

ಅಧಿಕಾರ ಎನ್ನುವುದು ಶಾಶ್ವತ ಅಲ್ಲ. ಅದು ಬರುವುದು ಗೊತ್ತಿಲ್ಲ, ಅದೇ ರೀತಿ ಹೋಗುವುದೂ ಗೊತ್ತಿಲ್ಲ ಅಂತಾ ತಿಳಿದಿದ್ದರೂ ಈ ರಾಜಕಾರಣಿಗಳು ಆಡುವ ಆಟ ಒಂದೆರಡಲ್ಲ. ಅಧಿಕಾರ ಕೈಗೆ ಸಿಕ್ಕಾಗ ಅದು ಪಿತ್ರಾರ್ಜಿತ ಆಸ್ತಿ ಎಂಬಂತೆ ಎಗ್ಗು-ಸಿಗ್ಗಿಲ್ಲದೆ ವರ್ತಿಸಿಬಿಡುತ್ತಾರೆ.
ಅಧಿಕಾರ ಇಲ್ಲದಿದ್ದಾಗ ನಯವಿನಯದ ಪ್ರತಿರೂಪದಂತೆ ಇದ್ದವರಿಗೆ ಅದು ಸಿಕ್ಕಾಗ ತಲೆಯೇ ನಿಲ್ಲುವುದಿಲ್ಲ.
ಆದೇನು ದರ್ಪ, ಅದೇನು ಆಹಂಕಾರ, ಅದೇನು ಒಣಪ್ರತಿಷ್ಟೆ - ವರ್ಣನೆಗೇ ನಿಲುಕುವುದಿಲ್ಲ. ಅಧಿಕಾರತ ಪಿತ್ತ ಅವರ ಬುದ್ಧಿ, ವಿವೇಕ ಎಲ್ಲವನ್ನೂ ಮಬ್ಬು ಮಾಡಿಬಿಡುತ್ತದೆ. ಹುಂಬ ತೀರ್ಮಾನಗಳು, ನಿಲುವುಗಳು ಬೇಡ-ಬೇಡ ಎಂದರೂ ಬೆನ್ನಟ್ಟಿ ಬರುತ್ತವೆ. ಆಗ ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿ ಇರುವುದಿಲ್ಲ. ತಮಗೇ ತೋಚಿದ್ದೇ ನೀತಿ, ಮಾಡಿದ್ದೇ ನಿಯಮ ಎಂಬಂತೆ ನಡೆದುಕೊಳ್ಳುತ್ತಾರೆ. ಅಹಂಕಾರ ಮತ್ತು ಆತುರದ ಕೈಗೆ ಬುದ್ದಿ ಕೊಟ್ಟು ಅನಪೇಕ್ಷಿತ ಸಮಸ್ಯೆಗಳನ್ನು ಆಹ್ವಾನಿಸಿಕೊಳ್ಳುತ್ತಾರೆ.
