ಅಂಕಣಗಳು

ಕಸ ಕೆಸರೆರಚಾಟದ ಸ್ಥಿತಿ ನಮಗೆ ಹೇಗೆ ಬಂತು?

ಕಸ ಕೆಸರೆರಚಾಟದ ಸ್ಥಿತಿ ನಮಗೆ ಹೇಗೆ ಬಂತು?
Published On :

ಜುಲೈ 28. 1997. ಭಾರತದ ಸುಪ್ರೀಂ ಕೋರ್ಟ್ ಒಂದು ಮಹತ್ವದ ಆದೇಶ ಹೊರಡಿಸಿತ್ತು. ಇನ್ಮುಂದೆ ತ್ಯಾಜ್ಯ ವಿಲೇವಾರಿ ಮಾಡುವಾಗ ಕೀಟನಾಶಕ ಜೊತೆಗೆ ಯಾವುದೇ ರಸಾಯನಿಕ ಉಪಯೋಗಿಸುವಂತಿಲ್ಲ. ಅದರ ಜೊತೆಗೆ ಮುನ್ಸಿಪಲ್ ಸಾಲಿಡ್ ವೇಸ್ಟ್(ಎಮ್ಎಸ್ಡಬ್ಲ್ಯು)ನ ನಿರ್ವಹಣೆಗಾಗಿ 2001 ರ ಹೊತ್ತಿಗೆ ಲ್ಯಾಂಡ್ ಫಿಲ್ಲಿಂಗ್ ಸೈಟ್ಗಳ ಮರು ಹೊಂದಾಣಿಕೆ, 2002 ಡಿಸೆಂಬರ್ ಹೊತ್ತಿಗೆ ಅದರ ಕಾರ್ಯಾಚರಣೆ ಹಾಗು 2003 ರಲ್ಲಿ ತ್ಯಾಜ್ಯ ನಿರ್ವಹಣೆ ಮತ್ತು ವಿಲೇವಾರಿಯ ಸಂಪೂರ್ಣ ವಿಧಾನ ಜಾರಿ  ಆಗಿರಬೇಕಾಗಿತ್ತು. ಆದರೆ ಆಗಿದ್ದೇನು? ಎಂದಿನಂತೆ ಆಗಿನ ಯುಪಿಎ ಸರ್ಕಾರ ಈ ನಿಟ್ಟಿನಲ್ಲಿ ಯಾವ ಹೆಜ್ಜೆಯನ್ನೂ ಇಡಲಿಲ್ಲ. ಹೀಗಾಗಿ ಕಂಡಲ್ಲೆಲ್ಲ ಕಸ.
ಸೌದಿ ಅರೇಬಿಯಾದಲ್ಲಿ ಕೇವಲ ರಮಜಾನ್- ಹಜ್ಯಾತ್ರೆಯ ಸಂದರ್ಭದಲ್ಲೇ ಒಂದು ದಿನಕ್ಕೆ 4500 ಕ್ಯೂ.ಮಿ. ಘನ ತ್ಯಾಜ್ಯ ಮತ್ತು 1300 ಕ್ಯೂ.ಮಿ ದ್ರವ ತ್ಯಾಜ್ಯ ಸಂಗ್ರಹವಾಗುತ್ತದಾದರೂ ಅಲ್ಲಿ ಯಾವತ್ತೂ ಕಸದ ಕೆಸರೆರೆಚಾಟ ನಡೆದಿಲ್ಲ. ಅಲ್ಲಿ ಉಪಯೋಗಿಸಿದ್ದು ರೆಡ್ಯೂಸ್, ರೀಯೂಸ್ ಮತ್ತು ರೀಸೈಕಲ್ ಎಂಬ '3ಆರ್' ಗಳ ತಂತ್ರಜ್ಞಾನವನ್ನೇ. ಅಲ್ಲಿನ ಎಡಬ್ಲ್ಯುಸಿಎಸ್ನ ವಿಧಾನದಲ್ಲಿ ಸರಾಸರಿ ದಿನಕ್ಕೆ 600 ಸಿಬ್ಬಂದಿ 22.ಕಿ.