ಅಂಕಣಗಳು

ಇಂದ್ರಿಯ ನಿಗ್ರಹ ಶಿಕ್ಷಣದ ಬೋಧ ಅಮೆರಿಕದಲ್ಲಿ ವಾದ-ವಿವಾದ!

ಇಂದ್ರಿಯ ನಿಗ್ರಹ ಶಿಕ್ಷಣದ ಬೋಧ ಅಮೆರಿಕದಲ್ಲಿ ವಾದ-ವಿವಾದ!
Published On :

ಭಾರತದಲ್ಲಿನ್ನೂ ಮಕ್ಕಳಿಗೆ ಲೈಂಗಿಕ ಶಿಕ್ಷಣ ಬೇಕೇ ಬೇಡವೇ ಎಂಬ ವಿಚಾರದ ಬಗ್ಗೆಯೇ ಚರ್ಚೆ ನಡೆಯುತ್ತಿದ್ದರೆ ಇತ್ತ ಅಮೆರಿಕದಲ್ಲಿ 'ಯಾವ ಮಾದರಿಯ ಲೈಂಗಿಕ ಶಿಕ್ಷಣ ಅಗತ್ಯ?' ಎಂಬ ಚರ್ಚೆ. ಆದರೆ ಇಲ್ಲಿಯೂ ಮತೀಯ ಶಕ್ತಿಗಳು ಸರ್ಕಾರದ ಮೇಲೆ ಒತ್ತಡ ತಂದು ಲೈಂಗಿಕ ಶಿಕ್ಷಣದಲ್ಲಿ ಕೆಲ ಮಾರ್ಪಾಟುಗಳನ್ನು ತರುವಲ್ಲಿ ಯಶಸ್ವಿಯಾಗಿವೆ. ದಿನ ಬೆಳಗಾದರೆ ತಂದೆ ತಾಯಂದಿರು ಪರಸ್ಪರ ಚುಂಬಿಸಿಕೊಳ್ಳುವ ದೃಶ್ಯ ವೀಕ್ಷಣೆಯಿಂದಲೇ ಆರಂಭವಾಗುತ್ತದೆ ಅಮೆರಿಕ ಮಕ್ಕಳ ದಿನ. ನೀಲಿಚಿತ್ರಗಳ ಬೃಹತ್ ಉದ್ಯಮವೇ ಇಲ್ಲಿದೆ. ಸೆಕ್ಸ್ ಟಾಯ್‌ಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಿ ಬಳಸುವ ಯುವಜನಾಂಗವಿದೆ. ಮಡದಿಯನ್ನು ತೊರೆದಿರುವ ಇಬ್ಬರು ಮಕ್ಕಳೊಂದಿಗೆ ಇರುವ ತಂದೆ, ಪತಿಯನ್ನು ತೊರೆದು ಒರ್ವ ಪುತ್ರನೊಂದಿಗೆ ಜೀವನ ನಡೆಸುತ್ತಿರುವ ಮಹಿಳೆಯನ್ನು ವಿವಾಹವಾಗುವುದು ಇಲ್ಲಿ ಸಾಮಾನ್ಯ. ಭಿನ್ನ ಶೈಲಿಯ ಬೆಳವಣೆಗೆಗಳನ್ನು ಕಾಣುತ್ತಿರುವ ಈ ದೇಶದಲ್ಲಿ ಸಹಜವಾಗಿಯೇ ಲೈಂಗಿಕ ಶಿಕ್ಷಣದ ಗುಣಮಟ್ಟ ಹೇಗಿರಬೇಕು ಮತ್ತು ಯಾವೆಲ್ಲ ವಿಷಯಗಳು ಅದರಲ್ಲಿ ಅಡಕವಾಗಿರಬೇಕು ಎಂದು ಸರ್ಕಾರ ಗಂಭೀರವಾದ ಚರ್ಚೆ ನಡೆಸಿದೆ. ಆದರೆ ಅಮೆರಿಕದ ಲೈಂಗಿಕ ವಿಚಾರಗಳು ಭಾರತಕ್ಕಿಂತಲೂ ವಿಭಿನ್ನ. ಇಲ್ಲಿ ಸಲಿಂಗಕಾಮಕ್ಕೆ ಉತ್ತೇಜನವಿದೆ, ಪ್ರಾಥಮಿಕ ಶಾಲೆಯ ಹಂತಕ್ಕೆ ಬರುವಷ್ಟರಲ್ಲೇ ಮಕ್ಕಳಿಗೆ ಲೈಂಗಿಕತೆಯ ಬಗ್ಗೆ ಅಲ್ಪಸ್ವಲ್ಪ ಅರಿವು ಮೂಡಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಈ ಮಕ್ಕಳಿಗೆ ವ್ಯಾಪಕ ವಿಚಾರಗಳನ್ನು ಹೊಂದಿರುವ ಲೈಂಗಿಕ ಶಿಕ್ಷಣದಲ್ಲಿ ಯಾವ ವಿಷಯವನ್ನು ಆಯ್ಕೆ ಮಾಡಿ ಬೋಧಿಸುವುದು ಸೂಕ್ತ ಎಂದು ಅರಿಯಲು ಅನೇಕ ಸಮೀಕ್ಷೆಗಳು ವರ್ಷಗಳಿಂದ ನಡೆದಿವೆ.
ಬಹುಮುಖ್ಯವಾಗಿ ಅಮೆರಿಕದಲ್ಲಿ 2 ಮಾದರಿ ಲೈಂಗಿಕ ಶಿಕ್ಷಣ ಜಾರಿಯಲ್ಲಿದೆ. ಮೊದಲನೆಯದು ಸಮಗ್ರ ಲೈಂಗಿಕ ಶಿಕ್ಷಣ ಕ್ರಮ. ಎರಡನೆಯದು ಇಂದ್ರಿಯ ನಿಗ್ರಹ ಲೈಂಗಿಕ ಶಿಕ್ಷಣ ಕ್ರಮ. ಈ ಎರಡೂ ವಿಧಾನದ ಕ್ರಮಗಳು ಲೈಂಗಿಕ ವಿಚಾರದಲ್ಲಿ ಭಿನ್ನ ದೃಷ್ಟಿಕೋನ ಹೊಂದಿವೆ. ಅನೇಕರು ಸಮಗ್ರ ಲೈಂಗಿಕ ಶಿಕ್ಷಣದ ಅಗತ್ಯವನ್ನು ಪ್ರತಿಪಾದಿಸಿದರೆ ಸಂಪ್ರದಾಯವಾದಿಗಳು ಇಂದ್ರಿಯ ನಿಗ್ರಹ ಶಿಕ್ಷಣವೇ ಧರ್ಮಕ್ಕನುಗುಣವಾಗಿದ್ದು ಇದೇ ಜಾರಿಯಲ್ಲಿರಲಿ ಎಂದು ವಾದಿಸುತ್ತಾರೆ.
ಸಾಮಾನ್ಯವಾಗಿ 7ನೇ ತರಗತಿಯಿಂದ 12ನೇ ತರಗತಿಯ ಅವಧಿಯಲ್ಲಿ ಅಮೆರಿಕ ಮಕ್ಕಳು ಲೈಂಗಿಕ ಶಿಕ್ಷಣ ಪಡೆಯುತ್ತಾರೆ. ಬಹಳಷ್ಟು ಶಾಲೆಗಳಲ್ಲಿ 4-5 ನೇ ತರಗತಿಯಿಂದಲೇ ಲೈಂಗಿಕ ಶಿಕ್ಷಣವನ್ನು ಪಠ್ಯದಲ್ಲಿ ಅಳವಡಿಸಲಾಗಿರುತ್ತದೆ. ಅಮೆರಿಕದ ನ್ಯಾಷನಲ್ ಸೆಕ್ಷುಯಾಲಿಟಿ ಎಜುಕೇಷನ್ ಸ್ಟಾಂಡರ್ಡ್ಸ್ ಪ್ರಕಾರ 5ನೇ ತರಗತಿಗೆಲ್ಲಾ ಬಾಲಕ/ಬಾಲಕಿಗೆ "ಲೈಂಗಿಕತೆ ಎಂಬುದು ದೈಹಿಕವಾಗಿ ಹಾಗೂ ಮಾನಸಿಕವಾಗಿ ಪ್ರಣಯದ ರೂಪದಲ್ಲಿ ಅದೇ ಲಿಂಗ ಅಥವಾ ವಿರುದ್ಧ ಲಿಂಗಿಗಳ ಜೊತೆ ನಡೆಸಬಹುದಾದ ಸಹಜ ಕ್ರಿಯೆ" ಎಂದು ತಿಳಿದಿರಬೇಕು ಎಂಬ ಸಲಹೆ ನೀಡಿದೆ. ಆದರೆ ಈ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ಜವಾಬ್ದಾರಿಯನ್ನು ಫೆಡರಲ್ ಗವರ್ನಮೆಂಟ್ ಆಯಾ ರಾಜ್ಯ ಸರ್ಕಾರಗಳಿಗೆ ಬಿಟ್ಟಿದೆ. ಇದೇ ವೇಳೆ ಆಯಾ ರಾಜ್ಯ ಸರ್ಕಾರಗಳು ಆಯಾ ಸ್ಕೂಲ್ ಜಿಲ್ಲಾವಾರು ಮಟ್ಟದಲ್ಲಿ ಅವರ ವ್ಯಾಪ್ತಿಗೆ ಬರುವ ಶಾಲೆಗಳಲ್ಲಿ ಲೈಂಗಿಕ ಶಿಕ್ಷಣದ ಬಗ್ಗೆ ಪಠ್ಯದಲ್ಲಿ ಏನಿರಬೇಕು ಎಂದು ತೀರ್ಮಾನಿಸಲು ಸ್ವಾತಂತ್ರ್ಯ ನೀಡಿದೆ. ಆದರೂ ಇತ್ತೀಚೆಗೆ ಅಮೆರಿಕ ಸರ್ಕಾರ ಲೈಂಗಿಕ ಶಿಕ್ಷಣದ ಬಗೆಗಿನ ಶಾಸನದಲ್ಲಿ ತಿದ್ದುಪಡಿ ತಂದಿದ್ದು ಮಕ್ಕಳಿಗೆ ಎಚ್‌ಐವಿ ಮತ್ತು ಲೈಂಗಿಕವಾಗಿ ಹರಡುವ ರೋಗಗಳ ಬಗ್ಗೆ ಕನಿಷ್ಠ ಅರಿವು ಮೂಡಿಸುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.
