ಅಪ್ಪನೆಂಬ ಮುತ್ತು, ಅಪಾಯವಾಗುವ ಹೊತ್ತು!
ಇನ್ನೂ ನಿದ್ದೆ ಬಿಟ್ಟಿರಲಿಲ್ಲ. ಬಾಗಿಲು ಬಡಿಯುವ ಸದ್ದು. ಹಾಸಿಗೆಯಿಂದ ಎದ್ದ ಡಾ. ಝಕ್ಕರಿಯಾ, ಬಾಗಿಲು ತೆಗೆದು ನೋಡಿದಾಗ ಬಾಲಕಿಯೊಬ್ಬಳು ನಿಂತಿರುತ್ತಾಳೆ. 14-15 ವಯಸ್ಸಾಗಿರಬಹುದು. ನೋವು ಮತ್ತು ಆಕ್ರೋಶ ಮೇಳೈಸಿದ ಕಣ್ಣು. 'ಡಾಕ್ಟರೇ, ನೇರವಾಗಿ ವಿಷಯಕ್ಕೆ ಬರುತ್ತೇನೆ. ನಾನು 3 ತಿಂಗಳ ಗರ್ಭಿಣಿ. ಅದು-ಇದು ಏನೂ ಪ್ರಶ್ನೆ ಬೇಡ. ನಾನು ಸುರಕ್ಷಿತವಾಗಿ ಹೆರಬೇಕು. ನಿಮ್ಮಿಂದ ಸಾಧ್ಯವೋ, ಇಲ್ಲವೋ ಅಷ್ಟು ಹೇಳಿ' ಎಂದಾಗ ಒಂದು ಕ್ಷಣ ಝಕ್ಕರಿಯಾರ ಎದೆ ಸಣ್ಣಗೆ ನಡುಗುತ್ತದೆ.
ಆದದ್ದಾಗಲಿ ಎಂದು ಬಾಲಕಿಯನ್ನು ಮರುಪ್ರಶ್ನಿಸದೆ ಸರಿ ಎಂಬಂತೆ ತಲೆಯಾಡಿಸುತ್ತಾರೆ ಡಾಕ್ಟರ್. ಮಾರನೇ ದಿನ ಆಕೆಯ ಮನೆಗೆ ತೆರಳಿ ಪರಿಸ್ಥಿತಿಯನ್ನು ವಿವರಿಸಿದಾಗ ಅಲ್ಲಿ ರಣರಂಗವೇ ನಡೆಯುತ್ತದೆ. ಬಾಲಕಿಯ ಹೆತ್ತವರು ಕೂಗಾಡುತ್ತಾರೆ, ಕಿರುಚಾಡುತ್ತಾರೆ. ಇಂತಹ ಸ್ಥಿತಿಯಲ್ಲಿ ತನ್ನ ಪೇಷೆಂಟ್ ಸುರಕ್ಷಿತವಾಗಿ ಹೆರಲು ಸಾಧ್ಯವಿಲ್ಲ ಎಂದರಿತ ಡಾಕ್ಟರ್ ದಂಪತಿ ಬಾಲಕಿಯನ್ನು ತಮ್ಮ ಮನೆಗೆ ಕರೆದೊಯ್ಯುತ್ತಾರೆ. ವೈದ್ಯ ದಂಪತಿಯ ಆರೈಕೆಯಲ್ಲಿ 6 ತಿಂಗಳು ಕಳೆಯುತ್ತದೆ. ಬಾಲಕಿ ಹೆರುತ್ತಾಳೆ. ಮಗುವಿನ ಮುಖವನ್ನೂ ನೋಡದೆ ಮಕ್ಕಳಿಲ್ಲದ ಆ ವೈದ್ಯ ದಂಪತಿಗೆ ಅದನ್ನು ನೀಡುತ್ತಾಳೆ. ಇಷ್ಟು ಸಣ್ಣ ವಯಸ್ಸಿನಲ್ಲಿ ಆಕೆ ತಾಯಿಯಾಗಲು ಯಾರು ಕಾರಣ ಎಂಬ ಪ್ರಶ್ನೆ ಕೇಳುವ ಧೈರ್ಯ ಆ ದಂಪತಿಗಿರುವುದಿಲ್ಲ, ಹೇಳುವ ಇಚ್ಛೆ ಬಾಲಕಿಗಿರುವುದಿಲ್ಲ. ಒಂದು ದಿನ ಇದ್ದಕ್ಕಿದ್ದಂತೆ ಬಂದ ಬಾಲಕಿ, 'ಝಕ್ಕರಿಯಾ ಅಂಕಲ್ಗೆ ಈ ಪುಸ್ತಕವನ್ನು ಕೊಟ್ಟುಬಿಡಿ, ಇದರಲ್ಲಿ ಒಂದು ಕಥೆಯನ್ನು ಗುರುತು ಹಾಕಿದ್ದೇನೆ. ಅದನ್ನು ಓದಲಿ' ಎಂದು ಹೇಳಿ ಮರಳುತ್ತಾಳೆ.
