ಕಲಬುರ್ಗಿ ಹೇಳಿಕೆ ಸತ್ಯಕ್ಕೆ ಅಪಚಾರ

ಮೈಸೂರಿನಲ್ಲಿ ನನ್ನ ಗುರುಗಳಾದ ಕುವೆಂಪು ಒಮ್ಮೆ ಹೇಳಿದ್ದನ್ನು ಇಂದಿಗೂ ಮರೆತಿಲ್ಲ-"ಒಬ್ಬ ವ್ಯಕ್ತಿ ಜನಪ್ರಿಯನಾಗಲು ಹೆಚ್ಚೇನೂ ಪ್ರಯತ್ನ ಪಡಬೇಕಾಗಿಲ್ಲ. ಸೂಟು, ಬೂಟು, ಟೈ ಧರಿಸಿ ಸಂಜೆ ಮಾರ್ಕೆಟ್ ಹತ್ತಿರ ನಿಂತು ಜೋರಾಗಿ ಸೀಟಿ ಹೊಡೆದು, ಹ್ಹ ಹ್ಹ ಹ್ಹ ಎಂದು ನಕ್ಕು ನೆಲಕ್ಕೆ ಕೈ ಮಾಡಿ ಲಾಗ ಹೊಡೆದರೆ ಸಾಕು, ಅಲ್ಲಿ ಸೇರಿದ್ದ ಜನ ಬೆಕ್ಕನೆ ಬೆರಗಾಗುತ್ತಾರೆ, ಓಡಿ ಬಂದು ನೋಡಿ ನಕ್ಕು ಬಿಡುತ್ತಾರೆ-ಅಂದು, ಮಾರನೆಯ ದಿನ ಮೈಸೂರಿನಲ್ಲಿ ಅವನದೇ ಸುದ್ದಿ, ಅವನ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಆಪರಿಚಿತನಾಗಿದ್ದವನೊಬ್ಬ ಇಡೀ ಮೈಸೂರಿನಲ್ಲಿ ಸುದ್ದಿ ಆಗುತ್ತಾನೆ." ಆ ಕಾಲದ ಕೆಲವು ಸಾಹಿತಿಗಳ ಬಗ್ಗೆ, ಪ್ರಗತಿಶೀಲ ಎಂದು ಕರೆದುಕೊಳ್ಳುತ್ತಿದ್ದವರ ಬಗ್ಗೆ ಅವರು ಆಡಿದ ಮಾತಿದು. ನಾನಾಗ ಯುವರಾಜಾ ಕಾಲೇಜಿನಲ್ಲಿ ವಿದ್ಯಾರ್ಥಿ.
ಈಚೆಗೆ ಡಾ. ಎಂ.ಎಂ. ಕಲ್ಬುರ್ಗಿಯವರು ಮೂಢನಂಬಿಕೆ ವಿರೋಧಿ ಸಭೆಯಲ್ಲಿ ಮಾತನಾಡಿದ್ದು ದಿನಪತ್ರಿಕೆಗಳಲ್ಲಿ (ಕ.ಪ್ರ. 10.6.14) ಪ್ರಮುಖವಾಗಿ ವರದಿಯಾಗಿದೆ. ಮುಖಪುಟದ ವರದಿಯ ಬಲಭಾಗದಲ್ಲಿ "ಕನ್ನಡಪ್ರಭ ಕಾಮೆಂಟ್" ಹೀಗಿದೆ- "ಸುಮ್ಮನಿದ್ರೆ ಕಲ್ಬುರ್ಗಿಯಂಥವರು ಕಂಡವರ ತಲೆ ಮೇಲೂ ಉಚ್ಚೆ ಹೊಯ್ತಾರೇನೋ?" ಕನ್ನಡಪ್ರಭಕ್ಕೆ ನನ್ನ ಅಭಿನಂದನೆಗಳು.
ಡಾ. ಕಲ್ಬುರ್ಗಿಯವರು ಆಡಿರುವ ಒಂದೊಂದು ಮಾತಿಗೂ ನಾನು ಪ್ರತಿಕ್ರಿಯೆ ನೀಡುತ್ತೇನೆ.
