ಅಂಕಣಗಳು

ಸಾಧನೆ ಮಾಡಲು ಕಾಲೇಜು ಶಿಕ್ಷಣ ಕಡ್ಡಾಯವೇ?

ಸಾಧನೆ ಮಾಡಲು ಕಾಲೇಜು ಶಿಕ್ಷಣ ಕಡ್ಡಾಯವೇ?
Published On :

1960ರ ದಶಕದಲ್ಲಿ ಇಂದಿರಾಗಾಂಧಿಯವರು ಭಾರತದ ಪ್ರಧಾನಿಯಾದಾಗ(ಅದೂ ಕಾಂಗ್ರೆಸ್ ಸಿಂಡಿಕೇಟ್‌ನ ಆಯ್ಕೆ ಯಿಂದಾಗಿ) ಖ್ಯಾತ ಪತ್ರಕರ್ತ ಖುಷವಂತ್ ಸಿಂಗ್ ಅವರು "ಯಾವ ಸರ್ಕಾರವನ್ನು ಇಂದಿರಾ ಮುನ್ನಡೆಸಲಿದ್ದಾರೋ, ಅದರಲ್ಲಿ ಗುಮಾಸ್ತೆಯಾಗುವುದಕ್ಕೂ ಆಕೆಗೆ ಅರ್ಹತೆಯಿಲ್ಲ" ಎಂದಿದ್ದರು. ಇಂದಿರಾ ಪದವೀಧರೆಯಲ್ಲ ಎಂದು ಅವರು ಹಾಗೆ ಹೇಳಿದ್ದರು. ಆಕೆ ಅತ್ಯುತ್ತಮ ಪ್ರಧಾನಿಯಾದರೋ ಇಲ್ಲವೋ ಎನ್ನುವುದು ಬೇರೆ ಮಾತು. ಆದರೆ ಆಕೆ ಅತ್ಯಂತ ಬಲಿಷ್ಠ ರಾಜಕಾರಣಿಯಂತೂ ಆಗಿದ್ದರು ಎನ್ನುವುದರಲ್ಲಿ ಎರಡು ಮಾತಿಲ್ಲ.
ಇನ್ನೊಂದೆಡೆ ಇಂದಿರಾ ತಂದೆ ಜವಾಹರ್‌ಲಾಲ್ ನೆಹರು ಉತ್ತಮ ಶೈಕ್ಷಣಿಕ ಹಿನ್ನೆಲೆಯಿಂದ ಬಂದವರು. ಆದರೂ ವಕೀಲರಾಗಿ ವೈಫಲ್ಯವನುಭವಿಸಿ ರಾಜಕೀಯ ರಂಗಕ್ಕೆ ಬಂದು, ಅದರಲ್ಲಿ ಮಿಂಚಿದವರು. ಖ್ಯಾತ ಉರ್ದು ಕವಿಯೊಬ್ಬ ಈ ಬಗ್ಗೆ ಹೀಗೆ ಬರೆದಿದ್ದ: "ವಕಾಲತ್ ನ ಚಲೆ ತೋ, ಕೌಮ್ ಕಾ ಲೀಡರ್ ಬನ್‌ಜಾ"(ವಕಾಲತ್ತು ನಡೆಯಲಿಲ್ಲವೆಂದರೆ, ರಾಜಕೀಯ ಸೇರಿ ದೇಶದ ನಾಯಕನಾಗು).