ಮೀ. ಉದ್ದ (ಒಳಾಂತರ) ಪೈಪು ಲೈನ್ ಮುಖಾಂತರ ತ್ಯಾಜ್ಯ ನಿರ್ವಹಣೆ ಮಾಡುತ್ತಾರೆ. ನೈಜ ಗುರುತ್ವದ ಬಲಕ್ಕೆ ಡಂಪ್ಯಾಡರ್ನ ಕಡೆಯಿಂದ ಸೆಳೆಯುವ (ಸಕ್ಷನ್ ಟೆಕ್) ತಂತ್ರಜ್ಞಾನದಲ್ಲಿ ಸಂಪೂರ್ಣ ನಗರದ ಕಸ ಮೊದಲ ಎರಡು ಗಂಟೆಯಲ್ಲಿ ಆಚೆಗೆ ಸಾಗಿಸಲ್ಪಡುತ್ತದೆ. ಅಲ್ಲಿ ಘನ, ದ್ರವ, ಪ್ಲಾಸ್ಟಿಕ್, ರಸಾಯನಿಕ ಹೀಗೆಲ್ಲ ಮರು ವಿಂಗಡನೆ ಮಾಡುವ ಮತ್ತು ನಿರ್ದಿಷ್ಟ ತ್ಯಾಜ್ಯಗಳಿಗಾಗಿ ಕಾರ್ಯ ನಿರ್ವಹಿಸುವ ಕನ್ವೇಯರ್ ಅಧಾರಿತ ಯಂತ್ರದ (ರಸಾಯನಿಕ ಪತ್ತೆಗೆ ಸೆನ್ಸಾರ್, ದಹನಶೀಲ ವಸ್ತುವಿನ ಪತ್ತೆಗೆ ವಿಶೇಷ ಸಂವಹನದ ಪ್ರೇಷಕಗಳು, ವಿಷಪದಾರ್ಥ ಪತ್ತೆಗೆ ಸಂವೇದಕಗಳು ಇತ್ಯಾದಿ) ಮೂಲಕ ಬೇರ್ಪಡೆಯಾಗುತ್ತಾ, ಮುಂದಿನ ಅರ್ಧ ದಿನದಲ್ಲಿ ವಿಲೇವಾರಿಯಾಗಿ. ಕೊನೆಯದಾಗಿ ಒಟ್ಟು ಅಳತೆಯ ತ್ಯಾಜವನ್ನು ಅದರ ಶೇ.30 ಕ್ಕಿಳಿಸುವಲ್ಲಿ ಯಶಸ್ವಿಯಾಗುತ್ತಾರೆ. ಇದರಲ್ಲಿ ಎರಡನೆಯ ಹಂತವಾಗಿ ಮರುಪಯೋಗಿ ವಸ್ತುಗಳ ಪರಿಷ್ಕರಣೆಗಾಗಿ ಫ್ಯಾಕ್ಟರಿಗಳಿಗೆ ಹೋಗಿ, ಅಲ್ಲಿಂದ ಸಿದ್ಧ ರೂಪದಲ್ಲಿ ಹೊರಬಂದು ಮತ್ತೆ ಮಾರುಕಟ್ಟೆ ಸೇರುತ್ತದೆ.
ಸ್ಯಾನ್ಫ್ರಾನ್ಸಿಸ್ಕೊ(2020) ಕ್ಕೆ 'ಸೊನ್ನೆ' ವೇಸ್ಟ್ ಎನ್ನುವ ಮಂತ್ರದೊಂದಿಗೆ ಕಾರ್ಯರೂಪಕ್ಕಿಳಿದು, ತ್ಯಾಜ್ಯನ್ನೆಲ್ಲ ವಿದ್ಯುತ್, ಟಾರ್ ಹೀಗೆ ತರಹೇವಾರಿ ಉಪಯೋಗಕ್ಕೇ ಇಳಿದ್ದಿದ್ದು, ಕೊಳೆಯಿಸಲು ಹೂಳುವ ವಿಧಾನದಲ್ಲಿ ಮೊದಲೆ ಅದಕ್ಕಾಗಿ ಉಪಯೋಗಿಸದಿದ್ದ ಜೌಗು ಪ್ರದೇಶವನ್ನು ಆಯ್ದುಕೊಂಡು ತನ್ನ ಭೂಮುಖವನ್ನು ಸ್ವಚ್ಛವಾಗಿಡಲು ಶ್ರಮಿಸುತ್ತಿದೆ.
