ಅಂಕಣಗಳು

ಬೆಲೆ ಏರಿಕೆ: ಸರ್ಕಾರದ ಕಿರಿಕ್ಕೋ ಅನಿವಾರ್ಯ ಕಹಿಮದ್ದೋ?

ಬೆಲೆ ಏರಿಕೆ: ಸರ್ಕಾರದ ಕಿರಿಕ್ಕೋ ಅನಿವಾರ್ಯ ಕಹಿಮದ್ದೋ?
Published On :

ಇದೀಗ ಸುದ್ದಿಯಲ್ಲಿರುವುದು ರೇಲ್ವೆ ದರ ಏರಿಕೆಯ ವಿಷಯ. ಮೋದಿ ಸರ್ಕಾರ ಬಂದೊಡನೆ ಕೂಡಲೇ ಎಲ್ಲವೂ ಬದಲಾಗುತ್ತದೆ ಎಂದು ಭಾವಿಸುತ್ತಿದ್ದವರಿಗೆ, ಆ ಬದಲಾವಣೆಗೆ ತುಸು ಕಠಿಣ ಕ್ರಮಗಳನ್ನು ಕೈಗೊಳ್ಳಲೇಬೇಕಾಗುತ್ತದೆ ಎನ್ನುವ ಸತ್ಯ ಅರಗಿಸಿಕೊಳ್ಳಲಾಗುತ್ತಿಲ್ಲ. ರೇಲ್ವೆ ಇಲಾಖೆಯ ವಿಷಯವನ್ನೇ ತೆಗೆದುಕೊಳ್ಳಿ. ಇದು ಸಧ್ಯ 26 ಸಾವಿರ ಕೋಟಿ ರುಪಾಯಿ ಆದಾಯ ಕೊರತೆ ಎದುರಿಸುತ್ತಿದೆ. ಅಲ್ಲದೆ ತಿಂಗಳಿಗೆ 900 ಕೋಟಿ ರುಪಾಯಿ ನಷ್ಟವನ್ನೂ ಅನುಭವಿಸುತ್ತಿದೆ. ಇವೆಲ್ಲದರ ಮಧ್ಯೆ ಬುಲೆಟ್ ರೈಲು, ಹೈ ಸ್ಪೀಡ್ ರೈಲು ಸೇರಿದಂತೆ ರೇಲ್ವೆಯನ್ನು ಆಧುನೀಕರಣಗೊಳಿಸಲು ಸರ್ಕಾರ ಸಜ್ಜಾಗಿದೆ. ಈಗ ಹೆಚ್ಚಿಸಿರುವ (ಶೇ.14.2 ಮತ್ತು 6.5) ದರದಿಂದಾಗಿ ವಾರ್ಷಿಕ 8 ಸಾವಿರ ಕೋಟಿ ಆದಾಯ ನಿರೀಕ್ಷೆ ಇದೆ. ಇಲಾಖೆಗೆ ನಷ್ಟವಾದರೂ ಪರವಾಗಿಲ್ಲ ಕಡಿಮೆ ಬೆಲೆಗೆ ರೈಲು ಹೊರಡಲಿ ಎಂದು ಸರ್ಕಾರ ನಿರ್ಧರಿಸಿದರೆ, ಮುಂದಿನ ದಿನಗಳಲ್ಲಿ ವಿಶ್ವ ದರ್ಜೆಯ ರೈಲುಗಳು ಮತ್ತು ರೇಲ್ವೆ ವ್ಯವಸ್ಥೆಯನ್ನು ನೋಡಬೇಕು ಎಂಬ ನಮ್ಮ ಕನಸು ಕನಸಾಗಿಯೇ ಉಳಿಯುತ್ತದೆ. 