ಬೋಳಾಗಲಿದೆಯೇ ಪಶ್ಚಿಮ ಘಟ್ಟಗಳ ನೆತ್ತಿ?
ಕರ್ನಾಟಕ ಸೇರಿದಂತೆ ದೇಶದ 6 ರಾಜ್ಯಗಳಲ್ಲಿ ಹಬ್ಬಿಕೊಂಡಿರುವ ಪಶ್ಚಿಮಘಟ್ಟ ಪರ್ವತ ಶ್ರೇಣಿಗಳಿಗೆ ಈಗ ಅಪಾಯ ಬಂದೆರಗಿದೆ. ಗಣಿಗಾರಿಕೆ, ಎಸ್ಟೇಟ್ ಮಾಲಿಕರ ಒತ್ತುವರಿ ಹಾಗೂ ವಿಲಾಸಿ ಜೀವನದ ಹೆಸರಿನಲ್ಲಿ ರೆಸಾರ್ಟ್ಗಳಿಗೆ ಎಗ್ಗಿಲ್ಲದೆ ಅನುಮತಿ ನೀಡುತ್ತಿರುವ ಪರಿಣಾಮ 6 ರಾಜ್ಯಗಳ 132 ತಾಲೂಕು ಕೇಂದ್ರಗಳಿಂದ 1 ಲಕ್ಷ 29 ಸಾವಿರದ 37 ಚ. ಕಿ.ಮೀ. ವಿಸ್ತೀರ್ಣ, 1490 ಕಿ.ಮೀ. ಉದ್ದ ಹಾಗೂ 210 ಕಿ.ಮೀ ಅಗಲ ಹೊಂದಿರುವ ಪಶ್ಚಿಮಘಟ್ಟಗಳು ಬೋಳಾಗುವ ಭೀತಿಯನ್ನು ಎದುರಿಸುತ್ತಿವೆ.
ಜಗತ್ತಿನ ಜೀವವೈವಿಧ್ಯತೆಯ ಸೂಕ್ಷ್ಮ ತಾಣಗಳಲ್ಲಿ ಈ ಪಶ್ಚಿಮಘಟ್ಟಗಳು ಕೂಡ ಒಂದು. ನಿತ್ಯ ಹರಿದ್ವರ್ಣದ ಕಾಡುಗಳು ಮತ್ತು ಅಪಾರ ಸಂಖ್ಯೆಯ ಜೀವಪ್ರಭೇದಗಳನ್ನು ಹೊಂದಿರುವ ಈ ತಾಣ ಭಾರತದ ಹವಾಮಾನವನ್ನು ನಿರ್ಧರಿಸುವಲ್ಲೂ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಇಡೀ ದಖನ್ ಪ್ರಸ್ಥಭೂಮಿಗೆ ನೀರುಣಿಸುವ ಮೂಲಕ ಜಲಸುರಕ್ಷೆ ಮತ್ತು ಆಹಾರ ಸುರಕ್ಷೆಯನ್ನು ಪಶ್ಚಿಮಘಟ್ಟ ಪರ್ವತ ಶ್ರೇಣಿಗಳು ಒದಗಿಸಿದೆ.
ಅನೇಕ ಜಲವಿದ್ಯುತ್ ಯೋಜನೆಗಳು ಪಶ್ಚಿಮಘಟ್ಟದಲ್ಲಿ ಇರುವುದರಿಂದ ಅದು ಇಂಧನ ಸುರಕ್ಷತೆಯನ್ನು ಒದಗಿಸುತ್ತಿದೆ. ಎಲ್ಲಕ್ಕೂ ಮಿಗಿಲಾಗಿ ಇತ್ತೀಚೆಗೆ ಬಹು ಚರ್ಚಿತವಾಗುತ್ತಿರುವ ವಾಯುಗುಣ ವೈಪರೀತ್ಯಗಳನ್ನು ತಡೆಗಟ್ಟಲು, ಜಾಗತಿಕ ಬಿಸಿ ಏರುವಿಕೆ ತಡೆಗಟ್ಟಲು ಪಶ್ಚಿಮಘಟ್ಟದ ಸಂರಕ್ಷಣೆ ಅತ್ಯಗತ್ಯವಾಗಿದೆ.
