ಅಂಕಣಗಳು

ಹತಾಶಗೊಳಿಸಿ ಹಣಿಯುವ ವ್ಯವಸ್ಥೆಯ ಅಂಕುಶ ಹೇಗೆ?

ಹತಾಶಗೊಳಿಸಿ ಹಣಿಯುವ ವ್ಯವಸ್ಥೆಯ ಅಂಕುಶ ಹೇಗೆ?
Published On :

ಕಳೆದ ವಾರ ಮಾಧ್ಯಮಗಳಲ್ಲಿ ನಡೆಯುತ್ತಿದ್ದ ದಲಿತಪರ ಚರ್ಚೆಗಳನ್ನು ನೋಡುತ್ತಿದ್ದ ಅಜ್ಜಿ ಹೇಳಿದ ಅನುಭವದ ನುಡಿಗಳು: ಅದು ಸುಮಾರು 50-60 ವರ್ಷಗಳ ಹಿಂದಿನ ಮಾತು. ಹಳ್ಳಿಯಲ್ಲಿ ಚಾಲ್ತಿಯಲ್ಲಿದ್ದ ಪಂಚಾಯ್ತಿ ವ್ಯವಸ್ಥೆ. ಅಲ್ಲಿ ಗೌಡನೇ ನಾಯಕ, ಅಲ್ಲಿನ ಪಂಚಾಯ್ತಿ ಸದಸ್ಯರೆಲ್ಲಾ ಮೇಲ್ಜಾತಿಗೆ ಸೇರಿದ್ದ ಮೇಲ್‌ಸ್ತರದ ಪ್ರಗತಿಪರರೇ. ಹೀಗಿದ್ದಾಗ ಪಟ್ಟಣಕ್ಕೆ ಹೋಗಿ ವಿದ್ಯಾಭ್ಯಾಸ ಮಾಡಿ ಆದರ್ಶ ತತ್ವ ಚಿಂತನೆಗಳನ್ನು ರೂಢಿಸಿಕೊಂಡು ಬಂದ 26ರ ಹರೆಯದ ಮೇಲ್ಜಾತಿಯ ಯುವಕ. ಹೊಸ ಹುಮ್ಮಸ್ಸು, ಹುರುಪು, ಹೊಸನಾಡನ್ನು ಕಟ್ಟುವ ಮಹದಾಸೆ. ಇವುಗಳ ಜೊತೆಗೆ ಹಳ್ಳಿಯಲ್ಲಿ ಹೆಚ್ಚಾಗಿದ್ದ ಕಳಂಕಿತ ಜಾತಿಪದ್ದತಿಯನ್ನು ನಾಶ ಮಾಡಿ ಶೋಷಿತವರ್ಗವನ್ನು ಮೇಲೆತ್ತಲು ಪ್ರಯತ್ನಿಸಿದ. ಶೂದ್ರ ಚೌಡಯ್ಯನನ್ನು ತನ್ನ ಮನೆಗೆ ಕರೆದು ಸಹಾಯ ಮಾಡಿ ಆತನ ಕಷ್ಟ ಸುಖಗಳಲ್ಲಿ ಭಾಗಿಯಾಗಲು ಪ್ರಾರಂಭಿಸಿದ. ಇದನ್ನು ಗಮನಿಸಿದ ಮೇಲ್ಜಾತಿಯ ಜನರೆಲ್ಲಾ ಯುವಕನನ್ನು ಅಪರಾಧಿಯಂತೆ ಕಾಣಲಾರಂಭಿಸಿದ್ದರು. ಆತನಿಗೆ ಮತ್ತು ಆತನ ಕುಟುಂಬಕ್ಕೆ ಪಂಚಾಯ್ತಿಯು ಊರಿಂದಲೇ ಬಹಿಷ್ಕಾರ ಹಾಕಿತು. ಮೇಲ್ಜಾತಿಗೆ ಸೇರಿದ ದುರಭಿಮಾನದ ವ್ಯವಸ್ಥೆ ಆತನನ್ನು ಅಸಹಾಯಕನನ್ನಾಗಿ ಮಾಡಿತು. ಇದನ್ನು ಕಂಡ ಇತರರು ವ್ಯವಸ್ಥೆಗೆ ಎದುರು ನಿಲ್ಲುವ ದುಸ್ಸಾಹಸವನ್ನೇ ಮಾಡದಾದರು. ಊಳುವವನೇ ಭೂಮಿಯ ಒಡೆಯನಂತಹ ಶೋಷಿತ ಪರ ಸ್ವಾತಂತ್ರ್ಯಾತ್ಮಕ ನಿಯಮಗಳು ಜಾರಿಯಾಗುವವರೆಗೂ ಮೇಲ್‌ಸ್ತರದ ವ್ಯವಸ್ಥೆಯ ಮುಂದೆ ದಲಿತ, ದಲಿತಪರ ದನಿ ಅಸಹಾಯಕವಾಗಿತ್ತು.
