ಎಡವುತ್ತಿರುವ ಪೊಲೀಸ್ ಇಲಾಖೆಗೆ ಕಾಣಿಸದೇಕೆ ಡಾ. ಸಿಂಗ್ ತೋರಿಸಿದ ಹಾದಿ?

ರಾಜ್ಯ ಪೊಲೀಸ್ ಇಲಾಖೆಯ ಇತ್ತೀಚಿನ ವಿದ್ಯಮಾನಗಳು ಜನಸಾಮಾನ್ಯರ ಮನಸ್ಸನ್ನು ಅಸ್ವಸ್ಥಗೊಳಿಸಿವೆ. ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಬೇಕಾದ ಅಧಿಕಾರಿಗಳೇ ಪರಸ್ಪರ ಬೈದಾಟ-ಜಗಳದಲ್ಲಿ ತೊಡಗಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಈ ರೀತಿಯ ಹಾದಿರಂಪ ಬೀದಿರಂಪವಾಗುತ್ತಿರುವ ಸನ್ನಿವೇಶದಲ್ಲಿ ಪೊಲೀಸ್ ಇಲಾಖೆಯಲ್ಲಿ ಅತ್ಯಂತ ಹಿತಕರ ವಾತಾವರಣ ತರಲು ಪ್ರಾಮಾಣಿಕವಾಗಿ ಶ್ರಮಿಸಿದ ಅಧಿಕಾರಿಯೊಬ್ಬರನ್ನು ಪರಿಚಯಿಸುವುದು ಅತ್ಯಂತ ಅಗತ್ಯ.
2009. ನಾನಾಗ ತುಮಕೂರು ಜಿಲ್ಲೆಯ ಉಸ್ತುವಾರಿ ಸಚಿವನಾಗಿ ಕಾರ್ಯನಿರ್ವಹಿಸುತ್ತಿದ್ದೆ. ರಾಜ್ಯದಲ್ಲಿಯೇ ಒಂದು ವಿನೂತನವಾದ ಕಾರ್ಯಕ್ರಮವನ್ನು ಯೋಜಿಸುವ ಅವಕಾಶ ದೊರಕಿತು. ಜಿಲ್ಲೆಯ ಎಲ್ಲಾ ಅಧಿಕಾರಿಗಳಿಗೆ ಜಾಗೃತಿ ಉಂಟು ಮಾಡಲು ಒಂದು ಪುನರ್ಮನನ ಶಿಬಿರವನ್ನು ಹಮ್ಮಿಕೊಂಡೆವು. ಸುಮಾರು 110 ಮಂದಿ ಅಧಿಕಾರಿಗಳು ಈ ಶಿಬಿರದಲ್ಲಿ ಭಾಗವಹಿಸಿದ್ದರು.
ಆಡಳಿತದಲ್ಲಿ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಡುವಿನ ಆರೋಗ್ಯಕರ ಸಂಬಂಧ, ಆಡಳಿತದಲ್ಲಿ ವೃತ್ತಿ ಪರತೆ ಹಾಗೂ ಕ್ರಿಯಾಶೀಲತೆ, ಆಡಳಿತದಲ್ಲಿ ನೈತಿಕತೆ, ಆಡಳಿದಲ್ಲಿ ದೂರದರ್ಶಿತ್ವ ಮತ್ತು ಅಂತಃಕರಣ
ಈ ನಾಲ್ಕು ವಿಷಯಗಳ ಕುರಿತು ಶಿಬಿರದಲ್ಲಿ ಪರಿಣತರಿಂದ ಮಾಗದರ್ಶನ ದೊರಕಿಸುವ ವ್ಯವಸ್ಥೆ ಮಾಡಿದ್ದೆ.
