ರಾಜಕೀಯದಾಗ ಕಲ್ಲು ಹೊಡೆದಲ್ಲೇ ಹಣ್ಣು ಬೀಳಂಗಿಲ್ಲ!

ಈ ವಿಧಾನಸಭೆಯಲ್ಲಿರುವ ಎಲ್ಲರ ಪೈಕಿ ನಾನೇ ಹಿರಿಯ. ಸಂಪುಟ ರಚನೆ ಸಂದರ್ಭದಾಗ ನನಗೆ ಗೌರವಯುತ ಸ್ಥಾನ ಲಭಿಸುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ಕೊನೆಯಲ್ಲಿ ಆದದ್ದು ನಿರಾಸೆ. ಇದಕ್ಕೆ ಕಾರಣ ಏನು ಅಂತಾ ನೀವು ಕೇಳ್ಬಹುದು. ಆದ್ರೆ ನಾ ಹೇಳಂಗಿಲ್ಲ. ಯಾಕ್ ಗೊತ್ತೇನ್ರೀ ? ತಿಪ್ಪೆ ಕೆದಕಿದರೆ ಸಿಗೋದು ಸಗಣಿಯೇ ಹೊರತು ಮುತ್ತು-ರತ್ನವಲ್ಲ! ಕಾಂಗ್ರೆಸ್ನ ಅತಿ ಹಿರಿಯ ಶಾಸಕ ಹಾಗೂ ಸಚಿವ ಸ್ಥಾನಕ್ಕಾಗಿ ನೇರವಾಗಿ ಭಿನ್ನಧ್ವನಿ ಮೊಳಗಿಸಿರುವ ಕೆ.ಬಿ.ಕೋಳಿವಾಡ ಅವರ ಅಭಿಪ್ರಾಯ ಇದು.
* ದೆಹಲಿಗೆ ಹೋಗಿ ಬಂದ್ರಂತೆ ?
ಹೌದು. ಹೋಗಿದ್ದೆ. ಮೇಡಂ ಭೇಟಿಯಾಗಿ ಎಲ್ಲ ಹೇಳೇ ಬಂದೀನಿ. ಅದ್ರಲ್ಲೇನೈತಿ ಮುಚ್ಚುಮರಿ?
* ಮೇಡಂ ಏನಂದ್ರು ?
ಮೇಡಂ ಏನ್ ಅಂದ್ರು? ಅಂತ ಪ್ರಶ್ನೆ ಮಾಡೋಕ್ಕಿನ್ನ ಮೊದ್ಲು, ನಾ ಮೇಡಂ ಹತ್ರ ಏನ್ ಹೇಳ್ದೆ ಅಂತಾ ಕೇಳ್ರಿ.
* ಅದೇ ಅದೇ ನೀವು ಮೇಡಂ ಹತ್ರಾ ಏನ್ ಹೇಳಿದ್ರಿ. ಸಚಿವ ಸ್ಥಾನದ ಬೇಡಿಕೆ ಇಟ್ಟಿರಬೇಕು ?
ಹೌದು. ಮೊನ್ನೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಮುಗಿದ ತಕ್ಷಣ ನಾನು ದೆಹಲಿಗೆ ಹೋಗಿದ್ದೆ. ಸಚಿವ ಸಂಪುಟದಲ್ಲಿ ನಮ್ಮ ಜಿಲ್ಲೆಗೆ ಪ್ರಾತಿನಿಧ್ಯ ಇಲ್ಲ. ನನಗೆ ಅವಕಾಶ ಮಾಡಿಕೊಡಿ ಎಂದು ಕೇಳಿದ್ದೇನೆ. ಅಷ್ಟು ಮಾತ್ರವಲ್ಲ ರಾಜ್ಯದ ರಾಜಕೀಯ ಸ್ಥಿತಿಯ ಬಗೆಗೂ ವಿವರಣೆ ನೀಡಿದ್ದೇನೆ. ರಾಜ್ಯದ 18 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಿಗುತ್ತದೆ ಎಂಬ ನಿರೀಕ್ಷೆ ಹೈಕಮಾಂಡ್ಗೆ ಇತ್ತು. ಆದರೆ 9ರಲ್ಲಿ ಗೆದ್ದಿದ್ದೇವೆ. ದೇಶಾದ್ಯಂತ ಕಾಂಗ್ರೆಸ್ ವಿರುದ್ಧ ಜನ ಹಕ್ಕು ಚಲಾಯಿಸಿದ್ದಾರೆ. ಸೋಲು-ಗೆಲುವು ಕಾಂಗ್ರೆಸ್ಗೆ ಹೊಸತಲ್ಲ. ಹೀಗಾಗಿ ಗ್ರಾಸ್ ರೂಟ್ ಹಂತದಿಂದ ಪಕ್ಷ ಸಂಘಟನೆ ಮಾಡಬೇಕಿದೆ ಎಂದು ನನ್ನ ಅಭಿಪ್ರಾಯ ತಿಳಿಸಿದ್ದೇನೆ.
