ವಾಟಾಳ್ ನಾಗರಾಜ್ಅವರಿಗೊಂದು ಸಲಹೆ
ಕನ್ನಡ ಭಾಷೆಯ ಉಳಿವಿಗಾಗಿ ತಮ್ಮ ಅವಿರತ ಹೋರಾಟವನ್ನು ಇಂದಿಗೂ ಯಾರೂ ಸಹ ಪ್ರಶ್ನಿಸಲಾರರು. ಆದರೆ ಒಂದು ಸತ್ಯವನ್ನು ತಮ್ಮ ಗಮನಕ್ಕೆ ತರುವ ಪ್ರಯತ್ನವಿದು. ಕನ್ನಡ ಭಾಷೆ ನಶಿಸಿಹೋಗುತ್ತಿರಲು ಕನ್ನಡದಲ್ಲಿ ಡಬ್ಬಿಂಗ್ ಇಲ್ಲದಿರುವುದೇ ಕಾರಣ ಎಂದು ನನ್ನ ಅಭಿಪ್ರಾಯ....
ಉದಾಹರಣೆ: ಒಂದು ಊರಿನಲ್ಲಿ ನೀರಿನ ಅಭಾವದಿಂದಾಗಿ ಅಣೆಕಟ್ಟೆಯನ್ನು ಕಟ್ಟಲು ಸರ್ಕಾರ ತೀರ್ಮಾನಿಸುತ್ತದೆ. ಆದರೆ ಸದರಿ ಆಣೆಕಟ್ಟಿಯಿಂದಾಗಿ ನಾಲ್ಕಾರು ಹಳ್ಳಿಗಳು ಮತ್ತು ಒಂದು ಪಟ್ಟಣ ಹಿನ್ನೀರಿನಲ್ಲಿ ಮುಳುಗಡೆಯಾಗುವುದಲ್ಲದೆ ಹತ್ತು ಸಾವಿರ ಜನರು ಮನೆ ಕಳೆದುಕೊಳ್ಳುತ್ತಾರೆ ಹಾಗೂ ಸುಮಾರು ಎರಡು ಸಾವಿರ ಎಕರೆ ಜಮೀನು ಹಿನ್ನೀರಿನಲ್ಲಿ ಮುಳುಗಡೆಯಾಗುತ್ತದೆ. ಆದರೆ ಸದರಿ ಆಣೆಕಟ್ಟೆಯಿಂದಾಗಿ ನಗರದ ಸುಮಾರು 50 ಲಕ್ಷ ಜನರಿಗೆ ಕುಡಿಯುವ ನೀರು ದೊರಕುವುದಲ್ಲದೆ ಸರಿಸುಮಾರು ಒಂದು ಲಕ್ಷ ಎಕರೆ ಜಮೀನಿಗೆ ನೀರಿನ ಸೌಲಭ್ಯ ದೊರಕುವುದೆಂದು ವರದಿಯಲ್ಲಿ ತಿಳಿಸಲಾಗಿರುತ್ತದೆ. ಮುಳುಗಡೆಯಾಗುವ ಊರಿನ ಸಾವಿರಾರು ಜನರು ಅಣೆಕಟ್ಟೆಯ ವಿರುದ್ಧ ತೀವ್ರ ಹೋರಾಟ ಮಾಡುತ್ತಾರೆ. ಆದರೆ ಸರ್ಕಾರ ಲಕ್ಷಾಂತರ ಜನತೆಗೆ ಅನುಕೂಲವಾಗುವ ಅಣೆಕಟ್ಟೆಯನ್ನು ಕಟ್ಟಿ, ಕೇವಲ ಸಾವಿರಾರು ಜನರಿಗೆ ಪುನರ್ವಸತಿ ಕಲ್ಪಿಸಿಕೊಡುತ್ತದೆ.
