ಪ್ರಶ್ನೆಗಳಿವೆ ನಮ್ಮ ಪರಿಸರ ಪ್ರಜ್ಞೆಗೆ

ನಾಲ್ಕಾರು ಗುಂಡಿ ತೋಡಿ, ಐದಾರು ಸಸಿ ನೆಟ್ಟು, ಒಂದು ಚೊಂಬು ನೀರು ಹಾಕಿ ಕೈತೋಳೆದುಕೊಂಡರೆ ಮುಗಿಯಿತು ಪರಿಸರ ದಿನಾಚರಣೆ...
ಇತ್ತೀಚಿನ ಕೆಲ ವರ್ಷಗಳಿಂದ ವಿಶ್ವ ಪರಿಸರ ದಿನದ ಆಚರಣೆ ಪರಿ ಇದು. ಪರಿಸರ ದಿನದಂದು ದೊಡ್ಡ ಕಾರ್ಯಕ್ರಮ ಮಾಡಿ ನೆಟ್ಟ ಸಸಿಗಳು ನಂತರ ಏನಾದವು ಎಂದು ತಿರುಗಿಯೂ ನೋಡುವುದಿಲ್ಲ. ಅದಕ್ಕೆ ಅಂದು ಬಿದ್ದ ಒಂದು ಚೊಂಬು ನೀರು ಅದನ್ನು ಬದುಕಿಸಿ, ಬೆಳೆಸಲು ಸಾಧ್ಯವೇ? ಅಥವಾ ಒಂದು ಸಸಿಯನ್ನು ನೆಟ್ಟ ಮಾತ್ರಕ್ಕೆ ಇಡೀ ಪರಿಸರವನ್ನು ಕಾಪಾಡಿದಂತಾಗುತ್ತದೆಯೇ? ಗಿಡ-ಮರ ಮಾತ್ರ ಪರಿಸರವೇ? ಉಹೂಂ... ಪರಿಸರ ದಿನಾಚರಣೆ ಆಚರಿಸುವ ಅಥವಾ ಅದರಲ್ಲಿ ಭಾಗವಹಿಸುವ ಬಹುತೇಕರಲ್ಲಿ ಇಂತಹ ಪ್ರಶ್ನೆಗಳಿಗೆ ಉತ್ತರ ಇಲ್ಲ. ಉತ್ತರ ಇಲ್ಲ ಎಂಬುದಕ್ಕಿಂತ ಇಂತಹ ಪ್ರಶ್ನೆಗಳೇ ಅವರಲ್ಲಿ ಮೂಡುವುದಿಲ್ಲ. ವಿಶ್ವದಲ್ಲೆಲ್ಲ ಆಚರಣೆ ಮಾಡುತ್ತಿದ್ದಾರೆ, ನಾವೂ ಒಂದು ಆಚರಣೆ ಮಾಡಿಯೇ ಬಿಡಬೇಕು. ಅದಕ್ಕೊಂದು ಕಾರ್ಯಕ್ರಮ, ಅತಿಥಿಗಳು, ಗಿಡಗಳು... ಇಷ್ಟೇ ಪ್ರಮುಖ ಆದ್ಯತೆ. ಶಾಮಿಯಾನ ಹಾಕಿ ನಡೆಸುವ ಕಾರ್ಯಕ್ರಮ ಯಾವುದೇ ಡಾಂಬರು ರಸ್ತೆ ಮೇಲೆಯೋ ಅಥವಾ ಶಾಲೆಯಲ್ಲೋ ನಡೆಯುತ್ತದೆ. ಇನ್ನು ಕೆಲವರು 'ಹೈಟೆಕ್' ಆಗಿಯೂ ಮಾಡುವುದುಂಟು. ಹೋಟೆಲ್, ದೊಡ್ಡ ಸಭಾಂಗಣದಲ್ಲಿ ಸಮಾರಂಭ ನಡೆಯುತ್ತವೆ. ವಿಪರ್ಯಾಸವೆಂದರೆ, ಇಂತಹ ಹೈಟೆಕ್ ಕಾರ್ಯಕ್ರಮಗಳಲ್ಲಿ ಪಾಟ್ನಲ್ಲಿರುವ ಗಿಡವೊಂದಕ್ಕೆ ನೀರು ಹಾಕಿ ದಿನಾಚರಣೆ ಮಾಡಲಾಗುತ್ತದೆ. ನಂತರ ಆ ಪಾಟ್ ಎಲ್ಲಿ ಹೋಯಿತು ಎಂಬುದು ಅತಿಥಿಗಳಿಗಲ್ಲ ಆಯೋಜಕರಿಗೇ ಗೊತ್ತಿರುವುದಿಲ್ಲ. ಆದರೆ, ಭಾರಿ ಪ್ರಮಾಣದಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳಲು ಸಾವಿರಾರು ರು. ವೆಚ್ಚ ಮಾಡುತ್ತಾರೆ.