2013ರ ಜನವರಿಯಲ್ಲಿ ಯುಪಿಎ ಸರ್ಕಾರ ರೈಲ್ವೆ ದರವನ್ನು ಶೇ.20 ರಷ್ಟು ಏರಿಸಿತ್ತು. ಈಗ ಶೇ.14.2. ರಷ್ಟು ಏರಿಕೆಯಾಗಿದೆ. ಇದಕ್ಕೆ ಬೆಲೆ ಏರಿಕೆಯ ನಿಯಂತ್ರಣ ಎನ್ನುತ್ತೇವೆ. ಇದಕ್ಕೂ ರಾಜಕೀಯ ಲೇಪನ ಮಾಡಿರುವುದು ದುರಾದೃಷ್ಟ. "ರೇಲ್ವೆ ಪ್ರಯಾಣ ದರ ಹೆಚ್ಚಳದಿಂದ ಸಾಮಾನ್ಯ ಜನರಿಗೆ ಹೊರೆಯಾಗಿದೆ. ಕೂಡಲೇ ದರ ಏರಿಕೆಯ ನಿರ್ಣಯವನ್ನು ಹಿಂಪಡೆಯಿರಿ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿಕೆ ಕೊಟ್ಟರು. ಆದರೆ ಕಳೆದ ಏಪ್ರಿಲ್‌ನಲ್ಲಿ ಬಿ.ಎಮ್.ಟಿ.ಸಿ ದರವನ್ನು ಶೇ.15ರಷ್ಟು ಹೆಚ್ಚು ಮಾಡಿದಾಗ, ಬಸ್ಸಿನಲ್ಲಿ ಪ್ರಯಾಣ ಮಾಡುವವರೂ 'ಸಾಮಾನ್ಯ ಜನರೇ' ಎಂದು ಅವರಿಗೆ ತಿಳಿದಿರಲಿಲ್ಲವೇ?
ಇನ್ನು ಪೆಟ್ರೋಲ್ ಸಮಸ್ಯೆಗೆ ಬಂದರೆ ಭಾರತದಲ್ಲಿ ಇಂದಿನ ಬೆಲೆ ಲೀಟರ್‌ಗೆ 76 ರುಪಾಯಿಯಿದೆ. ನಮ್ಮ ದೇಶದಲ್ಲೇ ಹೆಚ್ಚು ಎಂದುಕೊಂಡರೆ ತಪ್ಪು. ಚೀನಾ, ಆಸ್ಟ್ರೇಲಿಯಾ, ಫ್ರಾನ್ಸ್, ಜರ್ಮನಿ, ಸಿಂಗಪೂರ್ ಹಾಗೂ ಶ್ರೀಲಂಕಾದಲ್ಲೂ ಕೂಡ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚೇ ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆ ಹಾಗೂ ದೇಶೀಯ ಮಾರುಕಟ್ಟೆಯ ಬೆಲೆಗಳಿಗೆ ಸಾಕಷ್ಟು ವ್ಯತ್ಯಾಸಗಳಿರುತ್ತವೆ. ಭವ್ಯ ಭಾರತದ ಕನಸು ಹೊಂದಿರುವ ಕೇಂದ್ರದ ಮೋದಿ ಸರ್ಕಾರ ಮೊದಲೆರಡು ವರ್ಷ ಇನ್ನಷ್ಟು ಕಠಿಣ ನಿರ್ಣಯಗಳನ್ನು ತೆಗೆದುಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿಯೇ ಇವೆ. ಮೊದಲ ಹಂತವಾಗಿ ಕೆಲವು ಸಹಾಯ ಧನಗಳನ್ನು ಕಡಿತ ಮಾಡುವ ಆಲೋಚನೆಯನ್ನು ಸರ್ಕಾರ ಹೊಂದಿದೆ. ಇಂಧನ ಕ್ಷೇತ್ರದಲ್ಲಿ 24 ಶತಕೋಟಿ ಡಾಲರ್ ಸಹಾಯಧನ ವ್ಯಯವಾಗುತ್ತಿದೆ. ಇದನ್ನು ಸುಧಾರಿಸುವ ನಿಟ್ಟಿನಲ್ಲಿ ಪ್ರತಿ ತಿಂಗಳು ಎಲ್‌ಪಿಜಿ, ಡೀಸೆಲ್ ಹಾಗೂ ಸೀಮೆ ಎಣ್ಣೆಯ ಬೆಲೆಯನ್ನು ತುಸು ಏರಿಸಬಹುದು. ಆಹಾರ ಭದ್ರತೆಯ ಅಡಿಯಲ್ಲಿ ನಿಜವಾದ ಬಡವರಿಗೆ ಸವಲತ್ತು ಸಿಗುವಂತೆ ಯೋಜನೆ ರೂಪಿಸಬಹುದು. ಹೊಸ ತೆರಿಗೆ ಮತ್ತು ಚಾಲ್ತಿಯಲ್ಲಿರುವ ತೆರಿಗೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಬಗ್ಗೆ ತೀರ್ಮಾನ, ಕನಿಷ್ಠ ಬೆಂಬಲ ಬೆಲೆಯನ್ನು ಕಡಿಮೆ ಮಾಡುವುದು. ಸಾರ್ವಜನಿಕ ವಲಯದಲ್ಲಿ ಉದ್ಯೋಗ ಸೃಷ್ಟಿ, ಆರ್ಥಿಕ ಬಲವರ್ಧನೆಗೆ ಹೆಚ್ಚಿನ ಗಮನ ಕೊಡುವ ನಿಟ್ಟಿನಲ್ಲಿ ಯೋಜನೆಗಳು ರೂಪಪಡೆಯುತ್ತಿವೆ.
ಕೆಲವು ನಿರ್ಧಾರಗಳು ಕಠಿಣ ಎನಿಸಿದರು ದೇಶದ ಹಿತದೃಷ್ಟಿಯಿಂದ ಸೂಕ್ತವಾಗಿರುತ್ತವೆ. ವಿಶ್ವ ದರ್ಜೆಯ ಯೋಜನೆಗಳು ಬೇಕೆಂದರೆ ಅದರಲ್ಲಿ ಹಣ ಪ್ರಮುಖ ಪಾತ್ರ ವಹಿಸುತ್ತವೆ. ನಮಗೆ ಸೌಲಭ್ಯಗಳು ಬೇಕು, ಆದರೆ ನಮ್ಮಿಂದ ಏನೂ ಕೇಳದಿರಿ ಎನ್ನುವ ಗುಣ ಎಷ್ಟು ಸರಿ? ದೇಶದ ಅಭಿವೃದ್ಧಿಗೆ ಹಣವನ್ನು ಜನರಿಂದಲೇ ಪಡೆಯಬೇಕು. ನಮ್ಮ ಸೈಟನ್ನು ಹೆಚ್ಚು ಹಣಕ್ಕೆ ಮಾರಬೇಕು, ಆದರೆ ನಾವು ಕೊಂಡುಕೊಳ್ಳುವ ಸೈಟ್ ಕಡಿಮೆ ಬೆಲೆಗೆ ಸಿಗಬೇಕು ಎಂದರೆ ಹೇಗೆ?! ಆದಾಯವೇ ಇಲ್ಲದೇ ಸಂಸಾರ ನಡೆಸಲು ಸಾಧ್ಯವೇ? ಖಂಡಿತಾ ಇಲ್ಲ. ಅದೇ ರೀತಿ ಸರ್ಕಾರವು ಸಹ, ಉತ್ತಮ ಸೌಕರ್ಯಗಳನ್ನು ಒದಗಿಸಲು ಬೆಲೆ ಏರಿಕೆ ಮಾಡಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ.