ಆಡಳಿತದಲ್ಲಿ ಕ್ರಿಯಾಶೀಲತೆ ಹಾಗೂ ವೃತ್ತಿ ಪರತೆ- ಇಂದಿನ ಸರ್ಕಾರದ ನೌಕರ ಶಾಹಿಯಲ್ಲಿ ಅತ್ಯಂತ ಅಗತ್ಯವಾದ ಆದರೆ ತೀವ್ರ ಕೊರತೆಯಿಂದ ಇರುವ ಸಂಗತಿ, ವೃತ್ತಿ ಪರತೆ ಇರದಿರುವುದರಿಂದ ಅನೇಕ ಸಮಸ್ಯೆಗಳನ್ನು ನಾವು ಕಾಣುತ್ತಿದ್ದರೆ, ಕ್ರಿಯಾಶೀಲತೆ ಎಂದರೆ ಏನು ಎಂದು ಕೇಳುವವರೇ ಹೆಚ್ಚು. ಹೀಗೆ ಅತ್ಯಂತ ಅಗತ್ಯವಾದ ಆದರೆ ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಈ ಸಂಗತಿ ಕುರಿತು ಮಾತನಾಡಲು ಬಂದಿದ್ದವರು ಅಂದಿನ ರಾಜ್ಯದ ಪೋಲಿಸ್ ಮಹಾನಿರ್ದೇಶಕರು. ಬಹಳ ಸೊಗಸಾಗಿ ತಮ್ಮ ಜೀವನದ ಅನುಭವಗಳ ಮೂಲಕ ಶಿಬಿರದಲ್ಲಿ ಭಾಗಿಯಾದವರೆಲ್ಲರ ಮನಸ್ಸಿಗೆ ನಾಟುವಂತೆ, ಶಿಬಿರಾರ್ಥಿಗಳಿಗೆ ಕೆಲವು ಪ್ರಶ್ನೆಗಳನ್ನು ಹಾಕುವ ಮೂಲಕ ಆ ಅಧಿಕಾರಿ ತಮ್ಮ ಗೋಷ್ಟಿಯನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
ಅವರು ಕೇಳಿದ ಒಂದು ಪ್ರಶ್ನೆ ಮತ್ತು ಅದಕ್ಕೆ ಸಿಕ್ಕ ಉತ್ತರ ಬಹಳ ವಿಶಿಷ್ಟವಾದದ್ದು. ಈ ಶಿಬಿರದಲ್ಲಿ ಭಾಗಿಯಾಗಿರುವ ಅಧಿಕಾರಿಗಳಲ್ಲಿ ಎಷ್ಟು ಜನರಿಗೆ ದೇವರ ಅಸ್ತಿತ್ವದಲ್ಲಿ ವಿಶ್ವಾಸವಿದೆ ಎಂದು ಆ ಪೋಲಿಸ್ ಮಹಾನಿರ್ದೇಶಕರು ಕೇಳಿದಾಗ ಸಭೆಯಲ್ಲಿದ್ದ ಪ್ರತಿಯೊಬ್ಬರು ಕೈ ಎತ್ತಿದರು. ದೇವರು ಅಂದರೆ ಏನು? ಎಂಬ ಇನ್ನೊಂದು ಪ್ರಶ್ನೆಗೆ ದೇವರು ಸರ್ವಶಕ್ತ, ಸರ್ವಾಂತರ್ಯಾಮಿ ಎಂದೆಲ್ಲಾ ಉತ್ತರ ಬಂದಿತು. ಅದು ನಿಜವಾದರೆ ನಾವು ಮಾಡುವ ಎಲ್ಲಾ ಕಾರ್ಯಗಳು ಅವನಿಗೆ ತಿಳಿಯುತ್ತದೆ ಅಲ್ಲವೇ? ಎಂದು ಕೇಳಿದಾಗ ಅಲ್ಲಿದ್ದವರೆಲ್ಲ ಹೌದು ಎಂದರು. ಆಗ ಆ ಪೋಲಿಸ್ ಮಹಾನಿರ್ದೇಶಕರು 'ಹಾಗಾದರೆ ನಾವು ಅನ್ಯಾಯವಾಗಿ ಪಡೆಯುವ ಹಣವನ್ನು ಅರ್ಥಾತ್ ಲಂಚವನ್ನು ಟೇಬಲ್ ಮೇಲಿನಿಂದ ತೆಗೆದುಕೊಂಡರೂ ಅಥವಾ ಟೇಬಲ್ ಕೆಳಗಿನಿಂದ ತೆಗೆದುಕೊಂಡರೂ ಆ ದೇವರಿಗೆ ಖಂಡಿತವಾಗಿಯೂ ಗೊತ್ತಾಗುತ್ತದೆ ಅಲ್ಲವೇ?' ಎಂದಾಗ ಸಭೆಯಲ್ಲಿ ನೆಲದ ಮೇಲೆ ಸೂಜಿ ಬಿದ್ದರೂ ಜೋರಾಗಿ ಕೇಳುವಷ್ಟು ನಿಶ್ಶಬ್ದ ಆವರಿಸಿತು.