ಜನಪರ ಕಾಳಜಿ ಹೊಂದಿರುವ ಗಾಂಧಿಯನ್ ವಿಜ್ಞಾನಿ ಎಂದೇ ಹೆಸರು ಗಳಿಸಿರುವ ಪ್ರೊ. ಮಾಧವ ಗಾಡ್ಗೀಳ್ ಅವರು 30 ವರ್ಷಗಳಿಗೂ ಹೆಚ್ಚು ಕಾಲ ಪಶ್ಚಿಮಘಟ್ಟಗಳ ಕುರಿತು ವ್ಯಾಪಕ ಅಧ್ಯಯನ ನಡೆಸಿದ್ದರು. 2010 ರಲ್ಲಿ ಕೇಂದ್ರದ ಪರಿಸರ ಮತ್ತು ಅರಣ್ಯ ಸಚಿವರಾಗಿದ್ದ ಜಯರಾಮ್ ರಮೇಶ್ ಅವರು ಮಾಧವ ಗಾಡ್ಗೀಳ್ ನೇತೃತ್ವದಲ್ಲಿ ಪಶ್ಚಿಮಘಟ್ಟ ಪರಿಸರ ಪರಿಣತರ ತಂಡ ರಚಿಸಿ ಪಶ್ಚಿಮಘಟ್ಟಗಳ ಬಗ್ಗೆ ಸಮಗ್ರ ವರದಿ ನೀಡುವಂತೆ ಸೂಚಿಸಿದರು. ಇದರ ಅನ್ವಯ ಗಾಡ್ಗೀಳ್ ನೇತೃತ್ವದ ಪರಿಣತರ ತಂಡ 18 ತಿಂಗಳ ಕಾಲ ಸುದೀರ್ಘ ಅಧ್ಯಯನ ನಡೆಸಿ 2011ರಲ್ಲಿ ಕೇಂದ್ರ ಸರ್ಕಾರಕ್ಕೆ ವರದಿ ಕೊಟ್ಟಿತು.
ಅಷ್ಟರಲ್ಲಾಗಲೇ ಜಯರಾಮ್ ರಮೇಶ್ ಜಾಗಕ್ಕೆ ಜಯಂತಿ ನಟರಾಜನ್ ಬಂದಿದ್ದರು. ಆದರೆ ಜಯಂತಿ ನಟರಾಜನ್ಗೆ ಮಾಧವ ಗಾಡ್ಗೀಳ್ ನೀಡಿದ ವರದಿ ಪಥ್ಯವಾಗಲಿಲ್ಲ. ಹೀಗಾಗಿ ಆ ವರದಿಯನ್ನು ಪ್ರಕಟಿಸುವ ಗೋಜಿಗೆ ಹೋಗಲಿಲ್ಲ. ಕೇಂದ್ರ ಸರ್ಕಾರದ ಕ್ರಮದಿಂದ ಸಿಡಿದೆದ್ದ ಕೇರಳದ ಕೃಷ್ಣನ್ ಪರಿಸರ ತಂಡದ ಕಾರ್ಯಕರ್ತರು ಮಾಧವ ಗಾಡ್ಗೀಳ್ ಅವರ ವರದಿಯನ್ನು ಬಹಿರಂಗ ಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು. ಆದರೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಕೃಷ್ಣನ್ ಪರಿಸರ ತಂಡದ ಕಾರ್ಯಕರ್ತರ ಮನವಿಗೂ ಸೊಪ್ಪು ಹಾಕಲಿಲ್ಲ. ಕೊನೆಗೆ ಕಾರ್ಯಕರ್ತರು ದೆಹಲಿ ಹೈ ಕೋರ್ಟ್ಗೆ ಮೊರೆ ಹೋದರು. ಅವರ ಅಹವಾಲನ್ನು ಕೇಳಿದ ಕೋರ್ಟ್ ಕೂಡಲೇ ಗಾಡ್ಗೀಳ್ ವರದಿಯನ್ನು ಬಹಿರಂಗ ಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಹೇಳಿತು. ಹೈ ಕೋರ್ಟ್ನ ಸೂಚನೆ ಮೇರೆಗೆ ಕಡೆಗೂ ಕೇಂದ್ರ ಸರ್ಕಾರ ಆ ವರದಿಯನ್ನು 'ವೆಬ್ ಪೇಜ್'ನಲ್ಲಿ ಪ್ರಕಟಿಸಿತು.
