ಅರಾಜಕತೆಯ ನಾಡಿನಲ್ಲಿ ಅತ್ಯಾಚಾರಿಗಳ ಕೇಕೆ

ಖುದಾ ಕೆ ಲಿಯೆ, ಇನ್ ದ ನೇಂ ಆಫ್ ಗಾಡ್ ಎಂಬ ಪಾಕಿಸ್ತಾನಿ-ಉರ್ದು ಚಲನಚಿತ್ರದ ಒಂದು ದೃಶ್ಯ. ಚಿತ್ರದ ನಾಯಕಿ ಒಬ್ಬ ಸುಶಿಕ್ಷಿತ ಯುವತಿ. ಆದರೆ ಪರಿಸ್ಥಿತಿಯಿಂದಾಗಿ ಅವಳು ಎಲ್ಲ ರೀತಿಯ ದೌರ್ಜನ್ಯಕ್ಕೆ ಒಳಗಾಗಿ ಬೇಸತ್ತು ಹೋಗುತ್ತಾಳೆ. ಕೊನೆಗೆ ತಾನು ಗರ್ಭಿಣಿಯಾದಾಗ ದೇವರಲ್ಲಿ ಆಕೆ ಬೇಡುವುದು ಒಂದೇ- "ಹೆಣ್ಣು ಮಗು ಹುಟ್ಟದಿರಲಿ"!
ತಾನು ಪಟ್ಟ ಕಷ್ಟ ತನ್ನ ಮಗವೂ ಅನುಭವಿಸುವುದು ಬೇಡ ಎಂದು ಆಕೆ ಈ ರೀತಿ ಪ್ರಾರ್ಥಿಸುತ್ತಾಳೆ ಹೊರತು, ಹೆಣ್ಣು ಎಂದರೆ ಹೊರೆ ಎಂದಲ್ಲ. ಈಗ ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಗೂಂಡಾ ರಾಜ್ ನೋಡಿದರೆ, ಅಲ್ಲಿನ ಅನೇಕ ಪೋಷಕರು ಇಂಥದ್ದೇ ಕಾರಣಕ್ಕಾಗಿಯೇ ಭ್ರೂಣ ಹತ್ಯೆ ಮಾಡುತ್ತಾರೇನೋ ಎಂದನಿಸುತ್ತಿದೆ. ಜನರನ್ನು ರಕ್ಷಿಸಬೇಕಾದ ಪೊಲೀಸರೇ ಅತ್ಯಾಚಾರ, ಕೊಲೆ ಮುಂತಾದವುಗಳನ್ನು ಮಾಡುತ್ತಾರೆ ಎಂದರೆ, ಆ ರಾಜ್ಯದ ಕಾನೂನು ಎಷ್ಟು ಹದಗೆಟ್ಟಿರಬೇಕು?!
ಉತ್ತರ ಪ್ರದೇಶದ ಬದೌನ್ ಎಂಬ ಗ್ರಾಮ. ಇದ್ದಕ್ಕಿದ್ದಂತೆ ಅಲ್ಲಿನ ಇಬ್ಬರು ಹದಿಹರೆಯದ ಬಾಲಕಿಯರು ಕಾಣೆಯಾಗುತ್ತಾರೆ. ಮರುದಿನ ಮಾವಿನ ಮರದಲ್ಲಿ ನೇತಾಡುವ ಶವಗಳಾಗಿ ಪತ್ತೆಯಾಗುತ್ತಾರೆ. ಮರಣೊತ್ತರ ಪರೀಕ್ಷೆಯಿಂದ ಆ ಬಾಲಕಿಯರು ಅತ್ಯಾಚಾರಕ್ಕೆ ಒಳಗಾಗಿದ್ದರು ಎಂಬುದು ತಿಳಿದು ಬರುತ್ತದೆ.
