ತತ್ವಗಳಿಗಿಲ್ಲ ಮರಣ ಎಂದು ಹೂವು ಹಗುರಾಗಿ ಉಲಿದಾಗ...

ಪಾಕಿಸ್ತಾನ, ಆಫ್ಘಾನಿಸ್ತಾನ, ಇರಾನ್, ಆಫ್ರಿಕಾ, ದಕ್ಷಿಣ ಕೊರಿಯಾ, ಉತ್ತರ ಕೊರಿಯಾ, ಇಸ್ರೇಲ್, ಬರ್ಮಾ, ಇಂಡೋನೇಷ್ಯ, ಕೊಲಂಬಿಯಾ, ಫಿಲಿಪ್ಪೀನ್ಸ್, ಉಕ್ರೇನ್, ಪೆರು, ಟರ್ಕಿ, ಉಗಾಂಡ, ಯೆಮೆನ್, ಟ್ಯುನಿಷಿಯಾ, ಲೆಬನಾನ್....ಅಬ್ಬಾ ಎಷ್ಟೆಲ್ಲಾ ದೇಶಗಳಲ್ಲಿ ಏನೆಲ್ಲಾ ಅಶಾಂತಿ?!
ನೀವು ಇವತ್ತು ಯಾವುದೇ ದೇಶವನ್ನು ತೆಗೆದುಕೊಂಡರೂ ಅಲ್ಲೊಂದು ಸಂಘರ್ಷ, ಜಗಳ, ಆಂತರಿಕ ಯುದ್ಧ, ಜನಾಂಗೀಯ ಕಲಹ, ಮನುಷ್ಯ ಮನುಷ್ಯರ ನಡುವೆ ಕಿತ್ತಾಟ, ಅಧಿಕಾರಕ್ಕಾಗಿ ರಕ್ತದ ಓಕುಳಿ...ಓಹ್ಒಂದೇ ಎರಡೇ ನೆನೆಸಿಕೊಂಡರೆ ಮೈ ಮನಸ್ಸು ಮರಗಟ್ಟಿ ಹೋಗುವಷ್ಟು ಕೋಟಲೆಗಳು. ಗಾಂಧೀಜಿಯನ್ನು ಗೋಡ್ಸೆ ಕೊಂದ ದಿನದ ಹುತಾತ್ಮ ದಿನಾಚರಣೆಯ ನೆನಪಿನಲ್ಲೇ ಗುಂಯ್ಯಗುಟ್ಟುತ್ತಿದ್ದ ಆಲೋಚನೆಗಳಿಗೆ ಮೂಗುದಾರ ಹಾಕಲು ಕಷ್ಟಪಡುತ್ತಾ ಕೋಣೆಯೆಂಬ ಕೋಟೆಯೊಳಗೆ ಅತ್ತಿಂದಿತ್ತ, ಇತ್ತಿಂದತ್ತ ಶತಪಥ ಹೆಜ್ಜೆ ಹಾಕಿದೆ. ಜಗತ್ತಿನ ಜಂಜಡಗಳನ್ನು ನೆನೆಯುತ್ತ ನೆನೆಯುತ್ತಲೇ ಭಾವಶೂನ್ಯನಾದೆ. ನಿರಾಯಾಸವಾದ ಒಂದು ದೀರ್ಘ ಉಸಿರು ಬಿಟ್ಟು ಕಿಟಕಿಯ ಹೊರಗೆ ಕಣ್ಣು ಹಾಕಿದೆ. ಅರಳಿ ನಿಂತ ಬಿಳಿಯ ದಾಸವಾಳದ ಹೂವು ಹೇಮಂತದ ಸೊಗಸು ಮೈದುಂಬಿಕೊಂಡು ನಸುನಗು ಚೆಲ್ಲುತ್ತಿತ್ತು. ಸುದೀರ್ಘವಾಗಿ ಉಸಿರು ಎಳೆದುಕೊಂಡು ಕತ್ತೆತ್ತಿ ನೋಡಿದೆ. ಎರಡೂ ಬದಿಯ ಕಲ್ಲುಬೆಟ್ಟಗಳನ್ನು