ಮೂತ್ರಿಗಳೆಲ್ಲಾ ಮುತ್ಸದ್ದಿಗಳೆನಿಸಿದರೆ ಹೋದಲ್ಲೆಲ್ಲಾ ಗಲೀಜು
"ಅರ್ಚಕಸ್ಯ ಪ್ರಭಾವೇನ ಶಿಲಾ ಭವತಿ ಶಂಕರ" ಎಂಬೊಂದು ಉಕ್ತಿ ಇದೆ. ಹಾಗೊಮ್ಮೆ ನೋಡಿದರೆ ದೇವಸ್ಥಾನದ ನೆಲಹಾಸು-ಛಾವಣಿ-ಗೋಡೆ ಎಲ್ಲೆಂದರಲ್ಲಿ ಕಲ್ಲುಗಳು ಇದ್ದೇ ಇರುತ್ತವೆ. ಕಲ್ಲುಮಯವಾದ ಕೇಂದ್ರದಲ್ಲಿ, ಉನ್ನತ ಕಲ್ಲಿನ ಪೀಠದಲ್ಲಿಯೇ ಕಲ್ಲಿನಿಂದಲೇ ಮಾಡಿದ ವಿಗ್ರಹವನ್ನು ನಾವು ಪೂಜಿಸುತ್ತೇವೆ. ಅದೊಂದು ಭಾವನಾತ್ಮಕ ವಿಷಯ! ಪುಟ್ಟ ಹೆಣ್ಣು ಮಗುವೊಂದು ನಿರ್ಜೀವ ಬೊಂಬೆಯಲ್ಲಿ ತನ್ನ ಮಗುವನ್ನು ಕಾಣುವಂತೆಯೇ, ಕಲ್ಲಿನಿಂದಲೋ ಲೋಹದಿಂದಲೋ ಮಾಡಿದ ವಿಗ್ರಹಗಳಲ್ಲಿ ನಾವು ಜಗನ್ನಿಯಾಮಕ ಶಕ್ತಿಯನ್ನು ಕಾಣುತ್ತೇವೆ. ಆ ಬಿಂಬದಲ್ಲಿ ದೇವರನ್ನು ಆಹ್ವಾನಿಸುತ್ತೇವೆ. ಅಲ್ಲಿ ಸನ್ನಿಹಿತನಾಗೆಂದು ಪ್ರಾರ್ಥಿಸಿ, ಷೋಡಶ ಉಪಚಾರಗಳನ್ನು ನೆರವೇರಿಸುತ್ತೇವೆ.
1.ಆಸನಂ 2.ಸ್ವಾಗತಂ 3.ಅರ್ಘ್ಯಂ 4.ಪಾದ್ಯಂ,(ಆಚರಣೆಯಲ್ಲಿ ಪಾದ್ಯ ಆದ ಮೇಲೆ ಅರ್ಘ್ಯ) 5.ಆಚಮನೀಯಕಂ 6.ಮಧುಪರ್ಕಾರ್ಪಣಂ 7.ಸ್ನಾನಂ 8.ವಸನ 9.ಆಭರಣಾನಿ ಚ 10.ಸುಗಂಧಃ 11.ಸುಮನೋ ಧೂಪೋ 12.ದೀಪಂ 13.ಅನ್ನೇನಭೋಜನಂ 14.ಮಾಲ್ಯಾ 15. ಅನುಲೇಪನಂ ಚೈವ 16.ನಮಸ್ಕಾರ -ಇತಿಕ್ರಮಾತ್.
ರೂಢಿಯಲ್ಲಿ ಪೂಜಾ ಕ್ರಮದಲ್ಲಿ ಬೇರೆ ರೀತಿ ಅನಸರಣೆ ಇದೆ. ಚತುರ್ವಿಂಶತಿ ಉಪಚಾರ ಪೂಜೆಯಲ್ಲಿ ಸ್ವಲ್ಪ ಬೇರೆ ಕ್ರಮ ಇದೆ. ಇವಲ್ಲದೆ ಮಂಟಪ, ದ್ವಾರಪಾಲಕರ, ಶಂಖ, ಆಸನ ಪೂಜಾವಿಧಿಗಳು ಸೇರಿವೆ. ಕೆಲವರು ನಿತ್ಯಪೂಜೆಗೆ ಆವಾಹನೆ ವಿಸರ್ಜನೆ ಅಗತ್ಯವಿಲ್ಲವೆಂದು ಹೇಳುತ್ತಾರೆ: ಶ್ರವಣ, ಕಿರ್ತನ, ಸ್ಮರಣ, ವಂದನ, ಪಾದ ಸೇವನ, ದಾಸ್ಯ, ಪೂಜನ, ಸಾಮೀಪ್ಯ, ಅತ್ಮ ನಿವೇದನ ಇವೆಲ್ಲವೂ ದೇವರ ಸೇವೆಯಲ್ಲಿ ಹೇಳಲ್ಪಟ್ಟ ಕೈಂಕರ್ಯಗಳೇ ಆಗಿವೆ.
