

'ಹರ ಕೊಲ್ಲಲ್ ಪರ ಕಾಯ್ವನೇ..?', 'ಕಾನೂನು ರಕ್ಷಕರೇ ಕಾನೂನು ಭಕ್ಷಕರಾದರೇ?' ಎಂಬ ಪ್ರಶ್ನಾರ್ಥಕ ಮಾತುಗಳಿವೆ. ಅಂದರೆ ಯಾರು ಏನನ್ನು ಮಾಡಬಾರದೋ ಅವರೇ ಅದನ್ನು ಮಾಡಿದರೆ ಗತಿ ಏನು ಎಂಬುದು ಈ ಮಾತುಗಳ ಅರ್ಥ. ಬೆಂಗಳೂರು, ಕರ್ನಾಟಕ ದಾಟಿ ದೇಶ-ವಿದೇಶಗಳಲ್ಲೂ ರಾಜ್ಯ ಪೊಲೀಸ್ ಇಲಾಖೆ ಮರ್ಯಾದೆ ಹರಾಜು ಹಾಕಿರುವ ರಾಜ್ಯದ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳ ನಡುವಣ ವೈಯಕ್ತಿಕ ದ್ವೇಷಾಸೂಯೆ, ವೃತ್ತಿ ವೈಷಮ್ಯಪೂರಿತ ಕದನ ಈ ಮಾತುಗಳ ಯಥಾರ್ಥವನ್ನು ಸಾಕ್ಷಾತ್ಕರಿಸಿದೆ.
ಮೊಬೈಲ್ ಪೋನ್ನಲ್ಲಿ ಯುವತಿಯೊಬ್ಬಳ ಫೋಟೋ ತೆಗೆದ ಆರೋಪಕ್ಕೆ ಗುರಿಯಾಗಿರುವ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಎಡಿಜಿಪಿ) ರವೀಂದ್ರನಾಥ್ ಮತ್ತು ಬೆಂಗಳೂರು ಪೊಲೀಸ್ ಕಮೀಷನರ್ ರಾಘವೇಂದ್ರ ಔರಾದ್ಕರ್ ನಡುವಣ ಜಗಳ ದಿನಕ್ಕೊಂದು ತಿರುವು ಪಡೆಯುತ್ತಾ, ಜನರಿಗೆ ಪುಕ್ಕಟೆ ಮನರಂಜನೆ ಒದಗಿಸುವುದರ ಜತೆಗೆ ಇಡೀ ಪೊಲೀಸ್ ಇಲಾಖೆಯೇ ತಲೆ ತಗ್ಗಿಸುವಂತೆ ಮಾಡಿದೆ.
ಹೌದು. ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಕಾಫಿ ಶಾಪ್ದೇ ಗದ್ದಲ. ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಕಾಫೀ ಶಾಪ್ ಒಂದರಲ್ಲಿ ಆರಂಭವಾದ ಈ ಗದ್ದಲ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಿಂದ, ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಗೆ ಲಗ್ಗೆ ಇಟ್ಟು, ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಬೊಬ್ಬೆ ಇಟ್ಟು, ಕೆಎಸ್ಆರ್ಪಿ ಸಿಬ್ಬಂದಿಯನ್ನ ಬೀದಿಗೆ ಬಿಟ್ಟು, ಗೃಹ ಸಚಿವರ ನಿದ್ದೆಗೆಡಿಸಿ, ಸಿಎಂ ಸಿದ್ದರಾಮಯ್ಯ ಅವರಿಂದ ಮತ್ತದೇ ಉಡಾಫೆ ವರ್ತನೆಯನ್ನು ಪ್ರದರ್ಶಿಸಿ, ಸಾರ್ವಜನಿಕವಾಗಿ ಜಾತಿ ಸ್ವರೂಪ ಪಡೆದು, ಭೂತಾಕಾರವಾಗಿ ಬೆಳೆದುನಿಂತಿದೆ. ಆದರೆ ಇಷ್ಟೆಲ್ಲಾ ಘಟನೆ ನಡೆದರೂ ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಕೆ.ಜೆ. ಜಾರ್ಜ್ ಅವರು ಈ ಪ್ರಕರಣಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ, ವೈಫಲ್ಯದ ಮಾತಿಲ್ಲ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಜನ ಸಾಮಾನ್ಯರ ದೃಷ್ಟಿಯಲ್ಲಿ ಮಾತ್ರ ಸರ್ಕಾರ ಕಳೆದೊಂದು ವಾರದಿಂದ ಬೆತ್ತಲಾಗುತ್ತಲೇ ಇದೆ. 'ಏನ್ರೀ ಆ ಸಿದ್ದರಾಮಯ್ಯ ಸ್ಟ್ರಿಕ್ಟ್ ಆಡಳಿತಗಾರ ಅಂತಾರೆ, ಆದರೆ ಬೀದಿಯಲ್ಲಿ ಜಗಳ ಮಾಡುವ ಇದ್ಯಾವುದೋ ಎರಡು ಅಧಿಕಾರಿಗಳನ್ನು ಕರೆದು, ಉಗಿದು ಬುದ್ಧಿ ಹೇಳುವುದಕ್ಕಾಗೋದಿಲ್ವೇನ್ರೀ? ಒಂದಿಬ್ರು ಅಧಿಕಾರಿಗಳನ್ನು ಮಾತು ಕೇಳಿಸುವುದಕ್ಕೂ ಆಗೋದಿಲ್ಲ!" ಎಂದು ಖಾರವಾಗಿ ಮಾತನಾಡುತ್ತಿದ್ದಾರೆ. ಆದರೆ ಅದ್ಯಾಕೋ ಗೊತ್ತಿಲ್ಲ, ಸಿಎಂ, ಹೋಮು ಇಬ್ರೂ ಇದು ನಮಗ್ಯಾರಿಗೂ ಸಂಬಂಧವಿಲ್ಲ, ಊರಲ್ಲಿ ಇರೋರಿಗೆಲ್ಲ ನಮ್ಮನ್ನು ಕಂಡ್ರೆ ಹೊಟ್ಟೆ ಉರಿ. ಅದಕ್ಕೆ ಚಿಕ್ಕಪುಟ್ಟದ್ದನ್ನೆಲ್ಲ ದೊಡ್ಡದು ಮಾಡ್ತಾರೆ. ಉಗುರಲ್ಲಿ ಹೋಗೋದನ್ನು ಕೊಡಲೀಲಿ ತೆಗೀತಾರೆ ಎಂದು ತಮ್ಮ ಪಾಡಿಗೆ ತಾವಿದ್ದಾರೆ. ಆದರೆ ಪ್ರಕರಣಕ್ಕೆ ಜಾತಿಯ ಬಣ್ಣ ಲೇಪವಾಗುತ್ತಿದ್ದಂತೆ ಸಿದ್ದರಾಮಯ್ಯ ಕೊನೆಗೂ ಎಚ್ಚೆತ್ತುಕೊಂಡಂತೆ ಕಾಣುತ್ತಿದೆ. ಹೀಗಾಗಿ ತೆರೆಮರೆಯಲ್ಲಿ ಏನೇನೋ ಪ್ರಯತ್ನ ಶುರುವಿಟ್ಟುಕೊಂಡಿದ್ದಾರೆ. ಆದರೆ ಹರಾಜಾದ ಪೊಲೀಸ್ ಇಲಾಖೆಯ ಗೌರವ?
ಊಹುಂ, ಯಾರಿಂದಲೂ ರಿಪೇರಿ ಮಾಡಲು ಸಾಧ್ಯವಿಲ್ಲ. ಅಷ್ಟಕ್ಕೂ ಮಾನ ಎಂಬುದು ಜೀವಕ್ಕಿಂತಲೂ ಶ್ರೇಷ್ಠ. ಮಾನ ಮುಕ್ಕಾದಾಗ, ಜೀವ ಹಾನಿಯಾದಾಗ ಹಳೆ ಮೈಸೂರು ಭಾಗದಲ್ಲಿ 'ಎಲ್ಲ ಮಣ್ಣಾಗೋಯ್ತು" ಎಂದೇ ಕಣ್ಣೀರು ಹಾಕುತ್ತಾರೆ. ಈ ಪ್ರಕರಣದಲ್ಲೂ ಹಾಗೇ ಆಗಿದೆ. ಸರ್ಕಾರಕ್ಕಾಗಲೀ, ಗದ್ದಲಕ್ಕೆ ಬಿದ್ದಿರುವ ಹಿರಿಯ ಅಧಿಕಾರಿಗಳ ದೃಷ್ಟಿಯಲ್ಲಿ ಇದೊಂದು ಸಾಮಾನ್ಯ ಪ್ರಕರಣ ಉಗುರಲ್ಲಿ ಹೋಗುವಂಥದ್ದು. ಆದರೆ ಶಿಸ್ತಿನ ದಳ(ಡಿಸಿಪ್ಲೀನ್ಡ್ ಫೋರ್ಸ್) ಎಂಬ ಪೊಲೀಸ್ ಇಲಾಖೆಯ ಪಾಲಿಗಂತೂ ಸಣ್ಣದಲ್ಲವೇ ಅಲ್ಲ. ಈ ಪ್ರಹಸನ ಆರಂಭವಾಗುವುದು ಕಾಫಿ ಶಾಪ್ನಲ್ಲಿ. ಡಾ.ಪಿ. ರವೀಂದ್ರನಾಥ್ ಯುವತಿಯೊಬ್ಬರ ಫೋಟೋವನ್ನು ಆಕ್ಷೇಪಾರ್ಹ ರೀತಿಯಲ್ಲಿ ತೆಗೆದರು ಎಂಬಲ್ಲಿಂದ ರವೀಂದ್ರನಾಥ್ ಆಗಲಿ ಅಥವಾ ಇನ್ನೊಬ್ಬರೇ ಇರಲಿ, ಸಾರ್ವಜನಿಕ ಸ್ಥಳದಲ್ಲಿ ಇನ್ನೊಬ್ಬರ ಫೋಟೋವನ್ನು ಅನುಮತಿ ಇಲ್ಲದೇ ತೆಗೆಯುವಂತಿಲ್ಲ. ಅದು ನಿಯಮ ಬಾಹಿರ. ಹೀಗಾಗಿ ಯುವತಿ ಆಕ್ಷೇಪಿಸಿದ್ದಾರೆ, ಪ್ರಶ್ನಿಸಿದ್ದಾರೆ. ಗಲಾಟೆಯಾಗಿದೆ. ಆಗ ಇನ್ನೊಬ್ಬ ವ್ಯಕ್ತಿ ಮಧ್ಯ ಪ್ರವೇಶಿಸಿ ಸಹಾಯ ಮಾಡಿದ್ದಾನೆ. ಅದೇ ಹೊತ್ತಿಗೆ ಅಲ್ಲಿಗೆ ಬಂದ ಹೈಗ್ರೌಂಡ್ಸ್ ಠಾಣೆ ಪೊಲೀಸರು ರವೀಂದ್ರನಾಥರನ್ನು ಠಾಣೆಗೆ ಕರೆದೊಯ್ದಿದ್ದಾರೆ. ಅಲ್ಲಿ ಅವರೇ ಆರೋಪಿಸುವ ಪ್ರಕಾರ ಗುರುತಿನ ಪತ್ರ ತೋರಿದರು. ಪರಿಗಣಿಸದೇ ಸಬ್ಇನ್ಸ್ಪೆಕ್ಟರ್ ಹಲ್ಲೆ ಮಾಡಿದ್ದಾರೆ.
ನೋಡಿ, ಈ ಘಟನೆಯ ಹುಟ್ಟಿನಲ್ಲೇ ನೀತಿ ಉಲ್ಲಂಘನೆ ಸೃಷ್ಟಿಯಾಗಿದೆ. ಇನ್ನೊಬ್ಬರ ಫೋಟೋ ತೆಗೆದದ್ದು ನಿಯಮ ಬಾಹಿರ. ಅದರೆ ಅವರ ಮೇಲೆ ಹಲ್ಲೆ ಮಾಡಿದ್ದು? ಇಲ್ಲಿ, ನಾನು ತಪ್ಪು ಮಾಡಿಲ್ಲ ಎಂದು ರವೀಂದ್ರನಾಥ್ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಹೇಳಿದ ನಂತರ ಬೀದಿಗೆ ಬಂದು ರಾಘವೇಂದ್ರ ಔರಾದ್ಕರ್ ಮೇಲೆ ಆರೋಪ ಮಾಡಿದ್ದು ನಿಯಮ ಬಾಹಿರವೇ. ಏಕೆಂದರೆ ಐಪಿಎಸ್ ಅಧಿಕಾರಿಗಳಿಗೆ ಅವರದ್ದೇ ಆದ ಸೇವಾ ನಿಯಮವಿದೆ. ಅಲಿಖಿತ ವರ್ತನಾ ಶಾಸನವಿದೆ. ತಪ್ಪು ಒಪ್ಪುಗಳು ಟಿ.ವಿ.ಯಲ್ಲಿ ಬೊಬ್ಬೆ ಹೊಡೆದು ಪರಿಹರಿಸಿಕೊಳ್ಳುವುದು ಸಮ್ಮತವಲ್ಲ. ಇಲಾಖಾ ವಿಚಾರಣೆ ಇದೆ. ಅಸಮಾಧಾನವನ್ನು ವ್ಯಕ್ತಪಡಿಸುವುದಕ್ಕೆ ಪೊಲೀಸ್ ಮಹಾನಿರ್ದೇಶಕರಿದ್ದಾರೆ, ಗೃಹ ಸಚಿವರಿದ್ದಾರೆ.