ಇಷ್ಟೆಲ್ಲ ಪೀಠಿಕೆಯ ಹಿನ್ನೆಲೆ ಏನೆಂದರೆ ಈ ಮಂತ್ರಿ ಮಹೋದಯರು ಅಧಿಕಾರ ಸಿಕ್ಕ ತಕ್ಷಣ ಸರಕಾರಿ ಕಚೇರಿ, ಕಟ್ಟಡಗಳ ಸ್ವರೂಪವನ್ನು ತಮ್ಮ ನಂಬಿಕೆಗಳಿಗೆ ತಕ್ಕಂತೆ ಒಡೆದು ಬದಲಾಯಿಸಿಬಿಡುವುದು. ಕೆಲವೊಮ್ಮೆ ಇವರ ನಂಬಿಕೆಗಳು ಅತಿರೇಕಕ್ಕೆ ಹೋಗಿ ಅವು ವಿರೂಪಗೊಂಡಿರುವುದೂ ಉಂಟು. ಅದು ವಿಧಾನಸೌಧ ಇರಬಹುದು, ವಿಕಾಸಸೌಧ ಇರಬಹುದು, ಮುಖ್ಯಮಂತ್ರಿಗಳ ನಿವಾಸ ಇರಬಹುದು, ಗೃಹಕಚೇರಿ ಇರಬಹುದು, ಮಂತ್ರಿಗಳ ಸರಕಾರಿ ನಿವಾಸಗಳಿರಬಹುದು - ಒಬ್ಬೊಬ್ಬರು ಅಧಿಕಾರಕ್ಕೆ ಬಂದಾಗಲೂ ಅವರ ನಂಬಿಕೆ, ಆಚಾರ-ವಿಚಾರಗಳಿಗೆ ತಕ್ಕಂತೆ ಒಂದೊಂದು ರೀತಿಯಲ್ಲಿ ವಿರೂಪಗೊಳ್ಳುವುದು ಅವುಗಳ ಅನಿವಾರ್ಯ ಕರ್ಮ ಆಗಿಬಿಟ್ಟಿದೆ. ಯಾರೊಬ್ಬರು ಆ ಸಂದರ್ಭದಲ್ಲಿ ಆಯಾ ಕಟ್ಟಡಗಳ ಐತಿಹಾಸಿಕ ಮಹತ್ವ ಮತ್ತು ಮೌಲ್ಯ ಈ ಎರಡನ್ನೂ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಮೇಲಾಗಿ ಸ್ವರೂಪ ವಿರೂಪಕ್ಕೆ ಬಳಕೆ ಆಗುವುದು ಯಥಾಪ್ರಕಾರ ಸಾರ್ವಜನಿಕರ ತೆರಿಗೆ ಹಣ. ಹೀಗಾಗಿ ಕಟ್ಟಡವಾಗಲಿ, ಅವುಗಳ ಬದಲಾವಣೆಗೆ ಬಳಸಿದ ಹಣವಾಗಲಿ - ಅವುಗಳ ಸ್ಥಿತಿ 'ಮಂಗನ ಕೈಗೆ ಸಿಕ್ಕ ಮಾಣಿಕ್ಯ'ದಂತಾಗಿರುವುದು ಸತ್ಯ.
ತೀರಾ ಇತ್ತೀಚೆಗೆ ಅರಣ್ಯ ಸಚಿವ ರಮಾನಾಥ ರೈ, ಸಮಾಜ ಕಲ್ಯಾಣ ಸಚಿವ ಆಂಜನೇಯ ಅವರು ವಿಧಾನಸೌಧದ 'ತಮ್ಮ' ಕಚೇರಿ ಕೊಠಡಿಗಳನ್ನು ಬದಲಾವಣೆ ಮಾಡಿಕೊಂಡದ್ದು ವಿವಾದಕ್ಕೆ ಕಾರಣವಾಗಿತ್ತು. ಅಧಿಕಾರ ನಿಮಿತ್ತ ತಮಗೆ ಸಿಗುವ ಕೊಠಡಿಗಳನ್ನು ಪಿತ್ರಾರ್ಜಿತ ಅಸ್ತಿಗಿಂತಲೂ ಹೆಚ್ಚು ಸ್ವೇಚ್ಛೆಯಿಂದ ಬಳಸಿಕೊಳ್ಳುವ ಪ್ರತೀತಿ ಇದೇ ಮೊದಲಲ್ಲ. ಅಮೆರಿಕ ಟೆಕ್ಸಾಸ್ನಲ್ಲಿ ವ್ಯಾಸಂಗ ಮಾಡಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಂದ ಹಿಡಿದು ಪೂಜೆ-ಪುನಸ್ಕಾರಗಳನ್ನು ನಂಬದಿದ್ದ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರವರೆಗೂ ಸಾಕಷ್ಟು ಮಂದಿ ಅಧಿಕಾರಸ್ಥರು ಅದೇ ಅಧಿಕಾರದ ಕಾರಣಕ್ಕಾಗಿ ವಾಸ್ತು ನಂಬಿಕೆಗಳಿಗೆ ಬೇಸ್ತು ಬಿದ್ದು ಸರಕಾರಿ ಗೃಹ ಮತ್ತು ಕಚೇರಿಗಳನ್ನು ಮಾರ್ಪಡಿಸಿಕೊಂಡಿದ್ದಾರೆ. ಇದಕ್ಕೆ ಕೋಟ್ಯಂತರ ರುಪಾಯಿ ಸಾರ್ವಜನಿಕ ಹಣ ಬಳಕೆ ಆಗಿದೆ. ಒಂದೆಡೆ ಮೌಢ್ಯದ ಪ್ರತಿಪಾದನೆ, ಮತ್ತೊಂದೆಡೆ ಸಾರ್ವಜನಿಕ ಹಣದ ದುರ್ಬಳಕೆ ಎಂತಹ ಅತಿರೇಕ ಮುಟ್ಟಿದೆಯೆಂದರೆ ಜೆಡಿಎಸ್ ಮುಖಂಡ ಎಂ.ಸಿ. ನಾಣಯ್ಯ ಅವರಂಥವರು ಸರಕಾರಿ ಕಟ್ಟಡಗಳ ವಿರೂಪ ತಡೆ ಖಾಸಗಿ ವಿಧೇಯಕವನ್ನು ವಿಧಾನ ಪರಿಷತ್ನಲ್ಲಿ ಮಂಡನೆ ಮಾಡುವತನಕ. ನಾಣಯ್ಯನವರ ಆಶಯವನ್ನು ಅರ್ಥ ಮಾಡಿಕೊಂಡ ಸರಕಾರ ಇದೀಗ ತಾನೇ ಅಂತಹದೊಂದು ವಿಧೇಯಕ ಮಂಡನೆಗೆ ಮನಸ್ಸು ಮಾಡಿದೆ. ಇದಕ್ಕಾಗಿ ಖಾಸಗಿ ವಿಧೇಯಕ ವಾಪಸ್ಸು ಪಡೆಯುವಂತೆ ನಾಣಯ್ಯನವರ ಮನವೊಲಿಸಿದೆ.
