

ಎಲ್ಲವೂ ನಿರೀಕ್ಷೆಯಂತೆಯೇ ನಡೆದಿದ್ದರೆ, ಈ ವೇಳೆಗೆ ಇಡೀ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರದ ಮೊದಲ ವರ್ಷದ ಸಾಧನೆಯನ್ನು ಸಾರುವ ಕೊಂಬು, ಕಹಳೆ, ಡಂಗುರಗಳ ಸದ್ದು ಕಿವಿಯಲ್ಲಿ ಮನೆ ಮಾಡಿರಬೇಕಾಗಿತ್ತು.
ಜನ ಸಾಮಾನ್ಯ ವರ್ಗಗಳ ಕೇಕೆಯ ಶಬ್ದ ಮುಗಿಲು ಮುಟ್ಟಬೇಕಾಗಿತ್ತು. ಸ್ವಯಂ ಸಿದ್ದರಾಮಯ್ಯ ಅವರೇ ಹಲವಾರು ಸನ್ಮಾನ ಸಮಾರಂಭಗಳಲ್ಲಿ ಅಜೀರ್ಣವಾಗುವಷ್ಟು ಹೊಗಳಿಕೆಯ ಮಾತು ಕೇಳಬೇಕಾಗಿತ್ತು. ಆದರೆ ಮೊಸರನ್ನದಲ್ಲಿ ಕಲ್ಲು ಸಿಕ್ಕಂತೆ ಲೋಕಸಭೆ ಚುನಾವಣೆಯ ಫಲಿತಾಂಶ ಕಾಂಗ್ರೆಸ್ಸಿನ ಪಾಲಿಗೆ ಹೀನಾಯವಾದ ಛೀಮಾರಿಯಂತೆ ಅಪ್ಪಳಿಸಿದ್ದು ಎಲ್ಲ ಸಂಭ್ರಮವನ್ನೂ ನುಂಗಿ ಹಾಕಿತ್ತು. ಕಾಂಗ್ರೆಸ್ಸಿಗೆ ಕೊಳಕಾದ ಸೋಲಿನ ಕಪ್ಪು ಚುಕ್ಕೆ ಅಂಟಿಕೊಂಡಿತ್ತು. ಅದು ಅಖಿಲ ಭಾರತದ ಮಾತಾಯಿತು. ಕರ್ನಾಟಕದಲ್ಲಾದರೂ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ಸಿಗೆ ಹದಿನೈದು ಸ್ಥಾನಗಳಾದರೂ ಬಂದಿದ್ದರೆ ಸಂತೋಷದಿಂದಿರಬಹುದಾಗಿತ್ತು. ಅದೂ ಬರಲಿಲ್ಲ. ಆದರೇನಂತೆ, ಇಡೀ ದೇಶದಲ್ಲಿ ಕಾಂಗ್ರೆಸ್ ಸೋತಿರುವಾಗ, ಕೆಲವು ರಾಜ್ಯಗಳಲ್ಲಿ ವಿಳಾಸವೇ ಇಲ್ಲದಂತೆ ನಾಪತ್ತೆಯಾಗಿರುವಾಗಲೂ, ಜನರ ಪ್ರಕಟಿತ ಅಭಿಪ್ರಾಯ ಹೇಗಾದರೂ ಇರಲಿ, ಪಕ್ಷದ ಅಗ್ರಗಣ್ಯ ನೇತಾರರಿಂದ ಸಿದ್ದರಾಮಯ್ಯ ಅವರಿಗೆ ಮೆಚ್ಚುಗೆ ದೊರೆತಿರುವುದು ನಿಜ.
