ವಿಶ್ವಬ್ಯಾಂಕ್ ಅಸಮಾನತೆಗೆ ಉತ್ತರವೇ ಬ್ರಿಕ್ಸ್ ಬ್ಯಾಂಕ್?

ಬ್ರೆಜಿಲ್ನ ಬಂದರು ನಗರ ಪೋರ್ಟಲೆಜ ನಗರದಲ್ಲಿ ನಡೆಯುತ್ತಿರುವ ಬ್ರಿಕ್ಸ್ ರಾಷ್ಟ್ರಗಳ(ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ) ಒಕ್ಕೂಟದ ನಾಯಕರ ಸಮಾವೇಶದಲ್ಲಿ ಜುಲೈ ಹದಿನೈದರಂದು ತೆಗೆದುಕೊಂಡ ಒಂದು ನಿರ್ಣಯ ಇದೀಗ ಜಾಗತಿಕ ಮಟ್ಟದಲ್ಲಿ ದೊಡ್ಡ ಸಂಚಲನವನ್ನುಂಟು ಮಾಡಿದೆ. ಸಮಾನ ಮನಸ್ಕ ರಾಷ್ಟ್ರಗಳ ಆರ್ಥಿಕ ಚಟುವಟಿಕೆಗೆ ಹಿನ್ನಡೆಯಾಗದಂತೆ, ಮೂಲಭೂತ ಸೌಕರ್ಯಗಳಿಗೆ ಬಂಡವಾಳ ದೊರೆಯುವಂತೆ ಹಾಗೂ ತಮ್ಮ ತಮ್ಮ ದೇಶಗಳ ಸುಸ್ಥಿರ ಅಭಿವೃದ್ಧಿಯನ್ನು ಗುರಿಯಾಗಿರಿಸಿಕೊಂಡು ಬ್ರಿಕ್ಸ್ ಬ್ಯಾಂಕ್ ಅಥವಾ ನೂತನ ಅಭಿವೃದ್ಧಿ ಬ್ಯಾಂಕ್ ಸ್ಥಾಪಿಸಲು ಉದ್ದೇಶಿಸಿ ಐದು ರಾಷ್ಟ್ರಗಳು ಸಹಿ ಹಾಕುವುದರ ಜೊತೆಗೆ ಈ ನೂತನ ಬ್ಯಾಂಕಿಗೆ ನೂರು ಬಿಲಿಯನ್ ಡಾಲರ್ (ಆರು ಲಕ್ಷ ಕೋಟಿ) ಹಣವನ್ನು ಬಂಡವಾಳವಾಗಿ ತೊಡಗಿಸಲು ನಿರ್ಧಾರಕ್ಕೆ ಬಂದಿವೆ. ಅಂತಾರಾಷ್ಟ್ರೀಯ ಮಟ್ಟದ ಈ ಬೆಳವಣಿಗೆ ಜಾಗತೀಕರಣದ ವ್ಯವಸ್ಥೆಯಾದ ವಿಶ್ವ ವ್ಯಾಪಾರ ಸಂಘಟನೆ ಮತ್ತು ಅದರ ಮುದ್ದಿನ ಅವಳಿ ಕೂಸುಗಳಾದ ವಿಶ್ವ ಬ್ಯಾಂಕ್ ಮತ್ತು ಅಂತಾರಾಷ್ಟ್ರೀಯ ಹಣ ಕಾಸು ನಿಧಿ (ಐ.ಎಂ.ಎಫ್.) ಸಂಸ್ಥೆಗಳಿಗೆ ನುಂಗಲಾರದ ತುತ್ತಾಗಿದ್ದರೆ, ಜಾಗತಿಕ ವಿದ್ಯಮಾನದ ಸೂತ್ರಗಳನ್ನು ಈ ಮೂರು ಸಂಸ್ಥೆಗಳ ಮೂಲಕ ತಮ್ಮ ಕೈಯಲ್ಲಿರಿಸಿಕೊಂಡಿರುವ ಅಮೆರಿಕ ಹಾಗೂ ಅದರ ಶ್ರೀಮಂತ ಮಿತ್ರ ರಾಷ್ಟ್ರಗಳಿಗೆ (ಗ್ರೂಪ್-8) ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ.
ಕಳೆದ ವರ್ಷ ಮಾರ್ಚ್ ತಿಂಗಳಿನ ಕೊನೆಯ ವಾರದಲ್ಲಿ ದಕ್ಷಿಣ ಆಫ್ರಿಕಾದ ಡರ್ಬನ್ ನಗರದಲ್ಲಿ ನಡೆದ ಬ್ರಿಕ್ಸ್ ರಾಷ್ಟ್ರಗಳ ನಾಯಕರ ಸಮಾವೇಶದಲ್ಲಿ ನೂತನ ಅಭಿವೃದ್ಧಿಯ ಬ್ಯಾಂಕ್ ಸ್ಥಾಪಿಸಬೇಕೆಂಬ ಕನಸು, ಚರ್ಚೆಯ ಸಂದರ್ಭದಲ್ಲಿ ಮೂಡಿಬಂದಿತ್ತು. ಈ ಬಾರಿಯ ಸಮಾವೇಶನದಲ್ಲಿ ಆ ಕನಸು ಸಾಕಾರಗೊಂಡಿದೆ. ಚೀನಾದ ಶಾಂಗೈ ನಗರದಲ್ಲಿ ನೂತನ ಅಭಿವೃದ್ಧಿ ಬ್ಯಾಂಕಿನ ಕೇಂದ್ರ ಕಚೇರಿ ಇರಬೇಕೆಂತಲೂ, ಭಾರತವು ಬ್ಯಾಂಕಿನ ಅಧ್ಯಕ್ಷ ಸ್ಥಾನ ಅಲಂಕರಿಸುವುದೆಂತಲೂ ಹಾಗೂ ಬ್ಯಾಂಕಿನ ಒಂದು ಪ್ರಾದೇಶಿಕ ಕಚೇರಿಯನ್ನು ದಕ್ಷಿಣ ಆಫ್ರಿಕಾದಲ್ಲಿ ತೆರೆಯಲು ನಿರ್ಧರಿಸಲಾಗಿದೆ. ಒಟ್ಟು ನೂರು ಶತಕೋಟಿ ಡಾಲರ್ ಬಂಡವಾಳದಲ್ಲಿ ಚೀನಾ 41 ಶತಕೋಟಿ ಡಾಲರ್, ಭಾರತ, ರಷ್ಯಾ ಮತ್ತು ಬ್ರೆಜಿಲ್ ರಾಷ್ಟ್ರಗಳು ತಲಾ 18 ಶತಕೋಟಿ ಡಾಲರ್ ಮತ್ತು ದಕ್ಷಿಣ ಆಫ್ರಿಕಾ 5 ಶತಕೋಟಿ ಡಾಲರ್ ವಿನಿಯೋಗಿಸಲು ತೀರ್ಮಾನಕ್ಕೆ ಬಂದಿವೆ. ಈ ಬ್ಯಾಂಕಿನ ಐದು ಸದಸ್ಯ ರಾಷ್ಟ್ರಗಳು ತಮ್ಮ ದೇಶದ ಅಭಿವೃದ್ಧಿ ಚಟುವಟಿಕೆಗೆ ಈ ಹಣವನ್ನು ಬಳಸಬಹುದಾಗಿದೆ.