ವರದಿ ಬಹಿರಂಗವಾಗುತ್ತಿದ್ದಂತೆ ಎಡರಂಗ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಅದರ ವಿರುದ್ಧ ಸಿಟ್ಟಾದವು. ಒಂದು ವೇಳೆ ಸರ್ಕಾರ ಮಾಧವ ಗಾಡ್ಗೀಳ್ ವರದಿಯನ್ನು ಯಥಾವತ್ತು ಅನುಷ್ಠಾನ ಮಾಡಿದರೆ ತಮ್ಮ ಬೇಳೆ ಬೇಯುವುದಿಲ್ಲ ಎಂಬುದು ಆ ಪಕ್ಷಗಳಿಗೆ ಮನವರಿಕೆ ಆಗಿತ್ತು.
ಗಾಡ್ಗೀಳ್ ಅವರು ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯಲ್ಲಿ ಪಶ್ಚಿಮಘಟ್ಟಕ್ಕೆ ಬಂದೊದಗಿದ ಆಪತ್ತಿನ ಬಗ್ಗೆ ವಿವರಿಸಲಾಗಿತ್ತು. ಹೀಗಾಗಿ ಇಡೀ ಪಶ್ಚಿಮ ಘಟ್ಟ ಪರ್ವತ ಶ್ರೇಣಿಗಳನ್ನು ಸಮಗ್ರವಾಗಿ ಸಂರಕ್ಷಿಸಬೇಕೆಂಬ ಉಲ್ಲೇಖ ಇತ್ತು. ವರದಿಯಲ್ಲಿ 3 ರೀತಿಯ ಸೂಕ್ಷ್ಮ ವಲಯವನ್ನು ಗುರುತಿಸಲಾಗಿತ್ತು. ಪಶ್ಚಿಮಘಟ್ಟಗಳು ಪ್ಲಾಸ್ಟಿಕ್ ಮುಕ್ತವಾಗಿರಬೇಕು, ಗಣಿಗಾರಿಕೆಗೆ ಅವಕಾಶ ಇರಬಾರದು, ದೊಡ್ಡ ಅಣೆಕಟ್ಟೆಗೆ ಅನುಮತಿಕೊಡಲೇಬಾರದು, ವಿದ್ಯುದಾಗಾರಕ್ಕೆ ಅವಕಾಶ ಇರಬಾರದು, ಭೂ ಪರಿವರ್ತನೆ ಬೇಡ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿತ್ತು.
ಆದರೆ ಆ ವರದಿ ಪಶ್ಚಿಮಘಟ್ಟ ಪರ್ವತ ಶ್ರೇಣಿಗಳಲ್ಲಿ ಏನಿರಬಾರದು ಎಂದು ತಿಳಿಸಿತ್ತೋ ಅವೆಲ್ಲವೂ ಅಲ್ಲಿದ್ದವು. ಹೀಗಾಗಿ ಲ್ಯಾಂಡ್ ಮಾಫಿಯಾ, ಮೈನಿಂಗ್ ಮಾಫಿಯಾ, ರೆಸಾರ್ಟ್ ಹೆಸರಿನಲ್ಲಿ ಪಶ್ಚಿಮಘಟ್ಟಗಳನ್ನು ಮೋಜಿನ ತಾಣ ಮಾಡಿಕೊಳ್ಳಲು ಹೊರಟಿದ್ದವರು ಈ ವರದಿ ವಿರುದ್ಧ ತಿರುಗಿಬಿದ್ದರು. ಭರ್ತಿ 1750 ಆಕ್ಷೇಪಣಾ ಅರ್ಜಿಗಳು ಮಾಧವ ಗಾಡ್ಗೀಳ್ ವರದಿ ವಿರುದ್ಧ ಬಂದವು. ಇದಕ್ಕಾಗಿ ಕಾಯುತ್ತಿದ್ದ ಕೇಂದ್ರದ ಅಂದಿನ ಪರಿಸರ ಸಚಿವೆ ಜಯಂತಿ ನಟರಾಜ್ ಆ ವರದಿಯನ್ನು ಮೂಲೆಗೆ ಬಿಸಾಕುವ ಸಲುವಾಗಿ ಬಾಹ್ಯಾಕಾಶ ವಿಜ್ಞಾನಿ ಕಸ್ತೂರಿ ರಂಗನ್ ನೇತೃತ್ವದಲ್ಲಿ ಪಶ್ಚಿಮಘಟ್ಟಗಳ ಬಗ್ಗೆ ಮತ್ತೊಂದು ವರದಿ ಸಿದ್ಧಪಡಿಸಲು ಕೋರಿತು.
