ಉತ್ತರಾಖಂಡ ಅವಘಡಕ್ಕೆ ಉತ್ತರ ಹುಡುಕಲೇಬೇಕಿದೆ
ನಾವು ದುರ್ಘಟನೆಗಳನ್ನು ಬಹು ಬೇಗ ಮರೆತು ಬಿಡುತ್ತೇವೆ. ಅವುಗಳಿಂದ ಪಾಠ ಕಲಿಯುವುದೇ ಇಲ್ಲ. ಉತ್ತರಾಖಂಡದ ಮೇಘಸ್ಪೋಟದ ಮಹಾಮಳೆಯಿಂದಾದ ಅವಘಡ ಘಟಿಸಿ ಈ ತಿಂಗಳಿಗೆ ವರ್ಷ ತುಂಬುತ್ತಿರುವ ಸಮಯದಲ್ಲಿ ಮತ್ತೆ ಎಚ್ಚರಿಸುವ ಹಾಗೂ ಈ ಅವಘಡಕ್ಕೆ ಕಾರಣಗಳನ್ನು ಹುಡುಕುವ ಒಂದು ಪ್ರಯತ್ನ ಇದಾಗಿದೆ..
ಉತ್ತರಾಖಂಡ ರಾಜ್ಯದಲ್ಲಿ 2013 ಜೂನ್ 14-17 ರವರೆಗೆ ನಡೆದ ಮೇಘಸ್ಫೋಟ ಇಡೀ ರಾಜ್ಯವನ್ನು ಸುಮಾರು 100 ವರ್ಷ ಹಿಂದೆ ತಳ್ಳಿಬಿಟ್ಟಿತು. ಸ್ಥಳೀಯರ ಪ್ರಕಾರ 15000 ದಿಂದ 20000 ಜನರನ್ನು ಜೀವಂತ ಹೂತುಹೋಗಿದ್ದಾರೆ. 147 ಸೇತುವೆಗಳು ಕೊಚ್ಚಿ ಹೋದವು. ಹಿಂದೆ ನಾನು ನನ್ನ ಸ್ನೇಹಿತ ದಾಟಿ ಬಂದ ಹಲವು ಸೇತುವೆಗಳು ವಿಳಾಸವೇ ಇಲ್ಲದಾಗಿವೆ. 40ಕ್ಕೂ ಹೆಚ್ಚು ಕಾಲುವೆಗಳು ಮುರಿದು ಬಿದ್ದಿವೆ. 2052 ಮನೆಗಳು ಪೂರ್ಣವಾಗಿ ಕೊಚ್ಚಿ ಹೋಗಿವೆ. 1307 ರಸ್ತೆಗಳು ಹಾಳಾಗಿವೆ. ಕೇವಲ ಮೂಲ ಸೌಕರ್ಯಗಳಿಗೆ ಉಂಟಾಗಿರುವ ನಷ್ಟವೇ 50000 ಕೋಟಿ ರು.ಗಳಾಗಿದೆ. ಕಳೆದ ಐವತ್ತು ವರ್ಷಗಳಿಂದ ಹಿಮಾಲಯ ಪರ್ವತದ ಮೇಲೆ ಸರ್ಕಾರ, ಉದ್ಯಮಿಗಳು, ಅಧಿಕಾರಿಗಳು, ಪ್ರವಾಸಿಗರು, ವ್ಯಾಪಾರಿಗಳು ಮಾಡಿದ ದುರಾಕ್ರಮಣಕ್ಕೆ ಪ್ರಕೃತಿಯ ಪ್ರತೀಕಾರದಂತಿತ್ತು ಈ ದುರಂತ. ಉತ್ತರಾಖಂಡದ ಈ ಅವಘಡಕ್ಕೆ ಪ್ರಮುಖ ಕಾರಣಗಳನ್ನು ಅವಲೋಕಿಸುವಾಗ ಅವುಗಳನ್ನು ಎರಡು ಮುಖ್ಯ ವಿಭಾಗಗಳಾಗಿ ವಿಂಗಡಿಸಿ ನೋಡುವುದು