ಅಂಕಣಗಳು

ನೋಟಾ, ನಿಜಕ್ಕೂ ಅಭ್ಯರ್ಥಿಗಳ ತಿರಸ್ಕರಿಸಿದ ಮತದಾರನ ವೋಟಾ?

Published On :

ನೋಟಾ ಮತಗಳ ಮೂಲಕ ಅಭ್ಯರ್ಥಿಗಳನ್ನು ತಿರಸ್ಕರಿಸಿದ ಮತದಾರರು ಗಣನೀಯ ಸಂಖ್ಯೆಯಲ್ಲಿದ್ದಾರೆ, ಮೀಸಲು ಕ್ಷೇತ್ರಗಳಲ್ಲಿ ಎಲ್ಲಾ ಅಭ್ಯರ್ಥಿಗಳನ್ನು ತಿರಸ್ಕರಿಸಲು ಹೆಚ್ಚು ನೋಟಾ ಮತಗಳು ಚಲಾಯಿಸಲ್ಪಟ್ಟಿವೆ ಮುಂತಾದ ವರದಿಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಆದರೆ ಇಂಥ ವರದಿಗಳಿಗೆ ಆಧಾರವಾಗಿರುವ ಅಂಕಿ ಅಂಶಗಳ ಹಿಂದೆ ಹೋದರೆ ನೋಟಾ ಮತಗಳು ಇಷ್ಟು ಪ್ರಮಾಣದಲ್ಲಿ ಚಲಾವಣೆಯಾಗಲು ಮತಯಂತ್ರವೇ ಕಾರಣ ಹೊರತು ಅಯೋಗ್ಯ ಅಭ್ಯರ್ಥಿಗಳಲ್ಲ ಎಂಬುದು ಗೊತ್ತಾಗುತ್ತದೆ. ಮತಯಂತ್ರವೇ ಯಾಕೆ ಕಾರಣವೆಂದರೆ, ಅದರಲ್ಲಿ ಕೊನೆಯಲ್ಲಿರುವ ಅಭ್ಯರ್ಥಿಗೆ ಗಣನೀಯ ಪ್ರಮಾಣದಲ್ಲಿ ಹೆಚ್ಚು ಮತಗಳು ದೊರೆಯುವುದು ಸಾಮಾನ್ಯವಾಗಿ ಕಂಡುಬರುವ ಸಂಗತಿ. ನೋಟಾ ಅವಕಾಶ ಇರದೇ ಇದ್ದಂಥ 2009 ರ ಲೋಕಸಭಾ ಚುನಾವಣೆಯ ವಿವರವಾದ ಫಲಿತಾಂಶವನ್ನು ಪರಿಶೀಲಿಸಿದರೆ ಇದು ಸ್ಪಷ್ಟವಾಗುತ್ತದೆ. ಇದು ಭಾರತದಾದ್ಯಂತ ಇರುವ ಕ್ಷೇತ್ರಗಳಲ್ಲೂ ಸಾಮಾನ್ಯವಾಗಿ ಕಂಡುಬರುವ ವಾಸ್ತವ.