ಪರಿಸರದ ಬಗ್ಗೆ ಪರಿಣತಿ ಇರದ ಕಸ್ತೂರಿರಂಗನ್ ನೇತೃತ್ವದ ತಂಡ ಸರ್ಕಾರಕ್ಕೆ ಪ್ರಿಯವಾದ ವರದಿ ಕೊಟ್ಟಿತು! ಪಶ್ಚಿಮಘಟ್ಟಗಳ ಶೇ. 37 ರಷ್ಟು ಭಾಗವನ್ನು ನೈಸರ್ಗಿಕ ಭೂದೃಶ್ಯಾವಳಿ ಎಂದು ವಿಂಗಡಿಸಿ ಅವುಗಳ ರಕ್ಷಣೆ ಮಾಡಿ ಎಂದಿತ್ತು ಹೊಸ ವರದಿ. ಇನ್ನುಳಿದ ಶೇ. 63 ರಷ್ಟು ಪಶ್ಚಿಮಘಟ್ಟ ಪರ್ವತ ಶ್ರೇಣಿಯನ್ನು ಅಭಿವೃದ್ಧಿಗೆ ತೆರೆದಿಡಿ ಅಂತಲೂ ಹೇಳಿತು. ಸರ್ಕಾರ ಕೂಡಲೇ ಕಸ್ತೂರಿ ರಂಗನ್ ವರದಿಯನ್ನು ಪ್ರಕಟಿಸಿತು.
ಆಶ್ಚರ್ಯವೆಂದರೆ ಗಾಡ್ಗೀಳ್ ಅವರ ವರದಿಗೆ ಯಾವ ಗುಂಪು ವಿರೋಧ ಮಾಡಿತ್ತೋ ಅದೇ ಈ ಹೊಸ ವರದಿ ವಿರುದ್ಧ ತಿರುಗಿ ಬಿದ್ದಿತು. ಪಶ್ಚಿಮಘಟ್ಟ ಪರ್ವತ ಶ್ರೇಣಿಗಳಲ್ಲಿ ಯಾವುದೇ ನಿಯಂತ್ರಣಗಳು ಇರಬಾರದೆಂದು ಬೊಬ್ಬೆ ಹೊಡೆಯಿತು. ವಿಶೇಷ ಆರ್ಥಿಕ ವಲಯ ಘೋಷಣೆ ಮಾಡಬೇಕು ಎಂಬ ಹಕ್ಕೋತ್ತಾಯ ಇಟ್ಚಿತು. ಜೊತೆಗೆ ಬೇಕಾದಷ್ಟು ಕಾಡು ಒತ್ತುವರಿ ಮಾಡಿದರೂ ಕೇಳಕೂಡದೆಂದು ಬಾಹ್ಯ ಶಕ್ತಿಗಳು ಸರ್ಕಾರದ ಮೇಲೆ ಒತ್ತಡ ಹಾಕಿದವು. ಮುಖ್ಯವಾಗಿ ಕೇರಳದ ವೈನಾಡು, ಇಡುಕ್ಕಿ, ಕಣ್ಣೂರು, ಕೋಚಿಕೋಡ್ ಜಿಲ್ಲೆಗಳಲ್ಲಿ ಎರಡೂ ವರದಿಗಳ ವಿರುದ್ಧ ವ್ಯಾಪಕ ವಿರೋಧ ಬಂತು. ಕೇರಳದಲ್ಲಿ ಕ್ರೈಸ್ತ ಮಿಷನರಿಗಳ 'ಹೈ ರೇಂಜ್ ಹಿಲ್ ಕೌನ್ಸಿಲ್' ಈ ವರದಿ ವಿರುದ್ಧದ ಹೋರಾಟಕ್ಕೆ ಚಾಲನೆ ನೀಡಿತು. ಬೇರೆ ಬೇರೆ ಕಡೆಗಳಿಂದ ವಲಸೆ ಬಂದು ಪಶ್ಚಿಮಘಟ್ಟಗಳಲ್ಲಿ ನೆಲೆ ನಿಂತವರು ಪ್ರತಿಭಟನೆಗೆ ಇಳಿದರು. ಕೇರಳದ ಎಲ್ಡಿಎಫ್ ಕೂಡ ವರದಿ ವಿರೋಧಿ ಹೋರಾಟಕ್ಕೆ ಧುಮುಕಿತು.