ಲೈಂಗಿಕ ವಿಚಾರದಲ್ಲಿ ಬಹುಬೇಗ ತಪ್ಪುದಾರಿಗಳನ್ನು ತುಳಿಯುವ ಅಮೆರಿಕದ ಯುವಜನಾಂಗ ನಾನಾ ಲೈಂಗಿಕ ರೋಗಗಳಿಗೆ ತುತ್ತಾಗಿದೆ. ಸೈಕಸ್(ಸೆಕ್ಸ್ ಇನ್‌ಫರ್ಮೇಷನ್ ಅಂಡ್ ಎಜುಕೇಷನ್ ಕೌನ್ಸಿಲ್ ಆಫ್ ದಿ ಯುನೈಟೆಡ್ ಸ್ಟೇಟ್ಸ್) ಕಳೆದ 50 ವರ್ಷಗಳಿಂದ ಅಮೆರಿಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಲೈಂಗಿಕ ವಿಚಾರಗಳ ಬಗ್ಗೆ ಅರಿವು ಮೂಡಿಸಿ, ಕಾಲಕಾಲಕ್ಕೆ ಆ ಬಗ್ಗೆ ಅಧ್ಯಯನ ನಡೆಸುತ್ತಿರುವ ಸಂಸ್ಥೆ. ಸೈಕಸ್ ಅತ್ಯಂತ ಅಪಾಯಕಾರಿ ಅಂಶವೊಂದನ್ನು ಬೆಳಕಿಗೆ ತಂದಿದೆ. ಇಂದ್ರಿಯ ನಿಗ್ರಹ ಲೈಂಗಿಕ ಶಿಕ್ಷಣ ಪಡೆದ ಯುವತಿಯರು ಸಣ್ಣ ವಯಸ್ಸಿನಲ್ಲೇ ಕನ್ಯತ್ವ ಉಳಿಸಿಕೊಳ್ಳುವ ಪ್ರತಿಜ್ಞೆ ಮಾಡಿ ಅಸಂಪ್ರದಾಯಿಕವಾದ ಲೈಂಗಿಕ ಕ್ರಿಯೆಯಲ್ಲಿ ತೊಡಗಿ ಹ್ಯೂಮನ್ ಪ್ಯಾಪಿಲೋಮ ವೈರಸ್ (ಎಚ್‌ಪಿವಿ) ಸೋಂಕಿಗೆ ಬಲಿಯಾಗುತ್ತಿದ್ದಾರೆ. ಇದು ದೇಹತ್ಯಾಜ್ಯ ವಿಸರ್ಜಿಸುವ ಭಾಗದಲ್ಲಿ ಕ್ಯಾನ್ಸರ್‌ಗೆ ಕಾರಣವಾಗುತ್ತಿದೆ. ಇನ್ನು ಅನೇಕ ಯುವಕರು ನೈಸರ್ಗಿಕ ಲೈಂಗಿಕ ಕ್ರಿಯೆಗೆ ಮುಂದಾದರೆ ಸೋಂಕು ಬರಬಹುದೆಂದು ಹೆದರಿ ಸೆಕ್ಸ್‌ಟಾಯ್ಸ್ ಬಳಸುತ್ತಿದ್ದಾರೆ. ಇದು ಸಹ ಹೆಚ್‌ಪಿವಿ ಸೋಂಕಿಗೆ ದಾರಿ ಮಾಡಿಕೊಟ್ಟು ಕ್ಯಾನ್ಸರ್‌ಗೆ ಆಹ್ವಾನ ನೀಡಿದಂತಾಗಿದೆ. ಇದಕ್ಕೆ ಕಾರಣ ಸರಿಯಾದ ಮಾಹಿತಿಯ ಕೊರತೆ.
'ಸಮಗ್ರ ಲೈಂಗಿಕ ಶಿಕ್ಷಣ ಕ್ರಮ' ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ. ಲೈಂಗಿಕ ಅರಿವು ಅಂದರೆ ಕೇವಲ ಸಂತಾನೋತ್ಪತ್ತಿಯ ಬಗೆಗಿನ ಮಾಹಿತಿ ಎಂದಷ್ಟೇ ಅಲ್ಲ. ಹದಿಹರೆಯದಲ್ಲಾಗುವ ಶಾರೀರಿಕ ಬೆಳವಣಿಗೆ, ಅದಕ್ಕೆ ತಕ್ಕ ಪೂರ್ವ ಸಿದ್ಧತೆ, ಯುವಕರಿಗೆ ಮತ್ತು ಯುವತಿಯರಿಗೆ ಅ ಬಗ್ಗೆ ಜಾಗೃತಿ, ಎಚ್‌ಐವಿ ವೈರಾಣು, ಲೈಂಗಿಕವಾಗಿ ಹರಡುವ ಸೋಂಕು, ಹರೆಯದಲ್ಲೇ ಗರ್ಭ ಧರಿಸಿದರೆ ಆಗಬಹುದಾದ ಪರಿಣಾಮಗಳು, ಸಮೀಪವರ್ತಿಗಳಿಂದ ಉಂಟಾಗಬಹುದಾದ ಕಾಮೋತ್ತೇಜನ, ಅದರಿಂದ ನಿಗ್ರಹಿಸಿಕೊಳ್ಳುವ ವಿಧಾನ, ಗರ್ಭನಿರೋಧಕಗಳ ಬಗ್ಗೆ ಮಾಹಿತಿ, ಲೈಂಗಿಕ ದೃಷ್ಟಿಕೋನ, ಲೈಂಗಿಕ ಕಿರುಕುಳ, ಗರ್ಭಪಾತದ ಬಗ್ಗೆ ವಾಸ್ತವಿಕ ಮತ್ತು ನೈತಿಕ ಮಾಹಿತಿ ಮುಂತಾದ ವಿಚಾರಗಳು 'ಸಮಗ್ರ ಲೈಂಗಿಕ ಶಿಕ್ಷಣ ಕ್ರಮ'ದಲ್ಲಿರುತ್ತವೆ. ಈ ವಿಷಯಗಳಲ್ಲಿ ಸೂಕ್ತವಾದದ್ದನ್ನು ಆಯಾ ಶಾಲೆಗಳು ಪಠ್ಯದಲ್ಲಿ ಅಳವಡಿಸಿಕೊಳ್ಳಬೇಕು.
