ಅಂಕಣಗಳು

ಆಕಾಶಕ್ಕೆ ಏಣಿ ನಿಲ್ಲಿಸಲು ಸಾಧ್ಯವಾ ಅಂದ್ರೆ ಏನರ್ಥ?

ಆಕಾಶಕ್ಕೆ ಏಣಿ ನಿಲ್ಲಿಸಲು ಸಾಧ್ಯವಾ ಅಂದ್ರೆ ಏನರ್ಥ?
Published On :

ರಿಚರ್ಡ್ ಬ್ರಾನ್‌ಸನ್ ಬಗ್ಗೆ ಬರೆಯದೇ ಬಹಳ ದಿನಗಳಾಗಿದ್ದವು. ಬರೆಯಬೇಕಿನಿಸಿದ್ದರೂ ಚುನಾವಣೆ, ರಾಜಕಾರಣ, ನರೇಂದ್ರ ಮೋದಿ... ಇತ್ಯಾದಿ ಕಾರಣಗಳಿಂದ ಸಾಧ್ಯವಾಗಿರಲಿಲ್ಲ. ಅನೇಕ ಓದುಗರು ನನ್ನನ್ನು ಈ ಕುರಿತು ಕೇಳಿದ್ದುಂಟು. 'ನೀವ್ಯಾಕೆ ಬ್ರಾನ್‌ಸನ್‌ನನ್ನು ಬಿಟ್ಟು ಬಿಟ್ಟಿರಿ? ಅವನ ಬಗ್ಗೆ ಬರೆಯದೇ ವರ್ಷವಾಗುತ್ತಾ ಬಂತು. ದುಬೈ ರೂಲರ್ ಮಕ್ತೌಮ್ ಹಿಂದೆ ಬಿದ್ದಿದ್ದೀರಿ. ನಮಗೆ ಬ್ರಾನ್‌ಸನ್‌ನ ಹುಚ್ಚು ಹತ್ತಿಸಿ ಸುಮ್ಮನಾದರೆ ಹೇಗೆ?' ಎಂದು ಹಲವರು ಪ್ರಶ್ನಿಸಿದ್ದುಂಟು.
ತಪ್ಪೇನಿಲ್ಲ ಬಿಡಿ. ಬ್ರಾನ್‌ಸನ್ ಬಗ್ಗೆ ಬರೆಯದಿರಬಹುದು. ಆದರೆ ಅವನ ಗೀಳು, ಗುಂಗು ನನ್ನಿಂದ ದೂರವಾಗಿಲ್ಲ. ಅವನು ಜಗತ್ತಿನ ಯಾವುದೇ ಮೂಲೆಯಲ್ಲಿರಲಿ, ಏನೇ ಬರೆಯಲಿ, ಟ್ವೀಟ್ ಮಾಡಲಿ, ಮಾತಾಡಲಿ, ಅದು ಗೊತ್ತಾಗುತ್ತದೆ. ಅವನನ್ನು ನೆರಳಿನಂತೆ ಹಿಂಬಾಲಿಸುವವರಲ್ಲಿ ನಾನೂ ಒಬ್ಬ. ದುಬೈಯ ಎಮಿರೇಟ್ಸ್ ಮಾಲ್‌ನಲ್ಲಿ ಬ್ರಾನ್‌ಸನ್‌ನ 'ವರ್ಜಿನ್‌' ಮಳಿಗೆಯಿದೆ. ಅಲ್ಲಿ ಬೆಂಗಳೂರಿನ ಪ್ರತೀಕ್ ಎಂಬ ಹುಡುಗ (ಸೇಲ್ಸ್ ಬಾಯ್) ಇದ್ದಾನೆ. ಬ್ರಾನ್‌ಸನ್ ಬಗ್ಗೆ ನಾನು ಬರೆದಿದ್ದನ್ನು ಓದಿ, ಅವನ ಬಗ್ಗೆ ಹುಚ್ಚು ಹತ್ತಿಸಿಕೊಂಡು, ಬ್ರಾನ್‌ಸನ್‌ನ ನೆರಳಿನಲ್ಲಿಯೇ ಬದುಕು ಕಂಡುಕೊಳ್ಳಬೇಕೆಂದು, ಅವನ ಅಂಗಡಿಯಲ್ಲಿಯೇ ಕೆಲಸಕ್ಕೆ ಸೇರಿದ್ದಾನೆ. ಬ್ರಾನ್‌ಸನ್ ಬಗ್ಗೆ ನನಗೆ ಪ್ರತಿದಿನ ಇಮೇಲ್ ಮಾಡುವ ಪ್ರತೀಕ್‌ನನ್ನು ಹಿಂದಿನ ತಿಂಗಳು ದುಬೈ 'ವರ್ಜಿನ್‌' ಮಳಿಗೆಯಲ್ಲಿ ಭೇಟಿ ಮಾಡಿದ್ದೆ. ಆತನ ಪಾಲಿಗೆ ದೇವರು ಇದ್ದಾನೋ ಇಲ್ಲವೋ ಗೊತ್ತಿಲ್ಲ. ಆದರೆ ಬ್ರಾನ್‌ಸನ್ ಮಾತ್ರ ಆ ಜಾಗದಲ್ಲಿ ಇದ್ದಾನೆ.