ಯಾರು ಏನಾದರೂ ಹೇಳಿಕೊಳ್ಳಲಿ, ಸದ್ಯಕ್ಕೆ (ಅದಕ್ಕೇನೂ ಕಾಲಮಿತಿ ಇಲ್ಲ) ರಾಜ್ಯದಲ್ಲಿ ಸರ್ಕಾರದಲ್ಲಿ ಬದಲಾವಣೆ ಇಲ್ಲ, ಸಿದ್ದರಾಮಯ್ಯ ಅವರ ನಾಯಕತ್ವ ಅಭಾದಿತ ಎನ್ನುವ ಭರವಸೆ ದೊರೆತಿದೆ. ದೆಹಲಿಯ ನಾಯಕರಿಗೂ ಬೇರೆ ಏನನ್ನೂ ಹೇಳುವುದಕ್ಕೆ ಅವಕಾಶವಿರಲಿಲ್ಲ, ಕರ್ನಾಟಕ ಕಾಂಗ್ರೆಸ್ ವ್ಯವಹಾರವನ್ನು ನೋಡಿಕೊಳ್ಳುತ್ತಿರುವ ದಿಗ್ವಿಜಯ ಸಿಂಗ್ ಅವರೇ ಪ್ರತ್ಯಕ್ಷ ಚುನಾವಣೆಯನ್ನು ಮರೆತು ರಾಜ್ಯಸಭೆಗೆ ಹೋಗುವ ಸ್ಥ್ಥಿತಿ ಬಂದಿದೆ. ಅವರ ತಮ್ಮ ಲಕ್ಷಣಸಿಂಗ್ ಮಧ್ಯಪ್ರದೇಶದ ವಿದಿಶಾದಲ್ಲಿ ಬಿಜೆಪಿ ನಾಯಕಿ ಸುಷ್ಮಾಸ್ವರಾಜ್ ವಿರುದ್ಧ ಸೋತಿದ್ದಾರೆ. (ಅದು ವಾಸ್ತವದಲ್ಲಿ ಮಧ್ಯಪ್ರದೇಶ ಬಿಜೆಪಿಯ ಪ್ರಚಂಡ ವಿಜಯ). ಇನ್ನು ಅವರು ದೆಹಲಿಯಿಂದ ಬೆಂಗಳೂರಿಗೆ ಬಂದು ಇಲ್ಲಿನ ಕಾಂಗ್ರೆಸ್ಸಿಗರಿಗೆ ಹೇಳುವುದಕ್ಕೆ ಏನಿತ್ತು? ನಮ್ಮ ರಾಜ್ಯಪಾಲರೂ ಸುಮ್ಮನಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಜ್ಯದ ವಿಧಾನ ಸಭೆಯಿಂದ ವಿಧಾನ ಪರಿಷತ್ತು ಹಾಗೂ ರಾಜ್ಯಸಭೆಗೆ ನಡೆಯುವ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರ ಕೈ ಮೇಲಾಗಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಸಿಕ್ಕ ಅವಕಾಶವನ್ನು ಬಳಸಿ ಅವರು ತಮ್ಮ ರಾಜಕೀಯ ಮಂತ್ರವಾದ ಅಹಿಂದ ಆಂದೋಲನವನ್ನು ಇನ್ನೊಂದು ಹೆಜ್ಜೆ ಮುಂದಿಡುವಂತೆ ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ.
ಕರ್ನಾಟಕದಿಂದ ರಾಜ್ಯಸಭೆಗೆ ಇಬ್ಬರು ಸದಸ್ಯರನ್ನು ಆರಿಸುವ ಅವಕಾಶವಿತ್ತು. ಆ ಎರಡೂ ಸ್ಥಾನಗಳನ್ನು ವಾಸ್ತವದಲ್ಲಿ ಆರಿಸಿದ್ದು ವರಿಷ್ಠರೇ. ಅದಕ್ಕೆ ಸಿದ್ದರಾಮಯ್ಯ ಅವರ ಅಭ್ಯಂತರವೇನೂ ಇರಲಿಲ್ಲ.
ಕೋಲಾರ ಜಿಲ್ಲೆಯ ಮುಳಬಾಗಿಲು ಸೀಮೆಯ ಪ್ರಸಿದ್ಧ ರಾಜಕೀಯ ಕುಟುಂಬದ (ಮಾಜಿ ಕೇಂದ್ರಮಂತ್ರಿ ಎಂ.ವಿ.ಕೃಷ್ಣಪ್ಪ ಅವರ ಸೋದರ ಮಾಜಿ ವಿಧಾನ ಸಭಾಧ್ಯಕ್ಷ ಎಂ.ವಿ.ವೆಂಕಟಪ್ಪ ಅವರ ಪುತ್ರ) ರಾಜೀವ್ ಗೌಡ ಅವರು ಕಾಂಗ್ರೆಸ್ಸಿನಲ್ಲಿ ಈಗ ದೆಹಲಿಯಲ್ಲಿ ಆಳುವ ಕೂಟದ ಅಚ್ಚು ಮೆಚ್ಚಿನ ವ್ಯಕ್ತಿ. ಅಮೆರಿಕದಲ್ಲಿ ಉನ್ನತ ವ್ಯಾಸಂಗ, ಐಡಿಎಂನಲ್ಲಿ ಪ್ರಾಧ್ಯಾಪಕರ ಪ್ರತಿಷ್ಠೆ ವ್ಯಕ್ತಿಯನ್ನು ವಿರೋಧಿಸುವವರು ಇರಲಿಲ್ಲ.