ಸೂಕ್ತ. ಮೊದಲನೆಯದು ಹಿಮಾಲಯದ ಸ್ವಾಭಾವಿಕ ಭೂಗೋಳ, ಎರಡನೆಯದು ಹಿಮಾಲಯದ ಮೇಲೆ ಅಸಹಜವಾದ ಮಾನವನ ಚಟುವಟಿಕೆಗಳು. ಹಿಮಾಲಯ ಸುಮಾರು 50 ದಶಲಕ್ಷ ವರ್ಷಗಳ ಹಿಂದೆ ಉಗಮ ಹೊಂದಿದ ಭೂಭಾಗ. ಇದಕ್ಕೆ ಮೊದಲು ಭಾರತದ ಪರ್ಯಾಯ ಪ್ರಸ್ಥಭೂಮಿ ಮಾತ್ರ ಇತ್ತು. ಮೊದಲು ಹಿಮಾಲಯ ಥೆತೀಸ್ ಸಮುದ್ರದ ತಳಭಾಗವಾಗಿತ್ತು. ಅಲ್ಲಿ ಅತ್ಯಂತ ನುಣುಪಾದ ಕೆಸರು ನದಿಗಳು ತಂದು ಹಾಕಿದ ದುಂಡಾದ ಕಲ್ಲುಗಳು ಮತ್ತು ಮೆದುವಾದ ಪದರಶಿಲೆಗಳಿದ್ದವು. ಈ ಸಮುದ್ರದ ಎರಡು ಬದಿಯ ಭೂ ಫಲಕಗಳ ಪರಸ್ಪರ ತಳ್ಳಾಟದಿಂದಾಗಿ ಥೆತೀಸ್ ಸಮುದ್ರದ ತಳಭಾಗ ಮಡಿಚಿಕೊಂಡು ಮೇಲೆದ್ದ ಪರಿಣಾಮವಾಗಿ ಹಿಮಾಲಯ ಪರ್ವತ ಸೃಷ್ಟಿಯಾಯಿತು. ಈ ಕಾರಣದಿಂದಲೇ ಹಿಮಾಲಯದ ಮೇಲ್ಮೈ ಸುಲಭವಾಗಿ ಜಾರುವ ನುಣುಪಾದ ಮೆಕ್ಕಲು ಮಣ್ಣು, ಆಳೆತ್ತರದವರೆಗಿನ ಉಂಡೆ ಕಲ್ಲುಗಳು ಮತ್ತು ಸುಲಭವಾಗಿ ಮುರಿಯಬಲ್ಲ ಪದರಶಿಲೆಗಳಿಂದ ಆವರಿಸಿದೆ. ಆದ್ದರಿಂದ ಆಗಾಗ್ಗೆ ಪರ್ವತಗಳ ಮೇಲಿನ ಮಣ್ಣಿನ ಕುಸಿತ ಉಂಟಾಗುತ್ತಿರುತ್ತದೆ. ಸಮುದ್ರದ ತಳದಲ್ಲಿದ್ದ ಸುಲಭವಾಗಿ ಉರುಳಬಲ್ಲ ಉಂಡೆಗಲ್ಲುಗಳು ಹಿಮಾಲಯ ಪರ್ವತವನ್ನು ಏರಿ ಕುಳಿತಿರುವುದರಿಂದ ಆಗಾಗ್ಗೆ ಇವುಗಳು ಕೆಳಕ್ಕೆ ಉರುಳುತ್ತಿರುತ್ತವೆ. ಹಿಮಾಲಯದ ಪರ್ವತಗಳ ದೇಹದೊಳಗಿರುವ ಶಿಲೆಗಳು ನಮ್ಮ ಪಶ್ಚಿಮಘಟ್ಟದಲ್ಲಿರುವಂತೆ ಕಠಿಣವಾದ ಅಗ್ನಿಶಿಲೆಗಳಲ್ಲ. ಅವು ಮೃದುವಾದ ಪದರಶಿಲೆಗಳಾಗಿದ್ದು ಯಾವಾಗ ಬೇಕಾದರೂ ಮುರಿಯಬಹುದು ಅಥವಾ ಜಾರಬಹುದು.