ಉತ್ತರಪ್ರದೇಶದ ಪೊಲೀಸ್ ವ್ಯವಸ್ಥೆಯೇ ಹೊಲಸೆದ್ದು ಹೋಗಿದೆ. ಅಲ್ಲಿನ ಪ್ರತಿಯೊಬ್ಬ ಪೊಲೀಸನೂ ಒಂದಲ್ಲ ಒಂದು ರೀತಿಯಲ್ಲಿ ರಾಜಕಾರಣಿಗಳೊಂದಿಗೆ ಸಂಪರ್ಕ ಹೊಂದಿರುತ್ತಾನೆ. ಕಳೆದ ಕೆಲವು ವರ್ಷಗಳಲ್ಲಂತೂ ಅದು ಸಂಪೂರ್ಣ ರಾಜಕೀಯಮಯವಾಗಿಬಿಟ್ಟಿದೆ. ಸಮಾಜವಾದಿ ಪಕ್ಷದ ಸಚಿವ ಅಜಂ ಖಾನ್ರ ಎಮ್ಮೆಗಳು ಕಳೆದುಹೋದವೆಂದು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಪೊಲೀಸರು ಅವುಗಳ ಹುಡುಕಾಟದಲ್ಲಿ ಧುಮುಕಿದ್ದರು! ದುರ್ದೈವವೆಂದರೆ ಅಮಾಯಕ ಹೆಣ್ಣುಮಕ್ಕಳಿಬ್ಬರ ಮೇಲೆ ಬರ್ಬರ ಅತ್ಯಾಚಾರ ನಡೆದು ಅವರನ್ನು ಕೊಂದು ಹಾಕಿದ್ದರೂ ಪೊಲೀಸರು ಎಫ್ಐಆರ್ ದಾಖಲಿಸಿಕೊಳ್ಳಲು ಮೊದಲು ನಿರಾಕರಿಸಿಬಿಟ್ಟರು! ಆ ಬಡಪಾಯಿ ಕುಟುಂಬದ ಬಗ್ಗೆ ಅವರಿಗೆ ಕರುಣೆ ಉಕ್ಕಲೇ ಇಲ್ಲ. ಕರುಣೆಯಾದರೂ ಹೇಗೆ ಬರಬೇಕು? ಸ್ವತಃ ಪೊಲೀಸ್ ಪೇದೆಗಳೂ ಆ ಕೃತ್ಯತದಲ್ಲಿ ಭಾಗಿಯಾಗಿದ್ದರು! ಆ ರಾಜ್ಯದ ಆಡಳಿತ ಪಕ್ಷದ ನಾಯಕರೇ ಅಪರಾಧಿಗಳನ್ನು ಪರೋಕ್ಷವಾಗಿ ಉತ್ತೇಜಿಸುತ್ತಿರುವಾಗ ಇಂಥ ಹೀನ ಕೃತ್ಯಗಳೆಲ್ಲ ನಡೆಯದೇ ಇರುತ್ತವೆಯೇ? ಕಳೆದ 5 ದಿನಗಳಲ್ಲೇ 4 ಅತ್ಯಾಚಾರ ಪ್ರಕರಣಗಳು ಆ ರಾಜ್ಯದಿಂದ ವರದಿಯಾಗಿವೆಯೆಂದರೆ, ಸುದ್ದಿಯಾಗದ ಇನ್ನೆಷ್ಟು ಘಟನೆಗಳಿವೆಯೋ ಯೋಚಿಸಿ?!