(1)"ದೇವತೆಗಳೆಂದರೆ ಕೇವಲ ಕಲ್ಲು" -ಕಲ್ಬುರ್ಗಿ
"ಏಕಂ ಸತ್ ವಿಪ್ರಾ ಬಹುಧಾ ವದಂತಿ"- ಇರುವ ದೈವೀಶಕ್ತಿ ಒಂದೇ, ಅದಕ್ಕೆ ಹಲವು ಹೆಸರುಗಳಿವೆ. ಇದನ್ನು ಹಿಂದೆಯೇ ಹಿಂದೂಧರ್ಮ ಗುರುತಿಸಿದೆ. ಅಗೋಚರವಾಗಿರುವ ದೈವವನ್ನು ಮನುಷ್ಯ ಹಲವು ರೂಪಗಳಲ್ಲಿ ಗುರುತಿಸಿ
ಅವುಗಳಿಗೆ ಮಣ್ಣು, ಮರ, ಶಿಲೆಗಳಲ್ಲಿ ರೂಪವನ್ನು ಕೊಡುತ್ತಾನೆ. ಒಂದು ವಿಗ್ರಹ ಬರೀ ಕಲ್ಲಲ್ಲ-ಅದು ಮನುಷ್ಯನ ಶ್ರದ್ಧೆಯ ಭೌತಿಕ ಪ್ರತೀಕ. ತಾಯಿಯು ಹೆಣ್ಣೇ ಆದರೂ ಅವಳನ್ನು ಯಾರೂ ಬರೀ ಹೆಂಗಸಾಗಿ ನೋಡುವುದಿಲ್ಲ-ಮಗನಿಗೆ ತಾಯಿ ಎಂದರೆ ವಾತ್ಸಲ್ಯದ ಸಂಕೇತ. ಶಿಲ್ಪಿ ವಿಗ್ರಹವನ್ನು ಕೆತ್ತಿದ ಮೇಲೆ ಅದನ್ನು ಶಾಸ್ತ್ರೋಕ್ತವಾಗಿ ಎಲ್ಲರ ಸಮಕ್ಷಮ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಿದ ಮೇಲಂತೂ ಅದರ ಸ್ವರೂಪವೇ ಬೇರೆ (ರೂಪ ಅದೇ ಆಗಿರುತ್ತದೆ).
(2)"ದೇವತೆಗಳ ಮೇಲೆ ಮೂತ್ರ ಮಾಡಿದರೂ ತಪ್ಪಿಲ್ಲ ಮತ್ತು ಅದು ಕೇವಲ ಕಲ್ಲಿನಿಂದ ರಚನೆಯಾದ ಕಾರಣ ಅದರಲ್ಲಿ ಕಾಪಾಡುವ, ಕಾಡುವ ಶಕ್ತಿಯೂ ಇಲ್ಲ"-ಕಲ್ಬುರ್ಗಿ
ಡಾ. ಅನಂತಮೂರ್ತಿಯವರು ಚಿಕ್ಕವರಾಗಿದ್ದಾಗ ತುಂಟತನದಿಂದ ಯಾವುದೋ ವಿಗ್ರಹ ಅಥವಾ ಜನ ಪೂಜಿಸುವ ಕಲ್ಲಿನ ಮೇಲೆ ಮೂತ್ರ ವಿಸರ್ಜನೆ ಮಾಡಿರಬಹುದು. ಮಗು ತಾಯಿಯ ಮೇಲೆ ಮೂತ್ರ ವಿಸರ್ಜನೆ ಮಾಡಬಹುದು. ಆದರೆ ಅದೇ ಮಗು ದೊಡ್ಡವನಾದ ಮೇಲೆ ಹಾಗೆ ಮಾಡಲು ಸಾಧ್ಯವೇ? ಹಾಗೆ ಮಾಡಿದರೆ ಅವನು ಹುಚ್ಚ ಎನ್ನಿಸಿಕೊಳ್ಳುತ್ತಾನೆ.
