

'ಕಾರ್ಗಿಲ್ ಯುದ್ಧದಲ್ಲಿ ಭಾರತ ಗೆಲ್ಲಲು ಮುಸ್ಲಿಂ ಯೋಧರು ಮಾಡಿದ ಬಲಿದಾನ ಕಾರಣ' ಎಂದು ಚುನಾವಣೆ ಸಂದರ್ಭದಲ್ಲಿ ಹೇಳಿದ ಉತ್ತರಪ್ರದೇಶದ ಸಮಾಜವಾದಿ ಪಕ್ಷದ ಮುಖಂಡ ಅಜಂಖಾನ್‌ಗೂ 'ಜಾತಿಯ ಕಾರಣಕ್ಕೆ ನನ್ನನ್ನು ಅಸ್ಪೃಶ್ಯನಂತೆ ಕಾಣಲಾಗುತ್ತಿದೆ' ಎಂದು ಹೇಳುವ ಮತ್ತು ದೂರು ಕೊಟ್ಟ ಎಡಿಜಿಪಿ ರವೀಂದ್ರನಾಥ್ ಅವರಿಗೂ ಹೆಚ್ಚಿನ ವ್ಯತ್ಯಾಸ ಕಾಣುತ್ತಿಲ್ಲ.
ಸೈನಿಕರನ್ನು, ಕ್ರಿಕೆಟ್ ಆಟಗಾರರನ್ನು, ಸಿನಿಮಾ ನಟ-ನಟಿಯರನ್ನು, ಪೊಲೀಸರನ್ನು ಜನ ಯಾವತ್ತೂ ಜಾತಿ ಧರ್ಮದ ಆಧಾರದಲ್ಲಿ ನೋಡಿಯೇ ಇಲ್ಲ. ಶಂಕರ ಬಿದರಿ ಅವರನ್ನು ಯಾರೂ ಲಿಂಗಾಯತ ಅಧಿಕಾರಿ ಎಂದು ಯಾವತ್ತೂ ನೋಡಿರಲಿಲ್ಲ. ರಾಜ್ಯದಲ್ಲಿ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿರುವ ಎಷ್ಟೋ ಪೊಲೀಸ್ ಅಧಿಕಾರಿಗಳಿದ್ದಾರೆ. ಅವರ ಜಾತಿ ಯಾರಿಗೂ ಗೊತ್ತಿಲ್ಲ. ಯಾರೂ ಅದನ್ನು ಕೇಳುವ ಅಥವಾ ತಿಳಿದುಕೊಳ್ಳುವ ಗೋಜಿಗೂ ಹೋಗಿರಲಿಲ್ಲ.
ಅಷ್ಟೇ ಯಾಕೆ, ಮೊನ್ನೆ ಮೊನ್ನೆ 'ಕಾಫಿ ಶಾಪ್‌ನಲ್ಲಿ ಫೋಟೊ ತೆಗೆದ' ನಂತರ ಜಾತಿ ವಿಷಯ ಎತ್ತಿದಾಗಲೇ ರವೀಂದ್ರನಾಥ್ ಜಾತಿ ಯಾವುದು ಎಂಬುದು ಗೊತ್ತಾಗಿದ್ದು. ಅಲ್ಲಿಯವರೆಗೆ ಇಡೀ ಘಟನೆಯನ್ನು ಯಾರೂ ಜಾತಿಯ ಕಣ್ಣಿನಿಂದ ನೋಡಿರಲೇ ಇಲ್ಲ. ಆದರೆ ರವೀಂದ್ರನಾಥ್ ಅವರು ಇಡೀ ಪ್ರಕರಣಕ್ಕೆ ಜಾತಿ ಬಣ್ಣ ನೀಡಿಬಿಟ್ಟರು. ಗುಲ್ಬರ್ಗದಲ್ಲಿ ಮಲ್ಲಿಕಾರ್ಜುನ ಬಂಡೆ ಅವರು ಮೃತಪಟ್ಟಾಗ ಅದಕ್ಕೆ ಕೋಮು ಬಣ್ಣ ಬಳಿಯಲಾಗಿತ್ತು. ಈ ಘಟನೆಯಿಂದ ಜಾತಿ ಬಣ್ಣವೂ ಸೇರ್ಪಡೆಯಾಯಿತು.
