ಉದ್ಯೋಗ ಖಾತ್ರಿ ಅಕ್ರಮಕ್ಕೆ ಇನ್ನೆಷ್ಟು ಬಲಿ?
ದುಡಿಯುವ ಜೀವಗಳು ಕೆಲಸವಿಲ್ಲದೇ ಉಪವಾಸ ಬೀಳಬಾರದು ಎಂಬ ಸದುದ್ದೇಶದಿಂದ ಹಿಂದಿನ ಯುಪಿಎ ಸರ್ಕಾರ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೆ ತಂದಿತು. ಈ ಯೋಜನೆಯಿಂದ ಕನಿಷ್ಠ ಒಂದು ನೂರು ದಿನಗಳಾದರೂ ಕೆಲಸ ಸಿಗುತ್ತದೆ. ಕೂಲಿಯೂ ಸಿಗುತ್ತದೆ. ಆದರೆ ಯೋಜನೆ ಕೆಲವೆಡೆ ಹಳ್ಳ ಹಿಡಿದಿದೆ. ಕೆಲಸ ಮಾಡದೇ ಬಿಲ್ ಮಾಡುವುದು, ಜೆಸಿಬಿ ಯಂತ್ರ ಬಳಸಿ ಕೆಲಸ ಮಾಡಿ ಬಿಲ್ ಮಾಡುವುದು, ಒಂದು ಇಲಾಖೆ ಮಾಡಿದ ಕೆಲಸವನ್ನು ಮತ್ತೊಂದು ಇಲಾಖೆಯ ಕೆಲಸ ಎಂದು ತೋರಿಸಿ, ಡಬಲ್ ಬಿಲ್ ಮಾಡುವುದು- ಹೀಗೆ ಅಕ್ರಮಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇಂತಹ ಅಕ್ರಮಗಳಿಗೆ ಸಹಕರಿಸದ ಕಾರಣಕ್ಕಾಗಿ ಮಾನಸಿಕ ಕಿರುಕುಳಕ್ಕೆ ಒಳಗಾಗಿದ್ದ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕು ಕುರಟ್ಟಿ ಹೊಸೂರು ಗ್ರಾಪಂ ವ್ಯಾಪ್ತಿಯ ಎಂಜಿನಿಯರ್ ಸುರೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಆತ್ಮಹತ್ಯೆಯ ಹಿಂದೆ ಅಧಿಕಾರಿಗಳ ಕರ್ತವ್ಯ ಲೋಪದ ಜೊತೆಗೆ ಚುನಾಯಿತ ಪ್ರತಿನಿಧಿಗಳ ನಿರ್ಲಕ್ಷ್ಯವೂ ಇದೆ.
ಚಾಮರಾಜಗರ ಜಿಲ್ಲೆಯಲ್ಲಿ ಅದರಲ್ಲೂ ಕೊಳ್ಳೇಗಾಲ ತಾಲೂಕಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೋಟ್ಯಂತರ ರು. ಗುಳುಂ ಆಗಿರುವ ಬಗ್ಗೆ ಕಳೆದ ಹಲವಾರು ತಿಂಗಳುಗಳಿಂದಲೂ ಆರೋಪಗಳು ಕೇಳಿ ಬರುತ್ತಲೇ ಇವೆ. ಈ ಸಂಬಂಧ ದೂರುಗಳು ಜಿಲ್ಲಾ ಪಂಚಾಯ್ತಿಯಿಂದ ಹಿಡಿದು ಲೋಕಾಯುಕ್ತರವರೆಗೂ ಹೋಗಿವೆ. ಆದರೆ ಭ್ರಷ್ಟರ ವಿರುದ್ಧ ಕ್ರಮ ಮಾತ್ರ ಆಗಿಲ್ಲ. ಪರಿಣಾಮ ಹಿಂದುಳಿದ ಉಪ್ಪಾರ ಜನಾಂಗದಲ್ಲಿ ಜನಿಸಿ, ಸ್ವಂತ ಪ್ರತಿಭೆಯಿಂದ ಎಂಜಿನಿಯರಿಂಗ್ ಪದವಿ ಪೂರೈಸಿ, ಭವಿಷ್ಯದ ಬಗ್ಗೆ ಅಪಾರ ಕನಸುಗಳನ್ನು ಕಂಡಿದ್ದ ಯುವಕನ ಬಲಿಯಾಗಿದೆ. ಕೊಳ್ಳೇಗಾಲ ತಾಲೂಕಿನ ಅಜ್ಜೀಪುರಂ ಗ್ರಾಪಂ ವ್ಯಾಪ್ತಿಯಲ್ಲಿ ಸದಸ್ಯರೇ ಗುತ್ತಿಗೆದಾರರಾಗಿ ಕೆಲಸ ಮಾಡಿಸಿದ್ದರು. ಬಿಲ್ ಕಲೆಕ್ಟರ್ ಕೂಡ ಗುತ್ತಿಗೆದಾರನಾಗಿದ್ದ. ಈ ಬಗ್ಗೆ ಓಂಬುಡ್ಸಮನ್ ವಿಚಾರಣೆ ನಡೆಸಿ, ನಾಲ್ವರು ಮಾಜಿ ಅಧ್ಯಕ್ಷರು, ನಾಲ್ವರು ಇಒಗಳು, ಪಿಡಿಒ ಹಾಗೂ ಓರ್ವ ಸದಸ್ಯನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ, 15 ಲಕ್ಷ ರು.ಗಳನ್ನು ವಸೂಲಿ ಮಾಡುವಂತೆ ಶಿಫಾರಸು ಮಾಡಿದ್ದರು.
ಉದ್ಯೋಗ ಖಾತ್ರಿ ಯೋಜನೆಯಡಿ ಕೊಳ್ಳೇಗಾಲ ತಾಲೂಕಿನಲ್ಲಿ 2011-12, 2012-13ನೇ ಸಾಲಿನಲ್ಲಿ ಕೈಗೊಂಡಿರುವ ಜಲಾನಯನ ಇಲಾಖೆಯ ಅಭಿವೃದ್ಧಿ ಕಾಮಗಾರಿಗಳಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಓಂಬುಡ್ಸುಮನ್ ರತ್ನಾನಾಯಕ್ ಅವರು ಮೇ 8 ರಂದೇ ಚಾಮರಾಜನಗರ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ವರದಿ ಸಲ್ಲಿಸಿದ್ದರು. ಅದರ ಪ್ರಕಾರ ಜಲಾನಯನ ಅಭಿವೃದ್ಧಿ ಇಲಾಖೆಯ ಹಿಂದಿನ ಮೂವರು ಅಧಿಕಾರಿಗಳ ವಿರುದ್ಧ ಸರ್ಕಾರದ ನೀತಿ, ನಿಯಮ, ಕಾನೂನು ಪಾಲಿಸದಿರುವುದು, ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡದಿರುವುದು, ತಾಪಂ ಕಾರ್ಯನಿರ್ವಾಹಕ ಅಧಿಕಾರಿಯಿಂದ ಅನುಮೋದನೆ ಪಡೆಯದೇ ಜೆಸಿಬಿ ಯಂತ್ರಗಳಿಂದ ಕಾಮಗಾರಿ ನಡೆಸಿರುವುದು, ಸುಳ್ಳು ದಾಖಲೆಗಳ ಸೃಷ್ಟಿ, ಹಣ ಹಾಗೂ ಅಧಿಕಾರ ದುರುಪಯೋಗ, ಕರ್ತವ್ಯಲೋಪದ ಆರೋಪಗಳು ಕೇಳಿ ಬಂದಿದ್ದವು. ಟಗರಪುರ, ಚಿಕ್ಕಹಾರನ ಕಟ್ಟೆಕೆರೆ, ಮಂಗಲ, ಮುಳ್ಳೂರು, ಮಣಗಳ್ಳಿ ಗ್ರಾಪಂ ಅಕ್ರಮಗಳಿಗೆ ಸಂಬಂಧಿಸಿದಂತೆ ಕೆಲವು ಕಡತಗಳನ್ನೇ ವಿಚಾರಣೆಗೆ ಹಾಜರುಪಡಿಸಿರಲಿಲ್ಲ. ವಿಚಾರಣೆಗೆ ಜಿಪಂ ಅಧಿಕಾರಿಗಳಿಂದ ಸಹಕಾರ ಸಿಗಲಿಲ್ಲ. ಅಕ್ರಮ ಬಯಲಿಗೆ ಬರಬಹುದು ಎಂಬ ಆತಂಕದಿಂದ ಈ ರೀತಿ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾದ ನಂತರ ಹಾಗೂ ಲೋಕಾಯುಕ್ತರಿಂದ ಖಡಕ್ ಎಚ್ಚರಿಕೆ ಬಂದ ನಂತರ ಕೆಲವು ಕಡತಗಳನ್ನು ನೀಡಿದರೂ ಮತ್ತೆ ಕೆಲವನ್ನು ನೀಡಲಿಲ್ಲ.