* ಇಲ್ಲಿ ನಿಮ್ಮ ಧ್ವನಿಗೆ ಬೆಲೆ ಸಿಕ್ಕಿಲ್ಲ ಎಂದು ದೆಹಲಿಗೆ ಹೋಗಿದ್ರಾ ?
ಬೆಲೆ ಸಿಕ್ಕಿಲ್ಲ ಅಂತಾ ಹೇಗೆ ಹೇಳ್ತೀರಿ? ನೋಡ್ರಿ ಸಂಪುಟ ವಿಸ್ತರಣೆ ಎಂದರೆ ಬಹಳ ಕ್ಲಿಷ್ಟ ಕೆಲಸ. ಅದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಚಾರ. ರಾಜಕೀಯದಲ್ಲಿ ಇದೆಲ್ಲ ಬಾಳ ತ್ರಾಸದ ಕೆಲಸ. ಪ್ರತಿಬಾರಿ ಸಂಪುಟ ವಿಸ್ತರಣೆ ಮಾಡಿದಾಗ್ಲೂ ಬೇರೆ ಬೇರೆ ಪರಿಣಾಮ ಆಗ್ತಾವ. ರಾಜಕಾರಣದಲ್ಲಿ ಕಲ್ಲು ಹೊಡೆದ ಸ್ಥಳದಿಂದಲೇ ಹಣ್ಣು ಬೀಳಂಗಿಲ್ಲ. ಕೆಲವೊಮ್ಮೆ ಎಲ್ಲೋ ಕಲ್ಲು ಒಗಿತೀವಿ, ಇನ್ನೆಲ್ಲೋ ಹಣ್ಣು ಬೀಳ್ತದ. ನನಗಂತೂ ಈ ಸಲ ವಿಶ್ವಾಸ ಇದೆ. ಅಧಿವೇಶನದ ಬಳಿಕ ನಡೆಯುವ ಸಂಪುಟ ವಿಸ್ತರಣೆಯಲ್ಲಿ ನನಗೆ ಅವಕಾಶ ಸಿಗುತ್ತದೆ. ಮುಖ್ಯಮಂತ್ರಿಗಳಿಂದಲೂ ಆಶಾದಾಯಕ ಉತ್ತರ ಸಿಕ್ಕಿದೆ.
* ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗಿದೆ ಎಂದು ಮೇಡಂ ಬಳಿ ದೂರಿದ್ದೀರಂತೆ ?
ಹೌದು. ಅದನ್ನೂ ಹೇಳಿ ಬಂದೀನಿ. ರಾಜ್ಯ ಸಂಪುಟವನ್ನು ಒಮ್ಮೆ ನೋಡಿ ನಿಮಗೆ ಗೊತ್ತಾಗ್ತದ. ಕಾಂಗ್ರೆಸ್ನ 122 ಸದಸ್ಯರ ಪೈಕಿ 60ಕ್ಕಿಂತ ಹೆಚ್ಚು ಶಾಸಕರು ಉತ್ತರ ಕರ್ನಾಟಕದವರು. ಆದರೆ ಸಂಪುಟದಲ್ಲಿ ಅವರ ಪಾಲೆಷ್ಟು? ಕೇವಲ 11. ಆದರೆ ದಕ್ಷಿಣ ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದಿದ್ದು 51 ಕಡೆ. ಅವರ ಪಾಲೆಷ್ಟು? ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ, ಉಪಸಭಾಧ್ಯಕ್ಷ ಶಿವಶಂಕರ ರೆಡ್ಡಿ ಸೇರಿ ಸಂಪುಟದಲ್ಲಿ 19 ಮಂದಿಗೆ ಪ್ರಾತಿನಿಧ್ಯ ಇದೆ. ಇದು ಅನ್ಯಾಯ ಅಲ್ವೇನು? ಸಂಪುಟದಲ್ಲಿ ಪ್ರಾದೇಶಿಕ ಅಸಮತೋಲನ ಇದೆ ಎಂದು ಮೇಡಂ ಬಳಿ ಹೇಳಿದ್ದೇನೆ. ನಾನು ದೂರು ನೀಡಿಲ್ಲ. ಸತ್ಯ ಹೇಳಿ ಬಂದೀನಿ. ಈ ಸಂದರ್ಭದಲ್ಲಿ ನನ್ನನ್ನೂ ಸಚಿವರನ್ನಾಗಿ ಮಾಡಿ ಎಂದು ಕೇಳಿದ್ದೇನೆ. 1972ರಿಂದ ನಾನು ಕಾಂಗ್ರೆಸ್ನಲ್ಲಿ ಇದ್ದೇನೆ. ಸದನದ ಅತಿ ಹಿರಿಯ ಶಾಸಕ ನಾನು. ಸಚಿವನಾಗುವುದಕ್ಕೆ ನಾನು ಎಲಿಜಿಬಲ್ ಆಂಡ್ ಕ್ವಾಲಿಫೈಡ್ ಇದ್ದೀನಿ.
* ಎಲ್ಲ ಹೇಳ್ತಾರೆ. ನೀವು ಸಂಪುಟ ರಚನೆಯಾಗುವಾಗಲೇ ಮಂತ್ರಿಯಾಗಿ ಪ್ರಮಾಣ ವಚನ ಪಡೆಯಬೇಕಿತ್ತು ಅಂತಾ?
ಹೌದು. ನನಗೂ ಅದೇ ಆಶಯವಿತ್ತು. ಮಂತ್ರಿ ಮಾಡ್ತಾರೆ ಅಂತ ಭರವಸೆ ಇತ್ತು. ಆದರೆ ಕೊನೆಯಲ್ಲಿ ಆದದ್ದು ನಿರಾಸೆ. ಹೀಗಾಗಿ ಪುನಃ ಪುನಃ ನನ್ನನ್ನು ಸಚಿವರನ್ನಾಗಿ ಮಾಡಿ ಎಂದು ಕೇಳುತ್ತಿದ್ದೇನೆ. ನನ್ನನ್ನು ಏಕೆ ಸಂಪುಟಕ್ಕೆ ಸೇರಿಸಿಕೊಳ್ಳಲಿಲ್ಲ ಎಂದು ನೀವು ಕೇಳಬಹುದು. ಆದ್ರೆ ನಾ ಹೇಳಂಗಿಲ್ಲ. ಯಾಕೆ ಗೊತ್ತೇನ್ರಿ? ತಿಪ್ಪೆ ಕೆದಕಿದರೆ ಸಿಗೋದು ಸಗಣಿಯೇ ಹೊರತು ಮುತ್ತು-ರತ್ನವಲ್ಲ. ಅದರ ಬಗ್ಗೆ ಮಾತನಾಡಿ ಏನು ಪ್ರಯೋಜನವಿಲ್ಲ.
* ಉತ್ತರ ಕರ್ನಾಟಕದ ವೀರಶೈವರಿಗೂ ಅನ್ಯಾಯವಾಗಿದೆ ಎಂಬ ಕೂಗಿದೆ.
ನೋಡಿ ನಾನು ಅಹಿಂದ, ಒಬಿಸಿ, ಲಿಂಗಾಯಿತ, ಎಸ್ಸಿ, ಎಸ್ಟಿ ಅಂತ ಮಾತನಾಡುವವನಲ್ಲ. ಉತ್ತರ ಕರ್ನಾಟಕಕ್ಕೆ ಪ್ರಾತಿನಿಧ್ಯ ಸೂಕ್ತ ರೀತಿಯಲ್ಲಿ ಲಭಿಸಿಲ್ಲ ಎಂದು ಬಹಿರಂಗವಾಗಿ ಮಾತನಾಡುತ್ತಿದ್ದೇನೆ. ನನಗೆ, ಅಪ್ಪಾಜಿ ನಾಡಗೌಡರಿಗೆ, ವೀರಣ್ಣ ಮತ್ತೀಕಟ್ಟಿಯವರಿಗೆ, ಡಾ.ಮಾಲಕ ರೆಡ್ಡಿಯವರಿಗೆ, ಮಾಲೀಕಯ್ಯ ಗುತ್ತೇದಾರರಿಗೆ ಹಿರಿತನ ಮತ್ತು ಅರ್ಹತೆ ಇತ್ತು. ಅವರೆಲ್ಲರೂ ನಮ್ಮ ಭಾಗದವರು. ನಾನು ಉತ್ತರ ಕರ್ನಾಟಕದ ಪ್ರಾತಿನಿಧ್ಯದ ಬಗ್ಗೆ ಕೇಳುತ್ತಿದ್ದೇನೆಯೇ ಹೊರತು ಜಾತಿವಾರು ವಿಚಾರದ ಬಗ್ಗೆ ಚರ್ಚೆ ನಡೆಸುತ್ತಿಲ್ಲ.