ನಮ್ಮ ಸರ್ಕಾರ ಎಷ್ಟು ಪ್ರಬಲವಾಗಿದೆಯೆಂದರೆ ಜಾತಿ ವಿಷಯ ಬರುತ್ತಿದ್ದಂತೆ ರವೀಂದ್ರನಾಥ್ ಮೇಲೆ ಕ್ರಮ ಕೈಗೊಳ್ಳಲೂ ಹಿಂದೆ ಮುಂದೆ ನೋಡಲಾರಂಭಿಸಿತು. ಪೊಲೀಸ್ ಅಧಿಕಾರಿಯೊಬ್ಬರು ಗೃಹ ಸಚಿವರ ಮುಂದೆ ನಿಂತು ಮಾತನಾಡುವ, ವಾದ ಮಾಡುವ ದಾರ್ಷ್ಟ್ಯ ತೋರುವುದಿಲ್ಲ. ಹಾಗಿರುವಾಗ ರವೀಂದ್ರನಾಥ್ ಅವರು ಚಾನಲ್ ಒಂದರಲ್ಲಿ ಗೃಹಸಚಿವರಿಗೆ ಭರ್ಜರಿ ಲೆಕ್ಚರ್ ಕೊಟ್ಟುಬಿಟ್ಟರು. ಪಾಪ ನಮ್ಮ ಗೃಹಸಚಿವರು ಅವರ ಮಾತನ್ನೆಲ್ಲ ಸಹನೆಯಿಂದ ಆಲಿಸಿದರು.
ಅದು ಗೃಹ ಸಚಿವರ ಒಳ್ಳೆಯತನವೇ ಇರಬಹುದು. ಆದರೆ ಒಳ್ಳೆಯತನವನ್ನು ಆ ರೀತಿಯಲ್ಲಿ ತೋರಿಸಬೇಕಾದ ಅಗತ್ಯ ಖಂಡಿತ ಇರಲಿಲ್ಲ. 'ಏನಾದರೂ ಮಾತನಾಡುವುದಿದ್ದರೆ ನನ್ನ ಚೇಂಬರ್‌ಗೆ ಬಂದು ಮಾತನಾಡಿ. ಟಿವಿಯಲ್ಲಿ ಚರ್ಚೆ ಮಾಡುವ ಅಗತ್ಯವಿಲ್ಲ' ಎಂದು ಖಡಾಖಂಡಿತವಾಗಿ ಹೇಳಿದ್ದರೆ ರವೀಂದ್ರನಾಥ್ ಅವರಿಗೆ ಸ್ಪಷ್ಟ ಸಂದೇಶ ಹೋಗುತ್ತಿತ್ತು. ಅದನ್ನು ಬಿಟ್ಟು ಗೃಹ ಸಚಿವರು, ರವೀಂದ್ರನಾಥ್ ಅವರಿಂದ ಸಿಆರ್‌ಪಿಸಿ ಯಾವ ಸೆಕ್ಷನ್ ಪ್ರಕಾರ ಅವರನ್ನು ಬಂಧಿಸಬಹುದು ಎಂಬ ಬಗ್ಗೆ ಲೆಕ್ಚರ್ ಕೇಳಿದರು.
ಇಷ್ಟೆಲ್ಲ ಆದ ನಂತರ ರವೀಂದ್ರನಾಥ್ ಅವರೇ ಇಷ್ಟಕ್ಕೂ ನೀವು ಜಾತಿ ವಿಷಯ ಎತ್ತಿದ್ಯಾಕೆ? ಪೊಲೀಸ್ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ಕೆಲಸ ಮಾಡಿದ ನಿಮಗೆ ಪೊಲೀಸ್ ಇಲಾಖೆಯಲ್ಲಿ ಜಾತಿ ಎಂಬುದಿಲ್ಲ ಅಥವಾ ಅದನ್ನು ತರಬಾರದು ಎಂಬುದು ತಿಳಿದಿರಲಿಲ್ಲವೇ? ಅಥವಾ ಜಾತಿ ವಿಷಯ ಪ್ರಸ್ತಾಪಿಸುವ ಮೂಲಕ ಇಡೀ ಪ್ರಕರಣಕ್ಕೆ ಹೊಸ ತಿರುವು ನೀಡಲು ಬಯಸಿದ್ದರೋ, ತಾವು ಮಾಡಿದ್ದನ್ನೆಲ್ಲ ಜಾತಿಯ ಸಹಾಯದಿಂದ ಸಮರ್ಥಿಸಿಕೊಳ್ಳುವ ಹವಣಿಕೆಯೋ ಅರ್ಥವಾಗಲಿಲ್ಲ.