ಈ ರಾಜಕಾರಣಿಗಳಿಗೆ ಏನಾಗಿದೆಯೋ ಗೊತ್ತಿಲ್ಲ. ಅಧಿಕಾರ ಕೈಗೆ ಬಂದ ತಕ್ಷಣ ಮೈಮೇಲೆ ದೇವರು ಬಂದಂತೆ ಆಡಿಗಿಬಿಡುತ್ತಾರೆ. ಇವರ ಸ್ವಂತ ಮನೆಯಲ್ಲಿ ಹತ್ತಿಪ್ಪತ್ತು ವರ್ಷ ಕಳೆದಿದ್ದರೂ ಹಾಸಿಗೆ-ಹೊದಿಕೆ ಬದಲಿಸಿರುವುದಿಲ್ಲ. ಅಪ್ಪನಿಂದಲೋ ತಾತನಿಂದಲೂ ಬಳುವಳಿಯಾಗಿ ಬಂದ ಪಿತ್ರಾರ್ಜಿತ ಆಸ್ತಿ ಆಗಿದ್ದರಂತೂ ಹುಳು ಹಿಡಿದು, ಪಾಳುಬಿದ್ದ ಸೂರಿನ ತೊಲೆಯನ್ನು ಬಹಳ ಹೆಮ್ಮೆಯಿಂದ ತೋರಿಸಿ ನೂರು ವರ್ಷದ್ದು ಎಂದು ಬೀಗುತ್ತಾರೆ. ಮುತ್ತಾತ ಬಳಸಿದ ಶೌಚಾಲಯ ಎಷ್ಟು ಗಟ್ಟಿಮುಟ್ಟಾಗಿದೆ ನೋಡಿ ಎಂದು ಎದೆಯುಬ್ಬಿಸಿ ಹೇಳುತ್ತಾರೆ. ಸುಣ್ಣಬಣ್ಣ ಬದಲಿಸಲು ಮನೆಯಲ್ಲಿ ಒಂದು ಸಣ್ಣ ಸ್ವಾತಂತ್ರ್ಯ ಸಂಗ್ರಾಮವೇ ನಡೆದು ಹೋಗಿರುತ್ತದೆ. ತಟ್ಟೆ, ಲೋಟ, ಕಪ್ಪು-ಸಾಸರುಗಳು ಕಿಲುಬಿನ ಜತೆ ಕಿತ್ತಾಡುತ್ತಿರುತ್ತವೆ. ಅದೇ ಪಾಳು ಕುರ್ಚಿ, ಟೇಬಲ್ಲು ಸೇರಿದಂತೆ ಹಳೇ ಪೀಠೋಪಕರಣಗಳು ಹುಳುಹುಪ್ಪಟೆಗಳ ಜತೆಗಿನ ಸಮರದಲ್ಲಿ ಸೋತು ಕೊನೆಯ ಕ್ಷಣಗಳನ್ನು ಎಣಿಸುತ್ತಿದ್ದರೂ ಇವರಿಗೆ ಏನೂ ಅನ್ನಿಸಿರುವುದೇ ಇಲ್ಲ. ಎಲ್ಲವೂ 'ಆ್ಯಂಟಿಕ್ ಪೀಸ್' (ಪುರಾತನ) ಎಂಬ ಹಣೆಪಟ್ಟಿಯಡಿ ಏದುಸಿರುಬಿಡುತ್ತಿರುತ್ತವೆ.
ತಮ್ಮ ಮನೆಯ ಸಂಪತ್ತು, ಸವಲತ್ತುಗಳಿಗೆ ಇಂತಹ 'ಮರ್ಯಾದೆ' ಕೊಡುವ ಮಂದಿ ಅಧಿಕಾರ ಬಂದಾಕ್ಷಣ ವರಸೆಯನ್ನೇ ಬದಲಿಸಿಬಿಡುವುದೇ. ಮಂತ್ರಿ, ಮುಖ್ಯಮಂತ್ರಿ ಆದಾಕ್ಷಣ ಇವರು ತಮ್ಮನ್ನು 'ಇಂದ್ರ'ನಂತೆಯೂ, ತಾವಿರುವ ಜಾಗವನ್ನು 'ಅಮರಾವತಿ' ಎಂತಲೂ ಕಲ್ಪಿಸಿಕೊಂಡು ಬಿಡುತ್ತಾರೆ. ಅಧಿಕಾರದ ಆವಾಹನೆ ಇವರತನವನ್ನೇ ಮಾಯ ಮಾಡಿಬಿಡುತ್ತದೆ. ಪುಕ್ಕಸಟ್ಟೆ ಸಿಗುವ ಸರಕಾರಿ ಮನೆ, ಮಠ ಎಲ್ಲವೂ ಬದಲಾವಣೆ ಆಗಿಬಿಡಬೇಕು. ಖಾಸಗಿ ಬದುಕಿನಲ್ಲಿ ಜ್ಯೋತಿಷಿಗಳನ್ನು ನಂಬದ, ದೇಗುಲಗಳ ದರ್ಶನವನ್ನೇ ಮಾಡಿರದ ಇವರಿಗೆ ಅಧಿಕಾರದ ಮೇಲಿನ ವ್ಯಾಮೋಹ ಹಠಾತ್ ನಂಬಿಕೆಗಳನ್ನು ಪ್ರತ್ಯಕ್ಷ ಮಾಡಿಸಿಬಿಡುತ್ತದೆ. ಆಗ ಇವರು ಇದ್ದಕ್ಕಿದ್ದಂತೆ ನಂಬುವ ವಾಸ್ತುವೇನು? ವಾಸ್ತು ಪ್ರಕಾರ ಕಚೇರಿ ಗೋಡೆ ಒಡೆಯುವುದೇನು? ಕುರ್ಚಿ, ಮೇಜು, ಸೋಫಾ, ಕರ್ಟನ್ಗಳನ್ನು ಬದಲಾಯಿಸುವುದೇನು? ಹರೆಹವಾರಿ ಹೂದಾನಿ, ಕಪ್ಪು-ಸಾಸರುಗಳನ್ನು ತರಿಸುವುದೇನು? ಶಾಶ್ವತವಲ್ಲದ, ಮೂರು ದಿನದ ಅಧಿಕಾರಕ್ಕಾಗಿ ಸಾರ್ವಜನಿಕರ ಲಕ್ಷಾಂತರ, ಕೋಟ್ಯಂತರ ರುಪಾಯಿಗಳನ್ನು ನೀರಿನಂತೆ ಖರ್ಚು ಮಾಡುವುದೇನು? ಈ ರೀತಿ ನೀರಿನಂತೆ ದುಡ್ಡು ಖರ್ಚು ಮಾಡುವುದರಲ್ಲಿ ಚಲಾವಣೆ ಆಗುವ ಆಹಮಿಕೆಯೇನು? ಆ ಆಹಮಿಕೆಯಲ್ಲಿ ಕಾಣುವ ವಿಕೃತ ಆನಂದವೇನು? ಸ್ವಂತ ದುಡ್ಡಾಗಿದ್ದರೆ, ಸ್ವಂತ ಮನೆಯಾಗಿದ್ದರೆ ಇಷ್ಟೆಲ್ಲ ಖರ್ಚು ಮಾಡುತ್ತಿದ್ದರೇ? 'ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ' ಎಂಬ ಮಾತು ಚಾಲ್ತಿಗೆ ಬಂದಿರುವುದು ಇಂತವರಿಂದಲೇ.
ಕೆಲವೊಮ್ಮೆ ಈ ತರಹದ ತೋರಿಕೆಯಲ್ಲಿ ಒಣಪ್ರತಿಷ್ಟೆ, ಹಗೆತನ ಕೂಡ ಕೆಲಸ ಮಾಡುತ್ತದೆ ಎಂಬುದನ್ನೂ ನಂಬಬೇಕಾದ ದೌರ್ಬಾಗ್ಯ ನಮ್ಮದು. ತಮಿಳುನಾಡಿನಲ್ಲಿ ನೋಡಬೇಕು. ರೋಷ-ದ್ವೇಷದ ಸಾಕ್ಷಾತ್ಕಾರವೇ ಸರಿ. ಮುಖ್ಯಮಂತ್ರಿ ಸ್ಥಾನದಲ್ಲಿ ಕರುಣಾನಿಧಿ ಮತ್ತು ಜಯಲಲಿತಾ ಅದಲು-ಬದಲಾದಾಗಲೆಲ್ಲ ಸರಕಾರಿ ಗೃಹ ಮತ್ತು ಕಚೇರಿಯಲ್ಲಿ ಸೂಜಿಯಿಂದ ಹಿಡಿದು ಕಕ್ಕಸು ಮನೆಯ ಕಮ್ಮೋಡ್ವರೆಗೂ ಪ್ರತಿಯೊಂದು ಬದಲಾಗಬೇಕು. ಕಾರಣ ಇಷ್ಟೇ. ಅವರು ಬಳಸಿದ್ದನ್ನು ಇವರು ಬಳಸಬಾರದು ಎಂಬ ದ್ವೇಷಪೂರಿತ ಹಠ. ಇದು ಬರೀ ತಮಿಳುನಾಡಿನ ಮುಖ್ಯಮಂತ್ರಿ ಕಚೇರಿಗಷ್ಟೇ ಸೀಮಿತವಾಗಿಲ್ಲ. ಆಗೊಮ್ಮೆ-ಈಗೊಮ್ಮೆ ಇವರು ದಿಲ್ಲಿಗೆ ಹೋದಾಗಲೆಲ್ಲ ತಂಗುವ ತಮಿಳುನಾಡು ಭವನದಲ್ಲೂ ಚಮಚದಿಂದ ಹಿಡಿದು ಗೋಡೆ ಮೇಲಿನ ಪಟದವಗೂ ಎಲ್ಲವೂ ಬದಲಾಗುತ್ತದೆ. ಇಲ್ಲಿ ಹೊಸತು ಎನ್ನುವುದಕ್ಕಿಂದ ತಮ್ಮ ರಾಜಕೀಯ ವೈರಿ ಬಳಸಿದ ಯಾವುದೇ ವಸ್ತುವಿನ ನೆರಳು ಕೂಡ ತಮ್ಮ ಮೇಲೆ ಬೀಳಬಾರದು ಎಂಬ ರೊಚ್ಚು. ಸದ್ಯ ಇವರು ಪ್ರತಿಬಾರಿ ಪದವಿ ಅಲಂಕರಿಸಿದಾಗಲೆಲ್ಲ ಕಟ್ಟಡಗಳನ್ನು ನೆಲಸಮ ಮಾಡಿ ಹೊಸದು ಕಟ್ಟಿಸದೇ ಹೋದದ್ದು ಮಾತ್ರ ಅಲ್ಲಿನ ಜನರ ಪುಣ್ಯ, ಅಲ್ಲ ಆ ಕಟ್ಟಡಗಳ ಪುಣ್ಯ!
ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ವೀರಪ್ಪನ್ನಿಂದ ಡಾ. ರಾಜ್ಕುಮಾರ್ ಅಪಹರಣವಾದಾಗ ಮೂಲನಂಬಿಕೆಯನ್ನು ಪಕ್ಕಕ್ಕಿಟ್ಟು ಗೃಹ, ಕಚೇರಿಯಲ್ಲಿ ಒಂದಷ್ಟು ಮಾರ್ಪಾಡು ಮಾಡಿಸಿಕೊಂಡರು. ಸಮಸ್ಯೆ ನಂಬಿಕೆಯನ್ನು ಅಲ್ಲಾಡಿಸಿತು. ಆದರೆ ಈ ರೀತಿ ಮಾರ್ಪಾಡುಗಳನ್ನು ಮಾಡಿಸಿದ ನಂತರವೂ ಬರಗಾಲ, ಕಾವೇರಿ ಸಮಸ್ಯೆ ಇನ್ನಿಲ್ಲದಂತೆ ಕಾಡಿತಲ್ಲದೇ ಮತ್ತದೇ ಕಾಡುಗಳ್ಳನಿಂದ ಮಾಜಿ ಸಚಿವ ನಾಗಪ್ಪ ಅವರ ಅಪಹರಣವಾಗಿ ಹತ್ಯೆಯೂ ನಡೆದು ಹೋಯಿತು. ನಂಬಿಕೆಯ ಬದಲಾವಣೆ ಸಮಸ್ಯೆಗಳನ್ನು ನಿವಾರಣೆ ಮಾಡಲಿಲ್ಲ.
ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದ ಆರಂಭದ ದಿನಗಳಲ್ಲಿ ಸಚಿವರಾದ ಕರುಣಾಕರರೆಡ್ಡಿ, ಜನಾರ್ದನರೆಡ್ಡಿ ಹಾಗೂ ಶ್ರೀರಾಮುಲು ಅವರಿಗೆ ಸೆವೆನ್ ಮಿನಿಸ್ಟರ್ಸ್ ಕ್ವಾರ್ಟಸ್ನಲ್ಲಿ ಬಂಗಲೆಗಳನ್ನು ನೀಡಲಾಯಿತು. ವಾಸ್ತು ಸರಿ ಇಲ್ಲ ಅಂತ ರೆಡ್ಡಿ ಬಳಗದ ಸಚಿವರು ಮನಸ್ಸಿಗೆ ಬಂದಂತೆ ಗೋಡೆಗಳನ್ನು ಒಡೆದುಹಾಕಿ, ನವೀಕರಣ ಮಾಡಿಕೊಂಡರು. ಆದರೇನು..? ರೆಡ್ಡಿ ಬಳಗ ಇವತ್ತಿಗೆ ಆಡ್ರೆಸ್ಗೇ ಇಲ್ಲದಂತಾಗಿದೆ. ಹಣವನ್ನು ಕಬ್ಬಿಣದ ಅದಿರಿನ ಪುಡಿ ಸಮಾನವಾಗಿ ಕಂಡಿದ್ದ ಜನಾರ್ದನರೆಡ್ಡಿ ಅವರಂತೂ ಜೈಲಲ್ಲಿ ಅದೇ ಕಬ್ಬಿಣದ ಕಂಬಿಗಳನ್ನು ಈಗಲೂ ಎಣಿಸುತ್ತಿದ್ದಾರೆ. ಯಡಿಯೂರಪ್ಪನವರೂ ವಾಸ್ತು ನಂಬಿಕೆಗಳಿಗೆ ಅನುಗುಣವಾಗಿ ಕಚೇರಿ ಮಾರ್ಪಾಡು ಮಾಡಿಕೊಂಡಿದ್ದರು. ಆದರೆ ಅವರ ಅದೃಷ್ಟ ಕೂಡ ಭಿನ್ನವಾಗಿರಲಿಲ್ಲ ಎಂಬುದು ಬೇರೆ ಮಾತು.
ಬಿಜೆಪಿ ಸರಕಾರದ ಅವಧಿಯಲ್ಲಿ ನಾನಾ ಮಂತ್ರಿ-ಮಹೋದಯರ ಕಟ್ಟಡ, ಕಚೇರಿಗಳ ಮಾರ್ಪಾಡಿಗೆ ಬೊಕ್ಕಸದ ಹಣ ಎರ್ರಾಬಿರ್ರಿ ಖರ್ಚಾದ ಹಿನ್ನೆಲೆಯಲ್ಲಿ 2010 ರಲ್ಲಿ ಎಂ.ಸಿ. ನಾಣಯ್ಯ ಅವರು ವಿಧಾನ ಪರಿಷತ್ನಲ್ಲಿ ಖಾಸಗಿ ವಿಧೇಯಕ ಮಂಡನೆಗೆ ಪ್ರಸ್ತಾಪಿಸಿದರು. ಏಳೆಂಟು ಬಾರಿ ಸರಕಾರದ ಗಮನ ಸೆಳೆಯಲು ಪ್ರಯತ್ನಿಸಿದರೂ ಸಫಲರಾಗಿರಲಿಲ್ಲ. ಕಾರಣ ವಿಧಾನ ಪರಿಷತ್ ಸಭಾಪತಿಗಳೂ ಆದ ಡಿ.