ಹೇಳಿ ಕೇಳಿ ಇದೊಂದು ಗಣ್ಯವ್ಯಕ್ತಿಗಳ ಗಣರಾಜ್ಯ!
ಹೌದು, ನಮ್ಮದು ವಿ.ಐ.ಪಿ. ರಿಪಬ್ಲಿಕ್ ನಿನ್ನೆ ಮೊನ್ನೆಯವರೆಗೂ ನಮ್ಮವರಲ್ಲೊಬ್ಬನಾಗಿ ಓಡಾಡಿಕೊಂಡಿದ್ದ ವ್ಯಕ್ತಿ ಒಂದು ಲೋಕಲ್ ಬಾಡಿಯ ಸದಸ್ಯನಾಗಿ ಆಯ್ಕೆಗೊಂಡರೂ ಸಾಕು... ಆ ಕ್ಷಣದಿಂದಲೇ ಆತನ ಮಾತು, ನಡಿಗೆ, ಹಾವ-ಭಾವಗಳೆಲ್ಲವೂ ಒಂದು ವಿಶಿಷ್ಟ ಗತ್ತುಗಾರಿಕೆಯನ್ನು ಪಡೆದುಕೊಳ್ಳುತ್ತವೆ. ದರ್ಪ, ದೌಲತ್ತು ಮತ್ತು ಧಿಮಾಕುಗಳೆಲ್ಲ ಕಾಲಕ್ರಮೇಣ ಈ ಜನಪ್ರತಿನಿಧಿಯ ಸಹಜ ಜಾಯಮಾನವೆನಿಸಿಬಿಡುತ್ತವೆ.
ಇನ್ನು ಎಮ್ಎಲ್ಎ, ಎಮ್ಎಲ್ಸಿ ಅಥವಾ ಎಂ.ಪಿ. ಗಳಾದರಂತೂ ಮುಗೀತು! ಕೇವಲ ಒಂದೇ ಒಂದು ಅವಧಿ ಪೂರೈಸಿದರೂ ಅವರಿಗೆ ಅಜೀವ ಪರ್ಯಂತ ಸರ್ಕಾರಿ ಸೌಕರ್ಯ, ಸವಲತ್ತು ಹಾಗೂ ಭದ್ರತೆಗಳು ಲಭ್ಯ. ಸತ್ತಾಗ ಸಕಲ ಸರ್ಕಾರಿ ಮರ್ಯಾದೆಗಳ ಸಮೇತ ಅಂತ್ಯಕ್ರಿಯೆಯ ಗೌರವ. ಇಂತಹ ಸಾಧ್ಯತೆಯೇ ಅವರ ಮುಖದಲ್ಲಿ ರಾಜಕಳೆ ಮತ್ತು ಹಾವಭಾವಗಳಲ್ಲೊಂದು ರಾಜಠೀವಿಯನ್ನು ಮೂಡಿಸಿಬಿಡುತ್ತದೆ.
ಇನ್ನೊಂದಷ್ಟು ಅದೃಷ್ಟ ಒಲಿದು ಬಂದು ಒಂದೇ ಒಂದು ಸಾರಿ ಕೇಂದ್ರ ಅಥವಾ ರಾಜ್ಯ ಸರ್ಕಾರದಲ್ಲಿ ಸಚಿವರಾದರೆ ಸಾಕು, ಗಣ್ಯಾತಿಗಣ್ಯರ ಪಟ್ಟ ಪ್ರಾಪ್ತಿಯಾಗುತ್ತದೆ. ಅಲ್ಲಿಂದಾಚೆ ಅವರ ದೈನಂದಿನ ಬದುಕಿನ ಸಮಗ್ರ ಜವಾಬ್ದಾರಿಯನ್ನು ಪ್ರಭುತ್ವವೇ ಅವರುಗಳ ಸಹಾಯಕ, ಕಾರ್ಯದರ್ಶಿ ಮತ್ತು ಅಂಗರಕ್ಷಕರ ಸುಪರ್ದಿಗೆ ಒಪ್ಪಿಸಿಬಿಡುತ್ತದೆ. ಹೀಗಾಗಿ ಜನಸಾಮಾನ್ಯರ ಬದುಕಿನ ನಿತ್ಯದ ಬವಣೆಗಳು ಮತ್ತು ಜಂಜಾಟಗಳಿಂದ ಪೂರ್ಣ ಮುಕ್ತಿ ದೊರೆತು ಈ ಜನನಾಯಕರೆಲ್ಲಾ ಹಗಲೂ-ರಾತ್ರಿ (?) ಜನಸೇವೆಯಲ್ಲಿಯೇ ತೊಡಗಿಸಿಕೊಳ್ಳಬಹುದಾದ ನೆಮ್ಮದಿ ಲೋಕವೇ ಅವರ ಸುತ್ತ ಸೃಷ್ಟಿಯಾಗಿಬಿಡುತ್ತದೆ.
ಇಂತಹದ್ದೊಂದು ನೆಮ್ಮದಿಯ ಲೋಕ ಅರ್ಥಾತ್ ಕಂಫರ್ಟ್ ಜೋನ್ನಲ್ಲಿ ಪ್ರವೇಶ ಪಡೆಯಲಿಕ್ಕೋಸ್ಕರವೇ ಶತಾಯಗತಾಯ ಚುನಾವಣೆಯಲ್ಲಿ ಗೆದ್ದುಬರಬೇಕೆಂಬ ತುಡಿತ, ಹಠ, ಹಂಬಲ ಈ ವಲಯದಲ್ಲಿ. ಇಂತಹ ಚಪಲ ಇದುವರೆಗೂ ಕೇವಲ ರಾಜಕಾರಣಿಗಳಿಗೆ ಮಾತ್ರವೇ ಸೀಮಿತವಾಗಿತ್ತು. ಅದೀಗ ಬಿಜಿನೆಸ್ ಜಗತ್ತಿನ ಕುಬೇರರು ಹಾಗೂ ಕಾರ್ಪೊರೇಟ್ ವಲಯದ ಸಾಮ್ರಾಟರಲ್ಲೂ ಅಂಕುರಿಸಿದ್ದರ ಪರಿಣಾಮವೇ ಇಂದು ವಿಧಾನಪರಿಷತ್ತು ಮತ್ತು ರಾಜ್ಯಸಭಾ ಚುನಾವಣೆಗಳಿಗೆ ಎಂದಿಲ್ಲದ ಮಹತ್ವ ಬಂದಿರೋದು. ಈ ಹಣವಂತ ಅಭ್ಯರ್ಥಿಗಳ ರಂಗಪ್ರವೇಶದಿಂದಾಗಿಯೇ ಅವರಿಗೆ ಮತ ನೀಡಿ ಗೆಲ್ಲಿಸಬೇಕಾದ ಅಸೆಂಬ್ಲಿ ಮೆಂಬರುಗಳಿಗೆ ಮಾರುಕಟ್ಟೆ ಮೌಲ್ಯ ಪ್ರಾಪ್ತಿಯಾಗಿರೋದು .
ಮಾಜಿ ಮುಖ್ಯಮಂತ್ರಿ ಹಾಗೂ ಜೆ.ಡಿ.ಎಸ್. ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿಯವರು ಇದೀಗ ಬಹಿರಂಗಗೊಂಡ ತಮ್ಮ ಆಡಿಯೋ ಸಿಡಿ ಸಂಭಾಷಣೆಯನ್ನು ಎಳ್ಳಷ್ಟೂ ಸಂಕೋಚ, ಮುಜುಗರ ಅಥವಾ ಅಪರಾಧಿ ಭಾವವಿಲ್ಲದೆಯೇ ಸಮರ್ಥಿಸಿಕೊಳ್ಳಲು ಸಾಧ್ಯವಾಗಿರುವುದೇ ಈ ಮುಕ್ತ-ಮಾರುಕಟ್ಟೆ ರಾಜಕಾರಣದಲ್ಲಿ. ಅದಕ್ಕೆ ದೊರಕಿರುವ ಸರ್ವಪಕ್ಷೀಯ ಅನುಮೋದನೆಯಿಂದಾಗಿ... ಈ ಅನೈತಿಕ ರಾಜಕೀಯ ವ್ಯವಹಾರಗಳೆಲ್ಲಾ ಪಕ್ಷ ರಾಜಕಾರಣದ ಅನಿವಾರ್ಯ ಪ್ರಾರಬ್ಧಗಳು ಎಂಬ ಪ್ರಚಲಿತ ಗ್ರಹಿಕೆಯಿಂದಾಗಿ.