ಮನೇಕಾ ಗಾಂಧಿಯವರ ಮಾತನ್ನು ನಂಬುವುದಾದರೆ, ನೆಹರು-ಗಾಂಧಿ ಕುಟುಂಬದ ಪ್ರಸಕ್ತ ತಲೆಮಾರಿನಲ್ಲಿ ಅವರ ಮಗ ವರುಣ್ ಗಾಂಧಿಯನ್ನು ಹೊರತುಪಡಿಸಿ ಉಳಿದವರ್ಯಾರ ಬಳಿಯು ಸರಿಯಾದ ಶೈಕ್ಷಣಿಕ ಪದವಿಯಿಲ್ಲ. ಇನ್ನು ಮನೇಕಾ ದೆಹಲಿಯ ಪ್ರಖ್ಯಾತ 'ಲೇಡಿ ಶ್ರೀರಾಮ್ ಕಾಲೇಜಿನಿಂದ' ಪದವಿ ಪಡೆದಿದ್ದಾರೆ ಎನ್ನುವುದು ಗೊತ್ತಿರುವಂಥದ್ದೆ. ಆದರೆ ಇತ್ತ ಸೋನಿಯಾ ಗಾಂಧಿಯವರು, ಪೂರ್ವ ಇಟಲಿಯ ತಮ್ಮ ಅರ್ಬಾಸಬೋ ಗ್ರಾಮದಿಂದ ತುಸು ದೂರದಲ್ಲೇ ಇದ್ದ ಕ್ಯಾಥೋಲಿಕ್ ಮಿಷನರಿಯ ಸ್ಕೂಲ್ ದಾಟಿ ಮುಂದೆ ಓದಿದವರಲ್ಲ.  
ಈಗ ಒಂದು ಕ್ಷಣಕ್ಕೆ ಭಾರತದ ರಾಜಕಾರಣಿಗಳನ್ನು ಪಕ್ಕಕ್ಕಿಡೋಣ. ವಿನ್ಸ್‌ಟನ್ ಚರ್ಚಿಲ್ ಅವರು 20ನೇ ಶತಮಾನದ ಮಹಾನ್ ರಾಜಕಾರಣಿಗಳಲ್ಲಿ ಒಬ್ಬರು ಎನ್ನುವುದು ನಿರ್ವಿವಾದ. ಆದರೆ ವಿದ್ಯಾರ್ಥಿಯಾಗಿ ಅವರು ಬಹಳ ದುರ್ಬಲವಾಗಿದ್ದರು. ಮೂರನೇ ಪ್ರಯತ್ನದಲ್ಲಿ ಅವರಿಗೆ ರಾಯಲ್ ಮಿಲಿಟರಿ ಅಕಾಡೆಮಿ ಸೇರಲು ಸಾಧ್ಯವಾಗಿತ್ತು! ಅವರ ಬೆನ್ನ ಹಿಂದೆಯೂ ಕಾಲೇಜು ಪದವಿಯಿರಲಿಲ್ಲ. ಆದರೂ ಹಿಟ್ಲರ್‌ನ ಜರ್ಮನಿಯ ವಿರುದ್ಧ ಬ್ರಿಟನ್ ಅನ್ನು ಗೆಲ್ಲಿಸಲು ಅವರಿಗೆ ಇದ್ಯಾವುದು ಅಡ್ಡಿಯಾಗಲಿಲ್ಲ. ಅಬ್ರಾಹಾಂ ಲಿಂಕನ್ ಕೂಡ ಪದವಿ ಪತ್ರ ಹಿಡಿದು ಆಡಳಿತ ನಡೆಸಿದವರಲ್ಲ ಎನ್ನುವುದು ನಿಜವಾದರೂ, ಕೆಲವರು ಅವರನ್ನು ಅಮೆರಿಕದ ಮಹಾನ್ ಅಧ್ಯಕ್ಷರಲ್ಲಿ ಎಂದು ಪರಿಗಣಿಸಲು ಇಂದಿಗೂ ಒಪ್ಪುವುದಿಲ್ಲ ಬಿಡಿ.