ಎರಡೇ ವರ್ಷಗಳ ಹಿಂದೆ ರಾಜೀವ ಗೌಡ ವಿಧಾನ ಪರಿಷತ್ತಿಗೆ ಅಧ್ಯಾಪಕರ ಅಥವಾ ಪದವೀಧರರ ಕ್ಷೇತ್ರಗಳಿಂದ ಸ್ಪರ್ಧಿಸುವ ಆಲೋಚನೆ ಮಾಡಿದ್ದರು. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ತರ ಬೆಂಗಳೂರು ಕ್ಷೇತ್ರದ ಆಯ್ಕೆ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಜಿತರಾಗಿದ್ದರು. ಆದರೂ ಅವರಿಗೆ ಮೇಲಿನ ಆದೇಶದ ಬೆಂಬಲವಿತ್ತು. ಗ್ರಾಮಪಂಚಾಯಿತಿ ಸಭೆಯಲ್ಲೂ ಪಾಲುಗೊಳ್ಳದ ರಾಜೀವ ಗೌಡರು ನೇರವಾಗಿ ರಾಜ್ಯಸಭೆಗೇ ಜಿಗಿದಿದ್ದಾರೆ. ಆಯ್ಕೆಯಾದ ಇನ್ನೊಬ್ಬ ಸದಸ್ಯ ಎಐಸಿಸಿಯ ಆವರಣದಲ್ಲೇ ಬೆಳೆದ ಬಿ.ಕೆ.ಹರಿಪ್ರಸಾದ, ಇತರೆ ಹಿಂದುಳಿದ ಜಾತಿಯ ಸಮುದಾಯದಿಂದ ಬಂದವರು. ವಿಧಾನ ಪರಿಷತ್ತಿನ ಸ್ಥಾನಗಳ ಆಯ್ಕೆಯಲ್ಲಿ ಕಾಣಿಸಿಕೊಂಡಿರುವವರೆಲ್ಲರೂ ಅಲ್ಪ ಸಂಖ್ಯಾತ ಹಿಂದುಳಿದ ದಲಿತ ಸಮುದಾಯದವರೇ. ಅವರಲ್ಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ. ಪರಮೇಶ್ವರ ಅವರೂ ಒಬ್ಬರೇ. ಆದರೆ ಅವರನ್ನು ಸಿದ್ದರಾಮಯ್ಯ ಅವರ ವಿಶೇಷ ಆಯ್ಕೆ ಎನ್ನುವಂತಿಲ್ಲ. ಅವರು ಬೇರೆ ಓಣಿಯವರು. ಉಳಿದವರೆಲ್ಲರೂ ಸಿದ್ದರಾಮಯ್ಯ ಬ್ರಾಂಡ್‌ನ ಅಹಿಂದ ಸಮುದಾಯದವರೇ.
ಈಗಿನ ಮಂತ್ರಿಮಂಡಲದಲ್ಲಿನ ಸಾಮಾಜಿಕ ನ್ಯಾಯ ವಿತರಣೆಯ ಸ್ವರೂಪ, ರಾಜ್ಯಸಭೆ, ವಿಧಾನ ಪರಿಷತ್ತುಗಳ ಸ್ಥಾನಗಳಿಗೆ ನಡೆದಿರುವ ಆಯ್ಕೆಯ ವೈಖರಿಯನ್ನು ಗಮನಿಸಿದರೆ, ಕಾಂಗ್ರೆಸ್ ರಾಜಕೀಯದಲ್ಲಿ ಧಾರಾಳವಾಗಿ ಸಿದ್ದರಾಮಯ್ಯ ಉಘೇ ಉಘೇ ಎನ್ನಬಹುದು. ಈಗಿನ ಪ್ರಕಟಿತ ಹೆಸರುಗಳಲ್ಲಿ ರಾಜೀವ ಗೌಡರನ್ನು ಬಿಟ್ಟರೆ ಉಳಿದವರೆಲ್ಲ ಅಹಿಂದ ಪರಿಹಾರವೇ.
