ಮನಮೋಹನರಂತೆಯೇ ಎಡವುತ್ತಿದ್ದಾರೆಯೇ ಸಿದ್ದರಾಮಯ್ಯ?
ಹೌದು, ಕೇಂದ್ರದಲ್ಲಿ 10 ವರ್ಷಗಳ ಕಾಲ ಮೌನಮುನಿಗಳೇ ಆಗಿದ್ದ ಮನಮೋಹನ ಸಿಂಗ್ರ ಯುಪಿಎ ಸರ್ಕಾರಕ್ಕೂ, ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಆರ್ಎಂಎಸ್ಎ, ಆರ್ಯುಎಸ್ಎ, ಭೂಸ್ವಾಧೀನ ಕಾಯ್ದೆ, ಆಹಾರ ಭದ್ರತಾ ಕಾಯ್ದೆ, ಶಿಕ್ಷಣ ಹಕ್ಕು ಮೊದಲಾದ ಅತ್ಯುತ್ತಮ ಯೋಜನೆಗಳನ್ನು ರೂಪಿಸಿದ್ದರೂ ಸಹ ಅವುಗಳ ಪರಿಣಾಮಕಾರಿ ಅನುಷ್ಠಾನದಲ್ಲಿ ವಿಫಲತೆ, ಉತ್ತಮ ನಾಯಕತ್ವದ ಕೊರತೆ, ಸಾಲು ಸಾಲು ಹಗರಣಗಳ ವಿರುದ್ಧ ದಿಟ್ಟಹೆಜ್ಜೆ ಇಡದಿರುವುದು ಯುಪಿಎ ಸರ್ಕಾರದ ವೈಫಲ್ಯಕ್ಕೆ ಕಾರಣವಾಯಿತು. ಇಂದು ಕಾಂಗ್ರೆಸ್ ಲೋಕಸಭೆಯಲ್ಲಿ ಅಧಿಕೃತ ಪ್ರತಿಪಕ್ಷದ ಸ್ಥಾನ ಪಡೆಯಲೂ ಸಾಧ್ಯವಾಗದಂತಹ ಹೀನಾಯ ಸ್ಥಿತಿಗೆ ತಲುಪಿದೆ ಎಂದರೆ, 10 ವರ್ಷಗಳಿಂದ ಆ ಸರ್ಕಾರದ ವಿರುದ್ಧ ಭಾರತೀಯರ ಮನದಲ್ಲಿ ಮಡುಗಟ್ಟಿದ್ದ ಆಕ್ರೋಶವೆಂಥದ್ದೋ ಯೋಚಿಸಿ?
ದಿಗ್ವಿಜಯ್ ಸಿಂಗ್ರ ಸುಳ್ಳಿನ ಕಂತೆಗಳು, ರಾಹುಲ್ ಗಾಂಧಿಯವರ ಅಪ್ರಬುದ್ಧ ಹೇಳಿಕೆಗಳು ಆ ಪಕ್ಷದ ಓಟ್ಬ್ಯಾಂಕ್ ರಾಜಕೀಯ ಫಲಿಸಲಿಲ್ಲ ಎನ್ನುವುದಕ್ಕೆ ಉತ್ತಮ ಉದಾಹರಣೆಯಾಗಿವೆ. ಮತದಾರ ತನಗೆ ಮತ್ತು ರಾಷ್ಟ್ರಕ್ಕೆ ಯಾರು ಸೂಕ್ತ ಎಂದು ತುಲನಾತ್ಮಕವಾಗಿ ಪರಿಶೀಲಿಸಿ ಮತ ನೀಡಿ ಕಾಂಗ್ರೆಸ್ನ ಘಟಾನುಘಟಿಗಳಿಗೆ ಮನೆಯ ದಾರಿ ತೋರಿಸಿದ್ದಾನೆ. ಮೋದಿಯವರು "ದಿನಕ್ಕೆ ಕನಿಷ್ಠ 16 ಗಂಟೆ ಕೆಲಸ ಮಾಡದಿದ್ದರೆ, ಮಂತ್ರಿ ಪದವಿಯನ್ನು ತ್ಯಜಿಸಿ" ಎಂದು ಗರ್ಜಿಸಿದ್ದನ್ನು ನಾವು ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ರಿಂದ ಕನಸಿನಲ್ಲಿಯೂ ಸಹ ನಿರೀಕ್ಷಿಸುವುದಕ್ಕೆ ಸಾಧ್ಯವಿತ್ತೇ?!