ಈ ನೂತನ ಬ್ಯಾಂಕಿನ ಸ್ಥಾಪನೆಯ ಹಿಂದೆ ಪಶ್ಚಿಮ ಜಗತ್ತು ಜಾಗತೀಕರಣದ ನೆಪ ಹಾಗೂ ಗಡಿ ರೇಖೆಗಳಿಲ್ಲದ ಮುಕ್ತ ಮಾರುಕಟ್ಟೆಯ ಮೂಲಕ ಎಲ್ಲಾ ರಾಷ್ಟ್ರಗಳಿಗೂ ಸಮಾನ ಅವಕಾಶ ಎಂಬ ಘೋಷಣೆಯಡಿ ಕಳೆದ 24 ವರ್ಷಗಳಲ್ಲಿ ತೃತಿಯ ಜಗತ್ತಿನ ರಾಷ್ಟ್ರಗಳನ್ನು ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳನ್ನು ನಿರಂತರವಾಗಿ ಶೋಷಣೆ ಮಾಡಿದ ವೈಖರಿಗೆ ಮತ್ತು ಅವು ಸೃಷ್ಟಿದ ಜಾಗತಿಕ ಅಸಮಾನತೆಗೆ ಬ್ರಿಕ್ಸ್ರಾಷ್ಟ್ರಗಳು ಕೊಟ್ಟ ದಿಟ್ಟ ಉತ್ತರ ಎಂದು ಈ ನಡೆಯನ್ನು ವಿಶ್ಲೇಷಿಸಲಾಗುತ್ತಿದೆ. ವಿಶ್ವಬ್ಯಾಂಕ್ ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿ ಈ ಎರಡು ಸಂಸ್ಥೆಗಳ ಪಕ್ಷಪಾತ ಧೋರಣೆ ಮತ್ತು ಈ ಎರಡು ಸಂಸ್ಥೆಗಳ ಮೇಲೆ ಅಧಿಕ ಷೇರು ಬಂಡವಾಳದ ನೆಪದಲ್ಲಿ ಅಮೆರಿಕ ಹೊಂದಿರುವ ಹಿಡಿತದ ಕುರಿತಾದ ಸುಧೀರ್ಘ ಕಪ್ಪು ಅಧ್ಯಾಯವೊಂದು ಇತಿಹಾಸದಲ್ಲಿ ಅಡಗಿ ಕುಳಿತಿದೆ.
ಜಾಗತೀಕರಣದ ಆತ್ಮಗಳೆಂದು ಕರೆಯಲಾಗುವ ವಿಶ್ವಬ್ಯಾಂಕ್, ಅಂತರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆ ಮತ್ತು ವಿಶ್ವ ವಾಣಿಜ್ಯ ಮಂಡಳಿ ಕಳೆದ ಕಾಲುಶತಮಾನದಿಂದ ಜಾಗತಿಕ ಮಟ್ಟದಲ್ಲಿ ಸಂಘರ್ಷ, ಹಿಂಸೆ ಮತ್ತು ರಕ್ತಪಾತದ ಕೇಂದ್ರ ಬಿಂದುಗಳಾಗಿವೆ, ಜೊತೆಗೆ ತೃತಿಯ ಜಗತ್ತಿನ ಬಡರಾಷ್ಟ್ರಗಳು ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಪಾಲಿಗೆ ಕೊರಳಿಗೆ ಸುತ್ತಿದ ಉರುಳುಗಳಾಗಿವೆ.
ಯಾವುದೇ ಪ್ರಜಾಪ್ರಭುತ್ವ ರಾಷ್ಟ್ರದ ಜನತೆ ತಮ್ಮ ಏಳಿಗೆಗಾಗಿ ಸರ್ಕಾರಗಳಿಂದ ಯೋಜನೆ ಮತ್ತು ಅಭಿವೃದ್ಧಿ ನೀತಿಗಳನ್ನು ನಿರೀಕ್ಷಿಸುತ್ತಾರೆಯೇ ವಿನಃ ಮುಕ್ತ ಮಾರುಕಟ್ಟೆಯ ಬಂಡವಾಳಶಾಹಿಯ ಲಾಭಕೋರ ನೀತಿಯನ್ನಲ್ಲ. ಮಾನವೀಯ ಮುಖವಿಲ್ಲದ ಮಾರುಕಟ್ಟೆಯ ಸಿದ್ಧಾಂತಗಳು ಜನತೆಯ ಮತ್ತು ಸಮಾಜದ ಕಲ್ಯಾಣ ಕಾರ್ಯದಲ್ಲಿ ನಿರತವಾಗಿರುವ ಸರ್ಕಾರಗಳ ಆಶಯಕ್ಕೆ ವಿರುದ್ಧವಾಗಿವೆ. ಭವಿಷ್ಯದ ದೃಷ್ಟಿಯಿಂದ ಇದು ಅಪಾಯಕಾರಿ ಬೆಳವಣಿಗೆ ಹಾಗೂ ಸರ್ಕಾರದ ಪಾತ್ರವಿಲ್ಲದೆ ಅಭಿವೃದ್ಧಿ ಅಸಾಧ್ಯ ಎಂದು ಪ್ರತಿಪಾದಿಸಿದ್ದ ಪ್ರಖ್ಯಾತ ಅರ್ಥಶಾಸ್ತ್ರಜ್ಞ ಜೆ.