ಸೀಳಿದ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಆಗೊಂದು ಈಗೊಂದು ವಾಹನಗಳ ಸಂಚಾರ. ಕಪ್ಪನೆಯ ರಸ್ತೆ ಮೈ ಚೆಲ್ಲಿ ನಿಶ್ಚಲವಾಗಿ ಮಲಗಿದೆ. ಮುಸ್ಸಂಜೆಯ ಸೂರ್ಯರಶ್ಮಿಗಳು ನಿಧಾನವಾಗಿ ಪಡುವಣದಲ್ಲಿ ಹಿಂದೆ ಜಾರುತ್ತಿವೆ. ವರ್ಣರಂಜಿತ ಆಗಸದಲ್ಲಿ ದಿನದ ಕೆಲಸ ಮುಗಿಸಿದ ಭಾಸ್ಕರ ತಂಪಾಗುತ್ತಿದ್ದಾನೆ. ಕಣ್ಣಲ್ಲೇ ವಂದಿಸಿದೆ. ಏಳು ಕೋಟಿಗೂ ಮಿಕ್ಕಿ ಮುನ್ನಡೆದಿರುವ ಜಗತ್ತಿನ ಜನರ ದುಃಖಕ್ಕೆ ಎಷ್ಟು ಸಹಸ್ರಕೋಟಿ ಮುಖಗಳಿವೆಯಲ್ಲಾ ಎಂದುಕೊಳ್ಳುತ್ತಾ ಇನ್ನಷ್ಟು ಅಂತರ್ಮುಖಿಯಾದೆ. ಆವರಿಸುತ್ತಿರುವ ಗಾಢಮೌನಕ್ಕೆ ಲವಲವಿಕೆ ತುಂಬುವ ಭರದಲ್ಲಿ ಹೊರ ಬಾಗಿಲ ಬಳಿ ಬಂದು ನಿಂತೆ. ಬೆಳೆದಷ್ಟೇ ಆಳಕ್ಕೆ ಇಳಿಯುತ್ತಿದ್ದ ಆಲೋಚನೆಯ ಬೇರುಗಳು, ಪ್ರಶಾಂತ ನದಿಯಲ್ಲಿ ತೇಲುವ ದೋಣಿ ರೂಪದ ಪ್ರಜ್ಞೆ. ವಾಸ್ತವವನ್ನು ಎಚ್ಚರಿಸುವ ಅರಿವು ಎಲ್ಲಿದೆಯೋ ಎಂದು ತಡಕಾಡಿದೆ. ಗಾಂಧಿ ಮತ್ತೆ ಮತ್ತೆ ನಗ್ನ ಫಕೀರನಾಗಿ ನನ್ನನ್ನು ಅಣಕಿಸುತ್ತಿರುವಂತೆ ಭಾಸವಾಯಿತು. ಗಾಂಧಿಯ ಧ್ಯಾನ ಎಂದರೇನೆ ಹೀಗಲ್ಲವೇ ಎಂದುಕೊಳ್ಳುತ್ತಾ ತದೇಕ ಚಿತ್ತದಿಂದ ಅರಿವಿನ ಕೊರಕಲಿಗೆ ಇಳಿದು ಈಜತೊಡಗಿದೆ. ನಿರ್ವಿಣ್ಣ ಭಾವಕ್ಕೆ ಉದ್ಯಾನದ ಕಲ್ಲುಬೆಂಚು ಕಿಚಾಯಿಸಿತು. ಹೋಗಿ ಕೂತರೆ ಹಂಸತೂಲಿಕಾತಲ್ಪದ ಸೊಗಸು. ಆಲೋಚನೆಯ ಝರಿ ಅಷ್ಟು ಸುಲಭಕ್ಕೆ ಬಿಡಬೇಕಲ್ಲ ಮತ್ತೆ ತನ್ನ ಒರೆತವನ್ನು ಆರಂಭಿಸಿತು.