ಇದರಿಂದ ಜಿಲ್ಲೆಯಲ್ಲಿ ಭ್ರಷ್ಟಾಚಾರ ಸಂಪೂರ್ಣವಾಗಿ ನಿಂತುಹೋಯಿತು ಎಂದೇನೂ ನಾನು ಹೇಳುತ್ತಿಲ್ಲ. ಬದಲಿಗೆ ಜಿಲ್ಲೆಯ ಅಧಿಕಾರಿಗಳ ಅಂತಃಪ್ರಜ್ಞೆ ಬಡಿದೆಬ್ಬಿಸುವ ಪ್ರಾಮಾಣಿಕ ಪ್ರಯತ್ನ ಅದಾಗಿತ್ತು. ಈ ರೀತಿ ಅತ್ಯಂತ ಸರಳರೀತಿಯಲ್ಲಿ, ಎಲ್ಲರಿಗೂ ಅರ್ಥವಾಗುವಂತೆ ಅಧಿಕಾರಿಗಳ ಒಳ ಮನಸ್ಸುನ್ನು ಮುಟ್ಟಲು ಪ್ರಯತ್ನ ಪಟ್ಟವರು ನಮ್ಮ ರಾಜ್ಯ ಕಂಡ ಅತ್ಯಂತ ದಕ್ಷ ಪೋಲಿಸ್ ಅಧಿಕಾರಿಗಳಲ್ಲಿ ಒಬ್ಬರೆಂದು ಗುರುತಿಸಲ್ಪಟ್ಟಿರುವ ಡಾ. ಅಜಯ್ ಕುಮಾರ್ ಸಿಂಗ್. ದೂರದ ಉತ್ತರ ಪ್ರದೇಶದಲ್ಲಿ ಜನಿಸಿ 1974 ರಲ್ಲಿ ನಮ್ಮ ಕರ್ನಾಟಕಕ್ಕೆ ಐಪಿಎಸ್ ಅಧಿಕಾರಿಯಾಗಿ ಬಂದು ಸೇವೆ ಪ್ರಾರಂಭಿಸಿದ ಡಾ. ಸಿಂಗ್ ಒಳ್ಳೆಯ ಪೊಲೀಸ್ ಅಧಿಕಾರಿಯಾಗಿದ್ದಂತೆಯೇ, ಒಳ್ಳೆಯ ಕವಿಯೂ ಆಗಿದ್ದಾರೆ. ಸೇವೆಗೆ ಸೇರಿದ ಮೇಲೆ ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಹಿಂದಿ ಭಾಷೆಯಲ್ಲಿ ಸ್ನಾತಕೋತರ ಪದವಿ ಹಾಗೂ ಡಾಕ್ಟರೇಟ್ ಸಹ ಪಡೆದರು. ಅವರು ತಮ್ಮ ಡಾಕ್ಟರೇಟ್ಗೆ ಸಂಶೋಧನಾ ವಿಷಯವಾಗಿ ಆರಿಸಿಕೊಂಡದ್ದು '12ನೇ ಶತಮಾನದ ಸಂತಕವಿ ಅಲ್ಲಮಪ್ರಭು ಹಾಗೂ 16ನೇ ಶತಮಾನದ ಸಂತಕವಿ ಕಬೀರ್ರ ವಿಚಾರದ ಸಾಮ್ಯತೆ'. ಇದು ಈ ಪೋಲಿಸ್ ಅಧಿಕಾರಿಯ ಮನಸ್ಸು-ವಿಚಾರ ಯಾವ ರೀತಿಯದೆಂದು ತೋರಿಸುತ್ತದೆ.