ಹಿಮಾಲಯ ಪ್ರತಿ ವರ್ಷಕ್ಕೆ ಸರಾಸರಿ ಒಂದು ಸೆಂಟಿ ಮೀಟರ್ ಎತ್ತರಕ್ಕೆ ಮೇಲೆತ್ತಲ್ಪಡುತ್ತಿದೆ. ಇದಕ್ಕೆ ಭೂಫಲಕಗಳ ಒತ್ತಡವೇ ಕಾರಣ. ಹೀಗೆ ಮೇಲೇರುತ್ತಿರುವುದರಿಂದ ಪರ್ವತಗಳ ದೇಹದಲ್ಲಿ ಸೀಳುಗಳು, ಮಡಿಚಿಕೊಳ್ಳುವಿಕೆ, ಮುರಿಯುವಿಕೆ ಮೆಲ್ಲಗೆ ನಡೆಯುತ್ತಿರುತ್ತದೆ. ಹಿಮಾಲಯ ಪರ್ವತಗಳ ಅತಿ ಎತ್ತರದ ಭಾಗಗಳಲ್ಲಿ ಘನರೂಪದಲ್ಲಿ ಚಲಿಸುವ ಹಿಮನದಿಗಳಿವೆ. ಯಮುನೋತ್ರಿ, ಗಂಗೋತ್ರಿ ಮತ್ತು ಕೇದಾರನಾಥಗಳ ಸಮೀಪದಲ್ಲೇ ಹಿಮನದಿಗಳಿವೆ. ಇವು ಪರ್ವತಗಳ ಮೇಲಿರುವ ಕಲ್ಲು, ಮಣ್ಣು, ಬಂಡೆ ಇತ್ಯಾದಿ ವಸ್ತುಗಳನ್ನು ಮುಂದೆ ತಳ್ಳಿಕೊಂಡು ಬಂದು ಒಂದೆಡೆ ರಾಶಿ ಹಾಕುತ್ತವೆ. ಕೇದಾರನಾಥ ಮಂದಿರದ ಇಂತಹದೊಂದು ರಾಶಿಯೊಂದು ಕಳೆದ ವರ್ಷವೂ ಇತ್ತು. 2012ರ ನವರಾತ್ರಿ ಸಂದರ್ಭದಲ್ಲಿ ನಾವು ಉತ್ತರಾಖಂಡದಲ್ಲಿದ್ದೆವು. ಆಗ ಈ ಕಲ್ಲುಮಣ್ಣಿನ ರಾಶಿಯನ್ನು ಕೇದಾರ ಮಂದಿರದ ಹಿಂದೆ ನೋಡಿಕೊಂಡು ಅದರ ಮೇಲೆ ಓಡಾಡಿ ಬಂದಿದ್ದೆವು. ಇದೇ ಕಲ್ಲುಮಣ್ಣು ಇಷ್ಟೊಂದು ಜನರನ್ನು ಸಮಾಧಿ ಮಾಡಿದ್ದನ್ನು ನೆನಪಿಸಿಕೊಳ್ಳಲು ಭಯವಾಗುತ್ತದೆ. ಹಿಮಾಲಯದ ಉನ್ನತ ಭಾಗಗಳಲ್ಲಿ ಅಲ್ಲಲ್ಲಿ ಹಿಮ ಸರೋವರಗಳಿವೆ. ಇಲ್ಲಿ ನೀರು ಘನರೂಪದಲ್ಲಿ ಸಂಗ್ರಹವಾಗಿರುತ್ತದೆ. ಅಂತಹ ಸರೋವರ ಕೇದಾರನಾಥ ಮಂದಿರದ ಹಿಂದೆ ಸ್ಪಲ್ಪ ದೂರದಲ್ಲಿದೆ. ಜೂನ್ 15, 16, 17 ರಂದಿನ ಮಹಾಮಳೆಯಿಂದ ಈ ಸರೋವರ ತುಂಬಿ ಮಳೆಯ ನೀರಿನಿಂದ ಹಿಮ ಕರಗಿ ಕೇದಾರದತ್ತ ನುಗ್ಗಿದೆ. ನುಗ್ಗುವಾಗ ಮೊದಲೇ ಹಿಮನದಿ ಸಂಗ್ರಹಿಸಿದ್ದ ಕಲ್ಲುಮಣ್ಣಿನ ರಾಶಿಯನ್ನು ಮಂದಿರದತ್ತ ಕೊಚ್ಚಿಕೊಂಡು ತಂದು ಸಾವಿರಾರು ಜನರ ಜೀವಂತ ಸಮಾಧಿ ಮಾಡಿದೆ. ಹಿಮಾಲಯದ ಪರ್ವತಗಳ ಮೇಲೆ ಸಾಮಾನ್ಯವಾಗಿ ಜೂನ್ ತಿಂಗಳ ಅಂತ್ಯದಲ್ಲಿ ನೈರುತ್ಯ ಮಾನ್ಸೂನ್ ಮಳೆ ಪ್ರಾರಂಭವಾಗುತ್ತದೆ. ಉತ್ತರಾಖಂಡದಲ್ಲಿ ಮಳೆ ನಮ್ಮ ಪಶ್ಚಿಮಘಟ್ಟಕ್ಕಿಂತ ಕಡಿಮೆ. ಆದರೆ ಕಳೆದ ಬಾರಿ ಮಾನ್ಸೂನ್ ಮೋಡಗಳು ಜೂನ್ ತಿಂಗಳ ಮಧ್ಯಭಾಗದಲ್ಲೇ ಉತ್ತರಾಖಂಡಕ್ಕೆ ಪ್ರವೇಶ ಮಾಡಿದವು. ದುರಾದೃಷ್ಟವೆಂದರೆ ಇದೇ ವೇಳೆಗೆ ಮೆಡಿಟರೇನಿಯನ್ ಸಮುದ್ರದ ಕಡೆಯಿಂದ ಬೀಸಿ ಬಂದ ಮಳೆಯ ಮೋಡಗಳು ಉತ್ತರಾಖಂಡಕ್ಕೆ ಆಗಮಿಸಿವೆ. ಇವೆರಡು ಮಳೆಯ ಮೋಡಗಳ ಸಂಧಿಸುವಿಕೆಯಿಂದಾಗಿ ಸುಮಾರು 14ಕಿ.ಮೀ. ಎತ್ತರದವರೆಗೆ ಮೋಡಗಳು ಸಂಗ್ರಹವಾದವು. ಪರಿಣಾಮವಾಗಿ ಸುಮಾರು 250 ಸೆಂಟಿಮೀಟರ್ ಮಳೆ ಜೂನ್ 16 ಮತ್ತು 17 ರಂದು ಸುರಿದುಬಿಟ್ಟಿತು. ಮೊದಲೇ ಹೇಳಿದಂತೆ ಹಿಮಾಲಯ ಪರ್ವತದ ಮೇಲೆ ಆವರಿಸಿದ್ದ ಸುಲಭವಾಗಿ ಜಾರಬಲ್ಲ ನುಣುಪಾದ ರೇವೆ ಮಣ್ಣು ಸುಲಭವಾಗಿ ಉರುಳಬಹುದಾದ ಉಂಡೆಗಲ್ಲುಗಳು ಮತ್ತು ಹಿಮನದಿ ತಂದು ಸಂಗ್ರಹಿಸಿದ್ದ ಮುರುಕಲು ಗುಪ್ಪೆ (ಕಲ್ಲುಮಣ್ಣಿನ ರಾಶಿ) ಎಲ್ಲಾ ಮಾನವನ ಮೇಲೆ ಎರಗಲು ಸಜ್ಜಾಗಿದಂತಿದ್ದವು.