ಆ ಕಥೆ; ರಾತ್ರಿ ಮಲಗಿದ್ದಾಗ ಕತ್ತಲೆಯಲ್ಲಿ ಬಂದು ತನ್ನ ದೇಹವನ್ನು ತಡಕಾಡಿದ ಒರಟು ಕೈ, ಕೊಸರಾಡಿದಾಗ ಬಾಯಿ ಮುಚ್ಚು ಎಂದು ಗದರಿಸಿದ ಧ್ವನಿ ಬೇರೆ ಯಾರದ್ದೂ ಅಲ್ಲ, ತನ್ನ ಅಪ್ಪನದ್ದು ಎಂದು ತಿಳಿದಾಗ ಆಕೆಗಾದ ಆಘಾತ ಅಂತಿಂಥದ್ದಲ್ಲ. ಆಗಲೇ ಆಕೆ ನಿರ್ಧರಿಸಿಬಿಟ್ಟಿರುತ್ತಾಳೆ. ತಾನು ಈ ಬೇಡದ ಗರ್ಭವನ್ನು ಹೊತ್ತು, ಹೆತ್ತು ಆ ಮೂಲಕ ತಂದೆಯ ಮೇಲೆ ಸೇಡು ತೀರಿಸುತ್ತೇನೆ ಎಂದು.
ಇದು 'ಝಕ್ಕರಿಯಾಯುಡೆ ಗರ್ಭಿಣಿಕಳ್' ಎಂಬ ಮಲಯಾಳಂ ಸಿನಿಮಾದಲ್ಲಿನ ಒಂದು ಕಥೆಯ ಎಳೆಯಷ್ಟೆ. ನಾನಿಲ್ಲಿ ಸಿನಿಮಾವನ್ನಷ್ಟೇ ಉದಾಹರಿಸಿದ್ದೇನೆ. ಆದರೆ ನಮ್ಮ ಸಮಾಜದಲ್ಲಿ ನಡೆಯುತ್ತಿರುವ ಮಕ್ಕಳ ಮೇಲೆ ಅತ್ಯಾಚಾರ, ಲೈಂಗಿಕ ಕಿರುಕುಳದಂತಹ ಪ್ರಕರಣಗಳಿಗೆ ಲೆಕ್ಕವಿಲ್ಲ. ಇತ್ತೀಚೆಗಂತೂ ಇಂತಹ ಸುದ್ದಿಗಳ ಸಂಖ್ಯೆ ಹೆಚ್ಚುತ್ತಿದೆ. ಅವುಗಳನ್ನು ಓದುವಾಗ ಮೇಲೆ ಹೇಳಿದ ಸಿನಿಮಾದ ಒಂದೊಂದು ಮನಕಲಕುವ ದೃಶ್ಯ, ಬಾಲಕಿಯ ಆಂತರಿಕ ತುಮುಲ ನೆನಪಾಗಿ ಎದೆಗೆ ಚೂರಿ ಇರಿದಂತೆ ಭಾಸವಾಗುತ್ತದೆ. ನಮ್ಮ ಸುತ್ತಮುತ್ತಲೂ ಪ್ರತಿದಿನ ಇಂತಹ ಅಮಾನವೀಯ ಘಟನೆಗಳು ನಡೆಯುತ್ತಿದ್ದರೂ ನಾವೆಲ್ಲ ಎಷ್ಟು ಅಸಹಾಯಕರು ಎಂಬ ಭಾವನೆ ಮೂಡುತ್ತದೆ.