ಇಷ್ಟೆಲ್ಲಾ ಸುಂದರ ಸಂಪ್ರದಾಯ, ಅಚರಣೆ ಎಲ್ಲಾ ಕೈಂಕರ್ಯಗಳ ಹಿಂದೆ ವೈಜ್ಞಾನಿಕ ನಡೆಯಿದೆ-ಮನೋವೈಜ್ಞಾನಿಕ ನಡೆಯೂ ಇದೆ. ವ್ಯಕ್ತಿಗೆ ಹೃದಯ ಭಾರವಾದಾಗ, ಎಲ್ಲರೂ ಕೈಬಿಟ್ಟಾಗ, ಕೊನೆಗೊಮ್ಮೆ ಕಾಣದ ತನ್ನ ಕೈಗಳನ್ನು ಚಾಚಿ ಸಂತೈಸುವುದು ಜಗನ್ನಿಯಾಮಕ ಶಕ್ತಿಯೇ! ಆ ಶಕ್ತಿಯಲ್ಲಿ ನಿತ್ಯವೂ ಆತ್ಮನಿವೇದನೆ ಮಾಡಿಕೊಂಡು ಹೃದಯ ಹಗುರ ಮಾಡಿಕೊಳ್ಳುವ ಕ್ರಿಯೆ ಇಲ್ಲಿದೆ. ಈ ಎಲ್ಲಾ ಸಗುಣ ರೂಪದ ಪೂಜಾ ವಿಧಾನಗಳು ಜನಸಾಮಾನ್ಯರಿಗೆ ಮಾತ್ರ! ಆಧ್ಯಾತ್ಮಿಕ ಸಾಧಕ ಜೀವನದಲ್ಲಿ ಮುನ್ನಡೆದವರು ಪರಬ್ರಹ್ಮ ಶಕ್ತಿಯನ್ನು ನಿರ್ಗುಣರೂಪದಲ್ಲಿಯೇ ಆರಾಧಿಸುತ್ತಾರೆ ಆದರೆ ಬಾಹ್ಯದಲ್ಲಿ ನಮಗೆಲ್ಲ ತೋರಿಸಲು-ಮಾರ್ಗ ದರ್ಶಿಸಲು ಅಂಥವರೂ ಮೂರ್ತಿ ಪೂಜೆಗಳಲ್ಲಿ ನಿರತರಾಗುವುದಿದೆ.
ಮನೋವಿಜ್ಞಾನ ಬಲ್ಲವರು ಯಾವುದೋ ಒಂದು ವಸ್ತುವಿನ ಮೇಲೆ ದೃಷ್ಟಿಯನ್ನು ಕೇಂದ್ರೀಕರಿಸಲು ಹೇಳಿ-ತನ್ಮೂಲಕ ಏಕಾಗ್ರತೆ ಉಂಟುಮಾಡುತ್ತಾರೆ. ಅದೇ ರೀತಿಯಾಗಿ ನಾವಿಷ್ಟ ಪಡುವ ರೂಪದಲ್ಲಿಯೇ ಭಗವಂತನನ್ನು ಕಾಣುವ, ಸೇವಿಸುವ, ಒಪ್ಪಿಕೊಳ್ಳುವ-ಮನಸಾ ಅಪ್ಪಿಕೊಳ್ಳುವ ಭಾವನೆ ಉಂಟಾಗುವುದು ಸಗುಣಾರಾಧನೆಯಿಂದ ಸಾಧ್ಯ. ಅಶಕ್ಯವೆಂದು ಕೈಚೆಲ್ಲಿ ಕುಳಿತವರೂ ಸಶಕ್ಯವೆಂದು ಭಗವಂತನನ್ನು ಕಾಣುವುದು ಸಗುಣರೂಪದಲ್ಲಿಯೇ. ಅವರವರ ಇಷ್ಟದ ರೂಪದಲ್ಲಿ 'ಮೂವತ್ಮೂರು ಕೋಟಿ ರೂಪಗಳು' ಆರಾಧಿಸುವ ಸ್ವಾತಂತ್ರ್ಯ ಕೂಡಾ ನಮಗೆ ನೀಡಲ್ಪಟ್ಟಿದೆ ಎಂದರೆ ಈ ಸನಾತನ ಆಚರಣೆಗಳಲ್ಲಿ ಎಷ್ಟೊಂದು ಔದಾರ್ಯವಿದೆ ಎಂಬುದನ್ನು ಗಮನಿಸಬೇಕು. ಇಷ್ಟೊಂದು ಉದಾತ್ತ, ವೈವಿಧ್ಯಮಯ ಧಾರ್ಮಿಕಾಚರಣೆಯನ್ನು ಹೊಂದಿದ ಏಕೈಕ ಮತ್ತು ಶ್ರೇಷ್ಠ ಧರ್ಮ ಹಿಂದೂ ಸನಾತನ ಧರ್ಮ.