ಮೈಕ್ರೋಸಾಫ್ಟ್‌ನಂಥ ಪ್ರಪಂಚ ಖ್ಯಾತಿಯ ಸಾಫ್ಟವೇರ್ ಕಂಪನಿಯನ್ನು ಹುಟ್ಟುಹಾಕಿದ ಬಿಲ್‌ಗೇಟ್ಸ್ ಮತ್ತು ಪೌಲ್ ಅಲೆನ್ ಅವರು ಓದಿದ್ದೆಷ್ಟು? ನಿಮಗೆ ಆಶ್ಚರ್ಯವಾಗಬಹುದು, ಬಿಲ್ ಗೇಟ್ಸ್ ಹಾವರ್ಡ್‌ನಲ್ಲಿ ಓದುತ್ತಿದ್ದಾಗ ಅವರನ್ನು ಒಪ್ಪಿಸಿ ಸಾಫ್ಟವೇರ್ ಅಭಿವೃದ್ಧಿಗಾಗಿ ಹೊರಗೆ ಕರೆತಂದುಬಿಟ್ಟರು ಪೌಲ್ ಅಲೆನ್! 'ಕಾಲೇಜ್ ಡ್ರಾಪ್ ಔಟ್‌' ಆದ    
ಅದೇ ಬಿಲ್‌ಗೇಟ್ಸ್ ಈಗ ಪ್ರಪಂಚದ ಅತಿ ಶ್ರೀಮಂತ ವ್ಯಕ್ತಿ. ಶ್ರೀಮಂತ ಎನ್ನುವುದಕ್ಕಿಂತ ಹೆಚ್ಚಾಗಿ ಅತ್ಯಂತ ಉದಾರಿ ವ್ಯಕ್ತಿ ಎನ್ನುವುದೇ ಸರಿ.
ಈಗ ಭಾರತಕ್ಕೆ ಬರೋಣ. ನಮ್ಮ ದೇಶದಲ್ಲಿ ಬೃಹತ್ ವಾಣಿಜ್ಯ ಸಾಮ್ರಾಜ್ಯಗಳನ್ನು ಸ್ಥಾಪಿಸಿದ ಮಾರವಾಡಿ ಸೇಠರು ತಾವು ಶಾಲೆಗೆ ಹೋಗಲಿಲ್ಲವೆಂದು ತಲೆಕೆಡಿಸಿಕೊಂಡವರಲ್ಲ. ಅಷ್ಟೇಕೆ ಭಾರತದಲ್ಲಿ ಅತಿದೊಡ್ಡ ವಾಣಿಜ್ಯಕೂಟದ ಸ್ಥಾಪನೆಗೆ ಕಾರಣವಾದ ಧೀರೂಬಾಯ್ ಅಂಬಾನಿ ಶಾಲಾ ಶಿಕ್ಷಣವನ್ನೂ ಮುಗಿಸಿರಲಿಲ್ಲ!  
 ಇತ್ತ ಮಾಧ್ಯಮ ಪ್ರಪಂಚವನ್ನೇ ನೋಡಿ: ಇಂಡಿಯನ್ ಎಕ್ಸಪ್ರೆಸ್‌ನ ಸಂಪಾದಕರಾಗಿದ್ದ, ಎಸ್. ಮುಳಗಾಂವ್‌ಕರ್  ಭಾರತದ ಪತ್ರಿಕಾ ಲೋಕವನ್ನು ಒಂದೊಮ್ಮೆ ಆಳಿದವರು. ಆಂಗ್ಲ ಪತ್ರಿಕೆಗಳ ಮತ್ಯಾವ ಸಂಪಾದಕರಿಗೂ ಮುಳಗಾಂವ್‌ಕರ್ ಅವರಂತೆ ಗದ್ಯ ಸೊಬಗನ್ನು ಸೃಷ್ಟಿಸಲು ಸಾಧ್ಯವಾಗಲಿಲ್ಲ. ಅಂಥ ವ್ಯಕ್ತಿ ಕಾಲೇಜು ಮೆಟ್ಟಿಲನ್ನೂ ಏರಿದವರಲ್ಲ. ಇನ್ನೊಂದು ವಿಚಾರ- ಮುಳಗಾಂವಕರ್ ಎಂದಿಗೂ ತಮ್ಮ ಪತ್ರಿಕೆಯನ್ನು ಸ್ವಯಂ ಬೆಳವಣಿಗೆಗಾಗಿ ಅಥವಾ ಸ್ವಯಂ ವೈಭವೀಕರಣಕ್ಕೆ ಬಳಸಿಕೊಂಡವರಲ್ಲ. ಆ ಕಾಲದಲ್ಲಿ ಅನೇಕ ಶ್ರೀಮಂತ ಗೆಳೆಯರನ್ನು ಅವರು ಹೊಂದಿದ್ದರೆನ್ನುವುದು ನಿಜ, ಆದರೆ ಕೊನೆಗಾಲದಲ್ಲಿ ಸ್ವಂತಕ್ಕೊಂದು ಫ್ಲಾಟ್ ಕೂಡ ಇಲ್ಲದೇ, ಪಾಪರ್ ಆಗಿ ನಿಧನರಾದರು.
ಇನ್ನು ಮಾಧ್ಯಮ ರಂಗದಲ್ಲೇ ಇಂಥ ಅನೇಕ ಉದಾಹರಣೆಗಳು ಸಿಗುತ್ತವೆ. ವಾಟರ್‌ಗೇಟ್ ಹಗರಣವನ್ನು ಹೊರಹಾಕಿ ರಿಚರ್ಡ್ ನಿಕ್ಸನ್‌ರನ್ನು ಅಧ್ಯಕ್ಷಗಿರಿಯಿಂದ ಕೆಳಕ್ಕಿಳಿಸಲು ಕಾರಣರಾದ 'ವಾಶಿಂಗ್‌ಟನ್ ಪೋಸ್ಟ್‌ನ' ಖ್ಯಾತಜೋಡಿ ಕಾರ್ಲ್ ಬರ್ನಸ್ಟೆನ್ ಮತ್ತು ಬಾಬ್ ಉಡ್‌ವರ್ಡ್‌ರ ಶೈಕ್ಷಣಿಕ ಹಿನ್ನೆಲೆಯೇನು? ಉಡ್‌ವರ್ಡ್ ಯೇಲ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದರಾದರೂ, ಬರ್ನ್‌ಸ್ಟೆನ್ ಕಾಲೇಜನ್ನು ಕಂಡವರಲ್ಲ. ಆದರೂ ಯೇಲ್ ವಿ.ವಿ.ಯಿಂದ ಪದವಿ ಹಿಡಿದು ತಂದ ಉಡ್‌ವರ್ಡ್‌ಗಿಂತಲೂ ಉತ್ತಮವಾಗಿ, ಸ್ಫುಟವಾಗಿ ಬರೆಯುವ ಕ್ಷಮತೆ ಬರ್ನ್‌ಸ್ಟೆನ್‌ಗಿತ್ತು.
ಹಾಗಿದ್ದರೆ ಇವೆಲ್ಲದರಿಂದ ನಮಗೆ ಅರ್ಥವಾಗುವುದೇನು? ಉತ್ತರ ಸರಳವಾಗಿದೆ: ಕಾಲೇಜು ಶಿಕ್ಷಣಕ್ಕೆ ಅದರದ್ದೇ ಆದ ಮಹತ್ವವಿದೆಯಾದರೂ, ಅದೇ ಎಲ್ಲವೂ ಅಲ್ಲ! ಯಶಸ್ವಿಯಾಗುವುದಕ್ಕೆ ಕಾಲೇಜು ಶಿಕ್ಷಣವೇ ಬೇಕಿಲ್ಲ. ರಾಜಕೀಯವಿರಲಿ, ಉದ್ಯಮವಿರಲಿ, ಪತ್ರಿಕೋದ್ಯಮವಿರಲಿ, ಇಂಥ ಕ್ಷೇತ್ರಗಳಲ್ಲೆಲ್ಲ ಯಶಸ್ವಿಯಾಗಲು ಪದವಿ ಶಿಕ್ಷಣಕ್ಕಿಂತ ಅಂತರ್ಗತ ಸಾಮರ್ಥ್ಯ, ಮನಸ್ಸಂಕಲ್ಪ, ಪರಿಸ್ಥಿತಿಯ ಸದ್ವಿನಿಯೋಗ ಮತ್ತು ಕಠಿಣ ಪರಿಶ್ರಮಗಳೇ ಮುಖ್ಯವಾಗುತ್ತವೆ.
ಹಾಗಾಗೇ ಕಾಂಗ್ರೆಸ್ ವಕ್ತಾರ ಅಜಯ್ ಮಕೆನ್‌ರ "ಸ್ಮೃತಿ ಇರಾನಿ ಪದವೀಧರೆಯಲ್ಲ" ಎಂಬ ಹೇಳಿಕೆ ತೀರಾ ಬಾಲಿಶವಾಗಿದೆ.  ಆಶ್ಚರ್ಯವೆಂದರೆ ಎನ್‌ಡಿಎ ಎದುರು ಹೀನಾಯವಾಗಿ ಸೋತ ನಂತರ, ಕಾಂಗ್ರೆಸ್ ಒಂದೆರಡು ತಿಂಗಳಾದರೂ ಏಕಾಂತದಲ್ಲಿ ಅತ್ತು, ಆನಂತರ ಎನ್‌ಡಿಎ ಒಕ್ಕೂಟದ ಮೇಲೆ ನಿರರ್ಥಕ ಪದಾಸ್ತ್ರಗಳ ದಾಳಿಯನ್ನು ಮಾಡಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ ಆ ಪಕ್ಷ ಒಂದಿನಿತೂ ಸಮಯ ವ್ಯರ್ಥ ಮಾಡುತ್ತಿಲ್ಲ! ಬಹುಶಃ ದೀರ್ಘಕಾಲದವರೆಗೆ ತಮ್ಮನ್ನು ವಿರೋಧ ಪಕ್ಷದಲ್ಲಿ ಮೋದಿ ಕುಕ್ಕರಬಡಿಯುವಂತೆ ಮಾಡಿದರು ಎನ್ನುವ ಕಾರಣಕ್ಕೆ ಕಾಂಗ್ರೆಸ್ಸಿಗರೆಲ್ಲ ಹೀಗೆ ಮಾಡುತ್ತಿರಬಹುದೇನೋ?
ಸ್ಮೃತಿ ಇರಾನಿಯವರು ಶೈಕ್ಷಣಿಕವಾಗಿ ದುರ್ಬಲರಾಗಿದ್ದರೂ, ಮಾನವಸಂಪನ್ಮೂಲಾಭಿವೃದ್ಧಿ ಸಚಿವೆಯಾಗಿ ಅವರು ಉತ್ತಮ ಕೆಲಸಗಳನ್ನೂ ಮಾಡಬಹುದು. ಏಕೆಂದರೆ, ಅವರು ಜೀವನವೆಂಬ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ ಎಂದೆನಿಸುತ್ತಿದೆ. ಟಿ.ವಿ. ಚರ್ಚೆಗಳಲ್ಲಿ ಕಾಣಿಸಿಕೊಳ್ಳುವ "ವಿದ್ಯಾವಂತ" ಕಾಂಗ್ರೆಸ್ ನಾಯಕರಿಗಿಂತಲೂ ಸ್ಮೃತಿ ಅವರ ಬೌದ್ಧಿಕ ಸೌಮರ್ಥ್ಯ ಅತ್ಯುತ್ತಮವಾಗೇ ಇದೆ. ಸತ್ಯವೇನೆಂದರೆ, ದೆಹಲಿ ವಿಶ್ವವಿದ್ಯಾಲಯದ ಪದವೀಧರರಾದ ಇದೇ ಅಜಯ್‌ರನ್ನೇ ಯಾವುದೇ ವಿಷಯದ ಮೇಲಿನ ಚರ್ಚೆಯಲ್ಲಿಯೂ ಸ್ಮೃತಿ ಇರಾನಿ ಹಿಂದಿಕ್ಕಬಲ್ಲರು. ಇರಾನಿ ಅವರಿಗೆ ತಾವು ಮಾತನಾಡುವ ವಿಷಯದ ಮೇಲೆ ಹಿಡಿತವಿರುವುದನ್ನು ನಾವು ನೋಡಿದ್ದೇವೆ, ಇನ್ನೊಂದೆಡೆ ಅಜಯ್ ಮಕೆನ್ ಮಾತನಾಡುವಾಗಲೆಲ್ಲ ಸರಿಯಾದ ಪದಗಳು ಸಿಗದೆ ಪರದಾಡುತ್ತಾರೆ, ಸರಿಯಾದ ಯೋಚನೆಗಳು ಬರದೆ ಬಡಬಡಿಸುತ್ತಾರೆ. ಸ್ಮೃತಿ ಮಾತಲ್ಲಿ ನೈಪುಣ್ಯ ಕಾಣಿಸುತ್ತದೆ, ಮಕೆನ್ ಅಸ್ಪಷ್ಟ ವಿಚಾರಗಳಿಂದಾಗಿ ಮಖೀನರಂತೆ ಕಾಣುತ್ತಾರೆ. ý