* ನಿಮಗೆ ಸಂಪುಟದಲ್ಲಿ ಸ್ಥಾನ ಸಿಗದೇ ಇರುವುದಕ್ಕೆ ಎಚ್.ಕೆ.ಪಾಟೀಲರು ಕಾರಣ ಎಂಬ ಮಾತಿದೆ ನಿಜವಾ ?
ನಾನು ಬೇರೊಬ್ಬರ ಮೇಲೆ ಯಾವತ್ತು ಆರೋಪ ಮಾಡಿಲ್ಲ. ಇನ್ಫ್ಯಾಕ್ಟ್ ಅವ್ರು ನನಗೆ ಸಪೋರ್ಟ್ ಮಾಡ್ತಾ ಇದ್ದಾರೆ. ಈ ಮಾತಿನಲ್ಲಿ ಸತ್ಯ ಇಲ್ಲ. ನನಗೆ ಅವರ ಬೆಂಬಲ ಇದೆ.
* ಈ ಬಾರಿಯೂ ಅವಕಾಶ ನಿರಾಕರಿಸಿದರೆ ?
ನೋಡಿ ನಾನು ಅಪ್ಪಟ ಕಾಂಗ್ರೆಸಿಗ. 45 ವರ್ಷದಿಂದ ನಾನು ಈ ಪಕ್ಷಕ್ಕಾಗಿ ದುಡಿದಿದ್ದೇನೆ. ಖರ್ಗೆ, ಮೊಯ್ಲಿ, ಧರಂಸಿಂಗ್ ಎಲ್ಲ ನನ್ನ ಸಮಕಾಲೀನರು. ಎಜುಕೇಷನ್, ಎಕ್ಸ್ಪೀರಿಯನ್ಸ್, ಎಲಿಜಿಬಿಲಿಟಿ ಮೂರೂ ಐತಿ ನನಗೆ ಮಂತ್ರಿ ಮಾಡಿ ಎಂದಿದ್ದೇನೆ. ಮಾಡಿಲ್ಲ ಅಂದರೆ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಇರುತ್ತೇನೆ.
* ಖರ್ಗೆ, ಧರಂಸಿಂಗ್ ಹಾಗೂ ಮೊಯ್ಲಿ ನಿಮ್ಮ ಸಮಕಾಲೀನರು ಎನ್ನುತ್ತೀರಿ. ಅವರೆಲ್ಲ ಹಾಗೆ, ನೀವು ಮಾತ್ರ....?
ಹೌದು. ಅವ್ರು ಹಂಗೆ. ಅವರ ದೈವ ಚೊಲೋ ಇತ್ತು, ಅವರು ಹಂಗ್ ಆದ್ರೂ, ನನ್ನ ದೈವ ಚೊಲೋ ಇಲ್ಲ, ಹಿಂಗಿದ್ದೀನಿ. ಅವ್ರು ಹಂಗಾದ್ರು ಅಂತ ನಾನ್ಯಾಕ್ ಮರುಗಲಿ? ಅಸಂತೋಷ ಪಡಲಿ? ಯಾರಿಗೇ ಆದ್ರೂ ಅವಕಾಶ ಲಭ್ಯವಾದಾಗ ಮಾತ್ರ ಸಾಮರ್ಥ್ಯ ತೋರುವುದಕ್ಕೆ ಸಾಧ್ಯ. ಅವಕಾಶ ಸಿಕ್ಕರೆ ನನ್ನ ಸಾಮರ್ಥ್ಯ ಏನು ಅಂತ ಗೊತ್ತಾಗ್ತದೆ.
* ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಉತ್ತರ ಕರ್ನಾಟಕದವರಿಗೆ ಕೊಡಬೇಕು ಎಂಬ ಚರ್ಚೆ ನಡೆಯುತ್ತಿದೆ. ನಿಮಗೆ ಕೊಟ್ಟರೆ...?