ಈ ಕಾರ್ಯಕ್ರಮಗಳಿಂದ ಪರಿಸರ ಉಳಿದಂತಾಗುತ್ತದೆಯೇ? ಅದನ್ನು ರಕ್ಷಣೆ ಮಾಡಿದಂತಾಗುತ್ತದೆಯೇ? ಇಲ್ಲ, ಈ ಪ್ರಶ್ನೆಗಳನ್ನು ಅವರು ಕೇಳಿಕೊಳ್ಳುವುದೇ ಇಲ್ಲ. ಸಾವಿರಾರು ರುಪಾಯಿಗಳನ್ನು ವೆಚ್ಚ ಮಾಡಿ ಇಂತಹದ್ದೊಂದು ಕಾರ್ಯಕ್ರಮ ಮಾಡುವ ಬದಲು ಪರಿಸರಕ್ಕೆ ಕೊಡುಗೆ ನೀಡುವಂತಹ ಒಂದು ಕಾಯಕವನ್ನಾದರೂ ಮಾಡಿದರೆ ಒಳಿತಲ್ಲವೇ? ಒಂದು ಗಿಡಕ್ಕೆ ನೀರು ಹಾಕುವ ಕಾರ್ಯಕ್ರಮಕ್ಕೆ ಸಾವಿರಾರು ವೆಚ್ಚ ಮಾಡುವ ಬದಲು, ಸಾವಿರಾರು ಸಸಿಗಳನ್ನು ಅವು ಬೆಳೆಯುವ ಪ್ರದೇಶದಲ್ಲಿ ನೆಟ್ಟರೆ ಅದರಿಂದಾಗುವ ಪ್ರಯೋಜನ ಹೆಚ್ಚಲ್ಲವೇ? ಅರಣ್ಯ ಪ್ರದೇಶವೋ, ಉದ್ಯಾನವೋ, ಕೆರೆ ದಡವೋ... ಸಾಕಷ್ಟು ಅನುಕೂಲಕರ ಪ್ರದೇಶಗಳು ಸಸಿ ನೆಡಲು ಸಿಗುತ್ತವೆ. ಇಂತಹ ಪ್ರದೇಶಗಳಲ್ಲಿ ದಿನವೂ ಆ ಸಸಿಯನ್ನು ಆರೈಕೆ ಮಾಡಬೇಕಾದ ಪ್ರಮೇಯವೂ ಬರುವುದಿಲ್ಲ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ, ಒಂದು ಕೆರೆಯಲ್ಲಿನ ಹೂಳು ತೆಗೆದು ಅಲ್ಲಿ ಹೆಚ್ಚು ನೀರು ನಿಲ್ಲುವಂತೆ ಮಾಡಿದರೆ ಅದು ಪರಿಸರಕ್ಕೆ ನೀಡುವ ಕೊಡುಗೆ ಆಗುವುದಿಲ್ಲವೇ? ಕೆರೆಯಲ್ಲಿರುವ ಹೂಳನ್ನೆಲ್ಲ ತೆಗೆಯಬೇಕಿಲ್ಲ, ಆದರೆ ಕಾರ್ಯಕ್ರಮಕ್ಕೆ ವೆಚ್ಚ ಮಾಡುವ ಸಾವಿರಾರು ರುಪಾಯಿಗಳನ್ನು ಜೆಸಿಬಿ, ಟ್ರ್ಯಾಕ್ಟರ್ಗೆ ನೀಡಿ ಅಲ್ಲಿ ನಿಂತು ಕೆಲಸ ಮಾಡಿಸಿದರೆ ಕೆರೆ ಅಂಗಳ ಶುದ್ಧಿಯಾಗುತ್ತದೆ. ಮಳೆನೀರು ಹೆಚ್ಚು ಸಂಗ್ರಹವಾಗಿ ಅಂತರ್ಜಲ ಹೆಚ್ಚಾಗುತ್ತದೆ, ಅಲ್ಲವೇ?