ಹಿಂದೆ ಜನವರಿ 2006ರಲ್ಲಿ ರಾಜ್ಯ ರಾಜಕಾರಣದಲ್ಲಿ ತಾವೇ ನಡೆಸಿದ ವಿಪ್ಲವದಿಂದಾಗಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಅವತರಿಸಿದ ಕುಮಾರಸ್ವಾಮಿ ಆವತ್ತೇ ರೆಸಾರ್ಟ್ ರಾಜಕಾರಣದ ರೂವಾರಿ ಎಂಬ ಹೆಸರು ಗಳಿಸಿದ್ದರು. ಅವರಿಗೆ ಅಂದು ಸಾಥ್ ನೀಡಿದ್ದು 2008ರ ನಂತರದ ಆಪರೇಷನ್ ಕಮಲದ ರೂವಾರಿ ಎನಿಸಿಕೊಂಡ ಗಣಿಧಣಿ ಜನಾರ್ದನ ರೆಡ್ಡಿ. ಹೀಗೆ ಸರಿಯಾಗಿ ಬೆಂಗಳೂರನ್ನೇ ನೋಡದ ಹತ್ತಾರು ಮಂದಿ ಎಂ.ಎಲ್.ಎ. ಗಳಿಗೆ ಪಂಚತಾರಾ ರೆಸಾರ್ಟ್ಗಳು ಮತ್ತು ಸಪ್ತತಾರಾ ಹೋಟೆಲ್ಗಳ ವೈಭೋಗದ ರುಚಿ ತೋರಿಸಿದ ಹೆಚ್.ಡಿ.ಕೆ. ತನ್ಮೂಲಕ ಚುನಾವಣಾ ರಾಜಕಾರಣದ ವೆಚ್ಚವನ್ನು ಅತ್ಯಂತ ದುಬಾರಿ ಮಟ್ಟಕ್ಕೇರಿಸಿಬಿಟ್ಟರು. ಅಂಥದ್ದೇ ರಾಜಕಾರಣದ ಮತ್ತೊಬ್ಬ ಫಲಾನುಭವಿ ಬಿ.ಜೆ.ಪಿ.ಯ ಪ್ರಚಂಡ ನಾಯಕ ಯಡಿಯೂರಪ್ಪ. ಅಂದ ಹಾಗೆ, ಇವರಿಬ್ಬರೂ ರಾಜ್ಯದ ಮುಖ್ಯಮಂತ್ರಿಗಳಾಗಿ ಮೆರೆದದ್ದು ಕಳೆದ ಹತ್ತು ವರ್ಷಗಳ ನಿಚ್ಚಳ ಬಹುಮತವಿಲ್ಲದ, ಯಾವುದೇ ನೈತಿಕ ಹಂಗಿಲ್ಲದ ಅತಂತ್ರ ವಿಧಾನಸಭೆಯ ಪರಿಸರದಲ್ಲಿ. ಇದರ ಮುಂದುವರೆದ ಭಾಗವೇ ಇದೀಗ ಬಹಿರಂಗಗೊಂಡ ಕುಮಾರಸ್ವಾಮಿಯವರ ಸಿ.ಡಿ. ಸಂಭಾಷಣೆಯ ರಾಜಕೀಯ ವ್ಯಾಪಾರದಲ್ಲಿ.