ವಿಪರ್ಯಾಸ ಎಂದರೆ ನೂರರಲ್ಲಿ ಸುಮಾರು 40 ರಿಂದ 60 ಜನ ಪೋಷಕರು, 'ಸಮಗ್ರ ಲೈಂಗಿಕ ಶಿಕ್ಷಣ ಕ್ರಮ'ದ ಮೂಲಕ ಮಕ್ಕಳಿಗೆ ಲೈಂಗಿಕ ಅರಿವು ನೀಡುವುದಕ್ಕಿಂತಲೂ ಇಂದ್ರಿಯ ನಿಗ್ರಹ ಲೈಂಗಿಕ ಶಿಕ್ಷಣ ಕ್ರಮಕ್ಕೆ ಒಲವು ತೋರಿದ್ದಾರೆ. ಈ ಮಾಹಿತಿಯನ್ನು ವರ್ಷಗಳಿಂದ ಸರ್ವೇ ಮಾಡಿಸಿದ ನ್ಯಾಷನಲ್ ಸೆಕ್ಷುಯಾಲಿಟಿ ಎಜುಕೇಷನ್ ವರದಿ ಸರ್ಕಾರಕ್ಕೆ ನೀಡಿದೆ. ಲೈಂಗಿಕತೆಯ ಬಗ್ಗೆ ವ್ಯಾಪಕ ಅರಿವು ನೀಡಿ ಆ ಬಗ್ಗೆ ಇಲ್ಲದ ಆಸಕ್ತಿಯನ್ನು ಕೆರಳಿಸಿ, ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಮಾಡುವುದೂ ಅಲ್ಲದೇ ಅದರಿಂದಾಗುವ ಅಪಾಯಗಳನ್ನು ತಡೆಗಟ್ಟುವ ಉಪಾಯ ಹೇಳಿಕೊಡುವುದು ಎಷ್ಟು ಸರಿ ಎಂಬುದು ಪೋಷಕರ ಪ್ರಶ್ನೆ. ಅದರ ಬದಲಾಗಿ 'ಇಂದ್ರಿಯ ನಿಗ್ರಹ'ವೇ ಉತ್ತಮ ಎಂದಿದ್ದಾರೆ. ಸಮಗ್ರ ಲೈಂಗಿಕ ಶಿಕ್ಷಣ ಕ್ರಮದ ವಿರುದ್ಧ ಇರುವ ಕೆಲ ರಾಜಕೀಯ ಪಕ್ಷಗಳೂ ಪೋಷಕರ ಈ ಧ್ವನಿಗೆ ತಲೆಯಾಡಿಸಿವೆ. ನೋವಿನ ವಿಚಾರ ಎಂದರೆ ತಮ್ಮ ಮಕ್ಕಳನ್ನು ಸರಿದಾರಿಗೆ ತರುವ ಬದಲಿಗೆ ಶೇ.66 ಅಮೆರಿಕ ಪೋಷಕರು ಸಮಗ್ರ ಲೈಂಗಿಕ ಶಿಕ್ಷಣ ಕ್ರಮವು 'ವೇಟ್ ಫಾರ್ ಸೆಕ್ಸ್‌' ಎಂಬ ಸಂದೇಶಕ್ಕೆ ಅಂತ್ಯ ಬರೆದಿದೆ ಎಂದು ವ್ಯಾಖ್ಯಾನಿಸಿದ್ದಾರೆ.  
ಆದರೆ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಪರಿಣತರು ತುಂಬಾನೇ ಮುಂದುವರಿದು 'ಓರಲ್ ಸೆಕ್ಸ್ ಮತ್ತು ಭಾವನಾತ್ಮಕ ಕಾಳಜಿ' ಈ ಎರಡು ವಿಚಾರಗಳನ್ನೂ ಸಮಗ್ರ ಲೈಂಗಿಕ ಶಿಕ್ಷಣ ಕ್ರಮದಲ್ಲಿ ಅಳವಡಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಇವರ ಪ್ರಕಾರ, ಒಂದೊಮ್ಮೆ ಹರೆಯದ ಮನಸ್ಸುಗಳು ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಪರಸ್ಪರ ಹಂಬಲದಲ್ಲಿದ್ದಾಗ ಅವರಿಗೆ, ಆ ಬಗ್ಗೆ ಹೆಚ್ಚಿನ ಪಾಸಿಟಿವ್ ವಿಚಾರಗಳನ್ನು ಹೇಳಿಕೊಟ್ಟಲ್ಲಿ ನಿಸ್ಸಂಶಯವಾಗಿ ಕ್ರಿಯೆಯ ನಂತರ, ಭಾವನಾತ್ಮಕವಾಗಿಯೂ ಆ ಜೋಡಿ ಪರಸ್ಪರ ಇನ್ನಷ್ಟು ಹತ್ತಿರವಾಗಲು ಪ್ರೇರಣೆಯಾಗುತ್ತದೆ. ಆದೇ ಜೋಡಿ ಲೈಂಗಿಕ ವಿಚಾರಗಳನ್ನು ಅರ್ಧಂಬರ್ಧ ತಿಳಿದುಕೊಂಡಲ್ಲಿ, ಆತುರಾತುರವಾಗಿ ಆತಂಕದಲ್ಲಿ ಕ್ರಿಯೆಯಲ್ಲಿ ತೊಡಗಿಕೊಂಡು ಆ ನಂತರ ಅಪಾಯಕ್ಕೆ ಒಡ್ಡಿಕೊಂಡು ಭಯದಲ್ಲಿ ನರಳುವ ಸಾಧ್ಯತೆ ಹೆಚ್ಚು ಎಂದಿದ್ದಾರೆ.
 2004ರಲ್ಲಿ ನ್ಯಾಷನಲ್ ಪಬ್ಲಿಕ್ ರೇಡಿಯೋ ನಡೆಸಿದ ಸಮೀಕ್ಷೆಯಲ್ಲಿ 1001 ಜನ ಪೋಷಕರ ಗುಂಪು ಪಾಲ್ಗೊಂಡು, ಇವರಲ್ಲಿ ಶೇ.80 ಪೋಷಕರು ಶಾಲೆಯಲ್ಲಿ ಸಮಗ್ರ ಲೈಂಗಿಕ ಶಿಕ್ಷಣ ಕ್ರಮ ಬೇಕು. ಅದರಿಂದ ಮನೆಯಲ್ಲೂ ಹೇಳಿಕೊಡಲು ಸುಲಭ ಎಂದಿದ್ದಾರೆ. ಇವರಲ್ಲಿ ಶೇ.49 ಪೋಷಕರು ಶಾಲೆಯಲ್ಲಿ ಹೇಳಿಕೊಡುವ ಲೈಂಗಿಕ ಶಿಕ್ಷಣ, ಮನೆಯಲ್ಲಿ ಹೇಳಿ ಕೊಡುವುದಕ್ಕಿಂತ ಸ್ವಲ್ಪವಾದರೂ ಮೌಲ್ಯಯುತ ವಿಚಾರಗಳನ್ನು ಹೊಂದಿರುತ್ತೆ ಎಂದು ನಂಬಿದ್ದಾರೆ. ಆದರೆ 2010ರಲ್ಲಿ ಅಟ್ಲಾಂಟಾದ ಸೆಂಟರ್‌ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್) ಸರ್ಕಾರಕ್ಕೆ ವರದಿಯೊಂದನ್ನು ನೀಡಿತು. ವರದಿ ಪ್ರಕಾರ ಅಮೆರಿಕದ ಬಹುತೇಕ ಯುವ ಜನಾಂಗ ಲೈಂಗಿಕ ಶಿಕ್ಷಣದ ಮೂಲಭೂತ ವಿಚಾರವನ್ನು ಅರಿತಿದೆ. ಆದರೆ ಮೂರನೇ ಒಂದು ಭಾಗದಷ್ಟು ಯುವ ಜನಾಂಗ ಲೈಂಗಿಕತೆಗಿಂತಲೂ ಸಂತಾನ ತಡೆಯ ವಿಧಾನಗಳನ್ನು ಹೆಚ್ಚು ಅರಿತಿದ್ದಾರೆ. ಬಹುತೇಕರು  ಲೈಂಗಿಕ ಅರಿವಿನ ಪಠ್ಯದ ಬಗ್ಗೆ ನಿರಾಸಕ್ತಿ ತೋರಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದೆ. ಸಮಗ್ರ ಲೈಂಗಿಕ ಶಿಕ್ಷಣದ ಪಠ್ಯಕ್ರಮದ ಮುಖ್ಯ ಉದ್ದೇಶ ಯುವ ಮನಸ್ಸುಗಳಿಗೆ ಲೈಂಗಿಕತೆಯ ಬಗ್ಗೆ ಸರಿಯಾದ ಮಾಹಿತಿ ನೀಡಿ ಆ ಬಗ್ಗೆ ಅಸಕ್ತರಾದವರು ತಮ್ಮ ಆರೋಗ್ಯ ಮತ್ತು ಲೈಂಗಿಕ ವಿಚಾರದ ಬಗ್ಗೆ ತಾವೇ ಸ್ಪಷ್ಟ ನಿರ್ಣಯ ಕೈಗೊಳ್ಳಲಿ ಎಂಬುದಾಗಿದೆ.