'ನೀನು ಬ್ರಾನ್‌ಸನ್‌ನ ಪರಮಭಕ್ತನಾಗಿ ಅವನ ಅಂಗಡಿಯಲ್ಲಿ ಕೂಲಿ ಮಾಡ್ತಾ ಇದ್ದೀಯಲ್ಲ. ಬ್ರಾನ್‌ಸನ್‌ಗೆ ಮಾಡುವ ಅಪಚಾರವಲ್ಲವಾ?' ಎಂದು ಕೇಳಿದೆ. 'ನನಗೆ ಈ ಅಂಶದ ಅರಿವಿದೆ. ನಾನೂ ಅವರಂತೆ ಆಗಬೇಕು ಎಂಬುದು ಆಸೆ. ಆ ನಿಟ್ಟಿನಲ್ಲಿ ಪ್ರೇರಣೆ ಪಡೆಯುತ್ತಿದ್ದೇನೆ' ಎಂದು ಪ್ರತೀಕ್ ಪ್ರಾಂಜಲ ಮನಸ್ಸಿನಿಂದ ಹೇಳಿದ. ಬ್ರಾನ್‌ಸನ್ ಬಗ್ಗೆ ನನಗೆ ದಿನನಿತ್ಯ ಮಾಹಿತಿ ಧಾರೆಗರೆಯುವ ಈತ ಒಂದು ದಿನ ಇಮೇಲ್ ಮಾಡದಿದ್ದರೆ, ಬ್ರಾನ್‌ಸನ್ ಯಾವುದೋ ದೇಶದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾನೆ ಎಂದರ್ಥ. ಕೆಲದಿನಗಳ ಹಿಂದೆ ಪ್ರತೀಕ್ ನನಗೊಂದು ಚೊಂಬಿನ ಗಾತ್ರದ ಕಾಫಿಕಪ್ ಕಳಿಸಿದ್ದ. ಅದರ ಮೇಲೆ ಬರೆದಿತ್ತು-"Life is like a camera, just focus on what's important, Capture the good times, develop from the negatives and if things don't work out, just take another shot- Richard Branson.' ಬದುಕಿನ ಕುರಿತು ಬರೆದ ಸೊಗಸಾದ, ವಾಸ್ತವಿಕ ಸಾಲುಗಳು. ಅದರ ಜತೆಯಲ್ಲಿತ್ತು ಒಂದು ಲೇಖನ- You don't learn to walk by following rules. You learn by doing, and by falling over.
ಅನೇಕರು ಬ್ರಾನ್‌ಸನ್‌ನನ್ನು ಪಕ್ಕಾ ವ್ಯಾಪಾರಿ ಎಂದು ಮೂಗುಮುರಿಯುವುದುಂಟು. ಆದರೆ ಅವನ ಎಲ್ಲ ವ್ಯಾಪಾರಿ ನಿಯಮಗಳನ್ನು ಬದುಕಿಗೆ ಅಳವಡಿಸಿಕೊಂಡರೆ ಅವು ಜೀವನಪಾಠಗಳು. ಅವನ ದೃಷ್ಟಿಯಲ್ಲಿ ಬದುಕು ಬೇರೆ ಅಲ್ಲ, ಕರ್ಮ ಬೇರೆ ಅಲ್ಲ. ಅವನೇ ಹೇಳುವಂತೆ, 'ನಾನು ವ್ಯಾಪಾರಿ ಸೋಗಿನಲ್ಲಿರುವ ಬುದ್ಧ, ಜೀಸಸ್, ಮೋಸೆಸ್. ಬುದ್ಧನೇನಾದರೂ ವರ್ಜಿನ್ ಕಂಪನಿಯ ಮಾಲೀಕನಾಗಿದ್ದರೆ, ಆತನೂ ನನ್ನಂತೆ ಇರುತ್ತಿದ್ದ. ಕಾರಣ ನಾನು ಬುದ್ಧನಂತೆ ಜೀವನಪ್ರೇಮಿ, ಮಾನವ ಪ್ರೇಮಿ.'
