತಿರುಗಿಸುವ ಪ್ರಯತ್ನವನ್ನು  ಕೆಲವು  ವರ್ಷಗಳಿಂದ ಮಾಡುತ್ತಿರುವವರು. ಅವರೂ  ಸಿಂಡಿಕೇಟ್ ನಿರ್ಣಯದ ವಿರುದ್ಧದ ತ್ರಿಮೂರ್ತಿಗಳಲ್ಲಿ ತತ್‌ಕ್ಷಣ ಒಬ್ಬರಾದರು. ತ್ರಿಮೂರ್ತಿಗಳಲ್ಲಿ ಮತ್ತೊಬ್ಬರು ಇಡೀ ಭಾರತದ ಇತಿಹಾಸವನ್ನು ದಲಿತರಿಗೆ ಆದ ಅನ್ಯಾಯದ ಏಕಮೇವ ದೃಷ್ಟಿಯಿಂದ ನೋಡುವರು. ಸಮಸ್ತ ದಲಿತರನ್ನೂ ಉಳಿದ ವರ್ಗಗಳ ಮಟ್ಟಕ್ಕೆ ಎತ್ತರಿಸುವವರೆಗೆ ಮೀಸಲಾತಿ ಇರಬೇಕೆಂಬ ಮತ್ತು ಮೀಸಲಾತಿಯ ಏಕೈಕ ಮಾರ್ಗದಿಂದ ದಲಿತರ ಏಳ್ಗೆಯಾಗಬೇಕೆಂಬ ಸಿದ್ಧಾಂತವನ್ನು ಸದಾ ಪ್ರತಿಪಾದಿಸುವವರು! ಮೀಸಲಾತಿಯ ವಿರೋಧದ ಏಕದೃಷ್ಟಿಯಿಂದಲೇ ರಾಜೀನಾಮೆ ನೀಡಿದರೆಂಬ ಆಧಾರಹೀನ ಗ್ರಹಿಕೆಯಿಂದ ವಿಶ್ವೇಶ್ವರಯ್ಯನವರ ನೆನಪಿನ ನೆರಳನ್ನು ಕೂಡ ಸಹಿಸದವರು" ಎಂದು ಡಾ. ಭೈರಪ್ಪನವರು ವ್ಯಸನ ಪಟ್ಟಿದ್ದಾರೆ.
ಒಟ್ಟಿನಲ್ಲಿ ವಿಶ್ವೇಶ್ವರಯ್ಯನವರ ಪ್ರತಿಮೆಯನ್ನು ಸ್ಥಾಪಿಸಿದರೆ ಹೋರಾಟ ಮಾಡುವುದಾಗಿ ಈ ಮೂವರೂ ಧಮಕಿ ಹಾಕಿದರು. ವಿಶ್ವವಿದ್ಯಾಲಯ, ಅಂದರೆ ಅದರ ಆಡಳಿತದ ಕುರ್ಚಿಯಲ್ಲಿ ಕುಳಿತವರು ಈ ಧಮಕಿಗೆ ಮಣಿದರು. ಅವರಿಗೂ ಧಮಕಿಕಾರರ ಜೋರಿನೊಡನೆ ಒಳಗೇ ಸಹಾನುಭೂತಿ ಇದ್ದಿರಲೂಬಹುದು. ಮೈಸೂರು ನಗರದ ಕೆಲವು ಗಣ್ಯರು ವಿಶ್ವವಿದ್ಯಾಲಯದ ಮೊತ್ತಮೊದಲ ಘಟಿಕೋತ್ಸವದಲ್ಲಿ ಸ್ವಯಂ ಮಹಾರಾಜರೇ "ವಿಶ್ವೇಶ್ವರಯ್ಯನವರ ಧೈರ್ಯ ಸಾಹಸ ಪ್ರಯತ್ನಗಳಿಲ್ಲದಿದ್ದರೆ ಈ ವಿಶ್ವವಿದ್ಯಾಲಯವು ಅಸ್ತಿತ್ವಕ್ಕೆ ಬರುತ್ತಿರಲಿಲ್ಲ, ಇದರ ಅಸ್ತಿತ್ವದ ಕೀರ್ತಿಯು ವಿಶ್ವೇಶ್ವರಯ್ಯನವರಿಗೆ ಸಲ್ಲಬೇಕು" ಎಂದು ಮುಕ್ತಮನಸ್ಸಿನಿಂದ ಹೇಳಿದ ಮಾತುಗಳ ಮುದ್ರಿತ ಪ್ರತಿಗಳನ್ನು ಕುರ್ಚಿಯಲ್ಲಿ ಕುಳಿತವರಿಗೆ ತೋರಿಸಿ ವಿನಂತಿಸಿದರು. ಹಲವರು ಪತ್ರಿಕೆಗಳಲ್ಲಿಯೂ ಆಧಾರಗಳನ್ನು ಕೊಟ್ಟು ಲೇಖನಗಳನ್ನು ಬರೆದರು. ಆದರೆ ಕುರ್ಚಿಯವರಿಂದ ನಿರೀಕ್ಷಿತ ಪ್ರತಿಕ್ರಿಯೆ ಬರಲಿಲ್ಲ.
ಮುಂದುವರೆದು, "ಸಂದರ್ಭ ಮತ್ತು ಪಾತ್ರಗಳ ಅಂತರಂಗವನ್ನು ವಿಶ್ಲೇಷಿಸದೆ ಸಾಹಿತ್ಯವು ಅರ್ಥವಾಗುವುದಿಲ್ಲ. ಹಾಗೆಯೇ ಸಾಂದರ್ಭಿಕತೆಯ ಅರಿವು ಇಲ್ಲದಿದ್ದರೆ ಜೀವನವಾಗಲಿ ಇತಿಹಾಸವಾಗಲಿ ಸಮಕಾಲೀನ ಸಾಮಾಜಿಕ ಸನ್ನಿವೇಶಗಳಾಗಲಿ ತಿಳಿಯುವುದಿಲ್ಲ. ವಿಶ್ವೇಶ್ವರಯ್ಯನವರ ಪ್ರತಿಮೆಯ ಸ್ಥಾಪನೆಯನ್ನು ವಿರೋಧಿಸಿದ ಮೂರು ಪಾತ್ರಗಳು ಮೂರು ಸಾಮಾಜಿಕ ಸಂದರ್ಭ ಮತ್ತು ಪ್ರವೃತ್ತಿಗಳನ್ನು ವ್ಯಕ್ತಪಡಿಸುತ್ತವೆ; ಹಾಗೆಯೇ ಇಂಥ ಪ್ರವೃತ್ತಿಗಳನ್ನು ವಿರೋಧಿಸಿ ಸತ್ಯವನ್ನು ಗೌರವಿಸದಿರುವ ಆಡಳಿತವೂ ನಮ್ಮ ಸಮಕಾಲೀನ ಭಾರತದ ಅಧಿಕಾರದ ಒಳಚಲನೆಯ ಪ್ರತೀಕವಾಗಿದೆ. ಈ ಪ್ರವೃತ್ತಿ ಮತ್ತು ಒಳಚಲನೆಯನ್ನು ವಿಶ್ಲೇಷಿಸುವುದು ಅವಶ್ಯವಾಗಿದೆ.
ಮೊದಲನೆಯದು: ಇಡೀ ಸಂಸ್ಥಾನವು ಮಹಾರಾಜರ ಸೊತ್ತು, ವಿಶ್ವೇಶ್ವರಯ್ಯನವರು ಆ ಸೊತ್ತಿನ ನಿರ್ವಹಣೆಗಾಗಿ ಸಂಬಳಕ್ಕಾಗಿ ಸೇರಿಕೊಂಡ ಸೇವಕ ಎಂಬ ಊಳಿಗಮಾನ್ಯ ಗ್ರಹಿಕೆ. ವಾಸ್ತವವಾಗಿ ಸಂಸ್ಥಾನವು ಮಹಾರಾಜರ ಸೊತ್ತಾಗಿರಲಿಲ್ಲ. ಬ್ರಿಟಿಷರು ಅದರ ಆಡಳಿತವನ್ನು ತಮಗೆ ಬೇಕಾದಾಗ ಕೈಗೆತ್ತಿಕೊಳ್ಳಬಹುದಾಗಿತ್ತು. ಸಂಸ್ಥಾನದ ಗಣಿ, ಉದ್ಯಮ ಮೊದಲಾದ ಆರ್ಥಿಕ ಜೀವನವು ಬ್ರಿಟಿಷರ ಕೈಯಲ್ಲಿ ಇದ್ದಿತು. ಆಡಳಿತದ ಪ್ರತಿಯೊಂದು ಹಂತವನ್ನೂ ತನ್ನ ಹದ್ದಿನಕಣ್ಣಿನಿಂದ ಗಮನಿಸಲು ಒಬ್ಬ ರೆಸಿಡೆಂಟನನ್ನು ನೇಮಕ ಮಾಡಿರುತ್ತಿದ್ದರು. ದಿವಾನರ ನೇಮಕ ಮೊದಲಾದವಕ್ಕೂ ರೆಸಿಡೆಂಟನ ಸಮ್ಮತಿ ಬೇಕಾಗಿತ್ತು. ವೈಸ್‌ರಾಯಿಯ ಸಮ್ಮತಿ ಇಲ್ಲದೆ ಯಾವ ರಾಜನೂ ತನ್ನ ರಾಜ್ಯದಿಂದ ಹೊರಗೆ ಪ್ರವಾಸವನ್ನೂ ಕೂಡಾ ಮಾಡುವಂತಿರಲಿಲ್ಲ. ಇತರ ಕೆಲವು ಸಂಸ್ಥಾನಗಳೊಡನೆ ಬ್ರಿಟಿಷರು ಕೆಲವು ಸ್ಪಷ್ಟ ಷರತ್ತುಗಳಿಗೆ ಸಹಿ ಮಾಡಿದ್ದರೂ, ಮೈಸೂರಿನೊಡನೆ ಅಂಥ ಯಾವ ಒಪ್ಪಂದವೂ ಆಗಿರಲಿಲ್ಲ. ಯಾವಾಗ ಬ್ರಿಟಿಷರು ತಮ್ಮ ಅಧಿಕಾರವನ್ನು ಕಿತ್ತುಕೊಂಡುಬಿಡುತ್ತಾರೋ ಎಂಬ ಅಂಜಿಕೆ ಮಹಾರಾಜ ಕೃಷ್ಣರಾಜ ಒಡೆಯರ್‌ಗೂ ಇಲ್ಲದಿರಲಿಲ್ಲ. ವಿಶ್ವೇಶ್ವರಯ್ಯನವರನ್ನು ದಿವಾನ ಪದವಿಯಲ್ಲಿ ಕೂರಿಸಿದ ಮೇಲೆ ಮಹಾರಾಜರು ಮಾಡಿದ ಮೊದಲ ಕೆಲಸವೆಂದರೆ ಬ್ರಿಟಿಷರು ತಮ್ಮ ಸಂಸ್ಥಾನದೊಡನೆ ಸಂಬಂಧವನ್ನು ಒಂದು ಸ್ಪಷ್ಟರೂಪಕ್ಕೆ ತರುವಂತೆ ವಿಶ್ವೇಶ್ವರಯ್ಯನವರನ್ನು ಕೋರಿದುದು. ಬ್ರಿಟಿಷರ ಪ್ರಭುತ್ವದ ಮುಂಬಯಿ ಪ್ರಾಂತದಲ್ಲಿ ಕೆಲಸ ಮಾಡಿ ಅವರ ರೀತಿನೀತಿಗಳನ್ನು ಸೂಕ್ಷ್ಮವಾಗಿ ಅರಿತಿದ್ದುದು ಮಾತ್ರವಲ್ಲದೆ ಅವರೊಡನೆ ವ್ಯವಹರಿಸುವ ಧೈರ್ಯ-ವಿಚಕ್ಷಣೆಗಳು ವಿಶ್ವೇಶ್ವರಯ್ಯನವರಲ್ಲಿ ಇದ್ದುದನ್ನು ಮಹಾರಾಜರು ಗುರುತಿಸಿದ್ದರು. ಅದರಂತೆ ವಿಶ್ವೇಶ್ವರಯ್ಯನವರು ಕಾರ್ಯೋನ್ಮುಖರಾಗಿ ಮಹಾರಾಜರ ಸಿಂಹಾಸನಕ್ಕೆ ಒಂದು ಸ್ತಿಮಿತತೆಯನ್ನು ತಂದುಕೊಟ್ಟರು. ನಿದರ್ಶನಕ್ಕೆ: ಅದುವರೆಗೂ ವಾರ್ಷಿಕ ದಸರಾ ದರ್ಬಾರಿನಲ್ಲಿ ಕೆಂಪುಜನರಿಗೆ  ಕುರ್ಚಿ ಹಾಕಿ ಭಾರತೀಯರನ್ನು ನೆಲದ ಮೇಲೆ ಕೂರಿಸುವ ಪದ್ಧತಿ ಇತ್ತು. ಮುಖ್ಯ ಇಂಜಿನಿಯರ್ ಹುದ್ದೆ ವಹಿಸಿಕೊಂಡ ನಂತರದ ದಸರಾ ದರ್ಬಾರಿಗೆ ವಿಶ್ವೇಶ್ವರಯ್ಯನವರು ಹೋಗಲಿಲ್ಲ.  ಏಕೆಂದು ವಿಚಾರಿಸಿದಾಗ ವಿಶ್ವೇಶ್ವರಯ್ಯನವರು "ಅವರು ಕುರ್ಚಿಯ ಮೇಲೆ ಕುಳಿತಿರುವಾಗ ನಾನು ನೆಲದ ಮೇಲೆ ಕೂರುವುದು ನನ್ನ ಗೌರವಕ್ಕೆ ಚ್ಯುತಿಯಾಗುತ್ತದೆ" ಎಂದು ಉತ್ತರಿಸಿದರು. ಇದನ್ನು ಬಗೆಹರಿಸುವುದು ಹೇಗೆ ಎಂಬ ಪ್ರಶ್ನೆಗೆ, ಎಲ್ಲರಿಗೂ ಸಮನಾಗಿ ಕುರ್ಚಿ ಹಾಕಿಸಿರಿ ಎಂದರು. ಅದನ್ನು ಮಾಡಲೂ ಮಹಾರಾಜರಿಗೆ ಹಿಂಜರಿಕೆ ಇತ್ತು. ಆದರೆ ವಿಶ್ವೇಶ್ವರಯ್ಯನವರ ದಾರ್ಢ್ಯ ಗೆದ್ದಿತು.