ಇದೆಲ್ಲವೂ 'ಸಮಗ್ರ ಲೈಂಗಿಕ ಶಿಕ್ಷಣ ಕ್ರಮ'ದ ವಿಚಾರವಾದರೆ, ಇತ್ತ ಹಲವು ವರ್ಷಗಳವರೆಗೂ ಅಮೆರಿಕ ಸರ್ಕಾರ ಮತ್ತೊಂದು ಲೈಂಗಿಕ ಶಿಕ್ಷಣ ಪದ್ಧತಿಯಾದ ಇಂದ್ರಿಯ ನಿಗ್ರಹ ಲೈಂಗಿಕ ಶಿಕ್ಷಣದ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮಗಳಿಗೂ ಅನುದಾನ ನೀಡಿ ಪ್ರೋತ್ಸಾಹಿಸಿತ್ತು. ಇದಕ್ಕೆ ರಾಜಕೀಯ ಹಾಗೂ ಧರ್ಮದ ಒತ್ತಡವೂ ಕಾರಣವಾಗಿತ್ತು. ಆದರೆ ದಿ ಅಮೆರಿಕನ್ ಸೈಕಲಾಜಿಕಲ್ ಅಸೋಸಿಯೇಷನ್, ದಿ ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್, ದಿ ನ್ಯಾಷನಲ್ ಅಸೋಸಿಯೇಷನ್ ಆಫ್ ಸ್ಕೂಲ್ ಸೈಕಾಲಜಿಸ್ಟ್ಸ್, ಅಮೆರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್, ಅಮೆರಿಕನ್ ಪಬ್ಲಿಕ್ ಹೆಲ್ತ್ ಅಸೋಸಿಯೇಷನ್ ಹಾಗೂ ಸೊಸೈಟಿ ಫಾರ್ ಅಡೋಲಸೆಂಟ್ ಮೆಡಿಸಿನ್, ಅಮೆರಿಕನ್ ಕಾಲೇಜ್ ಹೆಲ್ತ್ ಅಸೋಸಿಯೆಷನ್ ಈ ಎಲ್ಲವೂ ಅಧಿಕೃತವಾಗಿ 'ಸಮಗ್ರ ಲೈಂಗಿಕ ಶಿಕ್ಷಣ ಕ್ರಮ'ವನ್ನೇ ಪಠ್ಯದಲ್ಲಿ ಅಳವಡಿಸಲು ಬೆಂಬಲ ನೀಡಿದವು. ಕಾರಣ ಇಂದ್ರಿಯ ನಿಗ್ರಹ ಲೈಂಗಿಕ ಶಿಕ್ಷಣ ಕ್ರಮದಲ್ಲಿ ಲೈಂಗಿಕ ರೋಗಗಳ ತಡೆ ಬಗ್ಗೆ ಮಾಹಿತಿ ಇಲ್ಲ, ಮದುವೆಯಾಗದೇ ಹೊರಗುಳಿದವರಿಗಾಗಿ ಯಾವುದೇ ವಿಚಾರಗಳ ಪ್ರಸ್ತಾಪವಿಲ್ಲ ಮತ್ತು ಅತಿಮುಖ್ಯವಾಗಿ ಹದಿಹರೆಯದಲ್ಲೇ ಗರ್ಭಧಾರಣೆಯಾದರೆ ಗರ್ಭಪಾತ ಮಾಡಿಸದಂತೆ ಭೀತಿ ಮೂಡಿಸಲಾಗಿದೆ. ಇದು ಇಲ್ಲಿ ತಲೆ ನೋವಾಗಿ ಪರಿಣಮಿಸಿದೆ. ಮದುವೆಗೆ ಮುಂಚೆ ಏನೂ ಮಾಡದಂತೆ ಹಾಗೆ ಉಳಿಯಿರಿ ಎನ್ನುತ್ತದೆ 'ಇಂದ್ರಿಯ ನಿಗ್ರಹ ಲೈಂಗಿಕ ಶಿಕ್ಷಣ ಕ್ರಮ. ಅದೆಂದಿಗೂ ಅಮೆರಿಕದಲ್ಲಿ ಸಲ್ಲದ ವಾಕ್ಯ.
ಈ ಎರಡನೇ ಕ್ರಮವನ್ನು ವಿರೋಧಿಸಿರುವ, ಹರೆಯದಲ್ಲಾಗುವ ಗರ್ಭಧಾರಣೆ ಮತ್ತು ಲೈಂಗಿಕ ಸೋಂಕಿನಿಂದಾಗುವ ರೋಗಗಳ ಬಗ್ಗೆ ಅಧ್ಯಯನ ನಡೆಸಿರುವ ಡಾ. ಡಾಗ್ಲಸ್ ಕಿರ್ಬಿ ಪ್ರಕಾರ ಲೈಂಗಿಕ ಶಿಕ್ಷಣ ನೀಡಿದ ಮಾತ್ರಕ್ಕೆ ಲೈಂಗಿಕ ಚಟುವಟಿಕೆಗಳು ಹೆಚ್ಚಾಗುವುದಿಲ್ಲ. ಅದನ್ನು ತಿಳಿದ ಮಾತ್ರಕ್ಕೆ ಅದೇ ಕ್ರಿಯೆಯಲ್ಲಿ ತೊಡಗಬೇಕೆಂಬ ತುಡಿತ ತಾವು ಅಧ್ಯಯನ ನಡೆಸಿದವರ್ಯಾರಲ್ಲೂ ಕಂಡುಬಂದಿಲ್ಲ ಮತ್ತು ಈ ವಿಚಾರ ತಿಳಿದ ನಂತರ ಹೊಸದಾಗಿ ಲೈಂಗಿಕ ಸಂಗಾತಿಗಳೂ ಹೆಚ್ಚಾಗಿಲ್ಲ ಎಂದಿದ್ದಾರೆ.
ಈ ಮಧ್ಯೆ ಲೈಂಗಿಕ ಶಿಕ್ಷಣ ಮತ್ತು ಲೈಂಗಿಕ ಸೋಂಕು ತಡೆಗಟ್ಟುವ ಬಗ್ಗೆ ವ್ಯಾಪಕವಾಗಿ ಅರಿವು ಮೂಡಿಸುತ್ತಿದ್ದ ಕೆಲ ಸಂಘಟನೆಗಳು ಮೊದಲ ಬಾರಿಗೆ ಒಟ್ಟಾಗಿ ಸೇರಿ ಫ್ಯೂಚರ್ ಆಫ್ ಸೆಕ್ಸ್ ಎಜುಕೇಷನ್ ಪ್ರಾಜೆಕ್ಟ್ ಆರಂಭಿಸಿದರು. ಆ ಮೂಲಕ ಲೈಂಗಿಕ ಶಿಕ್ಷಣದ ಭವಿಷ್ಯದ ಕುರಿತು ರಾಷ್ಟ್ರದ ಒಮ್ಮತದ ನುಡಿಯನ್ನು ಮತ್ತು ಎಲಿಮೆಂಟರಿ(ಪ್ರಾಥಮಿಕ) ಶಾಲೆಗಳಲ್ಲಿ ಈ ಬಗ್ಗೆ ಪ್ರಚಾರ ಪಡಿಸುವುದು ಈ ಯೋಜನೆ ಉದ್ದೇಶವಾಗಿತ್ತು. ಆದರೆ ಇದಕ್ಕೆ ಅಪಸ್ವರ ಎತ್ತಿದ ಸಂಪ್ರದಾಯವಾದಿಗಳು ಪ್ರಾಯದಲ್ಲಿರುವವರಿಗೆ ಆ ಬಗ್ಗೆ ಮತ್ತಷ್ಟು ಮಾಹಿತಿ ನೀಡಿದ್ರೆ ಹೇಗೆ ಎಂದು ಪ್ರಶ್ನೆಸಿದರು. ಚರ್ಚೆ ಏನೇ ಆದರೂ ಅಮೆರಿಕದ ಆರೊಗ್ಯ ಮತ್ತು ಮಾನವ ಸೇವಾ ಇಲಾಖೆಯ ಪ್ರಕಾರ 'ಯಾವ ಯುವಕ ಯುವತಿಯರೂ ಲೈಂಗಿಕ ಶಿಕ್ಷಣ ಪಡೆದಾಕ್ಷಣ ಆ ಕ್ರಿಯೆಗೆ ತೊಡಗುವುದಿಲ್ಲ. ಹಾಗೊಮ್ಮೆ ತೊಡಗಿದ್ದೇ ಆದರೆ ಅವರಿಗೆ ಆ ಬಗ್ಗೆ ಸರಿಯಾದ ಶಿಕ್ಷಣ ನೀಡಲಾಗಿಲ್ಲ' ಎಂದಿದೆ. ಲೈಂಗಿಕ ಶಿಕ್ಷಣ ನೀಡುವ ಮೂಲಕ ಯೌವನದ ಹೊಸ್ತಿಲಲ್ಲಿರುವವರಿಗೆ ಲೈಂಗಿಕ ಕ್ರಿಯೆ ನಡೆಸುವ ಕ್ರಮ, ಸ್ವಚ್ಛತೆ ಮತ್ತು ಅದರ ನಂತರದ ಪರಿಣಾಮಗಳನ್ನು ಹೇಳಿಕೊಡುವ ಅಗತ್ಯ ಇದೆ ಎಂದು ಇಲಾಖೆ ವರದಿ ನೀಡಿದೆ. ಜೊತೆಗೆ ಲೈಂಗಿಕತೆಯ ಅಜ್ಞಾನದಲ್ಲಿ ಆಗಬಹುದಾದ ಅನಾಹುತವನ್ನು ತಡೆಗಟ್ಟುವುದನ್ನು ಹೇಳಿಕೊಡುವುದೇ ಒಳಿತು ಎಂದು ಇದೇ ವರದಿಯಲ್ಲಿ ತಿಳಿಸಲಾಗಿದೆ. ಈ ಎಲ್ಲದರ ಜೊತೆಗೆ ಗರ್ಭನಿರೋಧಕಗಳ ಬಳಕೆಯ ಬಗ್ಗೆ ಸರಿಯಾದ ವಿಧಾನಗಳನ್ನೂ ತಿಳಿದಿರಲಿ ಎಂದು ಆಶಿಸಿದೆ.  