(3) "ವಿಧಾನಸೌಧದ ಒಳಗಿರುವ ದೇವತೆಗಳ ಭಾವಚಿತ್ರ ತೆಗೆಸಬೇಕು"-ಕಲ್ಬುರ್ಗಿ
ಹೋಮ ಹವನ, ಭಾವಚಿತ್ರ ಪೂಜೆ, ವಿಗ್ರಹಪೂಜೆ ಇವು ಭಾರತೀಯ ಸಂಸ್ಕೃತಿಯ ಲಕ್ಷಣ. ಆ ಸಂಪ್ರದಾಯದಲ್ಲಿ ಅಪಾಯ ಇಲ್ಲ-ಆದರೆ ಹಳ್ಳಿಗಳಲ್ಲಿ ಪಶು ಬಲಿಯಂತಹ, ಪಾದೋದಕ ಪಾನದಂಥ ಅನಾಗರೀಕ ಪದ್ಧತಿಗಳು ನಾಶವಾಗಬೇಕು. ಒಬ್ಬ ರಾಜ ಸ್ವಾಮಿ ವಿವೇಕಾನಂದರನ್ನು "ದೇವರ ಪೂಜೆ ಮಾಡಬಹುದೇ?" ಎಂದು ಕೇಳಿದ್ದಕ್ಕೆ ಆ ರಾಜನು ಗತಿಸಿದ ತನ್ನ ತಂದೆಯ ಭಾವಚಿತ್ರಕ್ಕೆ ಉಗಿಯಲು ಸಾಧ್ಯವೇ? ಎಂದು ಉತ್ತರ ಕೊಟ್ಟರಂತೆ ವಿವೇಕಾನಂದರು. ತಂದೆ-ಮಗ, ದೈವ-ಭಕ್ತ ಇವರ ಸಂಬಂಧ ಭಾವನಾತ್ಮಕವಾದುದು. "ಉಗುಳು" ಎನ್ನುವುದು ನೀರನ್ನು ಬಾಯಿಂದ ಬಿಡಿಸುವುದು-ಬಾಯ ಒಳಗಿನ ಉಗುಳುಗಳಿಗೆ ಅಪವಿತ್ರ ಎಂಬ ಭಾವನೆ ಇದೆ. ವಿಧಾನಸೌಧದ ಹಿಂದೆ ಹಲವು ಶ್ರೇಷ್ಠರ, ಹಿಂದಿನ ಮುಖ್ಯಮಂತ್ರಿಗಳ, ದೇವತೆಗಳ ಚಿತ್ರ ಇದ್ದರೆ ಅದು ಸ್ವಾಭಾವಿಕ-ಅವರಿಗೆ ನಾವು ಸಲ್ಲಿಸುವ ಗೌರವ ಅದು. ಶುಭ್ರ ಜೀವನವನ್ನು ನಡೆಸುವ ಅವರಿಗೆ ತೋರುವ ಹೆಚ್ಚಿನ ಗೌರವ ಎಂಬ ಮಾತು ಬೇರೆ.
(4) "ದೇವತೆಗಳ ದೇವಾಲಯ ನಾಶ ಆಗುವವರೆಗೂ ಮೂಢ ನಂಬಿಕೆ ಜೀವಂತ" -ಕಲ್ಬುರ್ಗಿ
ದೇವಾಲಯ ಒಂದು ಸಂಕೇತ- ಅಲ್ಲಿ ನಮ್ಮ ಶ್ರದ್ಧೆಯ ಮೂರ್ತಿ ಪ್ರತಿಷ್ಠಾಪಿತವಾಗಿರುತ್ತದೆ. ಭಾರತದ ಹಿಂದಿನ ಎಲ್ಲ ಶ್ರೇಷ್ಠರೂ ದೈವಾರಾಧಕರು, ದೇವಾಲಯಗಳಿಗೆ ಹೋಗುತ್ತಿದ್ದವರು. ಎಲ್ಲ ದೇವಾಲಯಗಳಿಗೆ ಎಲ್ಲ ವರ್ಗದ ಜಾತಿಯ ಜನರು ಹೋಗಿ ಬರಲು ಅವಕಾಶವಿರಬೇಕು. ಡಾ. ಕಲ್ಬುರ್ಗಿಯವರು ಹಂಪಿಯ ಕನ್ನಡ ವಿಶ್ವವಿದ್ಯಾಲಯ ಕುಲಪತಿ ಆಗಿರುವಾಗ ಅಲ್ಲಿನ ಶ್ರೀ ವಿರೂಪಾಕ್ಷ ದೇವಾಲಯವನ್ನು ನಿರ್ಮೂಲ ಮಾಡಲು ಸರ್ಕಾರಕ್ಕೆ ಸಲಹೆ ಕೊಡಬಹುದಾಗಿತ್ತು. ಆದರೆ ಹಂಪಿಗೆ ಮಹತ್ವ ಬಂದಿರುವುದು ಬರೀ ಅದರ ಪ್ರಾಕೃತಿಕ ಸೌಂದರ್ಯ, ವಿಜಯ ನಗರ ಸಾಮ್ರಾಜ್ಯದ ರಾಜಧಾನಿ ಎಂಬ ಕಾರಣಗಳಿಂದಲ್ಲ-ಅಷ್ಟೇ ಮುಖ್ಯವಾದುದು ಅಲ್ಲಿಯ ವಿರೂಪಾಕ್ಷ ದೇವಾಲಯ. ಅದು ಬರೀ ಪ್ರೇಕ್ಷಣೀಯ ಸ್ಥಳ ಅಲ್ಲ-ಯಾತ್ರಾ ಸ್ಥಳ.