ಬ್ರಾನ್‌ಸನ್ ಇತ್ತೀಚೆಗೆ ಹೇಳಿದ ಒಂದು ಮಾತು ನನ್ನಲ್ಲಿ ಪದೇ ಪದೆ ಅವನ ಬಗ್ಗೆ ಯೋಚಿಸುವಂತೆ ಮಾಡಿದೆ-'ನನಗೆ ಬಿಜಿನೆಸ್ ಅಂದ್ರೆ ಹಣ ಮಾಡುವ ದಂಧೆ ಅಲ್ಲ. ಸ್ಟಾಕ್‌ಹೋಲ್ಡರ್‌ಗಳನ್ನು ಮನಸಂತೃಪ್ತಿಗೊಳಿಸಲು ಆಡುವ ಆಟಗಳೂ ಅಲ್ಲ.Business means true to yourself. ನಮ್ಮ ಬದುಕನ್ನು ಪ್ರೀತಿಸುವುದು, ಬೇರೆಯವರ ಬದುಕನ್ನು ಹಸನುಗೊಳಿಸುವುದು. ನಮ್ಮ ಪರಿಸರ, ಜೀವನವನ್ನು ಇನ್ನಷ್ಟು ಸುಂದರಗೊಳಿಸಿ, ಆನಂದ, ನೆಮ್ಮದಿ ಹೊಂದಿ ಜೀವನ ಸಾರ್ಥ್ಯಕ್ಯದತ್ತ ಹೆಜ್ಜೆ ಹಾಕುವುದು. ಈ ಕಾರಣದಿಂದ ನಾನು ಜೀವಿಗಳನ್ನು, ಜೀವನವನ್ನು ಉತ್ಕಟವಾಗಿ ಪ್ರೀತಿಸಲಾರಂಭಿಸಿದ್ದೇನೆ. ಎಲ್ಲಿ ಜೀವಿಗಳಿವೆಯೋ ಅಲ್ಲೆಲ್ಲ ನನ್ನ ಆಸಕ್ತಿ, ಹವ್ಯಾಸಗಳು ವಿಸ್ತರಿಸಿವೆ. ಒಂದು ಕೀಟ, ಪಕ್ಷಿ, ಪಾತರಗಿತ್ತಿಯ ಜತೆ ನಾನು ವರ್ಷವಿಡೀ ಇರಬಲ್ಲೆ. ಒಂದು ಕಲಾಕೃತಿಯನ್ನು ನೋಡುತ್ತಾ ಮೈಮರೆಯಬಲ್ಲೆ. ಒಂದು ಹುಲ್ಲು, ಒಂದು ಮರ ನನ್ನಲ್ಲಿ ಅದಮ್ಯ ಹುರುಪು, ಆಕಾಂಕ್ಷೆ, ಭರವಸೆಯನ್ನು ಮೂಡಿಸುತ್ತದೆ. ಸಾಗರದ ಅಗಾಧತೆ ನನ್ನಲ್ಲಿ ಅನಂತ ಸಾಧ್ಯತೆಗಳ ಮಹಾಸಂಗಮವಾಗಿ ತೋರುತ್ತದೆ. ಒಂದು ಕಪ್ಪೆಯ ಮೌನದಲ್ಲಿ, ನಿಟ್ಟುಸಿರಿನಲ್ಲಿ ಅರ್ಥ ಹುಡುಕಲು ಪ್ರಯತ್ನಿಸುತ್ತೇನೆ. ಅದು ನನ್ನ ಬಗ್ಗೆ ಏನೆಂದು ಯೋಚಿಸುತ್ತಿರಬಹುದು ಎಂದು ನೆನೆದು ನಗು ಬರುತ್ತದೆ. ಬದುಕು ಸುಂದರ, ಬೇರೆಯವರ ಬದುಕನ್ನೂ ಸುಂದರಗೊಳಿಸುವುದು ಇನ್ನೂ ಸುಂದರ. ನನ್ನ ಜೀವನ, ಸಂದೇಶ, ಆಲೋಚನೆ, ಪ್ರಯತ್ನಗಳೆಲ್ಲವೂ ಈ 'ಸುಂದರ'ಕ್ಕಾಗಿಯೇ ಮೀಸಲು.' ಬ್ರಾನ್‌ಸನ್‌ನನ್ನು ನಾನು ಬೇರೆ ತಕ್ಕಡಿಯಲ್ಲಿಟ್ಟು ತೂಗಿದ್ದೇ ಈ ಸಾಲುಗಳನ್ನು ಪದೇ ಪದೆ ಓದಿದ ನಂತರ. ಬುದ್ಧನೆಂದೂ ವ್ಯಾಪಾರಿಯಾಗಲಿಲ್ಲ. ಹಾಗೆ ಯೋಚಿಸಲೂ ಇಲ್ಲ. ಆದರೆ ಈ ಬ್ರಾನ್‌ಸನ್ ಎಂಬ ರಸಿಕ, ಜೀವನಪ್ರೇಮಿ, ವ್ಯಾಪಾರಿ, ಈ ಎಲ್ಲ ಗುಣಗಳನ್ನು ಇಟ್ಟುಕೊಂಡು ಬುದ್ಧನ ಮಾರ್ಗದಲ್ಲಿ ನಡೆಯುವ ದಾರಿ ಹುಡುಕುತ್ತಿದ್ದಾನಲ್ಲ' ಎಂದು ಸೋಜಿಗವಾಯಿತು.