ಇಲ್ಲ, ಇಂತಹ ಕನಿಷ್ಠ ಆಲೋಚನೆಯನ್ನು ಮಾಡುವ ಸಮಯ ವಿಶ್ವಪರಿಸರ ದಿನಾಚರಣೆ ಮಾಡುವ ಬಹುತೇಕರಿಗೆ ಇರುವುದಿಲ್ಲ. ಅದಕ್ಕೇ ನಗರದ ಕೇಂದ್ರ ಭಾಗದಲ್ಲಿ ಕಾರ್ಯಕ್ರಮಗಳು ಮುಗಿಯುತ್ತವೆ. ಪರಿಸರ ರಕ್ಷಣೆ, ಪರಿಸರ ಕಾಪಾಡುವ ಮಾತುಗಳು ಅಂದಿಗೆ ಮಾತ್ರ ಸೀಮಿತ. ಮತ್ತೆ ಮುಂದಿನ ವರ್ಷ ದಿನಾಚರಣೆ ಹತ್ತಿರವಾಗುತ್ತಿದ್ದಂತೆಯೇ ಪರಿಸರ ಪ್ರೇಮ ಹೊರಹೊಮ್ಮುತ್ತದೆ. ಇದೇಕೆ ಇಂತಹ ಪರಿಸರ ಪ್ರೇಮದ ವ್ಯಾಮೋಹ? ನಿಮಗೆ ಗೊತ್ತಿರಬಹುದು, ನಗರ ಪ್ರದೇಶಗಳಲ್ಲಿ ಅಭಿವೃದ್ಧಿ ನೆಪದಲ್ಲಿ ಸಾವಿರಾರು, ಲಕ್ಷಾಂತರ ಮರಗಳಿಗೆ ಕೊಡಲಿಪೆಟ್ಟು ಬೀಳುತ್ತದೆ. ಇಂತಹ ಕೆಲವು ಸಂದರ್ಭದಲ್ಲಿ ಕೆಲವು ಪ್ರತಿಷ್ಠಿತ ಪ್ರದೇಶಗಳಲ್ಲಿ ಕೆಲವು 'ಸ್ವಯಂ' ಸೇವಕರು ಮರಗಳನ್ನು ತಬ್ಬಿ ಕಡಿಯಲು ಬಿಡುವುದಿಲ್ಲ ಎಂದು ಒಂದೆರಡು ದಿನ ಪೋಸುಕೊಡುತ್ತಾರೆ. ಅವರ ಮಕ್ಕಳನ್ನೂ ಅಲ್ಲಿಗೆ ಕರೆ ತಂದಿರುತ್ತಾರೆ. ಅದು ಅಲ್ಲಿಗೇ ಮುಕ್ತಾಯ. ಇಂತಹ ಪ್ರತಿಭಟನೆಗಳು ಅವರು ತೆಗೆದುಕೊಳ್ಳುವ ಫೋಟೋಗೆ ಸಾಕಷ್ಟು ಅಗತ್ಯ. ಅಷ್ಟೇ ಅಲ್ಲ, ಅದರ ಪ್ರಚಾರ ಮಾಧ್ಯಮಗಳಲ್ಲಿ ಬಂದರೆ ಅವರಿಗಾಗುವ 'ಅನುಕೂಲವೇ' ಬೇರೆ ಬೇರೆ. ಇಂತಹ ಪ್ರತಿಭಟನೆಕಾರರು ಕನಿಷ್ಠ ಒಂದು ಸಸಿ ನೆಟ್ಟು, ಅದನ್ನು ಬೆಳೆಸಿ ದೊಡ್ಡದಾಗಿರಿಸಿರುವುದಿಲ್ಲ. ಕಾರು ನಿಲ್ಲಿಸಲು ಅಡ್ಡಿಯಾಗುತ್ತೆ ಎಂದು ಮನೆಯ ಮುಂದಿನ ರಸ್ತೆಯಲ್ಲಿರುವ ಮರವನ್ನೇ ಇವರು ಕಡಿಸಿರುತ್ತಾರೆ. ಆದರೆ, ವಿಶ್ವಮಟ್ಟದಲ್ಲಿ, ಅಂತಾರಾಷ್ಟ್ರೀಯವಾಗಿ ನಡೆಯುವ ಆಚರಣೆಗಳನ್ನು ಮಾತ್ರ ಇವರು ಚಾಚೂತಪ್ಪದೆ ಮಾಡುತ್ತಾರೆ. ಇವೆಲ್ಲ 'ಸ್ವಯಂ' ಸೇವೆಗಾಗಿ.