ಎರಡನೆಯದಾಗಿ: ವಿಶ್ವೇಶ್ವರಯ್ಯನವರು ಹೊಟ್ಟೆ ಪಾಡಿಗಾಗಿ ನೌಕರಿ ಹುಡುಕಿಕೊಂಡು ಮೈಸೂರಿಗೆ ಬಂದವರಲ್ಲ. ಬ್ರಿಟಿಷರ ಅಧೀನದ ವಿಶಾಲವಾದ ಮುಂಬಯಿ ಪ್ರಾಂತದಲ್ಲಿ ಬ್ರಿಟಿಷ್ ಇಂಜಿನಿಯರುಗಳೇ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂಥ ಸಾಧನೆ ಮಾಡಿ ಬಹುಬೇಗ ಉಪಮುಖ್ಯ ಇಂಜಿನಿಯರ್ ಆದರು. ಮುಖ್ಯ ಇಂಜಿನಿಯರ್ ಹುದ್ದೆಗೆ ಬ್ರಿಟಿಷರನ್ನು ಮಾತ್ರ ನೇಮಿಸಬೇಕೆಂಬ ನಿಯಮವಿದ್ದುದರಿಂದ ಅವರು ಮುಖ್ಯ ಇಂಜಿನಿಯರಾಗುವಂತಿರಲಿಲ್ಲ. ಆದುದರಿಂದ ನಿವೃತ್ತಿಯನ್ನು ಕೇಳಿ ಗವರ್ನರಿಗೆ ಕಾಗದ ಬರೆದರು. ಇವರ ಕೋರಿಕೆಯ ನ್ಯಾಯ ಗವರ್ನರ್‌ಗೆ ಅರ್ಥವಾಯಿತು. ಆದರೆ ನಿಯಮ ಮೀರುವಂತಿರಲಿಲ್ಲ. ಆದ್ದರಿಂದ ವಿಶ್ವೇಶ್ವರಯ್ಯನವರ ಅಸಾಧಾರಣ ಸೇವೆಯನ್ನು ಪರಿಗಣಿಸಿ, ಪೂರ್ಣ ಸೇವಾವಧಿಯನ್ನು ಪೂರೈಸದಿದ್ದರೂ ಪೂರ್ಣ ನಿವೃತ್ತಿವೇತನ ಕೊಟ್ಟು ಬಿಡುಗಡೆ ಮಾಡಿದರು. ಇವರ ಪ್ರತಿಭೆ, ಕಾರ್ಯನಿಷ್ಠೆಗಳನ್ನು ತಿಳಿದಿದ್ದ ಮೈಸೂರು ಮಹಾರಾಜರು ತಮ್ಮ ಸಂಸ್ಥಾನದ ಮುಖ್ಯ ಇಂಜಿನಿಯರ್ ಹುದ್ದೆಗೆ  ಆಹ್ವಾನಿಸಿದರು. ಬರಿಯ  ಮಾಮೂಲು ಕೆಲಸಗಳಲ್ಲಿ ತಮಗೆ ಆಸಕ್ತಿ ಇಲ್ಲವೆಂದೂ ಅಭಿವೃದ್ಧಿ ಕೆಲಸಗಳಲ್ಲಿ ಮಹಾರಾಜರಿಗೆ ಆಸಕ್ತಿ ಇದ್ದರೆ ಮಾತ್ರ ತಾನು ಪರಿಗಣಿಸುವೆ ಎಂದೂ ಷರತ್ತು ಹಾಕಿ, ಅದಕ್ಕೆ ಮಹಾರಾಜರು ಒಪ್ಪಿಕೊಂಡ ನಂತರ ವಿಶ್ವೇಶ್ವರಯ್ಯನವರು ತಮ್ಮ ಹುಟ್ಟಿದ ನಾಡಿಗೆ ಬಂದರು.  ಹಿಂದಿನ ಯಾವ ದಿವಾನರೂ ಮುಂದಿನ ಯಾವ  ದಿವಾನರೂ ಒಟ್ಟು ಸೇರಿ ಮಾಡಿರದಷ್ಟು ಅಭಿವೃದ್ಧಿಯನ್ನು ತಾವು ದಿವಾನರಾಗಿದ್ದ ಕೇವಲ 6 ವರ್ಷಗಳಲ್ಲಿ ಮಾಡಿ ತಮ್ಮ ಜೀವಮಾನದಲ್ಲೇ ದಂತಕಥೆಯಾಗಿಬಿಟ್ಟರು. ದಿವಾನಗಿರಿಯನ್ನು ಬಿಟ್ಟ ನಂತರವೂ ತಾವು ಆರಂಭಿಸಿದ್ದ ಕನ್ನಂಬಾಡಿ ಅಣೆಕಟ್ಟೆಯ ಜವಾಬ್ದಾರಿಯನ್ನು ಬಿಡದೆ ಪೂರ್ಣಗೊಳಿಸಿದ್ದಲ್ಲದೆ, ಅನಂತರ ಕೂಡ ತಾವು ಸಂಸ್ಥಾನಕ್ಕೆ ಮಾಡಿದ ಯಾವ ಸೇವೆಗೂ ಒಂದು ಬಿಡಿಗಾಸು ಗೌರವಧನವನ್ನೂ ಮುಟ್ಟಲಿಲ್ಲ.