ಪೊಲೀಸರು ಪ್ರತಿ ದಿನವೂ ಒಂದಲ್ಲ ಒಂದು ಪ್ರಕರಣವನ್ನು ನಿಭಾಯಿಸಬೇಕಾಗುತ್ತದೆ. ಅವನ್ನೆಲ್ಲ ಜಾತಿಯ ದೃಷ್ಟಿಯಿಂದ ನೋಡಲು ಸಾಧ್ಯವೇ? ಹಾಗೆ ಮಾಡಿದರೆ ಕರ್ತವ್ಯ ನಿರ್ವಹಣೆ ಸಾಧ್ಯವೇ? ಹಿರಿಯ ಅಧಿಕಾರಿಗಳು ಯಾರ ಮೇಲಾದರೂ ಶಿಸ್ತು ಕ್ರಮ ಜರುಗಿಸಿದರೆ ಅದನ್ನೂ ಜಾತಿಯ ಕಣ್ಣಿನಿಂದ ನೋಡಿದರೆ ಪೊಲೀಸ್ ಇಲಾಖೆಯ ಶಿಸ್ತಿನ ಕತೆ ಏನಾಗಬೇಕು? ನಾಳೆ ಯಾರ ಮೇಲೆ ಯಾರೂ ಕ್ರಮ ಜರುಗಿಸದ ಅಥವಾ ಜಾತಿ ನೋಡಿ ಕ್ರಮ ಜರುಗಿಸಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ಆಗ ಪೊಲೀಸ್ ಇಲಾಖೆಯಲ್ಲಿ ಎಂತಹ ಅರಾಜಕತೆ ಸೃಷ್ಟಿಯಾಗಬಹುದು ಎಂಬುದು ರವೀಂದ್ರನಾಥ್ ಅವರಿಗೆ ತಿಳಿಯದ ವಿಷಯವೇನಲ್ಲ.
ಆಯುಕ್ತ ರಾಘವೇಂದ್ರ ಔರಾದ್ಕರ್ ಅವರಾಗಲಿ, ಡಿಸಿಪಿ ರವಿಕಾಂತೇ ಗೌಡರಾಗಲಿ ಇಂದು ನಿನ್ನೆ ಪೊಲೀಸ್ ಇಲಾಖೆ ಸೇರಿದವರಲ್ಲ. ಸಾಕಷ್ಟು ವರ್ಷದಿಂದ ಅಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈವರೆಗೆ ಅವರ ಮೇಲೆ ಜಾತಿ ದ್ವೇಷ ಅಥವಾ ತಾರತಮ್ಯದ ಒಂದೇ ಒಂದು ದೂರು ಬಂದಿಲ್ಲ. ಕೆಟ್ಟ ಕಾರಣಗಳಿಗೆ ಅವರು ಸುದ್ದಿಯಾಗಿದ್ದೂ ಇಲ್ಲ. ಹೀಗಿರುವಾಗ ಅವರ ಮೇಲೆ ವಿನಾಕಾರಣ ಜಾತಿಯ ಕಾರಣಕ್ಕೆ ದೂರ ಇಟ್ಟರು ಎಂದು ದೂರು ಕೊಡುವುದು ಯಾವ ನ್ಯಾಯ? ಇಷ್ಟೆಲ್ಲ ಬೋಧನೆ ನೀಡುವ ರವೀಂದ್ರನಾಥ್ ಅವರು ಹೆಂಡತಿ-ಮಗಳ ಸಮೇತ ತನಿಖಾ ಸ್ಥಳಕ್ಕೆ ಆಗಮಿಸಿದ್ದರು!