ವಿಶ್ವ ಪರಿಸರ ದಿನವನ್ನು ನಾವು ಇತ್ತೀಚಿನ ವರ್ಷಗಳಲ್ಲಿ ಅತಿಹೆಚ್ಚು ಪ್ರಾಮುಖ್ಯ ನೀಡಿಯೇ ಆಚರಿಸುತ್ತಿದ್ದೇವೆ. ವಿಶ್ವಸಂಸ್ಥೆ 1973ರಲ್ಲಿ ಈ ದಿನದ ಆಚರಣೆ ಆರಂಭಿಸಿತ್ತು. ಪ್ರತಿವರ್ಷವೂ ಒಂದೊಂದು ಘೋಷವಾಕ್ಯದೊಂದಿಗೆ ಆಚರಣೆಯಾಗುತ್ತದೆ. ಅದನ್ನೇ ನಾವು ಇಲ್ಲಿಯೂ ಬಳಸಿಕೊಳ್ಳುತ್ತೇವೆ. ಅದು ನಮ್ಮ 'ಪರಿಸರ'ಕ್ಕೆ ವ್ಯತಿರಿಕ್ತವಾಗಿದ್ದರೂ ಕೂಡ. ಈ ಬಾರಿಯ ಘೋಷವಾಕ್ಯ 'ನಿಮ್ಮ ಧ್ವನಿ ಏರಿಸಿ, ಆದರೆ ಸಮುದ್ರಮಟ್ಟವನ್ನಲ್ಲ'. ಇದು ರಾಜ್ಯದ ಎಷ್ಟು ಪ್ರದೇಶಕ್ಕೆ ಅನ್ವಯವಾಗಬಹುದು ಹೇಳಿ? ಆದರೂ ಅದನ್ನೇ ರಾಜಾಜ್ಞೆಯಂತೆ ಪಾಲಿಸಲಾಗುತ್ತದೆ. ಇಂತಹ ಅಗತ್ಯ ನಮಗಿದೆಯೇ?