(5)"ಮೋದಿ ಗಂಗೆಗೆ ಆರತಿ ಬೆಳಗಿ ಶುದ್ಧೀಕರಣ ಮಾಡುವುದಾಗಿ ಹೇಳಿಕೆ ಕೊಟ್ಟಿದ್ದಾರೆ. ಪೂಜೆ ಮಾಡದಿದ್ದರೆ ಗಂಗೆ ಹರಿಯುವುದು ನಿಲ್ಲುತ್ತಿತ್ತೇ?" -ಕಲ್ಬುರ್ಗಿ
ಗಂಗೆ ಭಾರತೀಯರಿಗೆ ಅತ್ಯಂತ ಪವಿತ್ರ ನದಿ; ವಿಶ್ವೇಶ್ವರ ಅಷ್ಟೇ ಪವಿತ್ರ ದೇವರು. ಕ್ರಿಶ್ಚಿಯನ್ನರಿಗೆ ಜೆರೂಸಲೆಂ, ಮುಸ್ಲಿಮರಿಗೆ ಮೆಕ್ಕಾ ಇದ್ದಂತೆ ಪ್ರತಿ ಹಿಂದೂವಿಗೂ ವಾರಣಸಿಗೆ ಹೋಗಿ ಬರುವ ಬಯಕೆ ಇರುತ್ತದೆ. ಅದರ ಜಲವನ್ನು ಕೆಲವರು ಸಂಜೆ ಕುಡಿಯುವ ವಿಸ್ಕಿಗೆ, ಹೆಂಡಕ್ಕೆ ಸಮಾನವಾಗಿ ನೋಡಬಾರದು. ಕಲುಷಿತಗೊಂಡಿರುವ ಗಂಗೆಯನ್ನು ಶುದ್ಧೀಕರಿಸುವ ಯೋಜನೆ ಸರಿಯಾದ್ದು.
(6) "ಕ್ರೈಸ್ತರು, ಮುಸಲ್ಮಾನರು, ಬೌದ್ಧರು ಹೀಗೆ ಎಲ್ಲಾ ಜಾತಿ ಧರ್ಮದವರೂ ಭಾರತ ದೇಶವನ್ನು ಆಳಿ ಅವರವರ ನಂಬಿಕೆಗಳನ್ನು ಬಿತ್ತಿದ ಪರಿಣಾಮ ಇಂದು ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಮೂಢನಂಬಿಕೆಗಳು ಹೆಚ್ಚಾಗಿ ಕಂಡು ಬರುತ್ತಿವೆ"-ಕಲ್ಬುರ್ಗಿ
್ಡಹೊರಗಿನಿಂದ ಬಂದ ಕ್ರೈಸ್ತರು, ಮುಸಲನ್ಮಾರಿಂದ ಮೂಢನಂಬಿಕೆಗಳು ಹೆಚ್ಚಾದವು ಎಂಬುದು ಐತಿಹಾಸಿಕ ಸತ್ಯವಲ್ಲ. ಅವುಗಳ ಆಗಮನದಿಂದ ಆಗಿರುವ ಪರಿಣಾಮಗಳು ಬೇರೆ-ಅದು ಸದ್ಯಕ್ಕೆ ಅಪ್ರಸ್ತುತ. ಬುದ್ಧ ದಯೆಯನ್ನು ಬೋಧಿಸಿದ; ಜೈನಧರ್ಮವು ಅಹಿಂಸೆಯನ್ನು ಬೋಧಿಸಿತು; ಶಂಕರಾಚಾರ್ಯರು ಅದ್ವೈತ ಸಿದ್ಧಾಂತವನ್ನು ನೆಲೆಗೊಳಿಸಿದರು; ಬಸವಣ್ಣ ಜಾತಿ ಅಸಮಾನತೆಯನ್ನು ವಿರೋಧಿಸಿದರು. ಅವರಿಂದ ಮೂಢ ನಂಬಿಕೆಗಳು ಹೆಚ್ಚಾಗಲಿಲ್ಲ.