ಆದರೆ ಇಂದ್ರಿಯ ನಿಗ್ರಹ ಲೈಂಗಿಕ ಶಿಕ್ಷಣ ಅಮೆರಿಕದ ಶೇ. 33 ಶಾಲೆಗಳ ಮುಖ್ಯೋಪಾಧ್ಯಾಯರ ನೆಮ್ಮದಿ ಕೆಡಿಸಿದೆ. ಕ್ಯಾಥೊಲಿಕ್ ಧರ್ಮ ಪ್ರಾರ್ಥನಾ ಕೇಂದ್ರಗಳು ಈ ಎರಡನೇ ಮಾದರಿಯ ಲೈಂಗಿಕ ಶಿಕ್ಷಣವನ್ನೇ ಮಕ್ಕಳ ಪಠ್ಯವನ್ನಾಗಿ ಅಳವಡಿಸುವಂತೆ ಒತ್ತಡ ಹಾಕುತ್ತಿವೆ. ಲೈಂಗಿಕತೆ ಬಗ್ಗೆ ಯಾವುದೇ ಮಾಹಿತಿ ನೀಡದೇ ಕೇವಲ ಅಂಕುರಿಸುವ ಕಾಮವನ್ನು ನಿಗ್ರಹಿಸುವುದಷ್ಟೇ ಹೇಳಿಕೊಡಲಾಗುತ್ತದೆ ಈ ಪಠ್ಯದಲ್ಲಿ. ಇದೇ ಪದ್ಧತಿಯನ್ನು ಸಮರ್ಥಿಸಿಕೊಳ್ಳುವ ಸಂಪ್ರದಾಯವಾದಿಗಳು ವಿವಾಹ ಪೂರ್ವದಲ್ಲಿ ಲೈಂಗಿಕತೆಯ ಬಗ್ಗೆ ಅರಿಯುವುದು, ಗರ್ಭನಿರೋಧಕ ಬಳಕೆ, ವಿರುದ್ಧ ಲಿಂಗಿಗಳ ಸ್ಪರ್ಷ, ಲೈಂಗಿಕ ಕ್ರಿಯೆಯ ಕಲ್ಪನೆ, ಲೈಂಗಿಕ ಚಿತ್ರ ವೀಕ್ಷಣೆ, ಆ ಬಗ್ಗೆ ಮಾಹಿತಿ ನೀಡುವುದು ಇದ್ಯಾವುದೂ ಸಲ್ಲದು ಎಂದು ವಾದಿಸುತ್ತಾರೆ. ಇದಕ್ಕೆ ಪೂರವಾಗಿ ಕೆಲ ಕ್ರಿಶ್ಚಿಯನ್ ಸಂಘ ಸಂಸ್ಥೆಗಳು ಇಂದ್ರಿಯ ನಿಗ್ರಹ ಪದ್ಧತಿಯೊಂದೇ ಲೈಂಗಿಕ ಶಿಕ್ಷಣಕ್ಕೆ ಉತ್ತಮ ಪಠ್ಯ ಎಂದು ಪ್ರಚಾರ ಪಡಿಸುತ್ತಾ ಅದು ಲೈಂಗಿಕ ಶುದ್ಧತೆಯನ್ನೂ ಒಳಗೊಂಡಿದೆ ಎಂದು ನಂಬಿವೆ. ಈ ಪಠ್ಯಕ್ರಮವನ್ನು ಬೆಂಬಲಿಸುವ ಕೆಲವರು ಸಮಗ್ರ ಲೈಂಗಿಕ ಶಿಕ್ಷಣ ಕ್ರಮವನ್ನು ಒಪ್ಪುವುದಿಲ್ಲ. ಸಮಗ್ರ ಲೈಂಗಿಕ ಶಿಕ್ಷಣ ಅನೈತಿಕತೆ, ಅನಾಚಾರ ಮತ್ತು ಅಮಾನುಷ ಕೃತ್ಯಗಳಿಗೆ ಪ್ರೇರಣೆ ಎಂದು ಜರಿಯುತ್ತಾರೆ. ಆದರೆ ರಾಷ್ಟ್ರ ಮಟ್ಟದಲ್ಲಿ ಇಂದ್ರಿಯ ನಿಗ್ರಹ ಲೈಂಗಿಕ ಶಿಕ್ಷಣ ಪದ್ಧತಿ ಅಷ್ಟಾಗಿ ಯಶಸ್ಸು ಕಂಡಿಲ್ಲ. ಇದು ಯುವಜನತೆಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಆದರೂ ಕಳೆದ ದಶಕದಲ್ಲಿ ರಾಜಕೀಯ ಹಾಗೂ ಧರ್ಮದ ಒತ್ತಡಕ್ಕೆ ಸಿಲುಕಿ ಈ ಶಿಕ್ಷಣ ಕ್ರಮಕ್ಕೆ ಅಮೆರಿಕದಲ್ಲಿ ಹೆಚ್ಚು ಪ್ರಾಮುಖ್ಯ ದೊರೆತಿತ್ತು. ಸುಮಾರು 100 ಕೋಟಿ ಡಾಲರ್ ನೆರವನ್ನೂ ಸರ್ಕಾರ ಇದಕ್ಕಾಗಿ ನೀಡಿತ್ತು. ಇದರ ಪರಿಣಾಮ ಏನಾಯ್ತು? ಅದು ಪ್ರಶ್ನೆಯಾಗಿಯೇ ಉಳಿದಿದೆ. ಏನೇ ಅಪಸ್ವರಗಳಿದ್ದರೂ ಇದನ್ನೇ ಒಪ್ಪಿರುವ ಇಲ್ಲಿನ ಧರ್ಮಕೇಂದ್ರಗಳು 'ದಿ ಸಿಲ್ವರ್ ರಿಂಗ್ ಥಿಂಗ್‌' ಎಂಬ ಪ್ರಚಾರ ಕಾರ್ಯಕ್ರಮವನ್ನೂ ಹಮ್ಮಿಕೊಂಡಿದೆ. ಇದಕ್ಕೆ ಸರ್ಕಾರದಿಂದ ಧನ ಸಹಾಯವೂ ಲಭ್ಯ. ಹದಿಹರೆಯದ ಯುವಕ ಯುವತಿಯರು ಈ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿವಾಹ ಪೂರ್ವದಲ್ಲಿ ಯಾವುದೇ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದಿಲ್ಲ ಎಂದು ಪ್ರಮಾಣ ಮಾಡಿ 'ಪ್ಯೂರಿಟಿ' ಎಂದು ಬರೆಯಲಾದ ಬೆಳ್ಳಿ ಉಂಗುರವನ್ನು ಧರಿಸಬೇಕು. ಆ ಮೂಲಕ ಲೈಂಗಿಕ ಕ್ರಿಯೆಗೆ ಆಹ್ವಾನಿಸುವವರೂ ಆ ಉಂಗುರ ನೋಡಿ ಅವರಿಂದ ದೂರ ಸರಿಯಬೇಕು ಎಂಬುದು ಈ ಯೋಜನೆಯ ಉದ್ದೇಶ.