ತಮ್ಮ ಪಕ್ಷದ ನಲವತ್ತೂ ಜನ ಶಾಸಕರು ಈ ಸಲದ ಪರಿಷತ್ತು ಅಥವಾ ರಾಜ್ಯಸಭೆಯ ಚುನಾವಣೆಯ ಅಭ್ಯರ್ಥಿಗಳಿಂದ ತಲಾ ಒಂದೊಂದು ಕೋಟಿ ರುಪಾಯಿ ಪರಿಹಾರ ಧನ ಕೊಡಿಸಲೇಬೇಕೆಂದು ಡಿಮ್ಯಾಂಡ್ ಇಟ್ಟಿದ್ದರೆಂದೂ, ಅದಿಲ್ಲದೆ ಯಾವುದೇ ನಾಮಪತ್ರಕ್ಕೂ ಸಹಿ ಹಾಕುವುದೇ ಇಲ್ಲವೆಂಬ ಷರತ್ತನ್ನು ಹಾಕಿದರೆಂದೂ ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ ಕುಮಾರಸ್ವಾಮಿಯವರು. ಆದರೆ, ಈ 40 ಮಂದಿ ಶಾಸಕರ ಪಟ್ಟಿಯಲ್ಲಿ ಸ್ವತಃ ತಾವು ಮತ್ತು ತಮ್ಮ ಸಹೋದರ ಎಚ್.ಡಿ. ರೇವಣ್ಣ ಕೂಡ ಇದ್ದಾರೆಂಬ ವಿಪರ್ಯಾಸವೇ ಅವರ ಗಮನಕ್ಕೆ ಬಂದಂತಿಲ್ಲ!
ಮೊನ್ನೆ ಜರುಗಿದ ಮೇಲ್ಮನೆಯ ಚುನಾವಣೆಯಲ್ಲಿ ಕುಮಾರಸ್ವಾಮಿಯವರು ಮತ್ತು ಅವರ ಶಾಸಕರು ಅವಿರೋಧವಾಗಿ (?) ಗೆಲ್ಲಿಸಿದ ಮೂವರು ಕೋಟ್ಯಧಿಪತಿ ಅಭ್ಯರ್ಥಿಗಳ ಹಿನ್ನೆಲೆ ಕೂಡ ಎಷ್ಟು ಸ್ವಾರಸ್ಯಕರವಾಗಿತ್ತು ನೋಡಿ. ಕಟ್ಟಕಡೆಯ ಘಳಿಗೆಯವರೆಗೂ ಕಾಂಗ್ರೆಸ್ ಮುಖಂಡರೆನಿಸಿಕೊಂಡಿದ್ದ, ಸುಮಾರು 450 ಕೋಟಿ ರು. ಆಸ್ತಿ ಮೌಲ್ಯ ಘೋಷಿಸಿಕೊಂಡ ರಿಯಲ್ ಎಸ್ಟೇಟ್ ಕುಬೇರರೊಬ್ಬರು ಏಕಾಏಕಿ ಜೆಡಿಎಸ್ ಅಧಿಕೃತ ಅಭ್ಯರ್ಥಿಯಾಗಿ ರಾಜ್ಯಸಭೆ ಪ್ರವೇಶಿಸಿಬಿಟ್ಟರು.