ಆದರೆ ರವೀಂದ್ರನಾಥ ತಮ್ಮ ವಿರುದ್ಧ ಸಂಚು ನಡೆದಿದೆ ಎಂದು ಟೀವಿಯಲ್ಲಿ ಆರೋಪಿಸುವ ಮುನ್ನ ಈ ಎಲ್ಲಾ ನಿಯಮಗಳನ್ನೇ ಮರೆತುಬಿಟ್ಟರೆ? ಅವರೇ ಎಡಿಜಿಪಿಯಾಗಿರುವ ಕೆಎಸ್ಆರ್ಪಿಯಲ್ಲೇ ಯಾವುದಾದರೂ ಇಬ್ಬರು ಕಿರಿಯ ಅಧಿಕಾರಿಗಳು ಹೀಗೆ ಟಿ.ವಿಗೆ ಬಂದು ಬೊಬ್ಬೆ ಹಾಕಿದ್ದರೆ ಅದನ್ನು ಮುಂದುವರಿಸುವುದಕ್ಕೆ ಅವರು ಅವಕಾಶ ನೀಡುತ್ತಿರಲಿಲ್ಲ. ಗದರಿ ಸುಮ್ಮನಿರಿಸುತ್ತಿದ್ದರು. ಆದರೆ ಭಾವೋದ್ವೇಗಕ್ಕೆ ಒಳಗಾಗಿ ಟಿ.ವಿ. ಚಾನೆಲ್ಗಳಿಗೆ ಹೋಗಿ ಅಂತರ್ಜಲ ಮರುಪೂರಣೆಗೆ ಮುಂದಾದವರ ರೀತಿ ಕಣ್ಣೀರಿಟ್ಟರು. ಆಗ ಗೃಹ ಸಚಿವ ಕೆ.ಜೆ. ಜಾರ್ಜ್ ಟಿ.ವಿ ವಾಹಿನಿಯಲ್ಲಿ ಆರೋಪಿತ ಅಧಿಕಾರಿಯೊಬ್ಬರ ಸಮಾಧಾನ ಮಾಡುವ ಬದಲು, ತಮ್ಮ ಕಚೇರಿಗೆ ಕರೆಸಿ ಗದರಿ ಸುಮ್ಮನಿರಿಸಬೇಕಿತ್ತು. ನಿಮಗೆ ಅನ್ಯಾಯವಾಗಿದ್ದರೆ ಸರಿಪಡಿಸುವುದಕ್ಕೆ ಸರ್ಕಾರವಿದೆ. ಸೇವಾ ನಿಯಮ ಪಾಲಿಸಿ ಎಂದು ಐಪಿಎಸ್ ಅಧಿಕಾರಿಯ ಆತ್ಮಸಾಕ್ಷಿಯನ್ನು ಬಡಿದೆಬ್ಬಿಸುವ ಜವಾಬ್ದಾರಿ ಮೆರೆಯಬೇಕಿತ್ತು. ಆದರೆ ಅವರು ಗೃಹ ಸಚಿವರು ಹೊಂದಿರಬೇಕಾದ ಸಹಜ ಗಡಸುತನವನ್ನು ಇಬ್ಬರು ಅಧಿಕಾರಿಗಳನ್ನು ಗದರಿಸುವುದಕ್ಕೂ ಬಳಸಲಿಲ್ಲ. ವಿವಾದ ಮಾತ್ರ ಬೆಳೆಯುತ್ತಲೇ ಹೋಯ್ತು.