2011 ರಂದು ಸೇವೆಯಿಂದ ನಿವೃತ್ತರಾದ ಡಾ. ಸಿಂಗ್ರವರು ತಮ್ಮ 37 ವರ್ಷದ ದೀರ್ಘಸೇವಾವಧಿಯಲ್ಲಿ ಅತ್ಯಂತ ವಿನೂತನವಾದ ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಬೆಂಗಳೂರಿನಲ್ಲಿ ದೊಡ್ಡ ಸಮಸ್ಯೆಯಾಗಿರುವ ವಾಹನ ಸಂಚಾರ ವ್ಯವಸ್ಥೆಯನ್ನು ನಿಯಂತ್ರಿಸುವ ಜವಾಬ್ದಾರಿ ಹೊತ್ತಿರುವ ಪೊಲೀಸ್ರ ಸಂಖ್ಯೆ ಅಗತ್ಯಕ್ಕಿಂತ ಕಡಿಮೆ ಇರುವುದನ್ನು ಗಮನಿಸಿದ ಡಾ. ಸಿಂಗ್ ನಾಗರಿಕ ಸ್ವಯಂ ಸೇವಕರನ್ನು ಒಳಗೊಂಡ ಟ್ರಾಫಿಕ್ ವಾರ್ಡ್ ಯೋಜನೆ ಪ್ರಾರಂಭಿಸಿದರು. ಆ ವ್ಯವಸ್ಥೆ ಇಂದಿಗೂ ಸಕ್ರಿಯವಾಗಿರುವುದನ್ನು ನಾವು ನಗರದ ವಿವಿಧೆಡೆ ಕಾಣಬಹುದು. ಮಹಿಳೆಯರಿಗೆ ಸಹಾಯವಾಣಿ, ಮಕ್ಕಳಿಗೆ ಸಹಾಯವಾಣಿ ಹಾಗೂ ಹಿರಿಯ ನಾಗರಿಕರ ಸಹಾಯವಾಣಿ ಇವರ ಕಾಲಾವಧಿಯಲ್ಲಿ ಮೂಡಿಬಂದ ಕಾರ್ಯಕ್ರಮಗಳು. ಇವುಗಳನ್ನು ಯಶಸ್ವಿಗೊಳಿಸಲು ಸುಮಾರು 30 ಸ್ವಯಂ ಸೇವಾ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿದರು. ಸ್ತ್ರೀ ಸಂವೇದನೆ ಹಾಗೂ ಮಕ್ಕಳ- ಮಹಿಳೆಯರ ರಕ್ಷಣೆ ಕುರಿತು, ಸಾಮಾನ್ಯ ಪೋಲಿಸ್ ಪೇದೆಯಿಂದ ಹಿಡಿದು ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿಗಳವರೆಗೂ ಸಂವೇದನಾ ಕಾರ್ಯಕ್ರಮಗಳನ್ನು ಯೋಜಿಸಿದರು. ಪೋಲಿಸ್ ಠಾಣೆಗಳಲ್ಲಿ ದೂರು ಸಲ್ಲಿಸಲು ಹೋದಾಗ ಪ್ರಥಮ ಮಾಹಿತಿ ವರದಿ ನೊಂದಾವಣೆ ಆಗುವುದರಲ್ಲಿ ವಿಳಂಬವಾಗುತ್ತಿದ್ದುದನ್ನು ಹಾಗೂ ನಾಗರಿಕರಿಗೆ ತೊಂದರೆಯಾಗುತ್ತಿದ್ದುದನ್ನು ಗಮನಿಸಿದ ಡಾ. ಸಿಂಗ್ ಒಂದು ಹೊಸ ವ್ಯವಸ್ಥೆಯನ್ನು ರೂಪಿಸಿ ಪ್ರಥಮ ಮಾಹಿತಿ ವರದಿಯ ಪ್ರತಿಯೊಂದನ್ನು ಫಿರ್ಯಾದುದಾರರಿಗೆ ನೀಡುವುದನ್ನು ಕಡ್ಡಾಯ ಮಾಡಿದರು. ಎಲ್ಲದ್ದಕ್ಕೂ ಮಿಗಿಲಾಗಿ ಅವರ ಅವಧಿಯಲ್ಲಿ ಅರ್ಹತೆ ಆಧಾರಿತವಾದ ಪೊಲೀಸ್ ಪೇದೆಗಳ ಹಾಗೂ ಪೊಲೀಸ್ ಸಬ್ ಇನ್ಸ್ಪೆಕ್ಟರ್ಗಳ ನೇಮಕಾತಿ ವ್ಯವಸ್ಥೆ ಅತ್ಯಂತ ಪಾರದರ್ಶಕ ರೀತಿಯಲ್ಲಿ ಜರುಗುವಂತೆ ಜಾರಿಗೆ ತಂದರು. ಇದರಿಂದ ನೇಮಕಾತಿ ವಿಷಯದಲ್ಲಿ ಭ್ರಷ್ಟಾಚಾರದ ಮೂಲಕ, ಶಿಫಾರಸುಗಳ ಕಾರಣಗಳಿಂದ ಉಂಟಾಗುತ್ತಿದ್ದ ಅನಾಹುತಗಳಿಗೆ ಇತಿಶ್ರೀ ಹಾಡಿದರು. ಎಲ್ಲರೂ ವಿಶ್ವಾಸವಿಡಬಹುದಾದ ಈ ವ್ಯವಸ್ಥೆಯನ್ನು ಬೇರೆ ರಾಜ್ಯಗಳು ಸಹ ಇಂದು ಅನುಸರಿಸುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿ.
ಬಸವ, ಅಲ್ಲಮಪ್ರಭು, ಸಂತ ಕಬೀರ... ಮುಂತಾದವರ ತತ್ವಗಳಿಗೆ ಸಂಪೂರ್ಣ ಶರಣಾಗಿರುವ ಡಾ. ಅಜಯ್ ಕುಮಾರ್ ಸಿಂಗ್ ತಮ್ಮ ವೃತ್ತಿಯಲ್ಲೂ ಆ ವಿಚಾರಗಳು ಪ್ರತಿಧ್ವನಿಸುವಂತೆ ಆಚರಣೆಗೆ ತಂದಿದ್ದಾರೆ. ಉದಾಹರಣೆಗೆ ಈ ಹಿನ್ನೆಲೆಯಲ್ಲಿ ಎರಡು ಬಾರಿ ತಮ್ಮ ಇಲಾಖೆಯ ಬೇರೆ ಅಧಿಕಾರಿಗಳಿಗೆ ಅವರು ಬರೆದಿರುವ ಪತ್ರಗಳು ಅತ್ಯಂತ ಮನೋಜ್ಞವಾಗಿವೆ. ತಮ್ಮ ವ್ಯಕ್ತಿತ್ವವನ್ನು ಪರಾಮರ್ಶೆ ಮಾಡಿಕೊಳ್ಳುವ ಹಿನ್ನೆಲೆಯಲ್ಲಿ ದಿನಾಂಕ 05-09-2008 ರಲ್ಲಿ ಬರೆದ ಪತ್ರವನ್ನು ಪ್ರಾಯಶಃ ಸರ್ಕಾರಿ ಇಲಾಖೆಯಲ್ಲಿರುವ ಯಾವುದೇ ಅಧಿಕಾರಿ ಕನಸಿನಲ್ಲಿಯೂ ಯೋಚಿಸಲು ಸಾಧ್ಯವಿಲ್ಲ. ಆ ಪತ್ರದ ಸಾರಾಂಶ ಹೀಗಿದೆ:
"ಆತ್ನೀಯ ಸ್ನೇಹಿತರೆ, ನಿಮ್ಮಿಂದ ಒಂದು ಸಹಾಯವನ್ನು ಬಯಸುತ್ತೇನೆ. ನಾನು ಕೆಲವೊಮ್ಮೆ ಸಿಟ್ಟನ್ನು ಪ್ರದರ್ಶಿಸಿದರೂ ಸಹ, ನನ್ನ ಎಲ್ಲಾ ದರ್ಜೆಯ ಸಹೋದ್ಯೋಗಿಗಳ, ಅದರಲ್ಲೂ ಕಿರಿಯ ಸಹೋದ್ಯೋಗಿಗಳ ಏಳಿಗೆಗಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ. ಸ್ನೇಹ ಮತ್ತು ನಂಬಿಕೆಯ ವಾತಾವರಣವನ್ನು ನಿರ್ಮಿಸುವುದು ನನ್ನ ಉತ್ಕಟ ಆಕಾಂಕ್ಷೆಯಾಗಿದೆ. ಅದೇನೆಂದರೆ, ಎಲ್ಲರಿಗೂ ಒಂದೇ ರೀತಿಯ ನಿಯಮಗಳನ್ನು ಅಳವಡಿಸಿ ಯಾವುದೇ ಪಕ್ಷಪಾತವಿಲ್ಲದೆ ನಿರ್ಧಾರಗಳನ್ನು ಕೈಗೊಳ್ಳಲು ಪ್ರಯತ್ನಿಸಿದ್ದೇನೆ. ವೃತ್ತಿಪರ ಕೌಶಲ್ಯವನ್ನು ಹೆಚ್ಚಿಸಿ ನಮ್ಮ ಸಂಸ್ಥೆಯ ಮೇಲೆ ಜನರು ನಂಬಿಕೆಯಿಡುವಂತೆ ಹಾಗೂ ಪ್ರೀತಿಸುವಂತೆ ಮಾಡುವುದೇ ನನ್ನ ಉತ್ಕಟೇಚ್ಛೆಯಾಗಿದೆ. ನಾವೆಲ್ಲರೂ ಈ ಗುರಿಯನ್ನು ಮುಟ್ಟಲು ಒಂದು ಒಳ್ಳೆಯ ತಂಡವಾಗಿ ಉತ್ಸುಕತೆಯಿಂದ ಕಾರ್ಯನಿರ್ವಹಿಸಿ ಹಾಗೂ ತಂಡದ ಎಲ್ಲಾ ಸದಸ್ಯರು ಅವರ ಪಾಲಿನ ಕರ್ತವ್ಯವನ್ನು ನೈಪುಣ್ಯತೆಯಿಂದ ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸಿದರೆ ಮಾತ್ರ ಇದನ್ನು ಸಾಧಿಸಬಹುದಾಗಿದೆ.
ಈ ನಿಟ್ಟಿನಲ್ಲಿ ನನ್ನ ಪಾತ್ರವನ್ನು ಸಮರ್ಪಕವಾಗಿ ನಿರ್ವಹಿಸಲು ನಿಮ್ಮ ಸಹಾಯ ನನಗೆ ಬೇಕಾಗಿದೆ. ನಿಮ್ಮ ದೃಷ್ಟಿಯಲ್ಲಿ ನನ್ನ ವ್ಯಕ್ತಿತ್ವ ಅಥವಾ ಕಾರ್ಯವೈಖರಿಯಲ್ಲಿರುವ ಮೂರು ಮುಖ್ಯ ನಕಾರಾತ್ಮಕ ಗುಣಲಕ್ಷಣಗಳಾವುವು? ನನ್ನ ವ್ಯಕ್ತಿತ್ವ ಅಥವಾ ಕಾರ್ಯವೈಖರಿಯಲ್ಲಿರುವ ಒಂದು ಸಕಾರಾತ್ಮಕ ಗುಣವನ್ನು ಗುರುತಿಸಬಲ್ಲಿರಾ?
ನಿಮ್ಮ ಉತ್ತರದಲ್ಲಿ ನಿಮ್ಮ ಹೆಸರನ್ನು ಬರೆಯುವ ಅಗತ್ಯವಿಲ್ಲ. ನೀವು ಅನಿರ್ಬಂಧಿತ, ಪ್ರಾಮಾಣಿಕ ಸಲಹೆಯನ್ನು ನೀಡಿದರೆ ನಾನು ನಿಮಗೆ ಆಭಾರಿಯಾಗಿರುತ್ತೇನೆ. ನಿಮ್ಮ ಉತ್ತರವನ್ನು ನನ್ನ ಹೆಸರಿನ ವಿಳಾಸಕ್ಕೆ, ಕನ್ನಡದಲ್ಲಿ ಅಥವಾ ಆಂಗ್ಲ ಭಾಷೆಯಲ್ಲಿ ಬರೆದು ಕಳುಹಿಸಬಹುದಾಗಿದೆ."
ಈ ರೀತಿ ತನ್ನಲ್ಲಿ ಇರಬಹುದಾದ, ಆದರೆ ತನಗೆ ಗೊತ್ತಿಲ್ಲದ ಕೊರತೆಯನ್ನು ತಿಳಿದುಕೊಂಡು ತನ್ನನ್ನು ತಾನು ಸರಿಪಡಿಸಿಕೊಳ್ಳುವ ಪ್ರಯತ್ನ ಅತ್ಯಂತ ಸ್ತುತ್ಯಾರ್ಹ.