ಯಾವುದೋ ದೇಶದ ಯಾವುದೋ ನೆಲದ ಅನ್ಯತ್ರ ಪ್ರಜೆಗಳು ಈ ಭವ್ಯ ಭಾರತಕ್ಕೆ ಬಂದು, ಇಲ್ಲಿನ ಸಂಸ್ಕೃತಿಯನ್ನು ತಿಳಿದುಕೊಂಡು, ಅದನ್ನೇ ತಮ್ಮದಾಗಿಸಿಕೊಳ್ಳುವತ್ತ ಮುಂದುವರಿದಿದ್ದಾರೆ ಎಂಬುದನ್ನು ತಿಳಿದು ಬಹಳ ಸಂತಸವಾಗುತ್ತದೆ. ಇಲ್ಲಿನ ಕಥೆ-ಕಥಾನಕಗಳು, ಇಲ್ಲಿನ ರಾಮಾಯಣ-ಮಹಾಭಾರತ ಮಹಾಕಾವ್ಯ-ಗೀತೆ-ಸಾಹಿತ್ಯಗಳನ್ನೆಲ್ಲ ತಿಳಿದುಕೊಂಡು ಇಲ್ಲಿನ ಮಹತ್ವವನ್ನು ಅರ್ಥೈಸಿಕೊಂಡಿದ್ದಾರೆ. ವಿಶೇಷತಃ ಶ್ರದ್ಧಾ-ಭಕ್ತಿ ಏನೆಂಬುದನ್ನು ಅರ್ಥ್ಥಮಾಡಿಕೊಂಡು ಅದನ್ನು ಅಳವಡಿಸಿಕೊಂಡು, ಅನುಸರಿಸಿ, ಅವರು ನಡೆಸಿಕೊಡುವ ಭಜನೆ, ಕೀರ್ತನೆ,ನಾಮಸಂಕೀರ್ತನೆಗಳನ್ನು ನೋಡಲು ಬಹಳ ಖುಷಿಯೆನಿಸುತ್ತದೆ. ನಮ್ಮದೇ ನಾಡಿನಲ್ಲಿ ನಮ್ಮ ಯುವ ಪೀಳಿಗೆಗೆ ಇಲ್ಲದ ಆಸಕ್ತಿ ಅವರಲ್ಲಿರುವುದನ್ನು ಕಂಡು ಮೂಕವಿಸ್ಮಿತನಾಗಿದ್ದೇನೆ. ಶ್ರೀರಾಮ ಶ್ರೀಕೃಷ್ಣರ ಗೇಯ ಗೀತೆಗಳನ್ನೂ, ಸೇವಾ ಭಜನೆಗಳನ್ನೂ ಹಾಡುತ್ತಾ, ನರ್ತಿಸುತ್ತಾ, ಅಲ್ಲಿನ ರಸ್ತೆಯನ್ನೂ ಸ್ವಚ್ಛಗೊಳಿಸಿ, ರಥಯಾತ್ರೆ ನಡೆಸುತ್ತಾರೆ!