ನಮ್ಮ ರಾಜ್ಯ ಸರ್ಕಾರವು ಯುಪಿಎ ಪ್ರತಿರೂಪವಾಗಿದ್ದು, ಅನೇಕ ಹಗರಣಗಳ ಸುಳಿಯಲ್ಲಿ ಸಿಲುಕಿ ಯುಪಿಎ ಸರ್ಕಾರದ ಮಂತ್ರಿಗಳು ಸಾಲಾಗಿ ರಾಜಿನಾಮೆ ನೀಡಿದಂತೆಯೇ ನಮ್ಮ ರಾಜ್ಯದಲ್ಲಿ ಸರ್ಕಾರ ರಚನೆಯಾಗಿ ವರ್ಷ ತುಂಬುವುದರೊಳಗೆ ಮೂಲಭೂತ ಸೌಲಭ್ಯ ಅಭಿವೃದ್ಧಿ ಹಾಗೂ ವಾರ್ತಾ ಸಚಿವರು ರಾಜಿನಾಮೆ ಸಲ್ಲಿಸಬೇಕಾಯಿತು. ಅದೇ ರೀತಿ ಅನೇಕ ಸಚಿವರು ಹಗರಣಗಳ ಸುಳಿಯಲ್ಲಿ ಸಿಲುಕಿದ್ದಾರೆ. ಚುಕ್ಕಾಣಿ ಹಿಡಿದ ಸಿದ್ದರಾಮಯ್ಯನವರು ಯಶಸ್ಸಿನ ಎಲ್ಲಾ ಕ್ರೆಡಿಟ್ಟು ತಮಗೇ ಸೇರಬೇಕು, ವೈಫಲ್ಯಗಳು ಮಾತ್ರ ಆಯಾ ಇಲಾಖಾ ಮಂತ್ರಿಗಳ ಕೊರಳಿಗೆ ನೇತಾಡಲಿ ಎನ್ನುವ ಧೋರಣೆಯಲ್ಲಿರುವಂತೆ ಕಂಡುಬರುತ್ತಿದ್ದು, ಮುಖ್ಯಮಂತ್ರಿಯಾದ ಕೂಡಲೇ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದು ತಾವೊಬ್ಬರೇ ಶ್ರೇಯಸ್ಸನ್ನು ಬಿಂಬಿಸಿಕೊಂಡರೇ ಹೊರತಾಗಿ, ತಮ್ಮ ಮಂತ್ರಿಮಂಡಳ ಅಥವಾ ಸರ್ಕಾರಕ್ಕಲ್ಲ! ಆದರೆ, ಆ ಯೋಜನೆ ಇಂದು ಏನಾಗಿದೆ? ಪ್ರಾರಂಭದಲ್ಲಿ ಪ್ರತಿ ಕೆ.ಜಿ.ಗೆ ಒಂದು ರುಪಾಯಿಯಂತೆ 30 ಕೆ.ಜಿ. ಅಕ್ಕಿ ಎಂದು ಘೋಷಿಸಿ ಇಂದು 20 ಕೆ.