ಅತ್ಯಂತ ವಿದ್ಯಾವಂತ ಎಂದು ಕರೆಸಿಕೊಂಡ ಸಾಲು ಸಾಲು ನಾಯಕರು ಇದೇ ಶಿಕ್ಷಣ/ ಮಾನವಸಂಪನ್ಮೂಲಾಭಿವೃದ್ಧಿ ಇಲಾಖೆಯನ್ನು ಹೇಗೆ ಮುನ್ನಡೆಸಿದರು ಎನ್ನುವುದನ್ನು ನೋಡಿದರೆ ಸಾಕು, ಯಾವುದೇ ಒಂದು ಸಚಿವಾಲಯವನ್ನು ನಿಭಾಯಿಸಲು ಯಾವುದಾದರೊಂದು ವಿಷಯದಲ್ಲಿ ಪರಿಣತರಾಗಿರಲೇಬೇಕೆನ್ನುವ ವಾದ ಅರ್ಥಹೀನವೆನಿಸುತ್ತದೆ. ಒಂದು ವೇಳೆ ಈ ಮಾತನ್ನು ಸುಳ್ಳು ಎನ್ನುವುದಾದರೆ, ಆರೋಗ್ಯ ಕ್ಷೇತ್ರವನ್ನು ವೈದ್ಯ, ಟೆಲಿಕಾಮ್ ಕ್ಷೇತ್ರವನ್ನು ಐಟಿ ತಜ್ಞ, ವಾಣಿಜ್ಯ ಕ್ಷೇತ್ರವನ್ನು ಉದ್ಯಮಿ, ವಿದೇಶಾಂಗ ಕಚೇರಿಯನ್ನು ನಿಪುಣ ರಾಯಭಾರಿಗಳಷ್ಟೇ ನಡೆಸಬೇಕಾಗುತ್ತದೆ!
ಈ ಕಾರಣಕ್ಕಾಗೇ ಹೆಚ್‌ಆರ್‌ಡಿ ಸಚಿವಾಲಯವನ್ನು ಶೈಕ್ಷಣಿಕ ತಜ್ಞರೇ ನಡೆಸಬೇಕು ಎನ್ನುವುದೂ ಅಷ್ಟೇ ಮೂರ್ಖತನ. ಅಚಾನಕ್ಕಾಗಿ ಕಾಂಗ್ರೆಸ್ಸಿಗರೆಲ್ಲ ಮುರಳಿ ಮನೋಹರ್ ಜೋಶಿ ಅವರ ಶೈಕ್ಷಣಿಕ ಹಿನ್ನೆಲೆ(ಎಮ್.ಎಸ್‌ಸಿ) ನೆನಪಾಗತೊಡಗಿದೆ. ಆದರೆ ಅವರು ವಾಜಪೇಯಿ ಸರ್ಕಾರದಲ್ಲಿ ಮಾನವಸಂಪನ್ಮೂಲ ಅಭಿವೃದ್ಧಿ ಸಚಿವರಾಗಿದ್ದಾಗ, ಎನ್‌ಡಿಎ ಒಕ್ಕೂಟದ ನಾಯಕರೇ ಅವರನ್ನು ಸಾರ್ವಜನಿಕವಾಗಿ ಹೀಯಾಳಿಸತೊಡಗಿದ್ದರು ಎನ್ನುವುದು ಇವರಿಗೆಲ್ಲ ಮರೆತುಹೋಗಿದೆಯೇನೋ? ಇದೆಲ್ಲ ಒತ್ತಟ್ಟಿಗರಲಿ, ಯುಪಿಎ ಸರ್ಕಾರದಲ್ಲಿ ಹೆಚ್‌ಆರ್‌ಡಿ ಸಚಿವರಾಗಿ ಪಲ್ಲಂ ರಾಜು ಮತ್ತು ಕಪಿಲ್ ಸಿಬಲ್ ಇಬ್ಬರೂ ಕಾರ್ಯನಿರ್ವಹಿಸಿದ್ದಾರಲ್ಲಾ, ಅದರಲ್ಲಿ ಹೆಚ್ಚು ಸಾಧನೆ ಮಾಡಿದ್ದು ಯಾರು? ಅವರ ವಿದ್ಯಾರ್ಹತೆಯೇನು? ಕಪಿಲ್ ಸಿಬಲ್‌ರನ್ನು ಪ್ರಶ್ನಿಸಿದರೆ ತಾವೇ ಹೆಚ್ಚು ಸಾಧನೆ ಮಾಡಿದ್ದೇವೆ ಎಂದು ವಾದಿಸುತ್ತಾರೆ ಬಿಡಿ!