ಎಚ್. ಶಂಕರಮೂರ್ತಿ ಅವರು ಸೇರಿದಂತೆ ಅನೇಕ ಮಂತ್ರಿಗಳು ವಾಸ್ತು ಪ್ರಕಾರ ಕಚೇರಿ ಮಾರ್ಪಾಡು ಮಾಡಿಕೊಂಡಿದ್ದರು. ಜಗದೀಶ್ ಶೆಟ್ಟರ್ ರಾಜಕೀಯ ಕಾರ್ಯದರ್ಶಿಯಾಗಿದ್ದ ಶಂಕರಪಾಟೀಲ ಮುನೇನಕೊಪ್ಪ ತಮ್ಮ ಕೊಠಡಿ (ಈಗ ಸಚಿವ ಆಂಜನೇಯ ಒಡೆದು ಹಾಕಿರುವ ಕಚೇರಿ) ಗೋಡೆಯನ್ನು ಒಡೆದು ಹಾಕಲು ಯತ್ನಿಸಿದ್ದು ತೀವ್ರ ವಿವಾದಕ್ಕೆ ಕಾರಣವಾಯ್ತು. ಆಗೆಲ್ಲ ಕಾಂಗ್ರೆಸ್ ನಾಯಕರು ಗಲಾಟೆ ಎಬ್ಬಿಸಿದ್ದರು. ಈಗ ಅವರದೇ ಸರಕಾರ. ಆ ಸರಕಾರ ಪ್ರತಿನಿಧಿಗಳೂ ಅದೇ ರೀತಿ ವಿವಾದ ಸೃಷ್ಟಿಸಿದ್ದಾರೆ. ಕಳೆದ ಬೆಳಗಾವಿ ಅಧಿವೇಶನದಲ್ಲಿ ನಾಣಯ್ಯನವರು ಮಂಡಿಸಿದ ಖಾಸಗಿ ಬಿಲ್ ಚರ್ಚೆಗೆ ಅಂಗೀಕಾರವಾಗಿತ್ತು. ಇದೀಗ ಸರಕಾರವೇ ಅಂತಹದೊಂದು ವಿಧೇಯಕ ತರಲು ಮುಂದಾಗಿರುವುದು ಸ್ವಾಗತಾರ್ಹ.
ರಾಜಕಾರಣಿಗಳು ತಮ್ಮ ಖಾಸಗಿ ಕಟ್ಟಡಗಳನ್ನು, ಸ್ವತ್ತನ್ನು ಹೇಗೆ ಬೇಕಾದರೂ ಮಾರ್ಪಾಡು ಮಾಡಿಕೊಳ್ಳಲಿ. ಯಾರೂ ಬೇಡ ಅನ್ನುವುದಿಲ್ಲ. ಆದರೆ ಸಾರ್ವಜನಿಕ ಆಸ್ತಿ ಸಂಕೇತ ಸರಕಾರಿ ಕಟ್ಟಡಗಳನ್ನು ಮುಟ್ಟುವುದು ಬೇಡ. ವಿಧಾನಸೌಧಕ್ಕಾಗಲಿ, 'ಕಾವೇರಿ'ಗಾಗಲಿ, 'ಅನುಗ್ರಹ'ಕ್ಕಾಗಲಿ ಅದರದೇ ಆದ ಇತಿಹಾಸವಿದೆ. ಮಹತ್ವವಿದೆ. ಬಂದ-ಬಂದವರೆಲ್ಲ ಸ್ವರೂಪ ಬದಲಿಸುತ್ತಾ ಹೋದರೆ ಅದರ ಮೂಲರೂಪ, ಆ ಮೂಲರೂಪದ ಹಿಂದಿನ ಮೌಲ್ಯ ನಶಿಸಿ ಹೋಗುವುದಿಲ್ಲವೇ? ಆಳ್ವಿಕೆ ನಡೆಸುವವರು ಮತ್ತೊಂದು ವಿಕಾಸಸೌಧ ಕಟ್ಟಬಹುದು. ಆದರೆ ಅದು ವಿಧಾನಸೌಧ ಆಗಲು ಸಾಧ್ಯವಿಲ್ಲ.
ಲಗೋರಿ : ಸಮಸ್ಯೆ ನಂಬಿಕೆಯನ್ನು ಅಲ್ಲಾಡಿಸಬಹುದು, ಆದರೆ ಸಮಸ್ಯೆಯನ್ನು ನಂಬಿಕೆ ಬದಲಿಸಲು ಸಾಧ್ಯವಿಲ್ಲ.
- ಪಿ. ತ್ಯಾಗರಾಜ್
thyagarjun@gmail.com