ಉತ್ತರಪ್ರದೇಶದ ಕಾನೂನು ಮತ್ತು ಸುವ್ಯವಸ್ಥೆ ಈ ಪರಿ ಹದಗೆಟ್ಟಿರುವುದಕ್ಕೆ ತಂದೆ ಮಗನ ಅಂಧಾ ದರ್ಬಾರೇ ಪ್ರಮುಖ ಕಾರಣ. ತಮ್ಮ ರಾಜ್ಯದಲ್ಲಿ ಹೆಚ್ಚುತ್ತಿರುವ ಅತ್ಯಾಚಾರಗಳ ಕುರಿತು ಪ್ರಶ್ನಿಸಿದಾಗ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್, "ಹುಡುಗರು ಯಾವತ್ತೂ ಹುಡುಗರೇ, ಅವರು 'ತಪ್ಪು' ಮಾಡುತ್ತಾರೆ. ಅಂದ ಮಾತ್ರಕ್ಕೆ ಅವರನ್ನು ಗಲ್ಲಿಗೆ ಏರಿಸುವುದೇ?" ಎಂದು ಉಡಾಫೆಯ ಹೇಳಿಕೆ ನೀಡಿದ್ದರು! ಚುನಾವಣಾ ಸಮಯದಲ್ಲಿ ಅಪರಾಧಿಗಳ ಮತವೂ ಮುಖ್ಯ ಅಲ್ಲವೇ? ಆದ್ದರಿಂದ ಇಂಥ ಹೇಳಿಕೆ ನೀಡಿ ಅಪರಾಧಿಗಳ ಮನ ಗೆಲ್ಲಲು ಯತ್ನಿಸಿದ್ದರು ಆ ನಾಯಕರು. ಇನ್ನೊಂದೆಡೆ ತಂದೆಗೆ ತಕ್ಕ ಮಗನಾದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಕೂಡ 'ನಾನೇಕೆ ಹಿಂದೆ ಬೀಳಲಿ' ಎಂದು ಅಷ್ಟೇ ಕಳಪೆ ಮಾತನ್ನಾಡಿದ್ದಾರೆ.
ಬದೌನ್ ಘಟನೆ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರಕರ್ತೆಯೊಬ್ಬಳು ಉತ್ತರ ಕೇಳಿದಾಗ, "ನಿನಗೇಕೆ ಚಿಂತೆ? ನೀನು ಸುರಕ್ಷಿತವಾಗಿದ್ದೀಯ ತಾನೆ?" ಎಂದು ಅವಳ ಬಾಯಿ ಮುಚ್ಚಿಸಿಬಿಟ್ಟರು ಆ ಮಹಾನುಭಾವರು. ಮುಖ್ಯಮಂತ್ರಿಯ ಸ್ಥಾನದಲ್ಲಿದ್ದುಕೊಂಡು ಇಂತಹ ಹೇಳಿಕೆ ನೀಡಲು ಅವರಿಗೆ ನಾಚಿಕೆ ಆಗಲೇ ಇಲ್ಲ. ಸಾಲದಕ್ಕೆ, ಅಖಿಲೇಶ್ ಮಾತನ್ನು ಮಾಧ್ಯಮಗಳು ತಿರುಚಿವೆ ಎಂದು ಅವರ ಭಟ್ಟಂಗಿಗಳು ತಮ್ಮ ನಾಯಕನ ಬೆಂಬಲಕ್ಕೆ ನಿಂತಿದ್ದಾರೆ. ಒಂದು ವೇಳೆ ಅತ್ಯಾಚಾರಕ್ಕೆ ಒಳಗಾದವರು ಇದೇ ಕುಟುಂಬದ ತಾಯಿ, ಸಹೋದರಿ, ಪತ್ನಿ ಅಥವಾ ಮಗಳಾಗಿದ್ದರೆ ಇಂಥದ್ದೇ ಮಾತುಗಳು ಅಪ್ಪ ಮಗನ ಬಾಯಿಂದ ಬರುತ್ತಿದ್ದವೇ? ಆಗಲೂ ಮುಲಾಯಂ- 'ಹುಡುಗರು ತಪ್ಪು ಮಾಡಿದರು, ಹೋಗಲಿ ಬಿಡಿ- ಪರವಾಗಿಲ್ಲ' ಎನ್ನುತ್ತಿದ್ದರಾ?