 ಹಾಗಾಗೇ ಸ್ಮೃತಿ ಇರಾನಿ ಪದವೀಧರೆಯಾಗಿರದಿದ್ದರೂ, ಸಚಿವೆಯಾಗಿ ನಮ್ಮೆಲ್ಲರನ್ನೂ ಆಶ್ಚರ್ಯಕ್ಕೆ ದೂಡಿದರೆ ಆಶ್ಚರ್ಯ ಪಡಬೇಕಿಲ್ಲ. ಏಕೆಂದರೆ ಆ ಖಾತೆಯನ್ನು ನಿರ್ವಹಿಸಿದವರಿಗಿಂತಲೂ ಉತ್ತಮವಾದ ಅರ್ಹತೆಯೊಂದು ಅವರ ಬಳಿ ಇದೆ. ಅದನ್ನು 'ಕಾಮನ್‌ಸೆನ್ಸ್‌' ಅನ್ನುತ್ತಾರೆ.
ಇನ್ನು ಅಫಿಡವಿಟ್‌ನಲ್ಲಿ ಅವರು ಸಲ್ಲಿಸಿದ ಅಂಶಗಳ ವಿಷಯಕ್ಕೆ ಬಂದರೆ, ನಿಸ್ಸಂಶಯವಾಗಿಯೂ ಅದು ಕ್ಷಮಾರ್ಹವಲ್ಲ. 2004ರ ಲೋಕಸಭಾ ಚುನಾವಣೆಯಲ್ಲಿ ದೆಹಲಿಯ ಚಾಂದನಿ ಚೌಕ್‌ನಿಂದ ಕಪಿಲ್ ಸಿಬಲ್ ವಿರುದ್ಧ ಸ್ಪರ್ಧಿಸುವಾಗ, ತಪ್ಪು ವಿದ್ಯಾರ್ಹತೆಯನ್ನು ಒದಗಿಸುವ ತುಡಿತ ಅವರಿಗೆ ಬರಬಾರದಿತ್ತು. ಅದಾಗ್ಯೂ ಆ ತಪ್ಪನ್ನು ಅವರು 2009ರ ಚುನಾವಣೆಗಳಲ್ಲಿ ಸರಿಪಡಿಸಿ, "ತಾವು ಕೇವಲ ಬಿ.ಎ(ಕರೆಸ್ಪಾಂಡೆನ್ಸ್) ಪ್ರಥಮ ವರ್ಷವನ್ನಷ್ಟೇ ಮುಗಿಸಿರುವುದಾಗಿ, ಟಿ.ವಿ ಮತ್ತು ಗ್ಲಾಮರ್‌ನ ಲೋಕ ತಮ್ಮನ್ನು ಸೆಳೆದದ್ದರಿಂದ ಓದು ಮುಗಿಸಲು ಸಾಧ್ಯವಾಗಲಿಲ್ಲ" ಎಂದು ಹೇಳಿದ್ದರು.  
