ಅಂಕಣಗಳು

ನಿಲ್ಲುವುದೇ ಕನ್ನಡ ಚಿತ್ರರಂಗದ ವ್ಯರ್ಥಾಲಾಪ?

ನಿಲ್ಲುವುದೇ ಕನ್ನಡ ಚಿತ್ರರಂಗದ ವ್ಯರ್ಥಾಲಾಪ?
Published On :

ಹೊಸ ಸವಾಲಿಗೆ ಸಿದ್ಧವಾಗಬೇಕಿದೆ ಕನ್ನಡ ಚಿತ್ರರಂಗ ಹಲವು ಗೌರವಾನ್ವಿತ ನಟ, ನಿರ್ದೇಶಕರ ಧ್ವನಿಯೂ ಡಬ್ಬಿಂಗ್ ವಿರುದ್ಧವೇ ಕೇಳುತ್ತಿರುವುದು ನಿಜಕ್ಕೂ ಅಚ್ಚರಿಯೇ ಸರಿ. ಶನಿವಾರ ಕ.ಪ್ರ.ದ ಪುಟ 7 ರಲ್ಲಿ ಪ್ರಕಟವಾದ ಜಿ.ಎನ್. ರಾಜಶೇಖರ ನಾಯ್ಡುರವರ ಲೇಖನದ ಕುರಿತು ನನ್ನ ಪ್ರತಿಕ್ರಿಯೆ....
ಡಬ್ಬಿಂಗ್ ವಿರೋಧಿಸತ್ತಿರುವವರು ಮುಖ್ಯವಾಗಿ ಮುಂದಿಡುತ್ತಿರುವ ವಾದಗಳೆಂದರೆ, ಅದು ಕನ್ನಡ ಭಾಷೆಯನ್ನೂ, ಕನ್ನಡ ಸಂಸ್ಕೃತಿಯನ್ನೂ ಹಾಳುಗೆಡುವುತ್ತದೆ. ಇಲ್ಲಿಯ ನಟ, ನಟಿಯರೂ ಸೇರಿದಂತೆ ಸಾವಿರಾರು ತಂತ್ರಜ್ಞರ ಬದುಕು ದುಸ್ತರವಾಗುತ್ತದೆಂಬುದು. ಮುಖ್ಯವಾಗಿ ಗಮನಿಸುವುದಾದರೆ ಈ ವರ್ಗಕ್ಕೆ ಎರಡನೇ ಅಂಶ ಮಹತ್ವವಾಗಿ ತೋರುತ್ತದೆಯೇ ಹೊರತು ಮೊದಲನೆಯದ್ದಲ್ಲ. ಇವರ ಕಳವಳಕ್ಕೆ ಅದು ಕಾರಣವೇ ಅಲ್ಲವೆನ್ನಬಹುದು. ಇನ್ನು ರಾಜಶೇಖರರ ಡಬ್ಬಿಂಗ್ ಎನ್ನುವುದು ಒಂದು ಭೂತ, ಇದರಿಂದ ಕನ್ನಡ ಭಾಷೆ ಹಾಗೂ ಕನ್ನಡ ಸಂಸ್ಕೃತಿಗಳಿಗೆ ಕೊಡಲಿ ಪೆಟ್ಟು ಬಿದ್ದಂತಾಗುತ್ತದೆ, ಡಬ್ಬಿಂಗ್‌ನಿಂದಾಗಿ ಕನ್ನಡ ಭಾಷೆ ಅಳಿವಿನಂಚಿಗೆ ಸೇರಬೇಕಾಗುತ್ತದೆ, ಇದು ಕನ್ನಡಕ್ಕೆ ಬಂದೊದಗಿರುವ ಸಂಚಕಾರ, ಆದ್ದರಿಂದಲೇ ಅನಕೃರಿಂದ ಹಿಡಿದು
ಕೋ.ಚೆವರಗಿನ ಸಾರಸ್ವತ ಲೋಕ, ಡಬ್ಬಿಂಗನ್ನು ವಿರೋಧಿಸಿತು ಎಂಬಿತ್ಯಾದಿ ಮಾತುಗಳನ್ನು ನೋಡಿದರೆ, ಅವರದ್ದು ಮುಗ್ಧತನವೋ ಅಜ್ಞಾನವೋ ಎಂಬ ಗೊಂದಲವುಂಟಾಗುತ್ತದೆ.