ಕನ್ನಂಬಾಡಿ ಕಟ್ಟೆಗಂತೂ ಮಹಾರಾಜರ ಹೆಸರನ್ನಿಟ್ಟರು. ರಾಜತ್ವದ ಕಾಲದಲ್ಲಿ ಪ್ರತಿಯೊಂದು ಕಟ್ಟೆ, ಕೆರೆ, ಸಂಸ್ಥೆ, ರಸ್ತೆ, ಸಂಗೀತದ ರಾಗದ ಹೆಸರು ಮೊದಲಾದ ಸಮಸ್ತಕ್ಕೂ ರಾಜರ ಅಥವಾ ಅವರ ಕುಟುಂಬವರ್ಗದವರ ಹೆಸರನ್ನಿಡುವುದು ಪದ್ಧತಿಯಾಗಿತ್ತು - ಸ್ವತಂತ್ರ ಭಾರತದಲ್ಲಿ ಚಕ್ರವರ್ತಿ ನೆಹರು ಮತ್ತು ಅವರ ಕುಟುಂಬವರ್ಗದವರ ಹೆಸರನ್ನಿಡುತ್ತಿರುವಂತೆ. ಆದರೆ ಆಗಿನ ಮಹಾರಾಜರುಗಳ ಹೆಸರುಗಳನ್ನು ಅವರಾಗಲಿ ಅವರ ಕುಟುಂಬವರ್ಗದವರಾಗಲಿ ಏಕಸ್ವಾಮ್ಯಗೊಳಿಸಿಕೊಳ್ಳುವಂತಿರಲಿಲ್ಲ. ತಮ್ಮನ್ನಾಳಲು ಬರುತ್ತಿದ್ದ ಹೊಸಹೊಸ ವೈಸರಾಯ್, ರೆಸಿಡೆಂಟ್ ಮೊದಲಾದ ಬ್ರಿಟಿಷ್ ಧಣಿಗಳ ಹೆಸರನ್ನಿಟ್ಟು ಅವರನ್ನು ಖುಶಾಮತ್ಗೊಳಿಸಿ ತಮ್ಮ ಸಿಂಹಾಸನವು ಅಲುಗಾಡದಂತೆ ಕಾಯ್ದುಕೊಳ್ಳುವುದು ಅವರಿಗೆ ಅವಶ್ಯವಾಗಿತ್ತು. ತಮಿಳರ ಒತ್ತಡದ ಮದರಾಸಿನ ಬ್ರಿಟಿಷ್ ಸರ್ಕಾರದೊಡನೆ ಸೆಣಸಾಡುವುದರಿಂದ ಹಿಡಿದು, ತಮ್ಮ ಪ್ರತಿಭೆಯನ್ನು ಧಾರೆಯೆರೆದು ಪ್ಲಾನನ್ನು ಯೋಜಿಸಿ ಕಟ್ಟೆಕಟ್ಟಿ ನಾಲೆ ತೋಡಿಸಿ ತಾವೇ ಆವಿಷ್ಕರಿಸಿದ ಸ್ವಯಂಚಾಲಿತ ತೂಬುಗೇಟುಗಳನ್ನು ತಯಾರಿಸಿ ಅಳವಡಿಸಿ, ಒಂದು ಕಾಸನ್ನೂ ಗೌರವಧನವಾಗಿಯಾದರೂ ಮುಟ್ಟದೆ ದುಡಿದ ವಿಶ್ವೇಶ್ವರಯ್ಯನವರ ಹೆಸರನ್ನು ಕನ್ನಂಬಾಡಿ ಕಟ್ಟೆಯ, ಒಂದು ನಾಲೆಗಾದರೂ ಇಡಬೇಕೆಂಬ ವಿಚಾರವು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಬರಲಿಲ್ಲವೆ? ಬಂದರೂ ಅರಮನೆಯ ಒಳಗುಂಪು ಇದಕ್ಕೆ ಅವಕಾಶ ಕೊಡಲಿಲ್ಲವೆ ಅಥವಾ ಹೆಸರೇನಿದ್ದರೂ ರಾಜಕುಟುಂಬಕ್ಕೆ ಮಾತ್ರ ಮೀಸಲಿರಬೇಕೆಂಬ ಒಳಮನಸ್ಸೇ? ಆಗ ತಮ್ಮ ಧಣಿಯಾಗಿದ್ದ ವೈಸರಾಯ್ ಇರ್ವಿನ್‌ನನ್ನು ಮೆಚ್ಚಿಸಲು ಇರ್ವಿನ್ ಕೆನಾಲ್ ಎಂಬ ಹೆಸರನ್ನಿಟ್ಟರು. ರಾಜರ ಆಡಳಿತವಿದ್ದ ತನಕ ಯಾವುದಕ್ಕೂ ವಿಶ್ವೇಶ್ವರಯ್ಯನವರ ಹೆಸರನ್ನಿಟ್ಟಿರಲಿಲ್ಲ. ವಿಶ್ವೇಶ್ವರಯ್ಯನವರೂ ಅದನ್ನು ಇಷ್ಟಪಡಲಿಲ್ಲ. ರಾಜಪದ್ಧತಿ ಮುಗಿದು ರಾಜ್ಯವು ಪ್ರಜಾಪ್ರಭುತ್ವವನ್ನು ಪಡೆದ ನಂತರ ಜನರ ಒತ್ತಡವು ಇರ್ವಿನ್ ಕೆನಾಲ್ ಎಂಬುದನ್ನು ಕಿತ್ತುಹಾಕಿ ವಿಶ್ವೇಶ್ವರಯ್ಯ ನಾಲೆ ಎಂಬ ಹೆಸರನ್ನಿಟ್ಟಿತು. ಇವತ್ತು ವಿಶ್ವೇಶ್ವರಯ್ಯನವರ ಹೆಸರಿನಲ್ಲಿರುವ ಸಂಸ್ಥೆಗಳೆಲ್ಲವೂ ತಮ್ಮ ಹೆಸರುಗಳನ್ನು ಪ್ರಜಾಪ್ರಭುತ್ವದಲ್ಲಿ ಪಡೆದದ್ದೇ ಹೊರತು ರಾಜಪ್ರಭುತ್ವದಲ್ಲಲ್ಲ; ಅದೂ ಆದದ್ದು ಅವರು ಸತ್ತ ನಂತರ" ಎಂದು ಡಾ. ಭೈರಪ್ಪನವರು ನೆನಪಿಸಿಕೊಂಡರು.
"ಭಾರತರತ್ನ" ಪ್ರಶಸ್ತಿಯನ್ನು ಸ್ವೀಕರಿಸಬೇಕೆಂಬ ಕೋರಿಕೆಯೊಡನೆ ಜವಾಹರಲಾಲ್ ನೆಹರು ಪತ್ರ ಬರೆದಾಗ "ಈ ಪ್ರಶಸ್ತಿಯು ನನ್ನ ಅಭಿಪ್ರಾಯ ಸ್ವಾತಂತ್ರ್ಯವನ್ನು ಮೊಟಕು ಮಾಡುವುದಿಲ್ಲವೆಂದು ನೀವು ಆಶ್ವಾಸನೆ ಇತ್ತರೆ ಮಾತ್ರ ನಾನು ಸ್ವೀಕರಿಸುತ್ತೇನೆ" ಎಂದು ಖಡಕ್ ಉತ್ತರ ಬರೆದರು.