ತನ್ನ ವೈಚಾರಿಕ ಪ್ರಜ್ಞೆಯಿಂದ, ಪ್ರಾಮಾಣಿಕ ನಿಷ್ಠೆಯಿಂದ ಮನನೊಂದ ವ್ಯಕ್ತಿ ಸಿಡಿದೆದ್ದು ನಿಂತಾಗ ಆತನ್ನು ಅಸಹಾಯಕನನ್ನಾಗಿ ಮಾಡುವ ಚಾಣಾಕ್ಷತೆ, ತಂತ್ರಗಾರಿಕೆ ನಮ್ಮ ವ್ಯವಸ್ಥೆಗೆ ಇದೆ. ದೆಹಲಿ ಪೊಲೀಸರ ವಿರುದ್ಧ ಆಮ್ ಆದ್ಮಿಯ ಕೇಜ್ರೀವಾಲರ ದಂಗೆ, ಧರಣಿಯ ಸುದ್ದಿ ಕೇಳಿದ ಮನಸ್ಸಿಗೆ ಬಂದದ್ದು, ' ಛೇ, ನಾವು ಎಲ್ಲಿದ್ದೇವೆ ಹೇಗಿದ್ದೇವೆ' ಎಂಬ ನಿಸ್ಸಾಹಯಕ ಭಾವ. ತನ್ನಲ್ಲಿ ಅಧಿಕಾರ ಇಲ್ಲ, ಆದುದರಿಂದ ದೇಶ ಕಟ್ಟಲು ಆಗದು ಎಂದು ಅಣ್ಣಾಹಜಾರೆಯವರ ಕಾರ್ಯ-ಆದರ್ಶಗಳಿಂದ ಹೊರಬಂದು ಆಮ್ ಆದ್ಮಿ ಪಕ್ಷ ಕಟ್ಟಿ, ಸಂಘಟಿಸಿ ಜನರ ಆಶಾ ಚಿಂತನೆಗಳನ್ನು ಪೂರೈಸುವ ಭರವಸೆಯೊಂದಿಗೆ ಅಧಿಕಾರದ ಚುಕ್ಕಾಣಿಯನ್ನು ಹಿಡಿದು ಈಗ ಮಾಡುತ್ತಿರುವುದಾದರೂ ಏನು? ಇಡೀ ರಾಜ್ಯದ ಸಮಸ್ತ ಅಧಿಕಾರವಿರುವ ಮುಖ್ಯಮಂತ್ರಿಯ ಸ್ಥಾನದಲ್ಲಿದ್ದರೂ ಆತ ಅಸಹಾಯಕ. ಅಮ್ಮನಿಗೆ ಸಣ್ಣದೊಂದು ಚಾಕೊಲೇಟ್ ಕೇಳುವ ಮಗುವಿನಿಂದ ಹಿಡಿದು ಸಮಾಜಕ್ಕೆ ಉತ್ತಮ ವ್ಯವಸ್ಥೆ ಬಯಸುವ ಕೇಜ್ರೀವಾಲರವರೆಗೆ, ಯಾರಿಗೂ ಬಿಡದ ಬೆಂಭೂತ ಈ ಅಸಹಾಯಕತೆ. ಅದು ನಮ್ಮದೇ ಆದ ಸಾಮಾಜಿಕ ವ್ಯವಸ್ಥೆಯ ದೌರ್ಬಲ್ಯ, ದೌರ್ಭಾಗ್ಯ.
ಮನುಷ್ಯನು ಸಂಘ ಜೀವಿ, ಪರಾವಲಂಬಿ, ಅಸಹಾಯಕ ಪ್ರಾಣಿ. ತನ್ನ ಜೀವನದ ಪ್ರತಿಕ್ಷಣದಲ್ಲೂ ಒಬ್ಬ- ಮತ್ತೊಬ್ಬನನ್ನು ಅವಲಂಬಿಸಬೇಕಾದ ಅನಿವಾರ್ಯತೆ ಮನುಷ್ಯನಿಗಿದೆ. ತನ್ನ ಕಾಲ ಮೇಲೆ ತಾನೇ ನಿಲ್ಲಲು 8-9 ತಿಂಗಳು ತೆಗೆದುಕೊಳ್ಳುವ ಮಾನವನಿಗೆ, ತನ್ನ ಅನ್ನ ತಾನು ದುಡಿಯಲು 20-25 ವರ್ಷಗಳೇ ಬೇಕು. ಇಂತಹ ಪರಿಸ್ಥಿತಿಯಲ್ಲಿ ತನ್ನ ನೀತಿ ವೈಚಾರಿಕತೆಗೆ ಬದ್ಧನಾಗಿ ವ್ಯವಸ್ಥೆಗೆ ಸೆಡ್ಡು ಹೊಡೆಯುವುದು ಬಹುಕಠಿಣ. ಜೀವನದ ಕಾರ್ಯಚಟುವಟಿಕೆಗಳು ಆತನಿಗೆ, ಹೆತ್ತ ಕುಟುಂಬಕ್ಕೆ ಅಹಿತಕಾರಿ ಸಂಚುಗಳಾದಲ್ಲಿ ಅಂತಹ ಚಟುವಟಿಕೆಗಳಿಗೆ ಕೈಹಾಕುವ ಛಲ ಅವನಲ್ಲಿ ಕುಂದುತ್ತದೆ. ಸಮಾಜದ ಅವ್ಯವಸ್ಥೆಗೆ ಆದರ್ಶಗಳನ್ನು ಬಲಿನೀಡಬೇಕಾದ ದಯನೀಯ ಸ್ಥಿತಿ. ಅಸಹಾಯಕತೆಯಿಂದ ಒಳಗೊಳಗೇ ಅಳುತ್ತಾ ಮೇಲೆ ಸಮಾಜದೊಂದಿಗೆ ನಗಬೇಕಾದ ಅವಸ್ಥೆ. ಪ್ರತಿಭಟಿಸಬೇಕಾದ ಸಮಯದಲ್ಲೂ ಮೌನಕ್ಕೆ ದಾಸನಾಗಬೇಕಾದ ಅನಿವಾರ್ಯತೆ.  
ತನ್ನ ಕಾರ್ಯ ಉದ್ದೇಶಗಳಿಗಾಗಿ ಧ್ಯೇಯಕ್ಕೆ ಬದ್ಧನಾಗಿ ನಿಷ್ಠೆ ಸಾಮರ್ಥ್ಯದಿಂದ ವ್ಯವಸ್ಥೆಯ ವಿರುದ್ಧ ಹೋರಾಡಿದ ನೇತಾಜಿ ಸುಭಾಷ್ಚಂದ್ರ ಭೋಸ್ ಸುಳಿವೇ ಇಲ್ಲದಾದರು. ದೇಶಕ್ಕಾಗಿ, ದೇಶದ ಜನರಿಗಾಗಿ ಸೈಮನ್ ಕಮಿಷನ್ ವಿರುದ್ಧ ಗುಡುಗಿದ್ದ ಲಾಲಾ ಲಜಪತರಾಯ್‌ರನ್ನು ವ್ಯವಸ್ಥೆಯ ಪೋಲಿಸರು ಹೊಡೆದು ಕೊಂದರು. ದೇಶಭಕ್ತ ಚಂದ್ರಶೇಖರ್ ಆಝಾದ್ ಅವರು ಅಂದಿನ ವ್ಯವಸ್ಥೆಯ ವಿರುದ್ಧ ಹೋರಾಡಿ, ಅಸಹಾಯಕರಾಗಿ ತಮ್ಮ ಮೇಲೆ ತಾವೇ ಗುಂಡು ಹಾರಿಸಿಕೊಂಡಿದ್ದು ನಮ್ಮೆಲ್ಲರಿಗೆ ತಿಳಿದಿರುವ ಕಹಿಸತ್ಯವೇ. ಅಂತಹ ಕಹಿಯನ್ನು ಜೀರ್ಣಿಸಿಕೊಳ್ಳಲಾಗದ ಬಿಸಿರಕ್ತದ ಯುವಕರು, ದೇಶಭಕ್ತ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ರಾಜ್ ಗುರು, ಸುಖದೇವರು ತಮ್ಮ ಆದರ್ಶಗಳಿಗಾಗಿ ವ್ಯವಸ್ಥೆಗೆ ಬಲಿಯಾದರು. ಹೀಗೆ ಬಲಿಯಾದ ಕ್ರಾಂತಿಕಾರಿಗಳ ಪರವಾಗಿ ಅಂದಿನ ಮಹಾನ್ ವ್ಯಕ್ತಿಯೊಬ್ಬರು ಹೇಳಿದ ಮಾತು- ಅವರನ್ನು ಹಾದಿ ತಪ್ಪಿದವರು ಎನ್ನುವ ಮೊದಲು, ಅವರನ್ನು ಹಾದಿತಪ್ಪಿಸಿರುವುದು ಈ ವ್ಯವಸ್ಥೆ ಎನ್ನುವುದನ್ನು ಮರೆಯಬಾರದು ಮತ್ತು ಈ ವ್ಯವಸ್ಥೆಯ ವಿರುದ್ಧ ಯುವಕರು ಬಂಡೆದ್ದು ಸಿಡಿದಿದ್ದಾರೆ.