ಹಿಮಾಲಯದ ಸ್ವಾಭಾವಿಕ ಭೂಗೋಳ ಪರಿಸರವನ್ನು ಕಡೆಗಣಿಸಿ ಕಳೆದ 60 ವರ್ಷಗಳಲ್ಲಿ ಮಾನವ ತನ್ನ ದುರಾಸೆಯ ಪ್ರತೀಕವಾದ ಆರ್ಥಿಕ ಅಭಿವೃದ್ಧಿ ಎಂಬ ಬುಲ್ಡೋಜರ್ ಅನ್ನು ಉತ್ತರಾಖಂಡ ಹಿಮಾಲಯದ ಮೈಮೇಲೆ ಹರಿಸಿದ್ದಾನೆ. 1950ರ ದಶಕದ ಪ್ರಾರಂಭದಿಂದ ಹಿಮಾಲಯ ಅರಣ್ಯಗಳು ಉದ್ಯಮಿಗಳಿಂದ ಕಬಳಿಸಲ್ಪಡುತ್ತಿವೆ. ಇದನ್ನು ವಿರೋಧಿಸಿದ ಗಾಂಧಿವಾದಿ ಮೀರಾ ಬೆನ್ ಬರೆದ "ಸಮ್ಥಿಂಗ್ ಇಸ್ ರಾಂಗ್ ಇನ್ ದಿ ಹಿಮಾಲಯ" (1952) ಎಂಬ ಪುಸ್ತಕದಲ್ಲಿ ಎಚ್ಚರಿಸಿದ್ದು ಪ್ರಯೋಜನವಾಗಲಿಲ್ಲ. ನಮ್ಮಲ್ಲಿ ನೀಲಗಿರಿ ಬೆಳೆಯುವಂತೆ ಪ್ರೋತ್ಸಾಹಿಸಿದ ಉದ್ಯಮಿಗಳು ಅಲ್ಲಿ ಅವರಿಗೆ ಸಹಾಯವಾಗುವ ಚಿರ್ ಮರಗಳನ್ನು ಬೆಳೆಸಲು ಸಂಚು ನಡೆಸಿ ಮೊದಲಿದ್ದ ಬಾಂಜ್, ಓಕ್, ದೇವದಾರು ಇತ್ಯಾದಿ ಪ್ರಕೃತಿ ಆಯ್ಕೆಯ ಮರಗಳನ್ನು ನಾಶ ಮಾಡಿದ್ದಾರೆ. ಚಿರ್ ಮರಗಳು ಭೂಮಿಯನ್ನು ನಿಸತ್ವಗೊಳಿಸುವುದಲ್ಲದೆ ಪರ್ವತದ ಇಳಿಜಾರನ್ನು ಅಭದ್ರವಾಗಿಸಿವೆ. ಇದು ಭೂಕುಸಿತಕ್ಕೆ ಕಾರಣವಾಗಿ 1970ರಲ್ಲಿ ಭಾರಿ ಪ್ರವಾಹ ಉಂಟಾಯಿತು. ಈ ಕಾರಣದಿಂದಲೇ ಚಂಡಿ ಪ್ರಸಾದ್ ಭಟ್ ಚಿಪ್ಕೋ (ಆಪ್ಪಿಕೋ) ಚಳುವಳಿ ಪ್ರಾರಂಭಿಸಿದರು. ಆದರೆ ಸರ್ಕಾರ ಮತ್ತು ಸ್ಥಳೀಯ ಸಮಾಜ ಎಚ್ಚೆತ್ತುಕೊಳ್ಳಲಿಲ್ಲ. 2000 ದಿಂದೀಚೆಗೆ ಉತ್ತರಾಖಂಡ ರಾಜ್ಯದಲ್ಲಿ ಆದಂಥ ರಸ್ತೆಗಳ ನಿರ್ಮಾಣ ಕಾರ್ಯದ ವೇಗ ಕಳೆದ ವರ್ಷದ ಅವಘಡಕ್ಕೆ ಮತ್ತೊಂದು ಪ್ರಮುಖ ಕಾರಣವಾಗಿದೆ. ಕೇವಲ 2010ರಿಂದ 2013ರವರೆಗೆ 4500 ಕಿ.ಮೀ. ರಸ್ತೆ ಇಲ್ಲಿ ನಿರ್ಮಾಣವಾಗಿದೆ. ಇಷ್ಟು ವೇಗದಲ್ಲಿ ಪ್ರಪಂಚದ ಬೇರೆಲ್ಲೂ ರಸ್ತೆ ನಿರ್ಮಾಣವಾಗಿಲ್ಲ!