ಇದರ ಹೊರತಾಗಿ ಇಸ್ರೇಲ್ ಮೂಲದಲ್ಲಿ ಅನುಕರಿಸುತ್ತಿರುವ arrow bio system ಅನ್ನೇ ಇತರ ದೇಶಗಳಾದ ಕ್ಯಾಲಿಫೋರ್ನಿಯಾ, ಆಸ್ಟ್ರೇಲಿಯಾ, ಗ್ರೀಸ್, ಮೆಕ್ಸಿಕೋ, ಯು.ಕೆ.,ಗಳಲ್ಲೂ ಉಪಯೋಗಿಸುತ್ತಿದ್ದು ಸಧ್ಯಕ್ಕೆ ಜಾಗತಿಕ ಮಾನದಂಡವಾಗಿ ಈ ವಿಧಾನ ಬಳಕೆಯಲ್ಲಿದೆ. ಅದರ ಪ್ರಕಾರ ಗುರುತ್ವ ಬಲದಲ್ಲಿ ಕಸ ವಿಂಗಡನೆಯ ಜೊತೆಗೆ ಹೈಡ್ರೊ ಮೆಕಾನಿಕಲ್ ಶೆಡ್ಡಿಂಗ್ ಹಾಗೂ ಸ್ಕ್ರೀನಿಂಗ್ ಮೂಲಕ ಹಲವು ಹಂತದಲ್ಲಿ ವಿಂಗಡಿಸಲು ಕನ್ವೇಯರ್ ಸೇರಿದಂತೆ, ಒತ್ತು ಯಂತ್ರಗಳು ಹಾಗು ಪುಡಿಗಟ್ಟುವ ಯಂತ್ರಗಳ ಮೂಲಕ ಕಾರ್ಯಾಚರಿಸಲಾಗುತ್ತದೆ.
ಇದರ ಜೊತೆ ಜೊತೆಗೆ ಮಾರುಕಟ್ಟೆಯಲ್ಲೇ ಸ್ವಾಭಾವಿಕವಾಗಿ ಮರು ಬಳಕೆ ಮತ್ತು ಸಾವಯವವಾಗಿ ಕರಗಿ ಹೋಗಬಲ್ಲಂತದ್ದೇ ತ್ಯಾಜ್ಯ ಉತ್ಪಾದನೆಯತ್ತ ಕೇಂದ್ರೀಕರಿಸಲಾಗಿದೆ. ಇದರಿಂದಾಗಿ ಪ್ಲಾಸ್ಟಿಕ್ ಬದಲಾಗಿ ಮರದ ಹಾಳೆಗಳು ಮತ್ತು ಹೆಚ್ಚಿನಂಶ ಪೇಪರ್ ಉತ್ಪನ್ನಗಳನ್ನೇ ಉಪಯೋಗಿಸುತ್ತಿದ್ದಾರೆ. ಹೀಗೆ ಮೂಲದಲ್ಲೆ ತ್ಯಾಜ್ಯ ಉತ್ಪಾದನೆಯನ್ನು ನಿಯಂತ್ರಿಸುತ್ತ ಕ್ರಮೇಣ ತ್ಯಾಜ್ಯವೇ ಹೊರೆಯಾಗದ ರೀತಿಯಲ್ಲಿ ಕಾರ್ಯ ನಿರ್ವಹಿಸುವ ಇಸ್ರೇಲ್, ಹೂತಿಟ್ಟ ತ್ಯಾಜ್ಯದಿಂದ ಗ್ಯಾಸ್ ಮತ್ತು ಇನ್ನಿತರ ಉತ್ಪನ್ನವನ್ನು ಬಳಸುತ್ತ ಸಂಪೂರ್ಣ ತ್ಯಾಜ್ಯ ಮರುಪಯೋಗಿಯಾಗಿರುವ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. (ಇಂಥದ್ದೆ ಕಾರಣದಿಂದ ಎರಡು ದಶಕಗಳಿಗೂ ಮೊದಲೇ ಅಮೆರಿಕಕ್ಕೆ ಟಾಕ್ಸಿಕಾಲಜಿಯಲ್ಲಿ ಮೊಟ್ಟ ಮೊದಲಿಗೆ ಹೊಸ ಅಧ್ಯಾಯವನ್ನೆ ನೀಡಿ ಸಹಕರಿಸಿದ ಕೀರ್ತಿ ಭಾರತೀಯ ಡಾ. ಹರಿಹರ ಮೆಹೆಂದಳೆಯವರದ್ದು).
ಅಲ್ಲೆಲ್ಲ ಸಾಧ್ಯವಾಗುವುದು ನಮ್ಮಲ್ಲೇಕೆ ಇದು ಸಾಧ್ಯವಾಗುತ್ತಿಲ್ಲ? ಮೂಲದಿಂದಲೇ ಬದಲಾವಣೆ ತರುವ ಕಾರ್ಯವಾಗಿ ನಾವು ಹಂತಹಂತವಾಗಿ ಎರಡು ದಶಕಗಳಿಗೂ ಮೊದಲೇ ನಿರ್ವಹಿಸಬೇಕಾದ ಕಾರ್ಯವನ್ನು ಇನ್ನಾದರೂ ಆರಂಭಿಸದೆ ಬರೀ ಕಸವನ್ನು ಮಾತ್ರ ಉತ್ಪಾದಿಸುವತ್ತ ಮುಂದುವರೆದಿದ್ದೆ ಈ ಅನಾಹುತಕ್ಕೆ ಕಾರಣ.
