ನಾವು ತಿಳಿದಿರಬೇಕಾದ ಹಮ್ಮು, ದಮ್ಮು, ಸೊಮ್ಮು

ಚಿತ್ರದುರ್ಗದ ನೀಲಕಂಠೇಶ್ವರ ಸಭಾಭವನದಲ್ಲಿ ವೀರಶೈವ ವಧು-ವರರ ಸಮಾವೇಶ. ಒಬ್ಬರಿಂದ ಪ್ರಾಸ್ತಾವಿಕ ಮಾತುಗಳು. ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ ಪೋಡಿಯಮ್ನಿಂದ ಹಿಂತಿರುಗುವಾಗ ಮುಂದಿನ ಸಾಲಿನಲ್ಲಿ ಕುಳಿತ ಒಬ್ಬರ ಕಾಲನ್ನು ತುಳಿದುಬಿಟ್ಟರು. ತುಳಿತಕ್ಕೆ ಒಳಗಾದ ಅವರು ತಮ್ಮ ಕಾಲನ್ನು ಸರಕ್ಕನೇ ಹಿಂತೆಗೆದುಕೊಂಡರು. ತುಳಿದ ನೋವಿಗೆ ಹಾಯ್ ಅಂದರು. ವೇದಿಕೆಯಲ್ಲಿ ಕುಳಿತಿದ್ದ ನಾನು ಇದನ್ನು ಗಮನಿಸಿ, ಪಕ್ಕದಲ್ಲಿ ವಿರಾಜಮಾನರಾಗಿದ್ದ ಇತರೆ ಅತಿಥಿಗಳೊಟ್ಟಿಗೆ ಹಂಚಿಕೊಂಡೆ ಮತ್ತು ನನ್ನ ಮಾತುಗಳಲ್ಲಿಯು ಅದನ್ನು ಬಳಸಿಕೊಂಡೆ. ಕಾಲು ತುಳಿದ ವ್ಯಕ್ತಿಯು, ತುಳಿಸಿಕೊಂಡ ವ್ಯಕ್ತಿಗೆ ಶಿಷ್ಟಾಚಾರಕ್ಕಾದರೂ ಕ್ಷಮೆ ಕೋರಲಿಲ್ಲ. ನಮ್ಮಲ್ಲಿ ಕೆಲವೊಂದು ಹಳೆಯ ಅಷ್ಟೇ ಒಳ್ಳೆಯ ಸಂಪ್ರದಾಯಗಳಿವೆ. ಹೋಗುವಾಗ-ಬರುವಾಗ ಇನ್ನೊಬ್ಬರಿಗೆ ತಮ್ಮ ಕಾಲು ತಾಕಿದಾಗ, ಎರಡೂ ಕೈಯಿಂದ ಅವರ ಶರೀರವನ್ನು ಸ್ಪರ್ಶಿಸುತ್ತ ನಮಸ್ಕರಿಸುತ್ತಾರೆ. ಶಿವಶಿವಾ ಎಂದೋ ಬಸವಬಸವಾ ಎಂದೋ ಉಚ್ಚರಿಸುತ್ತಾರೆ. ಮತ್ತೊಬ್ಬರಿಗೆ ಕಾಲು ತಾಕಿಸುವುದು ಮಹಾಪಾಪವೆಂಬ ಭಾವನೆ ಅವರದು. ಉದ್ದೇಶಪೂರ್ವಕವಾಗಿ ಯಾರು ಹಾಗೆ ಮತ್ತೊಬ್ಬರ ಕಾಲನ್ನು ತುಳಿಯಲಾರರು. ಅದು ಆಕಸ್ಮಿಕವಾಗಿ ನಡೆಯುವ ಅಚಾತುರ್ಯ. ಅಚಾತುರ್ಯಕ್ಕಾಗಿ ಅಷ್ಟೇ ಭಾವಪೂರಿತವಾದ ಕ್ಷಮಾಯಾಚನೆ. ಒಮ್ಮೊಮ್ಮೆ ಆ ನೋವು ಲಘುವಾಗಿದ್ದು, ಒಮ್ಮೊಮ್ಮೆ ಯಮಯಾತನೆ. ಶರೀರದ ಬೇರೆಬೇರೆ ಅಂಗಾಂಗಗಳಿಗೆ ತಾಕಿದಾಗ ಅಷ್ಟೇನು ಯಾತನೆ ಆಗುವುದಿಲ್ಲ. ಪಾದ ಮತ್ತು ಬೆರಳುಗಳನ್ನು ತುಳಿದಾಗ ಅದೆಂಥ ಯಾತನೆ! ಜೀವವೇ ಹೋದಂತಾಗುವುದು. ಆ ನೋವನ್ನು ಸುಧಾರಿಸಿಕೊಳ್ಳಲು ಹಲವು ಕ್ಷಣಗಳೇ ಹಿಡಿಯುವುದು. ಅದಕ್ಕಾಗಿ ತುಳಿದವರೊಟ್ಟಿಗೆ ಜಗಳ ಕಾಯುವಂತಿಲ್ಲ, ನೋವು ಸುಮ್ಮನೆ ಇರಲು ಬಿಡುವುದಿಲ್ಲ.