ಉತ್ತರಾಖಂಡದಲ್ಲಿ ಒಟ್ಟು 73 ಜಲವಿದ್ಯುತ್ ಕೇಂದ್ರಗಳು ಸ್ಥಾಪನೆಯಾಗಿವೆ. 69 ಜಲವಿದ್ಯುತ್ ಕೇಂದ್ರಗಳ ಕಾಮಗಾರಿ ಇನ್ನೂ ನಡೆಯುತ್ತಿದೆ. ಒಟ್ಟು 244 ಜಲವಿದ್ಯುತ್ ಕೇಂದ್ರಗಳಿಗೆ ಅನುಮತಿ ದೊರೆತಿದೆ. ಈ ಯೋಜನೆಗಳು ಇಡೀ ಹಿಮಾಲಯವನ್ನೆಲ್ಲಾ ಹೆಗ್ಗಣಗಳಂತೆ ಕೊರೆದು ಸುರಂಗಗಳನ್ನು ನಿರ್ಮಿಸಿವೆ. ಈ ಹಂತದಲ್ಲಿ ಸಾವಿರಾರು ಟನ್ಗಳಷ್ಟು ಡೈನಾಮೈಟ್ ಸ್ಫೋಟವಾಗಿವೆ. ಇಂತಹದರಲ್ಲಿ ಕಳೆದ ವರ್ಷ ಘಟಿಸಿದ ಮೇಘ ಸ್ಪೋಟವೇನು ದೊಡ್ಡದಲ್ಲ ಅನ್ನಿ. ಹೀಗೆ ಸುರಂಗ ಕೊರೆಯುವಾಗ ಕೊರೆದು ತಂದ ಕಲ್ಲುಮಣ್ಣಿನ ರಾಶಿಯನ್ನು ನದಿಯ ಪಾತ್ರಕ್ಕೆ ತಂದು ಸುರಿದಿವೆ. ಇದರಿಂದ ನದಿಯು ಹರಿಯಲು ಜಾಗವಿಲ್ಲದಂತಾಗಿ ಮಹಾಮಳೆಯ ನೀರು ಜಾಗವಿಲ್ಲದೆ ಹಠಾತ್ತಾಗಿ ಮೇಲೇರಿ ಬದಿಯಲ್ಲಿದ್ದ ಮನೆ ಮಠಗಳನ್ನೆಲ್ಲ ಮುರಿದು ಮುಚ್ಚಿ ಸೇಡು ತೀರಿಸಿಕೊಂಡಿತು. ಪ್ರವಾಸಿಗರಿಗೆ ಮೂಲ ಸೌಕರ್ಯ ನೀಡಲು ಕಡಿಮೆ ಬೆಲೆಯಲ್ಲಿ ವಿದ್ಯುತ್, ಶೀಘ್ರ ಹಾಗೂ ಸುಲಭ ಭೂಸ್ವಾಧೀನ ಪ್ರಕ್ರಿಯೆ, ತೆರಿಗೆ ವಿನಾಯಿತಿ ಇತ್ಯಾದಿ ಸೌಲಭ್ಯಗಳನ್ನು ನೀಡಿದ್ದೇ ತಡ ರಾತ್ರೋ ರಾತ್ರಿ ನದಿಗಳ ಉದ್ದಕ್ಕೂ ಸಾಲು ಸಾಲು ಹೋಟೆಲ್ಗಳು, ರೆಸಾರ್ಟ್ಗಳು, ವಸತಿಗೃಹಗಳು, ಟ್ರಾವೆಲ್ ಏಜೆನ್ಸಿಗಳು, ವ್ಯಾಪಾರ ಮಳಿಗೆಗಳು ತಲೆ ಎತ್ತಿಬಿಟ್ಟವು. ಬರುಬರುತ್ತಾ ನದಿಗಳನ್ನೇ ಒತ್ತುವರಿ ಮಾಡಿ ನದಿಗಳಿಗೆ ನೀರು ಹರಿಯಲು ಜಾಗವಿಲ್ಲದಂತೆ ಆಯಿತು. ಹಾಗೆಯೇ ಪರ್ವತಗಳ ಇಳಿಜಾರು, ಅರಣ್ಯ ಕಣಿವೆ ಎಲ್ಲೆಡೆ ಒಂದರ ಮೇಲೊಂದು ಅಂತಸ್ತಿನ ಕಟ್ಟಡಗಳು ಮೇಲೆದ್ದು ಭೂಕುಸಿತಕ್ಕೆ ಪ್ರೇರಣೆಯಾಯಿತು.
ಕಳೆದ ಹತ್ತು ವರ್ಷದಲ್ಲಿ ಸುಮಾರು 4 ಸಾವಿರ ಹೆಕ್ಟೇರು ಭೂಮಿಯನ್ನು ಗಣಿಗಾರಿಕೆಗೆ ನೀಡಲಾಗಿದ್ದು, ಹಿಮಾಲಯದ ಒಡಲಿಗೆ ಡೈನಾಮೈಟ್ಗಳನ್ನು ತುಂಬಿ ಸಿಡಿಸಲಾಗುತ್ತಿದೆ. ಇದರಿಂದ ಸಡಿಲಗೊಂಡ ಪರ್ವತಗಳು ಮಹಾಮಳೆಗೆ ಸುಲಭವಾಗಿ ಜಾರಿ ಕೆಳಗೆ ಬಂದಿವೆ. ಪರಿಸರಕ್ಕೆ ತನ್ನದೇ ಆದ ಧಾರಣ ಶಕ್ತಿ ಇದೆ. ಅದರ ಮಿತಿಯೊಳಗೆ ಎಲ್ಲವನ್ನೂ ಸಹಿಸಿಕೊಳ್ಳುತ್ತದೆ ಮತ್ತು ಮಾನವನಿಗೆ ಸಹಕರಿಸುತ್ತದೆ. ಆದರೆ ಮಾನವ ದುರಾಸೆಯಿಂದ ಹೊರಟಾಗ ಪರಿಸರ ಮಾನವನಿಗೆ ಪಾಠ ಕಲಿಸೇತೀರುತ್ತದೆ.
-ಡಾ.ಹೆಚ್.ಸಿ.ಜಗದೀಶ್
ಮುಖ್ಯಸ್ಥರು, ಭೂಗೋಳಶಾಸ್ತ್ರ ವಿಭಾಗ,
ಪಲ್ಲಾಗಟ್ಟಿ ಅಡವಪ್ಪ ಕಾಲೇಜು,
ತಿಪಟೂರು.
dr.h.c.jagadeesh @gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