ಎಂ. ಕೇನ್ಸ್ ಸರ್ಕಾರಗಳು ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ರಸ್ತೆ, ವಸತಿ ಮುಂತಾದ ಕಾರ್ಯಗಳಿಗೆ ವಿನಿಯೋಗಿಸುವ ಬಂಡವಾಳ, ಅಭಿವೃದ್ಧಿ ಮತ್ತು ಪ್ರಗತಿಗೆ ವಾಹಕವಾಗಲಿದೆ ಎಂದಿದ್ದರು. ಆದರೆ ಎಲ್ಲಾ ಸಮಸ್ಯೆಗಳಿಗೆ ಖಾಸಗೀಕರಣ ಮದ್ದು ಎಂಬ ಭ್ರಮೆ ಬಿತ್ತುತ್ತಿರುವ ವರ್ತಮಾನದ ಜಗತ್ತಿನಲ್ಲಿ ಅನೇಕ ರಾಷ್ಟ್ರಗಳು ಇದೀಗ ಎಚ್ಚೆತ್ತುಕೊಂಡಿವೆ. ವಿಶ್ವವಾಣಿಜ್ಯ ಮಂಡಳಿಯ ನೀತಿ ನಿಯಮಗಳು, ವಿಶ್ವಬ್ಯಾಂಕ್ ಮತ್ತು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯ ಸಾಲದ ನಿಬಂಧನೆಗಳೆಲ್ಲವೂ ಅಮೆರಿಕ ಮತ್ತು ಅದರ ಮೈತ್ರಿಕೂಟ ರಾಷ್ಟ್ರಗಳಿಗೆ ಪೂರಕವಾಗಿರುವುದು ಇದಕ್ಕೆ ಪರೋಕ್ಷ ಕಾರಣ.
ಅಮೆರಿಕದ ವಾಷಿಂಗ್ಟನ್ ಡಿ.ಸಿ. ನಗರದ ಹತ್ತೊಂಬತ್ತನೆಯ ಮುಖ್ಯರಸ್ತೆಯಲ್ಲಿರುವ ಹದಿಮೂರು ಅಂತಸ್ತುಗಳ ಭವ್ಯವಾದ ಕಟ್ಟಡದಲ್ಲಿ ವಿಶ್ವಬ್ಯಾಂಕ್ ಕಚೇರಿ ಇದೆ. ಕಚೇರಿಯ ಮುಂದೆ ಇರುವ ನಾಮಫಲಕದಲ್ಲಿ 'ಬಡತನವಿಲ್ಲದ ಜಗತ್ತು ನಮ್ಮ ಕನಸು' ಎಂಬ ಮನಮೋಹಕ ವಾಕ್ಯವನ್ನು ಬರೆಯಲಾಗಿದೆ. ಜೊತೆಗೆ ಕಟ್ಟಡದ ಮುಂಭಾಗದಲ್ಲಿ ಅಂಧ ವೃದ್ಧ ವ್ಯಕ್ತಿಯೊಬ್ಬನಿಗೆ ಕೈ ಹಿಡಿದು ಮಾರ್ಗದರ್ಶನ ಮಾಡುತ್ತಿರುವ ಎಳೆಯ ಬಾಲಕನ ಪ್ರತಿಮೆಯೊಂದಿದೆ. ಈ ಕಟ್ಟಡಕ್ಕೆ ಹೊಂದಿಕೊಂಡಂತೆ ವಿಶ್ವ ಆರೋಗ್ಯ ಸಂಘಟನೆಯ ಕಚೇರಿಯಿದ್ದು, ವಿಶ್ವಾದ್ಯಂತ ಅಂಧತ್ವವನ್ನು ಹೋಗಲಾಡಿಸುವುದು ತನ್ನ ಗುರಿ ಎಂಬ ಸಂದೇಶ ಸಾರುವ ನಿಟ್ಟಿನಲ್ಲಿ ಈ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ವಿಶ್ವ ಬ್ಯಾಂಕ್ ಕೇಂದ್ರ ಕಚೇರಿ ಇರುವ ಕಟ್ಟಡದಲ್ಲಿ ಅಂತಾರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆಯ ಕಚೇರಿ ಇರುವುದು ವಿಶೇಷ.