ಶಾಂತಿಮಂತ್ರವನ್ನು ಜಗತ್ತಿಗೆ ಬೋಧಿಸಿದ ನೂರಾರು ದಾರ್ಶನಿಕರಲ್ಲಿ ಗಾಂಧೀಜಿ ಯಾವತ್ತೂ ಮಹಾನ್ಚೇತನ. ತನ್ನ ಸುತ್ತಲ ಸಮಾಜವನ್ನು ಹಿಂಸೆಯಿಂದ ಮುಕ್ತಗೊಳಿಸಿ ಅಹಿಂಸೆಯ ಹಿಮಾಲಯವನ್ನೇ ಗುಡ್ಡೆಹಾಕಿದ್ದ ಅಗಣಿತ ಗುಣಗಳ ಅಸದಳ ಸಂತ. ಜಗತ್ತೇ ನಿಬ್ಬೆರಗಾಗುವಂತೆ ಬದುಕಿದ ಈ ಮಹಿಮಾಪುರುಷನು ಕಟ್ಟಿದ ಸಮಾಜ ಖಂಡಿತಾ ಈಗಿಲ್ಲ. ಆ ದಿನಗಳಿಗೆ ಮರಳುವ ಭಾಗ್ಯ ಮತ್ತೆ ಯಾವಾಗಲೋ ಏನೋ? ಇಂದಿನ ಸಮಾಜವಂತೂ ಗಾಂಧಿ ನಾಚುವ ರೀತಿಯಲ್ಲಿದೆ. ಗಾಂಧಿಯ ಹೆಸರು ಹೇಳಿಕೊಂಡು ನಿರ್ಲಜ್ಜರಾಗಿ ಬದುಕುತ್ತಿರುವ ಬಹುದೊಡ್ಡ ಸಮಾಜವೇ ವಿಜೃಂಭಿಸುತ್ತಿದೆ. ಅವರ ತತ್ವಗಳಿಗೆ ತದ್ವಿರುದ್ಧ ಹೆಜ್ಜೆ ಹಾಕುತ್ತಲೇ ಗಾಂಧಿಯ ಗುಣಗಾನ ಮಾಡುವುದು ಇವರ ಜಾಯಮಾನ.
ಗಾಂಧಿ ತಮ್ಮ ಕಣ್ಮುಂದೆಯೇ ಎಲ್ಲವನ್ನೂ ಕಂಡವರು. ಸೋಲುಗಳಿಗೆ, ಹಿನ್ನಡೆಗೆ ಅವರೆಂದೂ ಎದೆಗುಂದಲಿಲ್ಲ. ಒಂದೆಡೆ ಭಾವೈಕ್ಯ, ಶಾಂತಿಮಂತ್ರವನ್ನು ಅವರು ಪಠಿಸುತ್ತಿದ್ದರೆ ದೇಶದ ಮತ್ಯಾವುದೋ ಮೂಲೆಯಲ್ಲಿ ಹಿಂದು ಮುಸ್ಲಿಮರ ಜಗಳಗಳಲ್ಲಿ ತೊಪತೊಪನೆ ಹೆಣಗಳು ಬೀಳುತ್ತಿದ್ದವು. ದೇಶ ಇಬ್ಭಾಗವಾಗಲು ಕಿರಿಗುಟ್ಟುತ್ತಿತ್ತು. ಜನರಲ್ಲಿ ದಂಗೆ ಪುಟಿದೇಳುತ್ತಿತ್ತು. ಅತ್ಯಾಚಾರ, ಅಧರ್ಮ ಅಟ್ಟಹಾಸಗೈಯುತ್ತಿದ್ದವು . ಗುಜರಾತ್ನ ಬೆಸ್ಟ್ ಬೇಕರಿಯನ್ನು ನಾಚಿಸುವಂತಹ ಬಂಗಾಳದ ನೌಖಾಲಿ ದಂಗೆಗಳು ಗಾಂಧೀಜಿಯ ಮನಸ್ಸನ್ನು ಅಲ್ಲಾಡಿಸಿದ್ದವು. ಜನರು ಯಾಕೆ ಹೀಗೆ ಹಿಂಸೆಯ ದಳ್ಳುರಿಯಲ್ಲಿ ಬೆಂದು ಬದುಕುತ್ತಿದ್ದಾರೆ ಎಂಬ ಬೇಗುದಿಯ ಬೆನ್ನುಬಿದ್ದಿದ್ದ ಅವರಿಗೆ ಮನುಷ್ಯರ ಕ್ರೌರ್ಯಕ್ಕೆ ಮದ್ದು ಹುಡುಕಬೇಕಿತ್ತು. ಆದರೇನು ಅಹಿಂಸೆಯ ಗೀಳಿಗೆ ಔಷಧ ಕಂಡು ಹಿಡಿಯುವ ಹಾದಿಯಲ್ಲಿದ್ದ ಅವರಿಗೆ ಅದೇ ಕ್ರೌರ್ಯದ ಛಾಯೆ ಎರವಾಗಿತ್ತು. ಗೋಡ್ಸೆಯ ಗುಂಡು ಅವರ ಎದೆಯನ್ನು ಸೀಳಿ ಚರಮಗೀತೆ ಹಾಡಿದಾಗ ಮನ್ವಂತರಕ್ಕೆ ಅವರು ಬಿಟ್ಟು ಹೋದ ಉತ್ತರ ಸತ್ಯಕ್ಕಿಂತ ದೊಡ್ಡ ದೇವರಿಲ್ಲ ಎಂಬುದು. ಕಾಲಘಟ್ಟದ ಮಹಾತ್ಮನೊಬ್ಬನನ್ನು ಕಳೆದುಕೊಂಡು ತಬ್ಬಲಿಯಾದ ಭಾರತಕ್ಕೆ ಇನ್ನೂ ಅಂತಹ ಮತ್ತೊಬ್ಬ ದೇವರು ಹುಟ್ಟಿ ಬಂದಿಲ್ಲ.