ಅವರು ತಪ್ಪು ಮಾಡಿದ್ದೀರೋ ಇಲ್ಲವೋ ಅಥವಾ ಪಿತೂರಿಯೇ ನಡೆಯಿತೋ ಎಂಬುದು ತನಿಖೆಯ ನಂತರ ತಿಳಿಯಲಿದೆ. ಆದರೆ ಇದೊಂದು ಘಟನೆಯಿಂದ ನೀವು ಹಾಕಿಕೊಟ್ಟ ಹೊಸ ಮಾರ್ಗವನ್ನು ಇನ್ನೂ ಕೆಲವರು ಅನುಸರಿಸಿದರೆ ಪೊಲೀಸ್ ಇಲಾಖೆಯ ಸ್ಥಿತಿ ಏನಾಗಬಹುದು ಎಂಬುದನ್ನು ಒಂದು ಕ್ಷಣ ಕೂಡ ಯೋಚಿಸಿದಂತೆ ಕಾಣಲಿಲ್ಲ. ಪೊಲೀಸ್ ಇಲಾಖೆ, ಅದರ ಶಿಸ್ತು, ಅದರ ಮರ್ಯಾದೆಗಿಂತ ರವೀಂದ್ರನಾಥ್ ಅವರಿಗೆ ದೊಡ್ಡ ಅನ್ಯಾಯವಾಗಿಬಿಟ್ಟಿದೆ ಎಂಬುದೇ ಹೆಚ್ಚು ದೊಡ್ಡದಾಗಿ ಕಂಡಿರಬೇಕು.
ಅವರಿಗೆ ಅನ್ಯಾಯವಾಗಿದ್ದರೆ ಅದಕ್ಕೆ ನ್ಯಾಯ ಕೇಳಲು ಸಾಕಷ್ಟು ವೇದಿಕೆಗಳಿದ್ದವು. ಎಡಿಜಿಪಿಯಾಗಿ ತನಗೆ ಅವಮಾನ ಮಾಡಿದ ಕೆಳಗಿನ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವಂತೆ ಒತ್ತಾಯಿಸುವ, ಇಲಾಖಾ ತನಿಖೆ ನಡೆಸುವ ಅವಕಾಶ ಇತ್ತು. ಇದಕ್ಕೆ ಡಿಜಿಪಿ ಅವರನ್ನು ಒತ್ತಾಯಿಸಬಹುದಿತ್ತು. ಗೃಹಸಚಿವರಿಗೆ ಮನವಿ ಮಾಡಬಹುದಿತ್ತು. ಅದನ್ನು ಬಿಟ್ಟು ಘಟನೆ ನಡೆದ ಮರುದಿನ 'ನನ್ನನ್ನು ಬಂಧಿಸಿ' ಎಂದು ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ಶೋ ಮಾಡಿದ್ದೇ ಇಡೀ ಘಟನೆ ಇಷ್ಟು ದೊಡ್ಡದಾಗಿ ಬೆಳೆಯಲು ಕಾರಣ ಎಂಬುದರಲ್ಲಿ ಅನುಮಾನವಿಲ್ಲ.
ಅದರ ನಂತರ ಪೊಲೀಸ್ ಕಮಿಷನರ್ ಬಳಿ ಹೋಗಿ ಮಾತನಾಡಿದರೂ. ಅವಲರ ಬಳಿಯೂ ನನ್ನನ್ನು ಬಂಧಿಸಿ ಎಂದು ಒತ್ತಾಯಿಸಿದರು. ಅವರ ಕಾರಿನಲ್ಲೇ ಡಿಜಿ ಕಚೇರಿಗೆ ಬರುತ್ತೇನೆ ಎಂದಾಗ ಹೇಳಿದಾಗ ಅವರು ನಿರಾಕರಿಸಿದರು. ಅದಕ್ಕೆ ರವೀಂದ್ರನಾಥ್ ಕೊಡುವ ಸಮರ್ಥನೆಯೇನು? ಅದು ಸರ್ಕಾರಿ ವಾಹನ. ನಾನೂ ಅವರ ಸಮಾನ ಹುದ್ದೆಯಲ್ಲಿರುವ ಅಧಿಕಾರಿಗಳು. ಅವರ ಕಾರಿನಲ್ಲೇ ಕರೆದುಕೊಂಡು ಹೋಗಲು ಸಮಸ್ಯೆಯೇನು? ಅವರು ಯಾಕೋ ನನ್ನನ್ನು ದೂರ ಇಡುತ್ತಿದ್ದಾರೆ ಎಂದು ಹೇಳುವ ಮೂಲಕ ಸೂಚ್ಯವಾಗಿ ಜಾತಿ ವಿಷಯ ಪ್ರಸ್ತಾಪಿಸಿದರು.
