ಅಂಕಣಗಳು

ಇಂಗ್ಲಿಷ್ ಕಲಿಸುವುದರಲ್ಲಿ ನಾವು ಎಡವುತ್ತಿರುವುದೆಲ್ಲಿ?

ಇಂಗ್ಲಿಷ್ ಕಲಿಸುವುದರಲ್ಲಿ ನಾವು ಎಡವುತ್ತಿರುವುದೆಲ್ಲಿ?
Published On :

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜಾಗತಿಕ ಮಟ್ಟದ ವೈಜ್ಞಾನಿಕ ಒಡನಾಟಕ್ಕೆ ಇಂಗ್ಲಿಷ್ ಭಾಷೆಯ ಕಲಿಕೆ ಅತ್ಯಗತ್ಯವಾಗಿದೆ. ಆದ್ದರಿಂದಲೇ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲೂ ಹಲವಾರು ಬದಲಾವಣೆಗಳನ್ನು ತರಲಾಗಿದ್ದು ಅದರಲ್ಲಿ ಮುಖ್ಯವಾಗಿ ಇಂಗ್ಲಿಷ್ ಅನ್ನು ಮೊದಲ ಹಂತದಿಂದಲೇ ಕಲಿಸುವ ಕ್ರಮವನ್ನು ಅನುಸರಿಸಲಾಗುತ್ತಿದೆ. ಆದರೆ ಇಂದಿನ ವ್ಯವಸ್ಥೆಯಲ್ಲಿ ನಮ್ಮ ಮಕ್ಕಳಿಗೆ ಇಂಗ್ಲಿಷ್ ಕಲಿಸಲಾಗುತ್ತಿರುವ ರೀತಿ ಸರಿಯಾಗಿದೆಯೇ ಎನ್ನುವ ಬಗ್ಗೆ ಒಂದು ಸೀಳು ನೋಟ ಬೀರಬೇಕಿದೆ. ಮಕ್ಕಳನ್ನು ಎರಡೆರಡು ಭಾಷೆಗಳಲ್ಲಿ ಪರಿಣತರನ್ನಾಗಿ ಮಾಡುವ ಬಗೆ ಹೇಗೆ ಎನ್ನುವ ಬಗ್ಗೆ ಜಗತ್ತಿನೆಲ್ಲೆಡೆ ಚರ್ಚೆಗಳಾಗುತ್ತಿವೆ, ಸಂಶೋಧನೆಗಳಾಗುತ್ತಿವೆ. ಇಂತಹ ಸಂಶೋಧನೆಗಳಿಂದ ಹೊರಬಂದಿರುವ ಕೆಲವು ಸಲಹೆಗಳನ್ನು ನೋಡೋಣ. ಸಾಧಾರಣವಾಗಿ ಇತ್ತೀಚಿನ ದಿನಗಳಲ್ಲಿ ಪೋಷಕರು ತಮ್ಮ ಮಕ್ಕಳ ಇಂಗ್ಲಿಷ್ ಕಲಿಕೆ ಉತ್ತಮವಾಗಿರಲಿ ಎಂದು ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಸೇರಿಸುತ್ತಾರೆ. ಈ ಶಾಲೆಗಳಲ್ಲಿ ವಿಜ್ಞಾನ ಮತ್ತು ಗಣಿತವಿಷಯಗಳನ್ನು ಇಂಗ್ಲಿಷಿನಲ್ಲೆ ಕಲಿಸಲಾಗುತ್ತದೆ. ಉಳಿದಂತೆ ಕನ್ನಡ ಮಾಧ್ಯಮದಲ್ಲಿ ಕಲಿಯುವ ಮಕ್ಕಳು ವಿಜ್ಞಾನ ಮತ್ತು ಗಣಿತವನ್ನು ಕನ್ನಡದಲ್ಲೇ ಕಲಿತು, ಇಂಗ್ಲಿಷ್ ಅನ್ನು ಒಂದು ವಿಷಯವಾಗಿ ಕಲಿಯುತ್ತಾರೆ. ಹೀಗೆ ತಾಯ್ನುಡಿಯ ಜೊತೆಜೊತೆಗೆ ಬೇರೊಂದು ಭಾಷೆಯನ್ನೂ ಕಲಿಸುವ 'ದ್ವಿಭಾಷಾ' ಪದ್ದತಿಗೆ bilingualism ಅನ್ನುತ್ತಾರೆ. ಈ ಎರಡು ವ್ಯವಸ್ಥೆಗಳಲ್ಲಿ ಕಾಣುವ ವ್ಯತ್ಯಾಸವೇನೆಂದರೆ ಮಕ್ಕಳು ಯಾವ ಭಾಷೆಯಲ್ಲಿ ವೈಜ್ಞಾನಿಕ ವಿಷಯಗಳನ್ನು ಕಲಿಯುತ್ತಾರೆ ಎಂಬುದು. ಇದರ ಬಗ್ಗೆ ಹಲವಾರು ವೈಜ್ಞಾನಿಕ ವರದಿಗಳು ಲಭ್ಯವಿದ್ದು ಮಕ್ಕಳು ತಮ್ಮ ತಾಯ್ನುಡಿಯಲ್ಲೇ ವಿಷಯಗಳನ್ನು ಕಲಿಯುವುದೇ ಸೂಕ್ತ ಎಂದು ಹೇಳಲಾಗುತ್ತದೆ. ಅದರೊಂದಿಗೆ ಒಂದು ವಿಷಯವಾಗಿ ಇಂಗ್ಲಿಷ್‌ನ್ನು ಕಲಿಸುವುದು ಉತ್ತಮ ಎಂದು ಅನುಮೋದಿಸಲಾಗಿದೆ. ಮಕ್ಕಳಿಗೆ ಎರಡನೇ ಭಾಷೆಯಾಗಿ ಇಂಗ್ಲಿಷನ್ನು ಕಲಿಸುವ ವಿಧಾನದ ಬಗ್ಗೆ ಬ್ರಿಟಿಷ್ ಕೌನ್ಸಿಲ್ ವರದಿಯೊಂದನ್ನು ಹೊರತಂದಿದ್ದು, ಆ ವರದಿಯಲ್ಲಿ ಈ ರೀತಿ ಹೇಳುತ್ತದೆ: "ಮಕ್ಕಳು ತಮ್ಮ ತಾಯ್ನುಡಿಯ ಮೂಲಕ ಈಗಾಗಲೇ ಕಲಿತಿರುವ ವಿಷಯಗಳನ್ನೇ ಇಂಗ್ಲಿಷ್ ಕಲಿಕೆಯ ತರಗತಿಯಲ್ಲೂ ಬಳಸುವುದರಿಂದ ಕಲಿಕೆಯು ಮೋಜಿನಿಂದ ಕೂಡಿದ್ದು ಪರಿಣಾಮಕಾರಿಯೂ, ಆಸಕ್ತಿದಾಯಕವೂ ಆಗಿರುತ್ತದೆ. ಈ ಮೂಲಕ ಮಕ್ಕಳು ಹೊಸವಿಷಯ ಮತ್ತು ಇಂಗ್ಲಿಷ್ ಎರಡನ್ನೂ ಕಲಿಯಬೇಕಾದ ಗೊಂದಲಕ್ಕೆ ಬೀಳದೆ ತಮಗೆ ಗೊತ್ತಿರುವುದನ್ನೇ ಇಂಗ್ಲಿಷಿನಲ್ಲಿ ಚೆನ್ನಾಗಿ ಹೇಳುವುದನ್ನು ಕಲಿಯಲು ಸಾಧ್ಯವಾಗುತ್ತದೆ."
ನಮ್ಮ ಮಕ್ಕಳು ಉತ್ತಮವಾಗಿ ಇಂಗ್ಲಿಷ್ ಕಲಿಯಬೇಕಾದರೆ ಅವರಿಗೆ ವಿಷಯಗಳ ಅರಿವು ಕನ್ನಡದಲ್ಲಿ ಮೂಡಿಸಬೇಕು ಎಂಬುದನ್ನು ನಾವಿಲ್ಲಿ ತಿಳಿಯಬಹುದು. ಇದಕ್ಕೆ ಪೂರಕವೆಂಬಂತೆ, 2012ರಲ್ಲಿ ಬ್ರಿಟಿಷ್ ಕೌನ್ಸಿಲ್ ಸಹಭಾಗಿತ್ವದಲ್ಲಿ 'ಪ್ರಥಮ್‌' ಎನ್ನುವ ಹೆಸರಿನ ಎನ್‌ಜಿಒ ಸಮೀಕ್ಷೆಯೊಂದನ್ನು ನಡೆಸಿದ್ದು, ಈ ಸಮೀಕ್ಷೆಯಲ್ಲಿ ಕಂಡುಬಂದಿದ್ದು ಏನೆಂದರೆ 'ಒಂದು ನುಡಿಯನ್ನು ಚೆನ್ನಾಗಿ ಅರಿತ ಮಕ್ಕಳು ಇತರ ನುಡಿಗಳನ್ನು ಕಲಿಯುವಲ್ಲಿ ಮುಂದಿರುತ್ತಾರೆ' ಎಂಬುದು. ಈ ಸಮೀಕ್ಷೆಯಲ್ಲಿ ಸುಮಾರು ಆರು ಲಕ್ಷ ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಭಾರತದಲ್ಲೇ ಮಕ್ಕಳ ಇಂಗ್ಲಿಷ್ ಕಲಿಕೆಯ ಕುರಿತು ನಡೆಸಲಾದ ಅತ್ಯಂತ ದೊಡ್ಡ ಸಮೀಕ್ಷೆ ಇದಾಗಿದೆ. ಈ ಸಮೀಕ್ಷೆಯನ್ನು ಮುನ್ನಡೆಸಿದ ರುಕ್ಮಿಣಿ ಬ್ಯಾನರ್ಜಿ ಅವರು, 'ಇಂಗ್ಲಿಷ್ ಚೆನ್ನಾಗಿ ಕಲಿಯಲು ಮಕ್ಕಳು ತಮ್ಮ ಭಾಷೆಯನ್ನು ಉತ್ತಮವಾಗಿ ಕಲಿಯಬೇಕಾದ್ದು ಅತ್ಯವಶ್ಯಕ. ಯಾವುದೇ ಒಂದು ಭಾಷೆಯ ಮೇಲೆ ಪ್ರಭುತ್ವಹೊಂದಿದ ಮಕ್ಕಳು ಇನ್ನೊಂದು ಭಾಷೆಯನ್ನು ಕಲಿಯುವುದರಲ್ಲಿ ಮುಂದಿರುತ್ತಾರೆ" ಎಂದಿದ್ದಾರೆ. ಎಳವೆಯಲ್ಲಿರುವ ಮಕ್ಕಳು ಅತಿಹೆಚ್ಚು ಬಳಸುವ ನುಡಿ ಅವರ ತಾಯ್ನುಡಿಯೇ. ಹಾಗಾಗಿ, ತಾಯ್ನುಡಿಯ ಭದ್ರವಾದ ಬುನಾದಿಯನ್ನೇ ಬಂಡವಾಳ ಮಾಡಿಕೊಂಡು ಎಲ್ಲ ವಿಷಯಗಳನ್ನು ಕಲಿಸಿದಲ್ಲಿ, ಮಕ್ಕಳು ವಿಜ್ಞಾನ ಮಾತ್ರವಲ್ಲದೆ ಇಂಗ್ಲಿಷ್ ಕಲಿಕೆಯಲ್ಲೂ ಮುಂದಿರುತ್ತಾರೆ ಎಂದು ನಾವು ತಿಳಿಯಬಹುದಾಗಿದೆ. ಇಂಗ್ಲಿಷ್ ಕಲಿಸುವ ಆತುರದಲ್ಲಿರುವ ಪೋಷಕರು ಕೆಲ ಎಚ್ಚರಗಳನ್ನು ವಹಿಸಬೇಕು. ಮೊದಲನೆಯದಾಗಿ, ದ್ವಿಭಾಷಾ ಬಳಕೆಗೆ ಮಕ್ಕಳನ್ನು ಒತ್ತಾಯವಾಗಿ ತರಬಾರದು. ಹಾಗೆ ಮಾಡುವುದರಿಂದ ಮಕ್ಕಳ ಮೇಲೆ ಮಾನಸಿಕ ಒತ್ತಡ ಉಂಟಾಗುತ್ತದೆ. ಉದಾಹರಣೆಗೆ, ಕೆಲವು ಪೋಷಕರು ತಮ್ಮ ಮಕ್ಕಳೊಡನೆ ಸಹಜವಾಗಿಯೇ ಮಾತನಾಡುತ್ತಿದ್ದು ಬೇರೊಬ್ಬರ ಮುಂದೆ ಇದ್ದಕ್ಕಿದ್ದಂತೆ ಇಂಗ್ಲಿಷಿನಲ್ಲಿ ಮಾತನಾಡಿಸಲು ಮುಂದಾಗುತ್ತಾರೆ. ಈ ರೀತಿಯ ನಡವಳಿಕೆಯಿಂದ ಮಕ್ಕಳಲ್ಲಿ ಗೊಂದಲ ಉಂಟಾಗುತ್ತದೆ. ಈ ರೀತಿ ಮಾಡುವ ಬದಲು, ಮಕ್ಕಳಿಗೆ ವ್ಯವಸ್ಥಿತವಾಗಿ ಇಂಗ್ಲಿಷ್ ಭಾಷೆಯ ಪರಿಚಯ ಮಾಡಿಸಬೇಕು. ದಿನದ ಯಾವುದಾದರೂ ಒಂದು ಸಮಯದಲ್ಲಿ ಸ್ವಲ್ಪ ಹೊತ್ತು ಇಂಗ್ಲಿಷಿನಲ್ಲಿ ಮಾತನಾಡುವುದನ್ನು ಮಗುವಿಗೆ ಅಭ್ಯಾಸ ಮಾಡಿಸಬೇಕು.
