ಕಣ್ಣು ಕುರುಡಾದರೂ ಈಕೆಯ ಬಾಳು ಕುರುಡಾಗಲಿಲ್ಲ!

ಈಕೆಯ ಹೆಸರು ಸೋನಲ್ ಮೆಹ್ತಾ. ಭವಿಷ್ಯದಲ್ಲಿ ಎಂಬಿಬಿಎಸ್ ಓದಿ ಡಾಕ್ಟರ್ ಆಗಬೇಕು...
ಕಣ್ಣು ಕುರುಡಾದರೂ ಈಕೆಯ ಬಾಳು ಕುರುಡಾಗಲಿಲ್ಲ!
Updated on: 

ಈಕೆಯ ಹೆಸರು ಸೋನಲ್ ಮೆಹ್ತಾ. ಭವಿಷ್ಯದಲ್ಲಿ ಎಂಬಿಬಿಎಸ್ ಓದಿ ಡಾಕ್ಟರ್ ಆಗಬೇಕು ಎಂದು ಈಕೆ ಕನಸು ಕಂಡಿದ್ದಳು. ಬ್ಯಾಡ್‌ಲಕ್. 9ನೇ ತರಗತಿಯಲ್ಲಿದ್ದಾಗಲೇ ಈಕೆಗೆ ಶಾಶ್ವತ ಕುರುಡುತನ ಅಮರಿಕೊಂಡಿತು. ಈ ದಿಢೀರ್ ಶಾಕ್‌ನಿಂದ ಈಕೆ ಧೃತಿಗೆಡಲಿಲ್ಲ. ಬದಲಾಗಿ ಸವಾಲಿಗೆ ಎದುರಾಗಿ ನಿಂತಳು. ಒಂದೊಂದೇ ಗೆಲುವು ಪಡೆದಳು. ಶಾಶ್ವತ ಅಂಧತ್ವವಿದ್ದರೂ ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಪದವಿಯಲ್ಲಿ ಡಿಸ್ಟಿಂಕ್ಷನ್ ಬಂದಳು. ಕಡೆಗೊಮ್ಮೆ ಪಿಎಚ್.ಡಿಯನ್ನೂ ಮುಗಿಸಿದಳು. ಆ ಯಶೋಗಾಥೆಯ ವಿವರಣೆಯನ್ನು ಸೋನಲ್‌ರ ಮಾತುಗಳಲ್ಲಿಯೇ ಕೇಳಿ...
----
'ನಾವು ವಾಸವಿದ್ದುದು ಗುಜರಾತ್‌ನ ಗಾಂಧಿನಗರದಲ್ಲಿ. ನಮ್ಮದು, ಆರು ಮಕ್ಕಳಿದ್ದ ದೊಡ್ಡ ಕುಟುಂಬ. ನಾನೇ ಮೊದಲ ಮಗಳು. ಚಿಕ್ಕಂದಿನಿಂದಲೂ ನನಗೆ, ಡಾಕ್ಟರ್ ಆಗಬೇಕೆಂಬ ಮಹದಾಸೆಯಿತ್ತು. ಈ ವಿಷಯವಾಗಿ ಎಷ್ಟೊಂದು ಉತ್ಸಾಹವಿತ್ತು ಎಂದರೆ, ಆಸ್ಪತ್ರೆಯಲ್ಲಿ ಡಾಕ್ಟರ್ ಹಾಗೂ ನರ್ಸ್‌ಗಳ ಹಾವಭಾವ, ಮಾತುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೆ. ಮನೆಗೆ, ಪರಿಚಯದವರು ಅಥವಾ ಬಂಧುಗಳು ಬಂದರೆ, ಅವರ ಮುಂದೆ ಕೂತು, ಥೇಟ್ ಡಾಕ್ಟರ್‌ಗಳ ಗತ್ತಿನಲ್ಲಿಯೇ-'ನಿಮ್ಗೆ ಜ್ವರಾನಾ? ತಲೆನೋವಾ? ಯಾವತ್ತಿಂದ ಈ ತೊಂದರೆ ಇದೆ? ವಿಪರೀತ ಆಯಾಸವಾಗುತ್ತಾ? ಎಂದೆಲ್ಲಾ ಪ್ರಶ್ನೆ ಹಾಕುತ್ತಿದ್ದೆ. ಅವರ ಕೈ ಹಿಡಿದು ನಾಡಿಬಡಿತ ಪರೀಕ್ಷಿಸುವಂತೆ ನಟಿಸುತ್ತಿದ್ದೆ. ನಂತರ ಒಂದು ಚೀಟಿಯಲ್ಲಿ ನಾಲ್ಕು ಸಾಲು ಗೀಚಿ, ಈ ಮಾತ್ರೆಗಳನ್ನು ಬೆಳಿಗ್ಗೆ ಮತ್ತು ರಾತ್ರಿ ಊಟ ಆದ ನಂತರ ತಗೊಳ್ಳಿ. ಎಲ್ಲಾ ಸರಿಹೋಗುತ್ತೆ' ಅನ್ನುತ್ತಿದ್ದೆ. ನನ್ನ ಮಾತು ಕೇಳಿದ ಬಂಧುಗಳು ಸಂಭ್ರಮದಿಂದ ನಗುತ್ತಿದ್ದರು. ಎಷ್ಟೊಂದು ಚೂಟಿಯಾಗಿದ್ದಾಳೆ ನೋಡಿ ಎಂದು ಮೆಚ್ಚುಗೆಯಿಂದ ತಲೆ ನೇವರಿಸುತ್ತಿದ್ದರು.