ಗಾಂಧಿ ಸತ್ತ ಇಷ್ಟು ವರ್ಷಗಳ ನಂತರದಲ್ಲೂ ನಮಗೆ ಸಾಗಬೇಕಾದ ದಾರಿ ಸ್ಪಷ್ಟವಾಗಿದೆಯೇ? ನಾವು ಬದಲಾಗಿದ್ದೇವೆಯೇ? ತಬ್ಬಲಿತನದಿಂದ ಹೊರಗೆ ಬಂದಿದ್ದೇವೆಯೇ? ಹಿಂಸೆ ಇಲ್ಲವಾಗಿದೆಯೇ?
ಹೀಗೆ ಪ್ರಶ್ನೆಗಳನ್ನು ಕೆದಕಿಕೊಂಡು ಚಕ್ಕಳಮಕ್ಕಳ ಹಾಕಿ ಕುಳಿತೆ. ಊಹುಂ. ಗಾಂಧೀಜಿ ಹೇಳಿದ್ದೇ ಒಂದು, ನಾವು ಮಾಡುತ್ತಿರುವುದೇ ಮತ್ತೊಂದು. ಗಾಂಧೀ ಎಂಬ ಪದ ನಮಗೆಲ್ಲಾ ಶೋಕಿಯ ಪದವಾಗಿಬಿಟ್ಟಿದೆ. ಖಾದಿ ಎಂಬುದೊಂದು ವಿಭಿನ್ನ ವಸ್ತ್ರವಾಗಿದೆಯಷ್ಟೇ. ಬಿಳಿ ಬಣ್ಣ ಎಂದರೆ ಅದು ಎಲ್ಲರ ನಡುವೆ ಎದ್ದುಕಾಣಲು, ನಾಯಕನಾಗಲು ಹವಣಿಸುವ ಪುಢಾರಿಯ ಪಸಂದದ ಅರಿವೆ ಮಾತ್ರ. ಪಶ್ಚಿಮದ ಎಲ್ಲ ಬೇರುಗಳೂ ನಮ್ಮ ಸಂಸ್ಕೃತಿಯನ್ನು ಕಿತ್ತು ತಿನ್ನುತ್ತಿವೆ. ಸುಳ್ಳು ಉಸಿರನಷ್ಟೇ ಸಲೀಸಾಗಿದೆ. ಮೊಬೈಲ್, ಇಂಟರ್ನೆಟ್, ಫೇಸ್ಬುಕ್, ಮುಕ್ತ ಮಾಧ್ಯಮಗಳು ನಮ್ಮ ಮಕ್ಕಳ ಮನಸ್ಸನ್ನು ಗಲೀಜು ಮಾಡಿಬಿಟ್ಟಿವೆ. ಅಪ್ಪನೇ ಹೆತ್ತ ಮಗಳ ಮೇಲೆ, ಹಸುಗೂಸುಗಳ ಮೇಲೆ ಅತ್ಯಾಚಾರ ಎಸಗುವಷ್ಟು ನೀಚ ಪ್ರವೃತ್ತಿಗೆ ಸಮಾಜ ಇಳಿದುಬಿಟ್ಟಿದೆ. ಇದಕ್ಕಿಂತಲೂ ಅಧೋಗತಿ ಮತ್ತೇನಾದರೂ ಇದೆಯೇ? ಸಮಾಜದ ಪ್ರತಿಷ್ಠಿತರು, ಕಳ್ಳತನ, ಆತ್ಮವಂಚನೆ, ಅನಾಚಾರಗಳಿಂದ ಪಾಪದ ಕೊಡಗಳನ್ನು ತುಂಬಿಸಿ ಇಟ್ಟಿದ್ದಾರೆ. ಎಲ್ಲ ದೇಶಗಳೂ ಒಂದಲ್ಲಾ ಒಂದು ನೋವಿನಿಂದ ಬಳಲುತ್ತಿವೆ. ಯಾರೊಬ್ಬರೂ ತಾವು ಸುಖವಾಗಿ ಬದುಕುತ್ತಿದ್ದೇವೆ ಎಂದು ಹೇಳುವ ಎದೆಗಾರಿಕೆ ಉಳಿಸಿಕೊಂಡಿಲ್ಲ. ಎಲ್ಲರೂ ತಾವು ನಡೆಯುತ್ತಿರುವ ದಿಕ್ಕಿನಲ್ಲಿ ಎಡವುತ್ತಿರುವ ಜನರೇ. ಪರ್ಯಾಯದ, ಪ್ರಾಯಶ್ಚಿತ್ತದ ಮಾರ್ಗಗಳು ಯಾರಿಗೂ ಬೇಡವಾದಂತಿರುವ ನಿರ್ವಾತ ಲೋಕ. ಒಂದು ಪಾಪವನ್ನು ತೊಳೆಯಲು ಮತ್ತೊಂದು ಪಾಪ, ಮತ್ತೊಂದು ಪಾಪ ತೊಳೆಯಲು ಮಗದೊಂದು ಪಾಪ ಎಂಬಂತೆ ಅದದೇ ತಿರುಗುಣಿಯಲ್ಲಿ ತಿಪ್ಪರಲಾಗ ಹಾಕುತ್ತಿರುವ ಭೂಪರು. ಯಾರು ಯಾರನ್ನು ದೂಷಿಸುವುದು ಎಂಬುದೇ ತಿಳಿಯದಾದ ಅಯೋವುಯ.
ಅಮೆರಿಕದವರಿಗೆ ಅಂಟಾರ್ಟಿಕದ ಮಂಜಿನ ಮೇಲೂ ಅಧಿಪತ್ಯ. ಚಂದ್ರಲೋಕದಲ್ಲೂ ಸಾಮ್ರಾಜ್ಯ ಸ್ಥಾಪಿಸುವ ಕನಸು. ಹೇಳಲು ಮಾತ್ರ ದೊಡ್ಡಣ್ಣ. ಇವರ ಪಾಪದ ಕಸವೆಲ್ಲಾ ಬಡ ದೇಶಗಳ ಮಡಿಲಿಗೆ. ಸಹಿಷ್ಣುತೆ, ಪರಧರ್ಮ, ನೆರೆಹೊರೆಯ ಪ್ರೀತಿ ಎಲ್ಲಾ ಮೂರಾಬಟ್ಟೆ. ಪಟ್ಟಿ ಮಾಡುತ್ತಾ ಹೊರಟರೆ ಇದಕ್ಕೆ ಕೊನೆಯಿಲ್ಲ. ನಾನೆಷ್ಟರ ಪಾಪದವನು ಎಂಬ ಜಿಜ್ಞಾಸೆ ನಮ್ಮನ್ನು ಎಂದೂ ಕಾಡುತ್ತಿಲ್ಲ. ನಾನು ಜೀವಿಸಿದ ಇಂದಿನ ದಿನದಲ್ಲಿ ನನ್ನ ಪಾಪದ ಬಾಬತ್ತು ಎಷ್ಟಿದೆ ಎಂದು ಲೆಕ್ಕ ಇಡುವ ಗೋಜು ಯಾರಿಗೂ ಬೇಕಿಲ್ಲ. ಅನ್ಯಾಯ ಎಸಗಲು ಪರರೇ ಆಗಬೇಕೆಂದಿಲ್ಲ. ಮನೆಮಂದಿಯೇ ರಕ್ಕಸರ ಆಹಾರ. ಸಮಷ್ಟಿಯ ಭಾವದ ಮಾತನಾಡುತ್ತಲೇ ವ್ಯಷ್ಟಿಯ ವೈಭವೀಕರಣದಲ್ಲಿ ಮುಳುಗಿರುವ ಜನರಿಗೆ ಅಧಿಕಾರ, ಸಂಪತ್ತು, ಕಾಮ, ಖ್ಯಾತಿಗಳ ಹಪಾಹಪಿ. ಯಾವಾಗ ಬೇಕೆಂದರೆ ಆವಾಗ ಯಾರನ್ನು ಬೇಕೆಂದರೆ ಅವರನ್ನು ಕೆಳಕ್ಕೆ ಕೆಡವಿಬಿಡಬಹುದಾದ ಭೋಗಗಳತ್ತಲೇ ಮುಗಿಬೀಳುವ ಜನರು.