ಇಂಥ ಅಚಾತುರ್ಯಗಳಿಗೆ ಕಾರಣವೇನು? ಕೆಲವರ ಬದುಕನ್ನು ಹಮ್ಮು ಆವರಿಸಿಕೊಂಡು ಅನಾಹುತಗಳನ್ನು ತರುತ್ತ ಹೋಗುತ್ತದೆ. ಇನ್ನು ಕೆಲವರ ಬದುಕಿನಲ್ಲಿ 'ದಮ್ಮು'. ಇದು ಕೂಡಾ ಅತೀವ ಯಾತನೆಯನ್ನು ನೀಡುತ್ತದೆ. ಮತ್ತೆ ಕೆಲವರ ಬದುಕಿನಲ್ಲಿ ಸೊಮ್ಮು. ಸೊಮ್ಮು ಅಂದರೆ ಎಚ್ಚರ. ಮತ್ತೆ ಮತ್ತೆ ಅಚಾತುರ್ಯಗಳಿಗೆ ಕಾರಣರಾಗುವವರನ್ನು ಎಚ್ಚರಗೇಡಿ ಅನ್ನುತ್ತಾರೆ. ಅಂಥವರಲ್ಲಿ ಎಚ್ಚರ ಇರುವುದಿಲ್ಲವೆಂದಲ್ಲ; ಇರುತ್ತದೆ. ಆದರೆ ಅದರ ಪ್ರಮಾಣ ಕಡಿಮೆ. ಮೈಯೆಲ್ಲ ಎಚ್ಚರಾಗಿರುವವರಲ್ಲಿ ಇಂಥ ಅನಾಹುತಗಳಿಗೆ ಆಸ್ಪದ ಇರುವುದಿಲ್ಲ. ಅಂಥವರನ್ನು ನೋಡಿ ಕಲಿಯಬೇಕಾಗುತ್ತದೆ. ಅವರೇ ಎಲ್ಲ ಹಂತದಲ್ಲೂ ಮಾದರಿ. ರೋಲ್ ಮಾಡೆಲ್ಲು. ಅವರನ್ನು ಅನುಕರಣೆ ಮಾಡಲಾಗದಿದ್ದರೂ ಅವರ ಎಚ್ಚರವನ್ನು ಅನುಕರಿಸಬಹುದು. ಇನ್ನೊಬ್ಬರಿಗೆ ತನ್ನಿಂದ ತೊಂದರೆ ಆಗಬಾರದೆಂಬ ಜೀವಪರ ಕಾಳಜಿ ಇದ್ದಲ್ಲಿ, ಅದು ನಮ್ಮೊಳಗೆ ಜಾಗರೂಕತೆಯನ್ನು ತರುತ್ತದೆ. ಇಂಥ ಜಾಗೃತಿ ಇದ್ದಲ್ಲಿ, ಆ ವ್ಯಕ್ತಿಯು ಸಂವೇದನಾಶೀಲನಾಗುತ್ತಾನೆ. ಒಂದಿಲ್ಲೊಂದು ವೇದಿನೆ ನೀಡುವವನು ಜೀವಪೀಡಕನೆನಿಸಿಕೊಳ್ಳುತ್ತಾನೆ. ಅವನು ಜೀವ ಭಂಜಕ- ಜೀವ ಭಕ್ಷಕ. ಕಾಯೇನ-ವಾಚಾ-ಮನಸಾ ಇತರರಿಗೆ ನೋವುಂಟು ಮಾಡದವನು ಜೀವ ರಕ್ಷಕ. ಅವನೇ ಮುಂದಿನ ದಿನಗಳಲ್ಲಿ ನೋವು ನಿವಾರಕನೆನಿಸಿಕೊಳ್ಳುತ್ತಾನೆ.
ಕಾಲುತುಳಿದ ವ್ಯಕ್ತಿಯು ಅಜ್ಞಾನಿ ಅಲ್ಲ. ಸ್ನಾತಕೋತ್ತರ ಪದವಿ ಪಡೆದು, 30-40 ವರ್ಷಗಳವರೆಗೆ ಸಂಸ್ಥೆಯೊಂದರಲ್ಲಿ ಉಪನ್ಯಾಸಕ ಹುದ್ದೆಯನ್ನು ನಿರ್ವಹಿಸಿ, ನಿವೃತ್ತರಾಗಿ ಈಗ ಸಮಾಜ ಸೇವೆಯತ್ತ ತಿರುಗಿರುವವರಾಗಿದ್ದಾರೆ. ಅವರು ಮಾಡಿದ ಅಚಾತುರ್ಯಕ್ಕೆ ಬಲವಾದ ಕಾರಣವೇನೆಂದರೆ, ಸೊಮ್ಮು. ಅದರ ಪ್ರಮಾಣ ಕೆಲವರಲ್ಲಿ ಕಡಿಮೆ ಇರುತ್ತದೆ. ಸೊಮ್ಮು ಅಂದರೆ ಪರಿಪೂರ್ಣ ಪ್ರಜ್ಞೆ. ಅಗಾಧವಾದ ಎಚ್ಚರಿಕೆ. ಕೆಲವರ ಬದುಕಿನಲ್ಲಿ ಅದು ದುರ್ಬಲವಾಗಿರುತ್ತದೆ. ಕೆಲವರು ಆರ್ಥಿಕವಾಗಿ ಶ್ರೀಮಂತರಿರುತ್ತಾರೆ. ಸೊಮ್ಮಿನ ವಿಚಾರದಲ್ಲಿ ಅಂಥವರು ದುರ್ಬಲರಿರುತ್ತಾರೆ. ಜೀವನಕ್ಕೆ ಅಗತ್ಯವಾದ ಸೊಮ್ಮನ್ನು ಯಾವ ಗುರುಕುಲ ಅಥವಾ ವಿಶ್ವವಿದ್ಯಾಲಯದಲ್ಲಿಯೂ ಬೋಧಿಸುವುದಿಲ್ಲ. ಅವರವರೇ ರೂಢಿಸಿಕೊಳ್ಳಬೇಕಾದ ಮಹಾವಿದ್ಯೆ ಅದು. ಸೊಮ್ಮು ಯಾರಲ್ಲಿ ದಪ್ಪವಾಗಿರುತ್ತದೋ, ಅವರಲ್ಲಿ ಹಮ್ಮು ನೀಳವಾಗಿರುತ್ತದೆ. ಯಾರಲ್ಲಿ ಹಮ್ಮು ಪ್ರಬಲವಾಗಿರುತ್ತದೋ ಅಂಥವರಲ್ಲಿ ಸೊಮ್ಮು ದುರ್ಬಲವಾಗಿರುತ್ತದೆ. ಅವರ ಚರ್ಮ ದಪ್ಪನಾಗಿರುತ್ತದೆ. ದಪ್ಪ ಚರ್ಮದವರಿಗೆ ಸೂಕ್ಷ್ಮತೆ ಅರ್ಥ ಆಗುವುದಿಲ್ಲ. ಅಂಥವರನ್ನು ದರ್ಪ ಚರ್ಮದವರು ಎಂದು ಕರೆಯಲಾಗುತ್ತದೆ. ಎಚ್ಚರಗೇಡಿ ಅಂದರೆ ಚರ್ಮಗೇಡಿ. ಸೊಮ್ಮನ್ನು ಇಲ್ಲಿ ಸೂಕ್ಷ್ಮತೆಗೆ ಹೋಲಿಸಬಹುದು. ಸೂಕ್ಷ್ಮಪ್ರಜ್ಞೆ, ಸುಪ್ತಪ್ರಜ್ಞೆ. ಇದನ್ನು ನಾವು ಕಷ್ಟಪಟ್ಟು ಬೆಳೆಸಿಕೊಳ್ಳಬೇಕಾಗುತ್ತದೆ. ಸೊಮ್ಮು ನಿಡಿದಾಗಿದ್ದವರು ಸೂಕ್ಷ್ಮಮತಿಗಳು. ಅವರದು ಮೈಯೆಲ್ಲ ಎಚ್ಚರ.
ಅಚಾತುರ್ಯಗಳು ಆಗುತ್ತವೆ ಬಿಡಿ. ಕಾಲು ತುಳಿಸಿಕೊಂಡ ವ್ಯಕ್ತಿಗೆ ವಿಷಾದವನ್ನು ವ್ಯಕ್ತಪಡಿಸಬಹುದಿತ್ತು, ಕ್ಷಮೆ ಕೇಳಬಹುದಿತ್ತು. ಪಾಶ್ಚಾತ್ಯ ಜಗತ್ತಿನಲ್ಲಿ ಒಬ್ಬರನ್ನು ದಾಟಿಕೊಂಡು ಹೋಗಬೇಕಾದಾಗ 'ಎಕ್ಸ್ಕ್ಯೂಸ್ಮಿ' ಅನ್ನುತ್ತ ಹೋಗುತ್ತಾರೆ. ಇನ್ನು ಕಾಲು ತಾಕಿದ ಸಂದರ್ಭದಲ್ಲಿ 'ವೆರಿ ಸಾರಿ' ಅನ್ನುತ್ತ, ಸಂತೈಸಿ ಹೋಗುವುದು ವಾಡಿಕೆ. ಶಿಷ್ಟಾಚಾರ ಅಥವಾ ಸೌಜನ್ಯವು ವ್ಯಕ್ತಿಯನ್ನು ಸಂಸ್ಕಾರವಂತನನ್ನಾಗಿಸುತ್ತವೆ. ಅವನ ಬಾಯಿಂದ ಅವಾಚ್ಯ ಶಬ್ದಗಳಾಗಲಿ ಅಥವಾ ಅಶ್ಲೀಲ ನುಡಿಗಳಾಗಲಿ ಬರುವುದಿಲ್ಲ. ಹೃದಯಕ್ಕೆ, ಬುದ್ಧಿಗೆ ಮತ್ತು ಭಾವಕ್ಕೆ ಸಂಸ್ಕಾರ ಸಿಕ್ಕಾಗ ನಾಲಗೆಯಿಂದ ಬರುವಂತಹ ಮಾತುಗಳು ಕೋಮಲ ಆಗಿರುತ್ತವೆ.
ಅಜ್ಞಾನ ಮತ್ತು ಮೂರ್ಖತನವು ವ್ಯಕ್ತಿಯಿಂದಾಗುವ ಅಚಾತುರ್ಯಕ್ಕೆ ವೇದಿಕೆಯನ್ನು ಒದಗಿಸುತ್ತದೆ. ಅಚಾತುರ್ಯವು ವ್ಯಕ್ತಿಯನ್ನು ಅಮಾಯಕನನ್ನಾಗಿಸುತ್ತದೆ. ಅಮಾಯಕರ ಮೇಲೆ ಅನುಕಂಪ ಇರಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಅಪಹಾಸ್ಯವಾಗಲಿ ದ್ವೇಷಭಾವನೆಯಾಗಲಿ ಸಲ್ಲದು.
-ಡಾ. ಶಿವಮೂರ್ತಿ ಮುರುಘಾ ಶರಣರು
ಶ್ರೀಮುರುಘಾಮಠ, ಚಿತ್ರದುರ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