ರಾಜ್ಯದ ಇತಿಹಾಸದಲ್ಲಿ ಕಂಡು ಕೇಳರಿಯದ ಪೊಲೀಸ್ ಶಿಸ್ತು ಭಂಗಕ್ಕೆ ಅವರ ಸಾಫ್ಟ್ ನೇಚರ್ ಅವಕಾಶ ಮಾಡಿಕೊಟ್ಟಿತು. ಇತ್ತ ಟಿ.ವಿ. ವಾಹಿನಿಯಲ್ಲಿ ರವೀಂದ್ರನಾಥ್ ಕಣ್ಣೀರ ಕೋಡಿ ಹರಿಸುತ್ತಿದ್ದರೆ, ಅತ್ತ ಕೆಎಸ್ಆರ್ಪಿ ಸಿಬ್ಬಂದಿಯ ಆಕ್ರೋಶದ ಮಟ್ಟವೂ ಅಪಾಯಕರ ಹಂತವನ್ನು ಮುಟ್ಟಿತ್ತು. ಬೀದಿಗೆ ಬಂದು ಪ್ರತಿಭಟನೆ ನಡೆಸಿದರು. ಬೆಂಗಳೂರು ನಗರದ ಹಿರಿಯ ಅಧಿಕಾರಿಗಳು ಸಮಾಧಾನಪಡಿಸಲು ಮುಂದಾದರೂ ಕೇಳದೆ "ನಮ್ಮ ಸಾಹೇಬರ ವಿರುದ್ಧ ಸಂಚು ಮಾಡಿರುವ ಬೆಂಗಳೂರು ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಹಾಗೂ ಡಿಸಿಪಿ ರವಿಕಾಂತೇಗೌಡರನ್ನು ಕರೆಸಿ" ಎಂದು ಕೆಳ ಹಂತದ ಸಿಬ್ಬಂದಿ ಅಧಿಕಾರಿಗಳ ಕೋರ್ಟ್ ಮಾರ್ಷಲ್ ನಡೆಸುವ ರೀತಿ ದಬಾಯಿಸಿದರು. ಕಾನೂನು ಕಾಪಾಡುವ ಖಾಕಿಧಾರಿಗಳೇ ಹೀಗೆ ಬೀದಿಯಲ್ಲಿ ನಿಂತು ಜಗಳವಾಡಿದರೆ ಜನರ ಗೋಳು ಕೇಳುವವರ್ಯಾರು?
ಆದರೆ ದುರಂತ ಎಂದರೆ ಇದೇ ನೋಡಿ. ಇಬ್ಬರು ಅಧಿಕಾರಿಗಳ ಜಗಳದಿಂದ ಇಲಾಖೆ ಮಾನ ಮಣ್ಣುಪಾಲಾಗುತ್ತಿದ್ದರೂ ಸರ್ಕಾರಕ್ಕೆ ಎಚ್ಚೆತ್ತುಕೊಳ್ಳುವುದಕ್ಕೆ ಪುರುಸೊತ್ತು ಆಗಲಿಲ್ಲ. ಇಲಾಖಾ ಪ್ರಗತಿ ಪರಿಶೀಲನೆ ನಡೆಸುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಹಂತದಲ್ಲಿ ಮಧ್ಯ ಪ್ರವೇಶ ಮಾಡಲಿಲ್ಲ. ಈಗ ನೋಡಿ ಖಾಕಿ ಜಗಳಕ್ಕೆ ಜಾತಿ ಬಣ್ಣ! ಸಿದ್ದರಾಮಯ್ಯನವರು ಪಠಿಸುತ್ತಿದ್ದ 'ಅಹಿಂದ' ಚಳವಳಿಯ ಒಂದು ಭಾಗವಾದ ದಲಿತರು ಈಗ ಬೀದಿಯಲ್ಲಿ ನಿಂತು 'ದಲಿತ ವಿರೋಧಿ ಸರ್ಕಾರಕ್ಕೆ ಧಿಕ್ಕಾರ' ಮೊಳಗಿಸುತ್ತಿದ್ದಾರೆ.
ಇದಲ್ಲವೇ ವಿಪರ್ಯಾಸ? ಯಾವ ಸಿದ್ದರಾಮಯ್ಯ ದಲಿತರ, ಶೋಷಿತರ ರಕ್ಷಣೆಯ ಮಾತನಾಡುತ್ತಿದ್ದರೋ ಅದೇ ವ್ಯಕ್ತಿ ಮೇಲೀಗ ದಲಿತ ಹಿತ ಕಾಪಾಡಲಾಗದ ಆರೋಪ!
ಇದನ್ನೇ ಮುಂಜಾಗರೂಕತೆಯ ಕೊರತೆ ಎನ್ನುವುದು. ಮಾಧ್ಯಮಗಳು ಈ ಪ್ರಕರಣವನ್ನು ಅನಗತ್ಯವಾಗಿ ದೊಡ್ಡದು ಮಾಡಿವೆ ಎಂದು ಆರೋಪಿಸಿದ್ದ ಸರ್ಕಾರದ ನಿರ್ಲಕ್ಷ್ಯದ ಫಲವಾಗಿ ಕೋಲು ಕೊಟ್ಟು ಪೆಟ್ಟು ತಿನ್ನಿಸಿಕೊಳ್ಳುವಂತಾಗಿದೆ.