ವಿಪರ್ಯಾಸವೆಂದರೆ ಈ ಎರಡು ಸಂಸ್ಥೆಗಳು ಹೊಂದಿರುವ ಆಶಯ, ಗುರಿ, ಮತ್ತು ಕನಸುಗಳಿಗೂ, ವಾಸ್ತವವಾಗಿ ಕೈಗೊಂಡಿರುವ ಕಾರ್ಯವೈಖರಿಗೂ ಅಜಗಜಾಂತರ ವ್ಯತ್ಯಾಸವಿರುವುದು. ಬಡತನ ನಿವಾರಣೆಗೆ ಕಂಕಣ ಬದ್ಧ ಎಂದು ವಿಶ್ವಬ್ಯಾಂಕ್ ಹೇಳುತ್ತಿದ್ದರೆ, ಜಾಗತಿಕ ಅರ್ಥವ್ಯವಸ್ಥೆಯಲ್ಲಿ ಸ್ಥಿರತೆ ತರುವುದು ತನ್ನ ಧ್ಯೇಯ ಎಂದು ಅಂತಾರಾಷ್ಟ್ರೀಯ ಹಣ ಕಾಸು ನಿಧಿ ಘೋಷಿಸಿಕೊಂಡಿದೆ. ವಿಶ್ವಬ್ಯಾಂಕ್ ತನ್ನ ಕಾರ್ಯಯೋಜನೆಯಲ್ಲಿ ಕನಿಷ್ಟ ಮಟ್ಟದಲ್ಲಾದರೂ ಜಾಗತಿಕ ಬಡತನ, ಹಸಿವುಗಳ ನಿವಾರಣೆಗೆ ತೊಡಗಿಸಿಕೊಂಡಿರುವುದನ್ನು ತಳ್ಳಿಹಾಕಲಾಗದು. ಆದರೆ, ಅಂತಾರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆಯಲ್ಲಿ ಶೇಕಡ 65 ರಷ್ಟು ಅಮೆರಿಕ ಷೇರು ಬಂಡವಾಳವನ್ನು ಹೊಂದಿದ್ದು, ಉಳಿದ ಬಂಡವಾಳವನ್ನು ಬಹುತೇಕ ಬಹುರಾಷ್ಟ್ರೀಯ ಕಂಪನಿಗಳು ತೊಡಗಿಸಿವೆ. ಹಾಗಾಗಿ ಈ ಸಂಸ್ಥೆಯಿಂದ ಸಾಲ ಪಡೆಯುವ ರಾಷ್ಟ್ರಗಳು ಈ ಸಂಸ್ಥೆಯು ಹೇಳಿದಂತೆ ತನ್ನ ಉದ್ಯಮ ನೀತಿ, ಆರ್ಥಿಕ ನೀತಿಗಳನ್ನು ಬದಲಿಸಕೊಳ್ಳಬೇಕು. ಡಾಲರ್ ಎದುರು ತನ್ನ ದೇಶದ ಕರೆನ್ಸಿ ಅಪಮೌಲ್ಯ, ಸಾರ್ವಜನಿಕ ಪಡಿತರ ವ್ಯವಸ್ಥೆಗೆ ಕಡಿವಾಣ, ಶಿಕ್ಷಣ, ಆರೋಗ್ಯ, ಕೃಷಿ ಸೇರಿದಂತೆ ವಿವಿಧ ರಂಗಗಳ ಮೇಲೆ ಸಬ್ಸಿಡಿ ಕಡಿತ, ಅಮೆರಿಕ ಸೇರಿದಂತೆ ಮುಂದುವರಿದ ಕೈಗಾರಿಕಾ ರಾಷ್ಟ್ರಗಳ ಉತ್ಪನ್ನಗಳಿಗೆ ಮುಖ್ಯವಾದ ಆಮದು ವ್ಯವಸ್ಥೆ, ಮುಂತಾದ ಕಠಿಣ ನಿಯಮಗಳನ್ನು ಹೇರುತ್ತದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಬಹುತೇಕ ನಿಯಮಗಳು ಅಮೆರಿಕದ ವಾಷಿಂಗ್ಟನ್ ನಗರದಿಂದ ನಿರ್ದೇಶಿಸಲ್ಪಡುತ್ತದೆ. ಅಮೆರಿಕ ಸರ್ಕಾರದ ಗುರಿ ಮತ್ತು ಯೋಜನೆಗಳನ್ನು ಸಾಕಾರಗೊಳಿಸುವುದು ಇದರ ಮುಖ್ಯ ಕಾರ್ಯವಾಗಿದೆ. ಸಾಲ ಅಥವಾ ಆರ್ಥಿಕ ನೆರವು ಕೋರಿ ಬರುವ ಬಡರಾಷ್ಟ್ರಗಳ ಬಡತನವಾಗಲಿ, ಅಲ್ಲಿನ ಜನತೆಯ ಹಸಿವು ಅಥವಾ ಅನಾರೋಗ್ಯ ಇದಕ್ಕೆ ಎಂದೂ ಮುಖ್ಯವಾಗಿಲ್ಲ. ಈ ಸಂಸ್ಥೆಯ ಸದಸ್ಯರಾಷ್ಟ್ರಗಳಿಗೆ ಮತದಾನದ ಹಕ್ಕನ್ನು ಚಲಾಯಿಸಲು ಅವಕಾಶ ನೀಡಿಲ್ಲ. ಎಲ್ಲವೂ ಅಮೆರಿಕದ ಮೂಗಿನ ನೇರಕ್ಕೆ ನಡೆಯಲಾಗುತ್ತದೆ. ಈ ದಿನ ಬ್ರಿಕ್ಸ್ ಬ್ಯಾಂಕ್ ಸ್ಥಾಪನೆ ಮೂಲ ಕಾರಣವಾಗಿರುವುದು ಇಂತಹ ಅಸಮಾನತೆಯೇ.
2004 ರಲ್ಲಿ ವಿಶ್ವವಾಣಿಜ್ಯ ಸಂಘಟನೆಯ ಆಶ್ರಯದಲ್ಲಿ ಕ್ಯಾನ್ಕುನ್ನಗರದಲ್ಲಿ ನಡೆದ ಸದಸ್ಯರಾಷ್ಟ್ರಗಳ ಸಭೆಯಲ್ಲಿ ಇಂಥ ಜಾಗತಿಕ ಅಸಮಾನತೆಗಳ ವಿರುದ್ಧ ಸಿಡಿದೆದ್ದ ಭಾರತ ಮತ್ತು ಬ್ರೆಜಿಲ್ ರಾಷ್ಟ್ರಗಳು ಗ್ರೂಪ್-20 ಎಂಬ ಹೆಸರಿನಡಿ ಸಂಘಟನೆಗೊಂಡು ತಮ್ಮ ಅತೃಪ್ತಿಯನ್ನು ಹೊರಹಾಕಿದ್ದವು. ಜಾಗತಿಕ ಮಟ್ಟದಲ್ಲಿ ಶೇಕಡ 60 ರಷ್ಟು ಜನಸಂಖ್ಯೆ, ಶೇಕಡ 70 ರಷ್ಟು ರೈತರು, ಶೇಕಡ 26 ರಷ್ಟು ಕೃಷಿ ಉತ್ಪಾದನೆ ಹೊಂದಿದ್ದ ಅರ್ಜಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಇಟಲಿ, ಇಂಡೋನೇಷಿಯ, ಭಾರತ, ಜಪಾನ್, ಮೆಕ್ಸಿಕೊ, ರಷ್ಯಾ, ಸೌದಿ ಅರೆಬಿಯಾ, ದಕ್ಷಿಣ ಆಫ್ರಿಕಾ, ಮುಂತಾದ ರಾಷ್ಟ್ರಗಳು ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದವು. ಇದರಿಂದ ಕಿಂಚಿತ್ತೂ ಎಚ್ಚೆತ್ತುಕೊಳ್ಳದ ವಿಶ್ವ ವಾಣಿಜ್ಯ ಸಂಘಟನೆ ಹಾಗೂ ಅದರ ಅವಳಿಗಳಾದ ವಿಶ್ವಬ್ಯಾಂಕ್ ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆಗಳು ಎಂದಿನಂತೆ ತಮ್ಮ ಯೋಜನೆಗಳನ್ನು ಮುಂದುವರಿಸಿದ್ದವು. ಜಗತ್ತಿನ ಆರ್ಥಿಕ ಚಟುವಟಿಕೆಗಳು ಮತ್ತು ರಾಜಕೀಯ ಸೂತ್ರಗಳು ಅಮೆರಿಕದಲ್ಲಿ ಕೇಂದ್ರೀಕೃತವಾದುದರ ಫಲ ಈ ಬ್ರಿಕ್ಸ್ಬ್ಯಾಂಕ್ ಎಂದರೆ ತಪ್ಪಾಗಲಾರದು.