ಕೋಟ್ಯಾಧಿಪತಿಗಳ ಪಾಲು: ಈ ರಾಜಕೀಯದ ಪರಿಣಾಮ ವಾಸ್ತವದಲ್ಲೇನಾಗಬಹುದು? ರಾಜ್ಯದಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ ಪ್ರಬಲವಾಗಿರುವ, ಸಂಖ್ಯಾಬಲದಲ್ಲಿ ಸಾಕಷ್ಟು ಮುಂದಿರುವ ವೀರಶೈವ ಸಮಾಜವನ್ನು ಶಾಶ್ವತವಾಗಿ ಬಿಜೆಪಿಯ ಬಗಲಿಗೆ ತಳ್ಳಿದಂತಾಗುತ್ತದೆ. ಇದರಿಂದ ಬಿಜೆಪಿಗೆ ಹಿಂದೆ ಇಲ್ಲದಿದ್ದ ಸಮುದಾಯ ಆಧರಿತ ಸಂಖ್ಯಾಬಲವನ್ನು ಒದಗಿಸಿಕೊಟ್ಟಂತೆ ಆಗುತ್ತದೆ.
ಇದೇ ಸಮಯದಲ್ಲಿ ರಾಜ್ಯಸಭೆ, ವಿಧಾನ ಪರಿಷತ್ತಿಗೆ, ಕಾಂಗ್ರೆಸ್- ಬಿಜೆಪಿ- ಜೆಡಿಎಸ್‌ಗಳು ಆರಿಸಿರುವ ಎಲ್ಲ ಅಭ್ಯರ್ಥಿಗಳೂ (ಕಾಂಗ್ರೆಸ್ ಆರಿಸಿರುವ ಮೊಳಕಾಲ್ಮೂರು ಸೀಮೆಯ ಕಾಡಗೊಲ್ಲರ ಜಯಮ್ಮ ಅವರನ್ನು ಬಿಟ್ಟರೆ) ಕೋಟ್ಯಧಿಪತಿಗಳೇ ಎನ್ನುವುದೂ ಗಮನಾರ್ಹ. ಅಲ್ಲಿ ಸಾಮಾನ್ಯರಿಗೆ ಅವಕಾಶವಿಲ್ಲ.
ವಿಶಿಷ್ಟವಾದ ಜನ ಸಮುದಾಯಗಳ ಹಿತರಕ್ಷಣೆಗೆಂದು, ಸಾಮಾನ್ಯ- ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವ ಚೈತನ್ಯ ಇಲ್ಲದೇ ಇರುವ ವರ್ಗಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸಿರುವ ಮೇಲ್ಮನೆ ಕೋಟ್ಯಧಿಪತಿಗಳ ಬೀಡಾಗುವಂತಾಗಿದೆ.
ಅದರಲ್ಲೂ ರಾಜ್ಯಸಭೆಯ ನಾಲ್ಕನೆಯ ಸ್ಥಾನವನ್ನು ಪಡೆದಿರುವ ಶತಕೋಟ್ಯಾಧಿಪತಿ ಕುಪೇಂದ್ರ ರೆಡ್ಡಿ ಅವರ ಆಯ್ಕೆಯ ಹಿಂದಿನ ಚಟುವಟಿಕೆಗಳನ್ನು ಗಮನಿಸಿದೆ, ನಮ್ಮ ಜನತಂತ್ರ ವ್ಯವಸ್ಥೆಯ ಈ ಭಾಗದ ದುರಸ್ತಿ ಅಗತ್ಯ ಎನಿಸುತ್ತಿದೆ.