    ಭಾರತದ ಕೇಂದ್ರೀಯ ತ್ಯಾಜ್ಯ ನಿರ್ವಹಣ ಸಂಶೋಧನಾ ವಿಭಾಗ 1999 ಮಾರ್ಚ್ 17 ಕ್ಕೆ ಸಲ್ಲಿಸಿದ ವರದಿಯಂತೆ 2000 ರ ಫೆ.ನಲ್ಲಿ CSWM(Committee for Solid Waste management)  ಎನ್ನುವ ಸಮಿತಿ ಕೆಲಸ ಆರಂಭಿಸಿತಾದರೂ, ಯಾವ ರೀತಿಯ ತ್ಯಾಜ್ಯ ನಿರ್ವಹಣೆ ಭಾರತದ ಪರಿಸರಕ್ಕೆ ಅನುಕೂಲ, ಯಾವ್ಯಾವ ರೀತಿಯ ತ್ಯಾಜ್ಯದ ಕಾರಣ ನಮ್ಮಲ್ಲಿ ಸಮಸ್ಯೆಗಳುಂಟಾಗುತ್ತಿದೆ, ಯಾವ ತ್ಯಾಜ್ಯ ನಿರ್ವಹಿಸಿದರೆ ಉತ್ಪನ್ನ ಬರಲಿದೆ ಇತ್ಯಾದಿ ಬಹುಪಯೋಗಿ ನಿರ್ವಹಣೆಯ ಕುರಿತಾಗಿ ಕೊಡಬೇಕಿದ್ದ ಸಲಹೆ ಸೂಚನೆ ಮಾತು ಶಿಫಾರಸ್ಸುಗಳನ್ನು ಇಲ್ಲಿಯವರೆಗಾದರೂ ಕೊಡಲೆ ಇಲ್ಲ.
    ಇದಕ್ಕೂ ಮೊದಲೇ ಕಾರ್ಯಾಚರಿಸಿದ NSWAI (National Solid Waste Association of India) 25th January  1996 ಕೂಡ ಮಾಡಿದ್ದೇನೂ ಇಲ್ಲ.
    ಸರ್ಕಾರದ ವತಿಯಿಂದ ವಿದೇಶ ಪ್ರವಾಸಕ್ಕೆ ಇದೇ ಇಸ್ರೇಲ್, ಸಿಂಗಾಪುರ್, ದುಬೈಗಳಿಗೆ ಹೋಗಿ ಬಂದ ಶಾಸಕರಲ್ಲಿ ಒಬ್ಬರಾದರೂ ತ್ಯಾಜ್ಯ ನಿರ್ವಹಣೆಯಂಥ ವಿಷಯದತ್ತ ಒಲವು ತೋರಿಲ್ಲ.
    ಕಸ ರಹಿತ ದೇಶಗಳಲ್ಲಿ ಕೇವಲ ಕೈಗಾರಿಕಾ ಕಾರಣ ಹೊರತು ಪಡಿಸಿದರೆ ಮೈಕ್ರಾನ್ ಲೆಕ್ಕಾಚಾರದ ಚೌಕಾಶಿಯೂ ಇಲ್ಲದಂತೆ ಪ್ಲಾಸ್ಟಿಕ್ಗೆ ಗೃಹಬಳಕೆಯಲ್ಲಿ ಸಂಪೂರ್ಣ ನಿಷೇಧವಿದೆ.
    ಕಸವನ್ನು ಹೀಗೆ ಅವೈಜ್ಞಾನಿಕವಾಗಿ ಹೊರಗೆ ಸುರಿಯುವ ಧೋರಣೆಯೆ ಮೊದಲ ತಪ್ಪು. ಕಾರಣ ಭಾರತದಲ್ಲಿ ಕೇವಲ 23 ದೊಡ್ಡ ನಗರಗಳಿಂದ ಉತ್ಪನ್ನವಾಗುವ ಕಸವೆ 1000 ಮೆ.ಟನ್ಗಿಂತಲೂ ಜಾಸ್ತಿ. 'ಕಸದಿಂದ ಶಕ್ತಿ' ಎನ್ನುವ ಸೂತ್ರವನ್ನು ಉಪಯೋಗಿಸಿಕೊಳ್ಳದ ರಾಜ್ಯಗಳು ಕಸದಿಂದ ಮುಕ್ತಿ ಹೊಂದುವ ಅವಕಾಶವೇ ಇಲ್ಲ. ಕಾರಣ ಇಲ್ಲಿ ಕಸದಿಂದ ಹೊಂದುವ ಶಕ್ತಿಯನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳದಿದ್ದರೆ ಆಗುವ ನಷ್ಟ ಕಸ ನಿರ್ವಹಣೆಯ ವೈಫಲ್ಯಕ್ಕಿಂತಲೂ ದೊಡ್ಡದು.
    ಕಸದಿಂದ ವಿದ್ಯುತ್ ಮತ್ತಿತರ ಉತ್ಪನ್ನ ಹಾಗು ಗ್ಯಾಸ್ ತಯಾರಿಕಾ ಘಟಕಗಳಿಗೆ ಸ್ವಯಂ ಬೆಂಬಲ ನೀಡುವ ಸರ್ಕಾರ ಜಾಗ ಸಹಿತ ಮರು ಖರೀದಿ ಒಪ್ಪಂದವನ್ನೂ ಕೈಗೊಳ್ಳಲೇಬೇಕಾಗುತ್ತದೆ. ನಮ್ಮಲ್ಲಿ ಜಾಗ ಕೊಡುವ ಮುನ್ನವೇ ಅದನ್ನು ಹೇಗೆ ತಮ್ಮ ಸ್ವಂತಕ್ಕೆ ಉಪಯೋಗಿಸುವುದು ಎನ್ನುವ ಲೆಕ್ಕಾಚಾರಕ್ಕೆ ಒತ್ತು ಕೊಡುತ್ತಾರಲ್ಲ. ಇನ್ನು ಕಸ ಎತ್ತುವವರಾದರೂ ಯಾರು?
ಹೀಗೆಲ್ಲ ನಿರ್ವಹಣೆಯ ಮೂಲವನ್ನು ಹುಡುಕುವ ಸಾಧ್ಯತೆಗಳಿರುವಾಗ, ಅದನ್ನು ಕೈಬಿಟ್ಟು ಹಿಂದಿನ ಸರ್ಕಾರದ ಮೇಲೆ ಗೂಬೆ ಕೂರಿಸುತ್ತ, ಸಿಕ್ಕ ಊರಿನ ಮೇಲೆ ಕಸ ಸುರಿಯಲು ಹೊರಟಿದ್ದಾರಲ್ಲ? ಯಾವುದೇ ಖಾಸಗಿ ಜಮೀನು ಊರು ಹಾಗೂ ಶಾಲೆ ಇನ್ನಿತರ ಸಾಮಾಜಿಕ ತಾಣಗಳ ಸುತ್ತ ಮುತ್ತಲಿನ 3 ಕಿ.ಮಿ. ದೂರದವರೆಗೆ, ಮುನ್ಸಿಪಾಲಿಟಿ ಕಸವನ್ನು ಹಾಕುವಂತಿಲ್ಲ. ಇದರ ಬದಲು ಖಾಸಗಿ ಕಂಪೆನಿಗಳಿಗೆ ಕಸ ಎತ್ತುವ ಮತ್ತು ಮರುಪಯೋಗಿಸುವ ಅವಕಾಶದ ಮೇಲೆ ಮರುತ್ಪಾದನೆಯ ವಿಧಾನವನ್ನೇಕೆ ಬಳಸಬಾರದು? ಈ ಮೊದಲೇ ಆರಂಭಿಸಿದ ಒಂದೆರಡು ಯೋಜನೆಗಳೂ ಇಲ್ಲಿಯ ಅಧಿಕಾರಶಾಹಿ ಮತ್ತು ಒಣ ರಾಜಕೀಯ ಪ್ರತಿಷ್ಠೆಗೆ ಬೇಸತ್ತು ಕಾಲ್ತೆಗೆದಿವೆ. ಅವನ್ನಾರು ಹಿಂದಿರುಗಿ ಕರೆತರುವವರು?
ಕಸವೂ ಕೊನೆಗೊಮ್ಮೆ ಬಿದ್ದಲ್ಲೆ ಕೊಳೆತು, ವಿಷಕಾರಕವಾಗಿ ಮಾರ್ಪಟ್ಟು ದೊಡ್ಡ ದುರಂತವಾಗುವವರೆಗೂ ಯಾರೂ ಗಂಭೀರವಾಗುವುದಿಲ್ಲ.

-ಸಂತೋಷಕುಮಾರ ಮೆಹೆಂದಳೆ
  sjmehandale@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.