27.7.2010 ರಿಂದ 31.3.2014ರ ಅವಧಿಯಲ್ಲಿ ಒಟ್ಟು 10.15 ಕೋಟಿ ರು.ಗಳ ಸಾಮಗ್ರಿಗಳನ್ನು ಖರೀದಿಸಲಾಗಿದೆ. ಆದರೆ ಸರ್ಕಾರಕ್ಕೆ ಪಾವತಿಸಬೇಕಾದ ಶಾಸನಬದ್ಧ ತೆರಿಗೆ ಹಣ ಕಟಾಯಿಸದಿರುವುದು ಕಂಡು ಬಂದಿದೆ. ತೆರಿಗೆ ಕಟಾಯಿಸಿದರೆ ಸಂಪೂರ್ಣ ಬಿಲ್ಗಳನ್ನು ವಾಣಿಜ್ಯ ತೆರಿಗೆ ಇಲಾಖೆಗೆ ನೀಡಬೇಕಾಗುತ್ತದೆ ಎಂಬುದು ಇದಕ್ಕೆ ಕಾರಣ. ಈ ರೀತಿ ಮಾಡಿದರೆ ಅವು ಕಪ್ಪು ಬಿಲ್ಗಳು ಎನಿಸಿಕೊಳ್ಳುತ್ತವೆ. ಸರಬರಾಜದಾರರು ಮತ್ತು ಖರೀದಿದಾರರು ಸರ್ಕಾರಕ್ಕೆ ಮೋಸ ಮಾಡುವ ಉದ್ದೇಶದಿಂದ ಈ ರೀತಿ ಮಾಡಿದ್ದಾರೆ. ಕೋಟ್ಯಂತರ ರು. ಸರ್ಕಾರಿ ಹಣ ದುರುಪಯೋಗವಾಗಿದೆ. ಆದ್ದರಿಂದ ಈ ಕಾಮಗಾರಿಗಳಲ್ಲಿ ಭಾಗಿಯಾಗಿರುವ ಎಲ್ಲಾ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು. ಅಮಾನತುಪಡಿಸಿ, ವಿಚಾರಣೆ ನಡೆಸಬೇಕು. ನಿವೃತ್ತಿಯ ನಂತರವೂ ಸರ್ಕಾರಿ ಕಡತಗಳನ್ನು ತಮ್ಮ ವಶದಲ್ಲಿ ಇರಿಸಿಕೊಂಡಿರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ನಂತರ ವಿಚಾರಣೆ ಮುಂದುವರೆಸಬಹುದು ಎಂದು ವರದಿಯಲ್ಲಿ ಅಭಿಪ್ರಾಯಪಟ್ಟರು. ಆದರೆ ಈ ವರದಿಯ ಮೇಲೆ ಕ್ರಮ ವಹಿಸಬೇಕಾದ ಜಿಪಂ ಸಿಇಒ ಏನೂ ಮಾಡಲಿಲ್ಲ. ಬದಲಿಗೆ ಯಾವುದೇ ಅಕ್ರಮಗಳು ನಡೆದಿಲ್ಲ ಎಂದು ಸಮರ್ಥನೆಗಿಳಿದರು. ಜೊತೆಗೆ ಲೋಕಾಯುಕ್ತ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆದರು.