ನಾಳೆ ಯಾರೋ ಒಬ್ಬರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿಗೆ ಹೋಗಿ, 'ಸರ್ ನಿಮ್ಮ ಕಾರಿನಲ್ಲಿ ನಾನೂ ಬರುತ್ತೇನೆ. ಹೇಗೂ ಇಬ್ಬರೂ ಒಂದೇ ಸ್ಥಳಕ್ಕೆ ಹೋಗುತ್ತಿದ್ದೇವೆ. ಅಲ್ಲದೇ ಇದು ಸರ್ಕಾರಿ ವಾಹನ. ನಿಮ್ಮ ಸ್ವಂತದ್ದೇನಲ್ಲ' ಎಂದು ವಾದ ಮಾಡಿದರೆ ಅದು ಸರಿಯೇ?
ವಾದದ ದೃಷ್ಟಿಯಿಂದ ಅದು ಸರ್ಕಾರಿ ವಾಹನ ಎಂಬುದು ಸರಿಯಾದರೂ, ಅದನ್ನು ಒಬ್ಬ ಅಧಿಕಾರಿಗೆ ನೀಡಲಾಗಿದೆ. ಆ ವಾಹನದ ಸಂಪೂರ್ಣ ಹೊಣೆಗಾರಿಕೆ ಅವರದ್ದು. ಅದರಲ್ಲಿ ಯಾರನ್ನು ಕೂರಿಸಿಕೊಂಡು ಹೋಗಬೇಕು ಎಂದು ನಿರ್ಧರಿಸುವ ಸಂಪೂರ್ಣ ಹಕ್ಕು ಅವರಿಗಿದೆ. ಅಲ್ಲದೇ ರವೀಂದ್ರನಾಥ್ ಅವರ ಮೇಲೆ ಆರೋಪವಿದೆ. ಹಿಂದಿನ ದಿನ ಸಂಜೆಯಷ್ಟೇ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇಂತಹ ಸ್ಥಿತಿಯಲ್ಲಿ ರವೀಂದ್ರನಾಥ್ ಅವರನ್ನು ಪೊಲೀಸ್ ಆಯುಕ್ತರು ತಮ್ಮದೇ ವಾಹನದಲ್ಲಿ ಕರೆದುಕೊಂಡು ಹೋದರೆ ಅದೂ ತಪ್ಪಲ್ಲವೇ? ಆರೋಪಿಗೆ ರಕ್ಷಣೆ ನೀಡುತ್ತಿರುವ ಪೊಲೀಸ್ ಆಯುಕ್ತರು ಎಂಬ ಆರೋಪವನ್ನು ಮಾಧ್ಯಮಗಳು ಮಾಡುವ ಅವಕಾಶ ಇತ್ತಲ್ಲವೇ? ಇದು ಪೊಲೀಸ್ ಇಲಾಖೆಯಲ್ಲಿರುವ ರವೀಂದ್ರನಾಥ್ ಅವರಿಗೆ ಗೊತ್ತಿಲ್ಲದ ಸಂಗತಿಯೇ?
ಹಿಂದಿನ ದಿನವಷ್ಟೇ ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿ ಕೂರಿಸಿದ ವ್ಯಕ್ತಿಯನ್ನು ಮರುದಿನ ಆಯುಕ್ತರು ತಮ್ಮದೇ ಕಾರಿನಲ್ಲಿ ಕೂರಿಸಿಕೊಂಡು ಹೋದರೆ ಕರ್ತವ್ಯ ನಿರ್ವಹಿಸಿದ ಪೊಲೀಸರ ನೈತಿಕ ಸ್ಥೈರ್ಯಕ್ಕೆ ಧಕ್ಕೆಯಾಗುವುದಿಲ್ಲವೇ? ನೀವೇ ಹೋಗಿ ನನ್ನ ಮೇಲೆ ದೂರು ದಾಖಲಾಗಿದೆ ನನ್ನನ್ನು ಬಂಧಿಸಿ ಎಂದು ಆಯುಕ್ತರನ್ನು ಕೋರುತ್ತೀರಿ. ಮರುಕ್ಷಣ ನೀವೇ ಅವರ ಕಾರಿನಲ್ಲೇ ಹೋಗಲು ಬಯಸುತ್ತೀರಿ. ನಿಮ್ಮ ನಿಲುವಿನಲ್ಲೇ ವೈರುಧ್ಯ ಅಡಗಿದೆ ಅನ್ನಿಸುವುದಿಲ್ಲವೇ?
ಇದೊಂದೇ ಅಲ್ಲ. ಕಾಫಿ ಶಾಪ್‌ನ ಘಟನೆಯ ನಂತರ ರವೀಂದ್ರನಾಥ್ ಅವರ ವರ್ತನೆಯಲ್ಲಿ ಸಾಕಷ್ಟು ವೈರುಧ್ಯಗಳಿವೆ. ಎಡಿಜಿಪಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ ಎನ್ನುತ್ತಾರೆ. ಹಾಗೆಯೇ ನನಗೆ ಯಾವುದೇ ಹುದ್ದೆ ನೀಡಿಲ್ಲ. ಅದಕ್ಕೇ ಸರ್ಕಾರಿ ವಾಹನವೂ ಇಲ್ಲ. ನಡೆದುಕೊಂಡೇ ಮನೆಗೆ ಹೋಗುತ್ತೇನೆ ಎನ್ನುತ್ತಾರೆ. ರಾಜೀನಾಮೆ ಕೊಟ್ಟ ವ್ಯಕ್ತಿಗೆ ಸರ್ಕಾರ ಹುದ್ದೆ ತೋರಿಸಬೇಕು, ವಾಹನ ನೀಡಬೇಕು ಎಂಬ ನಿರೀಕ್ಷೆಯೇಕೆ? ರಾಜೀನಾಮೆ ಒಪ್ಪಿಕೊಳ್ಳಿ ಎಂದು ಒತ್ತಾಯಿಸುವವರು ಅದಕ್ಕೆ ಮಾನಸಿಕವಾಗಿ ಸಿದ್ಧರಾಗಿಯೇ ಇರಬೇಕು. ಬರಬೇಕಾದರೆ ಆಟೋದಲ್ಲಿ ಬರುತ್ತಾರೆ. ಹೋಗಬೇಕಾದರೆ ಮಾತ್ರ ನಡೆದುಕೊಂಡೇ ಹೋಗುತ್ತಾರೆ.
ಒಬ್ಬ ಹಿರಿಯ ಪೊಲೀಸ್ ಅಧಿಕಾರಿಯಾಗಿ ಯಾರನ್ನು ಯಾರು ಮತ್ತು ಯಾಕೆ ಬಂಧಿಸುತ್ತಾರೆ ಎಂಬುದು ರವೀಂದ್ರನಾಥ್ ಅವರಿಗೆ ಗೊತ್ತಿಲ್ಲವೇ? ಐಪಿಸಿ, ಸಿಆರ್‌ಪಿಸಿಗಳನ್ನು ಪಟಪಟನೆ ಹೇಳುವ ರವೀಂದ್ರನಾಥ್ ಅವರು ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ನನ್ನನ್ನು ಬಂಧಿಸಿ ಎಂದು ಒತ್ತಾಯಿಸುತ್ತಾರೆ. ಪೊಲೀಸ್ ಆಯುಕ್ತರು ಯಾರನ್ನೂ ನೇರವಾಗಿ ಬಂಧಿಸುವುದಿಲ್ಲ ಎಂಬ ಸಾಮಾನ್ಯ ಜ್ಞಾನ ರವೀಂದ್ರನಾಥ್ ಅವರಿಗಿಲ್ಲ ಎಂದಲ್ಲ. ಅದು ಗೊತ್ತಿದ್ದು ಹಾಗೆ ಮಾಡಿದ್ದಾರೆ.