ಹೀಗೇ ಒಂದೊಂದೇ ವರ್ಷಗಳು ಉರುಳುತ್ತಿದ್ದವು. ಬೆಳೆಯುತ್ತಾ ಹೋದಂತೆಲ್ಲ, ತಿಳಿವಳಿಕೆ ಹೆಚ್ಚಿದಂತೆಲ್ಲ ಎಷ್ಟೋ ಸಂದರ್ಭದಲ್ಲಿ ನಮ್ಮ ನಿರ್ಧಾರಗಳೂ ಬದಲಾಗುವುದುಂಟು. ಆದರೆ ನನ್ನ ವಿಷಯದಲ್ಲಿ ಹಾಗಾಗಲಿಲ್ಲ. ಭವಿಷ್ಯದಲ್ಲಿ ಡಾಕ್ಟರ್ ಆಗಬೇಕು ಎಂಬುದನ್ನು ಹೊರತುಪಡಿಸಿ ಬೇರೊಂದು ಯೋಚನೆ ಯಾವತ್ತೂ ನನಗೆ ಬರಲಿಲ್ಲ. ಹೀಗಿರುವಾಗಲೇ 9ನೇ ತರಗತಿಯ ಪರೀಕ್ಷೆ ಮುಗಿಯಿತು. ರಜೆ ಶುರುವಾಯಿತೆಂಬ ಖುಷಿಯಲ್ಲಿ ಗಾಂಧಿನಗರದಲ್ಲಿದ್ದ ಶಾಲಿಮಾರ್ ಥಿಯೇಟರ್‌ಗೆ ಕುಟುಂಬದವರೊಂದಿಗೆ ಸಿನಿಮಾ ನೋಡಲು ಹೋದೆ. ಇದೆಲ್ಲಾ 1988ರ ಮಾತು. ಸಿನಿಮಾ ಆರಂಭವಾಗಿ ಅರ್ಧ ಗಂಟೆ ಕಳೆದಿರಬಹುದು. ಆಗಲೇ, ತೆರೆಯ ಮೇಲಿನ ದೃಶ್ಯಗಳು ಅಸ್ಪಷ್ಟವಾಗಿ ಕಾಣತೊಡಗಿದವು. ಸಹಜವಾಗಿಯೇ ಗಾಬರಿಯಾಯಿತು. ತಕ್ಷಣವೇ ಎರಡೆರಡು ಬಾರಿ ಕಣ್ಣುಜ್ಜಿಕೊಂಡೆ. ಅದರಿಂದ ಏನೂ ಪ್ರಯೋಜನವಾಗಲಿಲ್ಲ. ಪಕ್ಕದಲ್ಲಿದ್ದ ಅಮ್ಮನಿಗೆ ಎಲ್ಲವನ್ನೂ ಹೇಳಿಕೊಂಡೆ. ಆಕೆ, ಕಣ್ಣಿಗೆ ಕಸ ಬಿದ್ದಿರಬೇಕೆಂದು ಭಾವಿಸಿ ಸೆರಗಿನ ಶಾಖ ಕೊಟ್ಟಳು. ಇಂಟರ್‌ವೆಲ್ ಬಿಡುತ್ತಿದ್ದಂತೆಯೇ, ಮುಖ ತೊಳೆದುಕೋ. ಎಲ್ಲವೂ ಸರಿಯಾಗುತ್ತೆ ಅಂದಳು. ಹಾಗೆಯೇ ಮಾಡಿದೆ. ಆನಂತರ ಕೂಡ ತೆರೆಯ ಮೇಲಿನ ದೃಶ್ಯ ಅಸ್ಪಷ್ಟವಾಗಿಯೇ ಕಾಣತೊಡಗಿತು. ತಕ್ಷಣವೇ ಅಪ್ಪನಿಗೆ ವಿಷಯ ತಿಳಿಸಿದೆ. ಗಾಬರಿಯಾದ ಅವರು, ಆಸ್ಪತ್ರೆಗೆ ಹೋಗೋಣ ಎಂದು ಆ ಕ್ಷಣವೇ ಹೊರಟುನಿಂತರು.
