ಅಂಕಣಗಳು

ಉನ್ನತ ಶಿಕ್ಷಣದಲ್ಲಿ ಭಾಷಾ ಬೋಧನೆ ಸೂಕ್ತ ದಿಕ್ಕಿನಲ್ಲಿ ಸಾಗಿದೆಯೇ?

ಉನ್ನತ ಶಿಕ್ಷಣದಲ್ಲಿ ಭಾಷಾ ಬೋಧನೆ ಸೂಕ್ತ ದಿಕ್ಕಿನಲ್ಲಿ ಸಾಗಿದೆಯೇ?
Published On :

ಉನ್ನತ ಶಿಕ್ಷಣದ ಹಂತದಲ್ಲಿ ಭಾಷಾವಿಷಯಗಳ ಬೋಧನೆಗೆ ಸಂಬಂಧಿಸಿದಂತೆ ಇತ್ತೀಚೆಗೆ ಚರ್ಚೆ ನಡೆಯುತ್ತಿದೆ. ಪದವಿ ತರಗತಿಗಳಿಗೆ ಏಕಪಠ್ಯವನ್ನು ಅಳವಡಿಸುವ ಚಿಂತನೆಯು ಸರಕಾರ ಹಾಗೂ ವಿಶ್ವವಿದ್ಯಾನಿಲಯಗಳ ಮಟ್ಟದಲ್ಲಿ ನಡೆಯುತ್ತಿರುವ ಕಾರಣದಿಂದ ಈ ಚರ್ಚೆ ಇಂದು ಪ್ರಸ್ತುತವಾಗಿದೆ.
ಹನ್ನೆರಡು ವರ್ಷಗಳ ನಂತರದ ವಿದ್ಯಾಭ್ಯಾಸವನ್ನು ಉನ್ನತ ಶಿಕ್ಷಣ ಎಂದು ಕರೆಯುವ ಸಾಮಾನ್ಯ ರೂಢಿಯಿದೆ. ಶಿಕ್ಷಣತಜ್ಞರ ಒತ್ತಾಯದಿಂದಾಗಿ ಇಂಜಿನಿಯರಿಂಗ್ನಂಥ ವೃತ್ತಿಪರ ಪದವಿಗಳಲ್ಲಿ ಭಾಷೆಗಳನ್ನು ಪಠ್ಯಕ್ರಮದಲ್ಲಿ ಸೇರಿಸಿದ್ದರೂ, ಅದು ಬಹುಮಟ್ಟಿಗೆ ವೇಳಾಪಟ್ಟಿಗೆ ಮಾತ್ರ ಸೀಮಿತ ಎಂಬಂತಾಗಿದೆ ಹೊರತು ಅದನ್ನು ವಿದ್ಯಾರ್ಥಿಗಳಾಗಲೀ, ಆ ಕಾಲೇಜುಗಳ ಆಡಳಿತ ಮಂಡಳಿಗಳಾಗಲೀ, ಗಂಭೀರವಾಗಿ ಪರಿಗಣಿಸುವುದಿಲ್ಲ.