ಈ ಮಧ್ಯೆ ಜಯಂತಿ ನಟರಾಜನ್ ಅವರು ಪರಿಸರ ಖಾತೆಗೆ ರಾಜಿನಾಮೆ ನೀಡಿದ್ದರು. ಅವರ ಜಾಗಕ್ಕೆ ಕರ್ನಾಟಕದ ವೀರಪ್ಪ ಮೊಯ್ಲಿ ಬಂದರು. ಕೇರಳದ ಗಲಾಟೆ ಗಮನಿಸಿ ಕಸ್ತೂರಿ ರಂಗನ್ ವರದಿ ದುರ್ಬಲಗೊಳಿಸಿ ವಿಜ್ಞಾಪನೆ ಹೊರಡಿಸಿತು. 2014, ಮಾರ್ಚ್ 13 ರಂದು ಯುಪಿಎ ಸರ್ಕಾರ ಕಸ್ತೂರಿ ರಂಗನ್ ವರದಿಯ ಕರಡನ್ನು ಅಂಗೀಕರಿಸಿ ಘೋಷಣೆ ಮಾಡಿತು. ವೀರಪ್ಪ ಮೊಯ್ಲಿ ಅವರು ಅಂಗೀಕರಿಸಿರುವ ವರದಿಯಲ್ಲಿನ ಅಂಶಗಳಿಂದ ಪಶ್ಚಿಮ ಘಟ್ಟಕ್ಕೆ ಅನಾಹುತವಾಗುವುದು ಶತಸಿದ್ಧ ಎಂದು ಪರಿಸರ ತಜ್ಞರು ಹೇಳುತ್ತಿದ್ದಾರೆ.
ಅತ್ತ ಕೇರಳಕ್ಕೆ ಅನುಕೂಲವಾಗುವ ಹಾಗೆ ವರದಿ ಅಂಗೀಕರಿಸಿದ ಬೆನ್ನಲ್ಲೇ ಕರ್ನಾಟಕ ಸರ್ಕಾರ ಕೂಡ ಹೊಸ ವರಾತ ತೆಗೆದಿದೆ. ಕೇರಳದ ಜನರಿಗೆ ನೀಡಿರುವಂತೆ ನಮಗೂ ರಿಯಾಯಿತಿ ಕೊಡಿ ಎಂದು ಬೇಡಿಕೆ ಇಟ್ಟಿದೆ. ಕರ್ನಾಟಕದಲ್ಲಿ ಹಬ್ಬಿರುವ ಪಶ್ಚಿಮಘಟ್ಟ ಪರ್ವತ ಶ್ರೇಣಿ ವ್ಯಾಪ್ತಿಯಲ್ಲಿ 1500 ಗ್ರಾಮಗಳು ಬರುತ್ತವೆ. ಈ ವ್ಯಾಪ್ತಿಯಿಂದ 500 ಗ್ರಾಮಗಳನ್ನು ಬಿಟ್ಟುಬಿಡಿ ಎಂದಿದೆ. ಅಲ್ಲದೇ ಈ ಗ್ರಾಮಗಳಲ್ಲಿ ಮರಳು, ಕಲ್ಲು ಗಣಿಗಾರಿಕೆ ಮಾಡಲು ಅನುಮತಿ ನೀಡುವಂತೆ ಕೋರಿದೆ.
ಒಂದು ವೇಳೆ ಈ ಪರ್ವತ ಶ್ರೇಣಿಗಳಲ್ಲಿ ಗಣಿಗಾರಿಕೆಗೆ ಅನುಕೂಲ ಕಲ್ಪಿಸಿದರೆ ನದಿ ಮೂಲ ಹಾಳಾಗುತ್ತವೆ. ಆ ಪರ್ವತ ಶ್ರೇಣಿಗಳಲ್ಲಿ ಹುಟ್ಟುವ ಕೃಷ್ಣ, ತುಂಗಾ, ಗೋದಾವರಿ, ಮಲಪ್ರಭ, ಘಟಪ್ರಭ ಸೇರಿದಂತೆ 58 ನದಿಗಳು ಹಾಳಾಗಲಿವೆ. ಇನ್ನು ಕಾಡು ಕಡಿದರೆ ಪಶ್ಚಿಮಘಟ್ಟ ಸಂಪೂರ್ಣ ಹಾಳಾಗಿ ವಿಂಧ್ಯ ಪರ್ವತಗಳಿಂದ ದಕ್ಷಿಣಕ್ಕೆ, ಪಶ್ಚಿಮ ಘಟ್ಟದಿಂದ ಪೂರ್ವ ಭಾಗಕ್ಕೆ ಇರುವ ಮೈದಾನ ಪ್ರದೇಶವಾದ ದಖನ್ ಪ್ರಸ್ಥಭೂಮಿಯ ಜನರ ಬದುಕು ಮೂರಾಬಟ್ಟೆಯಾಗಲಿದೆ.
ಈಗ ಅಧಿಕಾರಕ್ಕೆ ಬಂದಿರುವ ಹೊಸ ಸರ್ಕಾರ ಯುಪಿಎ ಸರ್ಕಾರದ ಅನೇಕ ತೀರ್ಮಾನಗಳನ್ನು ಮರು ಪರಿಶೀಲನೆ ನಡೆಸಲು ನಿರ್ಧರಿಸಿದೆ. ನೂತನ ಸರ್ಕಾರ ಮಾಧವ ಗಾಡ್ಗೀಳ್ ವರದಿ ಅಂಗೀಕರಿಸುವ ಮೂಲಕ ತನ್ನ ಪರಿಸರ ಕಾಳಜಿ ಮೆರೆಯುತ್ತದೆ ಎಂಬ ನಿರೀಕ್ಷೆಯನ್ನು ಪರಿಸರ ತಜ್ಞರು ಇಟ್ಟುಕೊಂಡಿದ್ದಾರೆ. ಗಣಿ ಮಾಫಿಯಾಗಳು, ಭೂ ಮಾಫಿಯಾಗಳು, ಹೂಡಿಕೆದಾರರು, ಭೂ ಒತ್ತುವರಿದಾರರ್ತು ಹೊಸ ಸರ್ಕಾರದ ಮೇಲೆ ಒತ್ತಡ ತರುವ ಸಾಧ್ಯತೆಗಳು ನಿಚ್ಚಳವಾಗಿವೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಂತಹ ಶಕ್ತಿಗಳ ಒತ್ತಾಯಕ್ಕೆ ಮಣಿಯದೆ ತನಗೆ ನಿಜವಾದ ಪರಿಸರ ಕಾಳಜಿ ಇದೆ ಎಂಬುದನ್ನು ಸಾಬೀತುಪಡಿಸಲು ಇದೊಂದು ಸುವರ್ಣ ಅವಕಾಶ.
-ಉಗಮ ಶ್ರೀನಿವಾಸ್, ಕನ್ನಡಪ್ರಭ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