ನಮ್ಮ ರಾಷ್ಟ್ರೀಯ ನಾಯಕರು ನೀಡುವ ಯಾವುದೇ ಜವಾಬ್ದಾರಿಗೆ ನಾನು 'ನೋ' ಅನ್ನೋ ಮನುಷ್ಯಾ ಅಲ್ಲ. ಕೊಟ್ಟ ಹೊಣೆಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ.
* ಸ್ವಂತ ಕ್ಷೇತ್ರದಲ್ಲಿ ಪಕ್ಷಕ್ಕೆ ಮುನ್ನಡೆ ತಂದುಕೊಡದ ಸಚಿವರು ರಾಜೀನಾಮೆ ನೀಡಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ. ನೀವು ಅದನ್ನು ಒಪ್ಪುತ್ತೀರಾ ?
ಪತ್ರಿಕಾ ಸಂದರ್ಶನದಲ್ಲಿ ಅವರು ಆ ಹೇಳಿಕೆ ನೀಡಿದ್ದಾರೆ. ಅದಕ್ಕೆ ರಾಮಲಿಂಗಾ ರೆಡ್ಡಿಯವರು ಉತ್ತರ ನೀಡಿದ್ದಾರೆ. ಅವರು ಯಾವ ಸಂದರ್ಭದಲ್ಲಿ ಹೇಳಿದರು, ಇವರು ಯಾವ ಸಂದರ್ಭದಲ್ಲಿ ಉತ್ತರ ನೀಡಿದರು ಎಂಬುದು ನನಗೆ ಗೊತ್ತಿಲ್ಲ. ಹೀಗಾಗಿ ನಾನು ಇಬ್ಬರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ.
* ಅದೇ ಸಿಎಂ ಸಿದ್ದರಾಮಯ್ಯ ಅಹಿಂದಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ ಎಂದು ನಿಮ್ಮವರೇ ಆದ ಎಂ.ವಿ.ರಾಜಶೇಖರನ್ ಆರೋಪಿಸಿದ್ದಾರೆ.
ಈ ಬಗ್ಗೇನೂ ನಾನು ಮಾತನಾಡುವುದಿಲ್ಲ.
* ಆದರೂ ಅವರು ನಿಮ್ಮ ಪಕ್ಷದ ಹಿರಿಯರು.
ರಾಜಶೇಖರನ್ ಅವರು ನನಗಿಂತಲೂ ಹಿರಿಯರು. ಅವರು ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸದಸ್ಯರು. ಸೋನಿಯಾ ಗಾಂಧಿಯವರ ಬಳಿ ಈ ವಿಚಾರವನ್ನು ಅವರು ನೇರವಾಗಿ ಮಾತನಾಡಬಹುದಿತ್ತು. ಅಥವಾ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹೇಳಬಹುದಿತ್ತು. ಇಂಥ ವಿಚಾರಗಳ ಚರ್ಚೆಗಾಗಿ ಪಕ್ಷದಲ್ಲಿ ಸಾಕಷ್ಟು ವೇದಿಕೆ ಇದೆ. ಅದನ್ನು ಮಾಧ್ಯಮದ ಮುಂದೆ ಪ್ರಸ್ತಾಪಿಸಬಾರದಿತ್ತು. ಇಂಥ ಸೂಕ್ಷ್ಮಗಳ ಬಗ್ಗೆ ಮಾಧ್ಯಮದಲ್ಲಿ ಚರ್ಚೆ ನಡೆಸಿದರೆ ಸಮಸ್ಯೆ ಇನ್ನಷ್ಟು ಬಿಗಡಾಯಿಸುತ್ತದೆ. 'ಕೆರೆದು ಗಾಯ ಮಾಡ್ಕೊಂಡ್ರು ' ಅಂತಾರಲ್ಲ. ಹಾಗೆ ಆಗಬಾರದು. ರಾಜಶೇಖರನ್ ಅವರು ಕೇಂದ್ರದಲ್ಲಿ ಮಂತ್ರಿಯಾಗಿದ್ದವರು. ಎಲ್ಲವನ್ನು ನೋಡಿದ್ದಾರೆ. ಅವರಿಗಿಂತ ಹೆಚ್ಚು ನೋವು ನಾನು ಅನುಭವಿಸಿದ್ದೇನೆ. ಆದರೆ ಬಹಿರಂಗವಾಗಿ ಹೇಳಿಕೊಳ್ಳಬಾರದು. ಬೇಕಿದ್ದರೆ ಮೇಡಂ ಬಳಿ ಹೇಳಲಿ.
- ರಾಘವೇಂದ್ರ ಭಟ್, ಕನ್ನಡಪ್ರಭ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