ಮೊದಲೇ ಚುನಾವಣಾ ಸೋಲಿನ ನೋವಿನಲ್ಲಿರುವ ಸಿದ್ದರಾಮಯ್ಯನವರ ಸರ್ಕಾರಕ್ಕೆ ಈ ಸಣ್ಣ ಪ್ರಕರಣವನ್ನು ನಿಭಾಯಿಸಲಾಗಲಿಲ್ಲ ಎಂಬ ದೂರು ಈಗ ರಾಜ್ಯಪಾಲರ ಆಂಗಣ ತಲುಪಿದೆ. ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರ ಅವಧಿಯೂ ಇನ್ನು ಕೆಲವೇ ದಿನಗಳಲ್ಲಿ ಮುಗಿಯುತ್ತದೆ. ಹೇಳಿಕೇಳಿ ಸಿದ್ದರಾಮಯ್ಯನವರನ್ನು ಕಂಡರೆ ಅವರಿಗೆ ಅಷ್ಟಕಷ್ಟೆ. ಹೀಗಾಗಿ ಪರಿಸ್ಥಿತಿಯ ವಿವರ ನೀಡಲು ಬಂದ ಗೃಹ ಸಚಿವ ಜಾರ್ಜ್ ಅವರಿಗೆ ಚೆನ್ನಾಗಿ ಕಿವಿ ಹಿಂಡಿ ಕಳುಹಿಸಿದ್ದಾರೆ. ಅದೇ ದಿನ ಸಂಜೆ ನಡೆದ ಕಾರ್ಯಕ್ರಮವೊಂದರಲ್ಲಿ ಸಿದ್ದರಾಮಯ್ಯನವರ ನಡೆಯನ್ನು ಟೀಕಿಸಿದ್ದಾರೆ. ರಾಜ್ಯವನ್ನು ತಮ್ಮ ಸ್ವಂತ ಆಸ್ತಿ ಎಂಬಂತೆ ಗ್ರಹಿಸಿ ಆಡಳಿತ ನಡೆಸಬೇಡಿ ಎಂದು ಜಾಡಿಸಿದ್ದಾರೆ. ಈಗ ಹೇಳಿ ಉಗುರಲ್ಲಿ ಹೊಗುವುದನ್ನು ಕೊಡಲಿ ಬಳಸುವ ಸ್ಥಿತಿಯನ್ನು ತಂದುಕೊಂಡಿದ್ದು ಸರ್ಕಾರವೋ, ಮಾಧ್ಯಮವೋ?
ರವೀಂದ್ರನಾಥ್ ಬೀದಿಗೆ ಬಂದು ನಿಂತಾಗಲೇ ಈ ಉಗುರಿಗೆ ಆದ ಹುಣ್ಣು ಪಾದವನ್ನು ಆಕ್ರಮಿಸಬಹುದೆಂದು ಮುಂದಾಲೋಚನೆ ಮಾಡಿದ್ದರೆ "ನಿರ್ಗಮನ ಪಥ ಸಂಚಲನಕ್ಕೆ" ತಾಲೀಮು ನಡೆಸುತ್ತಿರುವ ರಾಜ್ಯಪಾಲರಿಂದ ಸಿದ್ದರಾಮಯ್ಯನವರು ಮಂಗಳಾರತಿ ಮಾಡಿಸಿಕೊಳ್ಳುವ ಪ್ರಮೇಯ ಬರುತ್ತಿತ್ತಾ?
ಅದಕ್ಕೇ ಹೇಳುವುದು ಗಾಯ ಕಾಲಿಗಾಗಲೀ, ತಲೆಗಾಗಲಿ ವ್ರಣವಾಗಲು ಬಿಡಬಾರದು. ಬಿಟ್ಟರೆ ಹಾನಿ ದೇಹಕ್ಕೆ, ಪ್ರಾಣಕ್ಕೆ!
ಲಗೋರಿ: ಬೀಸುವ ಗಾಳಿಗೆ, ಉರಿಯುವ ಬೆಂಕಿಗೆ ಪ್ರೇಮ ಬೆಳೆದರೂ ಮೂಲ ಗುಣ ಬದಲಾಗದು.
-ಪಿ. ತ್ಯಾಗರಾಜ್
thyagarjun@gmail.com