ಅಂಕಣಗಳು

ಮಹಿಳಾ ದೌರ್ಜನ್ಯ ಪ್ರಕರಣಗಳು ಒಂದು ವರ್ಗಕ್ಕೆ ಸೀಮಿತವಲ್ಲ

Published On :

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆಯಾಗಿ ಮೈಸೂರಿನ ಯುವ ವಕೀಲೆ, ಸಾಹಿತಿ, ಮಹಿಳಾ ಪರ ಹೋರಾಟಗಾರ್ತಿ
ಮಂಜುಳಾ ಮಾನಸ ಅಧಿಕಾರ ಸ್ವೀಕರಿಸಿದ್ದಾರೆ. ಆಯೋಗದ ಅಧ್ಯಕ್ಷೆಯಾಗಿ ತುಂಬಾ ಉತ್ಸಾಹದಿಂದಲೇ ಕೆಲಸ ಆರಂಭಿಸಿರುವ ಅವರೊಂದಿಗೆ ಈ ವಾರ ಕನ್ನಡಪ್ರಭದ ಬುಲೆಟ್ ಸಂದರ್ಶನ.

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆಯಾಗಿ ಯಾವುದಕ್ಕೆ ನಿಮ್ಮ ಆದ್ಯತೆ
ಆಯೋಗದಲ್ಲಿ 1,613 ಪ್ರಕರಣಗಳು ಬಾಕಿ ಇವೆ. ಇವುಗಳನ್ನು ಇತ್ಯರ್ಥಪಡಿಸುವುದು ಹಾಗೂ ಕೇಂದ್ರ ಸರ್ಕಾರದಲ್ಲಿ ನಿರ್ಭಯ ನಿಧಿ ಸ್ಥಾಪಿಸಿರುವಂತೆ ರಾಜ್ಯದಲ್ಲಿ ಕೂಡ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಪರಿಹಾರ ನೀಡಲು ನಿಧಿ ಸ್ಥಾಪಿಸುವ ಉದ್ದೇಶವಿದೆ. ಸದ್ಯಕ್ಕೆ ನಮ್ಮಲ್ಲಿ ಆಸಿಡ್ ದಾಳಿಗೊಳಗಾದ ಮಹಿಳೆಯರಿಗೆ ಪರಿಹಾರ ನೀಡಲು ಮಾತ್ರ ಅವಕಾಶವಿದೆ. ಈಗಾಗಲೇ ಇಬ್ಬರಿಗೆ ಪರಿಹಾರದ ಚೆಕ್ ನೀಡಲಾಗಿದೆ. ಉಳಿದ ಪ್ರಕರಣಗಳಲ್ಲಿ ಪರಿಹಾರ ನೀಡುವ ಅವಕಾಶವಿಲ್ಲ. ಹೀಗಾಗಿ ನಿರ್ಭಯ ಮಾದರಿ ನಿಧಿ ಸ್ಥಾಪನೆಯಾದಲ್ಲಿ ಆಯೋಗದಿಂದಲೇ ನೇರವಾಗಿ ನೊಂದ ಮಹಿಳೆಯರಿಗೆ ಪರಿಹಾರ ನೀಡಬಹುದಾಗಿದೆ. ಆಯೋಗ ಸ್ವಾಯತ್ತ ಸಂಸ್ಥೆಯಾದರೂ ಕೂಡ ಸರ್ಕಾರದ ನೆರವಿಲ್ಲದೇ ಏನೂ ಮಾಡಲಾಗುವುದಿಲ್ಲ. ಹೀಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಉಮಾಶ್ರೀ ಅವರನ್ನು ಭೇಟಿ ಮಾಡಿ, ಆಯೋಗದ ಕಾರ್ಯಕ್ರಮಗಳು, ಪ್ರಸ್ತಾವನೆಗಳನ್ನು ವಿವರಿಸಿ, ಸಹಕಾರ ಕೋರಿದ್ದೇನೆ.