ಹೀಗೆ, ನಾವೆಲ್ಲಾ ಬಂದದ್ದು ಅಹಮದಾಬಾದ್‌ನಲ್ಲಿದ್ದ ಕಣ್ಣಿನ ಆಸ್ಪತ್ರೆಗೆ. ಅಲ್ಲಿ ಹತ್ತಾರು ಪರೀಕ್ಷೆ ಮಾಡಿದ ವೈದ್ಯರು -'ಯಾವ ತೊಂದರೇನೂ ಇಲ್ಲಮ್ಮಾ. ಸುಮ್ನೇ ಹೆದರಿಬಿಟ್ಟಿದ್ದೀಯ. ಐದು ನಿಮಿಷ ಹೊರಗೆ ಕುಳಿತಿರು' ಎಂದರು. ಅಪ್ಪ-ಅಮ್ಮನನ್ನು ತಮ್ಮೊಂದಿಗೇ ಉಳಿಸಿಕೊಂಡರು. ಹತ್ತು ನಿಮಿಷಗಳ ನಂತರ ಡಾಕ್ಟರ್ ಛೇಂಬರಿನಿಂದ ಹೊರ ಬಂದ ಅಪ್ಪ-ಅಮ್ಮನ ಮೊಗದಲ್ಲಿ ಸಂಕಟವಿತ್ತು. ಆದರೆ ಅವರೂ ವೈದ್ಯರ ಮಾತುಗಳನ್ನೇ  ರಿಪೀಟ್ ಮಾಡಿದರು. ನಂತರ ಒಂದೂ ಮಾತಿಲ್ಲದೆ ಮನೆಗೆ ಬಂದರು. ಅವರ ಮೌನ, ದುಗುಡ, ಛಕ್ಕನೆ ಮಾತು ಬದಲಿಸುತ್ತಿದ್ದ ರೀತಿಯನ್ನು ಕಂಡಾಗಲೆಲ್ಲ, ಏನೋ ಯಡವಟ್ಟಾಗಿದೆ ಅನಿಸುತ್ತಿತ್ತು. ಆದರೆ ಅದೇನೆಂದು ಅರ್ಥವಾಗಿರಲಿಲ್ಲ.
ಆಸ್ಪತ್ರೆಯಿಂದ ವಾಪಸಾದ ನಾಲ್ಕನೇ ದಿನವೇ ನನ್ನ ಎಲ್ಲ ಅನುಮಾನಗಳಿಗೂ ಉತ್ತರ ಸಿಕ್ಕಿಬಿಟ್ಟಿತು. ಅವತ್ತು, ಯಾವುದೋ ಕೆಲಸಕ್ಕೆಂದು ಹೊರಗೆ ಹೋಗಿದ್ದವಳು, ಹಿಂದಿರುಗುವ ವೇಳೆಗೆ ಮನೆಯವರೆಲ್ಲ ಒಂದು ರೂಂನಲ್ಲಿ ಸೇರಿಕೊಂಡಿದ್ದರು. ಅಮ್ಮ ಒಂದೇ ಸಮನೆ ಬಿಕ್ಕಳಿಸುತ್ತಿದ್ದಳು. ಕಣ್ಣೀರು ಒರೆಸಿಕೊಳ್ಳುವುದನ್ನು ಮರೆತು ಅಪ್ಪ ಹೇಳುತ್ತಿದ್ದ: 'ಸೋನಲ್‌ಗೆ ಕಣ್ಣಿನ ತೊಂದರೆ ಕಾಣಿಸಿಕೊಂಡಿದೆ. ಈ ಕಾಯಿಲೆಗೆ ಚಿಕಿತ್ಸೆಯೇ ಇಲ್ಲವಂತೆ. ಮುಂದಿನ ಕೆಲವೇ ದಿನಗಳಲ್ಲಿ ಆಕೆಗೆ ಶಾಶ್ವತ ಕುರುಡುತನ ಬಂದು ಬಿಡುತ್ತಂತೆ. ಸಾಯುವವರೆಗೂ ಆಕೆ ಕುರುಡಿಯಾಗಿಯೇ ಬದುಕಬೇಕಂತೆ. ಮುಂದೆ ಯಾರೊಬ್ಬರೂ, ಯಾವುದೇ ಕಾರಣಕ್ಕೂ ಅವಳನ್ನು ಬಯ್ಯಲು ಹೋಗಬೇಡಿ. ಹೀಯಾಳಿಸಿ ಮಾತನಾಡಬೇಡಿ. ನನಗೆ ತೊಂದರೆ ಇದೆ ಎಂಬುದೇ ಅವಳಿಗೆ ಗೊತ್ತಾಗಬಾರದು. ಆ ಥರಾ ಅವಳನ್ನು ಬೆಳೆಸೋಣ...' ಅಪ್ಪನ ಮಾತುಗಳನ್ನು ಎಲ್ಲರೂ ಅನುಮೋದಿಸಿದರು.