ಬಿ.ಎ., ಬಿ.ಕಾಂ., ಬಿ.ಎಸ್ಸಿ. ಯಂಥ ಸಾಂಪ್ರದಾಯಿಕ ಪದವಿ ಕೋರ್ಸುಗಳ ಪಠ್ಯಕ್ರಮದಲ್ಲಿ ಭಾಷೆಗೆ ತಕ್ಕಮಟ್ಟಿನ ಮಹತ್ವವನ್ನು ನೀಡಲಾಗಿದೆ. ಪದವಿ ಹಂತದಲ್ಲಿ ಭಾಷೆಯನ್ನು ಎಷ್ಟು ವರ್ಷ ಬೋಧಿಸಬೇಕು ಎಂಬ ಬಗ್ಗೆ ಕರ್ನಾಟಕದ ಬೇರೆ ಬೇರೆ ವಿಶ್ವವಿದ್ಯಾನಿಲಯಗಳಲ್ಲಿ ಬೇರೆ ಬೇರೆ ನೀತಿಗಳಿವೆ. ಉದಾಹರಣೆಗೆ ಮಂಗಳೂರು ವಿ.ವಿ.ಯಲ್ಲಿ ಬಿ.ಎ., ಮತ್ತು ಬಿ.ಕಾಂ. ಗಳಿಗೆ ಎರಡು ವರ್ಷ ಭಾಷಾವಿಷಯಗಳಿದ್ದರೆ ಬಿ.ಬಿ.ಎಂ. ಪದವಿಯಲ್ಲಿ ಮೊದಲ ವರ್ಷ ಮಾತ್ರ ಭಾಷಾವಿಷಯಗಳಿರುತ್ತವೆ. ಧಾರವಾಡ ವಿ.ವಿ. ವ್ಯಾಪ್ತಿಯಲ್ಲಿ ಬಿ.ಕಾಂ ಮತ್ತು ಬಿ.ಬಿ.ಎ. ಪದವಿ ಪಠ್ಯಕ್ರಮದಲ್ಲಿ ಮೊದಲ ವರ್ಷ ಮಾತ್ರ ಭಾಷಾವಿಷಯಗಳಿದ್ದರೆ, ಬಿ.ಎ. ತರಗತಿಗೆ ಮೂರು ವರ್ಷಗಳೂ ಭಾಷಾವಿಷಯಗಳಿವೆ. ಇದರರ್ಥವೇನೆಂದರೆ, ವಿಶ್ವವಿದ್ಯಾನಿಲಯಗಳ ಶೈಕ್ಷಣಿಕ ನೀತಿ ನಿರೂಪಕರಿಗೆ ಪದವಿ ಹಂತದಲ್ಲಿ ಭಾಷಾ ಬೋಧನೆ ಯಾಕೆ ಬೇಕು? ಯಾವ ಸ್ವರೂಪದ ಪಠ್ಯವಸ್ತು ಇರಬೇಕು? ವಿದ್ಯಾರ್ಥಿಗಳು ಭಾಷೆಯನ್ನು ಒಂದು ವಿಷಯವಾಗಿ ಯಾಕೆ ಕಲಿಯಬೇಕು? ಎಂಬ ಬಗ್ಗೆ ಯಾವುದೇ ಸ್ಪಷ್ಟತೆಯಿಲ್ಲ. ಹಾಗಲ್ಲವಾದರೆ, ಬಿ.ಎ. ವಿದ್ಯಾರ್ಥಿಗಳು ಮೂರು ವರ್ಷ ಕಲಿಯಬೇಕಾದುದನ್ನು ಬಿ.ಕಾಂ ವಿದ್ಯಾರ್ಥಿಗಳು ಕೇವಲ ಒಂದು ವರ್ಷ ಕಲಿತರೆ ಹೇಗೆ ಸಾಕಾಗುತ್ತದೆ? ಬಿ.ಕಾಂ. ಪದವೀಧರರಿಗೆ ಭಾಷೆ ಬೇಡವೇ? ಅಲ್ಲದೆ, ಮಂಗಳೂರಿನಲ್ಲಿ ಬಿ.ಎ. ಯಲ್ಲಿ ಎರಡು ವರ್ಷ ಕಲಿಯುವುದನ್ನು ಧಾರವಾಡದಲ್ಲಿ ಮೂರು ವರ್ಷ ಕಲಿಯಬೇಕಾಗುತ್ತದೆ ಮತ್ತು ಮಂಗಳೂರಿನಲ್ಲಿ ಬಿ.ಕಾಂ. ನಲ್ಲಿ ಎರಡು ವರ್ಷ ಕಲಿಯುವುದನ್ನು ಧಾರವಾಡದಲ್ಲಿ ಒಂದೇ ವರ್ಷದಲ್ಲಿ ಕಲಿಯಬೇಕಾಗುತ್ತದೆ. ಇದನ್ನು ತಾರ್ಕಿಕವಾಗಿ ಅರ್ಥ ಮಾಡಿಕೊಳ್ಳುವುದು ಹೇಗೆ?
ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯನ್ನು ಉದಾಹರಣೆಯಾಗಿ ತೆಗೆದುಕೊಂಡರೆ, ಬಿ.ಎ., ಬಿ.ಕಾಂ. ವಿದ್ಯಾರ್ಥಿಗಳು ಇಂಗ್ಲಿಷನ್ನು ಕಡ್ಡಾಯವಾಗಿ ಕಲಿತರೆ, ಕನ್ನಡ, ಹಿಂದಿ, ಸಂಸ್ಕೃತ, ಮಲೆಯಾಳಂ ಇತ್ಯಾದಿ ಯಾವುದಾದರೊಂದು ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಬಿ.ಎ., ಬಿ.ಕಾಂ., ಕಲಿಯುವ ಬಹಳಷ್ಟು ವಿದ್ಯಾರ್ಥಿಗಳು ಕನ್ನಡ ಮಾಧ್ಯಮದವರಾದುದರಿಂದ, ಅವರಿಗೆ ಇಂಗ್ಲಿಷ್ ಭಾಷಾ ಕೌಶಲ ಕಡಿಮೆಯಿರುತ್ತದೆ. ಸರಳವಾಗಿ ಹೇಳಬೇಕೆಂದರೆ, ಇಂಗ್ಲಿಷಿನಲ್ಲಿ ಭಾಷೆಯನ್ನು ಕಲಿಸುವ ಅಂಶ ಇರುವುದು ಸ್ಪಷ್ಟವಾಗಿ ಕಂಡುಬರುತ್ತದೆ. ಆದರೆ ಕನ್ನಡನಾಡಿನಲ್ಲಿ ಪದವಿ ಹಂತದಲ್ಲಿ ಕನ್ನಡ ಭಾಷಾ ಬೋಧನೆ ಎಂಬುದು ಬೇರೆಯೇ ನೆಲೆಯ ಚರ್ಚೆಯನ್ನು ಬೇಡುತ್ತದೆ.
ಅರ್ಥ ಮಾಡಿಕೊಳ್ಳುವುದು, ಮಾತನಾಡುವುದು, ಓದುವುದು ಮತ್ತು ಬರೆಯುವುದು ಈ ನಾಲ್ಕು ಕೌಶಲಗಳನ್ನು ಭಾಷೆಯ ಮೂಲಭೂತ ಕೌಶಲಗಳೆಂದು ಹೇಳುತ್ತಾರಷ್ಟೆ. ಕನ್ನಡ ಮಾಧ್ಯಮದಲ್ಲಿ ಹನ್ನೆರಡು ವರ್ಷ ವಿದ್ಯಾಭ್ಯಾಸ ಮಾಡಿದ ಕನ್ನಡನಾಡಿನ ವಿದ್ಯಾರ್ಥಿಗಳಿಗೆ ಈ ನಾಲ್ಕು ಕೌಶಲಗಳು ಇರಬೇಕು ಎಂಬ ನಿರೀಕ್ಷೆ ಸಹಜ. ಹಾಗಿರುವಾಗ ಮತ್ತೆ ಕನ್ನಡ ಭಾಷಾಬೋಧನೆ ಎಂದರೆ ಏನನ್ನು ಬೋಧಿಸುವುದು?
ಈ ಪ್ರಶ್ನೆಗೆ ಉತ್ತರ ಕಂಡುಕೊಂಡುದರ ಭಾಗವಾಗಿ ಸಾಹಿತ್ಯದ ಮೂಲಕ ಭಾಷಾಬೋಧನೆ ಸಂವಹನ ಕನ್ನಡದ ಬೋಧನೆ (ಆಡಳಿತ ಪತ್ರ, ವ್ಯವಹಾರ ಪತ್ರ ಇತ್ಯಾದಿ) ಇವೆಲ್ಲ ಕನ್ನಡ ಪಠ್ಯ ವಸ್ತುವಿನಲ್ಲಿ ಸ್ಥಾನ ಪಡೆದಿವೆ. ಅಂದರೆ, ಮೇಲೆ ಹೇಳಿದ ನಾಲ್ಕು ಕೌಶಲಗಳಿಂದಾಚೆಗಿನ ಕೌಶಲವನ್ನು ಕಲಿಸುವುದು ಭಾಷಾ ಬೋಧಕರ ಕರ್ತವ್ಯವಾಗುತ್ತದೆ.