ಪ್ರಕರಣಗಳ ಇತ್ಯರ್ಥ ಯಾವ ರೀತಿ?
ರಾಜ್ಯದಲ್ಲಿ 30 ಜಿಲ್ಲಾ ಕೇಂದ್ರಗಳಿವೆ. ಎಲ್ಲೆಡೆ ಒಮ್ಮೆಲೆ ಭೇಟಿ ನೀಡಲಾಗುವುದಿಲ್ಲ. ಹೀಗಾಗಿ ಮೂರ್ನಾಲ್ಕು ಜಿಲ್ಲೆಗಳ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ ಮತ್ತಿತರ ಸಂಬಂಧಿ ಇಲಾಖೆಗಳ ಅಧಿಕಾರಿಗಳ ಸಭೆಯನ್ನು ಒಂದೆಡೆ ನಡೆಸಿ, ಆಯಾ ಜಿಲ್ಲೆಗಳ ವ್ಯಾಪ್ತಿಯಲ್ಲಿಯೇ ಅದಾಲತ್ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಲು ಸಾಧ್ಯವೇ ನೋಡುತ್ತೇವೆ. ದೌರ್ಜನ್ಯ ಪ್ರಕರಣಗಳು ಕೇವಲ ಒಂದು ವರ್ಗಕ್ಕೆ ಸೀಮಿತವಾಗಿರುವುದಿಲ್ಲ. ಬಡವರು, ಮಧ್ಯಮ ವರ್ಗದವರು ಮತ್ತು ಶ್ರೀಮಂತರು- ಹೀಗೆ ಮೂರು ಸ್ತರದಲ್ಲಿಯೂ ನಡೆಯುತ್ತವೆ. ಅವರ ಬದುಕು ಹಾಳಾಗದಂತೆ ಪರಿಹಾರ ರೂಪಿಸುವ ಆಶಯ ನನ್ನದು.

ಸಾಂತ್ವನ ಕೇಂದ್ರಗಳನ್ನು ಬಲಪಡಿಸುವಿರಾ?
ಈಗ ಜಿಲ್ಲಾ ಕೇಂದ್ರಗಳಲ್ಲಿ ಸಾಂತ್ವನ ಕೇಂದ್ರಗಳು/ ಆಪ್ತ ಸಮಾಲೋಚನಾ ಕೇಂದ್ರಗಳು ಇವೆ. ಅವುಗಳು ಪರಿಣಾಮಕಾರಿಯಾಗಿ ಕೆಲಸ ಮಾಡುವುದಕ್ಕಾಗಿ ಬಲವರ್ಧನೆ ಮಾಡುವ ನಿಟ್ಟಿನಲ್ಲಿ ಗಮನಹರಿಸುತ್ತೇನೆ. ದೌರ್ಜನ್ಯಕ್ಕೊಳಗಾದವರಿಗೆ ಸಾಂತ್ವನ ಹೇಳುವ ಕೆಲಸವನ್ನೂ ಮಾಡುತ್ತೇನೆ. ಈಗಾಗಲೇ ಮಂಡ್ಯ ಹಾಗೂ ಹಾಸನಕ್ಕೆ ಭೇಟಿ ನೀಡಿ, ಧೈರ್ಯ ತುಂಬವ ಕೆಲಸ ಮಾಡಿದ್ದೇನೆ.
ಕೇವಲ ಆಯೋಗದಿಂದಲೇ ಎಲ್ಲಾ ಕೆಲಸವನ್ನು ಮಾಡಲಾಗುವುದಿಲ್ಲ. ಇದಕ್ಕೆ ಮಹಿಳಾ ಪರ ಇರುವ ಎಲ್ಲಾ ಸಂಘಟನೆಗಳು ಕೈಜೋಡಿಸಬೇಕು ಎಂದು ಮನವಿ ಮಾಡುತ್ತೇನೆ.
ಇತ್ತೀಚೆಗೆ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ, ಯುವತಿಯರ ನಾಪತ್ತೆ, ಮಹಿಳೆಯರ ಮಾರಾಟ ಪ್ರಕರಣಗಳು ಹೆಚ್ಚುತಿವೆ. ಇದರ ತಡೆಗೆ ಯಾವ ರೀತಿ ಆಯೋಗ ಕ್ರಮ ವಹಿಸುತ್ತದೆ?
ಬೆಂಗಳೂರು ನಗರದಲ್ಲಿ ನಾಪತ್ತೆ ಪ್ರಕರಣಗಳು ಹೆಚ್ಚಿವೆ. ಇದಲ್ಲದೇ ಎಲ್ಲಾ ಜಿಲ್ಲೆಗಳಲ್ಲೂ ಈ ಸಮಸ್ಯೆ ಇದೆ. ಮಹಿಳೆಯರ ಮೇಲಿನ ದೌರ್ಜನ್ಯಗಳಿಗೆ ನಾನಾ ಕಾರಣಗಳಿರುತ್ತವೆ. ವರದಕ್ಷಿಣೆ, ವೈವಾಹಿಕ ಸಮಸ್ಯೆ, ಪ್ರೇಮ ಪ್ರಕರಣ ಮೊದಲಾದವು ನಾಪತ್ತೆಗೆ ಕಾರಣ. ದೌರ್ಜನ್ಯ ತಡೆಯುವ ಬಗ್ಗೆ ಪ್ರತಿ ಕುಟುಂಬದಲ್ಲಿಯೂ ಅರಿವು ಮೂಡಿಸುವ ಕೆಲಸ ಆಗಬೇಕಿದೆ. ಮಹಿಳೆಯರ ನಾಪತ್ತೆ ಹಾಗೂ ಮಾರಾಟ ಪ್ರಕರಗಳ ಬಗ್ಗೆ ಯಾರಲ್ಲಿಯೂ ನಿಖರವಾದ ಮಾಹಿತಿ ಇಲ್ಲ. ಏಕೆಂದರೆ ಪೊಲೀಸ್ ಇಲಾಖೆಯಲ್ಲಿ ಎಲ್ಲಾ ಪ್ರಕರಣಗಳು ದಾಖಲಾಗುವುದಿಲ್ಲ. ದಾಖಲಾಗಿರುವ ಪ್ರಕರಣಗಳ ಬಗ್ಗೆ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ.

ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ಕೂಡ ಹೆಚ್ಚಿವೆ
ಇದೊಂದು ದುರದೃಷ್ಟಕರ ಸಂಗತಿ. ಹೆಣ್ಣಾಗಲಿ, ಗಂಡಾಗಲಿ ಎಲ್ಲಾ ಮಕ್ಕಳೂ ಒಂದೇ. ಆದರೆ ಗಂಡು ಮಕ್ಕಳೇ ಬೇಕು ಎಂದು ಹೆಣ್ಣು ಭ್ರೂಣ ಹತ್ಯೆ ಮಾಡುವುದು ಮಹಾಪರಾಧ. ಕಾನೂನು ಕೂಡ ಇದನ್ನು ಮಾನ್ಯ ಮಾಡುವುದಿಲ್ಲ. ಈ ರೀತಿಯ ಭ್ರೂಣ ಪತ್ತೆ ಪ್ರಕರಣಗಳಿಗೆ ಸಹಕರಿಸುವವರ ವಿರುದ್ಧ ಮತ್ತಷ್ಟು ಕಠಿಣ ಕ್ರಮ ಜರುಗಿಸಲಾಗುವುದು.

ಹದಿಹರೆಯದವರಲ್ಲಿ ಲೈಂಗಿಕ ಶಿಕ್ಷಣದ ಬಗ್ಗೆ ಅರಿವು ಮೂಡಿಸುವ ಬಗ್ಗೆ
ಖಂಡಿತಾ ಈ ಕೆಲಸ ಆಗಬೇಕಾಗಿದೆ. ಈವರೆಗೆ ಆಯೋಗ ಮಹಿಳಾ ಕಾಲೇಜುಗಳಲ್ಲಿ ಮಾತ್ರ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತಿತ್ತು. ಇನ್ನು ಮುಂದೆ ಸಹ ಶಿಕ್ಷಣ ಇರುವ ಕಾಲೇಜುಗಳಲ್ಲಿ ಅಂದರೆ ಯುವಕ ಹಾಗೂ ಯುವತಿಯರು ಒಟ್ಟಿಗೆ ಕಲಿಯುತ್ತಿರುವ ಕಾಲೇಜುಗಳಲ್ಲೂ ಅರಿವು ಮೂಡಿಸಲಾಗುವುದು. ಮೊದಲೆಲ್ಲಾ ಲೈಂಗಿಕ ಶಿಕ್ಷಣ ಇರಲಿ, ಏಡ್ಸ್ ಎಂಬ ಹೆಸರು ಹೇಳುವುದಕ್ಕೆ ಮಡಿವಂತಿಕೆ ಇತ್ತು. ಈಗ ಅದೆಲ್ಲಾ ಹೋಗಿದೆ. ಜನರಿಗೆ ಎಲ್ಲಾ ವಿಷಯಗಳ ಬಗ್ಗೆ ತಿಳಿದುಕೊಳ್ಳಬೇಕು ಎಂಬ ಅರಿವು ಮೂಡಿದೆ.