ಮೊದಲಿಗೆ, ಅನಕೃ, ಡಾ.ರಾಜ್ ಡಬ್ಬಿಂಗ್ ವಿರೋಧಿಸಿದ್ದರೆಂಬ ವಿಚಾರದ ಕುರಿತಾಗಿ ಚರ್ಚಿಸೋಣ.  ಲೇಖಕರೇ ಹೇಳಿದಂತೆ-  1964ರ ಕಾಲ. ಕನ್ನಡ ಚಿತ್ರರಂಗ ಅದಾಗಲೇ ಅಂಬೆಗಾಲಿಡುತ್ತಿತ್ತು. ಆಗ 8 ಚಿತ್ರಗಳು ಕನ್ನಡದಲ್ಲಿ ಬಿಡುಗಡೆಯಾದರೆ ಅನ್ಯಭಾಷೆಗಳಿಂದ 180 ಡಬ್ಬಿಂಗ್ ಚಿತ್ರಗಳು ಬಿಡುಗಡೆಯಾಗುತ್ತಿದ್ದವು. ಕನ್ನಡ ಮಾರುಕಟ್ಟೆಯೂ ಚಿಕ್ಕದಾಗಿತ್ತು, ನಿರ್ಮಾಪಕರು ಕಷ್ಟದಲ್ಲಿಯೇ ಚಿತ್ರ ನಿರ್ಮಿಸುತ್ತಿದ್ದರು. ಆ ಕಾಲದಲ್ಲಿಯ ಡಬ್ಬಿಂಗ್ ವಿರೋಧಕ್ಕೆ ಒಂದು ತಾತ್ವಿಕ ನೆಲೆಗಟ್ಟಿತ್ತು. ಆದರೆ ಇಂದು ನಮ್ಮ ಚಿತ್ರರಂಗದ ಮಾರುಕಟ್ಟೆಯೂ ಸಾಕಷ್ಟು ವಿಸ್ತಾರವಾಗಿದೆ. ವಾರಕ್ಕೆ ಎರಡು-ಮೂರು ಚಿತ್ರಗಳು ಬಿಡುಗಡೆ ಕಾಣುತ್ತಿವೆ. ನಮ್ಮ ಕೆಲ ನಟರ ಸಂಭಾವನೆ ಕೋಟಿ ಮುಟ್ಟಿದೆ. ಇನ್ನು ನಮ್ಮ ನಿರ್ಮಾಪಕರೋ, ಒಂದೇ ಒಂದು ಐಟಂ ಸಾಂಗ್‌ಗಾಗಿ ಬಾಲಿವುಡ್‌ನ ಮಲ್ಲಿಕಾ ಶೆರಾವತ್, ವೀಣಾ ಮಲ್ಲಿಕ್‌ರನ್ನು ಕರೆದುಕೊಂಡುಬರಬಲ್ಲ ಶಕ್ತಿವಂತರು.