"ಅತ್ಯಾಚಾರಕ್ಕೆ ಒಳಗಾದ ಮಹಿಳೆಯರನ್ನು ಕಲ್ಲಿನಿಂದ ಹೊಡೆದು ಸಾಯಿಸಬೇಕು" ಎಂದರು ಅದೇ ಪಕ್ಷದ ಮತ್ತೊಬ್ಬ ನಾಯಕ! ರಾಜಕಾರಣಿ ಪುತ್ರ ಮತ್ತು ನಟಿ ಸೊಸೆ ಆ ನಾಯಕನ ಹೇಳಿಕೆಯನ್ನು ಖಂಡಿಸಿದರು. ತಮ್ಮ ಬೇಸರವನ್ನು ಬಹಿರಂಗವಾಗಿ ವ್ಯಕ್ತಪಡಿಸಿದರು. ಆದರೆ ಯಾವಾಗ ಸಾಮಾಜಿಕ ಜಾಲತಾಣಗಳಲ್ಲಿ, ಸಮೂಹ ಮಾಧ್ಯಮಗಳಲ್ಲಿ, ಎಲ್ಲೆಡೆ ತಮ್ಮ ಹೇಳಿಕೆಗೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿರುವುದು ಕಾಣಿಸಿತೋ ಆ ನಾಯಕ ಮಾತು ಬದಲಾಯಿಸಿ, 'ನಾನು ಇಂತಹ ಹೇಳಿಕೆ ನೀಡಲೇ ಇಲ್ಲ. ಕೇವಲ ಒಬ್ಬ ಹುಚ್ಚ ಮಾತ್ರ ಈ ರೀತಿ ಮಾತಾಡಬಲ್ಲ' ಎಂದರು. ಇದೆಲ್ಲದರಿಂದ ಒಂದಂತೂ ಸಾಬೀತಾಯಿತು. ತಾನೊಬ್ಬ ಹುಚ್ಚನೆಂದು ಸ್ವತಃ ಆ ನಾಯಕನೇ ಒಪ್ಪಿಕೊಂಡ! ಅತ್ಯಾಚಾರ ಎಂಬ ಘೋರ ಅಪರಾಧದ ಬಗ್ಗೆ ರಾಜಕಾರಣಿಗಳಲ್ಲಿ ಇಷ್ಟೊಂದು ಅಸಡ್ಡೆ ಏಕೆ? ಅತ್ಯಾಚಾರಕ್ಕೆ ಒಳಗಾಗುವವರು ಯಾರೋ-ಏನೋ ಎಂಬ ಧೋರಣೆ ಇರಬೇಕು ಬಹುಷಃ. ತಮ್ಮವರಿಗೆ ಅನ್ಯಾಯವಾದರೆ ಮಾತ್ರ ಇವರಿಗೆ ಬಿಸಿ ಮುಟ್ಟುವುದು- ಅಪರಾಧದ ಗಾಂಭೀರ್ಯ ಅರಿವಾಗುವುದು. ಹಾಗಾಗಬೇಕೆಂದು ಯಾರೂ ಆಶಿಸುವುದಿಲ್ಲ. ಆದರೆ ಇಂಥ ರಾಜಕಾರಣಿಗಳು ಬೇರೆ ಯಾವ ರೀತಿ ಹೇಳಿದರೂ ಅರ್ಥ ಮಾಡಿಕೊಳ್ಳುವುದಿಲ್ಲ.
ಹೇಳುವುದನ್ನು ಹೇಳಿ ಈ ನಾಯಕರು ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡುತ್ತಾರೆ. ಆದರೆ ಅಪರಾಧಕ್ಕೆ ಅವಕಾಶ ನೀಡಬೇಕು ಏಕೆ?
ಹುಚ್ಚು ಹೇಳಿಕೆಗಳನ್ನು ನೀಡಿದರೆ, 'ಹೋಗಿ, ಅತ್ಯಾಚಾರವೆಸಗಿ, ನಿಮ್ಮನ್ನು ಕಾನೂನು ರಕ್ಷಿಸುತ್ತದೆ' ಎಂದಂತೆ ಆಯಿತಲ್ಲವೇ?! ಅಪರಾಧಿಗಳಿಗೆ ಇನ್ನೇನು ಬೇಕು? ಆದ್ದರಿಂದಲೇ ಆ ರಾಜ್ಯದಲ್ಲಿ ಹೆಣ್ಣು ಮಕ್ಕಳ ಶೋಷಣೆ ನಡೆಯುತ್ತಿರುವುದು, ಅಪರಾಧ ಬೆಳೆಯುತ್ತಿರುವುದು.