ಬಾಗಿಲ ಮರೆಯಲ್ಲಿ ನಿಂತು ಎಲ್ಲ ಮಾತುಗಳನ್ನೂ ಕೇಳಿಸಿಕೊಂಡವಳಿಗೆ ಎದೆಯೊಡೆದಂತಾಯಿತು. ನಿಂತಿದ್ದ ನೆಲವೇ ಕುಸಿದಂತಾಯಿತು. ಭವಿಷ್ಯದಲ್ಲಿ ಡಾಕ್ಟರ್ ಆಗಿ ಸೇವೆ ಸಲ್ಲಿಸುವ ಕನಸು ಕಂಡಿದ್ದವಳು ನಾನು. ಅಂಥವಳಿಗೆ 10ನೇ ತರಗತಿಗೆ ಹೋಗುವ ಮೊದಲೇ ಅಂಧತ್ವದ ಸೂತಕ ಆವರಿಸಿಕೊಂಡಿತ್ತು. ಆ ಕ್ಷಣದಿಂದಲೇ ನಾನು ಮೌನಿಯಾದೆ. ಏಕಾಂಗಿಯಾದೆ. ಒಂದೆಡೆ ಕೂತು ಯೋಚಿಸುತ್ತಿದ್ದೆ. ಭವಿಷ್ಯವನ್ನು ನೆನೆಸಿಕೊಂಡು ಕಂಗಾಲಾಗುತ್ತಿದ್ದೆ. ಬಿಕ್ಕಳಿಸುತ್ತಿದ್ದೆ. ಇದನ್ನು ಕಂಡಾಕ್ಷಣ, ಕುಟುಂಬದವರೆಲ್ಲ ಧೈರ್ಯ ಹೇಳಿದರು. ನಾವೆಲ್ಲಾ ನಿನ್ನ ಜೊತೆಗಿದ್ದೇವೆ. ಹೆಜ್ಜೆ ಹೆಜ್ಜೆಗೂ ನಿನ್ನನ್ನು ಬೆಂಬಲಿಸ್ತೇವೆ. ಕಣ್ಣು ಕಾಣಿಸೋದಿಲ್ಲ ಎಂಬ ಯೋಚನೆಯನ್ನು ಮನಸ್ಸಿನಿಂದ ತೆಗೆದುಹಾಕು. ಶ್ರದ್ಧೆಯಿಂದ ಓದು. ಶಾಲೆಗೆ ಕರೆದೊಯ್ದು, ಕರೆತರುವ ಜವಾಬ್ದಾರಿ ನಮ್ಮದು ಎಂದರು. ಹಾಗೆಯೇ ನಡೆದುಕೊಂಡರು. ಯಾವುದೇ ಸಂದರ್ಭದಲ್ಲೂ ನಾನು ಕುರುಡಿ, ಅಂಗವಿಕಲೆ ಎಂದು ಯೋಚಿಸಲು ಅವಕಾಶವನ್ನೇ ಕೊಡಲಿಲ್ಲ. ದೀಪಾವಳಿಯ ಸಂದರ್ಭದಲ್ಲಿ ಮನೆಯವರೆಲ್ಲ ಜೊತೆಗೆ ನಿಂತು ನಾನೂ ಪಟಾಕಿ ಹೊಡೆಯುವಂತೆ ಮಾಡಿದರು. ನನ್ನಿಂದಲೇ ಬಣ್ಣ ಎರಚಿಸಿಕೊಂಡು ಹೋಳಿಯ ಸಂಭ್ರಮವನ್ನು ದುಪ್ಪಟ್ಟು ಮಾಡಿದರು. ಈ ಹೊತ್ತಿಗೆ, ನನಗೆ ಬಂದಿರುವುದು - Retinitis Pigmentosa ಎಂಬ ಕಾಯಿಲೆಯೆಂದೂ, ಅದು ಕಣ್ಣಿನ ಮುಖ್ಯ ಭಾಗವಾದ ರೆಟಿನಾಕ್ಕೆ ನೇರವಾಗಿ ಹಾನಿ ಮಾಡುವುದರಿಂದ, ಅದಕ್ಕೆ ಚಿಕಿತ್ಸೆಯೇ ಇಲ್ಲವೆಂದೂ ನನಗೆ ಅರ್ಥವಾಗಿತ್ತು. 10ನೇ ತರಗತಿಯಲ್ಲೇ ಸಂಪೂರ್ಣ ಅಂಧತ್ವ ಜೊತೆಯಾಗಿತ್ತು. ಭವಿಷ್ಯ ರೂಪಿಸಿಕೊಳ್ಳುವ ಹಂತದಲ್ಲಿ ಅಳುತ್ತಾ ಕೂರಲು ಮನಸ್ಸಾಗಲಿಲ್ಲ. ಉತ್ತರ ಬರೆಯಲು ಒಬ್ಬರನ್ನು ಜೊತೆಗಿಟ್ಟುಕೊಂಡೇ ಪರೀಕ್ಷೆ ಎದುರಿಸಿದೆ. ಶೇಕಡಾ 82 ಅಂಕಗಳೊಂದಿಗೆ ಪಾಸಾದೆ. ಈ ಯಶಸ್ಸು ನನ್ನ ದುಃಖವನ್ನೆಲ್ಲಾ ಮರೆಸಿತು. ಪಿಯುಸಿಗೆ ಬಂದಾಗ, ಮತ್ತಷ್ಟು ಶ್ರದ್ಧೆ, ಆಸಕ್ತಿಯಿಂದ ಪಾಠ ಕೇಳಿ, ಸಹಾಯಕರ ನೆರವಿನಿಂದಲೇ ಪರೀಕ್ಷೆ ಎದುರಿಸಿದೆ. ದ್ವಿತೀಯ ಪಿ.ಯು.ಸಿಯಲ್ಲಿ ಹೆಚ್ಚು ಅಂಕ ಪಡೆದವರಲ್ಲಿ ರಾಜ್ಯಕ್ಕೇ 9ನೆಯವಳು ಅನ್ನಿಸಿಕೊಂಡೆ.