ಮೇಲಿನ ಅಂಶಗಳನ್ನು ಸ್ಪಷ್ಟಪಡಿಸಲು 2009ರ ನೋಟಾರಹಿತ ಚುನಾವಣಾ ಫಲಿತಾಂಶದ ವಿವರಗಳನ್ನು 2014 ರ ನೋಟಾಸಹಿತ ಚುನಾವಣಾ ಫಲಿತಾಂಶದ ವಿವರಗಳ ಜೊತೆ ಹೋಲಿಸಿ ನೋಡೋಣ. ಉದಾಹರಣೆಯಾಗಿ, ಮೊದಲು 2009ರ ಲೋಕಸಭಾ ಚುನಾವಣೆಯ ಫಲಿತಾಂಶ ಪಟ್ಟಿಯಲ್ಲಿ ಕರ್ನಾಟಕದ ಕ್ಷೇತ್ರಗಳ ಪೈಕಿ ಮೊದಲ ಆರು ಕ್ಷೇತ್ರಗಳನ್ನು ಪರಿಗಣಿಸೋಣ. ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಗುಲ್ಬರ್ಗಾ ಹಾಗೂ ರಾಯಚೂರು ಇವೇ ಆ ಆರು ಕ್ಷೇತ್ರಗಳು. ಸದ್ಯದ ಮಟ್ಟಿಗೆ ಅಂಕಿ ಅಂಶಗಳನ್ನು ತೆಗೆದುಕೊಳ್ಳುವಾಗ, ಹೆಚ್ಚಿನ ಮತಗಳನ್ನು ಪಡೆಯಬಹುದಾದ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಪಕ್ಷಗಳ ಅಭ್ಯರ್ಥಿಗಳನ್ನು ಬಿಟ್ಟು ಸ್ವತಂತ್ರ ಅಭ್ಯರ್ಥಿಗಳನ್ನು ಮಾತ್ರ ಪರಿಗಣಿಸೋಣ. (ಒಂದೆರಡು ಕ್ಷೇತ್ರಗಳಲ್ಲಿ ಅಧಿಕೃತವಲ್ಲದ, ಮಾನ್ಯತೆಯಿಲ್ಲದ ಪಕ್ಷಗಳ ಹೆಸರಿನಲ್ಲಿ ಅಭ್ಯರ್ಥಿಗಳಿರಬಹುದು). ಇಂಥ ಸ್ವತಂತ್ರ ಅಭ್ಯರ್ಥಿಗಳ ಹೆಸರುಗಳು ಮತಯಂತ್ರದಲ್ಲಿ ರಾಷ್ಟ್ರೀಯ ಹಾಗೂ ರಾಜ್ಯಮಟ್ಟದ ಪಕ್ಷಗಳ ಅಭ್ಯರ್ಥಿಗಳ ಹೆಸರಿನ ನಂತರವೇ ಬರುತ್ತವೆಯೆಂಬುದನ್ನು ನಾವಿಲ್ಲಿ ಗಮನದಲ್ಲಿಟ್ಟುಕೊಳ್ಳಬೇಕು.
ಮೇಲಿನ ಆರೂ ಕ್ಷೇತ್ರಗಳಲ್ಲಿ ಸೇರಿ ಒಟ್ಟು ಇದ್ದ ಸ್ವತಂತ್ರ ಅಭ್ಯರ್ಥಿಗಳ ಸಂಖ್ಯೆ 31. ಪ್ರತೀ ಕ್ಷೇತ್ರದಲ್ಲಿ ಮತಯಂತ್ರದಲ್ಲಿ ಕೊನೆಯಲ್ಲಿದ್ದ ಸ್ವತಂತ್ರ ಅಭ್ಯರ್ಥಿಯನ್ನು ಬಿಟ್ಟರೆ, ಅಂದರೆ ಒಟ್ಟು ಆರು ಅಭ್ಯರ್ಥಿಗಳನ್ನು ಹೊರತುಪಡಿಸಿದರೆ, ಉಳಿದ 25 ಅಭ್ಯರ್ಥಿಗಳು ಪಡೆದ ಮತಗಳ ಒಟ್ಟು ಮೊತ್ತ 105192. ಅಂದರೆ, ಕೊನೆಯವರಲ್ಲದ ಸ್ವತಂತ್ರ ಅಭ್ಯರ್ಥಿಗಳು ಪಡೆದ ಸರಾಸರಿ ಮತಗಳು ಸುಮಾರು 4208. ಮತಯಂತ್ರದ ಕೊನೆಯಲ್ಲಿ ಹೆಸರಿದ್ದ ಆರು ಅಭ್ಯರ್ಥಿಗಳು ಪಡೆದ ಮತಗಳ ಒಟ್ಟು ಮೊತ್ತ 76784. ಅಂದರೆ ಪ್ರತಿ ಅಭ್ಯರ್ಥಿಯ ಸರಾಸರಿ 12797. ಯಾರೋ ಒಬ್ಬ ಪ್ರಭಾವಶಾಲಿ ಅಭ್ಯರ್ಥಿಯಿಂದಾಗಿ ಈ ಸರಾಸರಿ ಇಷ್ಟು ವೃದ್ಧಿಯಾದುದಲ್ಲ. ಬಿಡಿಬಿಡಿಯಾಗಿ ನೋಡಿದರೂ ಈ ಆರು ಅಭ್ಯರ್ಥಿಗಳು ಪಡೆದ ಮತಗಳ ಸಂಖ್ಯೆ ಈ ಸರಾಸರಿಗೆ ಹತ್ತಿರವೇ ಇದೆ. ಚಿಕ್ಕೋಡಿ ಕ್ಷೇತ್ರದ ಕೊನೆಯ ಅಭ್ಯರ್ಥಿಗೆ 12920 ಮತಗಳು,  ಅದೇ ರೀತಿ, ಬೆಳಗಾವಿ-10811, ಬಾಗಲಕೋಟೆ-11288, ಬಿಜಾಪುರ-13031, ಗುಲ್ಬರ್ಗಾ-13818, ರಾಯಚೂರು-14866, (ಬಾಗಲಕೋಟೆಯಲ್ಲಿ ಹದಿನಾರನೇ ಹೆಸರುಳ್ಳ ಅಭ್ಯರ್ಥಿಗೆ 11258 ಹಾಗೂ ಹದಿನೇಳನೇ ಹೆಸರುಳ್ಳ ಅಭ್ಯರ್ಥಿಗೆ 13415 ಮತಗಳು ಬಂದಿವೆ. ಇಲ್ಲಿ ಹದಿನಾರನೆಯದು ಮೊದಲ ಮತಯಂತ್ರದ ಕೊನೆಯ ಹೆಸರಾದರೆ ಹದಿನೇಳನೆಯದು ಎರಡನೆಯ ಮತಯಂತ್ರದ ಮೊದಲ ಹೆಸರು ಎಂಬುದು ಗಮನಾರ್ಹ). ಮತಯಂತ್ರದಲ್ಲಿ ಕೊನೆಯದಾಗಿ ಇರುವ ಅಭ್ಯರ್ಥಿಗೆ ಗಣನೀಯವಾಗಿ ಹೆಚ್ಚು ಮತಗಳು ಸಿಗುತ್ತವೆ ಎಂಬುದು ಇದರಿಂದ ನಿಸ್ಸಂದೇಹವಾಗಿ ಸಾಧಿತವಾಗುತ್ತದೆ. ಮೊದಲೇ ಹೇಳಿದಂತೆ ಇದು ಕೇವಲ ಆರು ಕ್ಷೇತ್ರಗಳ ಮಟ್ಟಿಗೆ ಮಾತ್ರ ಸತ್ಯವಲ್ಲ. ಕರ್ನಾಟಕ ಅಥವಾ ಭಾರತದ ಬಹುತೇಕ ಎಲ್ಲಾ ಕ್ಷೇತ್ರಗಳನ್ನು ಪರಿಗಣಿಸಿದರೂ ಕೊನೆಯಲ್ಲಿ ನಮೂದಾಗಿರುವ ಅಭ್ಯರ್ಥಿ ಪಡೆಯುವ ಮತಗಳ ಸಂಖ್ಯೆ ಇತರ ಸ್ವತಂತ್ರ ಅಭ್ಯರ್ಥಿಗಳಿಗಿಂತ ಗಣನೀಯವಾಗಿ ಹೆಚ್ಚಿರುವುದು ಕಾಣುತ್ತದೆ.