ಯಾಕೆ ಹೀಗಾಗುತ್ತಿದೆ? ನಮ್ಮ ಸಮಾಜದಲ್ಲಿ ನೈತಿಕತೆ ಎಂಬುದು ಮಾಯವಾಗುತ್ತಿದೆಯೇ? ಒಂದು ರೀತಿಯಲ್ಲಿ ಆಲೋಚಿಸಿದರೆ ಇವೆಲ್ಲವೂ ಉದಾರೀಕರಣದ ಉಡುಗೊರೆಯೇ ಎಂಬ ಪ್ರಶ್ನೆ ಮೂಡುತ್ತದೆ. ಆಧುನಿಕತೆ, ಪಾಶ್ಚಾತ್ಯ ಸಂಸ್ಕೃತಿಯನ್ನು ಆವಾಹಿಸಿಕೊಳ್ಳುತ್ತಿದ್ದಂತೆ ನಮ್ಮಲ್ಲಿನ ನಮ್ಮತನ ಕಣ್ಮರೆಯಾಗುತ್ತಿದೆ. ಸ್ವಾತಂತ್ರ್ಯವೆಂಬುದು ಎಲ್ಲೆ ಮೀರಿ ಸ್ವೇಚ್ಛಾಚಾರ ಆ ಜಾಗವನ್ನು ತುಂಬಿಕೊಳ್ಳುತ್ತಿದೆ. ಮೊಬೈಲ್, ಟಿವಿ, ಸಾಮಾಜಿಕ ಜಾಲತಾಣಗಳು ಮಕ್ಕಳಿಂದ ಹಿಡಿದು ವಯೋವೃದ್ಧರ ಮೇಲೂ ಪ್ರಭಾವವನ್ನು ಬೀರುತ್ತಿರುವುದು ಒಳ್ಳೆಯ ಲಕ್ಷಣವಾದರೂ, ಕೆಲವೊಂದು ಸಂದರ್ಭಗಳಲ್ಲಿ ಇವುಗಳು ಅಶ್ಲೀಲತೆ, ಮುಕ್ತ ಲೈಂಗಿಕತೆಯತ್ತ ಜನರನ್ನು ಆಕರ್ಷಿಸುವ ವೇದಿಕೆಯಾಗುತ್ತಿರುವುದು ಆತಂಕಕಾರಿ ವಿಚಾರ. ಆಧುನಿಕ ಯುಗದಲ್ಲಿ ಇವೆಲ್ಲವೂ ್ಛ್ಟಟಟ್ಟಟಿ ಎಂಬ ಕಲ್ಪನೆಗಳು ಜನರನ್ನು ತಪ್ಪುದಾರಿಗೆಳೆಯುತ್ತಿರುವುದರಲ್ಲಿ ಸಂಶಯವಿಲ್ಲ. ಇದಕ್ಕೆ ಹೆಣ್ಣು ಕೂಡ ಹೊರತಲ್ಲ.