ನನ್ನ ಈ ಸಾಧನೆ ಎಲ್ಲೆಡೆ ಸುದ್ದಿಯಾಯಿತು. ಅಂಧ ಬಾಲಕಿಯ ಮಹತ್ಸಾಧನೆ ಎಂಬ ಶೀರ್ಷಿಕೆಯಲ್ಲಿ ಎಲ್ಲ ಪತ್ರಿಕೆಗಳೂ ನನ್ನ ಬಗ್ಗೆ ಸುದ್ದಿ ಮಾಡಿದವು. ವಿಶೇಷ ಸಂದರ್ಶನ ಪ್ರಕಟಿಸಿದವು. ಹಲವು ಕಡೆಗಳಲ್ಲಿ ಸನ್ಮಾನವೂ ಆಯಿತು. ದೃಷ್ಟಿ ಭಾಗ್ಯವಿಲ್ಲದ ಕಾರಣದಿಂದ ಸೈನ್ಸ್ ಅಥವಾ ಕಾಮರ್ಸ್ ಓದಲು ಅವಕಾಶವಿರಲಿಲ್ಲ. ಹಾಗಾಗಿ, ಆರ್ಟ್ಸ್‌ನಲ್ಲಿ ಡಿಗ್ರಿ ಮಾಡಲು ನಿರ್ಧರಿಸಿದೆ. ಈ ಸಂದರ್ಭದಲ್ಲಿಯೇ ಜಿ.ಎನ್. ಖಾರೋಡ್ ಎಂಬ ನಿವೃತ್ತ ಎಂಜಿನಿಯರ್ ಒಬ್ಬರು ಮನೆಗೆ ಬಂದರು. 'ಪತ್ರಿಕೆಗಳಲ್ಲಿ ನಿನ್ನ ಯಶೋಗಾಥೆಯನ್ನು ಓದಿದೆನಮ್ಮಾ. ನಿನಗೆ ಟೀಚರ್ ಥರಾ ಸಹಾಯ ಮಾಡಬೇಕು ಅನ್ನಿಸ್ತು. ಅದಕ್ಕೇ ಬಂದೆ. ನನ್ನ ಮನಸ್ಸಂತೋಷಕ್ಕೆ ಈ ಕೆಲಸ ಮಾಡ್ತೇನೆ. ಯಾವುದೇ ಪ್ರತಿಫಲಾಪೇಕ್ಷೆಯೂ ನನಗಿಲ್ಲ' ಎಂದರು. ಒಂದು ಕೈಯಿಂದ ಸಂಭ್ರಮವನ್ನು ಕಿತ್ತುಕೊಂಡ ದೇವರು, ಮತ್ತೊಂದು ಕೈಯಿಂದ ಹೇಗೆಲ್ಲ ಖುಷಿಯನ್ನು ಹಂಚ್ತಾನಲ್ಲ ಅನಿಸಿದ್ದೇ ಆಗ. ಆ ವೇಳೆಗೆ ಇಂಗ್ಲಿಷನ್ನು ಮುಖ್ಯ ಭಾಷೆ ಎಂದು ತೆಗೆದುಕೊಂಡು ಡಿಗ್ರಿ ಮಾಡಲು ನಿರ್ಧರಿಸಿದ್ದೆ. ಮರುದಿನದಿಂದಲೇ ಖಾರೋಡ್ ಅವರ ತರಗತಿ ಶುರುವಾಯಿತು. ನಂತರದ ಮೂರು ವರ್ಷ ಕಾಲ, ದಿನವೂ ಸಂಜೆ ಮನೆಗೆ ಬಂದು, ಗಂಟೆಗಳ ಕಾಲ ಎಲ್ಲವನ್ನೂ ಓದಿ ಹೇಳುತ್ತಿದ್ದರು. ಅರ್ಥ ವಿವರಿಸುತ್ತಿದ್ದರು. ನಾನು ಹೇಳಿದ್ದು ತಪ್ಪಾದರೆ-'ಹಾಗಲ್ಲ ಮಗಳೇ, ಹೀಗೆ...' ಎಂದು ತಿದ್ದುತ್ತಿದ್ದರು. ಬ್ರೈಲ್ ಲಿಪಿಯನ್ನು ಅರ್ಥಮಾಡಿಸಿದರು. ಒಂದೇ ಮಾತಲ್ಲಿ ಹೇಳಬೇಕೆಂದರೆ, ಮೂರು ವರ್ಷಗಳ ಕಾಲ ಅವರು ನನ್ನ ಕಣ್ಣಾಗಿದ್ದರು. ಖಾರೋಡ್  ಅಂಕಲ್ ಅದೆಷ್ಟು ಚೆನ್ನಾಗಿ ನನಗೆ ಪಾಠ ಹೇಳಿದ್ದರೆಂದರೆ, ಪದವಿಯಲ್ಲೂ ನನಗೆ ಶೇಕಡಾ 80ಕ್ಕಿಂತ ಹೆಚ್ಚು ಅಂಕಗಳು ಸಿಕ್ಕವು. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಮೂರು ವರ್ಷ ನನ್ನ ಪಾಲಿನ 'ಬೆಳಕಾಗಿದ್ದ' ಖಾರೋಡ್ ಅಂಕಲ್, ಸೂಡಿವಾಲ ಎಂಬ ಮತ್ತೊಂದು ಮಹಾನ್ ಚೇತನವನ್ನು ಪರಿಚಯಿಸಿ ಎದ್ದು ಹೋದರು.