ಭಾಷೆಯು (ಲಿಖಿತ ಅಥವಾ ಮೌಖಿಕ) ಮುಖ್ಯವಾಗಿ ಎರಡು ಶೈಲಿಗಳನ್ನು ಹೊಂದಿರುತ್ತದೆ. ಮೊದಲನೆಯದು ತಾಂತ್ರಿಕ ಶೈಲಿ. ಇಲ್ಲಿ ಉತ್ಪ್ರೇಕ್ಷೆ, ಸಂದಿಗ್ಧತೆ ಇತ್ಯಾದಿಗಳಿಗೆ ಅವಕಾಶವಿಲ್ಲ. ವೈಜ್ಞಾನಿಕ ಪ್ರಕ್ರಿಯೆಗಳ ಬಗೆಗಿನ ಬರಹಗಳು, ವಿವಿಧ ಅಧ್ಯಯನಶಾಸ್ತ್ರಗಳಿಗೆ ಸಂಬಂಧಿಸಿದ ಬರಹಗಳು ಇಂಥ ತಾಂತ್ರಿಕ ಶೈಲಿಯನ್ನು ಹೊಂದಿರಬೇಕಾದುದು ಅಪೇಕ್ಷಣೀಯ. ಎರಡನೆಯ ಶೈಲಿಯೆಂದರೆ ಸಾಹಿತ್ಯ ಶೈಲಿ. ಇದರಲ್ಲಿ ಅಲಂಕಾರ, ಬಹುಅರ್ಥ ಇತ್ಯಾದಿಗಳಿಗೆ ಅವಕಾಶವಿದೆ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಬಳಸುವ ಭಾಷೆಯು ವಿಭಿನ್ನ ಶೈಲಿಗಳನ್ನು ಒಳಗೊಂಡಿರುತ್ತದೆ. ಹಾಗೆ ನೋಡಿದರೆ ಸಾಹಿತ್ಯವು ತಾಂತ್ರಿಕ ಶೈಲಿಯನ್ನು ಕೂಡಾ ಒಳಗೊಳ್ಳುತ್ತದೆ. ಹೀಗಾಗಿ ಕಥೆ, ಕವನ, ಕಾದಂಬರಿಗಳಂಥ ವಿವಿಧ ಪ್ರಕಾರಗಳನ್ನು ಅಧ್ಯಯನ ಮಾಡುವುದೆಂದರೆ, ಭಾಷಿಕ ಅಭಿವ್ಯಕ್ತಿಗೆ ಸಂಬಂಧಿಸಿದಂತೆ ಬಹು ಸಾಧ್ಯತೆಗಳನ್ನು ಅರಿಯುವ ಪ್ರಯತ್ನವೇ ಆಗುತ್ತದೆ. ಹಾಗಾಗಿಯೇ ಇದು ಪರಿಣಾಮಕಾರಿ ಅಭಿವ್ಯಕ್ತಿಯನ್ನು ಕಲಿಯುವ ಪ್ರಕ್ರಿಯೆಯೂ ಹೌದು.
ಕಲಿಕೆಯ ಈ ಪ್ರಕ್ರಿಯೆಯು ಕೇವಲ ಉಪನ್ಯಾಸ ಕ್ರಮದ ಬೋಧನೆಯ ಮೂಲಕ ಆಗುವಂಥದ್ದಲ್ಲ. ಅದಕ್ಕೆ ಪ್ರಾಯೋಗಿಕ ತರಗತಿಗಳೇ ಬೇಕು. ಯಾಕೆಂದರೆ ಇದು ಕೇವಲ ಮಾಹಿತಿಯನ್ನು ರವಾನಿಸುವ ಕೆಲಸವಲ್ಲ, ಹೀಗಿರುವಾಗ ಮಿತವ್ಯಯ ಯೋಜನೆಯಂತೆ, ನೂರು ವಿದ್ಯಾರ್ಥಿಗಳಿದ್ದರೂ ಒಂದೇ ತರಗತಿಯಲ್ಲಿ ಕೂರಿಸಿ ಭಾಷೆಯನ್ನು ಬೋಧಿಸಿರಿ ಎಂದರೆ ಹೇಗಾದೀತು? ಇಂದು ಇಂಗ್ಲಿಷ್, ಜರ್ಮನ್,  ಫ್ರೆಂಚ್ ಇತ್ಯಾದಿ ಭಾಷೆಗಳನ್ನು  ವೃತ್ತಿಪರವಾಗಿ ಕಲಿಸುವ ಹಲವಾರು ಖಾಸಗಿ ಸಂಸ್ಥೆಗಳಿವೆ. ಯಾವ ಸಂಸ್ಥೆಯಲ್ಲೂ ನಲವತ್ತಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು, ಒಂದೇ ಬ್ಯಾಚಿನಲ್ಲಿ ಕೂರಿಸಿ ಕಲಿಸುವುದಿಲ್ಲ. ಯಾಕೆಂದರೆ ಇಂಥ ತರಗತಿಗಳಲ್ಲಿ ಅಭ್ಯಾಸ ನಡೆಯಬೇಕಾದುದು ಅನಿವಾರ್ಯ. ಸಾಹಿತ್ಯದ ಮೂಲಕ ಸಂವೇದನೆ ಹಾಗೂ ಸರಿಯಾದ ಭಾಷೆಯನ್ನು ಕಲಿಸುವ ಅನಿವಾರ್ಯತೆಯು ಇಂದಿನ ವಿಷಮಸಮಾಜದಲ್ಲಿ ಹಿಂದೆಂದಿಗಿಂತ ಹೆಚ್ಚಾಗಿದೆ. ವಿದ್ಯಾರ್ಥಿಗಳಿಗೂ  ಮುಂದಿನ ಯಾವುದೇ ಉದ್ಯೋಗ/ಉದ್ಯಮ ಕ್ಷೇತ್ರದಲ್ಲೂ ಪರಿಣಾಮಕಾರಿ ಭಾಷೆ ಅತ್ಯಗತ್ಯ. ಹೀಗಾಗಿ ಭಾಷಾ ಬೋಧನೆಯನ್ನು ಖರ್ಚಿನ ಬಾಬತ್ತು ಎಂಬುದಾಗಿ ನೋಡಬಾರದು.
ಭಾಷಾಬೋಧನೆಯನ್ನು ಇಂಜಿನಿಯರಿಂಗ್ನಂಥ ಪದವಿಗಳಲ್ಲಿ ನಿರ್ಲಕ್ಷ್ಯಕ್ಕೆ ಒಳಗು ಮಾಡಿದಂಥ ಮನೋಭಾವವೇ ನೂರಿಪ್ಪತ್ತು ವಿದ್ಯಾರ್ಥಿಗಳಿಗಾದರೂ ಸರಿ, ಒಂದೇ ಕೊಠಡಿಯಲ್ಲಿ ಕೂರಿಸಿ ಭಾಷಣ ಹೊಡೆದು ಬಿಡಿ ಎಂದು ಆದೇಶಿಸುತ್ತದೆ.  ಭಾಷಾಬೋಧನೆಯಲ್ಲಿ ಮಿತವ್ಯಯದ ಪ್ರಶ್ನೆ ಬರಬಾರದು ಎಂಬುದನ್ನು ಒಪ್ಪಿಕೊಂಡರೆ ಏಕಪಠ್ಯದ ಅಗತ್ಯ ಬರುವುದೇ ಇಲ್ಲ. ಯಾಕೆಂದರೆ, ಬಿ.ಎ. ಬಿ.ಕಾಂ. ಮೊದಲಾದ ಎಲ್ಲ ತರಗತಿಗಳ ವಿದ್ಯಾರ್ಥಿಗಳನ್ನೂ ಒಟ್ಟಿಗೆ ಕೂರಿಸಿ ಬೋಧಕರ ಸಂಖ್ಯೆಯನ್ನು ಕಡಿಮೆ ಮಾಡುವುದಷ್ಟೇ ಏಕಪಠ್ಯದ ಹಿಂದಿನ ಉದ್ದೇಶ.