ಅಷ್ಟೆಲ್ಲಾ ಹಿಂದೆ ಹೋಗಿ ಗೆದ್ದವರೇ ಬರೆದ, ಬರೆಸಿದ ಇತಿಹಾಸವನ್ನು ಕೆದಕುವ ಬದಲು ಈಗ ನಡೆಯುತ್ತಿರುವ ನಾವು ಕಾಣುತ್ತಿರುವ ವ್ಯವಸ್ಥೆಯ ತಂತ್ರಗಳನ್ನೇ ತಿರುವಿ ಹಾಕೋಣ. ನಾವೆಲ್ಲ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜೀವಿಸುತ್ತಿದ್ದೇವೆ. ಅಂತಹ ಪ್ರಜಾಪ್ರಭುತ್ವ ವ್ಯವಸ್ಥೆಯ ರೂವಾರಿ- ಚುನಾವಣಾ ಪದ್ದತಿ.  ಅಂತಹ ಚುನಾವಣಾ ಪದ್ಧತಿಯನ್ನು ಭಾರತದ ಮನೆ ಮನಗಳಿಗೆ ಮನವರಿಕೆ ಮಾಡಿದ ಹೆಗ್ಗಳಿಕೆ ರಾಷ್ಟ್ರದ ಹತ್ತನೇ ಮುಖ್ಯ ಚುನಾವಣಾಧಿಕಾರಿ ಟಿ. ಎನ್. ಶೇಷನ್ ಅವರಿಗೆ ಸಲ್ಲುತ್ತದೆ. ಹಳೆಯ ದುಷ್ಟ ದುರಾತ್ಮಕ- ಹಣಬಲ, ತೋಳ್ಬಲಗಳಿಂದ ಕೆಟ್ಟಿದ್ದ ಚುನಾವಣಾ ರೀತಿ ನೀತಿಗಳನ್ನು ಮಾರ್ಪಡಿಸಿ ಪಾರದರ್ಶಕ, ದಕ್ಷ, ಸ್ವಚ್ಛ, ಸಮರ್ಥ ಚುನಾವಣಾ ನೀತಿಯನ್ನು ರೂಪಿಸಿದ ಟಿ. ಎನ್. ಶೇಷನ್, 1997ರಲ್ಲಿ ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸಿ ಅದೇ ಚುನಾವಣಾ ವ್ಯವಸ್ಥೆಯ ಮುಂದೆ ಸೋಲೊಪ್ಪಬೇಕಾಗುತ್ತದೆ. ಅನಧಿಕೃತ ಮರಳು ಮಾಫಿಯಾ ವಿರುದ್ಧ ಸಮರ ಸಾರಿದ ನಿಷ್ಠ ಐಎಎಸ್ ಅಧಿಕಾರಿ ದುರ್ಗಾಶಕ್ತಿ ನಾಗಪಾಲ್ ಅವರಿಗೆ ವ್ಯವಸ್ಥೆ ನೀಡಿದ ಉತ್ತರ ಉದ್ಯೋಗದಿಂದ ಅಮಾನತ್ತು. ರಾಬರ್ಟ್ ವಾದ್ರಾರವರ ಭೂಹಗರಣ - ಭ್ರಷ್ಟಾಚಾರದ ವಿರುದ್ದ ಗುಡುಗಿದ ದಕ್ಷ ಅಧಿಕಾರಿ ಅಶೋಕ್ ಖೇಮ್ಕಾರವರಿಗೆ ವ್ಯವಸ್ಥೆ ನೀಡುತ್ತಿರುವುದು ಅದೇ ಭ್ರಷ್ಟತೆಯ ಆರೋಪದೊಂದಿಗೆ ತಿರುಗೇಟು, 40ಕ್ಕೂ ಅಧಿಕ ಬಾರಿ ವರ್ಗಾವಣೆ. ಭ್ರಷ್ಟ ಸಚಿವರ ವಿರುದ್ದ ದನಿ ಎತ್ತಿದ ಎಸ್. ಆರ್. ಹಿರೇಮಠರ ವಿರುದ್ಧ ಹಕ್ಕುಚ್ಯುತಿ ಮಂಡನೆ. ಕಲ್ಲಿದ್ದಲು ಗಣಿಗಾರಿಕೆಯ ಅಕ್ರಮಗಳಿಗೆ ಮಣಿಯದಿದ್ದ ಭಾರತ ಗಣಿ ಇಲಾಖೆಯ ಉನ್ನತ ಅಧಿಕಾರಿ ಇಬ್ರಾಹಿಂ ಶರೀಫ್ ಒರಿಸ್ಸಾದಲ್ಲಿ ನಾಪತ್ತೆ. ಇಡೀ ಪ್ರಪಂಚಕ್ಕೆ ತನ್ನ ವಿಕಿಲೀಕ್ಸ್‌ನಿಂದ ಜನಜನಿತನಾದವನು ಮನೆ ಮಾತಾದವನು ಜೂಲಿಯನ್ ಅಸ್ಸಾಂಜ್- ಖ್ಯಾತ ಪತ್ರಕರ್ತ, ಬರಹಗಾರ. ವ್ಯವಸ್ಥೆಯಲ್ಲಿ ಮುಚ್ಚಿಟ್ಟಿರುವ, ಕಾಣದ, ತಿಳಿಯದ ಸತ್ಯಗಳನ್ನು ಪ್ರಪಂಚಕ್ಕೆ ಕಾಣುವ ಹಾಗೆ ಮಾಡಲು ಹೊರಟಿದ್ದವನು. ಜಗತ್ತಿಗೆ ಸತ್ಯದ ಅರಿವನ್ನು ಮಾಡಿಸಲು ಯತ್ನಿಸಿದವನು. ಅಂತಹ ಪ್ರಚಂಡ ವ್ಯಕ್ತಿಗೆ ವ್ಯವಸ್ಥೆ ಮಾಡಿದ ಸನ್ಮಾನಗಳು ನಮಗೆಲ್ಲಾ ತಿಳಿದ ವಿಷಯ.
ಮಧ್ಯಮ ವರ್ಗಕ್ಕೆ ಸೇರಿದ ಒಬ್ಬ ಸಾಮಾನ್ಯ ವ್ಯಕ್ತಿ ತನ್ನ ತಂದೆ ತಾಯಿಯ ಪರಿಶ್ರಮದಿಂದ ಓದಿ ಬೆಳೆದು, ಆದರ್ಶಗಳನ್ನು ಮೈಗೂಡಿಸಿಕೊಂಡು ವ್ಯವಸ್ಥೆಯನ್ನು ಸರಿಮಾಡಲು ಹೊರಟವನಿಗೆ ಅದೇ ವ್ಯವಸ್ಥೆ ಕೆಡುಕಿನ ಉಳಿ ಪೆಟ್ಟುಗಳನ್ನು ಕೊಟ್ಟು ಆತನ ಸಂತೋಷ ನೆಮ್ಮದಿ ಗೌರವಕ್ಕೆ ಧಕ್ಕೆ ತಂದಾಗ, ಆತನ ಆದರ್ಶಗಳಾದರೂ ಏನು ಮಾಡುತ್ತವೆ? ಕೈಲಾಗದೆ ಮೈಪರಚಿಕೊಳ್ಳುವ ಸ್ಥಿತಿ ತಲುಪಿದ ವ್ಯಕ್ತಿ ಆತನ ಆದರ್ಶಗಳನ್ನು ಗಾಳಿಗೆ ತೂರಿ, ನಿಷ್ಠೆಗೆ ಬೆಂಕಿಹಚ್ಚಿ, ಎಲ್ಲರೊಳಗೊಂದಾಗು ಮಂಕುತಿಮ್ಮ ಎನ್ನುತ್ತಾನೆ.