ಸೂಡಿವಾಲ ಅಂಕಲ್ ಕೂಡ ಸರ್ಕಾರಿ ಸೇವೆಯಿಂದ ನಿವೃತ್ತರಾಗಿದ್ದವರೇ. ಕಷ್ಟದಲ್ಲಿ ಇರುವವರಿಗೆ,  ಸಹಾಯ ಮಾಡಬೇಕು ಎಂಬುದು ಅವರ ಮಹದಾಸೆಯಾಗಿತ್ತು. ಪರಿಚಯವಾದ ದಿನವೇ ಅದನ್ನು ಹೇಳಿಕೊಂಡರು. 'ಇನ್ನುಮುಂದೆ ನಿಮ್ಮ ಕುಟುಂಬದವರಲ್ಲಿ ನಾನೂ ಒಬ್ಬ. ಯಾವುದೇ ಸಂಕೋಚ ಇಲ್ಲದೆ ಎಲ್ಲ ವಿಷಯವನ್ನು ಹೇಳಿಕೋ. ಇವತ್ತಿನಿಂದ ನೀನು ನನ್ನ ಮಗಳು. ಸರೀನಾ?' ಅಂದರು.
ಐದನೇ ತರಗತಿಯಲ್ಲಿದ್ದಾಗ ದೇವಾನಂದ್ ಅಭಿನಯದ ಗೈಡ್ ಸಿನಿಮಾವನ್ನು, ಎಂಟನೇ ತರಗತಿಗೆ ಬಂದಾಗ ದೂರದರ್ಶನದಲ್ಲಿ 'ಮಾಲ್ಗುಡಿ ಡೇಸ್‌' ಧಾರಾವಾಹಿಯನ್ನು ನೋಡಿದ್ದೆ. ಆರ್.ಕೆ. ನಾರಾಯಣ್ ಅವರ ಬರಹಗಳು ಎಂಬ ವಿಷಯವಾಗಿ ಎಂ.ಫಿಲ್ ಮಾಡಬೇಕೆಂಬ ಆಸೆ ಪದವಿಯಲ್ಲಿದ್ದಾಗಲೇ ಜೊತೆಯಾಗಿತ್ತು. ಸೂಡಿವಾಲ ಅಂಕಲ್ ಬಳಿ ಎಲ್ಲವನ್ನೂ ಹೇಳಿಕೊಂಡೆ. ಅವರು, ಅಗತ್ಯವಿದ್ದ ಎಲ್ಲ ಪುಸ್ತಕಗಳನ್ನೂ ತಂದರು. ಪಾಠ ಮಾಡಿದರು. ನೋಟ್ಸ್ ಬರೆದುಕೊಟ್ಟರು. ಬೇರೆಯವರಿಂದ ಥೀಸಿಸ್ ಬರೆಸಿದಾಗ ಸಂಕೋಚವಿಲ್ಲದೆ ಅದರ ಪ್ರೂಫ್ ನೋಡಿದರು. ಅವರ ಸಹಕಾರದಿಂದ ನಾನು ಎಂ.ಫಿಲ್ ಮುಗಿಸಿದ್ದು ಮಾತ್ರವಲ್ಲ; ಆರ್.ಕೆ. ನಾರಾಯಣ್ ಅವರ ಕಾದಂಬರಿಗಳಲ್ಲಿ ಸ್ತ್ರೀ ಪಾತ್ರಗಳ ಮಹತ್ವ ಎಂಬ ವಿಷಯವಾಗಿ ಪಿ.ಎಚ್.ಡಿ.ಯನ್ನೂ ಮುಗಿಸಿದೆ. ಆ ಮೂಲಕ ಗುಜರಾತ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದ ಪ್ರಪ್ರಥಮ ಅಂಧ ಮಹಿಳೆ ಅನ್ನಿಸಿಕೊಂಡೆ. ಡಿಗ್ರಿ ಮುಗಿದ ನಂತರ ಭರ್ತಿ 17 ವರ್ಷಗಳವರೆಗೆ ನನ್ನ ಪಾಲಿನ ಗೈಡ್, ಫಾದರ್, ಫಿಲಾಸಫರ್ ಮತ್ತು ಆತ್ಮ ಬಂಧುವಾಗಿ ಸೂಡಿವಾಲ ಅಂಕಲ್ ಇದ್ದರು. ನನ್ನ ಪಿಎಚ್.ಡಿ ಮುಗಿದು, ಅದಕ್ಕೆ ಹಲವರಿಂದ ಮೆಚ್ಚುಗೆಯೂ ವ್ಯಕ್ತವಾದಾಗ, ಮಗಳೇ. ಭವಿಷ್ಯದಲ್ಲೂ ನಿನಗೆ ಒಳ್ಳೆಯದಾಗಲಿ' ಎಂದು ಹಾರೈಸಿ ಬೀಳ್ಕೊಟ್ಟರು. ಮುಂದಿನ ಕೆಲವೇ ದಿನಗಳಲ್ಲಿ ಅಹಮದಾಬಾದ್‌ನ ಮಹಿಳಾ ಪಾಲಿಟೆಕ್ನಿಕ್‌ನಲ್ಲಿ ನನಗೆ ಇಂಗ್ಲಿಷ್ ಉಪನ್ಯಾಸಕಿಯ ಕೆಲಸ ಸಿಕ್ಕಿತು.