ಹೀಗಿರುವಾಗ 2014 ರ ಚುನಾವಣೆಯಲ್ಲಿ ನೋಟಾ ಪರವಾಗಿ ಚಲಾಯಿತವಾದ ಮತಗಳೆಲ್ಲ ಉದ್ದೇಶಿತ ನೋಟಾ ಮತಗಳಾಗಿರಲು ಸಾಧ್ಯವಿಲ್ಲ. ಕೆಲವು ಮಾತ್ರ ಉದ್ದೇಶಿತವಾಗಿರಬಹುದು. ಇದನ್ನು ಪರಿಶೀಲಿಸಲು ಅವೇ ಆರು ಕ್ಷೇತ್ರಗಳಿಗೆ ಸಂಬಂಧಿಸಿದಂತೆ 2014 ರ ಮತ ವಿವರಗಳನ್ನು ಪರಿಶೀಲಿಸೋಣ. 2014 ರಲ್ಲಿ ಈ ಆರು ಕ್ಷೇತ್ರಗಳಲ್ಲಿ ಒಟ್ಟಾಗಿ ಇದ್ದ ಸ್ವತಂತ್ರ ಅಭ್ಯರ್ಥಿಗಳ ಸಂಖ್ಯೆ 40. ಇವರೆಲ್ಲ ಒಟ್ಟಾಗಿ ಪಡೆದ ಮತಗಳ ಸಂಖ್ಯೆ 95793. ಪ್ರತಿಯೊಬ್ಬ ಸ್ವತಂತ್ರ ಅಭ್ಯರ್ಥಿ ಪಡೆದ ಸರಾಸರಿ ಮತಗಳು 2394. ಆರೂ ಕ್ಷೇತ್ರಗಳ ಒಟ್ಟು ನೋಟಾ ಮತಗಳು 63904. ಪ್ರತೀ ಕ್ಷೇತ್ರದ ಸರಾಸರಿ ನೋಟಾ ಮತಗಳು 10650. ನೋಟಾ ಗುಂಡಿ ಇತರೆಲ್ಲ ಅಭ್ಯರ್ಥಿಗಳ ಬಳಿಕ ಕೊನೆಯದಾಗಿ ಇರುತ್ತದೆ ಎಂಬುದನ್ನು ಗಮನಿಸಬೇಕು. ನೋಟಾ ಗುಂಡಿಗಿಂತ ಮೊದಲಿನ ಸ್ವತಂತ್ರ ಅಭ್ಯರ್ಥಿಗಳಿಗೆ ಗಣನೀಯವಾಗಿ ಹೆಚ್ಚಿನ ಮತಗಳೇನೂ ಲಭ್ಯವಾಗಿಲ್ಲ. 2014 ರ ನೋಟಾ ಮತಗಳ ಸಂಖ್ಯೆ ಪ್ರಮಾಣದ ದೃಷ್ಟಿಯಿಂದ 2009 ರ ಕೊನೆಯ ಸ್ವತಂತ್ರ ಅಭ್ಯರ್ಥಿ ಪಡೆದ ಮತಗಳಿಗಿಂತ ವಿಶೇಷವಾಗಿ ಹೆಚ್ಚೇನಿಲ್ಲ. ಹೀಗಾಗಿ, ಮತಯಂತ್ರದಲ್ಲಿ ಕೊನೆಯಲ್ಲಿರುವ ನೀಲಿಗುಂಡಿಯು ಹೆಚ್ಚು ಮತಗಳನ್ನು ತರುತ್ತದೆ ಎಂಬುದೇ ಸತ್ಯ ಹೊರತು ಹೆಚ್ಚು ಜನರು ನೋಟಾ ಆಯ್ಕೆ ಮಾಡಿದ್ದಾರೆ ಎಂದಾಗಲೀ ಅಥವಾ ಕೊನೆಯಲ್ಲಿದ್ದ ಸ್ವತಂತ್ರ ಅಭ್ಯರ್ಥಿ ಹೆಚ್ಚು ಜನಪ್ರಿಯ ಎಂದಾಗಲೀ ಹೇಳಲಾಗದು.