ಜಿ. ವಿತರಿಸುತ್ತಿರುವುದೇಕೆ? ಅನ್ನಭಾಗ್ಯಕ್ಕೆ ಅಗತ್ಯವಿರುವಷ್ಟು ಅಕ್ಕಿ ಕೊಡದಿದ್ದರೆ, ಪರವಾನಗಿ ರದ್ದುಗೊಳಿಸುವುದಾಗಿ ಗೂಂಡಾಗಳ ರೀತಿ ಬೆದರಿಕೆ ಹಾಕಿ ಗಿರಣಿ ಮಾಲೀಕರಿಂದ ಒತ್ತಾಯವಾಗಿ ಅಕ್ಕಿಯನ್ನು ಕಿತ್ತುಕೊಂಡರೂ ಸಹ ಘೋಷಣೆಯಂತೆ 30 ಕೆ.ಜಿ. ಅಕ್ಕಿ ವಿತರಿಸಲು ಸಾಧ್ಯವಾಗುತ್ತಿಲ್ಲ. ಹೀಗೆ ಒತ್ತಾಯವಾಗಿ ಕಿತ್ತುಕೊಂಡ ಲೆವಿ ಅಕ್ಕಿಗೆ ಹಣವನ್ನೇ ಪಾವತಿಸದಿರುವುದರಿಂದ, ಗಿರಣಿ ಮಾಲೀಕರು, ಕಾರ್ಮಿಕರನ್ನು ಸರ್ಕಾರವೇ ಬೀದಿಗೆ ತಳ್ಳಿದ್ದು, ಈ ಯೋಜನೆಯಿಂದ ಭತ್ತಕ್ಕೆ ಸೂಕ್ತ ಬೆಲೆಯಿಲ್ಲದಂತಾಗಿದ್ದು, ಭತ್ತ ಬೆಳೆಯುವ ರೈತರ ಗೋಳು ಹೇಳತೀರದು. ಅನ್ನಭಾಗ್ಯದ ಜೋಳ, ರಾಗಿ ಎಲ್ಲಿವೆ? "ಅನ್ನಭಾಗ್ಯ ಅನ್ಯರ ಭಾಗ್ಯವಾಗದಿರಲಿ, ಕ್ಷೀರಭಾಗ್ಯ ಕ್ಷಾರಭಾಗ್ಯವಾಗದಿರಲಿ" ಎಂದು ನಾನು ವೇದಿಕೆಯೊಂದರಲ್ಲಿ ಮುಖ್ಯಮಂತ್ರಿಗಳಿಗೆ ನೇರವಾಗಿ ಹೇಳಿದ್ದನ್ನು ಒಮ್ಮೆ ನೆನಪಿಸಿಕೊಳ್ಳಲಿ. ಇಲ್ಲದ್ದನ್ನು ಹೇಳಿ ಬಡವರಿಗೆ ಆಸೆ ತೋರಿಸುವುದಕ್ಕಿಂತ ನಿಮ್ಮ ಕೈಲಾಗುವುದನ್ನು ಮಾತ್ರ ಹೇಳಿ, ಅಂಗೈ ತೋರಿಸಿ ಅವಮಾನ ಮಾಡಿಸಿಕೊಳ್ಳುವುದು ಶೋಭೆಯಲ್ಲ. ಯೋಜನೆಗಳನ್ನು ಘೋಷಿಸುವ ಮೊದಲು ಅವುಗಳ ಅನುಷ್ಠಾನಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು.