ಇಷ್ಟೆಲ್ಲಾ ಆಗುವ ವೇಳೆಗೆ ನನಗೂ 38 ವರ್ಷವಾಗಿತ್ತು. ಸೋದರ-ಸೋದರಿಯರಿಗೆ ಮದುವೆಯಾಗಿ ಎಲ್ಲರೂ ಅವರವರ ಮನೆ 'ಸೇರಿಕೊಂಡಿದ್ದರು'. ಈ ಮಧ್ಯೆ, ವಯಸ್ಸಾದ ಕಾರಣದಿಂದ ತಂದೆಯೂ ತೀರಿಕೊಂಡರು. ಮನೇಲಿ ಉಳಿದದ್ದು ಇಬ್ಬರೇ: ಅಮ್ಮ-ನಾನು! ಅಮ್ಮ, ನೆರೆಹೊರೆಯವರು ಹಾಗೂ ವಿದ್ಯಾರ್ಥಿಗಳ ಸಹಾಯದಿಂದ ಕಾಲೇಜಿಗೆ ಹೋಗಿ ಬರುತ್ತಿದ್ದೆ. ಆದರೂ ನಾನು ಒಂಟಿ ಎಂಬ ಸಂಕಟ ಎದೆಯೊಳಗಿತ್ತು. ಆಗ ಪರಿಚಯವಾದವರೇ ಉಸೀರ್ ಷಾ. ಆತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅಧಿಕಾರಿಯಾಗಿದ್ದರು. ನಮ್ಮ ಕುಟುಂಬದ ಗೆಳೆಯರಿಂದ ನನ್ನ ಸಾಧನೆಯ ಬಗ್ಗೆ ತಿಳಿದು, ಅಭಿನಂದನೆ ಹೇಳಲೆಂದು ಮನೆಗೆ ಬಂದಿದ್ದರು. ಆನಂತರದಲ್ಲಿ ಕೌಟುಂಬಿಕ ಕಾರ್ಯಕ್ರಮದ ನೆಪದಲ್ಲಿ ಏಳೆಂಟು ಬಾರಿ ಭೇಟಿಯಾದರು. ಕಡೆಗೊಂದು ದಿನ ಇದ್ದಕ್ಕಿದ್ದಂತೆ "ಸೋನಲ್, ನಿನ್ನನ್ನು ಮದುವೆ ಆಗಬೇಕು ಅಂದ್ಕೊಂಡಿದೀನಿ. ಒಪ್ಕೋತೀಯಾ?" ಅಂದರು.
ಅವತ್ತಿನ ಸಂದರ್ಭದಲ್ಲಿ ಉಸೀರ್‌ಷಾ ನೋಡಲು ಹೇಗಿರಬಹುದೆಂಬ ಕಲ್ಪನೆಯೂ ನನಗಿರಲಿಲ್ಲ. ಆದರೆ ಅವರ ಮಾತುಗಳಲ್ಲಿ ತಾಯ್ತನದ ಸೆಳೆತವಿತ್ತು. ಗೆಳೆತನದ ಮಾಧುರ್ಯವಿತ್ತು. ಕ್ಷಣಿಕ ಆಕರ್ಷಣೆಯಿಂದ ಇವತ್ತು 'ಐ ಲವ್‌ಯೂ' ಅಂದವರಿಗೆ ವರ್ಷಗಳ ನಂತರ -'ಛೆ, ಈ ಕುರುಡೀನ ಮದುವೆಯಾಗಿ ತಪ್ಪು ಮಾಡಿದೆ' ಅನ್ನಿಸಿಬಿಟ್ರೆ ಗತಿಯೇನು ಅನ್ನಿಸಿತು. ಅದನ್ನೇ ಉಸೀರ್‌ಷಾ ಅವರಿಗೆ ಹೇಳಿದೆ. 'ನೋಡೀ, ನನ್ನ ಹೆಂಡ್ತಿ ಹೀಗೆ ಇರಬೇಕು ಎಂದು ಗಂಡಸರೆಲ್ಲಾ ಕನಸು ಕಂಡಿರ್ತಾರೆ. ನಿಮ್ಮ ಕಲ್ಪನೆ ಏನಿದೆಯೋ ಕಾಣೆ. ಹೇಳಿ ಕೇಳಿ ನಾನು ಕುರುಡಿ. ನನ್ನಂಥವಳನ್ನು ಮದುವೆ ಆದ್ರೆ ನಿಮಗೆ ಯಾವ ಸೇವೆಯೂ ಸಿಗೋದಿಲ್ಲ. ಬೆಳಗ್ಗೆ ಎದ್ದ ತಕ್ಷಣ ನಿಮಗೆ ಬಿಸಿ ಬಿಸಿ ಕಾಫಿ ಕೊಡುವ, ತಿಂಡಿಯ ಪ್ಲೇಟ್ ಹಿಡಿದು ಓಡೋಡಿ ಬರುವ ಚೈತನ್ಯವಾಗಲಿ ನನಗಿಲ್ಲ. ಈ ಬ್ಯಾಂಕ್ ಆಫೀಸರ್ ಕುರುಡೀನ ಮದುವೆ ಆಗಿದ್ದಾನಲ್ಲಾ ಎಂದು ಮುಂದೊಂದು ದಿನ ಯಾರಾದ್ರೂ ಗೇಲಿ ಮಾಡಬಹುದು.  ಮುಖ್ಯವಾಗಿ ನಿಮ್ಮ ತಂದೆ-ತಾಯಿಗೆ ಅಸಮಾಧಾನವಾಗಬಹುದು. ದಯವಿಟ್ಟು ಯೋಚನೆ ಮಾಡಿ' ಎಂದೆ. ಅವತ್ತು ಷಾ, ಏನೂ ಮಾತಾಡಲಿಲ್ಲ. ಸುಮ್ಮನೆ ಎದ್ದು ಹೋದರು. ನಾಲ್ಕು ದಿನಗಳ ನಂತರ  ಅವರ ಪೋಷಕರೊಂದಿಗೇ ಮನೆಗೆ ಬಂದರು. ಮುಂದೆ, ಬಂಧುಗಳು ಹಾಗೂ ಹಿರಿಯರ ಸಮ್ಮುಖದಲ್ಲಿ ನಮ್ಮ ಮದುವೆ ಆಯ್ತು.