ಆದರೆ ಇದೇ ಕಾಂಗ್ರೆಸ್ ಪಕ್ಷದ ವಕ್ತಾರನೊಬ್ಬ ತಪ್ಪು ಆದಾಯ ದಾಖಲೆಯನ್ನು ತೋರಿಸಿ, ಸಿಕ್ಕಿಬಿದ್ದಾಗ 3 ಕೋಟಿ ರುಪಾಯಿ ಹೆಚ್ಚುವರಿ ತೆರಿಗೆ ಸಲ್ಲಿಸಿದನಲ್ಲ , ಸ್ಮೃತಿ ಇರಾನಿ ಅವರದ್ದು ಆ ಪರಿಯ ಘೋರ ತಪ್ಪೆ? ಆ ವ್ಯಕ್ತಿ ತೆರಿಗೆ ಕಳ್ಳನೆಂದಂತಾಯಿತಲ್ಲವೇ? ಅದಾಗ್ಯೂ ಆ ವ್ಯಕ್ತಿಯ ಆದಾಯ 'ಒಪ್ಪಿಕೊಂಡದಕ್ಕಿಂತಲೂ' ಎಷ್ಟೋ ಪಟ್ಟು ಹೆಚ್ಚಿದೆ ಎಂದು ತೆರಿಗೆ ಇಲಾಖೆ ಹೇಳಿತ್ತು. ಸ್ಮೃತಿ ಇರಾನಿ ಶೈಕ್ಷಣಿಕ ಹಿನ್ನೆಲೆಯ ಬಗ್ಗೆ ಸುಳ್ಳು ಹೇಳಿ ಈ ವ್ಯಕ್ತಿಯಂತೆ ಬೃಹತ್ ಗಳಿಕೆ ಮಾಡಿಕೊಂಡಿದ್ದಾರೆಯೇ?
ಇರಾನಿ ಅವರ ಶಿಕ್ಷಣದ ಹಿನ್ನೆಲೆಯನ್ನು ಪ್ರಶ್ನಿಸುವ ಕಾಂಗ್ರೆಸ್ ವಕ್ತಾರರು ತಮ್ಮ ನಾಯಕಿ ಸೋನಿಯಾ ಮತ್ತು ನಾಯಕ ರಾಹುಲ್ ಯಾವ ಪದವಿ ಪಡೆದಿದ್ದಾರೆಂದು ಹೇಳಬಲ್ಲರೇ? ಸತ್ಯವೇನೆಂದರೆ, ಮೊದಲಬಾರಿಗೆ ಲೋಕಸಭೆಗೆ ಆಯ್ಕೆಯಾದಾಗ ಸೋನಿಯಾ ಗಾಂಧಿ ತಾವು ಕೇಂಬ್ರಿಜ್ ವಿಶ್ವವಿದ್ಯಾಲಯದ ಪದವೀಧರೆ ಎಂದು ಹೇಳಿದ್ದರು. ಆದರೆ ಈ ಬಗ್ಗೆ ಪ್ರಶ್ನೆಗಳೆದ್ದಾಗ ಅವರು ಇಂಗ್ಲೆಂಡಿನ ಕೇಂಬ್ರಿಜ್ ಎನ್ನುವ ಪಟ್ಟಣದ ಖಾಸಗಿ ಸಂಸ್ಥೆಯಲ್ಲಿ ತುಸು ತರಬೇತಿ ಪಡೆದಿದ್ದರು ಎನ್ನುವುದು ತಿಳಿಯಿತು. ಆ ಸಂಸ್ಥೆ, ಇಂಗ್ಲೀಷೇತರರಿಗೆ ಇಂಗ್ಲಿಷ್ ಭಾಷೆಯನ್ನು ಕಲಿಸುತ್ತಿತ್ತಷ್ಟೆ.
ಕೊನೆಯದಾಗಿ, ಅದ್ಧೂರಿ ವಿಶ್ವವಿದ್ಯಾಲಯದಿಂದ ಪದವಿ ಪಡೆದ ಮಾತ್ರಕ್ಕೆ ರಾಜಕೀಯದಲ್ಲಿ ಅಥವಾ ಇನ್ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಸಿಗುತ್ತದೆ ಎನ್ನುವುದಕ್ಕೆ ಸಾಧ್ಯವಿಲ್ಲ. ಉದಾಹರಣೆಗೆ 'ಸಲ್ಮಾನ್ ಖುರ್ಷಿದ್‌' ಅವರನ್ನೇ ತೆಗೆದುಕೊಳ್ಳಿ!!

-ವೀರೇಂದ್ರ ಕಪೂರ್
virendra1946@yahoo.co.in


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.