ಪ್ರತೀಕ್ ನನಗೆ ಒಂದು ಪೇಪರ್‌ವೇಯಿಟ್ ಕೊಟ್ಟ. ಅದರ ಮೇಲೆ ಬರೆದಿತ್ತು.'The best way of learning about anything is by doing' ಬ್ರಾನ್‌ಸನ್‌ನ ಪ್ರಿಯವಾದ ವಾಕ್ಯವದು. ಅವನ ದೃಷ್ಟಿಯಲ್ಲಿ ಏನಾದರೂ ಹೊಸದಾಗಿ ಕಲಿಯುವುದೆಂದರೆ ಖುದ್ದಾಗಿ ನಾವೇ ಮಾಡುವುದು. ಅದಕ್ಕಾಗಿಯೇ ಆಸಾಮಿ ಹಾಟ್‌ಬಲೂನ್‌ನಲ್ಲಿ ಕುಳಿತು ವಿಶ್ವಪ್ರದಕ್ಷಿಣೆ ಹಾಕುತ್ತಾನೆ, ಶಾರ್ಕ್‌ಗಳ ಜತೆ ಈಜುತ್ತಾನೆ, ವಿಮಾನದಿಂದ ಕೆಳಗೆ ಜಿಗಿಯುತ್ತಾನೆ, ಮಂಗಳಗ್ರಹಕ್ಕೆ ಹೋಗಲು ವಿಮಾನ ಸಿದ್ಧಪಡಿಸುತ್ತಾನೆ. ಮನುಷ್ಯರಿರದ ದ್ವೀಪಕ್ಕೆ ಹೋಗಿ ತಿಂಗಳುಗಟ್ಟಲೆ ಉಳಿಯುತ್ತಾನೆ, ಮರುಭೂಮಿಯಲ್ಲಿ ಡೇರೆ ಹಾಕಿಕೊಂಡು ಕುಳಿತುಬಿಡುತ್ತಾನೆ, ಆಫ್ರಿಕಾದ ಕಾಡುಗಳಲ್ಲಿ ಹೆಬ್ಬಾವುಗಳನ್ನು ಕೊರಳಿಗೆ ಸುತ್ತಿಕೊಂಡು ಅಲೆಯುತ್ತಾನೆ. ಹಣ ಮಾಡುವ ಆಸೆಯಿಟ್ಟುಕೊಂಡ ಯಾವ ಬಿಜಿನೆಸ್‌ಮನ್ ಸಹ ಮೃತ್ಯುವಿನ ದವಡೆಯಲ್ಲಿ ನಿಂತು ಜೀವನದ ಅದ್ಭುತಗಳನ್ನು ಸವಿಯಲು ಬಯಸುವುದಿಲ್ಲ. ಗಳಿಸಿದ ಹಣವನ್ನೆಲ್ಲ ಮೂರು ಜನ್ಮಗಳವರೆಗೆ ಕಾಪಾಡಿಕೊಳ್ಳುವುದು ಹೇಗೆ, ಅದನ್ನು ತಾನೊಂದೇ ಅನುಭವಿಸುವುದು ಹೇಗೆ ಎಂದೇ ಯೋಚಿಸಿರುತ್ತಿರುತ್ತಾನೆ. ಅದಕ್ಕಾಗಿ ತಮ್ಮ ಜೀವಕ್ಕೆ ಅಪಾಯವುಂಟಾಗುವ ಯಾವ ರಿಸ್ಕ್‌ಗೂ ಅವರು ಮುಂದಾಗುವುದಿಲ್ಲ.
ಆದರೆ ಬ್ರಾನ್‌ಸನ್ ಹಾಗಲ್ಲ. ಆತನಿಗೆ ಜೀವನ ಹಾಗೂ ಸಾಹಸ ಬೇರೆ ಬೇರೆ ಅಲ್ಲ. ಆತ ಗಲ್ಲಾಪೆಟ್ಟಿಗೆಯಲ್ಲಿ ಕುಳಿತು ಹಣ ಎಣಿಸುವ ಬಿಜಿನೆಸ್‌ಮನ್ ಅಲ್ಲ. ಸಾಹಸವಿಲ್ಲದ ಬದುಕು ನೀರಸ. ಗಳಿಸಿದ ಹಣ ನಮಗೆ ಜೀವನದ ಅನೂಹ್ಯ ಅನುಭವಗಳ ದರ್ಶನ ಮಾಡಿಸದಿದ್ದರೆ ಆ ಹಣವನ್ನು ಗಳಿಸಿ ಪ್ರಯೋಜನವೇನು? ಹೀಗಾಗಿ ಬ್ರಾನ್‌ಸನ್ ಹೊಸ ಹೊಸ ಐಡಿಯಾಗಳಿಗೆ ಕಾವು ಕೊಡುತ್ತಾನೆ, ಮರಿ ಮಾಡಿ ಹಾರಿ ಬಿಡುತ್ತಾನೆ. ಸತ್ವವಿರುವಂಥವು ಬದುಕಿಕೊಳ್ಳುತ್ತವೆ, ಉಳಿದವು ಸತ್ತು ಹೋಗುತ್ತವೆ. ಈ ಕಾರಣದಿಂದ ಬ್ರಾನ್‌ಸನ್‌ಗೆ ಮುನ್ನೂರಕ್ಕೂ ಹೆಚ್ಚು ಬೇರೆ ಬೇರೆ ಉದ್ಯಮಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗಿದೆ. ಪ್ರತಿ ಉದ್ಯಮದಲ್ಲೂ ಯಶಸ್ಸನ್ನು ಗಳಿಸುವ ಕಲೆ ಕರಗತವಾಗಿದೆ.