ಯಾವುದೇ ಕಾರಣಕ್ಕೂ ಬದಲಾವಣೆ ತಕ್ಷಣ ಆಗುವ ಕ್ರಿಯೆಯಲ್ಲ. ಪ್ರಧಾನ ಮಂತ್ರಿಗಳಿಗೆ ಮಾಯ-ಮಂತ್ರ ಮಾಡಲು ಸಾಧ್ಯವಿಲ್ಲ. ರೇಲ್ವೆ ಅಥವಾ ಇನ್ನಿತರ ವಲಯಗಳಿಗೆ ಹಿಂದಿನ ಸರ್ಕಾರ ಹಚ್ಚಿ ಹೋದ ರೋಗ ವಾಸಿಯಾಗಬೇಕೆಂದರೆ, ಔಷಧ ನೀಡಲೇಬೇಕು. ಆದ್ದರಿಂದಲೇ ಈಗ ಕೆಲವು ಕಹಿ ಗುಳಿಗೆಗಳನ್ನು ತಿನ್ನಲೇಬೇಕು! ಯಾವುದೋ ಕಾಲಕ್ಕೆ ಉಪಯೋಗವಾಗಲೆಂದು ಈಗಿನಿಂದಲೇ ಇನ್ಶೂರೆನ್ಸ್ ಮಾಡಿಸುತ್ತೇವೆ. ಮಗ/ಮಗಳು ಚೆನ್ನಾಗಿರಲಿ, ಒಳ್ಳೆಯ ನೌಕರಿ ಗಿಟ್ಟಿಸಿಕೊಳ್ಳಲಿ  ಎಂದು ದುಬಾರಿ ಶಾಲೆಗಳಲ್ಲಿ ಅವರನ್ನು ಓದಿಸುತ್ತೇವೆ. ಇದೂ ಹಾಗೆಯೇ! ಮುಂದಿನ ವರ್ಷಗಳಲ್ಲಿ ಭವ್ಯ ಭಾರತದ ಕನಸು ಸಾಕಾರಗೊಳ್ಳಬೇಕೆಂದರೆ, ಅದಕ್ಕೆ ಹೂಡಿಕೆ ಮಾಡಲೇಬೇಕು. ನಾವಲ್ಲದಿದ್ದರೂ ನಮ್ಮ ಮಕ್ಕಳಾದರೂ ಸ್ವಚ್ಛ, ಸ್ವಚ್ಛಂದ ಭಾರತದಲ್ಲಿ ವಿಹರಿಸುತ್ತಾರೆ.
ವಿದೇಶಗಳಲ್ಲಿನ ರೈಲು, ರಸ್ತೆಗಳನ್ನೆಲ್ಲಾ ಹೊಗಳುವ ನಾವು, "ನಮ್ಮ ದೇಶದ ರೇಲ್ವೆ, ರಸ್ತೆ ಹೇಗಿದೆಯೋ ನೋಡಿ? ಈ ದೇಶ ಉದ್ಧಾರವಾಗುವುದೇ ಇಲ್ಲ" ಎಂದು ಕೊರಗುತ್ತೇವೆ. ಆದರೆ ಆ ಕೊರಗು ಮರೆಯಾಗಲು ನಮ್ಮ ಕೊಡುಗೆಯ ಅವಶ್ಯಕತೆಯೂ ಇದೆ. ಅದ್ಭುತ ರೈಲು ಸಂಚಾರವನ್ನು ಈಗ ನಷ್ಟ ಅನುಭವಿಸುತ್ತಿರುವ ರೈಲ್ವೆ ವ್ಯವಸ್ಥೆಯಿಂದ ಒದಗಿಸಲು ಸಾಧ್ಯವಿಲ್ಲ. ಬೆಲೆ ಏರಿಕೆ ಅನಿವಾರ್ಯ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಹತ್ತು ವರ್ಷ ಕಾದವರಿಗೆ, ಇನ್ನೆರಡು ವರ್ಷ ಕಾಯುವುದಕ್ಕೆ ಬಹುಶಃ ಕಷ್ಟ ಆಗುವುದಿಲ್ಲ. ಪುಕ್ಕಟೆ ಯೋಜನೆಗಳಿಂದ ಸರ್ಕಾರದ ಬೊಕ್ಕಸ ಖಾಲಿಯಾಗುವುದು ಬೇಡ. ಭಾರತದ ಅಭಿವೃದ್ಧಿಗೆ ನಾವು ಕೈ ಜೋಡಿಸೋಣ, ಭಾರತದ ಬದಲಾವಣೆಯಲ್ಲಿ ಹೆಮ್ಮೆಯ ಪಾಲುದಾರರಾಗೋಣ.

 -ರೂಪೇಶ್ ಆರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.