ಕೊಳ್ಳೇಗಾಲ ತಾಲೂಕಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ತಾಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ, ಕೆಡಿಪಿ ಸಭೆಗಳಲ್ಲಿ ಚರ್ಚೆಯಾಯಿತು. ಕಳೆದ ವಾರ ಜಿಲ್ಲೆಗೆ ಭೇಟಿ ನೀಡಿದ್ದ ಕೃಷಿ ಸಚಿವ ಕೃಷ್ಣ ಬೈರೇಗೌಡರು ಜಲಾನಯನ ಇಲಾಖೆ ನನ್ನ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿಕೊಳ್ಳಲು ನಾಚಿಕೆಯಾಗುತ್ತದೆ. ಕಾಗದದ ಮೇಲೆ ಕೆಲಸಗಳು ನಡೆದಿವೆ. ಆದರೆ ವಾಸ್ತವಾಗಿ ಕೆಲಸಗಳೇ ಆಗಿಲ್ಲ ಎಂದು ಕಿಡಿಕಾರಿದ್ದರು. ಎರಡನೇ ಬಾರಿ ಚಾಮರಾಜನಗರ ಸಂಸದರಾಗಿರುವ ಆರ್. ಧ್ರುವನಾರಾಯಣ ಕಳೆದ ಅವಧಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ರಾಷ್ಟ್ರೀಯ ಸಮಿತಿಯ ಸದಸ್ಯರಾಗಿದ್ದರು. ಜಿಲ್ಲೆಗೆ ಕೋಟ್ಯಂತರ ರು.ಗಳನ್ನು ಮಂಜೂರು ಮಾಡಿಸಿದ್ದರು. ಸಾಕಷ್ಟು ಕೆಲಸಗಳನ್ನು ಮಾಡಲು ಅವಕಾಶವಾಗಿತ್ತು. ಅವರು ಒಮ್ಮೆ ಸ್ಥಳ ಪರಿಶೀಲನೆ ಮಾಡಿದಾಗ ಚೆಕ್ ಡ್ಯಾಮ್ ಕಾಮಗಾರಿ ಕಳಪೆಯಾಗಿದೆ ಎಂದು ಬಂಡಳ್ಳಿ ಗ್ರಾಪಂ ಕಾರ್ಯದರ್ಶಿ ಹಾಗೂ ಜಲಾನಯನ ಇಲಾಖೆಯ ಕೃಷಿ ಸಹಾಯಕನನ್ನು ಅಮಾನತು ಮಾಡಿಸಿದ್ದರು. ಇದಾದ ನಂತರ ಯಾವುದೇ ಅಧಿಕಾರಿ, ನೌಕರರ ಮೇಲೆ ಕ್ರಮ ಆಗಲಿಲ್ಲ. ಪರಿಣಾಮ ಅಕ್ರಮಗಳು ಮಿತಿ ಮೀರಿದವು. ಕೆಲಸವಾಗದೇ ಬಿಲ್ ಮಾಡುವುದು ಹೆಚ್ಚಿತು.
ಸರ್ಕಾರ ಅದರಲ್ಲೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಈಗಲಾದರೂ ಎಚ್ಚೆತ್ತುಕೊಂಡು ಅಕ್ರಮ ನಡೆಸುವರರ ವಿರುದ್ಧ ಕಠಿಣ ಕ್ರಮ ಜರುಗಿಸದಿದ್ದಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಉದ್ದೇಶ ಈಡೇರುವುದಿಲ್ಲ. ಜಲಾನಯನ ಇಲಾಖೆಯ ಬಗ್ಗೆಯಂತೂ ವ್ಯಾಪಕ ದೂರುಗಳಿವೆ. ಸರ್ಕಾರ ಈ ಕಡೆ ಗಮನಹರಿಸಿ, ಶಿಸ್ತು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಸುರೇಶ್ ಅವರಂತಹ ಅಮಾಯಕ ಜೀವಗಳು ಬಲಿಯಾಗುತ್ತಲೇ ಇರುತ್ತವೆ.
ಅಂಶಿ ಪ್ರಸನ್ನಕುಮಾರ್, ಕನ್ನಡಪ್ರಭ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