ಪೋಲಿಸ್ ಮಹಾನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ ನಂತರ 01-02-2009 ಡಾ. ಸಿಂಗ್ರವರು ಪತ್ರವೊಂದನ್ನು ಬರೆದು ಆ ಪತ್ರದ ಪ್ರತಿಗಳನ್ನು ಎಲ್ಲಾ ಪೋಲಿಸ್ ಠಾಣೆಗಳವರು, ವೃತ್ತ ನಿರೀಕ್ಷಕರು, ಪೊಲೀಸ್ ಉಪಾಧೀಕ್ಷರು, ಜಿಲ್ಲಾ ಪೊಲೀಸ್ ಅಧೀಕ್ಷಕರುಗಳು, ವಲಯ ಪೊಲೀಸ್ ಮಹಾನಿರೀಕ್ಷಕರುಗಳು ಹಾಗೂ ಪೊಲೀಸ್ ಆಯುಕ್ತರುಗಳು ತಮ್ಮ ತಮ್ಮ ಕಚೇರಿಯ ಸೂಚನಾ ಫಲಕಗಳಲ್ಲಿ ಹಾಕಬೇಕೆಂದು ಸೂಚಿಸಿದ್ದರು. ಮತ್ತು ಈ ಪತ್ರದ ವಿಷಯಗಳ ಕುರಿತು ಪೆರೇಡ್ಗಳಲ್ಲಿ ಮತ್ತು ಪೋಲಿಸ್ ರೋಲ್ಕಾಲ್ ಸಮಯದಲ್ಲಿ ಎಲ್ಲಾ ಸಿಬ್ಬಂದಿವರ್ಗದವರಿಗೆ ಮಾಹಿತಿ ನೀಡಬೇಕೆಂದು ಸೂಚಿಸಿದ್ದರು. ಆ ಪತ್ರದ ಸಾರಾಂಶ ಈ ಕೆಳಗಿನಂತಿದೆ.
"ಶಾಶ್ವತವಾದ ಉತ್ತಮ ಗುಣಮಟ್ಟದ ಪೋಲಿಸ್ ಸೇವೆಯನ್ನು ಕರ್ನಾಟಕದ ಜನತೆಗೆ ನೀಡಬೇಕಾದರೆ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ. ನಮ್ಮ ಇಲಾಖೆಯಲ್ಲಿ ನಂಬಿಕೆಯ ಮತ್ತು ಸ್ನೇಹಮಯ ವಾತಾವರಣವನ್ನು ಕಲ್ಪಿಸಲು ನಾನು ಶಕ್ತಿ ಮೀರಿ ಪ್ರಯತ್ನಿಸುವೆ. ನಾವೆಲ್ಲರೂ ಒಟ್ಟಾಗಿ ನಮ್ಮ ವೃತ್ತಿಪರತೆಯನ್ನು ಹೆಚ್ಚಿಸಬೇಕಾಗಿದೆ. ವೃತ್ತಿಪರ ಕೆಲಸಗಳಿಂದ ಮಾತ್ರ ಜನತೆಯ ನಂಬಿಕೆ, ಪ್ರೀತಿ ಹಾಗೂ ವಿಶ್ವಾಸಗಳನ್ನು ಗೆಲ್ಲಲು ಸಾಧ್ಯ. ಈ ನಿಟ್ಟಿನಲ್ಲಿ ನಾನು ನಿಮ್ಮ ಸಹಾಯವನ್ನು ಕೋರುತ್ತೇನೆ.