ವಿಗ್ರಹ ಎಂಬುದು ಭೌತಿಕ ಸತ್ಯ ವಿಗ್ರಹ ದೇವರು ಎಂಬುದು ಭಾವನಾತ್ಮಕ ಸತ್ಯ. ಇದಕ್ಕೊಂದು ಉದಾಹರಣೆಯನ್ನು ನೀಡುವುದಾದರೆ ಯಾವುದೇ ಸ್ತ್ರೀಯೊಬ್ಬಳು 'ಮಹಿಳೆ' ಎಂಬುದು ಭೌತಿಕ ಸತ್ಯ ಆದರೆ ತಾಯಿ, ಸಹೋದರಿ, ಮಡದಿ, ಅಜ್ಜಿ ಹೀಗೆ ಬೇರೆ ಬೇರೆ ಪಾತ್ರಗಳಿರುವುದು ಭಾವನಾತ್ಮಕ ಸತ್ಯ. ಎಲ್ಲಾ ಮಹಿಳೆಯರನ್ನೂ ನಾವು ಮಡದಿ ಎಂದುಕೊಳ್ಳಲು ಸಾಧ್ಯವೇ? ಅಥವಾ ಎಲ್ಲಾ ಮಹಿಳೆಯರೂ ನಮ್ಮ ಅಮ್ಮನಾಗಲು ಸಾಧ್ಯವೇ? ಗೌರವದಿಂದ ಅನ್ಯ ಮಹಿಳೆಯರಿಗೂ ಅವರವರ ವಯಸ್ಸಿಗನುಗುಣವಾಗಿ ಅಮ್ಮ, ಅಕ್ಕ ಎಂದೆಲ್ಲಾ ಸಂಬೋಧಿಸಬಹುದು-ಅದು ಬೇರೆ ಪ್ರಶ್ನೆ. ಮಹಿಳೆ ಎಂಬುದೊಂದು ಸರ್ವನಾಮ ಹೇಗೋ ಹಾಗೆಯೇ ವಿಗ್ರಹ ಎಂಬುದೊಂದು ಸರ್ವನಾಮ. ವಿಭಿನ್ನ ವಿಗ್ರಹಗಳ ಆಕಾರಗಳು, ಅವಯವಗಳು, ಧರಿಸಿದ ಆಭರಣಗಳು ಶಿಲಾಮಯ, ಲೋಹಮಯ ಆಯುಧಗಳು, ಬಳಸಿದ ವಾಹನಗಳು ಹೀಗೆ ಇವುಗಳನ್ನೆಲ್ಲಾ ಅವಲಂಬಿಸಿ ಶಿವ, ವಿಷ್ಣು, ಅಂಬಿಕೆ ಮೊದಲಾಗಿ ವಿಗ್ರಹಗಳನ್ನು ಗುರುತಿಸುತ್ತೇವೆ.
ವೇದಗಳಲ್ಲಿ ನಿರ್ಗುಣಾರಾಧನೆಯನ್ನು ಪ್ರತಿಪಾದಿಸಿದ್ದರೂ, ಆಗಮಗಳು ಸಗುಣಾರಾಧನೆಯನ್ನು ಅಳವಡಿಸಿಕೊಂಡಿದ್ದು ಜನಸಾಮಾನ್ಯರ ಅನುಕೂಲಕ್ಕಾಗಿ. ಖುಲ್ಲಾ ಇರುವ ಜಾಗದಲ್ಲಿ ಮನಸ್ಸನ್ನು ಏಕಾಗ್ರತೆಗೆ ಒಳಪಡಿಸುವುದು ಕಷ್ಟಸಾಧ್ಯವೆನಿಸಿದ್ದರಿಂದಲೂ ಮತ್ತು ದೇವರಿದ್ದಾನೆ ಎಂಬ ಭಯ-ಭೀತಿಯಿಂದಲಾದರೂ ಸಮಾಜದಲ್ಲಿ ಯಾರೂ ತಪ್ಪೆಸಗದಿರಲಿ, ಪರಸ್ಪರ ಅನ್ಯಾಯವೆಸಗದಿರಲಿ ಎಂಬ ಕಾರಣಕ್ಕಾಗಿ ವಿಗ್ರಹಗಳು ಸ್ಥಾಪನೆಗೊಂಡವು ಎಂಬುದು ತಿಳಿದುಬರುತ್ತದೆ. ಮೇಲಾಗಿ ವಿಗ್ರಹಗಳಿಗೊಂದು ಸೌಧ ನಿರ್ಮಿಸಿ ಅದನ್ನು ದೇವಸ್ಥಾನಗಳೆಂದು ಕರೆದರು. ಹಿಂದಕ್ಕೆ, ಸಾಮಾಜಿಕವಾಗಿ ಜ್ಞಾನಾರ್ಜನೆ, ಸಾಂಸ್ಕೃತಿಕ ಚಟುವಟಿಕೆ, ಮನೋರಂಜನೆಯೇ ಮೊದಲಾದ ಹಲವು ಕಾರ್ಯಗಳು ದೇವಸ್ಥಾನಗಳಲ್ಲೇ ನಡೆಯುತ್ತಿದ್ದುದು ತಿಳಿದುಬರುತ್ತದೆ. ಇಬ್ಬರ ನಡುವೆ ಸಂಭವಿಸಬಹುದಾದ ಜಗಳಗಳು ದೇವಸ್ಥಾನಗಳಲ್ಲಿ ದೇವರ ಸನ್ನಿಧಿಯಲ್ಲಿ ತಪ್ಪು ಒಪ್ಪಿಕೊಂಡು ಬಗೆಹರಿಯುತ್ತಿದ್ದವು ಎಂಬುದನ್ನು ಗಮನಿಸಬೇಕು. ಜನರ ಮನೋಭೂಮಿಕೆಯಲ್ಲಿರುವ ಋಣಾತ್ಮಕ ಭಾವನೆಗಳನ್ನು ತೆಗೆದು ಧನಾತ್ಮಕ ಭಾವನೆಗಳನ್ನು ತುಂಬುವ, ಜೀವನೋತ್ಕರ್ಷಕ್ಕೆ, ಅಭಿವೃದ್ಧಿಗೆ ಪ್ರೇರೇಪಿಸುವ ತಾಣಗಳು ದೇವಸ್ಥಾನಗಳು.
ಸಹಸ್ರಾರು ವರ್ಷಗಳಿಂದ ಈ ರೀತಿಯ ವಿಗ್ರಹಾರಾಧನೆಗಳು ನಡೆಯುತ್ತಾ ಬಂದಿವೆ. ಆಸ್ತಿಕರಲ್ಲಿ ವಿಗ್ರಹಾರಾಧನೆಗೆ ಬಹಳ ಮೌಲ್ಯವಿದೆ. ಇಂತಹ ಸನ್ನಿವೇಶದಲ್ಲಿ, ಮೂರ್ತಿಗಳ ಮೇಲೆ ಮೂತ್ರ ಮಾಡಿದರೂ ಏನೂ ಆಗುವುದಿಲ್ಲ ಎಂದು ಸಂಶೋಧಕರೆನಿಸಿದ ಎಂ.ಎಂ.ಕಲಬುರ್ಗಿಯವರು ಅಪ್ಪಣೆಕೊಡಿಸಿದ್ದಾರೆ! ತನ್ನ ಈ ದುರ್ವರ್ತನೆಗೆ ರಾಜ್ಯಾದ್ಯಂತ ವಿರೋಧ ವ್ಯಕ್ತವಾದಾಗ ಮಾತು ಬದಲಾಯಿಸಿ, ಹಾಗೆ ಅನಂತ ಮೂರ್ತಿ ತಮ್ಮ ಅನುಭವವನ್ನು ದಾಖಲಿಸಿದ್ದಾರೆ ಎಂದು ಹೇಳಿದ್ದೆನಷ್ಟೆ ಎಂದು ನುಣುಚಿಕೊಂಡಿದ್ದಾರೆ! ಹಂಪೆಯ ದೇವಸ್ಥಾನಗಳ ಮೇಲೆ ನಡೆದ ದಾಳಿಗಳಿಗೆ, ವಿಗ್ರಹ ಭಗ್ನಗೊಳ್ಳುವುದಕ್ಕೆ ಕಾರಣ ಶೈವ-ವೈಷ್ಣವರ ನಡುವಿನ ಕಚ್ಚಾಟ ಎಂದೂ ಅದು ಮುಸಲ್ಮಾನರಿಂದ ಆದದ್ದಲ್ಲವೆಂದೂ ಇದೇ ಕಲಬುರ್ಗಿಯವರು ಹೇಳಿದ್ದರು! ಹಿಂದೂಗಳಲ್ಲಿ ಹಲವಾರು ಮತ-ಪಥಗಳಿವೆ ಆದರೆ, ಕಲಬುರ್ಗಿಯವರೇ, ನಿಮಗೆ ತಿಳಿದಿರಲಿ, ಯಾವ ಹಿಂದುವೂ ಯಾವ ವಿಗ್ರಹವನ್ನೂ ಒಡೆದುಹಾಕಲಾರ! ಒಂದೊಮ್ಮೆ ಹಾಗೇನಾದರೂ ಇದ್ದರೆ ಅನಾದಿಯಿಂದಿರುವ ದೇವಸ್ಥಾನಗಳೆಲ್ಲ ಭಗ್ನಗೊಳ್ಳುತ್ತಲೇ ಇರಬೇಕಾಗುತ್ತಿತ್ತು. ಮುಸಲ್ಮಾನರು ಬರುವುದಕ್ಕೂ ಮೊದಲು ಭಾರತದಲ್ಲಿ ವಿಗ್ರಹ ಭಂಜನ ಕಾರ್ಯ ಇರಲೇ ಇಲ್ಲ! ಇಷ್ಟನ್ನೇ ಪರಿಗಣಿಸಲಾರದ ನೀವು ದೊಡ್ಡ ಸಂಶೋಧಕರೆನಿಸಿದ್ದು ಪರಮಾಶ್ಚರ್ಯಕರವಾಗಿದೆ!
ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ ಎಂಬ ಗಾದೆಯಂತೆ, ನಿಮ್ಮ ಮಾತಿಗೆ ಅನಂತಮೂರ್ತಿಯನ್ನು ಆಧಾರವಾಗಿಟ್ಟುಕೊಂಡಿದ್ದೀರಿ. ಅರವತ್ತಕ್ಕೆ ಅರಳೋ ಮರುಳೋ ಎಂದಂತೆ ಘಳಿಗೆಗೊಂದು ಹೇಳಿಕೆ ಕೊಡುತ್ತಾ ಜನಸಾಮಾನ್ಯರಿಂದ ಬೈಗುಳಗಳನ್ನು ಪಡೆಯುತ್ತಿದ್ದ ಅನಂತಮೂರ್ತಿಗೆ ಅಗ್ಗದ ಪ್ರಚಾರದ ಹುಚ್ಚಾದರೂ ಇತ್ತು, ನಿಮಗೂ ಅದೇ ಹುಚ್ಚೇ ಕಲಬುರ್ಗಿಯವರೇ? ಸನಾತನಿಗಳಲ್ಲಿ ಇನ್ನೊಂದು ಸಂದೇಹ ಮನೆಮಾಡಿದೆ: ನಿಮ್ಮಂಥ ನಾಸ್ತಿಕರಿಗೆ ಮತ್ತು ಎಡಪಂಥಿಯರಿಗೆ ಹಿಂದೂ ಆಚರಣೆಗಳನ್ನು ಉಡಾಫೆ ಮಾಡುವು ಘನ ಕಾರ್ಯಕ್ಕೆ ಪ್ರತಿಯಾಗಿ ಅನ್ಯಮತಧರ್ಮಗಳವರೇನಾದರೂ ಭಕ್ಷೀಸು ಅಂತ ಕೊಡುತ್ತಿರಬಹುದೇ? ಅನಂತಮೂರ್ತಿಯಂತೂ ಬಿಡಿ ಸರಕಾರೀ ಹಣದಲ್ಲೇ ಬದುಕಿರುವುದರಿಂದ ಖರ್ಚಿಗೆ ಬೇಕಾದಾಗೆಲ್ಲಾ ಬಿಜೆಪಿ ಮತ್ತು ಮೋದಿಯವರನ್ನು ಉಡಾಫೆ ಮಾಡಿದರೆ, ಇಲ್ಲಿನ ಕಾಂಗೈ ಸರ್ಕಾರ ಅವರ ಮೇಲೆ ಕರುಣೆ ತೋರುತ್ತದೆ ಎಂದು ಜನ ಆಡಿಕೊಳ್ಳುತ್ತಿದ್ದಾರೆ! ಮುಂದೆ ನಿಮ್ಮ ಹಾದಿಯೂ ಅದೇ ಆಗಿರಬಹುದೇ?
-ವಿ.ಆರ್.ಭಟ್, ಹಡಿನಬಾಳ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