ಶ್ರದ್ಧೆ, ಮೂಢನಂಬಿಕೆಗಳಿಗೆ ಇರುವ ಸ್ಥೂಲ ವ್ಯತ್ಯಾಸವನ್ನು ಗಮನಿಸಬೇಕು. 'ಶ್ರದ್ಧೆ'ಯು ಸಾತ್ವಿಕವಾದುದು; ಮೂಢನಂಬಿಕೆ ತಾಮಸಿಕವಾದುದು. ಅಂತಹ ಮೂಢನಂಬಿಕೆಗಳು ಖಂಡಿತ ತೊಲಗಬೇಕು. ಮನುಷ್ಯರೆಲ್ಲರೂ ಸಮಾನ ಎಂಬ ಭಾವನೆ ಬರಬೇಕು. ಭೌತಿಕ ಸತ್ಯ, ಭಾವನಾತ್ಮಕ ಸತ್ಯ ಎರಡಕ್ಕೂ ಇರುವ ಸ್ಥಳ ವ್ಯತ್ಯಾಸವನ್ನು ಗಮನಿಸುವ ಅಗತ್ಯವಿದೆ. ತಾಯಿ ಹೆಂಗಸು ಎಂಬುದು ಭೌತಿಕ ಸತ್ಯ; ಬರೀ ಹೆಂಗಸು ಅಲ್ಲ ಎಂಬುದು ಭಾವನಾತ್ಮಕ. ಮನುಷ್ಯನ ಸಮಾಜವು ರೂಪುಗೊಂಡದ್ದು ಭಾವನಾತ್ಮಕ ಸತ್ಯದ ಅಡಿಗಲ್ಲ ಮೇಲೆ. ಮಾನವನ ಬದುಕು ಬರೀ ಭೌತಿಕ, ಲೈಂಗಿಕ ಕ್ರಿಯೆಗಳನ್ನು ಅವಲಂಬಿಸಿದ್ದಲ್ಲ-ಅದು ಹಲವು ಮೌಲ್ಯಗಳ (Values)ಸಂಕೀರ್ಣ. ಭಾರತ, ಭಾರತೀಯ ಸಂಸ್ಕೃತಿ ಇವು ಭೌತಿಕ ಅಸ್ತಿತ್ವದಂತೆಯೇ ಭಾವನಾತ್ಮಕ ಅಸ್ತಿತ್ವವನ್ನೂ ಒಳಗೊಳ್ಳುತ್ತವೆ. ಪ್ರಾಣಿ ಪಕ್ಷಿಗಳು ತಮ್ಮ ದೈಹಿಕ ಅಗತ್ಯಗಳಿಗನುಗುಣವಾಗಿ ಬದುಕುತ್ತವೆ-ಅವುಗಳಿಗೆ ತಿನ್ನುವುದು, ಸಂರಕ್ಷಣೆ, ಲೈಂಗಿಕ ಸಂಪರ್ಕ ಇವು ಸ್ವಾಭಾವಿಕವಾಗಿರುತ್ತವೆ. ಆದರೆ ಮನುಷ್ಯ ಏನು, ಹೇಗೆ, ಎಲ್ಲಿ, ಎಂದು ತಿಳಿದು ನಡೆದುಕೊಳ್ಳುತ್ತಾನೆ. ಅವನಿಗೆ ಅಸ್ಮಿತೆ, ಆತ್ಮಗೌರವ, ಚಿಂತನೆ ಇರುತ್ತವೆ- ಆದ್ದರಿಂದಲೇ ಮನುಷ್ಯನಿಗೆ 'ಸಂಸ್ಕೃತಿ' ಇರುತ್ತದೆ. ('ಸಂಸ್ಕೃತಿ'-(Culture-ವಿಶಾಲಾರ್ಥದಲ್ಲಿ).
ಮಠಗಳು, ಪುರೋಹಿತರು, ದೇವಾಲಯಗಳು, ಅರ್ಚಕರು ಇವರು 'ಧರ್ಮದ' ರಕ್ಷಣೆ, ಮುಂದುವರಿಯುವಿಕೆಗೆ ಅಗತ್ಯ. ಅವರು ಶೋಷಕರಾಗಬಾರದು. ತಾವೂ ತಿದ್ದಿಕೊಂಡು ಜನರನ್ನೂ ತಿದ್ದುವ ಕೆಲಸ ಆಗಬೇಕು.
ಸಂಶೋಧನಾ ಕ್ಷೇತ್ರದಲ್ಲಿ ಹೇಗೋ ಸಾಮಾಜಿಕ ಕ್ಷೇತ್ರದಲ್ಲೂ ವಾಸ್ತವವನ್ನು ಅರಿಯದೆ ಕಲ್ಬುರ್ಗಿಯವರು ಬರೆಯುತ್ತಾರೆ, ಮಾತನಾಡುತ್ತಾರೆ ಎಂಬುದು ನೋವಿನ ಸಂಗತಿ.
-ಡಾ. ಎಂ. ಚಿದಾನಂದಮೂರ್ತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


