ಮೇಲ್ಮನೆಯ ಪ್ರವೇಶಕ್ಕೆ ಎಷ್ಟು ಬೆಲೆ?

24 ಗಂಟೆಗಳೂ ರಾಜಕಾರಣಮಾಡುವ ನಾಯಕರು ಸಂದಿಗ್ಧ ಸಮಯಗಳಲ್ಲಿ ಹೇಗೆ ಬೇಕಾದರೂ ಮುಖ ಹೊರಳಿಸುವ ಪ್ರತಿಭೆಗಳು ಎನ್ನುವುದನ್ನು ಪದೇ ಪದೆ ಕಾಣುತ್ತೇವೆ. ಅಕ್ರಮ ಗಣಿಗಾರಿಕೆ, ಕೆರೆಯ ಅಂಗಳದ ಕಬಳಿಕೆ, ದೈವಸ್ಥಳಗಳ ನಿವೇಶನದ ಕಬಳಿಕೆ, ಸರ್ಕಾರಿ ಕಾಡುಗಳ ಅತಿಕ್ರಮಣ, ಅತ್ಯಾಚಾರ, ಅಧಿಕಾರಿಗಳು ಮತ್ತು ಪೊಲೀಸರ ಮೇಲೆ ಹಲ್ಲೆ, ಸಂಚಾರಿ ಕಾನೂನು ಉಲ್ಲಂಘನೆ ಇವೆಲ್ಲವನ್ನೂ ನಮಗಿರುವ ಅಧಿಕಾರ ಪ್ರಭಾವ ಸಂಪನ್ಮೂಲಗಳನ್ನು ಚಲಾಯಿಸಿ ತಪ್ಪು ಮತ್ತೊಬ್ಬರದೇ ಹೊರತು ನಮ್ಮದಲ್ಲವೇ ಅಲ್ಲ ಎಂದು ನಾವು ಲಜ್ಜೆಯಿಲ್ಲದೆ ಸಾಬೀತು ಪಡಿಸುವ ಪ್ರಯತ್ನ ಮಾಡುತ್ತೇವೆ.
ಸಂವಿಧಾನ, ರಾಜ್ಯಾಂಗ ಅಥವಾ ಪಾಪ ಪ್ರಜ್ಞೆಯ ಅರಿವೇ ಇಲ್ಲದೆ ಕಾನೂನು ದೃಷ್ಟಿಯಲ್ಲಿ ತಪ್ಪು ಮಾಡಿ ಸಿಕ್ಕಿಕೊಂಡಾಗ ಆ ಸಂದರ್ಭವನ್ನೇ ಬಳಸಿ ನಾವೇ ಸದ್ಗುಣ ಸಂಪನ್ನರು, ಕಟು ಸತ್ಯವನ್ನು ಮಾತನಾಡುವ ಆತ್ಮಸ್ಥೈರ್ಯ ಉಳ್ಳವರು ಎಂದು ಜನರನ್ನು ನಂಬಿಸುವ ಜಾಣರು ನಾವು. ಹೆಚ್.ಡಿ. ಕುಮಾರಸ್ವಾಮಿ ಅವರು ಈಗ ಇದನ್ನೇ ಮಾಡಿರುವುದು! 'ಶಾಸಕರಿಗೆ ಹಣ ನೀಡಬೇಕೆಂದು ವಿಜುಗೌಡ ಪಾಟೀಲರೊಂದಿಗೆ ಮಾತನಾಡಿದ್ದು ನಿಜ. ಹಾಗಂತ ಹಣ ಪಡೆದಿಲ್ಲ, ರಾಜಕಾರಣದಲ್ಲಿ ನಡೆಯುತ್ತಿರುವ ವಾಸ್ತವವನ್ನು ಹೇಳಿದ್ದೇನೆ. ವಿಧಾನ ಸಭೆಯಲ್ಲಿ ಚರ್ಚೆಗೆ ಸಿದ್ಧ. ಬೇರೆ ಪಕ್ಷದವರು ಸತ್ಯವನ್ನು ಮುಚ್ಚಿಡುತ್ತಿದ್ದಾರೆ. ನಾನು ಸತ್ಯ ಬಹಿರಂಗಪಡಿಸಿದ್ದೇನೆ' ಎಂದು ಒಪ್ಪಿಕೊಂಡರು. ಅವರ ಪಕ್ಷದ ಗೌರವಾನ್ವಿತ ಶಾಸಕರಿಗೆ ನಾಯಕರೇ ಸಾರ್ವಜನಿಕವಾಗಿ ತಲೆ ತಗ್ಗಿಸುವಂತೆ ಮಾಡಿದ್ದಾರೆ. ಪಾಪ, ಆ ಶಾಸಕರು ಮಾತನಾಡಿದರೂ ತಪ್ಪು, ಮೌನದಿಂದಿದ್ದರೂ ತಪ್ಪು. ಅವರ ಸ್ವಾಭಿಮಾನಕ್ಕೆ ಕೊಡಲಿ ಪೆಟ್ಟು ಬಿದ್ದಾಗಿದೆ. ಮೌನಕ್ಕೆ ಶರಣಾದರೆ ಹಣ ಕೇಳಿದ್ದು ಸತ್ಯ ಎಂದು ಒಪ್ಪಿಕೊಂಡಂತಾಗುವುದು, ಹಣ ತೆತ್ತು ಎಂ.ಎಲ್.ಸಿ. ಆದವರು ಅಥವ ರಾಜ್ಯಸಭೆ ತಲುಪಿರುವವರು ಕೊಟ್ಟ ಹಣವನ್ನು ಗಳಿಸಿಕೊಳ್ಳುವುದು ಮಾತ್ರವಲ್ಲ, ನನ್ನಲ್ಲಿರುವ ಮಾಹಿತಿ ಪ್ರಕಾರ ಅದರ ಸಾವಿರಪಟ್ಟು ಲೂಟಿ ಹೊಡೆದಿರುವ, ಹೊಡೆಯುವ ಅವಕಾಶಗಳು ರೆಡಿಯಾಗಿವೆ. ಅಷ್ಟೇ ಮುಖ್ಯವಾಗಿ, ಆ ಶಾಸಕ ಸ್ಥಾನಗಳು ಅಕ್ರಮ ದಂಧೆ ಹಾಗೂ ಮಾಫಿಯಾ ಚಟುವಟಿಕೆಗಳಿಗೆ ಎಲ್ಲಾ ಬಗೆಯ ರಕ್ಷಣೆ ಒದಗಿಸುತ್ತವೆ ಎನ್ನುವುದು ಗುಟ್ಟಲ್ಲ. ಆಶ್ಚರ್ಯವೆಂದರೆ ವಿಧಾನ ಪರಿಷತ್ತು ಉಪ್ಪು ಹುಳಿ ಖಾರ ಇಲ್ಲದ ಸದನ ಎಂದು ಹಲವಾರು ಶಾಸಕರು ಹೇಳಿದ್ದನ್ನು ಕೇಳಿದ್ದೇನೆ. ಇದೀಗ ಅಂಥಾ ಸದನಕ್ಕೆ ಹೊಸ ಮೌಲ್ಯ ಕೂಡಿ ಬಂದಿರುವುದು ರಾಜಕೀಯ ವಿಪರ್ಯಾಸವೇ ಸರಿ. ನನಗೀಗ ಅರಿವಾಗಿದೆ, ಸ್ನೇಹಿತರೂ ಶ್ರೇಷ್ಠಮಟ್ಟದ ಸಂಸದೀಯ ವ್ಯಕ್ತಿಯೂ ಆದ ಎಂ.