ಪರಿಸರ ರಕ್ಷಿಸಿ ಪೋಷಿಸುವ ಕೆಲಸವನ್ನು ನಮ್ಮ ಪೂರ್ವಜರು ಮಾಡುತ್ತಲೇ ಬಂದಿದ್ದರು. ಅವರಿಗೆ ಇಂತಹ ವಿಶ್ವ ದಿನಾಚರಣೆಗಳ ಬಗ್ಗೆ ಏನೊಂದೂ ಗೊತ್ತಿರಲಿಲ್ಲ. ಆದರೆ, ನಮ್ಮ ಪೂರ್ವಜರು ಮಾಡುತ್ತಿದ್ದ ಕಾರ್ಯವನ್ನು ಮರೆತಿರುವ ನಾವು, ವಿಶ್ವ ಆಚರಿಸುತ್ತಿದೆ ಎಂಬ ಕಾರಣಕ್ಕಾಗಿ ಅಂತಹ ಆಚರಣೆ ಮಾಡುತ್ತಿದ್ದೇವೆ. ಈ ಆಚರಣೆ ತಪ್ಪಲ್ಲ, ಆದರೆ ಸಾರ್ಥಕ್ಯ ಕಾಣುವುದಿಲ್ಲ ಅಷ್ಟೇ. ಒಮ್ಮೆ ಯೋಚನಾಲಹರಿ ಹಿಂದಕ್ಕೆ ಚಲಿಸಿರಿ. ಹಿಂದಿನ ದಿನಗಳಲ್ಲಿ ತೆಪ್ಪೋತ್ಸವ, ಬೆಳದಿಂಗಳ ಊಟ ಎಂದೆಲ್ಲ ಆಚರಣೆಗಳಿದ್ದವು. ಒಂದು ಊರಿನಲ್ಲಿ ಎಲ್ಲ ಜನ ಸೇರಿಕೊಂಡು ಆಚರಿಸುವಂತಹ ಸಂಭ್ರಮಗಳು ಇದಾಗಿದ್ದವು. ತೆಪ್ಪೋತ್ಸವ ಎಂದರೆ ಕೆರೆಯಲ್ಲಿ ತೆಪ್ಪಗಳನ್ನು ಸಿಂಗರಿಸಿ, ಕೆರೆಯಲ್ಲಿ ವಿಶಿಷ್ಟ ರೀತಿಯಲ್ಲಿ ತೇಲಿಸಿ, ನಲಿಯುವ ಕ್ಷಣಗಳು. ಇದಕ್ಕಾಗಿ ಸ್ಥಳೀಯರೆಲ್ಲ ಸೇರಿಕೊಂಡು ವಾರದ ಮೊದಲೇ ಕೆರೆಯನ್ನು ಸ್ವಚ್ಛಗೊಳಿಸುತ್ತಿದ್ದರು. ಅಲ್ಲಿರುವ ತ್ಯಾಜ್ಯ ಹೊರಬೀಳುತ್ತಿತ್ತು. ಗಿಡ-ಮರಗಳು ಬೆಳೆಯಲು ಅಡ್ಡಿಯಾಗುವ ಕಳೆಗಳೆಲ್ಲ ಕಳೆದುಹೋಗುತ್ತಿದ್ದವು. ನಂತರ ತೆಪ್ಪೋತ್ಸವವಾಗುತ್ತಿತ್ತು. ಅಂದರೆ, ತೆಪ್ಪೋತ್ಸವದ ನೆಪದಲ್ಲಿ ಪರಿಸರ ಸ್ವಚ್ಛವಾಗುತ್ತಿತ್ತು. ಇನ್ನು, ಬೆಳದಿಂಗಳ ಊಟ. ಇಂತಹ ಹೆಸರನ್ನೇ 'ಪರಿಸರ ಪ್ರೇಮಿ' ಎಂದು ಸ್ವಯಂಘೋಷಿಸಿಕೊಂಡವರು ಕೇಳಿಲ್ಲ. ಕೆರೆಯ ಅಂಗಳದಲ್ಲೋ, ಎಲ್ಲ ಜನರು ಸೇರುವ ಒಂದು ನಿರ್ದಿಷ್ಟ ತಾಣದಲ್ಲಿ ನೂರಾರು ಜನರು ಹುಣ್ಣಿಮೆ ಚಂದ್ರನ ಬೆಳಕಿನಲ್ಲಿ ಒಟ್ಟಾಗಿ ಊಟ ಮಾಡುವುದೇ ಈ 'ಬೆಳದಿಂಗಳ ಊಟ'. ಊಟವೊಂದಷ್ಟೇ ಅಲ್ಲ, ಹಾಡು-ಹಸೆ, ಆಟಗಳೂ ಇದರ ಭಾಗ. ಇದಕ್ಕೂ ಹತ್ತಾರು ದಿನಗಳ ಹಿಂದೆಯೇ ಸಿದ್ಧತೆ ಆಗಬೇಕು. ಬೆಳದಿಂಗಳ ಊಟ ನಡೆಯುವ ತಾಣ ಸ್ವಚ್ಛ ಪರಿಸರದಿಂದ ಇರುವಂತೆ ಮಾಡಲಾಗುತ್ತದೆ. ಇದಲ್ಲವೇ ಪರಿಸರ ದಿನ ಆಚರಣೆ? ಇಂತಹ ಆಚರಣೆಗಳು ನಮ್ಮಲ್ಲಿ ಅನೇಕ. ಆದರೆ, ಅವುಗಳನ್ನು ಕಾಲಕ್ರಮೇಣ ಮರೆತುಹೋಗಿದ್ದೇವೆ. ಪಾಶ್ಚಾತ್ಯ ಆಚರಣೆಗಳಿಗಷ್ಟೇ ಇಂದು ಪ್ರಾಮುಖ್ಯ. ಪಾಟ್ ಅಥವಾ ಕುಂಡದಲ್ಲಿ ಮಣ್ಣು ಹಾಕಿ ಸಸಿ ನೆಟ್ಟರೆ ದಿನಾಚರಣೆ ಆಗುವುದಿಲ್ಲ. ನಾಲ್ಕಾರು ಜನರಿಗೆ ಸಸಿಗಳನ್ನು ನೀಡಿದರೆ ಅದೂ ಆಚರಣೆ ಆಗುವುದಿಲ್ಲ. ಪರಿಸರ ಎಂದರೆ ಅಪಾರ. ನಾವು ಬದುಕುವ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದೇ ಆಚರಣೆ ಆಗಬೇಕು. ಇದನ್ನು ಕೇವಲ ಒಂದೆರಡು ಸಸಿಗಳಿಗೆ ಮೀಸಲಿಡಬಾರದು. ನಮ್ಮ ಸುತ್ತಮುತ್ತಲಿನ ತ್ಯಾಜ್ಯಮುಕ್ತವಾಗಿರಿಸಿಕೊಳ್ಳುವುದೂ ಪರಿಸರ ಸಂರಕ್ಷಣೆಯೇ ಅಲ್ಲವೇ? ಲಕ್ಷಾಂತರ ಸಸಿಗಳನ್ನು ನೆಟ್ಟಿದ್ದೇವೆ, ಪರಿಸರ ಉಳಿಸಿದ್ದೇವೆ ಎನ್ನುವ ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳೂ ಖಾಸಗಿ ಸಂಸ್ಥೆಗಳಿಗಿಂತ ಭಿನ್ನವಾಗೇನೂ ಇಲ್ಲ. ಸಂಖ್ಯೆಗಾಗಿ ಯೋಜನೆಗಳನ್ನು ರೂಪಿಸಿ, ಪರಿಸರದ ಹೆಸರಲ್ಲಿ ಕೋಟ್ಯಂತರ ಹಣ ವೆಚ್ಚ ಮಾಡಿ ಏನೂ ಸಾಧಿಸಲಾಗದೆ ಪರಿಸರಕ್ಕೆ ಮತ್ತಷ್ಟು ಮಾರಕವಾದದ್ದನ್ನೇ ಮಾಡುವುವು ಇವೇ ಸರ್ಕಾರಿ ಸಂಸ್ಥೆಗಳು. ಪರಿಸರ ದಿನ ಆಚರಣೆ ಅರ್ಥಪೂರ್ಣವಾಗಿರಬೇಕು. ಅದನ್ನು ಆಚರಿಸುವುದಕ್ಕೆ ಕಾರ್ಯಕ್ರಮ ಮಾಡುವ ಬದಲು ಪರಿಸರ ರಕ್ಷಣೆ, ಪೋಷಣೆಯಲ್ಲಿ ಬುಡಮಟ್ಟದ ಕೆಲಸ ಮಾಡಬೇಕು. ಇಂತಹ ಕಾಯಕ ಈ ಒಂದು ದಿನವಾದರೂ ಆದರೆ, ದಿನಾಚರಣೆ ಸಾರ್ಥಕ.
- ಕೆರೆ ಮಂಜುನಾಥ್
keremanju@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