ಅವಿಭಕ್ತ ಕುಟುಂಬದ ಅದೊಂದು ಕಾಲವಿತ್ತು. ಅಪ್ಪ, ಅಮ್ಮ, ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು, ಮರಿಮಕ್ಕಳು ಎಲ್ಲರೂ ಒಂದೇ ಸೂರಿನಡಿ ಬಾಳುತ್ತಿದ್ದರು. ಆಗ ಹೆಣ್ಣಿಗೆ ಒಂಟಿತನ ಕಾಡುತ್ತಿರಲಿಲ್ಲ. ಜತೆಗೆ ಆಕೆಗೆ ರಕ್ಷಣೆಯಾಗಿ ಒಬ್ಬರಲ್ಲದಿದ್ದರೆ, ಒಬ್ಬರು ಇರುತ್ತಿದ್ದರು. ಈಗ ಪರಿಸ್ಥಿತಿ ಬದಲಾಗಿದೆ. ಅವಿಭಕ್ತ ಕುಟುಂಬಗಳೆಲ್ಲ ಒಡೆದು ಚೂರಾಗಿವೆ. ಒಂದು ಮನೆಯಲ್ಲಿ ಗಂಡ, ಹೆಂಡತಿ, ಮಕ್ಕಳು ಬಿಟ್ಟರೆ ಬೇರೆಯವರಿಗೆ ಪ್ರವೇಶವಿಲ್ಲ. ಅಪ್ಪ, ಅಮ್ಮ ಇಬ್ಬರೂ ಕೆಲಸಕ್ಕೆ ಹೋದರೆ ಮಕ್ಕಳ ರಕ್ಷಣೆಗೆ ಯಾರೂ ಇರುವುದಿಲ್ಲ. ಇಂತಹ ಸಮಯವನ್ನೇ ದುರುಪಯೋಗಪಡಿಸಿಕೊಳ್ಳುವ ರಾಕ್ಷಸರು ಆ ಅಮಾಯಕ ಮಕ್ಕಳ ಮೇಲೆ ಎರಗುತ್ತಾರೆ. ಎಷ್ಟೋ ಕಡೆ ಬೇಬಿ ಸಿಟ್ಟಿಂಗ್ನಲ್ಲೂ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತದೆ. ಅಷ್ಟೇ ಏಕೆ? ಮಕ್ಕಳನ್ನು ಶಾಲೆಗೆ ಒಯ್ಯುವ ಶಾಲಾವಾಹನದಲ್ಲೂ ಕ್ರೌರ್ಯ ನಡೆದ ಎಷ್ಟೋ ಉದಾಹರಣೆಗಳು ನಮ್ಮ ಮುಂದಿವೆ. ಆದರೆ ಘಟನೆ ನಡೆದಾಗ ಅದನ್ನು ಹೇಳಿಕೊಳ್ಳುವ ಧೈರ್ಯವಾಗಲೀ, ವಿವೇಚನೆಯಾಗಲೀ ಮಕ್ಕಳಿಗೆಲ್ಲಿಂದ ಬರಬೇಕು?
ಜನರ ನೈತಿಕತೆ ಎಲ್ಲಿಯವರೆಗೆ ಕುಸಿದಿದೆಯೆಂದರೆ ಸ್ವಂತ ಮಕ್ಕಳನ್ನೂ ಕಾಮದ ದೃಷ್ಟಿಯಿಂದ ನೋಡುವಷ್ಟು. ಇತ್ತೀಚೆಗಷ್ಟೇ ಬೆಂಗಳೂರು ಹೊರವಲಯದ ರಾಮನಗರದಲ್ಲಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯಲ್ಲಿ ನಡೆದ ಪ್ರಕರಣಗಳನ್ನೇ ಗಮನಿಸೋಣ. ಅಪ್ಪಂದಿರೇ ಮಕ್ಕಳ ಮೇಲೆ ಅಮಾನುಷವಾಗಿ ಅತ್ಯಾಚಾರ ಎಸಗಿದ್ದಾರೆ. ಮಕ್ಕಳಿಗೆ ರಕ್ಷಾಕವಚವಾಗಿ ಇರಬೇಕಾಗಿದ್ದ ಅಪ್ಪಂದಿರು ಇಷ್ಟೊಂದು ಕ್ರೂರಿಗಳಾಗುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರವೇ ದೊರೆಯುತ್ತಿಲ್ಲ. ಅವರ ಮನಸ್ಸಲ್ಲಿ ಇಂತಹುದೊಂದು ಆಲೋಚನೆಯಾದರೂ ಹೇಗೆ ಹೊಳೆಯುತ್ತದೆ? ತಮ್ಮ ಕರುಳ ಕುಡಿಗಳ ಮೇಲೆ ಕಾಮದೃಷ್ಟಿ ಬೀರುವಷ್ಟು ಸಮಾಜ ಕೆಟ್ಟುಹೋಗಿದೆಯೆಂದರೆ ಇದು ನಿಜಕ್ಕೂ ಅಪಾಯಕಾರಿ ಬೆಳವಣಿಗೆ. ಇಂತಹ ಸ್ಥಿತಿಗೂ ಆಧುನಿಕ ಜೀವನ ಕ್ರಮ ಕಾರಣವಾಗಿರಬಹುದೇ ಎಂಬ ಸಂಶಯ ಮೂಡುತ್ತದೆ. ಪತಿ, ಪತ್ನಿ ಇಬ್ಬರೂ ದುಡಿಯುತ್ತಿರುವಾಗ ಪರಸ್ಪರರ ಭಾವನೆಗಳಿಗೆ ಬೆಲೆ ಕೊಡದೇ ಇರುವುದು. ಅವರ ನಡುವೆ ಇರಬೇಕಾದ ಸಂಬಂಧ ಮಾಯವಾಗುವುದು. ಪುರುಷನಿಗೆ ತನ್ನ ಲೈಂಗಿಕ ವಾಂಛೆಯನ್ನು ತಣಿಸಿಕೊಳ್ಳಲು ಸಾಧ್ಯವಾಗದೇ ಮನಸ್ಸು ಇಂತಹ ನೀಚ ಕೃತ್ಯಗಳಿಗೆ ಪ್ರೇರೇಪಿಸುತ್ತಿರಬಹುದೇ ಗೊತ್ತಿಲ್ಲ. ಆದರೆ, ನಮ್ಮ ಸಮಾಜ ಮಾತ್ರ ಕ್ಷಮಿಸಲಾಗದ ತಪ್ಪಿನೆಡೆಗೆ ಮುಖಮಾಡುತ್ತಿರುವುದಂತೂ ನಿಜ.
ಸರಿ ತಪ್ಪುಗಳನ್ನು ಗುರುತಿಸಿ ಬೇರ್ಪಡಿಸುವಷ್ಟು ವಿವೇಚನೆ ಮಕ್ಕಳಲ್ಲಿ ಇರುವುದಿಲ್ಲ. ಇಂತಹ ಮಕ್ಕಳು ಸುಲಭವಾಗಿ ಕಾಮುಕರಿಗೆ ಬಲಿಯಾಗುತ್ತಿರುವುದು ದುರಂತ. ಈ ರೀತಿ ಬಾಲ್ಯದಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾಗುವುದು ಕೇವಲ ಹೆಣ್ಣು ಮಕ್ಕಳಷ್ಟೇ ಅಲ್ಲ, ಗಂಡು ಮಕ್ಕಳ ಮೇಲೂ ಕರಾಳ ಕೃತ್ಯಗಳು ನಡೆಯುತ್ತಿವೆ. ನಾಲ್ಕರಲ್ಲಿ ಒಬ್ಬಳು ಹೆಣ್ಣುಮಗಳು, ಏಳರಲ್ಲಿ ಒಬ್ಬ ಗಂಡುಮಗು ಬಾಲ್ಯದಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾಗುತ್ತಾರೆ ಎನ್ನುತ್ತದೆ ರಾಷ್ಟ್ರೀಯ ಮಕ್ಕಳ ಮಾನಸಿಕ ಒತ್ತಡ ಜಾಲ(ಎನ್ಸಿಟಿಎಸ್ಎನ್). ಹೆಚ್ಚಿನ ಸಂದರ್ಭಗಳಲ್ಲಿ ಮಕ್ಕಳ ಮೇಲೆ ನಡೆಯುವುದು ಊಟ್ಟಡ್ಝ್ಟಿಟಿಛಟ ಛಿಟಛ್ಛ್ಞಟಛ್ಝಟ. ಸಾಕಿ, ಸಲಹುತ್ತಿರುವ ತಂದೆಯು ಮಗಳನ್ನು ಪ್ರೀತಿಯಿಂದ ಮುದ್ದಾಡುವುದು ಸಹಜ. ಆದರೆ ಅದು ಅತಿರೇಕಕ್ಕೆ ಹೋಗಿ, ಅತ್ಯಾಚಾರದವರೆಗೆ ಬಂದಾಗ ಆ ಮಗುವಾದರೂ ಏನು ಮಾಡಬೇಕು ಹೇಳಿ. ವಿದ್ಯಾರ್ಥಿನಿಯರ ಮೇಲೆ ಶಿಕ್ಷಕರು ನಡೆಸುವುದೂ ಇದನ್ನೇ. ಕೆಲವೊಂದು ಕೃತ್ಯಗಳು ಹೊರಬರುತ್ತವೆ, ಮತ್ತೆ ಕೆಲವು ನಾಲ್ಕು ಗೋಡೆಗಳ ಮಧ್ಯೆ ಸಮಾಧಿಯಾಗಿ ಹೋಗುತ್ತವೆ. ಮಗಳ ಮೇಲೆ ಸ್ವಂತ ತಂದೆಯೇ ಅತ್ಯಾಚಾರ ನಡೆಸುತ್ತಿದ್ದಾನೆ ಎಂದು ಗೊತ್ತಿದ್ದರೂ ಅನೇಕ ಪ್ರಕರಣಗಳಲ್ಲಿ ತಾಯಿ ಸುಮ್ಮನಿದ್ದು, ಒಳಗೊಳಗೇ ಬೇಯುತ್ತಾಳೆ. ಭವಿಷ್ಯದ ಅಭದ್ರತೆಯು ಆಕೆಯ ಧ್ವನಿಯನ್ನು ಉಡುಗಿಸಿಬಿಟ್ಟಿರುತ್ತದೆ. ಹೊರಗೆ ಹೋದ ಹೆಣ್ಣುಮಗಳು 'ಒಮ್ಮೆ ಮನೆ ಸೇರಿಕೊಂಡರೆ ಸಾಕು' ಎಂದು ಭಾವಿಸುತ್ತಿದ್ದ ಕಾಲ ದೂರವಾಗಿ, ಅಯ್ಯೋ ಮತ್ತೆ ಮನೆಯೆಂಬ ನರಕಕ್ಕೆ ಹೋಗಬೇಕಲ್ಲ. ಒಮ್ಮೆ ಮನೆಯಿಂದ ದೂರ ಹೋದರೆ ಸಾಕು ಎಂದು ಅಂದುಕೊಳ್ಳುವ ಸ್ಥಿತಿ ಎದುರಾಗಿದೆ.