ಅತ್ಯಾಚಾರದ ಪ್ರತಿ ಕೇವಲ ಇದೊಂದೇ ಪಕ್ಷ ಅಲ್ಲ, ಇತರ ಪಕ್ಷಗಳ ರಾಜಕಾರಣಿಗಳೂ ಅಸಹ್ಯಕರ ಹೇಳಿಕೆ ನೀಡಿದ್ದಾರೆ. ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ 'ಹುಡುಗಿಯರು ಸಾಹಸಿಗಳಾಗಬಾರದು' ಎಂದಿದ್ದರು. ತನ್ನನ್ನು ಸಾಮಾಜಿಕ ಸೇವಕಿಯೆಂದು ಕರೆಯುವ ಸ್ತ್ರೀರೋಗ ತಜ್ಞೆ ಮತ್ತು ಎನ್ಸಿಪಿ ಸದಸ್ಯೆ ಡಾ. ಆಶಾ ಮಿರ್ಜೆ ನಿರ್ಭಯಾಳ ಚಾರಿತ್ರ್ಯ ಸರಿಯಿಲ್ಲ ಎಂದರು! ಶಕ್ತಿ ಮಿಲ್ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆಯೂ ಬಹಳ ಲಘುವಾಗಿ ಮಾತನಾಡಿದ್ದರು. ಮಹಿಳಾ ಮಣಿಗಳೇ ಅತ್ಯಾಚಾರದ ಕುರಿತು ಇಷ್ಟು ಕೇವಲವಾಗಿ ಮಾತನಾಡುವುದು ಎಷ್ಟು ಸರಿ?
ಇಂತಹ ನಾಯಕರನ್ನು ಜನರು ಯಾಕಾದರೂ ಮತ ಹಾಕಿ ಗೆಲ್ಲಿಸುತ್ತಾರೋ ತಿಳಿಯದು! ಲೂಟಿ, ಕೊಲೆ, ಗೂಂಡಾಗಿರಿ ದಿನದಿಂದ ದಿನಕ್ಕೆ ಉತ್ತರ ಪ್ರದೇಶದಲ್ಲಿ ಹೆಚ್ಚುತ್ತಲೇ ಇದೆ. ಅಪರಾಧಕ್ಕೆ ಕಡಿವಾಣವಿಲ್ಲ, ಕಾನೂನು ಎಂಬುದಕ್ಕೆ ಮರ್ಯಾದೆ ಇಲ್ಲ. ಹಾಗಿದ್ದಾಗ ಜನರು ಏಕೆ ಎಡುವುತ್ತಾರೆ? ತಮಗೆ ಅನ್ಯಾಯವಾಗಲು ಮತದಾರರು ಮತ್ತೆ-ಮತ್ತೆ ಅವಕಾಶ ಏಕೆ ಮಾಡಿಕೊಡುತ್ತಾರೆ? ಮತದಾರರಲ್ಲಿ ಎಲ್ಲರೂ ಅನಕ್ಷರಸ್ಥರಲ್ಲ. ಕಣ್ಣ ಮುಂದೆ ನಡೆಯುತ್ತಿರುವ ಈ ಅನ್ಯಾಯವನ್ನು ನೋಡಿದರೂ ಸುಮ್ಮನ್ನಿದ್ದಾರಲ್ಲಾ? ಏನು ಮಾಡಿದರೂ ನಡೆಯುತ್ತದೆ ಎನ್ನುವ ಮನಸ್ಥಿತಿಗಳಿಗೆ ಮತದಾರರ ಮಾತ್ರ ಸರಿಯಾಗಿ ಪಾಠ ಕಲಿಸಬಲ್ಲ. ಅವರು ಬದಲಾದರೆ ಮಾತ್ರ ರಾಜಕಾರಣಿಗಳ ಮನಸ್ಥಿತಿಯೂ ಬದಲಾದೀತು.
-ಅದಿತಿಮಾನಸ. ಟಿ. ಎಸ್, ಕನ್ನಡಪ್ರಭ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