ನೊಂದವರಿಗೆ ನೆರವು ಎನ್ನುವುದೇ ನಮ್ಮ ಧ್ಯೇಯವಾಕ್ಯವಾಗಿರಬೇಕು. ನಮ್ಮ ಎಲ್ಲಾ ವೃತ್ತಿಪರ ಚಟುಚಟಿಕೆಗಳಿಗೆ ಇದೇ ಮಾನದಂಡವಾಗಲಿ ಮತ್ತು ನಮ್ಮ ಧಾಟಿಯು 'ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿ' ಎನ್ನುವಂತಿರಲಿ. ಯಾರು ಕಾನೂನು ಭಂಗವುಂಟು ಮಾಡುತ್ತಾರೋ, ಯಾರು ಅಪರಾಧವೆಸಗುತ್ತಾರೋ ಅವರ ಮೇಲೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು. ಯಾವುದೇ ರೀತಿಯ ಪ್ರಭಾವವೂ ಅವರನ್ನು ಕಾನೂನಿನ ಹಿಡಿತದಿಂದ ರಕ್ಷಿಸಲು ಸಾಧ್ಯವಾಗಬಾರದು.
ನಾವು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಲೆಂದೇ ಎಲ್ಲಾ ಅಧಿಕಾರವನ್ನು ನಮಗೆ ಕೊಡಲಾಗಿದೆಯೇ ಹೊರತು ಬೇರೆ ಉದ್ದೇಶಕ್ಕಾಗಿ ಅಲ್ಲ. ಭ್ರಷ್ಟ ಕಾರ್ಯಗಳಲ್ಲಿ ತೊಡಗಿದವರಿಗೆ, ಜನರನ್ನು ಶೋಷಿಸುವವರಿಗೆ ಮತ್ತು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಒಳ್ಳೆಯ ಹೆಸರಿಗೆ ಕಳಂಕ ತರುವವರಿಗೆ ಯಾವ ರೀತಿಯ ಬೆಂಬಲವೂ ದೊರೆಯುವುದಿಲ್ಲ.
ಇದು ಯಾವುದೇ ಒಬ್ಬ ವ್ಯಕ್ತಿ/ಅಧಿಕಾರಿ ತನ್ನ ಅಂತಃಸಾಕ್ಷಿ ಕರೆಯಂತೆ ಕಾರ್ಯಮಾಡಿದಾಗ ಕೈಗೊಳ್ಳಬಹುದಾದ, ಅಳವಡಿಸಬಹುದಾದ ಉತ್ತಮ ಸಂಗತಿ. ವಿಶೇಷವಾಗಿ ದುಷ್ಟರಿಗೆ ದುಸ್ವಪ್ನವಾಗಿ, ಶಿಷ್ಟರಿಗೆ ಸ್ನೇಹಿತನಂತೆ ಇರಬೇಕಾದ ಪೊಲೀಸ್ ಇಲಾಖೆಯ ಕುರಿತು ಇತ್ತೀಚೆಗೆ ಕೆಟ್ಟಸುದ್ದಿಗಳೇ ಮಾಧ್ಯಮಗಳಲ್ಲಿ ರಾರಾಜಿಸುತ್ತಿರುವಾಗ, ಇದೇ ಪೊಲೀಸ್ ಇಲಾಖೆಯಲ್ಲಿ ಡಾ. ಅಜಯ್ ಕುಮಾರ್ ಸಿಂಗ್ ಅವರಂತಹ ದಕ್ಷ ಹಾಗೂ ಅಂತಃಕರಣವುಳ್ಳ ಪೊಲೀಸ್ ಅಧಿಕಾರಿ ತಮ್ಮ ಕ್ರಿಯಾಶೀಲತೆಯ ಮೂಲಕ ಯಾವ ರೀತಿ ಮೇಲ್ಪಂಕ್ತಿಯ ಉತ್ತಮ ಉದಾಹರಣೆಯಾಗಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಕವಿ ಹೃದಯದಿಂದ ಕೂಡಿ ಆಡಳಿತದಲ್ಲಿ ದಕ್ಷತೆ ತಂದುಕೊಟ್ಟ ಅಜಯ್ ಕುಮಾರ್ ಸಿಂಗ್ ನಮ್ಮ ಕರ್ನಾಟಕದಲ್ಲಿ ಸೇವೆ ಸಲ್ಲಿಸಿರುವುದು ನಾಡಿಗೆ ಹೆಮ್ಮೆ. ಯುವ ಪೋಲಿಸ್ ಅಧಿಕಾರಿಗಳಿಗೆ ಮಾದರಿ.
-ಎಸ್. ಸುರೇಶ್ ಕುಮಾರ್, ಮಾಜಿ ಸಚಿವರು
nimmasuresh.2009@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