ಹಿಂದೊಮ್ಮೆ ಬಿ.ಜೆ.ಪಿ. ಅಭ್ಯರ್ಥಿಯಾಗಿ ವಿಧಾನಸಭೆಗೆ ಸ್ಪರ್ಧಿಸಿ ಸೋತಿದ್ದ, ಸುಮಾರು 260 ಕೋಟಿ ರು. ಬೆಲೆಬಾಳುವ ವಾಮನಮೂರ್ತಿಯೊಬ್ಬರು ಜೆ.ಡಿ.ಎಸ್.-ಭಾ.ಜ.ಪ ಜಂಟಿ ಬೆಂಬಲದೊಂದಿಗೆ ಎಮ್ಎಲ್ಸಿಯಾಗಿಬಿಟ್ಟರು. ತಮಾಷೆಯೆಂದರೆ ಈತ ನಾಮಪತ್ರ ಸಲ್ಲಿಕೆಗೆಂದು ಚುನಾವಣಾಧಿಕಾರಿಯವರ ಕೊಠಡಿಯಲ್ಲಿದ್ದಷ್ಟೂ ಕಾಲ ಬಾಯಲ್ಲಿ ಚ್ಯೂಯಿಂಗ್ ಗಮ್ ಮೆಲ್ಲುತ್ತಲೇ ಇದ್ದರೇ ಹೊರತು ಒಂದೇ ಒಂದು ಶಬ್ದವನ್ನೂ ಆಡಲಿಲ್ಲ. ಹೇಗಿದ್ದರೂ ತಾನು ಈ ಪಕ್ಷಗಳ ನಾಯಕರಿಗೆ ನೀಡಿರುವ ದುಡ್ಡೇ ಮಾತನಾಡತ್ತೆ ಎಂಬ ಆತ್ಮವಿಶ್ವಾಸ ಅವರ ಮುಖಭಾವದಲ್ಲಿತ್ತು.
ಇನ್ನು ಪ್ಯೂರ್ ಜೆಡಿಎಸ್ ಅಭ್ಯರ್ಥಿಯಾಗಿ ವಿಧಾನ ಪರಿಷತ್ ಪ್ರವೇಶಿಸಿದ ಮತ್ತೊಬ್ಬ ಅಸಾಮಿಯೋ ಮೈತುಂಬಾ ಮಣಗಟ್ಟಲೇ ಚಿನ್ನದ ಆಭರಣಗಳನ್ನು ಹೇರಿಕೊಂಡು ಇದುವರೆಗೂ ಕೇವಲ ತನ್ನ ಖಾಸಗಿ ಶೋರೂಮಿನ ಜಾಹೀರಾತುಗಳಲ್ಲೇ ಮಿಂಚುತ್ತಾ ಬಂದ, ಅಸಲಿಗೆ ರಾಜಕಾರಣಿಯೇ ಅಲ್ಲದ ಅಪ್ಪಟ ಗೋಲ್ಡ್ ಪ್ಯಾಲೆಸೊಂದರ ಒಡೆಯ! ಹೀಗೆ ಯಾವುದೇ ಒಂದು ನಿರ್ದಿಷ್ಟ ರಾಜಕೀಯ ಬದ್ಧತೆ ಅಥವಾ ಕ್ರೀಡೆ, ಸಾಹಿತ್ಯ, ಕಲೆ, ಸಂಸ್ಕೃತಿ ಮುಂತಾದ ವಿಶಿಷ್ಟ ಕ್ಷೇತ್ರಗಳ ಸಾಧಕರನ್ನು ಮತ್ತು ಮೇಧಾವಿಗಳನ್ನು ಅಪೇಕ್ಷಿಸುವ ಮೇಲ್ಮನೆಗೆ ಕುಮಾರಸ್ವಾಮಿಯವರ ಪಕ್ಷ ಆರಿಸಿ ಕಳುಹಿಸಿದ್ದು ಕೇವಲ ಪೇಮೆಂಟ್ ಕೋಟಾ ಅಥವಾ ಮ್ಯಾನೇಜ್ಮೆಂಟ್ ಕೋಟಾ ಅಭ್ಯರ್ಥಿಗಳೇ ಎಂದು ಭಾವಿಸಲು ಯಾವುದೇ ಪುರಾವೆ ಬೇಕಿಲ್ಲ.