ಇನ್ನು ಈ ಡಬ್ಬಿಂಗ್ ಯಾವ ರೀತಿಯಲ್ಲಿ ಕನ್ನಡಕ್ಕೆ ಪೆಟ್ಟು ಕೊಡುತ್ತದೆಂಬ ವಿಚಾರವೇ ಅರ್ಥವಾಗುವುದಿಲ್ಲ. ಹಾಗೆ ನೋಡಿದರೆ ಡಬ್ಬಿಂಗ್‌ಗೆ ತೋರುವ ವಿರೋಧವೇ ಕನ್ನಡ ಭಾಷೆಗೆ ಪೆಟ್ಟು ನೀಡುವಂಥದ್ದು. ಉದಾಹರಣೆಗೆ, ಕನ್ನಡದ ನಟ ಸುದೀಪ್ ಅಭಿನಯದ ತೆಲುಗು ಚಿತ್ರ 'ಈಗ' ರಾಜ್ಯದ್ಯಂತ ಯಶಸ್ವಿ ಪ್ರದರ್ಶನ ಕಂಡಿತಲ್ಲವೇ? ಮೊನ್ನೆ ಮೊನ್ನೆಯ ಧೂಮ್, ಕ್ರಿಷ್ ಮೊದಲಾದ ಚಿತ್ರಗಳು ಉತ್ತಮ ಪ್ರದರ್ಶನಗಳನ್ನು ಕಾಣುತ್ತಿಲ್ಲವೇ? ಕನ್ನಡದ ಪ್ರೇಕ್ಷಕನೇನಾದರೂ ಅವು ಕನ್ನಡ ಭಾಷೆಯದ್ದಲ್ಲವೆಂದು ನೋಡದೆ ಕುಳಿತನೆ? ಇಲ್ಲವಲ್ಲ! ಅದೇ ಡಬ್ಬಿಂಗ್ ಮೂಲಕ ಚಿತ್ರ ಬಂದಿದ್ದರೆ ಕನ್ನಡದ ಪ್ರೇಕ್ಷಕ ಆ ಚಿತ್ರಗಳನ್ನು ತನ್ನ ಮಾತೃಭಾಷೆಯಲ್ಲಿಯೇ ನೋಡಬಹುದಿತ್ತಲ್ಲವೇ? ಆ ಮಟ್ಟಿಗೆ ಕನ್ನಡಿಗ ತನ್ನ ಭಾಷೆಯಿಂದ ದೂರವೇ ಉಳಿಯಬೇಕಾಯಿತಲ್ಲ, ಇದರ ಹೊಣೆ ಯಾರದ್ದು ಹೇಳಿ?
ತಮಿಳು, ತೆಲುಗು ಚಿತ್ರರಂಗದಲ್ಲಿ  ಹಲವು ವರ್ಷಗಳಿಂದ ಡಬ್ಬಿಂಗ್ ಚಾಲ್ತಿಯಲ್ಲಿದ್ದಾಗಿಯೂ ಆ ಭಾಷೆಗಳು ಸಮೃದ್ಧತೆಯಿಂದಿಲ್ಲವೇ? ಆ ಭಾಷೆಗಳಲ್ಲಿ ಅನ್ಯ ಭಾಷೆಯ ಚಿತ್ರಗಳು ಡಬ್ ಆಗಿಯೇ ಬರುತ್ತವಾದ್ದರಿಂದ ಆ ಭಾಷೆಗಳು ಅನ್ಯ ಭಾಷೆಗಳ ಹಾವಳಿಯಿಂದ ಪಾರಾಗಿವೆ. ಎಲ್ಲ ಭಾಷೆಯ ಚಿತ್ರಗಳು ಅವರ ಮಾತೃಭಾಷೆಯ ಮೂಲಕ ಪ್ರವೇಶಿಸುವುದರಿಂದ ಆ ಭಾಷಿಕರು ತಮ್ಮ ಭಾಷೆಗೆ ಮತ್ತಷ್ಟೂ ಹತ್ತಿರವಾಗಿದ್ದಾರೆ.