ಈ ಎಲ್ಲದರ ನಡುವೆ ಇನ್ನೂ ಅಮೆರಿಕದಲ್ಲಿ ಸಮಗ್ರ ಲೈಂಗಿಕ ಶಿಕ್ಷಣ ಕ್ರಮ ಹಾಗೂ ಇಂದ್ರಿಯ ನಿಗ್ರಹ ಲೈಂಗಿಕ ಶಿಕ್ಷಣ ಕ್ರಮ ಈ ಎರಡೂ ಪಠ್ಯಕ್ರಮಗಳ ಬಗ್ಗೆ ಅನೇಕ ವೇದಿಕೆಗಳಲ್ಲಿ ವಾದ ವಿವಾದಗಳು ನಡೆಯುತ್ತಲೇ ಇದೆ. ಪ್ರಸ್ತುತ ಒಂದು ಸಾವಿರದಲ್ಲಿ ಶೇ.93 ಟೀನೇಜ್ ಪ್ರೆಗ್ನೆಸ್ಸಿ ಇದೆ. ಇದು ಅಮೆರಿಕದಲ್ಲಿ ತುಸು ಸಮಾಧಾನಕರ ವಿಚಾರವಂತೆ! ಇದಕ್ಕೆ ತಮ್ಮ ಕ್ರಮವೇ ಸರಿ ಎಂದು ಇಂದ್ರಿಯ ನಿಗ್ರಹ ಲೈಂಗಿಕ ಶಿಕ್ಷಣ ಪರ ಇರುವವರು ವಾದಿಸಿದರೆ, ಗರ್ಭನಿರೋಧಕ ಬಳಕೆಯ ವಿಧಾನ ತಿಳಿಸಿದ್ದರಿಂದಲೇ ಅನೇಕ ಲೈಂಗಿಕ ಸಮಸ್ಯೆಗಳು ಹತೋಟಿಗೆ ಬಂದಿವೆ ಎನ್ನುತ್ತಾರೆ ಸಮಗ್ರ ಲೈಂಗಿಕ ಶಿಕ್ಷಣದ ಪರ ಇರುವವರು. ಆದರೂ ಅನೇಕ ವೈದ್ಯಕೀಯ ಸಂಸ್ಥೆಗಳು ಇಂದ್ರೀಯ ನಿಗ್ರಹ ಕ್ರಮವನ್ನು ವಿರೋಧಿಸಿದ್ದು ಸಮಗ್ರ ಲೈಂಗಿಕ ಶಿಕ್ಷಣದ ಅಗತ್ಯವನ್ನು ಪ್ರತಿಪಾದಿಸಿದ್ದಾರೆ. ಇಂದ್ರಿಯ ನಿಗ್ರಹದಿಂದ ಹದಿಹರೆಯದವರಲ್ಲಾಗುವ ವ್ಯಾಪಕ ದುಷ್ಪರಿಣಾಮದ ಬಗ್ಗೆ ಎಚ್ಚರಿಸಿದ್ದಾರೆ.
ಚರ್ಚೆ ಏನೇ ಆಗಲಿ. ಲೈಂಗಿಕ ಶಿಕ್ಷಣ ನೀಡಿ ಎಚ್‌ಐವಿ/ಏಡ್ಸ್‌ಬಗ್ಗೆ ಜಾಗೃತಿ ಮೂಡಿಸುವ ವಿಚಾರಗಳು ಮತ್ತು ಲೈಂಗಿಕವಾಗಿ ಹರಡುವ ರೋಗಗಳ ಬಗ್ಗೆ ಅರಿವು ಮೂಡಿಸುವ ಪಠ್ಯವನ್ನು ಪ್ರಾಥಮಿಕ ಶಾಲೆಗಳಲ್ಲಿ ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎಂದು ಇದೇ ತಿಂಗಳು ಅಮೆರಿಕದಲ್ಲಿ ನಡೆದ ರಾಜ್ಯಗಳ ಶಾಸಕಾಂಗದ ರಾಷ್ಟ್ರೀಯ ಸಮಾವೇಶದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಕರಾರುವಾಕ್ಕಾಗಿ ಲೈಂಗಿಕತೆಯ ಬಗ್ಗೆ ಮಾಹಿತಿ ನೀಡಲಾಗಿರುವ ಉತ್ತಮ ವೈದ್ಕಕೀಯ ನಿಪುಣರು ಬರೆದು ಪ್ರಕಟಣೆಗೊಂಡ ಲೇಖನಗಳಿಂದ ಪಠ್ಯವನ್ನು ಆಯ್ಕೆ ಮಾಡಿಕೊಳ್ಳಲು ಸೂಚಿಸಲಾಗಿದೆ. ಪಾಠ ಮಾಡಲು ಆಯ್ಕೆಯಾದ ಲೈಂಗಿಕ ವಿಚಾರ ಸ್ಥಳೀಯ ಆರೋಗ್ಯಾಧಿಕಾರಿಯಿಂದ ಅನುಮೋದನೆಗೊಂಡಿರಬೇಕು ಎಂದೂ ಸೂಚಿಸಲಾಗಿದೆ. ಡಾಲರ್ ಮುಂದೆ ರುಪಾಯಿ ಮೌಲ್ಯ ವೃದ್ಧಿಸುವುದೊಂದೇ ಅಲ್ಲ. ಭಾರತ ಸರ್ಕಾರ ಶಿಕ್ಷಣ ವ್ಯವಸ್ಥೆಯನ್ನೂ ಅಭಿವೃದ್ಧಿಗೊಳಿಸಿದರೆ ಉತ್ತಮ.

-ಅನಿಲ್ ಭಾರದ್ವಾಜ್
ಫೀನಿಕ್ಸ್ (ಅರಿಝೋನಾ)


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.