ಶಾದಿ ಭಾಗ್ಯ, ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ, ಅಹಿಂದ ಮಕ್ಕಳಿಗೆ ಪ್ರವಾಸ ಭಾಗ್ಯ, ವಿವಾಹಕ್ಕೆ ತೆರಿಗೆಯಂತಹ ಘೋಷಣೆಗಳು ಎಬ್ಬಿಸಿದ ಗೊಂದಲಗಳನ್ನು ಮರೆಯುವುದುಂಟೆ? ಅಲ್ಪಾವಧಿಯಲ್ಲಿ ಅಗ್ಗದ ಪ್ರಚಾರದ ಖಯಾಲಿಗೆ ಬಿದ್ದವರಂತೆ ಕ್ಷೀರ ಭಾಗ್ಯವನ್ನೇನೋ ಘೋಷಿಸಿದರು. ಆದರೆ, ಅಗತ್ಯಕ್ಕೆ ತಕ್ಕಷ್ಟು ಸಿಬ್ಬಂದಿಗಳ ನೇಮಕವಾಗದೇ, ಬಿಸಿಯೂಟದೊಂದಿಗೆ ಕ್ಷೀರಭಾಗ್ಯವನ್ನೂ ಸಹ ಶಿಕ್ಷಕರ ಕೊರಳಿಗೆ ಹೇರಲಾಗಿದೆ. ಆಟ, ಪಾಠಕ್ಕೆ ಮಾತ್ರ ಸೀಮಿತರಾಗಿದ್ದ ಶಿಕ್ಷಕರು ಇಂದು ಪಾಠ ಹೇಳುವುದು, ಆಟವಾಡಿಸುವುದನ್ನು ಬಿಟ್ಟು, ಹಾಲು ಕುಡಿಸುವುದು, ಊಟ ಮಾಡಿಸುವುದಕ್ಕಷ್ಟೇ ಸೀಮಿತರಾಗಬೇಕಾಗಿದೆ. ಹಾಲು ಉತ್ಪಾದಿಸುತ್ತಿರುವ ಕೆಲವರಿಗೆ ಜಾತಿ ಆಧಾರಿತ ಪ್ರೋತ್ಸಾಹ ಧನ ನೀಡಿ ಹಾಲು ಉತ್ಪಾದಕರಲ್ಲೂ ಜಾತೀಯತೆಯ ವಿಷಬೀಜವನ್ನು ಬಿತ್ತಿದ್ದು ಎಷ್ಟು ಸರಿ? ಮನಮೋಹನ ಸಿಂಗ್ ಸರ್ಕಾರ ರುಪಾಯಿ ಮೌಲ್ಯವನ್ನು ಅಪಮೌಲ್ಯಗೊಳಿಸಿದರೆ, ಶಾಸಕರಿಗೆ ಇತ್ತೀಚೆಗೆ ಗುತ್ತಿಗೆ ಆಧಾರದಲ್ಲಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸಲು ನೇಮಕವಾದ ಹೆಚ್ಚುವರಿ ಆಪ್ತ ಸಹಾಯಕರಿಗೆ 6 ತಿಂಗಳಿನಿಂದ ವೇತನ ನೀಡದಿರುವುದು ರಾಜ್ಯ ಸರ್ಕಾರದ ಆರ್ಥಿಕ ದಿವಾಳಿತನಕ್ಕೆ ಹಿಡಿದ ಕನ್ನಡಿಯಾಗಿದೆ. ರೈಲು ದರವನ್ನು ಏರಿಸಲು ನಿರ್ಣಯಿಸಿ ತಡೆಹಿಡಿದ ಅಂದಿನ ರೈಲ್ವೆ ಸಚಿವರಾದ ಮಲ್ಲಿಕಾರ್ಜುನ ಖರ್ಗೆ ಎನ್ಡಿಎ ಸರ್ಕಾರದ ಕೊರಳಿಗೆ ಅದನ್ನು ನೇತು ಹಾಕಿದ್ದರಿಂದಲೇ ಈಗ ಅನಿವಾರ್ಯವಾಗಿ ದರ ಏರಿಸುವ ಪರಿಸ್ಥಿತಿ ಬಂದೊದಗಿದೆ. ಗೃಹ ಇಲಾಖೆಯಲ್ಲಿ ಹೊಸ ಹುದ್ದೆಯೊಂದನ್ನು ಸೃಷ್ಟಿಸಿ ತನ್ನ ಮೂಗಿನ ನೇರಕ್ಕೆ ಆ ಇಲಾಖೆಯ ಆಡಳಿತವೂ ನಡೆಯಲಿ ಎನ್ನುವ ಅಭಿಲಾಷೆ ಹೊಂದಿದಂತಿದ್ದು, ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಇಂದು ನಮ್ಮ ಮುಖ್ಯಮಂತ್ರಿಗಳು ಬಾಯಿಬಿಟ್ಟರೆ ದರ್ಪದ ಮಾತು, ಕುರ್ಚಿ ಸಿಕ್ಕರೆ ಅಲ್ಲೇ ಸೊಂಪಾದ ನಿದ್ದೆಗೆ ಹೆಸರುವಾಸಿಯಾಗಿದ್ದು, ಯುಪಿಎ ಸರ್ಕಾರದ ವೈಫಲ್ಯ ಇವರಿಗೆ ಪಾಠವಾಗುವ ಬದಲು, ಮಾದರಿಯಾಗಿರುವುದು ವಿಪರ್ಯಾಸ.