ಪದವಿಯನ್ನು ಪಡೆಯುವ ವಿದ್ಯಾರ್ಥಿಗಳು ಕನ್ನಡದಂಥ ಭಾಷೆಗಳನ್ನು ಯಾಕೆ ಕಲಿಯಬೇಕು ಎಂಬುದಕ್ಕೆ ಇನ್ನೊಂದು ಪ್ರಧಾನ ಕಾರಣವನ್ನೂ ನಾವಿಲ್ಲಿ ಪರಿಗಣಿಸಬೇಕು. ಪದವಿ ಪಡೆದ ವಿದ್ಯಾರ್ಥಿಗಳಿಂದ ಸಮಾಜಕ್ಕೂ ಪ್ರಯೋಜನವಾಗಬೇಕಾದರೆ, ಅಂಥ ವಿದ್ಯಾರ್ಥಿಗಳು ವಿಜ್ಞಾನ, ವಾಣಿಜ್ಯ ಅಥವಾ ಸಮಾಜ ವಿಜ್ಞಾನಗಳಂಥ ವಿಷಯಗಳಲ್ಲಿ ಪಡೆದ ಜ್ಞಾನವನ್ನು ಇತರರಿಗೂ ತಿಳಿಸಲು ಸಾಧ್ಯವಾಗಬೇಕು. ಜ್ಞಾನದ ಪರಂಪರೆ ಮುಂದುವರಿಯಬೇಕಾದುದು ಹೀಗೆ. ಇದಕ್ಕಿರುವ ಏಕೈಕ ಮಾಧ್ಯಮವೆಂದರೆ ಭಾಷೆ. ಹೀಗಾಗಿ ಪದವಿ ವಿದ್ಯಾರ್ಥಿಗಳು ಕಲಿಯುವ ಪಠ್ಯವಸ್ತುಗಳಲ್ಲಿ ಆಯಾ ವಿಷಯಗಳಿಗೆ ಸಂಬಂಧಿಸಿದ ಬರಹಗಳನ್ನು ಕನ್ನಡ ಮತ್ತು ಇತರ ಭಾಷಾ ವಿಷಯಗಳ ಮೂಲಕ ಗ್ರಹಿಸುವುದಕ್ಕೆ ಮತ್ತು ಅದೇ ಮಾದರಿಯಲ್ಲಿ ಅಭಿವ್ಯಕ್ತಿಸುವುದಕ್ಕೆ ಒತ್ತು ಸಿಗಬೇಕು. ಭಾಷಾಬೋಧಕರೂ ಈ ನಿಟ್ಟಿನಲ್ಲಿ ಅರಿವು/ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಂಡು ಸಿದ್ಧರಿರಬೇಕಾದುದು ಅತ್ಯಗತ್ಯ.
ಇಂದು ಸಾಮಾನ್ಯವಾಗಿರುವ ಅಭಿಪ್ರಾಯವೆಂದರೆ ಬಿ.ಎ., ಎಂ.ಎ. ಮೊದಲಾದ ಪದವಿ ಪಡೆಯುವ ವಿದ್ಯಾರ್ಥಿಗಳ ಅರಿವಿನ ಮಟ್ಟ ಕಳೆದ ಇಪ್ಪತ್ತೈದು ವರ್ಷಗಳ ಹಿಂದಿನ ಮಟ್ಟಕ್ಕೆ ಹೋಲಿಸಿದರೆ ತುಂಬಾ ಕುಸಿದಿದೆ ಎಂಬುದು. ಇದು ನಿಜವೆಂದಾದರೆ, ಇದಕ್ಕೆ ಕಾರಣ ಈಚಿನ ವರ್ಷಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ತರಗತಿಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ತೀರಾ ಹೆಚ್ಚುತ್ತಿರುವುದೇ ಆಗಿದೆ. ಇದು ಭಾಷಾ ತರಗತಿ ಎಂದಲ್ಲ, ಎಲ್ಲ ವಿಷಯಗಳಿಗೂ ಅನ್ವಯಿಸುತ್ತದೆ. ಹಾಗೆಯೇ, ವಿದ್ಯಾರ್ಥಿಯ ಒಟ್ಟಾರೆ ಗುಣಮಟ್ಟ ಮತ್ತು ಸಾಮರ್ಥ್ಯವನ್ನು ನಿರ್ಧರಿಸುವಲ್ಲಿ ಅಭಿವ್ಯಕ್ತಿ ಸಾಮರ್ಥ್ಯ, ಅಂದರೆ ಭಾಷೆಯದ್ದೇ ಪ್ರಧಾನ ಪಾತ್ರ.
ಮೇಲೆ ಹೇಳಿದ ವಿವರಗಳ ಹಿನ್ನೆಲೆಯೊಂದಿಗೆ ಪದವಿಯಲ್ಲಿ ಭಾಷಾ ಬೋಧನೆಯ ತರ್ಕವನ್ನು ಸರಿಯಾದ ದಿಕ್ಕಿನಲ್ಲಿ ಗ್ರಹಿಸಿದಾಗ ಒಂದು ಭಾಷಾ ತರಗತಿಯಲ್ಲಿ ನಲವತ್ತಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಇರಬಾರದು ಎಂಬುದನ್ನು ಯಾರಾದರೂ ಮನಗಾಣದೆ ಇರಲಾರರು.

-ಡಾ. ಗಿರೀಶ ಭಟ್ ಅಜಕ್ಕಳ
giriajakkala@yahoo.co.in


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.