ಕೇಂದ್ರ ಕಚೇರಿಯಲ್ಲಿ ಏನಾದರೂ ಬದಲಾವಣೆಯ ಅಗತ್ಯವಿದೆಯೇ?
ಬೆಂಗಳೂರು ಕಾವೇರಿ ಭವನದ ಮೊದಲನೇ ಮಹಡಿಯಲ್ಲಿ ಆಯೋಗದ ಕಚೇರಿ ಇದೆ. ಪ್ರತಿನಿತ್ಯ ಹತ್ತಾರು ಮಹಿಳೆಯರು ಆಯೋಗಕ್ಕೆ ಬರುತ್ತಾರೆ. ಕಾವೇರಿ ಭವನದಲ್ಲಿ ಸಾಕಷ್ಟು ಕಚೇರಿಗಳು ಇರುವುದರಿಂದ ಯಾವ ಕಡೆ ಹೋಗಬೇಕು ಎಂಬ ಗೊಂದಲ ಇರುತ್ತದೆ. ಇದನ್ನು ನಿವಾರಿಸಲು ನೆಲ ಅಂತಸ್ತಿನಲ್ಲಿ ಸ್ವಾಗತ ಕಚೇರಿ ಆರಂಭಿಸಲು ಕರ್ನಾಟಕ ಗೃಹ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಿದ್ದೆ. ಅವರು ಒಪ್ಪಿಗೆ ನೀಡಿದ್ದು, ಸದ್ಯದಲ್ಲಿಯೇ ಈ ಕಚೇರಿ ಆರಂಭವಾಗಲಿದೆ. ಇದರಿಂದ ನೊಂದ ಮಹಿಳೆಯರಿಗೆ ಅನುಕೂಲವಾಗುತ್ತದೆ. ಆಯೋಗದ ವೆಬ್‌ಸೈಟ್ ಪರಿಷ್ಕರಿಸಿ, ದೌರ್ಜನ್ಯಕ್ಕೊಳಗಾದವರಿಗೆ ಆಯೋಗದಿಂದ ದೊರೆಯುವ ಸೌಲಭ್ಯಗಳು, ಸಮೀಪದ ಸಾಂತ್ವನ ಕೇಂದ್ರಗಳು, ಅಪ್ತ ಸಮಾಲೋಚಕರ ವಿವರ ತಿಳಿಸಲಾಗುವುದು. ಮಹಿಳೆಯರು ಇ-ಮೇಲ್ ಮೂಲಕವೂ ಆಯೋಗಕ್ಕೆ ದೂರು ನೀಡುವ ವ್ಯವಸ್ಥೆ ಮಾಡಲಾಗುವುದು.

ಮೈಸೂರು ನಗರಪಾಲಿಕೆ ಸದಸ್ಯತ್ವಕ್ಕೆ ಏಕೆ ರಾಜಿನಾಮೆ  ನೀಡಿದಿರಿ?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನ ಮೇಲೆ ವಿಶ್ವಾಸವಿಟ್ಟು ಈ ಜವಾಬ್ದಾರಿ ವಹಿಸಿದ್ದಾರೆ. ನನ್ನ ಅವಧಿಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಕಡಿಮೆ ಮಾಡಲು ಹಾಗೂ ನೊಂದವರಿಗೆ ನ್ಯಾಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಪಾಲಿಕೆ ಸದಸ್ಯೆಯಾಗಿದ್ದಲ್ಲಿ ವಾರ್ಡ್ ಜನರ ಸಮಸ್ಯೆಗಳಿಗೂ ಸ್ಪಂದಿಸಬೇಕಾಗುತ್ತದೆ. ಅದಕ್ಕೆ ಸಮಯ ಕೊಡಲು ಆಗುವುದಿಲ್ಲ ಎಂಬ ಕಾರಣಕ್ಕೆ ರಾಜಿನಾಮೆ ನೀಡಿದೆ.

ಹದಿಹರೆಯದವರಲ್ಲಿ ಲೈಂಗಿಕ ಶಿಕ್ಷಣದ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕಾಗಿದೆ. ಈವರೆಗೆ ಆಯೋಗ ಮಹಿಳಾ ಕಾಲೇಜುಗಳಲ್ಲಿ ಮಾತ್ರ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿತ್ತು. ಇನ್ನು ಮುಂದೆ ಸಹ ಶಿಕ್ಷಣ ಇರುವ ಕಾಲೇಜುಗಳಲ್ಲಿ ಅಂದರೆ ಯುವಕ ಹಾಗೂ ಯುವತಿಯರು ಒಟ್ಟಿಗೆ ಕಲಿಯುತ್ತಿರುವ ಕಾಲೇಜುಗಳಲ್ಲೂ ಅರಿವು ಮೂಡಿಸಲಾಗುವುದು.

-ಅಂಶಿ ಪ್ರಸನ್ನಕುಮಾರ್, ಕನ್ನಡಪ್ರಭ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.