ಉಚಿತ ತರಗತಿಗಳಿಗೆ ಮುನ್ನುಡಿ ಬರೆದ ವಿ. ಅಣ್ಣಯ್ಯ
ಹತ್ತನೇ ವಯಸ್ಸಿನಲ್ಲಿಯೇ ಮಹಾತ್ಮಾ ಗಾಂಧಿಯವರ ಕರೆಗೆ ಓಗೊಟ್ಟು, ಸ್ವಾತಂತ್ರ್ಯ ಚಳವಳಿಯಲ್ಲಿ ತೊಡಗಿಸಿಕೊಂಡು, ಸೆರೆಮನೆವಾಸ ಅನುಭವಿಸಿ ಕೊನೆಯವರೆಗೂ ದೇಶ ಸೇವೆಯ ಕಾರ್ಯದಲ್ಲಿ ತೊಡಗಿಸಿಕೊಂಡವರು ವಿ. ಅಣ್ಣಯ್ಯ. ಕಾಂಗ್ರೆಸ್ ಪಕ್ಷ ನಡೆಸಿದ ಅನೇಕ ರಚನಾತ್ಮಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಸೇವಾದಳದ ಮೂಲಕ ತಮ್ಮ ಸಾರ್ವಜನಿಕ ಬದುಕನ್ನು ಕಟ್ಟುಕೊಂಡಂತಹ ವಿ. ಅಣ್ಣಯ್ಯ ಇದೇ ತಿಂಗಳ 15ನೇ ತಾರೀಖಿನಂದು ತಮ್ಮ 91ನೇ ವಯಸ್ಸಿನಲ್ಲಿ ನಿಧನರಾದರು.
1946ರಲ್ಲಿಯೇ ಯುವಕ ಸಂಘ ಸಂಸ್ಥೆಯ ಮೂಲಕ ಅನೇಕ ಕ್ರಿಯಾತ್ಮಕ ಚಟುವಟಿಕೆಗಳನ್ನು ಆರಂಭಿಸಿದ ಅಣ್ಣಯ್ಯ, ಆ ಸಂಸ್ಥೆಯ ಕಾರ್ಯದರ್ಶಿಯಾಗಿ ಮತ್ತು ವಿ.ಎಸ್.ಕೃಷ್ಣಯ್ಯರ್ ಅವರು ಅದರ ಅಧ್ಯಕ್ಷರಾಗಿ ದುಡಿದರು. ರಾಷ್ಟ್ರದಲ್ಲಿಯೇ ಪ್ರಥಮ ಬಾರಿಗೆ ಎಸ್ಎಸ್ಎಲ್ಸಿ, ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳಿಗೆ ಉಚಿತ, ಗುಣಮಟ್ಟದ ಉಪನ್ಯಾಸ ತರಗತಿಗಳನ್ನು ಏರ್ಪಡಿಸಿದ ಕೀರ್ತಿ ಅಣ್ಣಯ್ಯ ಹುಟ್ಟುಹಾಕಿದ ಈ ಸಂಸ್ಥೆಗೆ ಸಲ್ಲುತ್ತದೆ. ಕಳೆದ 5 ದಶಕಗಳಿಂದ ಪ್ರತಿ ವರ್ಷ ಸಹಸ್ರಾರು ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಶಾಲೆ, ಕಾಲೇಜುಗಳ ಉಪನ್ಯಾಸಕರುಗಳಿಂದ ಉಚಿತ ತರಬೇತಿಗಳನ್ನು ಕೊಡುತ್ತಾ ಬರಲಾಗುತ್ತಿದೆ. ಈ ಸಂಸ್ಥೆ ನಡೆಸುವ ತರಗತಿಗಳಿಗೆ ಬಂದು ತರಬೇತಿ ಪಡೆದ ಸಹಸ್ರಾರು ಮಂದಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ, ಆಡಳಿತಾತ್ಮಕ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ಯುವಕ ಸಂಘದ ಉಚಿತ ಉಪನ್ಯಾಸ ತರಗತಿ ಕಾರ್ಯಕ್ರಮ ರಾಷ್ಟ್ರದ ಗಮನವನ್ನು ಸೆಳೆದಿತ್ತು. ಇದೇ ಮಾದರಿಯನ್ನು ಅನುಸರಿಸಿ ಅನೇಕ ರಾಜ್ಯಗಳಲೂ ಅಲ್ಲಿನ ಸಂಸ್ಥೆಗಳು ಉಚಿತ ಉಪನ್ಯಾಸ ತರಗತಿಗಳನ್ನು ಆರಂಭಿಸಿದವು. ಬೆಂಗಳೂರಿನಲ್ಲಂತೂ ಆರ್.ಟಿ. ನಗರ, ಮಲ್ಲೇಶ್ವರ, ಜಯನಗರ, ಕೆಂಪೇಗೌಡನಗರ ಮುಂತಾದ ಕಡೆಗಳಲ್ಲಿ ಯುವಕ ಸಂಘದ ಸಹಕಾರದಿಂದ ಉಚಿತ ಉಪನ್ಯಾಸ ತರಗತಿಗಳು ನಡೆಯುತ್ತವೆ. ವಿ.ಎಸ್. ಕೃಷ್ಣಯ್ಯರ್ ಮತ್ತು ವಿ. ಅಣ್ಣಯ್ಯ ಅವರು ಜೊತೆಗೂಡಿ ಯುವಕ ಸಂಘ, ಹೆಚ್.ಬಿ ಸಮಾಜದಂಥ ಅನೇಕ ಸಂಸ್ಥೆಗಳನ್ನು ಮುನ್ನಡೆಸಿದರು. ಅವಿವಾಹಿತರಾಗಿದ್ದ ಅಣ್ಣಯ್ಯ ಅವರು ಗಾಂಧಿಬಜಾರಿನ ಯುವಕ ಸಂಘದ ಕಚೇರಿಯಲ್ಲಿ ಪ್ರತಿದಿನ ಬೆಳಗ್ಗೆಯಿಂದ ಸಂಜೆಯತನಕ ಸಮಯವನ್ನು ಈ ಸಂಸ್ಥೆಯ ಕಾರ್ಯಚಟುವಟಿಕೆಗಳಿಗಾಗಿಯೇ ಮೀಸಲಿಟ್ಟಿದ್ದರು. ಯುವಕ ಸಂಘದ ವತಿಯಿಂದ ಉಚಿತ ವಾಚನಾಲಯವನ್ನೂ ಸಹ ನಡೆಸುತ್ತಿದ್ದರು. ಸರಳತೆ, ಸಜ್ಜನಿಕೆ ಮತ್ತು ಪ್ರಾಮಾಣಿಕತೆಯಿಂದ ಸಮಾಜಕ್ಕೆ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ ಅಣ್ಣಯ್ಯರವರ ನಿಧನ ಸಮಾಜ ಸೇವಾ ಕ್ಷೇತ್ರಕ್ಕಾದ ದೊಡ್ಡ ನಷ್ಟವಾಗಿದೆ. ಸಮಾಜ ಸೇವೆ ಮಾಡಬೇಕೆನ್ನುವವರಿಗೆ ಅಣ್ಣಯ್ಯನವರ ಬದುಕು ಮತ್ತು ಯುವಕ ಸಂಘದ ಕಾರ್ಯಗಳು ಮಾರ್ಗದರ್ಶಕವಾಗಿವೆ. ಯುವಕ ಸಂಘಕ್ಕೆ ಜಯನಗರದಲ್ಲಿ ಭವ್ಯವಾದ ಕಟ್ಟಡವೂ ನಿರ್ಮಾಣವಾಗುತ್ತಿದ್ದು ಇಲ್ಲಿ ಐಎಎಸ್, ಕೆಎಎಸ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಗತಿಗಳನ್ನು ನಡೆಸುವಂಥ ವ್ಯವಸ್ಥೆಯೂ ಅವರ ಯೋಜನೆಗಳಲ್ಲಿ ಒಂದಾಗಿತ್ತು. ಗಾಂಧಿವಾದದಲ್ಲಿ ನಂಬಿಕೆಯಿದ್ದ ಅಣ್ಣಯ್ಯ ತಮ್ಮ ಬದುಕಿನುದ್ದಕ್ಕೂ ಗಾಂಧೀ ತತ್ವಗಳನ್ನು ಪಾಲಿಸಿದವರು. ಅವರ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಬಸವನಗುಡಿ ಕ್ಷೇತ್ರದಲ್ಲಿ ರಾಜಕೀಯ ಮತ್ತು ಸಮಾಜ ಸೇವೆ ಮೂಲಕವೇ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದ ಟಿ.ಆರ್. ಶಾಮಣ್ಣ, ವಿ.ಎಸ್.ಕೃಷ್ಣಯ್ಯರ್, ಜಿ. ನಾರಾಯಣ್ ಮತ್ತು ಎಂ.ಚಂದ್ರಶೇಖರ್, ವಿ. ಅಣ್ಣಯ್ಯ ಇವರೆಲ್ಲರೂ ಒಂದೇ ತಲೆಮಾರಿನ, ಒಂದೇ ಮನೋಭಾವದ ವ್ಯಕ್ತಿಗಳು. ಇವರುಗಳ ಅನುಪಸ್ಥಿತಿ ಸಮಾಜ ಸೇವಾ ಕ್ಷೇತ್ರದಲ್ಲಿ ದೊಡ್ಡ ಶೂನ್ಯವನ್ನು ಸೃಷ್ಟಿಸಿಬಿಟ್ಟಿದೆ.
8 ದಶಕಗಳ ಕಾಲ ಸಮಾಜ ಸೇವೆಯಲ್ಲೇ ಬದುಕು ಸವೆಸಿ, ನಿಸ್ವಾರ್ಥ ಮನೋಭಾವದಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಬದುಕು ಕಟ್ಟಿಕೊಟ್ಟ ವಿ. ಅಣ್ಣಯ್ಯ ಅವರು ಇಹಲೋಕ ತ್ಯಜಿಸಿದಾಗ, ಈ ಕುರಿತು ಸುದ್ದಿ ವಾಹಿನಿ ಮತ್ತು ಪತ್ರಿಕೆಗಳು ನಿರಾಸಕ್ತಿ ತೋರಿಸಿದ್ದು ಅತ್ಯಂತ ನೋವಿನ ಸಂಗತಿ.
= ಕೆ.ಎಸ್. ನಾಗರಾಜ್, ಬೆಂಗಳೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