ಇದು ಯಾಕೆ ಹೀಗೆ? ಮತಗಟ್ಟೆಯೊಳಗೆ ಕುಳಿತವರಿಗೆ ಉತ್ತರ ಸುಲಭವಾಗಿ ಗೊತ್ತಾಗುತ್ತದೆ. ಅಭ್ಯರ್ಥಿಗಳಿಂದ ಹಾಗೂ ಪ್ರಚಾರಕರಿಂದ ಎಷ್ಟೇ ತರಬೇತಿ ಪಡೆದಿದ್ದರೂ, ಮತದಾನ ಮಾಡಲು ಮತಯಂತ್ರದ ಬಳಿಗೆ ಹೋದ ಅನಕ್ಷರಸ್ಥ ವೃದ್ಧರಲ್ಲಿ ಅನೇಕರು ಗೊಂದಲಕ್ಕೊಳಗಾಗಿ ನಿಲ್ಲುತ್ತಾರೆ. ಆಗ ಮತಗಟ್ಟೆ ಅಧಿಕಾರಿಗಳು ನಿಮ್ಮ ಆಯ್ಕೆಯ ಯಾವುದಾದರೊಂದು ನೀಲಿಗುಂಡಿ ಒತ್ತಿರಿ ಎಂದು ಮುಂತಾಗಿ ಏನಾದರೂ ಹೇಳುತ್ತಾರೆ. ಆಗ ಅಂಥ ಮತದಾರರು ತಮ್ಮ ಕೈಗೆ ಅತಿ ಹತ್ತಿರದಲ್ಲಿ ಎಟಕುವ, ಅಂದರೆ ಮತಯಂತ್ರದಲ್ಲಿ ಕೊನೆಯದಾಗಿ ಇರುವ ನೀಲಿಗುಂಡಿಯನ್ನು ಅದುಮಿ ಕೆಲಸ ಪೂರೈಸಿಬಿಡುತ್ತಾರೆ. ಹದಿನಾರಕ್ಕಿಂತ ಹೆಚ್ಚು ಅಭ್ಯರ್ಥಿಗಳಿದ್ದಾಗ, ಅಂದರೆ ಎರಡು ಅಥವಾ ಹೆಚ್ಚು ಮತಯಂತ್ರಗಳು ಇದ್ದಾಗ ಮತಗಳ ಲಭ್ಯತೆಯ ಸ್ವರೂಪದಲ್ಲಿ ಸ್ವಲ್ಪ ವ್ಯತ್ಯಾಸವಾದೀತು. ಆದರೆ ಮೊದಲ ಮತಯಂತ್ರದ ಹದಿನಾರನೇ (ಕೊನೆಯ) ಅಭ್ಯರ್ಥಿಗೆ ಹೆಚ್ಚು ಮತ ಲಭ್ಯವಾದುದನ್ನು ಕೆಲವು ಕ್ಷೇತ್ರಗಳಲ್ಲಿ ಕಾಣುತ್ತೇವೆ. ಒಟ್ಟಿನಲ್ಲಿ ಬಹಳಷ್ಟು ಮತದಾರರು ಮತದಾನ ಪ್ರಕ್ರಿಯೆಯ ಬಗ್ಗೆ ಇನ್ನಷ್ಟು ಶಿಕ್ಷಿತರಾಗಬೇಕಾದ ಅನಿವಾರ್ಯತೆಯನ್ನು ಇದು ಸೂಚಿಸುತ್ತದೆ.  

= ಡಾ. ಅಜಕ್ಕಳ ಗಿರೀಶ ಭಟ್,
giriajakkala@yahoo.co.in


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.