ವಿಶ್ವದ ಬಲಿಷ್ಟ ಆರ್ಥಿಕ ರಾಷ್ಟ್ರಗಳಾಗಿ ಹೊರಹೊಮ್ಮುತ್ತಿರುವ ಚೀನಾ, ಭಾರತ ಮತ್ತು ಬ್ರೆಜಿಲ್ ಈ ಬ್ಯಾಂಕಿನ ಸ್ಥಾಪನೆ ಹಿಂದೆ ನಿಂತಿರುವುದು ಅವೆಲ್ಲ ಸೇರಿದಂತೆ ಮುಂದುವರಿದ ರಾಷ್ಟ್ರಗಳ ನಿದ್ದೆ ಕೆಡಿಸಿದೆ. ಬ್ರಿಕ್ಸ್ ಸಮಾವೇಶದಲ್ಲಿ ಪ್ರಧಾನಿ ಮೋದಿಯವರು ಆಡಿದ ಮಾತನ್ನೂ ಸಹ ಬ್ರಿಕ್ಸ್ ರಾಷ್ಟ್ರಗಳು ಗಂಭೀರವಾಗಿ ಪರಿಗಣಿಸಬೇಕಿದೆ. ಜಾಗತಿಕ ಮಟ್ಟದಲ್ಲಿ ತಲೆ ಎತ್ತುತ್ತಿರುವ ಭಯೋತ್ಪಾದನೆ ಮತ್ತು ಅಂಥ ಸಂಘಟನೆಗಳಿಗೆ ಹಣ ಮತ್ತು ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿರುವ ರಾಷ್ಟ್ರಗಳ ಚಟುವಟಿಕೆಗಳನ್ನು ನಿಗ್ರಹಿಸದ ಹೊರತು ನಮ್ಮ ಗುರಿಯನ್ನು ತಲುಪಲು ಸಾಧ್ಯವಿಲ್ಲ ಎಂಬ ಅವರ ಮಾತು ಈ ಸಂದರ್ಭದಲ್ಲಿ ಪ್ರಸ್ತುತವಾಗಿದೆ. ಜಾಗತಿಕವಾಗಿ ಆಯಾ ಪ್ರಾದೇಶಿಕ ನೆಲೆಯಲ್ಲಿ ತಮ್ಮ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಉದ್ಭವಿಸುತ್ತಿರುವ ಇಂತಹ ಸಂಸ್ಥೆಗಳು ಏಕರೂಪದ ನೀತಿ ಮತ್ತು ಸರ್ವಾಧಿಕಾರದ ನಡವಳಿಕೆಗಳಿಗೆ ಕಡಿವಾಣ ಹಾಕಬಲ್ಲವು ಎಂದು ಕೆಲವು ಆರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿರುವುದರಿಂದ ಬ್ರಿಕ್ಸ್ ಬ್ಯಾಂಕಿನ ಚಟುವಟಿಕೆಯನ್ನು ಕುತೂಹಲದಿಂದ ಕಾಯುವಂತಾಗಿದೆ.
- ಡಾ. ಎನ್. ಜಗದೀಶ್ ಕೊಪ್ಪ
ಧಾರವಾಡ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