ಸಿ. ನಾಣಯ್ಯನವರನ್ನು ಕೈಬಿಟ್ಟಿದ್ದು ಯಾವ ಪ್ರೇರಣೆಯಿಂದ ಎನ್ನುವುದು. ಕೆಳಗಿನ ಸದನದಿಂದ ಬರುವ ಕರಡು ಮಸೂದೆ ಮತ್ತಿತರ ಪ್ರಮುಖ ಪ್ರಸ್ತಾವಗಳನ್ನು ಪರಾಮರ್ಶಿಸಿ ವಿಧಾನ ಸಭೆಗೆ ಮಾರ್ಗದರ್ಶನ ಮಾಡಬೇಕಾದ ಆಲೋಚನಾತ್ಮಕ ವಿಧಾನ ಪರಿಷತ್ತಿಗೆ ಕೋಟ್ಯಾಂತರ ಬೆಲೆಯ ಟಿಕೆಟ್ ಕೊಂಡು ಪ್ರವೇಶಿಸುವ ದುರ್ಗತಿ ಬಂದಿದೆ. ಕರ್ನಾಟಕದಿಂದ ರಾಜ್ಯಸಭೆಗೆ ಕಳುಹಿಸಿರುವ ಕೆಲವು ವ್ಯಕ್ತಿಗಳು ಕೂಡಾ ಕುಮಾರಸ್ವಾಮಿ ಅವರ 'ಪ್ರಾಮಾಣಿಕ ವಾಸ್ತವ ಪ್ರಪಂಚದ' ಚೌಕಟ್ಟಿನಲ್ಲೇ ದೆಹಲಿ ತಲುಪಿದ್ದಾರೆ. ಚುನಾವಣೆಯ ಹಿಂದಿನ ಕೆಲವೇ ದಿನಗಳವರೆಗೂ ಕಾಂಗ್ರೆಸ್ನಲ್ಲಿದ್ದವರನ್ನು ಜೆಡಿಎಸ್ ರಾಜ್ಯಸಭೆಗೆ ತನ್ನ ಅಭ್ಯರ್ಥಿಯನ್ನಾಗಿ ಮಾಡಿದ್ದು ಯಾವ ರಾಜಧರ್ಮ? ಇನ್ನು ಆ ಅಭ್ಯರ್ಥಿಯ ವೈಯಕ್ತಿಕ ಧರ್ಮ ಚರ್ಚೆಗೆ ಅರ್ಹವಲ್ಲ. ಟಿಕೆಟ್ನ ಬೆಲೆ ಮಾತ್ರ ರೋಚಕ ಊಹಾ ಪೋಹಕ್ಕೆ ಒಳ್ಳೆಯ(?) ಸಾಮಗ್ರಿ. ರಾಜ್ಯಸಭೆ ಚುನಾವಣೆಯಲ್ಲಿ 3ನೇ ಅಥವಾ 4ನೇ ಅಭ್ಯರ್ಥಿಯಾಗಿ ಎಲ್ಲಾ ಪಕ್ಷಗಳಿಂದಲೂ ತಮ್ಮ ಹಣಬಲದಿಂದ ಮತಗಿಟ್ಟಿಸಿಕೊಂಡು ನಮ್ಮ ದೇಶದ ಪ್ರಜೆಗಳ ಬದುಕು ನಡತೆಯನ್ನು ನಿಯಂತ್ರಿಸುವ ಕಾಯಿದೆಗಳನ್ನು ಮಾಡುವ ಸ್ಥಾನಕ್ಕೇರಿದ್ದಾರೆ. ಲಿಕ್ಕರ್ ಲಾಬಿ, ಈಗಲೂ ಮುಂದುವರೆದಿರುವ ಕ್ಯಾಪಿಟೇಷನ್ ಲಾಬಿ, ಬಹಳ ಪ್ರಬಲವಾದ ಎಲ್ಲಾ ರೀತಿಯ ಗಣಿಗಾರಿಕೆ ಲಾಬಿ, ರಿಯಲ್ ಎಸ್ಟೇಟ್ ಲಾಬಿಗಳಿಂದ ಮೇಲೆದ್ದವರು ರಾಜಕೀಯ ಪಕ್ಷಗಳ ನಾಯಕರನ್ನು ತಮ್ಮ ಬುಟ್ಟಿಯೊಳಗೆ ಹಾಕಿಕೊಂಡು ಸಂವಿಧಾನದ ಆಶಯಕ್ಕೆ ಸೆಡ್ಡು ಹೊಡೆದು ಹಾರ ತುರಾಯಿ ಸ್ವೀಕರಿಸುತ್ತಾ ನಮ್ಮ ಸಂವಿಧಾನ ಶಿಲ್ಪಿಗಳು ಸೃಷ್ಟಿಸಿದ ರಾಜ್ಯಾಂಗಕ್ಕೆ ಸವಾಲಾಗಿದ್ದಾರೆ.
ಪ್ರಸ್ತುತ ವಾತಾವರಣದಲ್ಲಿ ಮೇಲ್ಮನೆ ಸದಸ್ಯತ್ವಕ್ಕೆ ಸಂವಿಧಾನದ ಅನುಬಂಧಗಳು, ಆದೇಶಗಳ ಕುರಿತು ಹೇಳಿದರೆ ಎಲ್ಲಾ ಪಕ್ಷಗಳ ಬಹುತೇಕ ಮುಖಂಡರು ಅದನ್ನು ಅಸಹನೆ ಮತ್ತು ಸಂಕುಚಿತ ದೃಷ್ಟಿಯಿಂದ ಕಾಣುವುದೇ ಹೆಚ್ಚು. ಶಕ್ತಿ ರಾಜಕೀಯ, ತಂತಮ್ಮ ಪಕ್ಷದ ಹಿತಾಸಕ್ತಿ, ವ್ಯಕ್ತಿ-ಸಂಬಂಧಗಳು ಭಾರತದ ಸಂವಿಧಾನಕ್ಕಿಂತ ಹೆಚ್ಚು ಪ್ರಸ್ತುತವೆನ್ನುವ ಸಂದೇಶ ಸ್ಪಷ್ಟವಾಗಿರುತ್ತದೆ. ಹೀಗಾಗಿ ವೈಚಾರಿಕವಾಗಿ 'ಸಂವಿಧಾನದ ಪರ' ನಿಲುವಿನ ವ್ಯಕ್ತಿ 'ಪಕ್ಷ ವಿರೋಧಿ' ವ್ಯಕ್ತಿಯಾಗಿ ಕಾಣಿಸಬಹುದಲ್ಲವೆ? ಭಾರತದ ಸಂವಿಧಾನ ರಚನಾ ಸಭೆಯಲ್ಲಿ (1946-49) ವಿಧಾನ ಪರಿಷತ್ತು ಬೇಕೆ-ಬೇಡವೆ ಎನ್ನುವ ವಿಷಯ ಸಾಕಷ್ಟು ಚರ್ಚೆಗೆ ಒಳಗಾಗಿತ್ತು. ಕಡೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಎರಡನೇ ಸದನವನ್ನು ಪ್ರಾಯೋಗಿಕವಾಗಿ ಮಾತ್ರ ಪ್ರಾರಂಭಿಸುವ ತೀರ್ಮಾನವನ್ನು ಸ್ಪಷ್ಟಪಡಿಸಿದರು. (7ನೇ ಸಂಪುಟ). ಕೆ.ಟಿ. ಶಹ ಅವರ ಅಭಿಪ್ರಾಯದಲ್ಲಿ 'ಸರ್ಕಾರೀ ಖಜಾನೆಯಿಂದ (ಸಾರ್ವಜನಿಕರ ಹಣ) ಗಣನೀಯವಾಗಿ ಖರ್ಚು ಮಾಡಿ ಸ್ಥಾಪಿಸಿದ ದ್ವಿತೀಯ ಸದನವು ರಾಜಕೀಯ ಪಕ್ಷಗಳ ಮುಖಂಡರು ಆಶ್ರಯ ಹಂಚಲಿಕ್ಕೆ ಮಾತ್ರ ಸಹಾಯವಾಗುತ್ತದೆ. ದ್ವಿತೀಯ ಸದನವನ್ನು ಬಯಸುವವರು ಬಹುತೇಕ ಪಟ್ಟಭದ್ರ ಹಿತಾಸಕ್ತಿ ಉಳ್ಳವರು' ಎಂದರು. ಸ್ವತಃ ಡಾ. ಅಂಬೇಡ್ಕರ್ ಅವರೇ ಬರೆದು ಮಂಡಿಸಿದ ತಿದ್ದುಪಡಿಯಲ್ಲಿ- ನಾಮ ನಿರ್ದೇಶನದ ಮೂಲಕ ವಿಧಾನ ಪರಿಷತ್ತಿನ ಸದಸ್ಯತ್ವಕ್ಕೆ ಸರ್ಕಾರ ಸೂಚಿಸುವ ವ್ಯಕ್ತಿಗಳು ಸಾಹಿತ್ಯ, ಕಲೆ, ವಿಜ್ಞಾನ ಮತ್ತು ಸಮಾಜ ಸೇವೆಯ ಕ್ಷೇತ್ರಗಳಲ್ಲಿ ವಿಶೇಷ ಪರಿಣತಿ ಅಥವಾ ಕಾರ್ಯಶೀಲ ಅನುಭವ ಹೊಂದಿರತಕ್ಕದ್ದು ಎಂದು ರಚಿಸಿದ್ದರು. ಮತ್ತೊಬ್ಬ ಸದಸ್ಯರಾದ ಆರ್.