ತಪ್ಪನ್ನು ಮಾಡದ ವ್ಯಕ್ತಿಯು ಯಾರೂ ಇಲ್ಲ. ಆದರೆ ತಪ್ಪುಗಳನ್ನೇ ಅಪರಾಧವೆಂಬಂತೆ ಬಿಂಬಿಸಿ ವ್ಯಕ್ತಿಯನ್ನು ಅಸಹಾಯಕನನ್ನಾಗಿ ಮಾಡುವ ಕುತಂತ್ರ ನಮ್ಮ ಈ ಭ್ರಷ್ಟ ರಾಜತಾಂತ್ರಿಕ ವ್ಯವಸ್ಥೆಗೆ ಕರಗತವಾಗಿದೆ. ಆದುದರಿಂದ ಆ ತಪ್ಪುಗಳಲ್ಲಿ ಅಪರಾಧಗಳೆಷ್ಟು ಎಂಬುದನ್ನು ನಿರ್ಧರಿಸಬೇಕಾದ ಅವಶ್ಯಕತೆ ಪ್ರತಿಯೊಬ್ಬ ವ್ಯಕ್ತಿಯ ಮನದಲ್ಲಿ ಮೂಡಬೇಕಿದೆ. ಜನ ಮರುಳೋ ಜಾತ್ರೆ ಮರುಳೋ ಎನ್ನುವಂತೆ ಕುತಂತ್ರಗಳ ಮುಂದೆ ಕುರಿಗಳಾಗುವುದು ಬೇಡ. ನಮ್ಮ ಚಿಂತನೆಗಳನ್ನು ಬದಲಾಯಿಸೋಣ. ಕೇಳಿದ್ದು ಸುಳ್ಳಾಗಬಹುದು, ನೋಡಿದ್ದು ಸುಳ್ಳಾಗಬಹುದು, ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು. ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡುವ ಗುಣ ನಮ್ಮೆಲ್ಲರಲ್ಲಿ ಮೂಡಲಿ. ಜಟಿಲ ವ್ಯವಸ್ಥೆಯ ಜಾಡಿನ ಸುಳಿಯಲ್ಲಿ ಸಿಲುಕಿ ನರಳುತ್ತಿರುವವರ ನಿಷ್ಠರಿಗೆ, ಅವರ ಅಸಹಾಯಕತೆಯನ್ನು ದೂರಮಾಡಲು ಸಹಕರಿಸೋಣ. ನಮ್ಮ ಚಿಂತನೆಗಳು ಬದಲಾದರೆ ವ್ಯವಸ್ಥೆಯ ಬದಲಾವಣೆ ಖಂಡಿತ ಸಾಧ್ಯ. ವ್ಯವಸ್ಥೆ ಬದಲಾದರೆ ಉತ್ತಮ ಸಮಾಜ ಸೃಷ್ಟಿಯಾದೀತು. ಅಸಹಾಯಕತೆಯ ಮಾರ್ದನಿಯನ್ನು ಕಾರಂತರ ಚೋಮನು ದುಡಿಯನ್ನು (ತಮಟೆ) ಬಾರಿಸುತ್ತಾ ವ್ಯಕ್ತಪಡಿಸಿದರೆ ಕೇಜ್ರೀವಾಲರು ಧರಣಿಯಿಂದ, ಅಣ್ಣಾ ಹಜಾರೆ ಸತ್ಯಾಗ್ರಹಗಳಿಂದ, ಲೇಖಕ ಲೇಖನಗಳಿಂದ ತೋರ್ಪಡಿಸಿಯಾರು. ಓದುಗನು ತನ್ನ ಚಿಂತನೆಗಳಿಂದ ಅಂತಹ ಅಸಹಾಯಕತೆಯನ್ನು ದೂರಮಾಡಲು ಹೋರಾಡಬೇಕಾದ ಅವಶ್ಯಕತೆ ಆರೋಗ್ಯಕರ ಸಮಾಜಕ್ಕೆ ಬೇಕಿದೆ.


- ಸಿಂಧೂರ ಬಿ. ಆರ್.
 ಸಂಶೋಧನಾ ವಿದ್ಯಾರ್ಥಿ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.