ಬ್ರಾನ್‌ಸನ್ ಕೆಲದಿನಗಳ ಹಿಂದೆ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳನ್ನುದ್ದೇಶಿಸಿ ಹೇಳಿದ್ದ-'ಕೆಲವು ಸಲ ನಮ್ಮ ಪ್ಲಾನ್ ಪ್ರಕಾರ ಬಿಜಿನೆಸ್ ಸಾಗದಿದ್ದರೆ, ತೊಂದರೆ ಎದುರಾದರೆ, ಮಾರುಕಟ್ಟೆ ಸರಿಯಾಗಿ ಸ್ಪಂದಿಸದಿದ್ದರೆ, ಹಾನಿಯಾಗುವುದು ನಿಶ್ಚಿತ ಎಂಬುದು ಮನವರಿಕೆಯಾದರೆ, ನಾನು ಕಂಗಾಲಾಗುವುದಿಲ್ಲ. ಈ ಸಂಕಷ್ಟದಿಂದ ಪಾರಾಗಿ ಸನ್ನಿವೇಶವನ್ನು ನನ್ನ ಪರವಾಗಿ ತಿರುಗಿಸಿಕೊಳ್ಳುವ ಒಂದು ದಾರಿ ಇದ್ದೇ ಇರುತ್ತದೆ ಎಂಬುದರಲ್ಲಿ ನನಗೆ ಅಪಾರ ನಂಬಿಕೆ. ಆ ದಾರಿ ಯಾವುದು ಎಂದು ನಾನು ಶೋಧಿಸುತ್ತೇನೆ. ಈ ಶೋಧ ಕಾರ್ಯದಲ್ಲಿ Panic  ಆಗುವುದಿಲ್ಲ. ಈ ದಾರಿಯಲ್ಲಿ ನಡೆಯುವಾಗ ಅನೇಕ ಅವಕಾಶಗಳು ತೆರೆದುಕೊಳ್ಳುತ್ತವೆ. ಕೊನೆಗೆ ಅದೆಂಥ ಸ್ಥಿತಿ ಬರುತ್ತದೆಂದರೆ, ಇಂಥದೊಂದು ಸಂಕಷ್ಟದಲ್ಲಿ ಸಿಲುಕದಿದ್ದರೆ ಇಂಥ ಅನುಭವವೇ ಆಗುತ್ತಿರಲಿಲ್ಲ, ಆಗಿದ್ದೆಲ್ಲ ಒಳ್ಳೆಯದೇ ಆಯಿತು ಎಂದು ಅನಿಸುತ್ತದೆ.
ನಾನು ಜೀವನದಲ್ಲಿ ಓದಿದವನಲ್ಲ. ಕಾಲೇಜಿನಲ್ಲಿ ಓದಿ ಡಿಗ್ರಿಯನ್ನೂ ಪಡೆದವನಲ್ಲ. ಆದರೆ ನನಗೆ ಅದೊಂದು ಕೊರತೆ ಎಂದು ಈಗಲೂ ಅನಿಸುತ್ತಿಲ್ಲ. ಕಾಮನ್‌ಸೆನ್ಸ್‌ಗಿಂತ ಮಿಗಿಲಾದುದು ಯಾವುದೂ ಇಲ್ಲ. ಅದನ್ನು ಕಾಲೇಜಿನಲ್ಲಾಗಲಿ, ವಿಶ್ವವಿದ್ಯಾನಿಲಯದಲ್ಲಾಗಲಿ ಹೇಳಿಕೊಡುವುದಿಲ್ಲ. ಅದಕ್ಕೆ ಲೋಕಜ್ಞಾನಬೇಕು. ಯಾವ ಬಿಜಿನೆಸ್‌ನ್ನು ಎಲ್ಲಿ, ಯಾವಾಗ ಮಾಡಬೇಕು. ಹೇಗೆ ಮಾಡಬೇಕೆಂಬುದರ ಬಗ್ಗೆ ಸಾಮಾನ್ಯ ಜ್ಞಾನ, ತಿಳಿವಳಿಕೆಯಿದ್ದರೆ ಸಾಕು. ಎಲ್ಲದಕ್ಕೂ ಅನುಭವವೇ ಬೇಕು ಎಂದಿಲ್ಲ. ನಮಗೆ ಗೊತ್ತಿಲ್ಲದ ಬಿಜಿನೆಸ್ ಮಾಡಬಾರದು ಎಂದು ಎಲ್ಲರೂ ಅಂತಾರೆ. ಆದರೆ ಈ ವಿಷಯದಲ್ಲಿ ಯಾರೇ ಬಂದು ಹೇಳಿದರೂ ನಾನು ಕೇಳುವುದಿಲ್ಲ. ನನಗೆ ಗೊತ್ತಿರದ ಬಿಜಿನೆಸ್‌ನ್ನೇ ನಾನು ಮಾಡಿರೋದು. ಮುಂದೆ ಮಾಡೋದು ಅದನ್ನೇ. ನಾನು ವರ್ಜಿನ್ ಏರ್‌ಲೈನ್ಸ್ ಆರಂಭಿಸುವಾಗ ಎಲ್ಲರೂ ಇದನ್ನೇ ಹೇಳಿದರು. ನಿನಗೇನು ಗೊತ್ತು ಬದನೆಕಾಯಿ ಎಂದು ಅನೇಕರು ಬುದ್ಧಿಮಾತು ಹೇಳಿದರು. ನನಗೆ ಏರ್‌ಲೈನ್ಸ್ ಗಂಧಗಾಳಿಯೂ ಗೊತ್ತಿರಲಿಲ್ಲ. ನನ್ನ ಅಪ್ಪನಾಗಲಿ, ದೊಡ್ಡಪ್ಪನಾಗಲಿ ಏರ್‌ಲೈನ್ಸ್ ಬಿಜಿನೆಸ್ ಮಾಡಿದವರಲ್ಲ. ಅದು ನನಗೆ ಸಂಪೂರ್ಣ ಹೊರ ಕ್ಷೇತ್ರವಾಗಿತ್ತು. ನಾನು ಕಲಿಯುವುದು ಬಹಳಷ್ಟಿತ್ತು. ಆಗಲೇ ನನಗೆ ಗೊತ್ತಾಗಿದ್ದು, ಏರ್‌ಲೈನ್ಸ್ ಉದ್ಯಮದಲ್ಲಿ ಏನೆಲ್ಲ ಮಾಡಬಹುದೆಂದು. ಯಾಕೆಂದರೆ ಅಲ್ಲಿಯತನಕ ಅಸ್ತಿತ್ವದಲ್ಲಿದ್ದ ಕಂಪನಿಗಳು ಸಾಂಪ್ರದಾಯಕ ವ್ಯವಸ್ಥೆಯಲ್ಲಿ ನಂಬಿಕೆಯಿಟ್ಟು ಏಕತಾನವಾದ ಬಿಜಿನೆಸ್ ಮಾಡುತ್ತಿದ್ದವು. ಏರ್‌ಲೈನ್ಸ್ ಉದ್ಯಮ ಅಕ್ಷರಶಃ ಆಕಾಶದೆತ್ತರಕ್ಕೆ ಬೆಳೆಯುವಷ್ಟು ಸಾಮರ್ಥ್ಯ ಹೊಂದಿದೆ ಎಂದು ಗೊತ್ತಾಗಿದ್ದೇ ಆಗ. ಕೆಲವೊಮ್ಮೆ ನಾವು ಬಿಜಿನೆಸ್ ಆರಂಭಿಸಿದ ರಂಗದಲ್ಲಿ ನಮಗೆ ಅನುಭವ ಇರದಿರುವುದೂ ಒಳ್ಳೆಯದೇ. ನಾನು ವರ್ಜಿನ್ ಏರ್‌ಲೈನ್ಸ್‌ನಲ್ಲಿ ಕೈಗೊಂಡ ಕೆಲಕ್ರಮಗಳು ಕ್ರಾಂತಿಕಾರಕ ಎಂದು ಉದ್ಯಮದ ಪರಿಣತರು ಬಣ್ಣಿಸಿದರು. ಇಲ್ಲಿ ನಾನು ನನ್ನ ಆಲೋಚನೆ ಹಾಗೂ ಕಾಮನ್‌ಸೆನ್ಸ್‌ನ್ನು ಮಾತ್ರ ಬಳಸಿಕೊಂಡೆ. ಇದೇ ಅನುಭವವನ್ನು ಆಧರಿಸಿ ವರ್ಜಿನ್ ರೈಲ್ವೆಗೂ ಕೈ ಹಾಕಿದೆ. ವರ್ಜಿನ್ ರೈಲ್ವೆ ಆರಂಭಿಸಬೇಕು ಎಂದು ನಿರ್ಧರಿಸಿದಾಗ ನನಗೆ ಆ ಉದ್ಯಮದ ಪ್ರಾಥಮಿಕ ತಿಳಿವಳಿಕೆಯೂ ಇರಲಿಲ್ಲ. ಎರಡು ತಿಂಗಳು ನಾನೇ ಹೋಮ್‌ವರ್ಕ್ ಮಾಡಿದೆ. ಉದ್ಯಮದ ಒಳಹೊರಗನ್ನು ಅಧ್ಯಯನ ಮಾಡಿದೆ. ತಜ್ಞರೊಂದಿಗೆ ಕುಳಿತು ಚರ್ಚಿಸಿದೆ. ಅದಾದ ನಂತರ ಎಲ್ಲರಿಗಿಂತ ಭಿನ್ನವಾಗಿ ನನ್ನ ರೈಲು ಹೇಗಿರಬೇಕು ಎಂದು ಯೋಚಿಸಿ ಆ ಪ್ರಕಾರ ಹೊಸ ಬಿಜಿನೆಸ್ ಮಾಡೆಲ್‌ನ್ನು ಸಿದ್ಧಪಡಿಸಿದೆ. ಪ್ರಾಯಶಃ ನನ್ನ ಅಪ್ಪ ರೈಲು