ಹೌದಲ್ಲಾ. ಇಂತಹ ಸಮಾಜದಲ್ಲೇ ನಾನೂ ಇದ್ದೇನಲ್ಲಾ ಎಂಬ ಪ್ರಶ್ನೆ ಕುಟುಕಿತು. ಎಷ್ಟೆಲ್ಲಾ ನಡೆಯುತ್ತಿದ್ದರೂ ನನ್ನನ್ನೂ ಇನ್ನೂ ಸಿನಿಕತನ ಆವರಿಸಿಲ್ಲವಲ್ಲಾ ಎಂಬ ದಿಗಿಲಿಗೆ ಬಿದ್ದೆ. ನಿಮಗೆ ಗೊತ್ತಿರಬೇಕು. ಸಿನಿಕತನ ಎಂಬುದು ಗ್ರೀಕ್ತತ್ವಶಾಸ್ತ್ರದ ಒಂದು ಸುಂದರ ಪ್ರಕಾರ. ಎಲ್ಲವನ್ನೂ ತ್ಯಜಿಸಿ ಸರಳವಾಗಿ ಬದುಕುವುದೇ ಅದರ ವೈಶಿಷ್ಟ್ಯ. ಪ್ರಕೃತಿಯ ಜೊತೆ ಗಟ್ಟಿಯಾಗುತ್ತಾ ಬೆನ್ನ ಹಿಂದಿನ ಸಾವನ್ನು ಮರೆಯುತ್ತಾ ಈ ಕ್ಷಣದ ಸುಖವನ್ನು ಪರರಿಗಾಗಿ ಮುಡಿಪಿಡುವ ಸಂಕಲ್ಪಕ್ಕೆ ಅಣಿಯಾಗುವುದೇ ಇದರ ದೊಡ್ಡತನ.
ಮೌನ, ಧ್ಯಾನಗಳ ಸೃಷ್ಟಿಯ ಮೂಲ ತತ್ವವನ್ನು ಮೆಲುಕು ಹಾಕುತ್ತಾ ಎದ್ದು ನಿಂತೆ. ಸರ್ವ ಭೂತಗಳಲ್ಲಿ ತನ್ನನ್ನು, ತನ್ನಲ್ಲಿ ಸರ್ವ ಭೂತಗಳನ್ನೂ ನೋಡುವ ಮನುಜನಿಗೆ ಯಾರಲ್ಲಿಯೇ ಆಗಲೀ, ಭಯವಾಗಲೀ, ದ್ವೇಷವಾಗಲೀ, ಹೇಗೆ ಉಂಟಾದೀತು?
ಚಿಂತನೆಯ ಗಿರಕಿಗಳ ನಡುವೆಯೇ ದಾಸವಾಳದ ಗಿಡದತ್ತ ಮುಂದಡಿಯಿಟ್ಟೆ. ಕತ್ತಲು ಕವಿದು ನಿಂತಿತ್ತು. ನೀಲಿ ಆಕಾಶದಲ್ಲಿ ಆಗಲೇ ನಕ್ಷತ್ರಗಳು ಮಿಣುಕುತ್ತಿದ್ದವು. ಸಣ್ಣಗೆ ಕೊರೆವ ಚಳಿ. ಗಿಡವನ್ನು ದಿಟ್ಟಿಸಿದೆ. ಬೆಳಕಿನ ಹಂಗಿಲ್ಲದೆಯೇ ಹೂವು ಮತ್ತೆ ನಸುನಕ್ಕಂತಾಯಿತು. ದೇಹಗಳಿಗಷ್ಟೇ ಮರಣ. ತತ್ವಗಳಿಗಲ್ಲ ಎಂಬ ಮಾತನ್ನು ಹೂವು ಹಗುರಾಗಿ ಉಲಿದಂತಾಯಿತು.
- ಶ್ರೀ ಬಸವಮೂರ್ತಿ ಮಾದಾರಚನ್ನಯ್ಯ ಸ್ವಾಮೀಜಿ.
anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