ಇನ್ನು ಕೇವಲ ತನ್ನ ಪಕ್ಷದ ಸಾಮಾಜಿಕ ನ್ಯಾಯದ ಸಿದ್ಧಾಂತ ಮತ್ತು ಅಹಿಂದ ನೀತಿಗನುಗುಣವಾಗಿಯೇ ನಾಲ್ವರು ಪಕ್ಕಾ ಪಕ್ಷದ ಕಾರ್ಯಕರ್ತರನ್ನೇ ಎಮ್ಎಲ್ಸಿ ಮಾಡಿದೆವೆಂದು ಹೇಳಿಕೊಂಡ ಕಾಂಗ್ರೆಸ್ ಪಕ್ಷವೋ 5ನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವ ರಿಸ್ಕನ್ನೇ ತೆಗೆದುಕೊಳ್ಳಲಿಲ್ಲ. ತನ್ನ ಹೆಚ್ಚುವರಿ 12 ಮತಗಳನ್ನಿಟ್ಟುಕೊಂಡು ಪಕ್ಷೇತರರ ಮೂಲಕ ಮತ್ತೊಬ್ಬ ಅರ್ಹ ಅಭ್ಯರ್ಥಿಯನ್ನು ಗೆಲ್ಲಿಸಬಹುದಾಗಿದ್ದ ಅಧಿಕಾರಸ್ಥ ಪಕ್ಷ ಹಾಗೆ ಮಾಡದಿರುವ ಮೂಲಕ ಹೆಚ್.ಡಿ.ಕೆ. ಸ್ಪಾನ್ಸರ್ ಮಾಡಿದ್ದ ಕೋಟ್ಯಧಿಪತಿಗಳ ಅವಿರೋಧ ಆಯ್ಕೆಗೆ ಪರೋಕ್ಷವಾಗಿ ಸಹಕಾರ ನೀಡಿತ್ತು.
ಹಿಂದೆ 2012ರಲ್ಲಿ ಜರುಗಿದ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ನ ಕಣ್ಣಾಮುಚ್ಚಾಲೆ ಆಟ ಅವರ ಅಧಿಕೃತ ಅಭ್ಯರ್ಥಿ ಇಕ್ಬಾಲ್ ಅಹ್ಮದ್ ಸರಡಗಿಯವರ ಸೋಲಿನಲ್ಲಿಯೇ ಜಗಜ್ಜಾಹೀರಗೊಂಡಿತು. ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದು ಅಡ್ಡ ಮತದಾನದ ಮೂಲಕ ಪಕ್ಷದ ಅಧಿಕೃತ ಅಭ್ಯರ್ಥಿಗಳನ್ನು ಹಿಮ್ಮೆಟ್ಟಿ 23 ಮತಗಳೊಂದಿಗೆ ಜಯಗಳಿಸಿದ ಭೈರತಿ ಸುರೇಶ್ ಎಂಬ ರಿಯಲ್ ಎಸ್ಟೇಟ್ ಆಸಾಮಿಗೆ ಕುಮ್ಮಕ್ಕು ನೀಡಿದವರಾರೆಂಬ ಸತ್ಯ ಇಂದಿಗೂ ಹೊರಬಂದೇ ಇಲ್ಲ. ಆದರೆ, ಆತನಿಗೆ ಇತ್ತೀಚಿನ ಲೋಕಸಭಾ ಚುನಾವಣೆಯ ಭರಾಟೆಯಲ್ಲಿ ಸಿದ್ರಾಮಯ್ಯನವರ ಕಾಂಗ್ರೆಸ್ ಪಕ್ಷವೇ ವಿರೋಚಿತವಾದ ಸ್ವಾಗತ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಂಡಿತು.