ಸಿಐಡಿ ಅಧಿಕಾರಿಗಳನ್ನೂ ಭೇಟಿ ಮಾಡಿ, ಬಂಧಿಸುವಂತೆ ಒತ್ತಾಯಿಸಿದ್ದಾರೆ. ಯಾರೇ ಆಗಲಿ ಆರೋಪ ಬಂದಾಗ ತನಿಖೆ ಮಾಡಿಸಿ ಎಂದು ಒತ್ತಾಯಿಸುವುದು ಸಾಮಾನ್ಯ. ತನಿಖೆ ನಡೆದು ಸತ್ಯವೇನೆಂಬುದು ಹೊರಗೆ ಬರಲಿ ಎಂಬುದು ಅದರ ಉದ್ದೇಶ. ಆದರೆ ರವೀಂದ್ರನಾಥ್ ಅವರು 'ನನ್ನನ್ನು ಬಂಧಿಸಿ' ಎಂಬ ವರಾತ ಶುರುವಿಟ್ಟುಕೊಂಡಿದ್ದರು. ಅದು ಯಾಕೆ? ಬಂಧಿಸಿದಾಗ ಅದರಿಂದ ತಾನು ಮಾಧ್ಯಮದಲ್ಲಿ ಮತ್ತಷ್ಟು ಹೀರೋ ಆಗಿ ಮಿಂಚಬಹುದು ಎಂದೇ?
ರವೀಂದ್ರನಾಥ್ ಅವರೇ ಹೇಳಿಕೊಂಡಿರುವ ಪ್ರಕಾರ ಅವರನ್ನು ಬಂಧಿಸಿದರೆ ಆಗ ಅವರಿಗಾದ ತೊಂದರೆಯನ್ನು ನ್ಯಾಯಾಧೀಶರೆದುರು ಹೇಳಿಕೊಳ್ಳಬಹುದಂತೆ. ನ್ಯಾಯಾಧೀಶರೆದುರು ಹೇಳಿಕೊಳ್ಳಲೇಬೇಕು ಬೇಕು ಎಂಬ ತವಕವಿದ್ದರೆ ಖಾಸಗಿ ದೂರು ಸಲ್ಲಿಸುವ ಮೂಲಕವೂ ನ್ಯಾಯಾಲದ ಗಮನಕ್ಕೆ ಅವರಿಗಾದ ತೊಂದರೆಯನ್ನು ತರಬಹುದು. ಅದನ್ನೆಲ್ಲ ಮಾಡುವುದು ಬಿಟ್ಟು ತನ್ನನ್ನು ಬಂಧಿಸಿ, ತನ್ನನ್ನು ಬಂಧಿಸಿ ಎಂದು ಅವರು ಮಾಡಿದ ಮನವಿಯಲ್ಲಿ ಯಾವ ಮಹತ್ವ ಅಥವಾ ಅರ್ಥ ಕಾಣಲಿಲ್ಲ. ಆದರೆ ಆರೋಪಿಯೊಬ್ಬ ನನ್ನನ್ನು ಬಂಧಿಸಿ, ನನ್ನನ್ನು ಬಂಧಿಸಿ ಎಂದು ಒತ್ತಾಯಿಸಿದ್ದು ಪೊಲೀಸರಿಗೂ ಇದೇ ಮೊದಲು! ಆರೋಪಿಯನ್ನು ಬಂಧಿಸಲು ಪೊಲೀಸರು ಹರಸಾಹಸ ಮಾಡುತ್ತಾರೆ. ಇಲ್ಲಿ ಆರೋಪಿಯೇ ಬಂಧನಕ್ಕೊಳಗಾಗಲು ಪ್ರಯತ್ನ ಮಾಡುತ್ತಿದ್ದಾರೆ.
ವಿಚಿತ್ರ ಆದರೂ ಸತ್ಯ!
-ವಿನಾಯಕ ಭಟ್ಟ ಮೂರೂರು, ಕನ್ನಡಪ್ರಭ
vakradanta@gmail.com