ಕರ್ನಾಟಕ ಅಲ್ಲದೆ ದೇಶಾದ್ಯಂತ ಇರುವ ಸಿನಿಮಾ ಮಂದಿರಗಳು ಬ್ರಹ್ಮ ರಾಕ್ಷಸನಿದ್ದಂತೆ. ಆ ಥಿಯೇಟರ್ಗಳಿಗೆ ಪ್ರತಿ ವಾರ ಹೊಸ ಸಿನಿಮಾ ಎಂಬ ಆಹಾರವನ್ನು ಉಣಬಡಿಸಲಾಗುತ್ತದೆ. ಕೇವಲ ಕೆಲವು ಕೋಟಿಗಳಲ್ಲಿ ನಿರ್ಮಿಸಿದ ಕನ್ನಡ ಸಿನಿಮಾಗಳು ಥಿಯೇಟರ್ ಮಾಲೀಕರಿಗೆ ವಾರದ ಬಾಡಿಗೆ ಹತ್ತು ಸಾವಿರಕ್ಕೆ ದೊರಕಿದರೆ ಅದೇ ಇತರ ಭಾಷೆಯ ಅದ್ಧೂರಿ ಸಿನಿಮಾಗಳು ಕೇವಲ ಎರಡರಿಂದ ಮೂರು ಸಾವಿರಕ್ಕೆ ದೊರಕುತ್ತವೆ. ಕನ್ನಡ ಭಾಷೆಯ ಬಗ್ಗೆ ಯಾವುದೇ ಕಳಕಳಿಯಿಲ್ಲದ ಥಿಯೇಟರ್ ಮಾಲೀಕರು ಹೆಚ್ಚಾಗಿ ಇತರೆ ಭಾಷೆಯ ಸಿನಿಮಾಗಳನ್ನು ಪ್ರದರ್ಶನ ಮಾಡುತ್ತಾರೆ. ಇದರಿಂದಾಗಿ ಪ್ರತಿ ಸಣ್ಣ ಹಳ್ಳಿಗಳಲ್ಲೂ ನಮ್ಮ ಕನ್ನಡಿಗರು ಇತರೆ ಭಾಷೆ ಸಿನಿಮಾಕ್ಕೆ ಜೋತು ಬಿದ್ದಿದ್ದಾರೆ. ಕೇವಲ ನಾಲ್ಕಾರು ಹೆಸರಾಂತ ಕನ್ನಡ ನಟರ ಸಿನಿಮಾ ಹೊರತು ಪಡಿಸಿದರೆ ಯಾವುದೇ ಇತರೆ ನಟರ ಸಿನಿಮಾಗಳು ಸಹ ಅಲ್ಲಿ ಬಿಡುಗಡೆಯಾಗುವ ಭಾಗ್ಯ ಕಾಣುವುದೇ ಇಲ್ಲ.
ಚಿತ್ರರಂಗದ ಜನರಿಗೆ ಇಷ್ಟವಿರಲಿ ಬಿಡಲಿ, ಶ್ರೀ ಸಾಮಾನ್ಯನಿಗೆ ಇಷ್ಟವಾಗುವಂತಹ ಚಿತ್ರಗಳು ಯಾವುದೇ ಭಾಷೆಯಲ್ಲಿ ಬಂದರೂ ಅವನು ಥಿಯೇಟರಿಗೆ ಹೋಗಿ ಸಿನಿಮಾ ನೋಡದೆ ಇರಲಾರ. ಅಂಥ ಸನ್ನಿವೇಶದಲ್ಲಿ ್ಲಅವನಿಗೆ ಇಷ್ಟವಾಗುವ ಸಿನಿಮಾವನ್ನು ತನ್ನ ಮಾತೃ ಭಾಷೆಯಾದ ಕನ್ನಡದಲ್ಲಿಯೇ ನೋಡುವ ಸೌಲಭ್ಯವನ್ನು ಕಲ್ಪಿಸುವುದರಿಂದ ವಿಶ್ವದ ಅದ್ಭುತ ಚಿತ್ರಗಳನ್ನು ನೋಡುವ ಅವಕಾಶವನ್ನೂ, ಆ ಮೂಲಕ ಅವನ ಜ್ಞಾನದ ಪರಿಧಿಯನ್ನು ವಿಸ್ತರಿಸಿಕೊಳ್ಳಲು ಅನುವು ಮಾಡಿಕೊಟ್ಟಂತಾಗುತ್ತದೆ. ಅದಕ್ಕಿಂತ ಹೆಚ್ಚಾಗಿ ಅನಿವಾರ್ಯವಾಗಿ ಬೇರೆ ಭಾಷೆಗಳಲ್ಲಿ ಸಿನಿಮಾ ನೋಡುವ ಪ್ರಮೇಯದಿಂದಾಗಿ ಆತ ಆ ಭಾಷೆಯನ್ನು ಕಲಿಯಬೇಕಾಗುತ್ತದೆ. ಡಬ್ಬಿಂಗಿಗೆ ಅವಕಾಶ ಕಲ್ಪಿಸವುದರಿಂದ ಕನ್ನಡ ಭಾಷೆಯಲ್ಲಿಯೇ ವಿಶ್ವದ ಎಲ್ಲಾ ಅತ್ಯುತ್ತಮ ಚಲನಚಿತ್ರಗಳನ್ನು ನೋಡುವ ಅವಕಾಶ ಕನ್ನಡ ನಾಡಿನಲ್ಲಿ ನೆಲೆಸಿದ ಪ್ರತಿಯೊಬ್ಬರಿಗೂ ಸಿಗುವಂತಾಗಿ ಕೇವಲ ಕನ್ನಡಿಗರು ಮಾತ್ರವಲ್ಲ ಕನ್ನಡೇತರರೂ ಸಹ ಕನ್ನಡವನ್ನು ಕಲಿಯುವ ಪ್ರಕ್ರಿಯೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಕೇವಲ ಇತರೆ ಭಾಷೆ ಸಿನಿಮಾಗಳ ಹಂಚಿಕೆದಾರರನ್ನು ಕನ್ನಡದ ಹೆಸರಿನಲ್ಲಿ ಬೆದರಿಸುತ್ತಾ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಯಾವುದಾದರೊಂದು ಸ್ಥಾನಮಾನ ಪಡೆದುಕೊಂಡು ಚಿತ್ರರಂಗದ ಯಾವುದೇ ವ್ಯಾಜ್ಯಗಳನ್ನು ಬಗೆಹರಿಸುವ ನೆಪದಲ್ಲಿ ಹಣ ಮಾಡುತ್ತಾ ಡಾ॥ ರಾಜ್ ಕುಮಾರ್ ಹೆಸರಿನ ಮಂತ್ರ ಜಪಿಸುತ್ತಾ, ಬಡಪಾಯಿ ಸಿನಿಮಾ ನಿರ್ಮಾಪಕರ ಹಣದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿಯನ್ನು ಹಲವು ದಶಕಗಳಿಂದ ತಮ್ಮ ವೈಯಕ್ತಿಕ ಕಛೇರಿಯನ್ನಾಗಿ ಮಾಡಿಕೊಂಡಿರುವ ಕೆಲವರ ಮಾತಿಗೆ ಮರುಳಾಗಬೇಡಿ.
ನಾಡಿನ ಸಾಂಸ್ಕೃತಿಕ ಹಿತಕ್ಕೆ ಧಕ್ಕೆ ಬಂದಾಗಲೆಲ್ಲಾ ಅಪ್ರತಿಮ ಹೋರಾಟ ಮಾಡಿ ಜನಪರ ಹೋರಾಟಗಳಿಗೆ ಬೆನ್ನೆಲುಬಾಗಿ ನಿಂತ ನೀವು, ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾಗಿ ನಡೆಯುತ್ತಿರುವ ಈ ಹೋರಾಟದ ಬಗ್ಗೆ ಯೋಚಿಸಿ, ಕಾರ್ಯಪ್ರವೃತ್ತರಾಬೇಕೆಂದು ಬಯಸುತ್ತೇವೆ.
- ಕೆ. ಚಂದ್ರಶೇಖರ್, ಬೆಂಗಳೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