ಕುಮಾರಸ್ವಾಮಿಯವರು ಇವತ್ತು ತಮ್ಮ ತಂದೆ ಹೆಚ್.ಡಿ. ದೇವೇಗೌಡರು ರೂಢಿಸಿಕೊಂಡು ಬಂದಿದ್ದ ಸಾಂಪ್ರದಾಯಿಕ ರಾಜಕಾರಣವನ್ನು ಅಪ್ಪಟ ವ್ಯಾಪಾರೀ ಚಟುವಟಿಕೆಯನ್ನಾಗಿ ಪರಿವರ್ತಿಸಿದ್ದಾರೆ. ಅದನ್ನೊಂದು ಯಶಸ್ವಿ ರಾಜಕೀಯ ಸಿದ್ಧಾಂತವೆಂಬಂತೆ ಸಮರ್ಥಿಸಿಕೊಳ್ಳುತ್ತಿದ್ದಾರೆ. ಆ ಕುರಿತು ಕಿಂಚಿತ್ತಾದರೂ ಅವರ ಮಾತಲ್ಲಿ ವಿಷಾದವಾಗಲೀ, ಪಶ್ಚಾತ್ತಾಪವಾಗಲೀ ಗೋಚರಿಸುತ್ತಿಲ್ಲ. ಇದರ ಪರಿಣಾಮವೇ ಇವತ್ತು ಕರ್ನಾಟಕದಲ್ಲಿ ರಾಜಕಾರಣವೆಂದರೆ ಯಾವುದೇ ನಿರ್ದಿಷ್ಟ ಶಿಕ್ಷಣಾರ್ಹತೆ ಅಥವಾ ವೃತ್ತಿ ನೈಪುಣ್ಯವನ್ನು ಅಪೇಕ್ಷಿಸದ ಸುಲಭದ ಶ್ರೀಮಂತಿಕೆ, ಶ್ರಮವಿಲ್ಲದ ದುಡಿಮೆ ಹಾಗೂ ಅಪಾರ ಅಧಿಕಾರ ಮತ್ತು ಅಗಾಧ ವೆಚ್ಚದ ಐಷಾರಾಮಿ ಬದುಕಿನ ರಹದಾರಿ ಎಂಬಂತಾಗಿದೆ.
ಮೇಲ್ಮನೆ ಚುನಾವಣೆಗಳು ಹೀಗೆ ಶಾಂತಿಯುತವಾಗಿ ಅಂದರೆ ಯಾವುದೇ ಮತದಾನವಿಲ್ಲದೇ ಮುಗಿಯುತ್ತಿದ್ದಂತೆ ಗೆದ್ದ ಶ್ರೀಮಂತ ಗಿರಾಕಿಗಳನ್ನು ಕಟ್ಟಿಕೊಂಡು ಶ್ರೀಲಂಕಾದ ರಾಜಧಾನಿಯಲ್ಲಿ ತಮ್ಮ ಶಾಸಕರ ಸಮಾಲೋಚನಾ ಸಭೆ ನಡೆಸುವ ಮೂಲಕ ಕುಮಾರಸ್ವಾಮಿಯವರು ತಮ್ಮ ಪಕ್ಷದ ದೈತ್ಯ ಶಕ್ತಿಯ ಮತ್ತೊಂದು ಮಜಲನ್ನು ಪ್ರದರ್ಶಿಸಿದ್ದಾರೆ. ಪ್ರತಿಪಕ್ಷದಲ್ಲಿದ್ದರೂ ಸಹ ತಮ್ಮ ರಾಜಕೀಯಕ್ಕೆ ಯಾವತ್ತೂ ಹಣಕಾಸಿನ ಕೊರತೆ ಕಾಡುವುದೇ ಇಲ್ಲ ಎಂಬಂತಾಡುತ್ತಿರುವ ಕುಮಾರಸ್ವಾಮಿ ಅದು ಹೇಗೆ ಕಳೆದ 10 ವರ್ಷಗಳಲ್ಲಿ ತಮ್ಮ ಕುಟುಂಬದ ಆಸ್ತಿ ಮೌಲ್ಯ ಚುನಾವಣೆಯಿಂದ ಚುನಾವಣೆಗೆ ಹತ್ತಾರು ಪಟ್ಟು ಹೆಚ್ಚಳವಾಗುತ್ತಾ ನಡೆದಿದೆ ಎಂಬ ಬಗ್ಗೆ ಸಮಜಾಯಿಷಿ ನೀಡಬೇಕಿದೆ.
- ರವೀಂದ್ರ ರೇಷ್ಮೆ
avindrareshme @gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