ಇನ್ನು ಡಬ್ಬಿಂಗ್‌ನಿಂದಾಗಿ ಇಲ್ಲಿಯ ನಟ, ನಟಿಯರೂ ಸೇರಿದಂತೆ ತಂತ್ರಜ್ಞರ ಬದುಕು ದುಸ್ತರವಾಗುತ್ತದೆಂಬ ಕೂಗನ್ನು ನೋಡುವುದಾದರೆ, ಇದು ತಕ್ಕಮಟ್ಟಿಗೆ ಒಪ್ಪಿಕೊಳ್ಳಬಹುದಾದರೂ ದುಸ್ತರವೆನ್ನುವುದಕ್ಕಿಂತ ಸ್ಪರ್ಧೆಯಿಂದಾಗಿ ಕೊಂಚ ಹಿನ್ನಡೆ ಅನುಭವಿಸಬೇಕಾಗಬಹುದಷ್ಟೆ. ಸಾಮರ್ಥ್ಯವಿದ್ದಲ್ಲಿ ಅಲ್ಲಿಯೂ ಜಯಸಬಹುದಲ್ಲವೇ? ಅಷ್ಟಕ್ಕೂ ಇಂದು ಯಾವ ಕ್ಷೇತ್ರ ಸ್ಪರ್ಧೆಯಿಂದ ಮುಕ್ತವಾಗಿವೆ ಹೇಳಿ ನೋಡೊಣ. ಇಂದಿನ ಉದ್ಯೋಗ, ಶಿಕ್ಷಣ ಮೊದಲಾದ ಕ್ಷೇತ್ರಗಳಲ್ಲಿ ಕನ್ನಡದ ಯುವಕರು ಬೆಂಗಳೂರಿನಲ್ಲಿಯೇ ಅನ್ಯ ರಾಜ್ಯದ ಯುವಕರನ್ನು ಎದುರಿಸುತ್ತಿಲ್ಲವೇ? ಅದನ್ನು ಯಾರಾದರೂ ಬೇಡವೆನ್ನಲಿಕ್ಕಾಗುತ್ತದಯೇ? ಎಫ್.ಡಿ.ಐ. ಜಾರಿಯಿಂದಾಗಿ ಕೋಟ್ಯಂತರ ಸಂಖ್ಯೆಯ ವರ್ತಕರು ಬಹುರಾಷ್ಟ್ರೀಯ ಕಂಪನಿಗಳೊಂದಿಗೆ ಪೈಪೋಟಿಗೆ ಬಿದ್ದಿಲ್ಲವೇ? ವಿಶೇಷ ವಿತ್ತ ವಲಯದಿಂದಾಗಿ ರೈತ ತನ್ನ ನೆಲದಲ್ಲಿಯೇ ಅನ್ಯನಂತೆ ನಿಲ್ಲಬೇಕಾಯಿತಲ್ಲವೇ? ಅಷ್ಟೇಕೆ ಸ್ವಾಮಿ, ಬೀದಿ ಬದಿಯಲ್ಲಿ ತರಕಾರಿ ಮಾರುವ 60-70 ಹಣ್ಣು ಹಣ್ಣು ಅಜ್ಜಿಯೇ ರಿಲಯನ್ಸ್ ಫ್ರೆಶ್‌ನಂತಹ ದೈತ್ಯ ಕಂಪನಿಗಳೊಂದಿಗೆ ಸ್ಪರ್ಧೆಗಿಳಿದಿರುವಾಗ ಅದಕ್ಕಿಂತಲೂ ಕಡೆಯಾಯಿತೆ ನಮ್ಮ ಚಿಂತ್ರರಂಗ?
ಚಿತ್ರ ನಿರ್ಮಾಣದಂತೆ, ಸಾಹಿತ್ಯವೂ ಒಂದು ರೀತಿ ಕಲೆಯ ಅಭಿವ್ಯಕ್ತಿ ಮಾಧ್ಯಮ. ಅದರಲ್ಲೂ ಜಗತ್ತಿನ ಹಲವು ಭಾಷೆಯಲ್ಲಿಯ ಕೃತಿಗಳನ್ನೂ ಕನ್ನಡಕ್ಕೆ ತರುವ, ಅನೇಕ ವಿಚಾರಗಳು ಕನ್ನಡಿಗನ ಓದುವಿಕೆಗೆ ದಕ್ಕುವಂತೆ ಮಾಡುವ ಸಾವಿರಾರು ಕೃತಿಗಳ ಅನುವಾದ ನಡೆಯುತ್ತಲೇ ಇದೆ. ಇದರಿಂದಾಗಿ ಕನ್ನಡದ ಬರಹಗಾರರಿಗೆ ತೊಂದರೆಯಾಗುತ್ತದೆ, ಅನುವಾದ ಕಾರ್ಯಗಳನ್ನು ನಿಷೇಧಿಸಬೇಕೆಂದರೆ, ಹೇಗೆ ಅಭಾಸವಾಗಿ ತೋರುವುದೋ ಡಬ್ಬಿಂಗ್‌ಗೆ ಅನುಮತಿ ನೀಡಬಾರದೆನ್ನುವ ಮಾತುಗಳೂ ಅಷ್ಟೇ ಬಾಲಿಶವಾಗಿ ಕಾಣುತ್ತವಲ್ಲವೇ?
 ಇನ್ನು ಈ ಡಬ್ಬಿಂಗ್ ವಿರೋಧಿಗಳು ತಮ್ಮ ಹೋರಾಟಕ್ಕೆ ಬಲ ಬರಬೇಕೆಂದು ವಿನಾಕಾರಣ ಡಾ. ರಾಜ್‌ರಹೆಸರನ್ನು ಎಳೆದು ತಂದು ವಾದವನ್ನು ಮುಂದಿಡುತ್ತಿದ್ದಾರೆ. ಆದರೆ ರಾಜ್‌ರ ಕಾಲಕ್ಕೂ ಈ ಕಾಲಕ್ಕೂ ಸಾಕಷ್ಟೂ ವ್ಯತ್ಯಾಸಗಳಿವೆ.  ಇನ್ನು ಈ ಕಾಲದ ಚಿತ್ರಗಳನ್ನು ರಾಜ್ ಚಿತ್ರಗಳೊಂದಿಗೆ ಯೋಚಿಸುವುದು ಮಹಾಪಾಪ! ಕನ್ನಡ ಸಾರಸ್ವತಲೋಕ ಡಬ್ಬಿಂಗ್ ವಿರುದ್ಧವಾಗಿದೆ ಎನ್ನುವವರು, ಅದೇ ಸಾರಸ್ವತ ಲೋಕದ ಎಷ್ಟು ಜನ, ಇಂದಿನ ಕನ್ನಡ ಸಿನಿಮಾಗಳ ಕುರಿತಾಗಿ ಉತ್ತಮ ಅಭಿಪ್ರಾಯ ಹೊಂದಿದ್ದಾರೆಂಬುದನ್ನು ತಿಳಿಯಲಿ. ಡಬ್ಬಿಂಗ್ ಕನ್ನಡತನಕ್ಕೇ ಕೊಡಲಿ ಪೆಟ್ಟು ಎನ್ನುವವರು, ಇಂದು ನಮ್ಮ ಯಾವ ಕನ್ನಡ ಚಿತ್ರಗಳು, ನಮ್ಮ ಭಾಷೆ, ಸಂಸ್ಕೃತಿಯ ಸೊಗಡನ್ನು ಬಿಂಬಿಸುತ್ತಿವೆ ಎಂಬ ಪ್ರಶ್ನೆಗೆ ಉತ್ತರಿಸುವರೆ?
 ಅದೆಷ್ಟು ನಿರ್ದೇಶಕ, ನಿರ್ಮಾಪಕರು, ಕನ್ನಡದ ನಟಿಯರನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ ಹೇಳಿ? ಅನ್ಯ ಬಾಷೆಯಿಂದ ನಟಿಯರನ್ನು ಕರೆತರುತ್ತಾರಲ್ಲ, ಕನ್ನಡದಲ್ಲೇನು ನಟಿಯರಿಗೆ ಬರವೇ? ಕನ್ನಡದಲ್ಲಿ ಈ ಪ್ರಮಾಣದ ಗಾಯಕರಿದ್ದರೂ ಮುಂಬೈಯಿಂದ ಸೋನು ನಿಗಮ್‌ರನ್ನು ಕರೆತರುವುದರ ಹಿಂದೆ ಅಡಗಿರುವ ಕನ್ನಡದ ಕಳಕಳಿಯಾದರೂ ಎಂಥದ್ದು ಸ್ವಾಮಿ? ಅಪ್ಪಟ ಕನ್ನಡದ ನಟಿಯರೆಂದು ಕರೆಸಿಕೊಳ್ಳುವ ನಟಿಯರ ನಾಲಿಗೆಯ ಮೇಲೆ ನುಲಿಯುವ ಕನ್ನಡವಾದರೂ ಎಂಥದ್ದು? ಈ ಪ್ರಶ್ನೆಗಳಿಗೆಲ್ಲಾ ಉತ್ತರಿಸುವವರಾದರೂ ಯಾರು?
ಇವರಿಗೆಲ್ಲ ಕನ್ನಡದ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ?