ಐಕ್ಯತೆಯ ಮಂತ್ರ ಜಪಿಸುವ ಮೋದಿಯವರ ಆಹ್ವಾನ ಮನ್ನಿಸಿ ಅವರ ಪ್ರಮಾಣವಚನ ಸಮಾರಂಭಕ್ಕೆ ಕಡುಬದ್ಧ ವೈರಿ ರಾಷ್ಟ್ರವಾದ ಪಾಕಿಸ್ತಾನದ ಪ್ರಧಾನಿ ಸೇರಿದಂತೆ ಸಾರ್ಕ್ ರಾಷ್ಟ್ರಗಳ ಮುಖಂಡರೆಲ್ಲರೂ ಭಾಗವಹಿಸಿದರೆ, ಚುನಾವಣೆ ಸಂದರ್ಭದಲ್ಲಿ "ಎಲ್ಲಿದೆ ಮೋದಿ ಹವಾ?" ಎಂದು ಉಡಾಫೆಯ ಮಾತುಗಳನ್ನಾಡಿದ್ದ ನಮ್ಮ ಸಿದ್ದರಾಮಣ್ಣ ಏನೇನೋ ಕುಂಟು ನೆಪ ಹೇಳಿ ಮೋದಿಯವರ ಪ್ರಮಾಣವಚನ ಕಾರ್ಯಕ್ರಮ ತಪ್ಪಿಸಿಕೊಂಡಿದ್ದು ಎಲ್ಲರಿಗೂ ನೆನಪಿದೆ. ಮೋದಿಯವರು ಪ್ರಧಾನಿಯಾದ ಕೂಡಲೇ, ತಮ್ಮ ಮಂತ್ರಿಮಂಡಳಕ್ಕೆ ಕಾರ್ಯಸೂಚಿಯನ್ನು ನೀಡಿದ್ದು, ಮಂತ್ರಿಗಳು ಒತ್ತಟ್ಟಿಗಿರಲಿ ಅವರ ಕುಟುಂಬ ವರ್ಗದವರೂ ಸಹ ಹೊಸದಾಗಿ ಯಾವುದೇ ರೀತಿಯ ಉದ್ದಿಮೆಯನ್ನು ಸ್ಥಾಪಿಸುವುದಾಗಲಿ, ವ್ಯವಹಾರಗಳಲ್ಲಿ ಪಾಲ್ಗೊಳ್ಳುವುದಾಗಲೀ, ಸರ್ಕಾರದಿಂದ ಪ್ರತ್ಯಕ್ಷ/ಪರೋಕ್ಷ ಲಾಭಪಡೆಯುವುದನ್ನೂ ಸಹ ನಿರ್ಬಂಧಿಸಿದ್ದಾರೆ.
ಮಗ್ಗಲು ಮುಳ್ಳಾಗಿರುವ ಚೀನಾ, ಬಾಂಗ್ಲಾದೇಶ ಹಾಗೂ ಪಾಕಿಸ್ತಾನಗಳ ಕುತಂತ್ರ, ಭಯೋತ್ಪಾದನೆ ಗೊತ್ತಿದ್ದೂ ಅವುಗಳನ್ನು ಬಗ್ಗುಬಡಿಯಲು ದಿಟ್ಟ ಹೆಜ್ಜೆಯಿಟ್ಟಿರುವ ಮೋದಿ ಭೂತಾನಕ್ಕೆ ಭೇಟಿ ನೀಡಿ ಭಾರತೀಯರ ನಿರೀಕ್ಷೆಗೆ ಹತ್ತಿರವಾಗಿರುವಾಗ, ನಮ್ಮ ಸಿದ್ರಾಮಣ್ಣಗೆ ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿನೀಡಿ ಸಮಸ್ಯೆಗಳಿಗೆ ಸ್ಪಂದಿಸುವಷ್ಟು ಪುರುಸೊತ್ತಿಲ್ಲ. ವಯಸ್ಸಿನಲ್ಲಿ ತಮಗಿಂತಲೂ ಹಿರಿಯರಾಗಿರುವ ಮೋದಿಯವರ ಅತ್ಯುತ್ಸಾಹದ ಕಾರ್ಯವೈಖರಿಯನ್ನು ಒಮ್ಮೆ ಅವಲೋಕಿಸಿ ತಾವೂ ಅಳವಡಿಸಿಕೊಳ್ಳುವುದೊಳಿತು. ಕೇವಲ ಅಗ್ಗದ ಪ್ರಚಾರ ಪಡೆಯುವ ಬದಲು ತಮ್ಮ ಸಹೋದ್ಯೋಗಿಗಳು ಇಲಾಖಾವಾರು ಏನು ಪ್ರಗತಿ ಸಾಧಿಸಿದ್ದಾರೆ ಎಂದು ಮೊದಲು ಅವಲೋಕಿಸಬೇಕಾಗಿದೆ. ಅರ್ಧಶತಕಕ್ಕಿಂತಲೂ ಹೆಚ್ಚು ವರ್ಷಗಳ ಕಾಲ ಒಂದೇ ಕುಟುಂಬದ ಕಪಿಮುಷ್ಠಿಯಲ್ಲಿ ಸಿಲುಕಿಕೊಂಡಿದ್ದ ಭಾರತವನ್ನು ಬಿಡುಗಡೆಗೊಳಿಸಿದ ಮೋದಿಯವರ ಬಗ್ಗೆ, ಚುನಾವಣೆ ಸಂದರ್ಭದಲ್ಲಿ "ಟೀ ಮಾರುತ್ತಿದ್ದ ವ್ಯಕ್ತಿ ದೇಶ ಮುನ್ನಡೆಸುವರೇ?" ಎನ್ನುವ ಕಾಂಗ್ರೆಸ್ನವರ ಉಢಾಫೆಯ ಮಾತುಗಳು ದೇಶದ 125 ಕೋಟಿ ಜನರ ಮನಕಲಕಿದ್ದು, ಚಾಯ್ ಪೇ ಚರ್ಚಾ ಹಾಗೂ ನಮೋ ಟೀ ಸ್ಟಾಲ್ಗಳ ಪರಿಕಲ್ಪನೆ ನಮ್ಮಲ್ಲಿ ಮೂಡಿಸಿದ ಅವರ ಸಹಾಯವನ್ನು ನಾವು ಮರೆಯುವುದುಂಟೆ! ದೇಶವಾಸಿಗಳ ಮನಸ್ಸಲ್ಲಿ ಮೋದಿಯವರ ಹೆಸರನ್ನು ಅಚ್ಚಳಿಯದೇ ಉಳಿಯುವಂತೆ ಮಾಡಿರುವ ತಾಯಿ, ಮಗ, ಮಗಳು, ಅವರ ಪಕ್ಷ ಹಾಗೂ ಕೆಲವು ಮಾಧ್ಯಮಗಳಿಗೆ ನಾವೆಲ್ಲರೂ ಚಿರಋಣಿ. ಸಾಮಾನ್ಯ ಪ್ರಜೆಯೊಬ್ಬ ಪ್ರಧಾನಿ ಪಟ್ಟಕ್ಕೇರಿದ್ದು, ಭಾರತೀಯರು ನಿರೀಕ್ಷೆಗೆ ಮೀರಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