ಭೈರಪ್ಪನವರ ಮಾತಿನಲ್ಲಿ ಹೇಳಬೇಕೆಂದರೆ ಸಮಾಜಸೇವೆ ಮಾಡಿರುವ, ಮಾಡುತ್ತಿರುವ ಸಾಧುಸಂತರೂ ಯತಿಗಳೂ ನಮ್ಮಲ್ಲಿ ಇಲ್ಲವೆಂದಲ್ಲ. ಅವರಾರಿಗೂ ವಿಶ್ವೇಶ್ವರಯ್ಯನವರಂತಹ ಇಂಜಿನಿಯರಿಂಗ್, ಆಡಳಿತ, ಅರ್ಥಶಾಸ್ತ್ರ, ಇತರ ವಿಜ್ಞಾನಶಾಖೆಗಳಿಂದ ಕೂಡಿದ ಜನಜೀವನವನ್ನು ಪ್ರಾಯೋಗಿಕವಾಗಿ ಉತ್ತಮಗೊಳಿಸುವ ಶಕ್ತಿ ಇಲ್ಲ. ಇಷ್ಟೆಲ್ಲ ಇದ್ದರೂ ವಿಶ್ವೇಶ್ವರಯ್ಯನವರು ಡಿ.ವಿ.ಜಿ. ಹೇಳಿರುವಂತೆ ಸ್ವಲ್ಪವೂ ಸ್ವಾರ್ಥವಿಲ್ಲದ, ಪ್ರತಿಯೊಂದು ಹೆಜ್ಜೆಯಲ್ಲೂ ನ್ಯಾಯನಿಷ್ಠೆಗಳನ್ನು ಅನುಸರಿಸಿದ ಋಷಿಸಮಾನರು. ಅಂಥ ಆದರ್ಶಪುರುಷನ ನೆನಪನ್ನೇ ಅಳಿಸಿಹಾಕುವ, ಅವರ ವ್ಯಕ್ತಿತ್ವಕ್ಕೆ ಮಸಿಬಳಿಯುವ ಜನರ ಕೆಲಸವು ಇಡೀ ಸಮಾಜದ ಕ್ರಿಯಾಶೀಲತೆಯ ಮತ್ತು ನೈತಿಕತೆಯ ತಂತುಗಳನ್ನೇ ನಾಶ ಮಾಡಬಹುದು.  ಒಂದು ಸಂಶೋಧನಾಗ್ರಂಥದಲ್ಲಿರಬೇಕಾದ ಸಮಗ್ರ ಆಧಾರಗಳ ನಿಷ್ಪಕ್ಷಪಾತ ಅವಲೋಕನದಿಂದ ಈ ಗ್ರಂಥಕ್ಕೆ ವಿಶೇಷ ತೂಕ ಬಂದಿದೆ. ಡಾ. ಗಜಾನನಶರ್ಮರನ್ನು ಅಭಿನಂದಿಸುವುದರ ಜೊತೆಗೆ, ಪ್ರತಿಯೊಬ್ಬ ಕನ್ನಡಿಗರೂ ಇದನ್ನು ಓದಿ ಸತ್ಯವನ್ನು ತಿಳಿಯುವುದು ಲೇಸು.



 - ಡಾ. ಜಿ.ಎಲ್.ಶೇಖರ್
ಪ್ರಾಂಶುಪಾಲರು
ದಿ ನ್ಯಾಷನಲ್ ಇನ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.