ಕೆ. ಸಿಧಾ ಅವರು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡುವ ಅಧಿಕಾರವನ್ನು ರಾಷ್ಟ್ರಪತಿಯವರೂ ದುರುಪಯೋಗ ಮಾಡುವ ಸಾಧ್ಯತೆಯನ್ನು ಪ್ರಸ್ತಾಪಿಸಿದ್ದರು! (ಜನವರಿ, 3, 1949). ನನ್ನ ಅಭಿಪ್ರಾಯದಲ್ಲಿ ವಿಧಾನ ಪರಿಷತ್ತು ಅವಶ್ಯಕ. ಸಂಕೀರ್ಣತೆಯಿಂದ ಕೂಡಿದ ಹತ್ತು ಹಲವು ವಿಷಯಗಳ ವಿವಿಧ ಮಗ್ಗಲುಗಳನ್ನು ವಿಚಾರ ವಿನಿಮಯ ಮಾಡಲು ಈ ಸದನದಲ್ಲಿ ಸಾಕಷ್ಟು ಕಾಲಾವಕಾಶವಿದೆ. ಕೆಳಮನೆಯಲ್ಲಿ ಅಷ್ಟು ಸಮಯ ಲಭ್ಯವಿಲ್ಲ. ಮೇಲ್ಮನೆಯಲ್ಲಿ ಗಂಭೀರ ಚಿಂತನೆಗೆ ಅಪರೂಪದ ಅವಕಾಶಗಳಿವೆ.
ಕಡೆಯದಾಗಿ, ಕುಮಾರಸ್ವಾಮಿಯವರಿಗೊಂದು ಮುಖ್ಯವಾದ ಮಾಹಿತಿ: ನನಗೆ ಈವರೆಗೆ ಮೂರು ಬಾರಿ (ಸಣ್ಣ ಅವಧಿಯೂ ಸೇರಿ) ವಿಧಾನ ಪರಿಷತ್ ಸದಸ್ಯನಾಗುವ ಅವಕಾಶ ಲಭ್ಯವಾಗಿದೆ. ಎಂದೂ ಹೈಕಮಾಂಡ್ನವರಾಗಲಿ, ಮುಖ್ಯಮಂತ್ರಿಯವರಾಗಲಿ, ಬಹುಮುಖ್ಯವಾಗಿ ಶಾಸಕರಾಗಲಿ ಯಾರೂ ಹಣ ನಿರೀಕ್ಷೆಯಲ್ಲಿದ್ದ ಸಂಜ್ಞೆಯೂ ಇರಲಿಲ್ಲ. ಅದನ್ನೇ ಮೊನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕುಮಾರಸ್ವಾಮಿಯವರನ್ನ ಉದ್ದೇಶಿಸಿ ಕಾಂಗ್ರೆಸ್ ಪಕ್ಷದ ಕುರಿತು ಹೇಳಿದ್ದು.
-ಬಿ. ಕೆ. ಚಂದ್ರಶೇಖರ್,
ಕಾಂಗ್ರೆಸ್ ಮುಖಂಡರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