ಬಿಜಿನೆಸ್‌ನಲ್ಲಿದ್ದಿದ್ದರೆ, ಅದು ನಮ್ಮ ಫ್ಯಾಮಿಲಿ ಉದ್ಯೋಗವಾಗಿದ್ದಿದ್ದರೆ, ನನಗೆ ಅಲ್ಲಿ ಅಷ್ಟೊಂದು ಸಾಧ್ಯತೆಗಳಿರುವುದು ಗೊತ್ತಾಗುತ್ತಿರಲಿಲ್ಲವೇನೋ? ಸವೆಸಿದ ಹಾದಿಯಲ್ಲಿ ನಡೆಯುವುದಕ್ಕೂ, ನಾವೇ ಹೊಸ ಹಾದಿಯನ್ನು ನಿರ್ಮಿಸಿ ಅದನ್ನು ಸವೆಸುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ನನಗೆ ಎರಡನೆಯದಲ್ಲಿ ಹೆಚ್ಚು ವಿಶ್ವಾಸ. ಹೀಗಾಗಿ ನಾನು ಗುಂಡುಸೂಜಿ ತಯಾರಿಸುವ ಉದ್ಯಮದಲ್ಲಾಗಲಿ, ರಾಕೆಟ್ ಹಾರಿಸುವ ಉದ್ಯಮದಲ್ಲಾಗಲಿ ಫಿಟ್ ಆಗಬಲ್ಲೆ. ಹೋಟೆಲ್ ಉದ್ಯಮವಾದರೂ ಆದೀತು.
 ಅದೆಂಥ ದೈತ್ಯ ಪ್ರತಿಸ್ಪರ್ಧಿ ಜತೆಯೇ ಆಗಲಿ, ಪೈಪೋಟಿಗೆ ಇಳಿಯಬಲ್ಲೆ ಎಂಬ ಆತ್ಮವಿಶ್ವಾಸವಿದೆ. ಕಲಿಕೆಯಲ್ಲಿ ಆಸಕ್ತಿ ಬೆಳೆಸಿಕೊಂಡರೆ ಯಾವುದೂ ಕಷ್ಟವಲ್ಲ. ಏನನ್ನಾದರೂ ಸಾಧಿಸಬಹುದು. ನಷ್ಟದಲ್ಲಿರುವ ಯಾವುದೇ ಉದ್ಯಮವನ್ನಾದರೂ ನನಗೆ ವಹಿಸಿ, ನಿರ್ದಿಷ್ಟ ಕಾಲಾವಧಿ ಕೊಡಿ. ಅದನ್ನು ಲಾಭದೆಡೆಗೆ ಮುಖ ಮಾಡಿ ತೋರಿಸದಿದ್ದರೆ ಆಗ ಕೇಳಿ. ಹಾಗೆಂದು ನನ್ನಲ್ಲಿ ಯಾವುದೇ ಮಂತ್ರದಂಡಗಳಿಲ್ಲ. ನನಗೆ ಮ್ಯಾಜಿಕ್ ವಿದ್ಯೆ ಗೊತ್ತಿಲ್ಲ. ಆದರೆ ಒಂದು ಉದ್ಯಮವನ್ನು ಕಲಿಯುವ, ತಿಳಿಯುವ ವ್ಯವದಾನ, ತಾಳ್ಮೆ, ಶ್ರದ್ಧೆ ಇದೆ. ಯಾವುದೇ ಬಿಜಿನೆಸ್‌ಗೆ ಬೇಕಾಗಿರುವುದೂ ಇದೇ. ಒಂದು ಹೊಸ ಉದ್ಯಮ ಕ್ಲಿಕ್ ಆಗದಿದ್ದರೆ, ನೀವು ಸೋತಿರಿ ಎಂದರ್ಥ ಅಲ್ಲ. ನೀವು ದಡ್ಡರು ಎಂದೂ ಅರ್ಥ ಅಲ್ಲ. ನಿಮ್ಮಲ್ಲೊಂದು ಕೊರತೆಯಿದೆ ಎಂದರ್ಥ. ಅದನ್ನು ಸರಿಪಡಿಸಿಕೊಂಡರಾಯಿತು. ದಢೂತಿ ದೇಹದವರು ಹಿಮಾಲಯ ಏರಲಾರರು. ಇದು ಸಾರ್ವತ್ರಿಕ ನಂಬಿಕೆ ತಾನೆ. ಹಿಮಾಲಯ ಎಂದೂ ಕುಬ್ಜವಾಗಲಾರದು. ಆದರೆ ಧಡೂತಿ ದೇಹದವರು ಸಪೂರವಾಗುವುದು ಸಾಧ್ಯವಿದೆ. ನನ್ನ ಮಾತು ಕೇಳಿ 160, 180 ಕೆಜಿ ತೂಕದವರು 80, 90 ಕೆಜಿಗೆ ಇಳಿದಿದ್ದಾರೆ. ಕೆಲವರಿಗೆ ಸ್ಫೂರ್ತಿದಾಯಕ ಮಾತುಗಳು ವಯಾಗ್ರದಂತೆ ಕೆಲಸ ಮಾಡುತ್ತವೆ. ನಾವು ಎಂಥ ಕಾಲದಲ್ಲಿ ಬದುಕಿದ್ದೇವೆ ಅಂದ್ರೆ ಯಾವುದೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ತಂತ್ರಜ್ಞಾನದ ಬಲದಿಂದ ಏನನ್ನಾದರೂ ಸಾಧಿಸಬಹುದು. ಸಾಧ್ಯವಾಗದಿರುವುದನ್ನು ಸಾಧ್ಯ ಮಾಡಿ ತೋರಿಸಬಹುದು. ಆಕಾಶಕ್ಕೆ ಏಣಿ ಹಾಕಬಹುದಾ ಎಂದು ಕೇಳಿದರೆ ನಾನು ಆ ಪ್ರಶ್ನೆ ಕೇಳಿದವನನ್ನು ಅಪಹಾಸ್ಯ ಮಾಡುವುದಿಲ್ಲ. ಆ ಯೋಚನೆ ನಿನಗೆ ಹೇಗೆ ಬಂತು ಎಂದು ಕೇಳುತ್ತೇನೆ. ನಿನಗೇನಿಸುತ್ತದೆ? ಹಾಕಲು ಸಾಧ್ಯವಾ? ಇಲ್ಲವಾ? ಎಂದು ಕೇಳುತ್ತೇನೆ. ಅವನ ಮನೋಭಾವ ಏನೋ ಅದೇ ಉತ್ತರವಾಗಿರುತ್ತದೆ. ಆದರೆ ನನ್ನನ್ನು ಕೇಳಿದರೆ ಏಣಿಯೇನು ಸೇತುವೆಯನ್ನೇ ಕಟ್ಟಬಹುದು ಎಂದು ಹೇಳುತ್ತೇನೆ. ಇಲ್ಲಿ ತನಕ ಯಾರೂ ಏಣಿಯನ್ನು ಹಾಕಿಲ್ಲ ಅಂದ್ರೆ ಆಕಾಶದಲ್ಲಿ ಯಾರೂ ಏನನ್ನೂ ಹುದುಗಿಸಿಲ್ಲ. ಒಂದು ವೇಳೆ ಅಲ್ಲಿ ಇಟ್ಟಿದ್ದೇ ಆದರೆ ಇಷ್ಟರೊಳಗೆ ಯಾರಾದರೂ ಏಣಿ ನಿಲ್ಲಿಸಿರುತ್ತಿದ್ದರು. ಈ ಜಗತ್ತಿನಲ್ಲಿ ಬ್ರಾನ್‌ಸನ್‌ನಂಥ ತಿಕ್ಕಲುಗಳಿಗೆ ಕೊರತೆಯಿಲ್ಲ. ಆದರೆ ಅವರಿಗೆ ತಾವು ಬ್ರಾನ್‌ಸನ್ ಎಂಬುದು ಖಾತ್ರಿಯಾಗಿರಬೇಕು ಅಷ್ಟೆ. ಅದಕ್ಕೆ ಹೇಳಿದ್ದು ನಾನು ವ್ಯಾಪಾರಿಯಂತಿರುವ ಬುದ್ಧ. ನನ್ನ ಧ್ಯಾನ ಹೊಸ ಶೋಧದಲ್ಲಿ ಕೇಂದ್ರಿಕೃತವಾಗಿರುತ್ತದೆ. ನಾನು ಹುಚ್ಚನಿಗಿಂತ ದೊಡ್ಡ ಹುಚ್ಚ. ಇದೇ ಬೈರಾಗಿ ಸ್ಥಿತಿ. ಇಲ್ಲಿ ಹಣ ಗೌಣ. ಸಂತೃಪ್ತಿಯೇ ಕೊನೆಗೆ ದಕ್ಕುವ ದ್ರವ್ಯ.'
ಇಂಥ ಬ್ರಾನ್‌ಸನ್‌ನನ್ನು ನಿರಾಕರಿಸುವುದಾದರೂ ಹೇಗೆ? ಅವನನ್ನು ಅವನ ಪಾಡಿಗೆ ಬಿಡುವುದಾದರೂ ಹೇಗೆ? ಅವನ ಗೀಳನ್ನು ಅಂಟಿಸಿಕೊಳ್ಳದಿದ್ದರೆ ಹೇಗೆ?

-ವಿಶ್ವೇಶ್ವರ ಭಟ್
vbhat@me.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.