ಈಗಿನ ಇಂಗ್ಲಿಷ್ ಮಾಧ್ಯಮ ಶಿಕ್ಷಣ ಮಾದರಿಯಲ್ಲಿ ಒತ್ತಾಯವಾಗಿ ಇಂಗ್ಲಿಷ್ ಬಳಸುವಂತೆ ಮಾಡಲಾಗುತ್ತದೆ. ಉದಾಹರಣೆಗೆ ಶಿಕ್ಷಕರು ಪೋಷಕರಿಗೆ ಮನೆಯಲ್ಲಿ ಮಗುವನ್ನು ಇಂಗ್ಲಿಷಿನಲ್ಲೇ ಮಾತನಾಡಿಸಲು ಹೇಳುವುದು, ಶಾಲೆಗಳಲ್ಲಿ ಕಡ್ಡಾಯವಾಗಿ ಇಂಗ್ಲಿಷಿನಲ್ಲೆ ಮಾತಾಡಬೇಕೆಂಬ ನಿಯಮ ರೂಪಿಸುವುದು, ಮಕ್ಕಳು ಶಾಲೆಯಲ್ಲಿ ತಮ್ಮ ನುಡಿಯಲ್ಲೇ ಮಾತಾಡಿದಾಗ ಅವರನ್ನು ಶಿಕ್ಷಿಸುವುದು ಇತ್ಯಾದಿ. ಇದು ಅವೈಜ್ಞಾನಿಕ ನಡೆಯಾಗಿದೆ. ಇಂಥ ವ್ಯವಸ್ಥೆಯಿಂದ ಮಕ್ಕಳಿಗೆ ಇಂಗ್ಲಿಷ್ ಕಲಿಕೆ ಚೆನ್ನಾಗಿ ಆಗದು, ಬದಲಾಗಿ ಮಕ್ಕಳು ಕಲಿಕೆಯಲ್ಲಿ ಹಿಂದುಳಿಯುವ ಸಾಧ್ಯತೆಗಳೇ ಹೆಚ್ಚು. ಶಾಲೆಗೆ ಸೇರಿಸಿದ ಮೊದಲ ವರ್ಷದಿಂದಲೇ 'ನಮ್ಮ ಮಗು ಯಾಕೋ ಇನ್ನೂ ಇಂಗ್ಲಿಷಿನಲ್ಲಿ ಮಾತಾಡುತ್ತಿಲ್ಲ' ಅಂತ ಕಳವಳಗೊಳ್ಳುವ ಪೋಷಕರನ್ನು ನೋಡುತ್ತೇವೆ. ಹಾಗೆ ಅವಸರ ಮಾಡುವುದರಿಂದ ಮಕ್ಕಳ ಮೇಲೆ ಆಗುವ ಮಾನಸಿಕ ಪರಿಣಾಮದ ಬಗ್ಗೆ ಪೋಷಕರು ಯೋಚಿಸಬೇಕು. ಮಗುವಿಗೆ ಹೊಸ ಭಾಷೆಯನ್ನು ಕಲಿಯಲು ಹೆಚ್ಚಿನ ಸಮಯ ಕೊಡಬೇಕು. ಯಾವುದೇ ಮಗುವಿನ ಮೊದಲ ಮೂರು ವರ್ಷ (ಶಾಲೆಗೆ ಸೇರುವ ಮೊದಲು) ತನ್ನ ಪೋಷಕರೊಂದಿನ ಒಡನಾಟ ಮನೆಯ ನುಡಿಯಲ್ಲೇ ಇರುತ್ತದೆ. ಹೀಗಿರುವಾಗ ನಾಲ್ಕನೇ ವರ್ಷದಿಂದ ಇಂಗ್ಲಿಷ್ ಕಲಿಸುವ ಆತುರ ಮಾಡದೆ ಇಂಗ್ಲಿಷ್ ಕಲಿಯಲು ಮಗುವಿಗೆ ಸಹಕಾರಿಯಾಗುವ ಪರಿಸರವನ್ನು ನಿರ್ಮಿಸುವ ಕೆಲಸ ಪೋಷಕರಿಂದಲೇ ಆಗಬೇಕಾದ್ದು. ಹಂತ ಹಂತವಾಗಿ ಬೇರೊಂದು ನುಡಿಯನ್ನು ಕಲಿಯುವ ವೈಜ್ಞಾನಿಕ ಹಾದಿಯನ್ನು ಹಿಡಿದರೆ, ಎಲ್ಲ ಮಕ್ಕಳೂ ಎರಡು ಭಾಷೆಗಳಲ್ಲಿ ಪರಿಣತಿ ಕಂಡುಕೊಳ್ಳಬಲ್ಲರು. ಈ ನಿಟ್ಟಿನಲ್ಲಿ ಪೋಷಕರ ಪಾತ್ರ ತುಂಬಾ ದೊಡ್ಡದು.

- ವಲ್ಲೀಶ್‌ಕುಮಾರ್ ಎಸ್
vallishkumar@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.