ಮುಖ್ಯಮಂತ್ರಿಗಳೇ ಇನ್ನಾದರೂ ಎಚ್ಚರಗೊಳ್ತೀರಾ ಅಥವಾ ಕುಂಭಕರ್ಣ ನಿದ್ದೆಗೆ ಜಾರ್ತೀರಾ? ತಾವು ಒಂದು ವರ್ಷ ಪೂರೈಸಿದ್ದರೂ ಮೈಕೊಡವಿ ಟೇಕ್ಆಫ್ ಆಗಿಲ್ಲವೆಂದು ಜನರು, ಮಾಧ್ಯಮದವರು ಮಾತಾಡಿಕೊಳ್ತಿದ್ದಾರೆ. ಆದರೆ, ಪ್ರಧಾನಿಯಾಗಿ ಅಧಿಕಾರವಹಿಸಿಕೊಂಡ 20 ದಿನಗಳಲ್ಲಿಯೇ ದೇಶದ ಜನರ ಬಗ್ಗೆ ಚಿಂತನೆ, ಮುಂದೆರಗಬಹುದಾದ ಅತಿವೃಷ್ಠಿ/ಅನಾವೃಷ್ಠಿ ತಡೆಗೆ ಜಾಗೃತಾ ಕ್ರಮಕೈಗೊಳ್ಳುವಿಕೆ, ಪಕ್ಕದ ರಾಷ್ಟ್ರಗಳೊಂದಿಗೆ ಸೌಹಾರ್ದತೆ, ವಿಶ್ವದ ಎಲ್ಲಾ ರಾಷ್ಟ್ರಗಳೊಂದಿಗೆ ಬಾಂಧವ್ಯ ವೃದ್ಧಿಗೆ ಅಗತ್ಯ ಕ್ರಮಗಳೊಂದಿಗೆ ವಿರೋಧಿ ರಾಷ್ಟ್ರಗಳಿಗೆ ಖಡಕ್ ಎಚ್ಚರಿಕೆ, "ದೇಶಕ್ಕಾಗಿ ನಾವೆಲ್ಲಾ ದುಡಿಯೋಣ, ಮುಂದೆ ಸಾಗೋಣ" ಎನ್ನುವ ಕರೆಗಳು ಅರ್ಥಗರ್ಭಿತವಾಗಿದೆ. ಲೋಕಸಭಾ ಚುನಾವಣೆ ಒಂದು ಸಂದೇಶವನ್ನು ಸಾರಿದ್ದು, ಜಾತಿ ಧರ್ಮದ ಹೊರತಾಗಿ ಬೇರೊಂದನ್ನು ತೋರಿಸಿಕೊಟ್ಟಿದೆ. ಅದುವೇ ಅಭಿವೃದ್ಧಿಯ ಚಿಂತನೆ, ದೇಶದ ಬಗ್ಗೆ ಕಾಳಜಿ. ಆದರೆ ನೀವು ಜಾತಿ ರಾಜಕಾರಣ, ಧರ್ಮ ರಾಜಕಾರಣವನ್ನು ಬೆಳೆಸಲು ಪ್ರಯತ್ನಿಸುತ್ತಿರುವುದು ಇಂದಿನ ಪೀಳಿಗೆಗೆ ಬೇಡವಾದ ವಿಷಯ. ಇನ್ನು ಸಾಕುಮಾಡಿ ಜಿಡ್ಡುಹತ್ತಿದ ಜಾತಿ-ಧರ್ಮ ರಾಜಕಾರಣವನ್ನು.
- ಶಿವರಾಮಗೌಡ, ಮಾಜಿ ಸಂಸದರು
shivaramagouda@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