ಈ ಡಬ್ಬಿಂಗನ್ನೇ ಇಡಿ ಕರ್ನಾಟಕಕ್ಕೆ ಬಡಿದಿರುವ ಭೂತವೆಂಬಂತೆ ಹುಯಿಲೆಬ್ಬಿಸಿದ್ದಾರಲ್ಲ ಈ ಚಿತ್ರರಂಗದವರೆಂದಾದರೂ ಉತ್ತರ ಕರ್ನಾಟಕ, ಅದರಲ್ಲೂ ಕಲ್ಯಾಣ ಕರ್ನಾಟಕ (ಹೈ.ಕ) ಸಮಸ್ಯೆಗಳಿಗೆ ಸ್ಪಂದಿಸಿದ ನಿದರ್ಶನಗಳಿವೆಯೇ? ಕಾವೇರಿ ನದಿಯ ವಿಚಾರದಲ್ಲಿ ಕನ್ನಡಾಭಿಮಾನದ ಸೋಗು ಹಾಕುವ ಈ ಜನಕ್ಕೆ ಸಿಂಗಟಾಲೂರು ಏತ ನೀರಾವರಿ ಯೋಜನೆ ಎಂದರೆನೆಂಬುದಾಗಿಯಾದರೂ ತಿಳಿದಿದೆಯೇ?
ಡಬ್ಬಿಂಗ್ ಎಂದರೆ ಕನ್ನಡ ಭಾಷೆಗೆ ಬಂದ ಸಂಚಕಾರ ಎಂಬ ಮಾತುಗಳಲ್ಲಿ ಯಾವುದೇ ಹುರುಳಿಲ್ಲ. ಚಿತ್ರಗಳು ಡಬ್ ಆಗಿ ಬರುವುದರಿಂದ ಚಿತ್ರಗಳಲ್ಲಿಯ ಬಾಷೆ, ಕನ್ನಡವೇ ಆಗಿರುತ್ತದೆ. ಹಾಗಿದ್ದಲ್ಲಿ ಕನ್ನಡಕ್ಕಾಗುವ ಹಾನಿಯಾದರೂ ಏನು? ಇದರಿಂದ ಕನ್ನಡ ಭಾಷೆ, ಅನ್ಯಭಾಷೆಗಳ ದಾಳಿಯಿಂದ ಪಾರಾದಂತಾಗುತ್ತದೆ.  ಡಬ್ಬಿಂಗ್ ಒಂದು ಪೆಡಂಭೂತ. ಅದನ್ನು, ಹೊಡೆದೊಡಿಸಬೇಕು ಅದಕ್ಕಾಗಿ ಬಂದ್, ತಡೆಗಳನ್ನು ನಡೆಸಲಾಗುವುದೆಂಬ ವ್ಯರ್ಥ ಆಲಾಪಗಳನ್ನು ಬಿಟ್ಟು ಕಾಲದ ಬದಲಾವಣೆಯನ್ನು ಸ್ವೀಕರಿಸಿ ಎದುರಾಗಿರುವ ಹೊಸ ಸವಾಲಿಗೆ ಎದೆಯೊಡ್ಡಬೇಕಲ್ಲವೇ? ಸ್ಪರ್ಧೆಯೇ ಬೇಡವೆಂದಾದರೆ ಗೆಲವು ತಾನೇ ಹೇಗೆ ಒಲಿದೀತು? ಈ ಸವಾಲಿನಲ್ಲಿ ನಮ್ಮ ಚಿಂತ್ರರಂಗ ಸದಭಿರುಚಿಯ ಚಿತ್ರಗಳನ್ನು ನಿರ್ಮಿಸುವ ಮೂಲಕ ಅನ್ಯಭಾಷೆಗೂ ಪೈಪೋಟಿ ನೀಡುವ ಚೈತನ್ಯವನ್ನು ಬೆಳೆಸಿಕೊಳ್ಳಲಿ. ಆ ಮೂಲಕ ಕನ್ನಡ ಪ್ರೇಕ್ಷಕನಿಗೂ, ಕನ್ನಡ ಭಾಷೆಗೂ, ಚಿತ್ರರಂಗಕ್ಕೂ ಗೆಲವು ಸಿಗುವಂತಾಗಲಿ ಎಂಬುದೇ ಆಶಯ.

- ಕಿರಣ್ ಜೋಶಿ
kiran.kijo916@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.