ಕುಪೇಂದ್ರ ರೆಡ್ಡಿ ಅವರು ರಾಜ್ಯಸಭೆ ಚುನಾವಣೆಯಲ್ಲಿ ಜಾತ್ಯತೀತ ಜನತಾದಳದ ಶಾಸಕರು ಸಹಿ ಮಾಡಿದ ನಾಮಪತ್ರವನ್ನು ಸಲ್ಲಿಸುವ ಸಮಯದಲ್ಲೂ ಸ್ವಯಂ ಘೋಷಿತ ಕಾಂಗ್ರೆಸ್ ಸದಸ್ಯರು ಅವರಿಗೆ ಕಾಂಗ್ರೆಸ್ ಬೆಂಬಲವಿತ್ತು. ಆದರೆ ಅವರಿಗೆ ದೊಡ್ಡ ಸಂಖ್ಯೆಯ ಬೆಂಬಲ ಸಿಕ್ಕಿದ್ದು ಜಾತ್ಯತೀತ ಜನತಾದಳದಿಂದ. ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕುಪೇಂದ್ರ ರೆಡ್ಡಿ ಅವರ ಆತ್ಮೀಯ ಬಳಗಕ್ಕೆ ಸೇರಿದವರು. ಉಳಿದಿದ್ದು ಎಲ್ಲರಿಗೂ ಅರ್ಥವಾಗುವಂತಹ ವಿಚಾರವೇ.
ಪರಮೇಶ್ವರ ಪ್ರಕರಣ: ವಿಧಾನ ಮಂಡಲದ ಸದಸ್ಯರಾಗಲಿರುವ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ. ಜಿ. ಪರಮೇಶ್ವರ ಅವರ ಕಣ್ಣು ಉಪ ಮುಖ್ಯಮಂತ್ರಿಯ ಸ್ಥಾನದ ಮೇಲೇ ಇರುವುದು ರಹಸ್ಯವೇನೂ ಅಲ್ಲ. ಅದಕ್ಕೆ ಸಿದ್ದರಾಮಯ್ಯ ಅವರು ಒಂದು ಹಂತದಲ್ಲಿ ತಮ್ಮ ಅಭ್ಯಂತರವೇನೂ ಇಲ್ಲ ಎಂದು ಹೇಳಿದ್ದೂ ನಿಜ. ಆದರೆ ಈಗಲೂ ಅವರು ಅದೇ ಮಾತನ್ನು ಹೇಳಲೇಬೇಕಾದ ಕಡೆಯಲ್ಲಿ ಹೇಳ್ತಾರೋ, ಇಲ್ಲವೋ ಯಾರಿಗೆ ಗೊತ್ತು?
ಪ್ರದೇಶ ಕಾಂಗ್ರೆಸ್ಸಿಗೆ ಒಬ್ಬ ಹೊಸ ಅಧ್ಯಕ್ಷರನ್ನು ಹುಡುಕಬೇಕಾಗಿದೆ. ಕರ್ನಾಟಕ ಕಾಂಗ್ರೆಸ್ಸಿನ ರಾಜಕೀಯ ಎಂದರೆ ಹಳೆಯ ಮೈಸೂರು ಸಂಸ್ಥಾನದ ರಾಜಕೀಯವೇ ಎನ್ನುವ ಪರಿಸ್ಥಿತಿ ನಿರ್ಮಾಣವಾದಂತಿದೆ.
ವಿಶಾಲವಾದ ಕೃಷ್ಣಾ, ಭೀಮಾ, ತುಂಗಭದ್ರಾ ನದಿಗಳ ಬಯಲಿನ ಕರಿಮಣ್ಣಿನ ನಾಡು, ಕೊಡಗಿನಿಂದ ಕಾರವಾರದವರೆಗಿನ ಕರಾವಳಿ- ಘಟ್ಟದ ಸೀಮೆಯ ಸಾರ್ವಜನಿಕ ಜೀವನದಲ್ಲಿ ಕಾಂಗ್ರೆಸ್ಸಿನ ಪಾತ್ರ- ಪ್ರಭಾವ ಎರಡೂ ಕಡಿಮೆಯಾಗಿದೆ. ಆ ಪಕ್ಷದ ಸಂಘಟನೆಗೇ ಅಪಾಯ. ಈಗ ಆ ಪ್ರದೇಶಗಳು ತಬ್ಬಲಿಯಾಗಿವೆ. ರಾಜ್ಯ ಸರ್ಕಾರಕ್ಕೆ ವಿಧಾನ ಪರಿಷತ್ತಿನ ಸದಸ್ಯರ ನಾಮಕರಣದ ಅವಕಾಶವೂ ಇದೆ. ಆ ಸ್ಥಾನಗಳನ್ನು ತುಂಬಲು ಯಾವ ಯಾವ ವರ್ಗದ ಪ್ರತಿನಿಧಿಗಳು ಸೂಕ್ತ ಎನ್ನುವುದೂ ನಿಗದಿಯಾಗಿದೆ. ಲಲಿತಕಲೆಗಳು, ಸಾಹಿತ್ಯ, ಸಂಗೀತ, ವಿಜ್ಞಾನ, ಮಾಧ್ಯಮ ಇಂತಹ ಕ್ಷೇತ್ರಗಳಲ್ಲಿ ದುಡಿದು ಖ್ಯಾತರಾದವರನ್ನು ನಾಮಕರಣ ಮಾಡುವುದು ಸೂಕ್ತ.
ಒಂದು ನೆನಪು: ಹಿಂದೆ, ಹನುಮಂತಯ್ಯ ಅವರ ಕಾಲದಲ್ಲಿ ಸಂಗೀತ ರತ್ನ ಚೌಡಯ್ಯ, ನಾಟ್ಯಕಲಾವಿಶಾರದ ಮಹದೇವಸ್ವಾಮಿ, ರಂಗಭೂಮಿಯ ಗುಬ್ಬಿ ವೀರಣ್ಣ, ಚಿತ್ರಕಲಾವಿದ ರುಮಾಲೆ ಚನ್ನಬಸವಯ್ಯ, ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರಂತಹ ಪ್ರಾತಃ ಸ್ಮರಣೀಯರ ನಾಮಕರಣವಾಗಿತ್ತು. ಈಗ ಅಂತಹ ಸಾಧ್ಯತೆಗಳಿಲ್ಲ. ಕಾಂಗ್ರೆಸ್ಸಿಗರನ್ನೇ ನಾಮಕರಣ ಮಾಡಬೇಕೆನ್ನುವ ಒತ್ತಾಯ ಬಲವಾಗಿದೆ. ಅದನ್ನು ಒತ್ತರಿಸುವುದು ಸರ್ಕಾರಕ್ಕೆ ಸಾಧ್ಯವಾಗದೇ ಹೋಗಬಹುದು. ಆ ವಲಯಕ್ಕೂ ಕೋಟ್ಯಧಿಪತಿಗಳ ಪ್ರವೇಶವಾಗುವ ಸಂಭವವಿದೆ. ಕಾಲ ಬದಲಾಯಿತು. ನಿಜ. ಆದರೆ ಜನತಂತ್ರ ಬದಲಾಗಿಲ್ಲವಲ್ಲ. ಇದನ್ನು ನಮ್ಮ ನಾಯಕರು ತಿಳಿದುಕೊಳ್ಳುವುದು ಯಾವಾಗ?
ಕಿಡಿಗೇಡಿತನ- ರಾಜ್ಯಸಭೆಗೆ ಪುನರಾಯ್ಕೆಗೆ ಅವಕಾಶ ಕೇಳಿದ್ದ ಹಿರಿಯ ನಾಯಕ ಎಸ್.ಎಂ. ಕೃಷ್ಣ ಅವರಿಗೆ ವರಿಷ್ಠರು ಅವಕಾಶ ನೀಡಿಲ್ಲ. ಇದರಿಂದ ರಾಜ್ಯ ರಾಜಕೀಯದಲ್ಲಿ ಅಲ್ಲ ಕಲ್ಲೋಲವೇನೂ ಉಂಟಾಗಲಾರದು. ದೊಡ್ಡವರ ಸಣ್ಣತನಕ್ಕೆ ಒಂದು ನಿದರ್ಶನವಾಗಿ ಈ ಘಟನೆ ರಾಜ್ಯ ರಾಜಕೀಯ ಇತಿಹಾಸದಲ್ಲಿ ಶಾಶ್ವತವಾಗಿ ನಿಲ್ಲಬಹುದಷ್ಟೇ.
-ಸತ್ಯ
anisikeprabha@gmail.com