ಇಲ್ಲಿ ತಾಯಿಯಾದವಳು ಮಾಡಬೇಕಾದ್ದು ಸಾಕಷ್ಟಿದೆ. ನೀವು ದುಡಿಯುವುದು ಮಕ್ಕಳ ಭವಿಷ್ಯಕ್ಕಾಗಿ ನಿಜ. ಆದರೆ ಆರ್ಥಿಕ ಸದೃಢತೆ ಮೂಡಿಸುವ ಭರದಲ್ಲಿ ಮಕ್ಕಳ ಜೀವನವನ್ನೇ ಬಲಿಕೊಡುವುದು ಎಷ್ಟು ಸರಿ? ಎಷ್ಟೇ ಬ್ಯುಸಿಯಾಗಿದ್ದರೂ ಮಕ್ಕಳತ್ತ ಗಮನಹರಿಸುವುದನ್ನು ನಿಲ್ಲಿಸಬಾರದು. ಹೆಣ್ಣು ಮಕ್ಕಳಿಗಂತೂ ಒಳ್ಳೆಯ ಸ್ಪರ್ಶ ಯಾವುದು, ಕೆಟ್ಟ ಸ್ಪರ್ಶ ಯಾವುದು ಎಂಬುದನ್ನು ಸರಿಯಾಗಿ ತಿಳಿಸಿಕೊಡಬೇಕು. ಮಡಿವಂತಿಕೆಯನ್ನೆಲ್ಲ ಬದಿಗಿಟ್ಟು ಮಕ್ಕಳಲ್ಲಿ ಆ ಬಗ್ಗೆ ಅರಿವು ಮೂಡಿಸಬೇಕು. ಆಗ ಮಾತ್ರ ಮಕ್ಕಳು ಅದನ್ನು ಅರಿತುಕೊಂಡು ಆರಂಭದಲ್ಲೇ ಪ್ರತಿರೋಧ ಒಡ್ಡಲು ಸಾಧ್ಯ. ಮಕ್ಕಳನ್ನು ಒಳ್ಳೆಯ ಸ್ಕೂಲ್ಗೆ ಸೇರಿಸಿದ ಮಾತ್ರಕ್ಕೆ ಹೆತ್ತವರ ಜವಾಬ್ದಾರಿ ಮುಗಿಯುವುದಿಲ್ಲ. ಅವುಗಳ ಮಾನಸಿಕ ಸ್ಥಿತಿಯನ್ನೂ ಅರಿತುಕೊಂಡು, ಮಕ್ಕಳು ಬೆಳೆದಂತೆ ಅವುಗಳಿಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳುವ, ಇತರರನ್ನು ಗೌರವಿಸುವ ವಿದ್ಯೆಗಳನ್ನೂ ಕಲಿಸಿಕೊಡಬೇಕು.
ಎಲ್ಲದಕ್ಕೂ ಮುಖ್ಯವಾಗಿ ಅತ್ಯಾಚಾರದಂತಹ ಕೃತ್ಯಗಳಿಗೆ ಕಡಿವಾಣ ಬೀಳಬೇಕೆಂದರೆ ಮನೋನಿಗ್ರಹ ಸಾಮರ್ಥ್ಯ ಮತ್ತು ನೈತಿಕತೆ ಇರಬೇಕಾದ್ದು ಅತ್ಯಗತ್ಯ. ಈ ವಿಚಾರದಲ್ಲಿ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಹೇಳಿದ್ದರಲ್ಲಿ ತಪ್ಪೇನೂ ಇಲ್ಲ. 'ಕಾಂಡೋಮ್ ಧರಿಸಿಕೊಳ್ಳಬೇಕಾದ್ದು ಮನಸ್ಸಿಗೆ' ಎಂಬ ಅವರ ಮಾತು ಅರ್ಥಪೂರ್ಣವಾದದ್ದು. ಮಾನವನಿಗೆ ನೈತಿಕತೆ, ಪ್ರಜ್ಞೆ ಇದ್ದರೆ ಮಾತ್ರ ಕುಕೃತ್ಯಗಳ ಸಂಖ್ಯೆ ಕಡಿಮೆಯಾಗಲು ಸಾಧ್ಯ. ಒಟ್ಟಿನಲ್ಲಿ ಲೈಂಗಿಕ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಬಿಗಿ ಕಾನೂನುಗಳು ಜಾರಿಯಾಗಬೇಕು. ನೊಂದವರಿಗೆ ಹೊಸದಾಗಿ ಬದುಕು ಕಟ್ಟಿಕೊಳ್ಳುವ ಪ್ರೇರಕ ಶಕ್ತಿಯಾಗಿ ಸಮಾಜ ಬದಲಾಗಬೇಕು. ಮಕ್ಕಳ ಮುಖದಲ್ಲಿ ಮತ್ತೆ ನಿರ್ಭೀತಿಯ ಮಂದಹಾಸ ಮೂಡಬೇಕು.
-ಹಲೀಮತ್ ಸಅದಿಯಾ
haleesukhi@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