ನಾನೀಗ ಅತ್ತೆ-ಮಾವನೊಂದಿಗೆ ಗಂಡನ ಮನೇಲಿ ಇದ್ದೇನೆ. ನನ್ನ ತವರು ಮನೆಯಲ್ಲಿ ಇತ್ತಲ್ಲ; ಅಂಥದೇ ಪ್ರೀತಿ ಮತ್ತು ಸ್ವಾತಂತ್ರ್ಯ ಗಂಡನ ಮನೆಯಲ್ಲೂ ಸಿಕ್ಕಿದೆ. ನನ್ನ ಗಂಡ ಉಸೀರ್‌ಷಾ, ನನಗೆ ಚಪ್ಪಲಿ ತೊಡಿಸುವ, ಅದನ್ನು ಆಗಿಂದ್ದಾಗೆ ಪಾಲಿಷ್ ಮಾಡುವ ಕೆಲಸವನ್ನು ಯಾವುದೇ ಸಂಕೋಚವಿಲ್ಲದೆ ಮಾಡ್ತಾರೆ. ಕುರುಡಿ ಎಂಬ ಭಾವನೆ ಯಾವ ಸಂದರ್ಭದಲ್ಲೂ  ನನ್ನನ್ನು ಕಾಡದಂತೆ ನೋಡಿಕೊಂಡಿದ್ದಾರೆ. ಕಡೆಯದಾಗಿ ಒಂದು ಮಾತು ಹೇಳ್ತೇನೆ: ದೇವರನ್ನು ನಾನು ಪ್ರತ್ಯಕ್ಷವಾಗಿ ಕಂಡಿಲ್ಲ. ನಾನೀಗ ಕುರುಡಿಯಾಗಿರುವ ಕಾರಣದಿಂದ, ಒಂದು ವೇಳೆ ಆತನೇ ಎದುರು ನಿಂತರೂ ನೋಡುವ ಸೌಭಾಗ್ಯವಿಲ್ಲ. ಆದರೆ ತಂದೆ-ತಾಯಿಯ ರೂಪದಲ್ಲಿ, ಖಾಡೋರ್ -ಸೂಡಿವಾಲ ಅಂಕಲ್‌ಗಳ ವೇಷದಲ್ಲಿ, ಉಸೀರ್‌ಷಾ ಹಾಗೂ ನಮ್ಮ ಅತ್ತೆ-ಮಾವನ ಪ್ರೀತಿಯಲ್ಲಿ, ಆಗಾಗ್ಗೆ ರಸ್ತೆ ದಾಟಿಸುವ, ಕಾಲೇಜಿನ ಮೆಟ್ಟಿಲು ಹತ್ತಿಸುವ ವಿದ್ಯಾರ್ಥಿಗಳು ಹಾಗೂ ಅನಾಮಿಕ ಬಂಧುಗಳ ಸ್ಪರ್ಶದಲ್ಲಿ ನಾನು ದೇವರನ್ನು ಕಂಡಿದ್ದೇನೆ. ಎಂಬಿಬಿಎಸ್ ಡಾಕ್ಟರ್ ಆಗಬೇಕು ಎಂಬ ಕನಸು ನನಸಾಗಲಿಲ್ಲ ನಿಜ. ಆದರೆ ನನ್ನ ಹೆಸರಿನ ಹಿಂದೆ ಡಾಕ್ಟರ್ ಎಂಬ ವಿಶೇಷ ಪದ ಸೇರುವಂಥ ಸಾಧನೆಯೊಂದನ್ನು ಕಡೆಗೂ ಮಾಡಿ ಮುಗಿಸಿದ ಹೆಮ್ಮೆ ನನ್ನದು. ಎಲ್ಲರಿಗೂ ಒಂದಲ್ಲ ಒಂದು ರೀತಿಯ ಅಂಗವೈಕಲ್ಯ ಇದ್ದೇ ಇರುತ್ತದೆ. ಅದನ್ನು ಮರೆತು ಗುರಿ ಸಾಧನೆಯತ್ತ ಗಮನ ಕೊಡಿ ಎಂಬುದು ನನ್ನ ಕಳಕಳಿಯ ವಿನಂತಿ' ಎನ್ನುತ್ತಾ ತಮ್ಮ ಯಶೋಗಾಥೆಗೆ ಫುಲ್‌ಸ್ಟಾಪ್ ಹಾಕುತ್ತಾರೆ ಸೋನಲ್ ಮೆಹ್ತಾ.
ಅಹಮದಾಬಾದ್‌ನ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್‌ನಲ್ಲಿ ಇಂಗ್ಲೀಷ್ ಉಪನ್ಯಾಸಕಿಯಾಗಿರುವ ಸೋನಲ್ ಮೆಹ್ತಾ ಅವರ ಇ-ಮೇಲ್: smehta969@gmail.com


- ಎ.ಆರ್. ಮಣಿಕಾಂತ್
armanikanth@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com